ನಾವು ಜೀವನದಲ್ಲಿ ತಪ್ಪು ಮಾಡಿರುತ್ತೇವೆ.
ಕೆಲವು ಚಿಕ್ಕ ತಪ್ಪಾದರೆ,ಇನ್ನು ಕೆಲವು ದೊಡ್ಡ ತಪ್ಪುಗಳೇ.ಕೆಲವು ತಪ್ಪುಗಳಿಗೆ ಕ್ಷಮೆಯೇ ಇಲ್ಲ. ಕೆಲವು ತಪ್ಪುಗಳಿಂದ ಇನ್ನೊಬ್ಬರ ಮನಸಿಗೆ ನೋವಾಗಬಹುದು ಅಥವಾ ಜೀವವೇ ಹೋಗಬಹುದು.ಡಾಕ್ಟರ್ ಯಾವುದೋ ತಪ್ಪು ಮಾತ್ರೆ ಕೊಟ್ಟಾಗ ಅದರಿಂದ ವ್ಯತಿರಿಕ್ತ ಪರಿಣಾಮಗಳೇ ಆಗಬಹುದು. ಮನೆಯಲ್ಲಿಯೆ ತಿಂಡಿಗಳನ್ನು ಹಂಚದೆ ತಿನ್ನುವುದು, ಸುಳ್ಳುಹೇಳಿ ಜಯಿಸುವುದು ಮುಂತಾದವುಗಳೂ ತಪ್ಪೇ.ಹಾಗೆಯೇ ನಾವು ಪ್ರಾಣಿ ಪಕ್ಷಿಗಳಿಗೆ ಕೊಡುವ ಉಪಟಳ ಅಕ್ಷಮ್ಯ ಅಪರಾಧ .ಯಾಕೆಂದರೆ ಅವುಗಳು ಅಸಹಾಯಕ ಪ್ರಾಣಿಗಳು. ಅಮಾಯಕರು.ನಿರುಪದ್ರವಿ ಜೀವಿಗಳನ್ನು ಕಂಡರೆ ಅವುಗಳಿಗೆ ಕಲ್ಲು ಹೊಡೆಯುವುದು ಇಲ್ಲವೇ ಅವುಗಳ ಬಾಲಕ್ಕೆ ಪಟಾಕಿ ಹಚ್ಚುವುದು ಮುಂತಾದ ತುಂಟತನಗಳೂ ತಪ್ಪೇ.ನಾನು ಈಗ ನನ್ನಿಂದ ಆದ ಒಂದು ಪ್ರಮಾದದ ಬಗ್ಗೆ ಬರೆಯುತ್ತಿದ್ದೇನೆ.ನಾನು ಹೋಗುತ್ತಿದ್ದುದು ಒಂದು ಸರಕಾರಿ ಜೂನಿಯರ್ ಕಾಲೇಜಿಗೆ. ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡಿದ್ದೆ.ಡಾಕ್ಟರೋ, ಇಂಜಿನಿಯರೋ ಆಗಬೇಕೆಂಬ ಉದ್ದೇಶದಿಂದಲ್ಲ. ಬುದ್ಧಿವಂತರು ತೆಗೆದುಕೊಳ್ಳುತ್ತಿದ್ದುದು ವಿಜ್ಞಾನದ ವಿಷಯವನ್ನೇ. ಮತ್ತೆ ನಾನೂ ತರಗತಿಯಲ್ಲಿ ಮೊದಲಿಗಳಾಗಿರುತ್ತಿದ್ದುದರಿಂದ ಬುದ್ಧಿವಂತರ ಪಂಗಡಕ್ಕೇ ಸೇರಿದವಳಾಗಿದ್ದೆ.ಆದರೆ ಸರಕಾರಿ ಶಾಲೆಯಾದುದರಿಂದ ಸೌಲಭ್ಯಗಳು ಅಷ್ಟಕ್ಕಷ್ಟೇ. ಕೆಲವು ವಿಷಯಗಳಲ್ಲಿ ಎಲ್ಲಾ ಪಾಠವನ್ನೂ ಮಾಡುತ್ತಿರಲಿಲ್ಲ. ಈಗಿನಂತೆ ಕಾಲೇಜುಗಳ ನಡುವೆ ಪೈಪೋಟಿಯೂ ಇರುತ್ತಿರಲಿಲ್ಲ.ವಿದ್ಯಾರ್ಥಿಗಳು ಅನುತ್ತೀರ್ಣ ಆದರೆ ಅದಕ್ಕೆ ಅವರೇ ಕಾರಣ ಎಂಬ ಅಭಿಪ್ರಾಯವಿತ್ತು. ಈಗ ಹಾಗಲ್ಲ ಹೆತ್ತವರು ,ಶಿಕ್ಷಕರು ಎಲ್ಲರೂ ಕಾಳಜಿ ವಹಿಸುವವರೇ. ನಾನು ಜೀವಶಾಸ್ತ್ರ ತೆಗೆದುಕೊಂಡಿದ್ದೆನಲ್ಲಾ. ಪಿ ಯುಸಿ ಎರಡನೆ ವರ್ಷದಲ್ಲಿ ಡಿಸೆಕ್ಷನ್ ಇತ್ತು. ಜಿರಲೆಯಹೊಟ್ಟೆ ಬಗೆದಿರಲಿಲ್ಲ. ಆದರೆ ಕಪ್ಪೆ ,ಪಾಪ "ಮೂಕ ಮಂಡೂಕ" ಇತ್ತಲ್ಲಾ. ನಮ್ಮ ಶಿಕ್ಷಕರು ವಿದ್ಯಾರ್ಥಿಗಳು ಅಲ್ಲೆಲ್ಲಿಂದಲೋ ತಂದುಕೊಟ್ಟ ಒಂದು ಮರಿಕಪ್ಪೆಯನ್ನು ಹಿಡಿದು ಹೊಟ್ಟೆ ಬಗೆದು ತೋರಿಸಿದರು. 'ಕಪ್ಪೆ ಹೇಗೂ ಸಿಗುತ್ತದೆ. ನೀವೇ ಮನೆಯಲ್ಲಿ ಅಭ್ಯಾಸ ಮಾಡಿ' ಎಂದರು. ಕಪ್ಪೆಯ ತಲೆಗೆ ಒಂದು ಬಡಿದರೆ ಅದಕ್ಕೆ ಸ್ಮೃತಿ ತಪ್ಪುತ್ತದೆ ಮತ್ತೆ ಹೊಟ್ಟೆ ಕೊಯ್ದು ಹೊಟ್ಟೆಯ ಭಾಗಗಳನ್ನೆಲ್ಲಾ ನೋಡಿರಿ ಎಂದು ಉಪದೇಶಿಸಿದರು.
ಅದೊಂದು ಭಾನುವಾರ. ಕಪ್ಪೆ ಕೊಯ್ಯಲು ಸಮಯವೂ ಇತ್ತಲ್ಲ.ಹಾಗಾಗಿ ಕಪ್ಪೆ ಹುಡುಕಿಕೊಂಡು ತೋಟಕ್ಕೆ ಹೋದೆ. ಆಹಾ..ತುಂಬಾ ಖುಶಿಯಾಯಿತು. ದೊಡ್ಡ ದೊಂದು ಕಪ್ಪೆ ಸಿಕ್ಕಿತು.ಅದನ್ನು ಹಿಡಿದು ಒಂದು ಕವರಿನಲ್ಲಿ ಹಾಕಿಮನೆಗೆ ತಂದೆ. ಡಿಸೆಕ್ಷನ್ ಬಾಕ್ಸ್ ನಲ್ಲಿದ್ದ ಪುಟ್ಟ ಹಲಗೆಯ ಮೇಲೆ ಮಲಗಿಸಿ ಅದರ ತಲೆಗೆ ಒಂದು ಕುಟ್ಟಿದೆ.ಅದು ಸುಮ್ಮನಾಯಿತು. ಮತ್ತೆ ಕೈಗಳಿಗೆ ಮೊಳೆ ಹೊಡೆಯಬೇಕಲ್ವಾ. ಹೇಗೂ ಅಲುಗಾಡುವುದಿಲ್ಲ ಅಂತ ಮೊಳೆ ಹೊಡೆದಿಲ್ಲ ಅಂತ ಕಾಣ್ತದೆ. ಈಗ ಜ್ಞಾಪಕ ಇಲ್ಲ. ನಡುಗುವ ಕೈಗಳಿಂದ ಅದರ ಮಧ್ಯದ ಹೊಟ್ಟೆಗೆ ಕತ್ತರಿ ಹಾಕಿದೆ . ಹೊಟ್ಟೆಯ ಬಿಳಿ ಚರ್ಮ ಎರಡೂ ಕಡೆ ತೆರೆದುಕೊಂಡಿತು. ಬಿಳಿ ಪತಾಕೆಯಂತೆ ಕಂಡಿತು. ಆ ಕಪ್ಪೆ ಇನ್ನೂರು ಗ್ರಾಂ ಆದರೂ ಇದ್ದಿರಬೇಕು. ಅಷ್ಟು ದೊಡ್ಡ ಕಪ್ಪೆ.ಇನ್ನು ಅದರ ಹೊಟ್ಟೆಯನ್ನು ಪರೀಕ್ಷಿಸಲು ಪ್ರಾರಂಭಿಸುವುದೇ ತಡ ಅದು ಎದ್ದು ಕುಳಿತುಕೊಂಡಿತು. ಅಬ್ಬಾ ಆ ಕಪ್ಪೆ !ಮತ್ತೆ ನನಗೆ ಏನು ಮಾಡಲೂ ತೋಚಲಿಲ್ಲ.ಕೈಕಾಲು ನಡುಗತೊಡಗಿತು.
ಅಷ್ಟರಲ್ಲೇ ಅದುತಪಕ್ ತಪಕ್ ಅಂತ ಹಾರಿಕೊಂಡು ಹೋಯಿತು. ಅಯ್ಯೋ ದೇವರೇ..ಅರ್ಧ ತೆರೆದ ಹೊಟ್ಟೆ ಕಲ್ಲೊ ,ಮುಳ್ಳೋ ತಾಗಿದರೆ ಎಷ್ಟು ನೋವಾಗಬಹುದು ಅಂತ ಯೋಚಿಸಿ ಬೇಸರವಾಯಿತು. ಅದು ನನಗೆಷ್ಟು ಶಾಪ ಹಾಕುವುದೋ ಅಂತ ಯೋಚಿಸಿದೆ. ಅದು ಹೆಚ್ಚು ದಿನವಂತೂ ಬದುಕಲಾರದು.ಆದರೆ ಅದರ ಮೂಕ ರೋಧನೆ ಅರ್ಥ ಆಗಿ ನನ್ನ ಎದೆ ಮರುಗಿತು.ಆದರೆ ಹೀಗೆ ಕಲಿಯುವಾಗ ಎಷ್ಟು ಕಪ್ಪೆಗಳ ಕೊಲೆಯಾಗಿದೆಯೋ ಏನೋ.ಆಮೇಲೆ ಆ ಘಟನೆ ನನ್ನ ಮೇಲೆ ಎಷ್ಟು ಪರಿಣಾಮ ಬೀರಿತು ಎಂದರೆ ನನಗೆ ಹೊಟ್ಟೆ ನೋವಾದರೂ ಅದಕ್ಕೆ ಆ ಕಪ್ಪೆಯ ಶಾಪ ಅಂತ ತಿಳಕೊಳ್ಳುತ್ತಿದ್ದೆ.ಮುಂದೆಂದೂ ನಾನು ಕಪ್ಪೆ ಕೊಯ್ಯಲು ಹೋಗಲಿಲ್ಲ. ಮೆಡಿಕಲ್ಗೂ ಹೋಗಲಿಲ್ಲ.ಈಗ ಮೆಡಿಕಲ್ ಕಲಿಯುವಾಗ ಜೀವಿಗಳ ಮಾದರಿಯನ್ನಷ್ಟೇ ಕೊಡುವುದು ಅಂತ ಕೇಳಿದೆ.ಆ ಕಪ್ಪೆಯ ಹತ್ತಿರ ಕ್ಷಮಾಪಣೆ ಕೇಳಬೇಕು. ಆದರೆ ಅದು ಅಸಾಧ್ಯ.ಹಾಗಾಗಿ ಈ ಬರಹದ ಮೂಲಕ ನನ್ನ ಮನಸ್ಸಿನ ಭಾವನೆಗಳನ್ನು ಹೊರಹಾಕಿದ್ದೇನೆ.
✍️ಪರಮೇಶ್ವರಿ ಭಟ್