ಸುಸಂಸ್ಕಾರವಂತ ಪೀಳಿಗೆಯ ನಿರ್ಮಾಣ

ನೈತಿಕ ಮೌಲ್ಯದ ಸಂವರ್ಧನೆ

ProfileImg
01 Mar '24
9 min read


image

ಲೇಖನ : ಸುಸಂಸ್ಕಾರವಂತ ಪೀಳಿಗೆಯ ನಿರ್ಮಾಣ 


" ಇಂದಿನ ಮಕ್ಕಳೇ ನಾಳೆ ಪ್ರಜೆಗಳು " ಎಂಬಂತೆ ಇಂದಿನ ಮಕ್ಕಳ ಸುಸಂಸ್ಕಾರವಂತ ನೈತಿಕ ಮೌಲ್ಯಗಳು ಮುಂದಿನ ಪೀಳಿಗೆಗೆ ಎಳೆಯೇಳಿಯಾಗಿ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಆದರೆ ಇತ್ತೀಚಿಗೆ ಆಧುನಿಕ ಸಂಸ್ಕೃತಿ ಒತ್ತಡದ ವಾತಾವರಣದಲ್ಲಿ ಮಕ್ಕಳಲ್ಲಿ ಸುಸಂಸ್ಕಾರ  ಅಳಿಸಿ ಹೋಗುತ್ತಿದೆ. ಸಮಯ ಕೊಟ್ಟಾದರೂ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೇರೋರುವಲ್ಲಿ   ಪಾಲಕರು, ಹಿರಿಯರು ಶಿಕ್ಷಕರು, ಇತ್ಯಾದಿ ಎಲ್ಲರ ಸಮಭಾಗವು ತುಂಬಾ ಅವಶ್ಯಕವಾಗಿದೆ. 
ಈಗಿನ ಜೀವನಶೈಲಿಯಲ್ಲಿ ಸಸಿ ಇರುವಾಗಲೇ ಉತ್ತಮ ಪೋಷಣೆಯೊಂದಿಗೆ ಬೆಳೆಸದೆ ಇದ್ದಲ್ಲಿ ಅವು ಉತ್ತಮ ಮರಗಳಾಗಿ ಫಲವನ್ನು ನೀಡುವಲ್ಲಿ ಕೊರತೆ ಕಂಡು ಬರಬಹುದು ಅದರಂತೆ ಉತ್ತಮ ಬೆಳವಣಿಗೆಯ ರೂಪಕತೆಯನ್ನು ಮಕ್ಕಳಲ್ಲಿ ನಿರ್ಮಾಣ ಮಾಡಲು ನಾವೆಲ್ಲರೂ ಗಮನ ಕೊಡುವುದು ಬಹಳ ಮುಖ್ಯವಾಗಿದೆ.

ಸಂಸ್ಕಾರ 
ನಾನು ನನ್ನ ಯುವ ಪೀಳಿಗೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ನಮ್ಮ ಬಾಲ್ಯದಲ್ಲಿ, ನಮ್ಮ ಅಜ್ಜಿಯರು ನಮಗೆ ಒಳ್ಳೆಯ ಕಥೆಗಳನ್ನು ಹೇಳುತ್ತಿದ್ದರು. ಮಗು ಚಿಕ್ಕದಾಗಿದ್ದಾಗ, ಅದರ ಮನಸ್ಸು ಸಂಪೂರ್ಣವಾಗಿ ಶೂನ್ಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ನಾವು  ಅವರಿಗೆ  ಯಾವ ರೀತಿಯ ಸಂಸ್ಕೃತಿ ಮತ್ತು ಶಿಕ್ಷಣವನ್ನು ನೀಡುತ್ತಿವೆಯೋ,  ಅವರು ಅದೇ ಹಾದಿಯಲ್ಲಿ ಮುಂದುವರಿಯುತ್ತಾರೆ. ಕಳ್ಳತನ ಮಾಡುವುದು ಕೆಟ್ಟ ಕೆಲಸ ಎಂದು ಮಕ್ಕಳಿಗೆ ಬಾಲ್ಯದಲ್ಲಿ ಹೇಳಿಕೊಟ್ಟರೆ, ಕಳ್ಳತನ ಮಾಡುವ ಮೊದಲು ನೂರು ಬಾರಿ ಯೋಚಿಸುತ್ತಾರೆ. ಹಾಗೆಯೇ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ತಂದೆ-ತಾಯಿ, ಅಜ್ಜಿ, ಹಿರಿಯರ ಪಾತ್ರ ಬಹಳ ಇದ್ದುದ್ದರಿಂದ ಕಥೆಗಳೂ ಸ್ಫೂರ್ತಿದಾಯಕವಾಗಿದ್ದವು. ನಮ್ಮ ಬಾಲ್ಯದಲ್ಲಿ ನಮ್ಮಲ್ಲಿ ನೈತಿಕತೆಯ ಪುಸ್ತಕವಿತ್ತು. ಇದರಲ್ಲಿ ಬಹಳ ಒಳ್ಳೆಯ ಕಥೆಗಳಿದ್ದವು. ಇಂದು ಆ ಪುಸ್ತಕ ಮಕ್ಕಳಿಂದ ಮಾಯವಾಗಿದೆ. ಅನೇಕ ಕಾಮಿಕ್ಸ್, ಕಂಪ್ಯೂಟರ್ ಆಟಗಳು, ವಿಡಿಯೋ ಆಟಗಳು, ಚಲನಚಿತ್ರ ಹಾಡುಗಳ ಸಿಡಿಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ, ಆದರೆ ಭಗತ್ ಸಿಂಗ್, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಇತ್ಯಾದಿ ಪುಸ್ತಕಗಳು ಮಕ್ಕಳ ಶಾಲಾ ಬ್ಯಾಗ್‌ನಿಂದ ಮಾಯಾವಾಗಿದೆ. ನಮ್ಮ ಮಕ್ಕಳಿಗೆ ನೈತಿಕತೆ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನಾವು ಅಂತಹ ಪುಸ್ತಕಗಳನ್ನು ನೀಡಲು ಪ್ರಯತ್ನಿಸುವುದಿಲ್ಲ. ಇಂದಿನ ಯುವ ಪೀಳಿಗೆ ನೈತಿಕತೆ ,ಆಚಾರ-ವಿಚಾರಗಳನ್ನು ಮರೆತಿರುವುದು ಖಂಡಿತಾ ಸತ್ಯ.

 ನೈತಿಕ ಮೌಲ್ಯದ ಕೊರತೆ
ಇಂದು ಪ್ರತಿ ಕುಟುಂಬದಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡುತ್ತಾರೆ. ಮಗು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದೆ, ತನಗೆ ಬೇಕಾದಾಗ ಕಂಪನಿ ಸಿಗುತ್ತಿಲ್ಲವಾದರೆ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ದೂರದರ್ಶನವನ್ನು ವೀಕ್ಷಿಸುತ್ತಾರೆ, ಮತ್ತು ಇದರಿಂದಾಗಿ ಹಿರಿಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮುಂದೆ ಬೆಳೆಯುತ್ತ, ಯೋಗ್ಯ ದಿಶೆ ಇಲ್ಲದೇ, ಆತ್ಯಾಚಾರ, ಮಹಿಳೆಯರ ಮೇಳಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಯುವಕರ ಅನೈತಿಕ ಮತ್ತು ಅಸಭ್ಯರಾಗಲು ಸಾಧ್ಯತೆ ಇರುತ್ತದೆ. 
ಮಕ್ಕಳು ಹಿರಿಯರನ್ನು ಗೌರವಿಸುವುದನ್ನು ಮರೆಯುತ್ತಾರೆ.
ಅಧುನಿಕ ಯುಗದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ. ಅನೈತಿಕತೆ ಹೆಚ್ಚಿ ಶಿಷ್ಟಾಚಾರ ಕಡಿಮೆಯಾಗುತ್ತಿದೆ. ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವಂತೆ ನೈತಿಕತೆಯನ್ನು ಮರೆಯುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ಬಳಸುವುದು ತಪ್ಪಲ್ಲ. ಇದು ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಇಂದು ಕೆಲವು ಮಕ್ಕಳು ಅದನ್ನು ತಪ್ಪಾಗಿ ಬಳಸಿಕೊಂಡು ತಮ್ಮ ಮೌಲ್ಯಗಳನ್ನು ಮರೆತುಬಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಿರಿಯರನ್ನು ಗೌರವಿಸುವುದನ್ನು ಮರೆಯುತ್ತಿದ್ದಾರೆ. ನಾವು ಅಧುನಿಕರಾಗಬೇಕು, ಆದರೆ ನಮ್ಮ ಮೌಲ್ಯಗಳನ್ನು ಮರೆಯಬಾರದು. ಯಾವುದು ತಪ್ಪು ಯಾವುದು ಸರಿ, ಯಾವುದು ಯೋಗ್ಯ ಅಥವಾ ಅಯೋಗ್ಯ ಹೇಳುವುದನ್ನೇ ಮರೆತಿರುವ ಸ್ಥಿತಿಯಾಗಿದೆ.
ಪಾಲಕರು ಕೂಡ ಮಕ್ಕಳಿಗೆ ನೈತಿಕತೆ ಮತ್ತು ಸಂಸ್ಕಾರದ ಪಾಠ ಕಲಿಸಬೇಕು
ಇಂದು ಸಮಾಜದಲ್ಲಿ ನೈತಿಕತೆಯ ಕೊರತೆ ಇದೆ. ಮಕ್ಕಳು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವ ಕಾಲವೊಂದಿತ್ತು. ಬದಲಾಗುತ್ತಿರುವ ಸಮಾಜದಿಂದ ನಮ್ಮ ಕೆಲಸದ ವೇಗ ಹೆಚ್ಚಿದೆ ಮಾತ್ರವಲ್ಲ, ಇದರೊಂದಿಗೆ ಹೊಸ ಪೀಳಿಗೆಯಲ್ಲಿ ನೈತಿಕತೆ ಮತ್ತು ನಡವಳಿಕೆಯ ಕೊರತೆಯಿದೆ. ಇದಕ್ಕೆ ಮುಖ್ಯ ಕಾರಣ ಮಕ್ಕಳು ತಮ್ಮ ಸಾಧನೆಗಳನ್ನು ಮೆಚ್ಚದೆ ದುರುಪಯೋಗ ಮಾಡಿಕೊಳ್ಳುತ್ತಿರುವುದು. ಇಂದು ನಾವು ಆಚಾರ-ವಿಚಾರಗಳನ್ನು ಮರೆತಿದ್ದೇವೆ. ಮಗು ತಪ್ಪು ಬೇಡಿಕೆಗಳನ್ನು ಮುಂದಿಟ್ಟಾಗ ತಾಯಿ ಮತ್ತು ತಂದೆ ನೈತಿಕತೆ ಮತ್ತು ಶಿಷ್ಟಾಚಾರದ ಪಾಠವನ್ನು ಕಲಿಸಲು ಸದಾ ತತ್ಪರರಾಗಿರಬೇಕು.
ಜೀವನದಲ್ಲಿ ನೈತಿಕತೆ ಮತ್ತು ನಡವಳಿಕೆಯ ಪ್ರಾಮುಖ್ಯತೆ
ನಮ್ಮ ಜೀವನದಲ್ಲಿ ನೈತಿಕತೆ ಮತ್ತು ನಡವಳಿಕೆ ಬಹಳ ಮುಖ್ಯ, ಹಿಂದಿನ ಕಾಲದಲ್ಲಿ , ಮಕ್ಕಳು ಪೋಷಕರು, ಅಜ್ಜಿಯರು ಮತ್ತು ಇತರ ಸಂಬಂಧಿಕರು ಮತ್ತು ಸುತ್ತಮುತ್ತಲಿನ ಜನರನ್ನು ಗೌರವಿಸುತ್ತಿದ್ದರು. ಆದರೆ ಇಂದು ಇದೆಲ್ಲವೂ ಕಡಿಮೆಯಾಗುತ್ತಿದೆ. ಇಂದು ನಾವು ಬಾಹ್ಯ ಆಡಂಬರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಮತ್ತು ಆಚರಣೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮ್ಮ ಅವನತಿ ಖಂಡಿತ. ಅಧುನಿಕತೆಯ ಓಟದಲ್ಲಿ ನಾವು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಆಚಾರ-ವಿಚಾರಗಳನ್ನು ಮರೆಯುತ್ತಿದ್ದೇವೆ. ನಾವು ಇಂದೇ ಜಾಗರೂಕರಾಗಿರಬೇಕು ಮತ್ತು ಮಕ್ಕಳಿಗೆ ಮೌಲ್ಯಗಳು, ನೀತಿಗಳು ಮತ್ತು ನಡವಳಿಕೆಯನ್ನು ಕಲಿಸಬೇಕು. ಸಂಸ್ಕಾರ, ನೈತಿಕತೆ, ಶಿಷ್ಟಾಚಾರಗಳೆಲ್ಲವೂ ಇಂದು ನಶಿಸಿ ಹೋಗತೊಡಗಿವೆ. ನಾವು ಹಳೆಯ ಕಾಲದಲ್ಲಿ ನೋಡಿದರೆ, ನೈತಿಕ ಮೌಲ್ಯಗಳು ಅಥವಾ ಶಿಷ್ಟಾಚಾರಗಳ ಶಿಕ್ಷಣಕ್ಕಾಗಿ ಯಾವುದೇ ವಿಶೇಷ ವಿಷಯದ ನಿಬಂಧನೆ ಇರಲಿಲ್ಲ ಮತ್ತು ನಮಗೆ ಅದು ಅಗತ್ಯವಿಲ್ಲ ಎಂದು ಹೇಳುತ್ತದೆ. ಮಗು ಇದನ್ನೇಲ್ಲ ಕೌಟುಂಬಿಕ ವಾತಾವರಣದಲ್ಲಿಯೇ ಕಲಿಯುತ್ತಿತ್ತು. ಹಿಂದೆ ಎಲ್ಲರೂ ಒಟ್ಟಿಗೆ ವಾಸಿಸುವ ಆವಿಭಕ್ತ ಕುಟುಂಬ ಪದ್ಧತಿ ಇತ್ತು. ನಾವು ಅಲ್ಲಿ ಹಿರಿಯರನ್ನು ಗೌರವಿಸಲು ಕಲಿತಿದ್ದೇವೆ, ಆದರೆ ಇಂದು ಎಲ್ಲರೂ ಚಿಕ್ಕ ಕುಟುಂಬದಲ್ಲಿ ಬದುಕಲು ಬಯಸುತ್ತಾರೆ. ಇದರಿಂದ ನಮ್ಮ ಮಕ್ಕಳಿಗೆ ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಕಲಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳಿಗೆ ನೈತಿಕತೆಯ ನಡತೆ ಮತ್ತು ಮೌಲ್ಯಗಳು ಏನೆಂದು ವಿವರಿಸಲು  ಸಾಧ್ಯವಾಗುವುದಿಲ್ಲ. ಅವೆಲ್ಲವನ್ನೂ ಹೇಳಲು ನಮಗೆ ಸಮಯವಿಲ್ಲ. ನೈತಿಕ ಮೌಲ್ಯಗಳಿಂದ ತುಂಬಿರುವ ವ್ಯಕ್ತಿಯು ಶಿಷ್ಟಾಚಾರದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾನೆ. ಸಂಸ್ಕಾರವು ವ್ಯಕ್ತಿಯ ಪಾಲನೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಜಗತ್ತಿನಲ್ಲಿ ನೈತಿಕತೆಯನ್ನು ಹೊಂದುವುದು ಬಹಳ ಮುಖ್ಯ.

ಮೊಬೈಲ್ ಗೀಳು
ನಮಗೆಲ್ಲರಿಗೂ ಗೊತ್ತಿರುವಂತೆ ಹುಟ್ಟಿರುವ ಮಗುವಿನಿಂದ ಹಿಡಿದು ಹಿರಿಯ  ವಯಸ್ಸಿನವರೇಗು ಮೊಬೈಲ್ ಅನ್ನುವುದು ಸರ್ವೇಸಾಮಾನ್ಯವಾಗಿದೆ. ಸ್ವಂತದ ಅನುಭವದ ಪ್ರಕಾರ ಕೆಲವೊಂದು ಮನೆಗೆ ಹೋದಾಗ ಮಕ್ಕಳಿಗೆ ಊಟ ಮಾಡಿಸುವ ಸಮಯವಿರಬಹುದು ಅಥವಾ ಪಾಲಕರು ಯಾವುದಾದರೂ ಕೆಲಸದಲ್ಲಿ ವ್ಯಸ್ತ ಇರುವಾಗ ಮಗು ಅಥವಾ ಮಕ್ಕಳಿಂದ ತೊಂದರೆಯಾಗಬಾರದು ಎಂದು ಕೂಡಲೇ ಮೊಬೈಲನ್ನು ಕೊಟ್ಟುಬಿಡುತ್ತಾರೆ . ಬೇರೆ ಪರ್ಯಾಯವನ್ನು ಹುಡುಕುವಷ್ಟು ನಮ್ಮ ಬಳಿ ಸಮಯವಿರುವುದಿಲ್ಲ ಇಲ್ಲಿಂದಲೇ ಶುರುವಾಗುತ್ತದೆ ಮೊಬೈಲ್ ಮೊಬೈಲ್ ಗೀಳು

ಮೊಬೈಲ್ ಸಂಸ್ಕಾರ
ಯಾವ ಹಂತದಲ್ಲಿ ಮೊಬೈಲ್ ವೀಕ್ಷಣೆ ನಮ್ಮ ಮನಸ್ಸಿಗೆ ಸಂಸ್ಕಾರವಾಗಿದೆ ಅಂದರೆ ಅದು ಇಲ್ಲದೆ ಊಟ,   ನಿದ್ದೆ ಯಾವುದು ಸರಿಯಾಗಿ ಆಗುವುದಿಲ್ಲ ಎನ್ನುವಷ್ಟು. ಮಕ್ಕಳಿಗೆ ಒಮ್ಮೆ ಮೊಬೈಲ್ ಕೊಟ್ಟ ನಂತರ ಅದರಲ್ಲಿ ಬರುವ ಎಲ್ಲಾ ರೀತಿಯ ಪ್ರದರ್ಶನಗಳು ಮಕ್ಕಳನ್ನು ಹೇಗೆ ಆಕರ್ಷಿಸುತ್ತವೆ ಎಂಬುದನ್ನು ನಮಗೆ ಅರಿವೇ ಇರುವುದಿಲ್ಲ ಆದರೆ ಅದು ನಿಧಾನವಾಗಿ ಮಕ್ಕಳಲ್ಲಿ ನಕರಾತ್ಮಕ ಚಿತ್ರ_ ವಿಚಿತ್ರ ಸ್ಪಂದನೆಯನ್ನು ನಿರ್ಮಾಣ ಮಾಡುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ.

ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಳ 
ಇತ್ತೀಚಿಗೆ ವರ್ತಮಾನ ಪತ್ರಿಕೆಗಳಲ್ಲಿ ಬಂದಿರುವ ವರದಿಯಂತೆ ರಾಜ್ಯದಲ್ಲಿ 6 ರಿಂದ 16 ವರ್ಷದ ಸುಮಾರು 38 ಸಾವಿರ ಮಕ್ಕಳಲ್ಲಿ  ದೃಷ್ಟಿ ದೋಷದ ಕಾರಣ ಕನ್ನಡಕವನ್ನು ವಿತರಿಸಲಾಗಿದೆ.

ಹಾಗಾದರೆ  ಮನೆಯೇ ಮೊದಲ ಪಾಠಶಾಲೆ ಎಂಬ ವಾಕ್ಯವನ್ನು ಸತ್ಯ ಮಾಡಲು ನಾವು ಯಾವ ರೀತಿ ಪ್ರಯತ್ನಿಸಬಹುದು ಎಂದರೆ

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರವನ್ನು ಹೇಗೆ ಮೂಡಿಸಬೇಕು ?
ಸಂಸ್ಕಾರದ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೆ ಶಿಸ್ತು, ನಿಯಮವನ್ನು ಹಾಕದಿದ್ದರೆ, ಆ ಕೃತಿಯು ಅಪೂರ್ಣವಾಗುತ್ತದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಕಟ್ಟುನಿಟ್ಟಾಗಿ ಶಿಸ್ತಿನ ಪಾಲನೆಯನ್ನು ಮಾಡಬೇಕು. ಅದಕ್ಕಾಗಿ ಚಿಕ್ಕಂದಿನಲ್ಲಿಯೇ ಶಿಸ್ತಿನ ಸಂಸ್ಕಾರವನ್ನು ಎಳೆಯಮನಸ್ಸಿನ ಮೇಲೆ ಬಿಂಬಿಸಿಬೇಕು.

ಮಕ್ಕಳು ಸ್ವಾವಲಂಬಿಗಳಾಗಲಿ
ಚಿಕ್ಕವರಿರುವಾಗಲೇ ಮಕ್ಕಳಿಗೆ ಯೋಗ್ಯ ನಡವಳಿಕೆಯನ್ನು ಕಲಿಸಬೇಕು. ಮಲಗಿ ಎದ್ದ ನಂತರ ಸ್ವಂತದ ಹೊದಿಕೆಯನ್ನು ಮಡಚಿಡಲು ಕಲಿಸಬೇಕು. ಪ್ರಾರಂಭದಲ್ಲಿ ಸರಿಯಾಗಿ ಆಗದಿರಬಹುದು, ಆದರೆ ಮಗು ಬೆಳೆಯುತ್ತಿದ್ದಂತೆ, ವ್ಯವಸ್ಥಿತತೆಯು ಗುಣಮೈಗೂಡದೇ ಇರಲಾರದು. ಪ್ರಾತರ್ವಿಧಿಗಳು ಮುಗಿದ ನಂತರ ಶಾಲೆಯ ಅಧ್ಯಯನ, ಶಾಲೆಯ ತಯಾರಿಯನ್ನು ಅವರೇ ಸ್ವತಃ ಮಾಡಿಕೊಳ್ಳಲು ಕಲಿಸಬೇಕು. ಅಭ್ಯಾಸದ ಪುಸ್ತಕಗಳು, ನೋಟ್ ಪುಸ್ತಕಗಳನ್ನು ವ್ಯವಸ್ಥಿತವಾಗಿ ಮತ್ತು ಅವುಗಳ ಜಾಗದಲ್ಲೇ ಇಡಲು ಕಲಿಸಬೇಕು. ಶಾಲೆಯಿಂದ ಅಥವಾ ಹೊರಗಡೆಯಿಂದ ಬಂದನಂತರ ಪಾದರಕ್ಷೆಗಳು-ಬೂಟ್, ಪಠ್ಯಪುಸ್ತಕಗಳ ಚೀಲ ಮುಂತಾದವುಗಳನ್ನು ನಿಗದಿತ ಜಾಗದಲ್ಲಿಡಲು ಕಲಿಸಬೇಕು. ಹಾಗೆಯೇ ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಬಟ್ಟೆಗಳನ್ನು ಬದಲಿಸಿ ಅವುಗಳನ್ನು ವ್ಯವಸ್ಥಿತವಾಗಿ ಮಡಚಿಡಲು ಕಲಿಸಬೇಕು. ಬಟ್ಟೆಗಳ ಗುಂಡಿಗಳು ಅಥವಾ ಬಟ್ಟೆಗಳ ಹೊಲಿಗೆ ಸ್ವಲ್ಪ ಬಿಚ್ಚಿಕೊಂಡಲ್ಲಿ ತಾವೇ ಸ್ವತಃ ಅವುಗಳನ್ನು ಹೊಲಿದುಕೊಳ್ಳಲು ಕಲಿಸಬೇಕು. ತಾವೇ ಸ್ವತಃ ಮಾಡುವಾಗ ಮಕ್ಕಳಿಗೆ ಆನಂದವಾಗುತ್ತದೆ. ವಯಸ್ಸಿಗನುಸಾರ ಸ್ವಂತ ಬಟ್ಟೆಗಳನ್ನು ತೊಳೆಯಲು ಸಹ ಕಲಿಸಬೇಕು. ಬೆಳಗ್ಗಿನ-ಮಧ್ಯಾಹ್ನದ ಉಪಾಹಾರದ ನಂತರ ತಟ್ಟೆಯನ್ನು ತೊಳೆಯಲು ಕಲಿಸಬೇಕು. ಸ್ವಲ್ಪದರಲ್ಲಿ ಹೇಳುವುದೆಂದರೆ ಮಕ್ಕಳಿಗೆ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅದರಲ್ಲಿ ಮಗ-ಮಗಳು ಎಂಬ ಭೇದ ಬೇಡ. ಪ್ರತಿಯೊಂದು ವಿಷಯದಲ್ಲಿ ವ್ಯವಸ್ಥಿತ ಶಿಸ್ತನ್ನು ಕಲಿಸಿದರೆ, ಮಗುವು ಮನೆಯಲ್ಲಿರಲಿ ಅಥವಾ ಬೇರೆಡೆಯಲ್ಲಿ, ಅದು ಶಿಸ್ತಿನಿಂದಲೇ ನಡೆದುಕೊಳ್ಳುತ್ತದೆ.

ಬೇಗ ಮಲಗುವುದು ಮತ್ತು ಬೇಗ ಏಳುವುದು
ಚಿಕ್ಕಂದಿನಿಂದಲೇ ಮಕ್ಕಳಿಗೆ ಬೇಗ ಏಳುವ ಅಭ್ಯಾಸವನ್ನು ಹಚ್ಚಬೇಕು. ಬಹಳಷ್ಟು ಮನೆಗಳಲ್ಲಿ ಮಕ್ಕಳು ಅಧ್ಯಯನಕ್ಕಾಗಿ ರಾತ್ರಿಯ ಸಮಯದಲ್ಲಿ ಎಚ್ಚರವಾಗಿರುತ್ತಾರೆ ಮತ್ತು ಬೆಳಿಗ್ಗೆ ೮-೯ ಗಂಟೆಗೆ ಏಳುತ್ತಾರೆ. ಇದರ ಬದಲಾಗಿ ಬೇಗನೆ ಮಲಗಿ ಬೆಳಗಿನ ಜಾವದಲ್ಲಿ ಅಧ್ಯಯನವನ್ನು ಮಾಡಿದರೆ ಅದು ಹೆಚ್ಚು ಒಳ್ಳೆಯದಾಗಿ ಮನಸ್ಸಿನಲ್ಲಿರುತ್ತದೆ. 'ಬೇಗ ಮಲಗಿ ಬೇಗ ಏಳುವವನಿಗೆ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ!', ಎಂಬ ಉಕ್ತಿ ಇದೆ. ಇದರ ಬದಲಾಗಿ ಬೆಳಗಿನ ಜಾವದಲ್ಲಿ ಹೆಚ್ಚು ಸಾತ್ವಿಕತೆ ಇರುವುದರಿಂದ  ಅಧ್ಯಯನದ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ.

ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡಲು ಕಲಿಸುವುದು
ಹಿರಿಯರ ಕೃತಿಗಳಿಂದ ಚಿಕ್ಕ ಮಕ್ಕಳು ಕಲಿಯುತ್ತಾರೆ, ಆದುದರಿಂದ ಹಿರಿಯರೇ ತಮ್ಮ ನಡವಳಿಕೆ, ಮಾತನಾಡುವ ರೀತಿ, ಇತರರಿಗೆ ಗೌರವವನ್ನು ತೋರುವುದು, ಇವೆಲ್ಲವನ್ನೂ ಮಾಡಬೇಕು. ಹಾಗೆಯೇ ಪ್ರತಿಯೊಂದು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. 'ನಂತರ ಮಾಡೋಣ'ಎಂದುಕೊಂಡಾಗ, ಪುನಃ ಆ ವಿಷಯವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಶರೀರಕ್ಕಿಂತ ಮನಸ್ಸಿಗೇ ಶಿಸ್ತನ್ನು ಹಚ್ಚಬೇಕು. ಅನೇಕ ಮನೆಗಳಕಪಾಟುಗಳಲ್ಲಿ ಬಟ್ಟೆಗಳನ್ನು ತುರುಕಿ ಅಥವಾ ಅಸ್ತವ್ಯಸ್ತವಾಗಿ ತೂಗುಹಾಕಲಾಗಿರುತ್ತದೆ. ಹಾಗೆಯೇ ಮನೆಯೂ ಅವ್ಯವಸ್ಥಿತವಾಗಿರುತ್ತದೆ. ಆಗ ಮನೆಯಲ್ಲಿ ಯಾರಾದರೂ ಬಂದರೆ, ಗಡಿಬಿಡಿಯಾಗುತ್ತದೆ. ಒಮ್ಮೆ ಕೈಯಿಗೆ ಅಭ್ಯಾಸವನ್ನು ಹಚ್ಚಿದರೆ ಸಾಕು, ಮನಸ್ಸಿಗೆ ಅದನ್ನು ವ್ಯವಸ್ಥಿತವಾಗಿ ಮಾಡಿದ ಹೊರತು ಸಮಾಧಾನವಾಗುವುದಿಲ್ಲ. ಮನೆಯನ್ನು ಸ್ವಚ್ಛ ಮತ್ತು ವ್ಯವ್ಯಸ್ಥಿತವಾಗಿ ಇಡುವಲ್ಲಿ ಆಲಸ್ಯ ಬೇಡ. ಆಲಸ್ಯ ನಮ್ಮ ಮೊದಲ ಕ್ರಮಾಂಕದ ಶತ್ರು ಎನ್ನುವುದನ್ನು ಮಕ್ಕಳ ಮನಸ್ಸಿನ ಮೇಲೆ ಬಿಂಬಿಸಬೇಕು.

ಮಕ್ಕಳಿಗೆ ಅತಿಯಾದ ಮುದ್ದು ಮಾಡುವುದನ್ನು ತಪ್ಪಿಸಬೇಕು
ಈಗೀಗ ಮನೆಯಲ್ಲಿ ಒಂದು-ಎರಡು ಮಕ್ಕಳು ಇರುವುದರಿಂದ ಅವರ ಬೇಕು-ಬೇಡಗಳನ್ನು ಪೋಷಿಸಲಾಗುತ್ತದೆ. ಊಟ, ಬಟ್ಟೆ ಇತ್ಯಾದಿ ವಿಷಯಗಳಲ್ಲಿ "ಮಕ್ಕಳು ಹೇಳಿದ್ದೇ ಪೂರ್ವ ದಿಕ್ಕು", ಎನ್ನುವುದು ಗಮನಕ್ಕೆ ಬರುತ್ತದೆ. ಚಿಕ್ಕಂದಿನಿಂದ ಅವರು ಹೇಳಿದ್ದನ್ನು ಕೇಳುತ್ತ ಹೋದರೆ, ಮಕ್ಕಳು ಮುಂದೆ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆದುದರಿಂದ ತಾರತಮ್ಯವನ್ನು ಉಪಯೋಗಿಸಬೇಕು.

ಮಕ್ಕಳೆದುರು ಸ್ವಂತದ ಆದರ್ಶವನ್ನಿಡಿ !
ಮನೆಯನ್ನು "ಸತ್ಯಂ ಶಿವಂ ಸುಂದರಂ" ಮಾಡುವುದಿದ್ದಲ್ಲಿ, ಶಿಸ್ತು, ಆಜ್ಞಾಪಾಲನೆ, ಹಿರಿಯರ ಆದರವನ್ನು ಮಾಡುವುದು, ಇವೆಲ್ಲವನ್ನೂ ಮಾಡಬೇಕಾಗುವುದು. ಹಿರಿಯರು ತಮ್ಮ ಆದರ್ಶವನ್ನೇ ಹೀಗೆ ಇಡಬೇಕೆಂದರೆ, ನಮ್ಮ ನಡವಳಿಕೆ, ಶಿಸ್ತನ್ನು ನೋಡಿ ನಮ್ಮ ಮಕ್ಕಳು ಅನುಕರಣೆ ಮಾಡಬೇಕು. ಹೀಗೆ ಆದಾಗ, ನಮ್ಮ ಕುಟುಂಬ ಆದರ್ಶ ಕುಟುಂಬವಾಗಲು ಸಮಯ ತಗಲಲಾರದು.
ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಸಂಸ್ಕಾರವಂತರನ್ನಾಗಿ ಮಾಡುವುದು ಅವಶ್ಯಕ !

ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?
'ಶಿಸ್ತು' ಮತ್ತು'ಶಿಕ್ಷೆ' ಈ ಎರಡೂ ಶಬ್ದಗಳು'ಶಿಕ್ಷಣ' ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು. ಇದಕ್ಕಾಗಿ ಶಿಕ್ಷೆ ಯಾತಕ್ಕಾಗಿ, ಯಾವ ತಪ್ಪಿಗಾಗಿ ಹಾಗೂ ಯಾವ ತಪ್ಪು ವರ್ತನೆಗಾಗಿ ಇದೆ, ಎನ್ನುವುದನ್ನು ತಿಳಿಸಿಯೇ ಶಿಕ್ಷೆಯನ್ನು ನೀಡಬೇಕು.

ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು
೧.ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪು ವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು, ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹಸಿಗುವುದು. ಅವರ ತಪ್ಪು ನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯಕತೆ ಇದ್ದಲ್ಲಿ ಶಿಕ್ಷೆಯನ್ನೂ ನೀಡಬೇಕು.
೨.ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. "ನೀರನ್ನು ತಾ", ಎಂದು ಹೇಳದೇ "ರಾಜಾ ನನಗೆ ಕುಡಿಯಲು ನೀರನ್ನು ತಂದುಕೊಡಬಹುದಾ ?", ಎಂದು ವಿನಂತಿಯನ್ನು ಮಾಡಬೇಕು.
೩.ಮನೆಯಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆ ಎನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯ ಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಸಮಸ್ಯೆ ಉದ್ಭವಿಸಬಾರದು.
೪.ತಪ್ಪು ನಡೆದಾಗ ತಕ್ಷಣ ಶಿಕ್ಷೆಯನ್ನು ಕೊಡಬೇಕು. "ಇರು, ಸಂಜೆ ತಂದೆ ಬರಲಿ, ನಂತರ ನೋಡುತ್ತೇನೆ" ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.
ಮಗುವು ಮಾಡಿದ ತಪ್ಪಿಗೆ ತುಲನೆಯಲ್ಲಿ ಶಿಕ್ಷೆಯು ಹೊಂದಾಣಿಕೆಯಾಗುವಂತಿರಬೇಕು. . 
ಯೋಗ್ಯ ಮತ್ತು ಅಯೋಗ್ಯ ಶಿಕ್ಷೆ
ಮಗುವಿನೊಂದಿಗೆ ಮಾತನಾಡದಿರುವುದು ಅಥವಾ ಮಗುವಿಗೆ ದಿನವಿಡೀ ಉಪವಾಸಹಾಕುವುದು, ಈ ಶಿಕ್ಷೆಗಳು ಯೋಗ್ಯವಲ್ಲ. ಕಾರಣ ಸಂಜೆಯ ವೇಳೆಗೆ ಅದೇ ತಾಯಿಯು ಊಟಕ್ಕಾಗಿ ಮಗುವಿಗೆ ಮನವೊಲಿಸುವಳು. ಸಂಜೆಯ ವೇಳೆಮಗುವಿಗೆ ಆಟಕ್ಕಾಗಿ ಮನೆಯ ಹೊರಗೆ ಹೋಗಲು ಬಿಡದಿರುವುದು ಅಥವಾ ಅವನಿಗೆ ದೂರದರ್ಶನವನ್ನು ನೋಡಲು ಬಿಡದಿರುವುದು ಇವು ಯೋಗ್ಯ ಶಿಕ್ಷೆಗಳಾಗಿವೆ

ಜೀವನವೆಂದರೇನು? ಜೀವನದಲ್ಲಿ ಉದ್ಭವಿಸುವ ಅನೇಕ ಸನ್ನಿವೇಶಗಳನ್ನು ಎದುರಿಸುವುದು ಹೇಗೆ, ಇಂತಹ ಸನ್ನಿವೇಶಗಳಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು, ಅವುಗಳಿಂದ ಹೇಗೆ ಕಲಿಯುವುದು ಮತ್ತು ಬೆಳೆಯುವುದು, ಕೌಟುಂಬಿಕ ಮತ್ತು ಔದ್ಯೋಗಿಕ ಜೀವನವನ್ನು ಒಟ್ಟಾಗಿ ನಿಭಾಯಿಸಿ ಹೇಗೆ ಮುನ್ನಡೆಯುವುದು ಮುಂತಾದ ಅನೇಕ ವಿಷಯಗಳನ್ನು ಮನುಷ್ಯನು ತನ್ನ ವಿದ್ಯಾರ್ಥಿ ದೆಸೆಯಲ್ಲಿ ಕಲಿಯುತ್ತಾನೆ. ಈ ಸಂದರ್ಭದಲ್ಲಿ ಬಂದಂತಹ ಅನುಭವಗಳನ್ನು ಸಂಗ್ರಹಿಸಿ ಜೀವನದಲ್ಲಿ ಮುನ್ನಡೆಯುತ್ತಾನೆ. ಜೀವನದ ಈ ನಿರ್ಣಾಯಕ ಘಟ್ಟದಲ್ಲಿ ಎಲ್ಲರಿಗೂ ಯೋಗ್ಯ ಸಮರ್ಪಕ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ, ತನ್ನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಹವರ್ತಿಗಳ ಅವಶ್ಯಕತೆ ಇರುತ್ತದೆ, ಸಹಾಯ ಎಲ್ಲಿಂದ ಬರುತ್ತದೆ ಎಂಬುವುದು ಇಲ್ಲಿ ಮುಖ್ಯವಲ್ಲ. ತಂದೆ ತಾಯಿ, ಮಿತ್ರರು, ಶಿಕ್ಷರಾದರೂ ಇರಲಿ ಸಹಾಯದ ಅವಶ್ಯಕತೆ ಇರುತ್ತದೆ. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುಂಚೆ ನಂಬಿಗಸ್ಥರನ್ನು ಅಥವಾ ವರಿಷ್ಠರನ್ನು ಕೇಳಿ ನಂತರ ನಿರ್ಧಾರ ತಿಳಿದುಕೊಳ್ಳುವುದು ಮನುಷ್ಯರ ಪ್ರಕೃತಿದತ್ತ ಸ್ವಭಾವವಾಗಿದೆ. ಈ ನಿರ್ಣಯ ಒಂದು ವಸ್ತುವನ್ನು ಖರೀದಿಸುವುದರ ಬಗ್ಗೆ ಇರಬಹುದು, ಅಥವಾ ಜೀವನದ ಮಹತ್ವದ ನಿರ್ಣಯವಾಗಿರಬಹುದು. ಈ ಸಮಯದಲ್ಲಿ ಯೋಗ್ಯ ಮಾರ್ಗದರ್ಶನ ಸಿಗದಿದ್ದರೆ, ಮನುಷ್ಯನು ಅಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬುದರಲ್ಲಿ ಸಂದೇಹವಿಲ್ಲ.

ಮಕ್ಕಳಿಗೆ ಮಾನಸಿಕ ಆಧಾರ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿರುವುದರಿಂದ ಈ ಕೋರಿಕೆಯನ್ನು ನೀಗಿಸಲು ಪಾಲರಿಗೆ ಸಾಧ್ಯವಿದೆ.
ಪಾಲಕರು ತಮ್ಮ ಮೇಲೆ ಹೇರುವ ತೀವೃ ಒತ್ತಡ, ತನ್ನಲ್ಲಿ ಇಟ್ಟಿರುವ ತೀವ್ರ ಅಪೇಕ್ಷೆ ಇವುಗಳು ಮಕ್ಕಳ ಆತ್ಮಹತ್ಯಾ ಯತ್ನದ ಹಿಂದಿನ ಮುಖ್ಯ ಕಾರಣಗಳು ಎಂದು ತಿಳಿಯಲಾಗುತ್ತದೆ. ಹೆಚ್ಚಿನಾಂಶ ಸತ್ಯವೂ ಆಗಿರುತ್ತದೆ. ಇಂದಿನ ತೀವ್ರ ಪೈಪೋಟಿಯ ಯುಗದಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು, ಅವರ ಪ್ರತಿಯೊಂದು ಆಸೆ ಆಕಾಂಕ್ಷೆಗಳನ್ನು ಪೂರೈಸಲು ತಮ್ಮ ಉದ್ಯೋಗದಲ್ಲಿ ಮಗ್ನರಾಗಿರುವುದು ಕಂಡುಬರುತ್ತಿದೆ. ಎಳೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಬೆಳೆಸಬೇಕಾಗುತ್ತದೆ, ಆದರೆ ಇದೇ ಸಮಯದಲ್ಲಿ ತಂದೆ ತಾಯಂದಿರು ಉದ್ಯೋಗಸ್ಥರಾಗಿದ್ದು ಮನೆಯಿಂದ ಹೆಚ್ಚಿನ ಸಮಯ ದೂರವಿರುವುದರಿಂದ ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ದೊರೆಯುವುದಿಲ್ಲ.

ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವಾಗಲು ಪ್ರತಿದಿನ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ.
1.ಎದ್ದ ನಂತರ ಪ್ರಾತಃ ವಿಧಿ, ಸ್ನಾನ ಮಾಡಿಕೊಂಡು ದೇವರಿಗೆ, ತಂದೆ ತಾಯಿಗೆ ಹಾಗು ದೊಡ್ಡವರಿಗೆ ನಮಸ್ಕಾರ ಮಾಡಬೇಕು. 
2.ಪ್ರತಿದಿನ ಸೂರ್ಯನಮಸ್ಕಾರ ಮಾಡಬೇಕು ಅಥವಾ ವ್ಯಾಯಾಮ ಮಾಡಬೇಕು.
3. ದೇವರ ಚಿತ್ರವನ್ನು ಒರೆಸಿಟ್ಟು, ಊದುಬತ್ತಿಯನ್ನು ಹಚ್ಚುವುದು, ಇಲ್ಲವಾದರೆ ಪೂಜೆ ಮಾಡುವುದು, ಸ್ತೋತ್ರ ಪಠಣ, ಶ್ಲೋಕ, ಆರತಿ, ನಾಮಸ್ಮರಣೆ, ಧ್ಯಾನ, ಸಂಧ್ಯಾ ಪೂಜೆ ಇತ್ಯಾದಿಗಳಲ್ಲಿ ಯವುದನ್ನಾದರೂ ವಯಸ್ಸಿಗನುಸಾರ ನಿಯಮಿತವಾಗಿ ಮಾಡಬೇಕು.
4.ಹಾಲು, ನೀರು ಕುಡಿದ ನಂತರ ತಮ್ಮ ಲೋಟವನ್ನು ತಾವೇ ಸ್ವಚ್ಛಗೊಳಿಸುವುದು, ಊಟ–ತಿಂಡಿ ಮಾಡಿದ ನಂತರ ಅವರ ತಟ್ಟೆ ಹಾಗು ಬಟ್ಟಲನ್ನು ಅವರೇ ಸ್ವಚ್ಛಗೊಳಿಸುವುದು.
5. ಯಾವ ಮಕ್ಕಳ ವಯಸ್ಸು ೧೦–೧೨ ವರ್ಷಗಳಿಗಿಂತ ಹೆಚ್ಚಾಗಿರುತ್ತದೋ, ಅವರು ಅವರ ಚಿಕ್ಕ ಚಿಕ್ಕ ಬಟ್ಟೆಗಳನ್ನು ಅವರೇ ಒಗೆದುಕೊಳ್ಳಲು ಪ್ರಾರಂಭಿಸಬೇಕು. ಹೊರಗೆ ಹೋಗಿ ಮನೆಗೆ ಬಂದ ನಂತರ ಪಾದರಕ್ಷೆಯನ್ನು ಹೊರಗಿಟ್ಟು ಕಾಲು ತೊಳೆದುಕೊಂಡ ನಂತರವೇ ಮನೆಯೊಳಗೆ ಪ್ರವೇಶಿಸಬೇಕು.

6.ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಹಾಗು ಚಾಕ್ಲೇಟ್ ತಿಂದ ನಂತರ ಅದರ ಕಾಗದವನ್ನು ಕಸದ ಬುಟ್ಟಿಯಲ್ಲೇ ಬಿಸಾಡಬೇಕು.

7.ಊಟ ಮಾಡುವ ಮೊದಲು ಹಾಗು ಊಟ ಮಾಡಿದ ನಂತರ ಕೈಯನ್ನು ತೊಳೆದುಕೊಳ್ಳಬೇಕು.

8.ರಾತ್ರಿ ಊಟವಾದ ನಂತರ ಹಲ್ಲನ್ನು ಬ್ರಶ್ಶಿನಿಂದ ಸ್ವಚ್ಛಗೊಳಿಸಬೇಕು.

9.ಅಭ್ಯಾಸ ಮಾಡುವ ಸಾಮಗ್ರಿಗಳನ್ನು, ಆಟದ ಸಾಮಾನು, ಕಥೆ ಪುಸ್ತಕಗಳನ್ನು ಹಾಗು ಬೇರೆ ಸಾಮಾನುಗಳನ್ನು, ನಿರ್ಧರಿಸಿದ ಸ್ಥಳದಲ್ಲೇ ಇಡಬೇಕು.

10.ಗೋಡೆಯ ಮೇಲೆ ಬರೆಯುವುದು, ಹಾಸಿಗೆಯನ್ನು ಕೊಳಕಾದ ಕಾಲಿನಿಂದ ತುಳಿಯುವುದು ಮೊದಲಾದ ಅಶಿಸ್ತಿನ ಆಚಾರಣೆಗಳನ್ನು ಮಾಡಬಾರದು.

11. ಶಾಲೆ, ಓದುವುದು, ಸಾಧನೆ, ವ್ಯಕ್ತಿಗತ ವಸ್ತುಗಳನ್ನು ಜೋಡಿಸಿಕೊಳ್ಳುವುದು, ಆಟವಾಡುವುದು, ಓದುವುದು, ಮನೆಯ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದು, ಮನೋರಂಜನೆ ಮೊದಲಾದವುಗಳ ಸಮಯದ ಸರಣಿಯನ್ನು ಮಾಡಿ ನಿಯೋಜಿಸಿಕೊಳ್ಳಬೇಕು.

12. ಕಸ ಗೂಡಿಸುವುದು, ಸ್ವಚ್ಛತೆ ಮಾಡುವುದು ಇಲ್ಲದಿದ್ದರೆ ಅಡಿಗೆ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವುದು, ಹೊರಗಿನಿಂದ ಯಾವುದಾದರು ವಸ್ತು ತರಬೇಕಿದ್ದರೆ ಅದು ತರುವುದು, ಕೆಲಸದಲ್ಲಿ ತಮ್ಮ ತಾವೇ ಸ್ವಯಂ ಪ್ರೇರಣೆಯಿಂದ ಕೆಲಸಗಳನ್ನು ಮಾಡುವುದು ಇತ್ಯಾದಿ.

13. ಏನಾದರೂ ತಿನ್ನಬೇಕಾದರೆ ಯಾರಾದರೂ ಬಂದಲ್ಲಿ ಮೊದಲು ಅವರಿಗೆ ನೀಡಿ ನಂತರ ನಾವು ತಿನ್ನಬೇಕು. ನಮ್ಮ ಬಳಿ ಇಲ್ಲದ ವಸ್ತು ಬೇರೆಯವರ ಹತ್ತಿರ ಇದ್ದು ನಮಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಅದನ್ನು ಕೇಳಬಾರದು. ಯಾವಾಗಲೂ ವಿನಮ್ರವಾಗಿ ಮಾತನಾಡಬೇಕು. ಜೋರಾಗಿ ಮಾತನಾಡುವುದು ಹಾಗೂ ಅನಾವಶ್ಯಕವಾಗಿ ಮಾತನಾಡುವುದನ್ನು ಬಿಡಬೇಕು.

ಸರ್ವಜ್ಞ ವಚನದಂತೆ
ವಿದ್ಯೆ ಕಲಿಸದ ತಂದೆ । ಬುದ್ಧಿ ಹೇಳದ ಗುರುವು ।ಬಿದ್ದಿರಲು ಬಂದ ನೋಡದಾ ತಾಯಿಯೂ ।ಶುದ್ಧ ವೈರಿಗಳು ಸರ್ವಜ್ಞ||
ಎಂಬಂತೆ ಬಿಳಿ ಕಾಗದ ಮೇಲೆ ಏನು ಗೀಚುತ್ತೇವೆ ಅದೇ ಕಾಣುತ್ತದೆ ಹಾಗಾಗಿ ಬಿಳಿಯ ಹಾಳೆಯ ಮೇಲೆ ಸುಂದರವಾಗಿ ಕೃತಿಗಳನ್ನು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ.  ಮುಂದಿನ ಪೀಳಿಗೆಯೂ  ಸ್ವಸಂಸ್ಕಾರವಂತರಾಗಲು ಇನ್ನಷ್ಟು ಪ್ರಯತ್ನಿಸೋಣ.

_ ಶೀಲಾ ನಾಗರಾಜ್

Category:Parenting and Family



ProfileImg

Written by Harshitha Nagaraj