ಆಕಾಶದೀಪ

ಎರಡು ಮನಗಳ ಭಾವ ಸಂಗಮ

ProfileImg
28 Mar '24
4 min read


image


ಅದೊಂದು ದಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಗೆಳೆಯರೆಲ್ಲಾ ನಡೆದ ಸೆಮಿಸ್ಟರ್‌ಗಳ ಫಲಿತಾಂಶದ ಖುಷಿಯನ್ನು ಹಂಚಿಕೊಂಡು ನಲಿಯುತ್ತಿರುವಾಗ ದೂರದಲ್ಲಿ ಆಕಾಶ್ ಒಬ್ಬನೇ ಕೈಯಲ್ಲಿ ಕಡಿಮೆ ಅಂಕ ನಮೂದಿಸಿದ ಫಲಿತಾಂಶದ ಪ್ರತಿಯನ್ನು ಹಿಡಿದು, ಹರಿದ ಶರ್ಟ್, ತೇಪೆ ಹಾಕಿ ಹೊಲಿದ ಪ್ಯಾಂಟ್, ತನ್ನೆಡೆಗೆ ಸುಳಿಯದ  ಸ್ನೇಹಿತರು, ಯಾವ ಉತ್ಸಾಹವೂ ಇಲ್ಲದ ಕಳೆಗುಂದಿದ ತನ್ನ ಮುಖ, ಜೊತೆಗೆ ಬಡತನವನ್ನು ನೆನಪಿಸಿಕೊಂಡು ಅಳು ಬಂದರೂ ದುಃಖ ತಡೆಹಿಡಿದುಕೊಂಡು ಕಾಲೇಜು ಅವಧಿಯಲ್ಲೇ ಅಲ್ಲಿಂದ ಹೊರಟು ಹೊರ ನಡೆದ. 


ಮಾರನೇ ದಿನ ಕಾಲೇಜು ಆವರಣದಲ್ಲಿ ನಿಂತು ಅರೆಕ್ಷಣ, ಛೇಡಿಸುವ ಗೆಳೆಯರ ನೆನೆದು ಕಾಲೇಜ್ ಕೊಠಡಿಯೊಳಕ್ಕೂ ಹೋಗದೇ ಒಂಟಿಯಾಗಿ ಅಲ್ಲೇ ಸಮೀಪವಿರುವ ಮರದ ನೆರಳಲ್ಲಿ ತನ್ನ ಹೀನ ಸ್ಥಿತಿಯ ನೆನೆದುಕೊಂಡು ಬಿಕ್ಕಳಿಸಿ ಅಳಲಾರಂಭಿಸಿದ. ಇನ್ನೂ ನನಗೆ ಬದುಕುವ ಅರ್ಹತೆಯೇ ಇಲ್ಲವೆಂದು ಎಣಿಸುತ್ತಿರುವಾಗ ಹಿಂದಿನಿದ ಮೃದುವಾದ ಕೈಯೊಂದು ತಾಕಿತು. ಒಮ್ಮೇಲೆ ಹೆದರಿ “ಏಯ್ ನೀನಾ...! ದೀಪಾ. ನೀನೇಕೆ ಬಂದೆ ಇಲ್ಲಿಗೆ? ಎಲ್ಲರನ್ನೂ ಛೇಡಿಸಿ ಕಾಲೇಜ್ ಕ್ಯಾಂಪಸ್ ಎಲ್ಲವನ್ನೂ ನಿನ್ನದಾಗಿ ಮಾಡಿಕೊಂಡಿದ್ದಾಯ್ತು.! ಈಗ ನನಗೆ ಏನು ಕೆಡು ಮಾಡಲು ಬಂದಿರುವೆ’? ಎಂದಾಗ, ‘ಆಕಾಶ್, ನೀನು ನನ್ನನ್ನು ಇಷ್ಟೇ ಅರಿತಿದ್ದು, ನೋಡು, ಈಗ ನೀನು ಏಕೆ ಅಳುತ್ತೀರುವೆ..? ಫಲಿತಾಂಶದಲ್ಲಿ ಕಡಿಮೆ ಅಂಕ, ನಿನ್ನೋಡನೆ ಸೇರದ ಗೆಳೆಯರನ್ನು ನೆನೆದು ಅಲ್ಲವೇ,   ಆಕಾಶ್, ನೀನು ಬುದ್ಧಿವಂತನಿದ್ದೀಯಾ.. ನೀನು ಕೂಡ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯ ಬಲ್ಲೆ. ನಿನ್ನಲ್ಲೂ ಸಾಧನೆ ಮಾಡುವ ಅರ್ಹತೆ ಇದೆ. ಕೆಟ್ಟ ಯೋಚನೆಗಳನ್ನೆಲ್ಲವನ್ನು ಬಿಟ್ಟು ಬಾ ನನ್ನ ಜೊತೆಗೆ. ನಿನಗೆ ಯಾರೂ ಗೆಳೆಯರಿಲ್ಲವೆಂದು ಬೇಸರಿಸದಿರು.  ನಿನಗೆ ಗೆಳತಿಯಾಗಿ ನಾನಿರುವೆ.  ನೀನು ಉತ್ತಮ ಶಿಕ್ಷಣ ಪಡೆದು ಮುಂದೊಂದು ದಿನ ನಿನ್ನ ಗುರಿಯನ್ನು ತಲುಪುವಂತನಾಗು ಎಂದು ಅವನನ್ನು  ಪ್ರಂಶಸನೀಯ ಮಾತುಗಳಿಂದ ಹುರಿದುಂಬಿಸಿದಳಲ್ಲದೇ, ತನ್ನಿಂದಾಗುವ  ಸಹಾಯ-ಸಹಕಾರವನ್ನು ನೀಡುತ್ತ್ತ  ‘ಸ್ನೇಹ’ ಎಂಬ ಪದಕ್ಕೆ  ಹೊಸ ಮೆರಗು ನೀಡಿದಳು.  

ದೀಪಾಳ ಬಗ್ಗೆ ತಪ್ಪಾಗಿ ತಿಳಿದ ಆಕಾಶ್ ಅವಳ ಆತ್ಮವಿಶ್ವಾಸದ ಮಾತು, ಸ್ನೇಹಪರ ಮನಸು, ಸಹೃದಯ, ವಿಶಾಲತೆಗೆ ತಲೆಬಾಗಿ ಗೌರವಿಸಿದನು. ದೀಪಾ ತೋರುವ ಪ್ರೀತಿ, ಆತ್ಮೀಯತೆ, ಅಂದಿನ ಆರಂಭದ ಆಕಾಶ್‌ನ ಸಾಧನೆಗೆ ಮೊದಲ ಮೆಟ್ಟಿಲಾಯಿತು.
ದಿನಗಳು ಚಲಿಸುತಿರಲು, ಐದನೇ ಸೆಮಿಸ್ಟರ್ ಪ್ರಾರಂಭವಾಗುವ ಮುನ್ನವೇ ಸರ್ಕಾರಿ ಉದ್ಯೋಗಿ ದೀಪಾ ತಂದೆಗೆ ಮೈಸೂರಿಗೆ ವರ್ಗವಾದ ನಿಮಿತ್ತ ಸ್ಪೂರ್ತಿ ದೇವತೆಯನ್ನು ಮನಸಾರೆ ಬೀಳ್ಕೋಡದಿದ್ದರೂ ಅವಳಾಡಿದ ಹುರಿದುಂಬಿಕೆಯ ಪ್ರತಿಯೊಂದು ಮಾತನ್ನು ಅನುಸರಿಸುತ್ತಾ, ಬಡತನದಲ್ಲೂ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾ ಮುಂದೊಂದು ದಿನ ಜಿಲ್ಲಾಧಿಕಾರಿ ಹುದ್ದೆಯ ಸ್ಥಾನ ಪಡೆದು ಸಫಲನಾದನು. ಪ್ರತಿ ಹೆಜ್ಜೆಹೆಜ್ಜೆಗೂ ದೀಪಾ ಆಡಿದ ಮಾತಿನ ಗೆಜ್ಜೆಯನ್ನು ತನ್ನೋಳಗೆ ಆಲಿಸುತ್ತ, ಗೆಳತಿಗಾಗಿ ಪರಿತಪಿಸತೊಡಗಿದ. ಮುಂದೊಂದು ದಿನ ಸಿಕ್ಕೆ ಸಿಗುವಳೆಂಬ ದೃಢ ವಿಶ್ವಾಸದಿಂದ  ದಿನಗಳು ದೂಡುತಿರಲು….

ಒಂದು ದಿನ ಆಕಾಶ್, ಕರ್ತವ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದನು. ಇದ್ದಕ್ಕಿದ್ದಂತೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರ್‌ಗೆ ಢಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಎದುರು ಕಾರ್‌ನ ಬಾಗಿಲು ಮುರಿದು, ಚಾಲನೆ ಮಾಡುತ್ತಿದ್ದ  ಯುವತಿಯ ಹಣೆ ರಕ್ತಸಿಕ್ತವಾಯಿತು. ತತ್‌ಕ್ಷಣವೇ ಸ್ವತಃ ಆಕಾಶ್ ಆ ಯುವತಿಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದನು. ತುರ್ತು ನಿಗಾಘಟಕದಲ್ಲಿ ಇರಿಸಿದ ಯುವತಿಯ ಹೆಚ್ಚಿನ ಚಿಕಿತ್ಸೆಗೆ ಆಜ್ಞೆ ಮಾಡಿದ. ಕೆಲವು ತಾಸುಗಳ ಕಾಲ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆ ಯುವತಿಗೆ ಪ್ರಜ್ಞೆ ಬರುತ್ತಿದ್ದ ವಿಷಯವನ್ನು ಅಲ್ಲಿನ ದಾದಿಯರು ಆಕಾಶ್‌ಗೆ ತಿಳಿಸಿದಾಗ, ಆ ಯುವತಿಯನ್ನು ಮಾತನಾಡಿಸಲು ತುರ್ತುನಿಗಾ ಘಟಕಕ್ಕೆ ಬಂದು ನೋಡಿದಾಗ ಅವನಿಗೆ ಆಶ್ಚರ್ಯದ ಜೊತೆಗೆ ಸಂತಸವೂ ಕಾದಿತ್ತು. ಯಾರ ಸ್ನೇಹಕ್ಕಾಗಿ ಪರಿತಪಿಸುತ್ತ ಯಾರಿಗಾಗಿ ಹುಡುಕುತ್ತಿದ್ದನೋ ಅವಳೇ ಗೆಳತಿ ದೀಪಾ ಆಗಿದ್ದಳು. ಒಂದೆಡೆ ಸಂತಸವಾದರೆ ಮತ್ತೊಂದೆಡೆ ದೀಪಾಳ  ಸ್ಥಿತಿಯನ್ನು ನೋಡಿ ಮರುಕಗೊಂಡನು. ದೀಪಾ ಎಂದು ಗುರುತಿಸಿದ ಆಕಾಶ್ ಆಕೆಯ ಪಾದವನ್ನು ತನ್ನ ಕಣ್ಣಿಗೆ ಒತ್ತಿಕೊಂಡು ಅಳಲಾರಂಭಿಸಿದ. ಕಣ್ಣಿರಿನ ಒಂದೆರಡು ಹನಿಗಳು ಆಕೆಯ ಪಾದದ ಮೇಲೆ ತೊಟ್ಟಿಕ್ಕುತ್ತಿರಲು, ನಿಧಾನವಾಗಿ ಕಣ್ಣು ತೆರೆಯಲು ಪ್ರಯತ್ನಿಸುತ್ತಿದ್ದಳು. ಆಕಾಶ್ ಭಾವಪರವಶನಾಗಿ ಆಕೆಯನ್ನು ಬಿಗಿದಪ್ಪಿ “ದೀಪಾ ನಾನು ಆಕಾಶ್  ಕಣೇ. ನಿನ್ನ ಹುಡುಕಾಟಕ್ಕೆ ಎಲ್ಲೇಲ್ಲೂ ಅಲೆಯುತ್ತಿರುವೆ.’ ನಿನ್ನ ಮಾತಿನಿಂತೆ ಇಂದು ಸಾಧಿಸಿ ನಿನ್ನ ಕಣ್ಣೇದುರು ನಿಂತಿರುವೆ. ದೀಪಾ ಕಣ್ಣು ಬಿಟ್ಟು ನನ್ನ ನೋಡು’ ಎಂದು ತನ್ನ ಎದೆಗೆ ಒರಗಿಸಿಕೊಂಡು ಪುಟ್ಟ ಮಗುವಿನಂತೆ ಆಕೆಯನ್ನು ಸಂತೈಸಿದ. ಆಕೆಗೆ ಪ್ರಜ್ಞೆ ಬರುವವರೆಗೂ ತಲೆಯನ್ನು ನೆವರಿಸುತ್ತ ಅನುಭವಿಸಿದ ಕರಾಳ ದಿನಗಳ ನೆನೆದು ಗದ್ಗಿತನಾದನು. ಜೀವನದ ಗ್ರಹಣವನ್ನು ಸರಿಸಿ ನಂದಾದೀಪ ಪ್ರಜ್ವಲಿಸುವ ಹಾಗೆ ಮಾಡಿದ ಚೈತನ್ಯ ಮೂರ್ತಿಯನ್ನು ತನ್ನ ತೋಳಲ್ಲಿ ಬಂಧಿಸಿ ನಿಧಾನವಾಗಿ ಕಣ್ಣು ಬಿಡುವಂತೆ ಪ್ರೇರೆಪಿಸುತ್ತಿದ್ದ.  ಪೂರ್ಣ ಪ್ರಜ್ಞೆ ಬರುತ್ತಲೇ ಆಕೆಯನ್ನು ವಾರ್ಡಿಗೆ ರವಾನಿಸಿದರು. ಅಷ್ಟರೊಳಗೆ ಆಸ್ಪತ್ರೆಗೆ ಧಾವಿಸಿದ್ದ ಮಗಳ ಈ ಸ್ಥಿತಿಯನ್ನು ಕಂಡು ದುಃಖಿತರಾದಾಗ, ಅವರನ್ನು ಮಮಕಾರದ ಮಾತುಗಳಿಂದ “ಅಮ್ಮಾ-ಅಪ್ಪಾಜಿ, ಹೆದರದಿರಿ. ಸಾವಕಾಶವಾಗಿ ಚೇತರಿಸಿಕೊಳ್ಳುವಳು’.  ಇಷ್ಟೊಂದು ವಿನಯದಿಂದ ಮಾತನಾಡುತ್ತಿರುವ ಈ ಗಂಭಿರ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಯಾರೆಂದು ಆಕಾಶ್ ಬಗ್ಗೆ ದೀಪಾ ಪೋಷಕರು ಯೋಚಿಸುತ್ತಿರುವಾಗ , ‘ಅಮ್ಮಾ-ಅಪ್ಪಾಜಿ ನಿಮ್ಮ ಮಗಳು ಬೇರೇ ಯಾರೂ ಅಲ್ಲ; ನನ್ನ ಸಹಪಾಠಿ ನಾನು ಸಾಗರದ ಕಾಲೇಜ್‌ನಲ್ಲಿ ಓದುವಾಗ, ನನ್ನ ಆಸೆ-ಆಕಾಂಕ್ಷೆ, ಜೀವನದ ಭರವಸೆಗಳೆಲ್ಲವೂ ಕಮರಿ ಹೋಗುತ್ತಿದೆ ಅಂದುಕೊಳ್ಳುತ್ತಿದ್ದಾಗ ನನ್ನಲ್ಲಿ ಹೊಸ ಚೈತನ್ಯ ತುಂಬಿ ಇಂದಿನ ಜೀವನಕ್ಕೆ ಹೊಸಬೆಳಕನ್ನು ಮೂಡಿಸಿದವಳು.’ ಎಂದು ಹಿಂದಿನ ಘಟನೆಗಳನ್ನು ವಿವರಿಸಿದ. 


ಆಕಾಶ್‌ನ ಕೃತಜ್ಞತಾಪೂರ್ವಕ ಮಾತುಗಳನ್ನು ಆಲಿಸಿದ ದೀಪಾ ಪೋಷಕರು, ದೀಪಾ ಜೀವನದಲ್ಲಿ ನಡೆದ ವೃತ್ತಾಂತಗಳನ್ನು ವಿವರಿಸಿದರು. “ಆಕಾಶ್, ನಮ್ಮ ದೀಪಾಳನ್ನು ಶ್ರೀಮಂತನೊಬ್ಬನಿಗೆ ಮದುವೆ ಮಾಡಿಕೊಟ್ಟೆವು. ನಂತರ ತಿಳಿಯಿತು ಆತ ಮಾನಸಿಕ ರೋಗಿ. ಅವನಿಗೆ ಇಷ್ಟವಿಲ್ಲದ ಮದುವೆಗೆ ನಮ್ಮ ಮಗಳು ಬಲಿಯಾಗಿದ್ದಳು. ಒಂದು ದಿನ ಇದಕ್ಕಿದ್ದಂತೆ ಅಳಿಯ ಆತ್ಮಹತ್ಯೆಗೆ ಶರಣಾದ. ನಂತರ ನಮ್ಮ ಮಗಳನ್ನು ಮರಳಿ ನಮ್ಮ ಮನೆಗೆ ಕರೆತಂದು ನಾವೇ ನೋಡಿಕೊಳ್ಳಬೇಕಾಯಿತು” ಎಂದಾಗ, ಜೀವನದಲ್ಲಿ ಕಹಿ ಉಂಡರೂ ಸ್ನಿತಪ್ರಜ್ಞತೆ ಹೊಂದಿರುವ ಏನೂ ಅರಿಯದ ಮುದ್ದು ಕಂದಮ್ಮನಂತೆ ಮಲಗಿದ ದೀಪಾ ಮೊಗವನ್ನು ಆಕಾಶ್ ಕಂಡು ಭಾವುಕನಾದನು. 
ಕೆಲವು ದಿನಗಳ ಕಾಲ ದೀಪಾ ಆಸ್ಪತ್ರೆಯ ಅತಿಥಿಯಾಗಿದ್ದಳು. ಎಷ್ಟೋ ದಿನಗಳಿಂದ ಅಗಲಿದ ಆತ್ಮೀಯತೆ ತೋರಿದ ಹೃದಯವನ್ನು ಆಕಾಶ್ ಸ್ವತಃ ತಾನೇ ಮುಂದೆ ನಿಂತು ಅವಳ ಆರೈಕೆ, ಖರ್ಚು-ವೆಚ್ಚಗಳನ್ನು ನೋಡಿಕೊಂಡು ದೀಪಾ ಪೋಷಕರ ಅಭಿಮಾನಕ್ಕೆ ಪಾತ್ರನಾದನು. ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಾಣುತಿರಲು ಆಸ್ಪತ್ರೆಯಿಂದ ಮನೆಗೆ ನಿರ್ಗಮಿಸಿದಳು. 
ಒಂದು ದಿನ ಆಕಾಶ್ ದೀಪಾ ಪೋಷಕರಲ್ಲಿ “ನೀವು ಸಮ್ಮತಿ ನೀಡಿದರೆ  ತಾನು ದೀಪಾಳನ್ನು ವರಿಸುವುದಾಗಿ ತನ್ನ  ಬಯಕೆ ಇಂಗಿತ ಪಡಿಸಿದ. ಗುಣವಂತನನ್ನು ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲವಾದರೂ ತಮ್ಮ ಮಗಳ ಇಚ್ಛೆಯೇ ಮುಖ್ಯವೆಂದು ಪರಿಗಣಿಸಿದ ದಂಪತಿಗಳು ಸಮಯ ನೋಡಿಕೊಂಡು ಆಕಾಶ್‌ನನ್ನು ಮದುವೆಯಾಗುವ ಪ್ರಸ್ತಾಪ ಮಾಡಿದರು. ಅದಕ್ಕೆ ಏನೂ ಉತ್ತರ ನೀಡದೆ ಮೌನವಾಗಿಯೇ ಇದ್ದಳು.  
ಸ್ವತಃ ಆಕಾಶ್ ದೀಪಾ ಬಳಿ ಬಂದು, “ದೀಪಾ, ನಾನೀಗ ಆಡುತ್ತಿರುವ ಮಾತುಗಳು ನಿನ್ನ ಮೇಲೆ ಅನುಕಂಪದಿಂದ ಅಥವಾ ಯಾವ ದುರುದ್ದೇಶದಿಂದಲೂ ಅಲ್ಲ.  ಕತ್ತಲೆಯ ಗೂಡಾಗಿದ್ದ ಈ ನನ್ನ ಜೀವನದಲ್ಲಿ ಬೆಳಗುವ ಹಣತೆ ಹಚ್ಚಿದವಳು ನೀನು. ಈಗ ನಿನ್ನ ಜೀವನ ಕತ್ತಲೆಯಲ್ಲಿ ಮುಳುಗಲು ನಾನು ಬಿಡಲಾರೆ.  ದೀಪದಿಂದ ದೀಪ ಹಚ್ಚಲು ಬೆಳಕಿನ ಪ್ರಜ್ವಲತೆ ಹೆಚ್ಚು . ಹಾಗೆಯೇ ಈ ಆಕಾಶ್ ಎಂಬ ಆಕಾಶದಲ್ಲಿ ದೀಪವಾಗಿ ನೀನು ಪ್ರಜ್ವಲಿಸಬೇಕು; ಬಾ ದೀಪಾ ಎಂದು ನವಿರು ಮಾತುಗಳಿಂದ ಓಲೈಸಿದ. ದೀಪಾಳ ಕಂಗಳು ತುಂಬಿ ಬಂದರೂ ಅಲ್ಲೇ ತಡೆಹಿಡಿದುಕೊಂಡು ಆಕಾಶವನ್ನು ದಿಟ್ಟಿಸುತ್ತಿದ್ದಳು. ಯಾವುದಕ್ಕೂ ದೀಪಾಳ ಉತ್ತರವಿಲ್ಲದ್ದನ್ನು ಗಮನಿಸಿದ ಆಕಾಶ್ ಒತ್ತಾಯಪೂರ್ವಕ  ಪ್ರೀತಿ ಪಡೆದರೆ ಅರ್ಥವಿಲ್ಲವೆಂದು ಪರಿಗಣಿಸಿದ ಆಕಾಶ ನಿರಾಶೆೆಯಿಂದ ನಿರ್ಗಮಿಸುತ್ತಿರಲು ಹಿಂದಿನಿಂದ ಮೃದು ಕೈಗಳು ಆಕಾಶ ಕೈಯನ್ನು ಹಿಡಿದೆಳೆಯಿತು. ನಾಲ್ಕು ಕಂಗಳು ಒಂದಾದದವು. ಅದರಗಳೆರಡು ಕಂಪಿಸುತಿರಲು, ರಾತ್ರಿಯಲ್ಲಿ ಕವಿದ ಕಾರ್ಮೋಡ ಸರಿದು ನಕ್ಷತ್ರಗಳು ಮಿರುಗುವ ದೀಪದಂತೆ, ದೀಪಾ ಆಕಾಶ್ ಜೀವನದ ಬಾನಂಗಳದಲ್ಲಿ ‘ಆಕಾಶದೀಪ’ವಾದಳು. 

- ಪಂಚಮೀ ಸಾಗರ

Category:Stories



ProfileImg

Written by Vishu Panchami