ಚಿತ್ರಕೊಂದು ಕವನ
ಎಲ್ಲೋ ಹುಡುಕಿದೆ ನನ್ನಲಿರುವ ದೇವರ
ನನ್ನೊಳಗೆ ಇರುವ ದೇವರ ಅರಿಯದಾದೆ
ಹಗಲಿರುಳು ಹುಡುಕುತ ನಾ ಕಾಲ ಕಳೆದೆ
ನನ್ನೊಳಗೆ ಎಲ್ಲ ಇಹುದೆಂಬುದ ಅರಿಯದಾದೆ
ದಾಸಾನುದಾಸ ನಾನಾಗಿ ಹೋದೆ
ಸುವಿಚಾರವ ಬದಿಗಿಟ್ಟು
ಆಸೆ ಆಮಿಷಕೆ ಓಗೊಟ್ಟು
ನನ್ನ ತನವನೇ ಮರೆತುಬಿಟ್ಟು
ನಾನಲೆದೆನು ಕಂಗೆಟ್ಟು
ಶರೀರ ಗಟ್ಟಿಮುಟ್ಟಾಗಿತ್ತು
ಬಾಹು ಬಲ ತುಂಬಿತ್ತು
ನನ್ನ ನಾನರಿಯಬೇಕಿತ್ತು
ಕಟ್ಟುಪಾಡುಗಳ ಕಿತ್ತೊಗೆಯಬೇಕಿತ್ತು
ಇದ್ದುದೆಲ್ಲವ ಮರೆತು ಇಲ್ಲದಿರುವುದನರಸಿ
ದೇಶ ಸೇವೆಯ ಮರೆತು ಸ್ವಾರ್ಥ ಹಿತವನು ಬಯಸಿ
ಕೂಪದೊಳಗೆ ನನ್ನ ನಾನೇ ಬಂಧಿಸಿ
ಕಳೆದು ಹೋದೆ ನನ್ನೊಳಗೆ ನಾನೇ ದಹಿಸಿ
ಕಾಲ ಮಿಂಚಿಲ್ಲ ಇಂದು ಎಚ್ಚರಾಗಿಹೆನು
ಆತ್ಮ ನಿರ್ಭರ ಭಾರತ ಎಂಬುದನು ಬಲ್ಲೆನು
ಸ್ವಾಭಿಮಾನದಿ ಎನ್ನ ನೆಲೆಯಕಾಣ್ವೆನು
ಎನ್ನೊಳಿರುವ ದೈವವನು ನಾನೆ ಪೂಜಿಪೆನು
✍🏻 ವಿಜಯ ಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು