ಕ್ಷಮಯಾ ಧರಿತ್ರಿ



image

ಹೆಣ್ಣೆಂದರೆ ತ್ಯಾಗಮಯಿ
ಹೆಣ್ಣೆಂದರೆ ಕರುಣಾಮಯಿ
ಹೆಣ್ಣೆಂದರೆ ಸಹನಾಮಯಿ
ಹೆಣ್ಣೆಂದರೆ ಕ್ಷಮಯಾ ಧರಿತ್ರಿ.
ಹೆಣ್ಣು ಎಂದರೆ ಮಮತೆಯ ಒಡಲು,ಕರುಣೆಯ ಕಡಲು,ತ್ಯಾಗದ ಪ್ರತೀಕ ಎಂದೆಲ್ಲ ಹೇಳುತ್ತಾರೆ.

ಭೂಮಿತೂಕದ ಹೆಣ್ಣೆಂದು ಹೇಳುವದರ ಮೂಲಕ ಅದಲ್ಲದೇ ಕ್ಷಮಯಾ ಧರಿತ್ರಿ ಎಂಬುದನ್ನು ನಮ್ಮ ಪುರಾಣದಲ್ಲಿ ಕೂಡ ಹೇಳಲಾಗಿದೆ. ನಮ್ಮ ಪೂಜ್ಯ ಧರ್ಮಗ್ರಂಥಗಳಾದ ರಾಮಾಯಣ, ಮಹಾಭಾರತದಲ್ಲೂ ಹೆಣ್ಣು ಸಾಕಾರಮೂರ್ತಿ ಎಂದು ಬಿಂಬಿಸಲಾಗಿದೆ. ಕಾಯೇಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತಾ, ಶಯನೇಷು ರಂಭಾ, ನಾರೀ ಕ್ಷಮಯಾ ಧರಿತ್ರಿ ಎಂದು ಮಹಿಳೆಯನ್ನು ಬಣ್ಣಿಸಲಾಗಿದೆ. ತನ್ನ ಸುತ್ತಮುತ್ತಲಿನ ಜನ ತಪ್ಪು‌ಮಾಡುತ್ತಿರುವದನ್ನು ನೋಡಿ ಆ ತಪ್ಪನ್ನು ಮನಸಿನಲ್ಲಿ ಅಂದುಕೊಳ್ಳದೇ ಕ್ಷಮಿಸಿಬಿಡುವ ಗುಣವನ್ನು ಹೆಣ್ಣು ಅಳವಡಿಸಿಕೊಂಡಿರುವಳು.

ಸಮಾಜದಲ್ಲಿ ನಡೆಯುವ ದಿನನಿತ್ಯದ ಆಗುಹೋಗುಗಳಲ್ಲಿ ಹೆಣ್ಣಿನ ಕ್ಷಮಾಗುಣವೇ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತದೆ.ಮನೆಯಲ್ಲಿ ನಡೆಯಬಹುದಾದ ಜಗಳ,ಪತಿಯ ವಿರಸ,ಅತ್ತೆಮಾವನವರ ಹೊಂದಾಣಿಕೆ ಇಲ್ಲದಿರುವದು,ನಾದಿನಿ,ಮೈದುನರ ಮಾತುಗಳು,ಮಕ್ಕಳ ಕಿಟಿಪಿಟಿ ಇವುಗಳನ್ನು ಸರಿಮಾಡಿ ಸುಂದರ ಸಂಸಾರ ನಡೆಸುವವಳು ಕ್ಷಮಿಸುವವಳು ಹೆಣ್ಣೇ ಆಗಿರುವಳು.ಸಂಸಾರದ ಜವಾಬ್ದಾರಿ ಅವಳ ಹೆಗಲಮೇಲೆ ಇರುವದರಿಂದ ,ಅದಲ್ಲದೇ ಮುಂದಿನ ಮನೆಯವರೆಲ್ಲರ ಭವಿಷ್ಯಕ್ಕಾಗಿ ಕ್ಷಮಯಾ ಧರಿತ್ರಿ ಆಗಲೇಬೇಕು.ಮನೆತನದ ಮರ್ಯಾದೆ ಹೋಗದಂತೆ ಕಾಪಾಡುವವಳು ಹೆಣ್ಣೇ.

ಮೊದಲು ೬೦-೭೦ ರ ದಶಕದಲ್ಲಿ ಹೆಣ್ಣು ಹುಟ್ಟಿದಾಗ ತಿರಸ್ಕಾರದಿಂದ ನೋಡುತ್ತಿದ್ದರಲ್ಲದೇ ಆ ಅಪವಾದ ಹೆಣ್ಣು ಹೆತ್ತ ತಾಯಂದಿರನ್ನೇ ಅವರದೇ ತಪ್ಪೆಂದು ದೂರುತ್ತಿದ್ದರು.ಬಾಲ್ಯದಿಂದಲೂ ಸುತ್ತಲಿನ ಪರಿಸರದಲ್ಲೆಲ್ಲ ನಡೆಯುವ ಚುಚ್ಚು ಮಾತುಗಳನ್ನು ಸಹನೆಯಿಂದ ಸಹನಾಶಕ್ತಿ ರೂಢಿಸಿಕೊಂಡವಳು ಹೆಣ್ಣೇ.ಒಳ್ಳೆಯ ಶೃಂಗಾರದಿಂದ ಹೊರಹೊರಟಾಗ ಕೆಟ್ಟದಾಗಿ ಮಾತನಾಡುವ ನೂರುಜನರು ಕಂಡುಬರುತ್ತಾರೆ.ಆದರೆ ಇವೆಲ್ಲವನ್ನೂ ತಾಳ್ಮೆಸಹಿಸಿ ತಂದೆತಾಯಿಯ ಒಳಿತನ್ನು ಬಯಸಿ ಎಷ್ಟೋ ಹುಡುಗಿಯರು ತಂದೆತಾಯಿಯ,ಮನೆತನದ ಒಳಿತನ್ನು ಬಯಸಿ ಅವರು ನೋಡಿದ ಗಂಡಿನ ಜೊತೆಗೆ ಮದುವೆಯಾಗಿ ಹೋಗುತ್ತಾರೆ.ತನ್ನನ್ನು ನಿಂದಿಸಿದವರನ್ನು ,ಟೀಕಿಸಿದವರನ್ನು ,ಹಿಯಾಳಿಸಿದವರನ್ನು ಕ್ಷಮಿಸಿ ಮನೆಯ ಶಾಂತಿ, ನೆಮ್ಮದಿ, ಮರ್ಯಾದೆ ಕಾಪಾಡುತ್ತಾಳೆ. ಎಷ್ಟೋ ಮಹಿಳೆಯರ ಜೀವನದಲ್ಲಿ ಗಂಡು ದಾರಿತಪ್ಪಿ,ಕುಡಿದು,ಕುಪ್ಪಳಿಸಿ,ಬೇರೆ ಸಂಬಂದ ಹೊಂದಿದ್ದರೂ ಅವನನ್ನು ಕ್ಷಮಿಸಿ ತಮ್ಮ ಬಾಳನ್ನು ಸರಿಮಾಡಿಕೊಂಡ ಉದಾಹರಣೆಗಳಿವೆ.ಏನೇ ಸಂಸಾರದಲ್ಲಿ ತಪ್ಪಿದ್ದರೂ ತನ್ನ ಮಕ್ಕಳ ಭವಿಷ್ಯ,ಕುಟುಂಬದ ಎಲ್ಲರ ಕನಸನ್ನು ನನಸಾಗಿಸುವ ಸ್ವಭಾವ ಹೆಣ್ಣಿನದಾಗಿದೆ.

ಹೆಣ್ಣು ಸಹನಾಮೂರ್ತಿಯೂ ಹೌದು ಸಹನೆಕಳೆದುಕೊಂಡರೆ ಎಲ್ಲವನ್ನೂ ಮರೆತು ವರ್ತಿಸಬಲ್ಲಳು.ಈಗಿನ ದಿನದಲ್ಲಿ ನಾವು ಕಣ್ಣಿನಿಂದ ನೋಡಿ,ಕೇಳುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ದಿನಗಳಲ್ಲಿ ಕ್ಷಮಯಾ ಧರಿತ್ರಿ ಗುಣವನ್ನು ಮೀರುವ ಪ್ರಸಂಗಗಳು ಬರುತ್ತಿರುವದು ಸೋಜಿಗದ ಸಂಗತಿ. ಕ್ಷಮಯಾಧರಿತ್ರಿ ಎಂಬುದನ್ನು ಬಳಸಿಕೊಳ್ಳುವ ಬದಲು ಗೌರವಿಸುವ ಮನೋಭಾವ ರೂಢಿಸಿಕೊಳ್ಳಬೇಕಿದೆ.ಮಹಿಳಾ ದೌರ್ಜನ್ಯಗಳಿಗೆ ತಡೆಯಾದಾಗ ಮಾತ್ರ ಮುಂದಿನ ಪೀಳಿಗೆಗೆ ಹೆಣ್ಣು ಕ್ಷಮಯಾಧರಿತ್ರಿಯಾಗಲು ಸಾಧ್ಯವಲ್ಲವೇ?

Category:Relationships



ProfileImg

Written by ಗಿರಿಜಾ ಎಸ್ ದೇಶಪಾಂಡೆ

Verified