ಸಿಂಪ್ಲಿ ಅನ್ ಬಿಲೀವೆಬಲ್!!

ಜಸ್ ಪ್ರೀತ್ ಬುಮ್ರಾ

ProfileImg
05 Jul '24
2 min read


image

ಸಿಂಪ್ಲಿ ಅನ್ ಬಿಲೀವೆಬಲ್!!

ಈ ಮನುಷ್ಯನನ್ನು ನೋಡಿದಕೂಡಲೇ ನನಗನ್ನಿಸುವುದು ಇಷ್ಟೇ. ಖಂಡಿತ ನಿನ್ನೆ ಗೆದ್ದ ಕಪ್ ಇಡೀ ತಂಡದ ಪ್ರಯತ್ನ. ಅದಕ್ಕಾಗಿ ಯಾವೊಬ್ಬ ವ್ಯಕ್ತಿಯನ್ನೂ ವೈಭವೀಕರಿಸಲಾಗದು. ರೋಹಿತ್ ನ ತಣ್ಣಗಿನ ನಾಯಕತ್ವ, ಒಂದೆಡೆ ವಿಕೆಟ್ ಗಳು ಉರುಳುತ್ತಿದ್ದರೂ, ಸ್ವತಃ ತನ್ನ ಫಾರ್ಮ್ ಸರಿಯಿಲ್ಲದ ಕಾರಣ ಅಪಾರ ಒತ್ತಡದಲ್ಲಿದ್ದರೂ ತನ್ನ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಫೈನಲ್ ಗಾಗಿಯೇ ಕಾದಿರಿಸಿದಂತೆ ಆಡಿದ ಕೊಹ್ಲಿ, ಬ್ಯಾಟ್ಸ್ ಮನ್ ಗಳು ವಿಫಲರಾದಾಗ ಪರಿಣತ ಬ್ಯಾಟ್ಸ್ ಮನ್ ನಂತೆಯೇ ಬ್ಯಾಟ್ ಬೀಸಿದ ಅಕ್ಷರ್ ಪಟೇಲ್, ಮಧ್ಯೆ ಉಪಯುಕ್ತ ಕಾಣಿಕೆ ನೀಡಿದ ಶಿವಂ ದುಬೆ, ಏಡನ್ ಮಾರ್ಕರಮ್ ನಂಥ ದಿಗ್ಗಜನನ್ನು ಅಗ್ಗಕ್ಕೆ ಔಟ್ ಮಾಡಿದ್ದಲ್ಲದೇ ಕೊನೆಯಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಕ್ಟಿಂಟನ್ ಡಿಕಾಕ್ ನನ್ನು ಔಟ್ ಮಾಡಿದ ಅರ್ಷದೀಪ್ ಸಿಂಗ್, ಕೊನೆಯ ಓವರ್ ನಲ್ಲಿ ತನ್ನ ಸಂಯಮ ಕಾಯ್ದುಕೊಂಡು ಅದ್ಭುತವಾಗಿ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಮಿಲ್ಲರ್ ಹೊಡೆದ ಆ ಅದ್ಭುತ ಹೊಡೆತವನ್ನು ನಂಬಲಸಾಧ್ಯ ರೀತಿಯಲ್ಲಿ ಹಿಡಿದ ಸೂರ್ಯಕುಮಾರ್ ಯಾದವ್ ಹೀಗೆ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದೇ. ಆದರೆ ಇಡೀ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಸರಣಿಯ ಆಟಗಾರನಾದ ಈ ವ್ಯಕ್ತಿಯ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಲು ಕಾರಣವಿದೆ. ಏಕೆಂದರೆ ಈ ವ್ಯಕ್ತಿ ತನ್ನ ವಿಭಾಗದಲ್ಲಿ ನಮ್ಮ ದೇಶದಲ್ಲಿ ಹಿಂದೆಂದೂ ಕಂಡುಕೇಳರಿಯದಂಥ ಆಟಗಾರ ಎನ್ನುವುದೇ ಇದಕ್ಕೆ ಕಾರಣ.

ನಿಜ, ರೋಹಿತ್ ಮತ್ತು ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್ ಗಳು ಎನ್ನಿವುದರಲ್ಲಿ ಅನುಮಾನವಿಲ್ಲ. ಆದರೆ ನಮ್ಮಲ್ಲಿ ಬ್ಯಾಟ್ಸ್ ಮನ್ ಗಳು ಮೊದಲಿನಿಂದಲೂ ಇದ್ದರು. ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ ಹೀಗೆ ಬ್ಯಾಟ್ಸ್ ಮನ್ ಗಳು ತುಂಬಾ ಜನ ಇದ್ದರು. ಇನ್ನು ಬೌಲಿಂಗ್ ವಿಷಯಕ್ಕೆ ಬಂದರೆ ನಮ್ಮಲ್ಲಿ ವಿಶ್ವಶ್ರೇಷ್ಠ ಸ್ಪಿನ್ನರ್ ಗಳಿಗೆ ಕೊರತೆಯಿರಲಿಲ್ಲ. ಬಿಎಸ್ ಚಂದ್ರಶೇಖರ್, ಇಎಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ, ನಂತರ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹೀಗೆ ಬೇಕಾದಷ್ಟು ಜನ ಸ್ಪಿನ್ನರ್ ಗಳು ಬಂದರು. ಆದರೆ ವೇಗದ ಬೌಲಿಂಗ್ ವಿಷಯಕ್ಕೆ ಬಂದರೆ ಹೀಗೇ ಹೇಳಲಾಗುವುದಿಲ್ಲ. ನಿಜ, ಕಪಿಲ್ ದೇವ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಇರ್ಫಾನ್ ಪಠಾಣ್ ಇವರೆಲ್ಲ ಅತ್ಯುತ್ತಮ ಬೌಲರ್ ಗಳೇ, ಆದರೆ ಈ ವ್ಯಕ್ತಿ ಮಾತ್ರ ಅವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಎಂದರೆ ತಪ್ಪಾಗಲಾರದು. ನಾವು ಮೊದಲೆಲ್ಲ ಜೋಯೆಲ್ ಗಾರ್ನರ್, ಮೈಕೆಲ್ ಹೋಲ್ಡಿಂಗ್, ಆ್ಯಂಡಿ ರಾಬರ್ಟ್ಸ್, ಮಾಲ್ಕಂ ಮಾರ್ಷಲ್, ಕಾಲಿನ್ ಕ್ರಾಫ್ಟ್, ಡೆನಿಸ್ ಲಿಲ್ಲಿ, ಫ್ರೆಡ್ ಟ್ರೂಮನ್, ಕರ್ಟ್ನಿ ವಾಲ್ಷ್, ಕರ್ಟ್ಲಿ ಆ್ಯಂಬ್ರೋಸ್, ಗ್ಲೆನ್ ಮೆಕ್ ಗ್ರಾತ್, ಜೇಸನ್ ಗಿಲೆಸ್ಪಿ, ಬ್ರೆಟ್ ಲೀ, ಅಲನ್ ಡೊನಾಲ್ಡ್, ಶಾನ್ ಪೊಲಾಕ್, ವಾಸಿಮ್ ಅಕ್ರಮ್, ವಕಾರ್ ಯೂನಿಸ್, ಇಮ್ರಾನ್ ಖಾನ್, ರಿಚರ್ಡ್ ಹ್ಯಾಡ್ಲಿ, ಡೇಲ್ ಸ್ಟೆಯ್ನ್ ಮುಂತಾದ ಬೌಲರ್ ಗಳನ್ನು ನೋಡಿ ನಮ್ಮಲ್ಲೇಕೆ ಇಂಥ ಒಬ್ಬ ಬೌಲರ್ ಹುಟ್ಟಿಬರಲಿಲ್ಲ ಎಂದು ಅಸೂಯೆಪಡುತ್ತಿದ್ದ ಕಾಲವೊಂದಿತ್ತು. ಅದನ್ನು ದೂರಮಾಡಿದ್ದು ಈ ವ್ಯಕ್ತಿ ಎಂದರೆ ತಪ್ಪಾಗಲಾರದು. ಈತ ಎಸೆಯುವ ಒಂದೊಂದು ಯಾರ್ಕರ್ ಗಳಿಗೂ ಉತ್ತರವಿಲ್ಲದೆ ಎದುರಾಳಿ ಬ್ಯಾಟ್ಸ್ ಮನ್ ಗಳು ಪರದಾಡುವುದನ್ನು ನೋಡುವಾಗ ಹೆಮ್ಮೆಯಾಗುತ್ತದೆ. ಓಲೀ ಪೋಪ್ ಗೆ ಈತ ಹಾಕಿದ ಅಮೋಘ ಯಾರ್ಕರ್, ಬೆನ್ ಸ್ಟೋಕ್ಸ್ ಗೆ ಹಾಕಿದ ಇನ್ ಸ್ವಿಂಗರ್ ಮತ್ತು ಅದಕ್ಕೆ ಉತ್ತರವಿಲ್ಲದೆ ಸ್ಟೋಕ್ಸ್ ನೀಡಿದ ಪ್ರತಿಕ್ರಿಯೆ ಇವೆಲ್ಲ ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ. ಇದೇ ಸಂದರ್ಭದಲ್ಲಿ ನಿನ್ನೆ ರೀಜಾ ಹೆಂಡ್ರಿಕ್ಸ್ ಮತ್ತು ಮಾರ್ಕೋ ಯಾನ್ಸೆನ್ ಅವರನ್ನು ಈತ ಬೌಲ್ಡ್ ಮಾಡಿದ ಎಸೆತಗಳನ್ನು ಸಹ ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಟೂರ್ನಮೆಂಟ್ ನ ಆಟಗಾರ ಗೌರವಕ್ಕೆ ಖಂಡಿತ ಅರ್ಹ ವ್ಯಕ್ತಿ ಈತ.

ಇಷ್ಟೆಲ್ಲ ಕಥೆ ಬರೆದಿದ್ದು ಯಾರ ಬಗ್ಗೆ ಎನ್ನುವುದು ಖಂಡಿತ ನಿಮಗೆ ಗೊತ್ತಾಗಿರುತ್ತದೆ... ಈತ ನಿಜಕ್ಕೂ ನಮ್ಮಲ್ಲಿ ಹುಟ್ಟಿಬಂದ ಸರ್ವಶ್ರೇಷ್ಠ ಬೌಲರ್, ಅಷ್ಟೇ ಏಕೆ, ಸದ್ಯಕ್ಕಂತೂ ಇಡೀ ಜಗತ್ತಿನಲ್ಲೇ ಸರ್ವಶ್ರೇಷ್ಠ ಬೌಲರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಏನಂತೀರಿ?

Category:Sports



ProfileImg

Written by Srinivasa Murthy

Verified

0 Followers

0 Following