ಸಿರಿಧಾನ್ಯಗಳೆಂದು ಜನಪ್ರಿಯವಾಗುತ್ತಿರುವ ರಾಗಿ, ನವಣೆ, ಸಾವೆ, ಹಾರಕ, ಊದಲು ಮತ್ತು ಬರಗು ಇವು ಚಿಕ್ಕದಾದ ಕಾಳಿನ ಗಾತ್ರ ಹೊಂದಿರುವುದರಿಂದ ಇವುಗಳಿಗೆ ಕಿರುಧಾನ್ಯಗಳೆಂದು ಕರೆಯುವರು. ಇವುಗಳ ಇತಿಹಾಸ ತುಂಬಾ ದೊಡ್ಡದು. ಇವು ಮಳೆಯಾಶ್ರಿತ ಬೆಳೆಯಾಗಿದ್ದು ಆಹಾರ ಮತ್ತು ಮೇವಿಗಾಗಿ ರೈತರು ಕಿರುಧಾನ್ಯಗಳನ್ನು ಬೆಳೆಯುವರು.
ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಓರಿಸ್ಸಾ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರಪ್ರದೇಶಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುವರು. ನವಣೆ ಬೆಳೆಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳನಾಡಿನಲ್ಲಿ ಹೆಚ್ಚಾಗಿದೆ. ಬರಗಾಲವನ್ನು ಎದುರಿಸಿ ಬೆಳೆಯುವ ಹಾಗೂ ಬೇಗ ಕೊಯ್ಲಿಗೆ ಬರುವ ಕಿರುಧಾನ್ಯವಾದ "ಸಾವೆ" ಯನ್ನು ಮಧ್ಯಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಬಹು ಭಾಗದಲ್ಲಿ ಬೆಳೆಯುವುದನ್ನು ಕಾಣಬಹುದು. ಹಾರಕ, ಇದು ತುಂಬಾ ಅಪರೂಪದ ಕಿರು ಧಾನ್ಯ. ರಾಜಸ್ತಾನ, ಉತ್ತರಪ್ರದೇಶದ ಉತ್ತರಭಾಗದಲ್ಲಿ, ತಮಿಳುನಾಡಿನ ದಕ್ಷಿಣ ಭಾಗದಲ್ಲಿ, ಪಶ್ಚಿಮ ಬಂಗಾಲದ ಪೂರ್ವಭಾಗದಲ್ಲಿ ಮತ್ತು ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕೆಲವು ಭಾಗದಲ್ಲಿ ಇದನ್ನು ಬೆಳೆಯುತ್ತಾರೆ. ಭಾರತದಲ್ಲಿ ಊದಲು ಉತ್ತರ ಪ್ರದೇಶದ ಮತ್ತು ಹಿಮಾಲಯದ ಬೆಟ್ಟಗಳ ಸಾಲಿನಲ್ಲಿ ಕಂಡುಬರುವ ಬಹುಮುಖ್ಯ ಬೆಳೆಯಾಗಿದೆ. ಬರಗು ಬೆಳೆಯನ್ನು ಬಿಹಾರ, ಆಂಧ್ರಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗದಲ್ಲಿ ಕಾಣಬಹುದು.
ಸಿರಿಧಾನ್ಯಗಳು ಅಲ್ಪಾವಧಿ ಬೆಳೆಗಳಾಗಿದ್ದು, ರೋಗ ಮತ್ತು ಕೀಟ ನಿರೋಧಕ ಶಕ್ತಿಯನ್ನು ಹೊಂದಿವೆಯಲ್ಲದೇ, ಫಲವತ್ತತೆ ಇಲ್ಲದ ಮಣ್ಣಿನಲ್ಲಿಯೂ ಸಹ ಸುಲಭವಾಗಿ ಇವುಗಳನ್ನು ಬೆಳೆಯಬಹುದಾಗಿದೆ. ಸಿರಿಧಾನ್ಯಗಳು ಅತಿ ಭೀಕರ ಬರಗಾಲದಲ್ಲಿಯೂ ಸಹ ಹಸಿವನ್ನು ಓಡಿಸುವ ಧಾನ್ಯಗಳಾಗಿವೆ.
ಆಹಾರದಲ್ಲಿ ಸತ್ವಪೂರ್ಣ ಸಿರಿಧಾನ್ಯಗಳು
ಸತ್ವಪೂರ್ಣ ಸಿರಿಧಾನ್ಯಗಳನ್ನು ಕಿರುಧಾನ್ಯ ಮತ್ತು ತೃಣಧಾನ್ಯಗಳೆಂದು ಕರೆಯುವುದು ರೂಢಿಯಲ್ಲಿದೆ. ರಾಗಿ, ಸಾವಿ, ನವಣೆ, ಊದಲು, ಹಾರಕ ಮತ್ತು ಬರಗುಗಳನ್ನು ಕಿರುಧಾನ್ಯಗಳ ಗುಂಪಿಗೆ ಸೇರಿಸಲಾಗಿದೆ.
ಇತರ ಏಕದಳ ಧಾನ್ಯಗಳಂತೆ ಸಿರಿಧಾನ್ಯಗಳು ಸಹ ದೇಹಕ್ಕೆ ಧಾರಾಳವಾಗಿ ಶಕ್ತಿಯನ್ನು ಕೊಡುವವು. ಸಾಮಾನ್ಯ ಜನರ ದಿನದ ಆಹಾರದಲ್ಲಿ ದೇಹಕ್ಕೆ ಬೇಕಾದ ಶೇಕಡಾ 70 ರಿಂದ 80 ರಷ್ಟು ಶಕ್ತಿಯು ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳಿಂದ ದೊರಕುವುದು. ದಿನದ ಆಹಾರದಲ್ಲಿ ಇವುಗಳ ಸೇವನೆಯ ಪ್ರಮಾಣ ಹೆಚ್ಚಿರುವುದರಿಂದ ದೇಹಕ್ಕೆ ಬೇಕಾದ ಪ್ರೊಟೀನಿನ ಶೇಕಡಾ 50ರಷ್ಟು ಪೂರೈಕೆಯಾಗುವುದು. ಅಂದರೆ ಕಡಿಮೆ ವೆಚ್ಚದಲ್ಲಿ ಧಾನ್ಯಗಳಿಂದ ಪೊಟೀನ್ ದೊರಕುವುದು.
ಸಿರಿಧಾನ್ಯಗಳಲ್ಲಿ ಪಚನಕಾರಿ ನಾರಿನಂಶವು ಅಕ್ಕಿ, ಗೋಧಿಗಳಿಗಿಂತ ಹೆಚ್ಚಿರುವುದರಿಂದ, ದೇಹದ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿಯು ನಿಧಾನವಾಗಿ ಬಿಡುಗಡೆಯಾಗುವುದರಿಂದ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಿರಿಧಾನ್ಯಗಳು ಸಹಾಯಕವಾಗಿರುವವು. ಇವುಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದು ದೇಹಕ್ಕೆ ಉಪಯೋಗಕರವಾಗಿದೆ. ದೇಹದ ವಿವಿಧ ಚಟುವಟಿಕೆಗಳಿಗೆ ಸಮರ್ಪಕವಾಗಿ ಶಕ್ತಿಯು ಪೂರೈಕೆಯಾಗಲು ಬೇಕಾಗುವ 'ಬಿ' ಜೀವಸತ್ವ ಮತ್ತು ಖನಿಜಾಂಶಗಳ ಆಗರವಾಗಿರುವವು. ಈ ತರಹದ ಲಘು ಪೋಷಕಾಂಶಗಳ ಲಭ್ಯತೆ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಸಿಗದಿದ್ದಾಗ ಶಕ್ತಿಯು ದೇಹಕ್ಕೆ ಸಮರ್ಪಕವಾಗಿ ದೊರಕುವುದಿಲ್ಲ. ಇದರಿಂದ ಕಾರ್ಯ ಸಾಮರ್ಥ್ಯತೆ ಕುಂದುವುದು.
ಸಿರಿಧಾನ್ಯಗಳಲ್ಲಿರುವ ಖನಿಜಾಂಶಗಳು ಅಕ್ಕಿ ಮತ್ತು ಗೋಧಿಯಲ್ಲಿರುವ ಪ್ರಮಾಣಕ್ಕಿಂತ ಹೆಚ್ಚಿರುವುದು. ರಾಗಿಯಲ್ಲಿ ಕ್ಯಾಲ್ಸಿಯಂ ಮೂವತ್ತು ಪಟ್ಟು ಹೆಚ್ಚಿದ್ದರೆ ಇತರೆ ಸಿರಿಧಾನ್ಯಗಳಲ್ಲಿ ಕನಿಷ್ಠ ಎರಡು ಪಟ್ಟಾದರೂ ಹೆಚ್ಚು ಕ್ಯಾಲ್ಸಿಯಂ ಇರುವುದು. ಕಬ್ಬಿಣಾಂಶವು ಸಾವೆ ಮತ್ತು ನವಣೆ ಅಕ್ಕಿಯಲ್ಲಿ ಹೆಚ್ಚಿರುವುದು. ಯಾವುದೇ ಪೋಷಕಾಂಶವನ್ನು ಅಕ್ಕಿ ಮತ್ತು ಗೋಧಿಗೆ ಹೋಲಿಸಿದಾಗ ಎಲ್ಲಾ ಕಿರುಧಾನ್ಯಗಳು ಹೆಚ್ಚು ಪೋಷಕಾಂಶಭರಿತವಾಗಿವೆ.
ಭಾರತದಲ್ಲಿ, ಅಪೌಷ್ಟಿಕತೆಯಿಂದ ನರಳುತ್ತಿರುವ ದೊಡ್ಡ ಸಂಖ್ಯೆಯ ಜನಸಮೂಹದ ಸಮಸ್ಯೆಗಳಿಗೆ ಪರಿಹಾರ ಸಿರಿಧಾನ್ಯಗಳಲ್ಲಿದೆ.
ಮನದ ಮಾತು