ಸುಖೀ ಜೀವನದ ಸರಳ ಸೂತ್ರಗಳು…..

ProfileImg
16 Sep '23
5 min read


image

ಇಂದಿನ ವೇಗದ ಜಗತ್ತಿನಲ್ಲಿ ಎಲ್ಲರೂ ದಿನವಿಡೀ ಓಡುತ್ತಲೇ ಇರುತ್ತಾರೆ. ಆ ಓಟ ಇಂದಿನ ಬದುಕಿಗೆ ಅನಿವಾರ್ಯ ಕೂಡ. ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಕೊನೆಗೆ ತಂತ್ರಜ್ಙಾನದ ವಿಷಯದಲ್ಲೂ ಕೂಡ ನಾವು ಆದಷ್ಟು ಅಪ್ಡೇಟ್‌ ಆಗಿದ್ದರೆ ಮಾತ್ರ ನಮಗೆ ಬೆಲೆ ಜಾಸ್ತಿ. ಇವೆಲ್ಲವುಗಳ ನಡುವೆ ನಿಧಾನವಾಗಿ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗಿನ ಗಮನವನ್ನು ಕಡಿಮೆ ಮಾಡಿಕೊಂಡು, ನಮ್ಮ ಜೀವನಶೈಲಿಯನ್ನು ಅಧೋಗತಿಗೆ ಇಳಿಸಿಕೊಂಡಿರುತ್ತೇವೆ.  ಜೀವನ ಶೈಲಿ ಅಂದರೆ, ನಾವು ಬದುಕುವ ರೀತಿ ಮಾತ್ರವಲ್ಲ ಅದೊಂದು ಕಲೆ, ಅದೊಂದು ವಿದ್ಯೆ. ಒಳ್ಳೆಯ ಜೀವನ ಶೈಲಿಯು  ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸಮತೋಲನಗೊಳಿಸಿ ಒಂದು ಖುಷಿಯಾದ ಸಾರ್ಥಕ ಜೀವನವನ್ನು ನಡೆಸುವಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ನಮಗೆ ಒಂದು ಭದ್ರ ಬುನಾದಿಯನ್ನು ಹಾಕಿ ಕೊಡುತ್ತದೆ. ಈ ಲೇಖನದಲ್ಲಿ, ಸಮತೋಲಿತ ಜೀವನಶೈಲಿಯ ಪ್ರಾಮುಖ್ಯತೆಯನ್ನು ನಾವು ಅರಿತುಕೊಳ್ಳೋಣ ಮತ್ತು ಹೇಗೆ ಅದು ನಮ್ಮ ಜೀವನವನ್ನು ನಾವಂದುಕೊಂಡಂತೆ ಬದುಕಲು ಮತ್ತು ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ

 

ಈಗಿನ ಕಾಲಮಾನದಲ್ಲಿ ಎಲ್ಲರೂ ಸಮತೋಲಿತ ಜೀವನಶೈಲಿಯ ಬಗ್ಗೆ ಸಾಕಷ್ಟು ಕೇಳಿರುತ್ತೀರಿ, ಓದಿರುತ್ತೀರಿ, ಅಥವಾ ವೀಡಿಯೋಗಳಲ್ಲಿ ನೋಡಿಯೂ ಇರುತ್ತೀರಿ ಒಂದಿಷ್ಟು ದಿನ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿರುತ್ತೀರಿ ಆಮೇಲೆ ಅದನ್ನ ಅರ್ಧಕ್ಕೆ ನಿಲ್ಲಿಸಿ ನಿಮ್ಮ ಒತ್ತಡದ ಜೀವನ ಶೈಲಿಯನ್ನು ಮುಂದುವರಿಸಿರುತ್ತೀರಿ. ಯಾಕಂದ್ರೆ ಯಾವುದಾದರೂ ಒಂದು ಅಭ್ಯಾಸವನ್ನು ಬೆಳೆಸಿ ಪಾಲಿಸಿಕೊಂಡು ಹೋಗುವುದು ಸುಲಭದ ಮಾತೇ ಅಲ್ಲ. ಹಾಗಿದ್ದರೆ ಈ  ಜೀವನ ಶೈಲಿಯಲ್ಲಿ ಸಮತೋಲನ ಎಂದರೇನು? ಇದನ್ನ ನಾವು ಯಾಕೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಇದರಿಂದ ಆಗುವ ಪ್ರಯೋಜನಗಳಾದರೂ ಏನು ಎಂಬುದರ ಬಗ್ಗೆ ನೋಡೋಣ

 

ಸಮತೋಲಿನ ಜೀವನ ಶೈಲಿಯ ಮುಖ್ಯ ಅಡಿಪಾಯಗಳೆಂದರೆ

ದೈಹಿಕ ಆರೋಗ್ಯ

ಜೀವನಶೈಲಿಯ ಮೂಲಾಧಾರವೆಂದರೆ ದೈಹಿಕ ಆರೋಗ್ಯ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಕ್ಕೆ ಕೊಡುಗೆ ನೀಡುತ್ತದೆ ಎಂಬುದು ಯಾರೂ ಅರಿಯದ ವಿಷಯವೇನಲ್ಲ. ದೈಹಿಕ ಆರೋಗ್ಯವು ನಮ್ಮ ದೇಹವನ್ನು ಬಲಪಡಿಸುವುದು ಮಾತ್ರವಲ್ಲದೆ ನಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದೈನಂದಿನ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು, ಪೌಷ್ಟಿಕಾಂಶದ ಊಟಕ್ಕೆ ಆದ್ಯತೆ ನೀಡುವುದು ಮತ್ತು ನೀವು ಸಾಕಷ್ಟು ನಿದ್ರೆ ಮಾಡುವುದು ದೈಹಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಹಂತಗಳಾಗಿವೆ.

ಮಾನಸಿಕ ಆರೋಗ್ಯ

ಜೀವನಶೈಲಿ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಸಂಭಂದಿತವಲ್ಲ. ಈಗ ನಾವು ಬದುಕುತ್ತಿರುವ ವಾತಾವರಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ. ಕೆಲವರು ಅದನ್ನ ಗುರುತಿಸುತ್ತಾರೆ. ಇನ್ನು ಕೆಲವರು ತಮಗೇನಾಗುತ್ತದೆ ಎಂಬುದನ್ನೇ ಅರಿಯದೇ ಕಷ್ಟ ಪಡುತ್ತಿರುತ್ತರೆ ಮಾನಸಿಕ ಸ್ವಾಸ್ಥ್ಯವೂ ಅಷ್ಟೇ ಮುಖ್ಯ. ಒತ್ತಡ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ನಮ್ಮ ಒಟ್ಟಾರೆ ಜೀವನದ ಗುಣಮಟ್ಟವನ್ನು ತಡೆಯಬಹುದು. ನಿಮ್ಮ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು, ತಾಳ್ಮೆಯನ್ನು ಅಭ್ಯಾಸ ಮಾಡಿ, ನೀವು ಆನಂದಿಸುವ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ, ಅಗತ್ಯವಿದ್ದಾಗ ಚಿಕಿತ್ಸೆಯನ್ನು ಪಡೆದುಕೊಳ್ಳಿ ಮತ್ತು ಸ್ನೇಹಿತರು ಮತ್ತು ಪ್ರೀತಿಪಾತ್ರರ ಬೆಂಬಲವನ್ನು ಪಡೆಯಿರಿ. ಸಮತೋಲಿತ ಜೀವನಶೈಲಿಯನ್ನು ಸಾಧಿಸಲು ನಿಮ್ಮ ಬಗ್ಗೆ ನೀವು ಸಾಕಷ್ಟು ಸಮಯ ಮತ್ತು ಕಾಳಜಿ ವಹಿಸುವುದು ತುಂಬಾ ಮುಖ್ಯ ಮತ್ತು ಒತ್ತಡ ನಿರ್ವಹಣೆಗೆ ಸಮಯ ತೆಗೆದುಕೊಳ್ಳುವುದು ಅತ್ಯಗತ್ಯ.

ಭಾವನಾತ್ಮಕ ಆರೋಗ್ಯ

ನಮ್ಮ ದೈನಂದಿನ ಜೀವನದಲ್ಲಿ ಭಾವನೆಗಳು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಮ್ಮ ಭಾವನೆಗಳನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ನಾವು ಖುಷಿಯಾಗಿ ಇರಲು ತುಂಬಾ ಸಹಾಯ ಮಾಡುತ್ತದೆ. ಇದು ನಮ್ಮ ಭಾವನೆಗಳ ಅರಿವು ಮೂಡಿಸುತ್ತದೆ, ಆರೋಗ್ಯಕರ ರೀತಿಯಲ್ಲಿ ಅವುಗಳನ್ನು ವ್ಯಕ್ತಪಡಿಸುವುದು ಮತ್ತು ಭಾವನಾತ್ಮಕ ತಿಳುವಳಿಕೆಯನ್ನು ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಬಾಂಧವ್ಯವನ್ನು ಯಾವ ಪ್ರಮಾಣದಲ್ಲಿ ಹೇಗೆ ಎಷ್ಟು ಬೆಳೆಸಿಕೊಳ್ಳಬೇಕು. ಹೇಗೆ ಅಂಟಿಯೂ ಅಂಟದ ಹಾಗೆ ನಮ್ಮನ್ನ ನಾವು ಭಾವೋದ್ರೇಕದಿಂದ ರಕ್ಷಿಸಿಕೊಳ್ಳಬುದು ಇದೆಲ್ಲವನ್ನೂ ನಮ್ಮ ಭಾವನೆಗಳ ಬಗ್ಗೆ ನಮಗಿರುವ ಆಳವಾದ ಜ್ಞಾನದಿಂದಲೇ ನಾವು ಪಡೆದುಕೊಳ್ಳುತ್ತ ಹೋಗಬಹುದಾಗಿದೆ  ಬಲವಾದ ಮತ್ತು ಆರೋಗ್ಯಕರ ಸಂಭಂದಗಳನ್ನು, ಭಾಂದವ್ಯಗಳನ್ನು ಬೆಳೆಸಿಕೊಳ್ಳುವುದು ನಮಗೆ ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಔದ್ಯೋಗಿಕ ಸಮತೋಲನ

ಯಶಸ್ಸಿನ ನಮ್ಮ ಅನ್ವೇಷಣೆಯಲ್ಲಿ, ನಾವು ಸಾಮಾನ್ಯವಾಗಿ ಉಳಿದ-ಜೀವನದ ಅಂಶಗಳ ಸಮತೋಲನದ ಪ್ರಾಮುಖ್ಯತೆಯನ್ನು ಕಡೆಗಣಿಸುತ್ತೇವೆ. ಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ಕೌಟುಂಬಿಕ, ಮಾನಸಿಕ ನೆಮ್ಮದಿ ಹಾಳಾಗಲು ಮುಖ್ಯ ಕಾರಣವಾಗಬಹುದು ಮತ್ತು ಅದು ನಮ್ಮ ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಮತೋಲಿತ ಜೀವನಶೈಲಿಯನ್ನು ಸಾಧಿಸಲು,ಕೆಲಸದ ಮಿತಿಯನ್ನು ಮೊದಲು ನಿರ್ಧರಿಸುವುದು ಅಗತ್ಯ, ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ ಮತ್ತು ವಿರಾಮಕ್ಕೆ, ಕುಟುಂಬಕ್ಕೆ ಮತ್ತು ಪ್ರವಾಸಕ್ಕೆ, ಹವ್ಯಾಸಕ್ಕೆ ಸಮಯ ಮಾಡಿಕೊಳ್ಳಿ. ಆರೋಗ್ಯಕರ ಔದ್ಯೋಗಿಕ-ಜೀವನದ ಸಮತೋಲನವು ಉದ್ಯೋಗದಲ್ಲಿ -ಕುಟುಂಬದಲ್ಲಿ ಹೆಚ್ಚಿನ ತೃಪ್ತಿಗೆ ಖಂಡಿತಾ ಸಹಾಯ ಮಾಡುತ್ತದೆ. 

 

 

ಹಾಗಾದರೆ ಈ ರೀತಿ ಬದುಕುವುದರಿಂದ ಆಗುವ ಪ್ರಯೋಜನಗಳಾದರೂ ಏನು?

ನಿಮ್ಮ ಆರೋಗ್ಯದಲ್ಲಿ ಸುಧಾರಣೆ: ಸಮತೋಲಿತ ಜೀವನಶೈಲಿಯು ಉತ್ತಮ ದೈಹಿಕ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಬದುಕಿದಷ್ಟು ದಿನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಪ್ರೇರೇಪಿಸುತ್ತದೆ.

ಉತ್ತಮ ಮಾನಸಿಕ ಆರೋಗ್ಯ: ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ ಕಡಿಮೆ ಒತ್ತಡ, ಉದ್ವೇಗ ಮತ್ತು ಕಷ್ಟಕರ ಸಂದರ್ಭಗಳಲ್ಲಿಯು ಕೂಡ ನಿಮ್ಮ ಉದ್ವೇಗ ಮತ್ತು ಭಾವನೆಗಳ ಸಮತೋಲನಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ. ನಿಮ್ಮ ಬುದ್ಧಿ, ಮನಸ್ಸಿನ ಮೇಲೆ ಸಂಪೂರ್ಣವಾಗಿ ನೀವು ನಿಯಂತ್ರಣ ಹೊಂದುವಂತೆ ಮಾಡುತ್ತದೆ

ಹೆಚ್ಚಿನ ಭಾವನಾತ್ಮಕ ಹೊಂದಾಣಿಕೆ: ಭಾವನಾತ್ಮಕವಾಗಿ ಸಮತೋಲಿತ ಜೀವನಶೈಲಿಯು ಜೀವನದ ಸವಾಲುಗಳನ್ನು ನಿಭಾಯಿಸಲು ಮತ್ತು ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು, ಬೆಳೆಸಿಕೊಂಡ ಸಂಭಂದಗಳನ್ನು ಉಳಿಸಿಕೊಳ್ಳಲು, ಒಳ್ಳೆಯ ರೀತಿಯಲ್ಲಿ ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ. 

ಹೆಚ್ಚಿದ ಉತ್ಪಾದಕತೆ: ಔದ್ಯೋಗಿಕ-ಜೀವನದ ಸಮತೋಲನವನ್ನು ಸಾಧಿಸುವುದು ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ವೃತ್ತಿಪರ ಮತ್ತು ವೈಯಕ್ತಿಕ ಜೀವನ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ.

ಉನ್ನತ ಜೀವನನ ಗುಣಮಟ್ಟ: ಸಮತೋಲಿತ ಜೀವನಶೈಲಿಯು ಖುಷಿ ಮತ್ತು ತೃಪ್ತಿಯ ಭಾವಕ್ಕೆ ಕಾರಣವಾಗುತ್ತದೆ, ನಮ್ಮ ಜೀವನದಲ್ಲಿ ಉದ್ದೇಶ ಮತ್ತು ಅರ್ಥವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

 

ಸಮತೋಲಿನ ಜೀವನ ಶೈಲಿಯನ್ನು ಬೆಳೆಸಿಕೊಳ್ಳಲು ನಾವು ಆಭ್ಯಾಸ ಮಾಡಬೇಕಾದ ಸರಳ ಸಲಹೆಗಳು ಏನೆಂದರೆ

ಆದ್ಯತೆ ಮತ್ತು ಗುರಿಗಳನ್ನು ಹೊಂದಿಸಿ: ಜೀವನದಲ್ಲಿ ನಿಮಗೆ ಮುಖ್ಯವಾದ ಮೌಲ್ಯಗಳು ಮತ್ತು ಆದ್ಯತೆಗಳನ್ನು ಗುರುತಿಸಿ ಮತ್ತು ಅವುಗಳಿಗೆ ಹೊಂದಿಕೆಯಾಗುವ ಸ್ಪಷ್ಟ ಗುರಿಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸಮಯ ಮತ್ತು ಶಕ್ತಿಯನ್ನು ನೀವು ಹೇಗೆ ಉಪಯೋಗಿಸುತ್ತೀರಿ ಎಂಬುದರ ಕುರಿತು ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಸಮಯ ನಿರ್ವಹಣೆ: ವೇಳಾಪಟ್ಟಿಗಳು ಮತ್ತು ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ರಚಿಸುವ ಮೂಲಕ ನಿಮ್ಮ ಸಮಯವನ್ನು ಸಮರ್ಥವಾಗಿ ಉಪಯೋಗಿಸಿ. ನಿಮ್ಮ ಜೀವನದ ಎಲ್ಲಾ ವಿಭಾಗಗಳಿ ನೀವು ಸಮಯವನ್ನು ನಿಗದಿಪಡಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

NO ಎಂದು ಹೇಳಲು ಕಲಿಯಿರಿ: ನಿಮ್ಮ ಮಿತಿಗಳನ್ನು ನೀವು ತಿಳಿಯುವುದು ತುಂಬಾ ಮುಖ್ಯ.  ನಿಮ್ಮಿಂದ ಸಾಧ್ಯವಾಗದೆ ಇರುವುದಕ್ಕೆ ಯಾವ ಮುಲಾಜಿಗೂ ಸಿಲುಕದೇ NO ಎಂದು ಹೇಳಲು ಕಲಿಯಿರಿ. ಇಷ್ಟವಾಗದ ಕೆಲಸ ಅಥವಾ ಅತಿಯಾದ ಕೆಲಸವು ಅಸಮತೋಲನ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ಮಾನಸಿಕವಾಗಿ ನಿಮ್ಮನ್ನ ಗೊಂದಲಕ್ಕೂ ದೂಡಬಹುದು.

ಸಹಾಯ ಕೇಳಲು ಹಿಂಜರಿಯಬೇಡಿ: ಕೆಲಸದಲ್ಲಿ ಅಥವಾ ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲಸಗಳನ್ನು ನಿಯೋಜಿಸಲು ಅಥವಾ ಅಗತ್ಯವಿದ್ದಾಗ ಸಹಾಯಕ್ಕಾಗಿ ಕೇಳಲು ಹಿಂಜರಿಯದಿರಿ. ಇದು ನಿಮ್ಮ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಇತರ ಪ್ರಮುಖ ಚಟುವಟಿಕೆಗಳಿಗೆ ಸಮಯವನ್ನು ಮುಕ್ತಗೊಳಿಸುತ್ತದೆ.

ಮೈಂಡ್‌ಫುಲ್‌ನೆಸ್ ಅನ್ನು ಅಭ್ಯಾಸ ಮಾಡಿ: ನಿಮ್ಮ ದೈನಂದಿನ ದಿನಚರಿಯಲ್ಲಿ ಡೈರಿ ಬರೆಯುವಂತಹ ಅಭ್ಯಾಸಗಳನ್ನು ಸೇರಿಸಿ. ಅದು ನಿಮ್ಮನ್ನು ಶಿಸ್ತುಬದ್ಧವಾಗಿರಲು ಸಹಾಯ ಮಾಡುತ್ತದೆ. ಧ್ಯಾನ, ಪ್ರಾಣಾಯಾಮದಂತಹ ಅಭ್ಯಾಸಗಳು ನಿಮ್ಮ ಇವತ್ತಿನ ಪರಿಸ್ಥಿತಿಯನ್ನು ಅನುಭವಿಸಲು ಮತ್ತು ಅದರಲ್ಲಿ ನಿಮಗೆ ಬದುಕಲು ಅವಕಾಶ ಮಾಡಿಕೊಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಸ್ವಯಂ-ಮೌಲ್ಯಮಾಪನ: ನಿಮ್ಮ ಗುರಿಗಳು ಮತ್ತು ಮೌಲ್ಯಗಳೊಂದಿಗೆ ನಿಮ್ಮ ಜೀವನವನ್ನು ಹೊಂದಿಕೆಯಾಗುತ್ತದೆಯೇ ಎಂದು ನೋಡಲು ಆಗಾಗ  ನಿಮ್ಮನ್ನು ನೀವು ಮೌಲ್ಯಮಾಪನ ಮಾಡಿಕೊಳ್ಳಿ. ನಿಮ್ಮ ಆದ್ಯತೆಗಳು ಮತ್ತು ಚಟುವಟಿಕೆಗಳನ್ನು ಅಗತ್ಯವಿರುವಂತೆ ಅಳವಡಿಸಿಕೊಳ್ಳಿ

ನಿಯಮಿತವಾಗಿ ರೀಚಾರ್ಜ್ ಮಾಡಿ: ವಿಶ್ರಾಂತಿ ಪಡೆಯಿರಿ ಮತ್ತು ವಿಶ್ರಾಂತಿಗಾಗಿ ಸಮಯವನ್ನು ಮಾಡಿಕೊಳ್ಳಿ. ಪುಸ್ತಕವನ್ನು ಓದುವುದು, ವಾಕಿಂಗ್ ಹೋಗುವುದು ಅಥವಾ ಪ್ರೀತಿಪಾತ್ರರ ಜೊತೆ ಒಳ್ಳೆಯ ಸಮಯವನ್ನು ಕಳೆಯುವುದು, ನಿಮ್ಮ ವಯಸ್ಸನ್ನು ಇನ್ನೂ ಕಡಿಮೆಯಾಗಿಸುತ್ತದೆ. ಮಾನಸಿಕವಾಗಿ ಯುವಕರನ್ನಾಗಿಸುತ್ತದೆ.

ಸಮಯ ನಿರ್ವಹಣೆಯನ್ನು ಅಭ್ಯಾಸ ಮಾಡಿ: ನಿಜವಾಗಿಯೂ ಮುಖ್ಯವಾದ ಕಾರ್ಯಗಳಿಗೆ ಸಮಯವನ್ನು ವ್ಯಯಿಸುವುದು ಕಲಿಯಿರಿ. ಫೋನ್‌ನಲ್ಲಿ ಕಳೆಯುವ ಸಮಯವನ್ನು ಸಂಭಂದಗಳ ಮೇಲೆ ಹಾಕಿ. ಯಾವುದಕ್ಕೆ ಎಷ್ಟು ಸಮಯ ನೀಡಬೇಕು ಎಂಬುದನ್ನು ನಿರ್ದಿಷ್ಟವಾಗಿ ಅರಿತಿರಿ.

ಸಕಾರಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳಿ: ನಿಮ್ಮನ್ನ ಪ್ರೀತಿಸುವ, ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುವ, ನಿಮ್ಮ ಗೆಲುವಿನಲ್ಲಿ ಖುಷಿ ಪಡುವ ಸ್ನೇಹಿತರ ಜೊತೆ ನಿಮ್ಮ ಸಂಭಂದವನ್ನು ಸದಾ ಕಾಪಾಡಿಕೊಳ್ಳಿ. ನಕಾರಾತ್ಮಕತೆಯನ್ನು ಹರಡುವ ಜನರಿಂದ ಆದಷ್ಟು ದೂರವಿರಿ. ಅವರನ್ನು ನಿಮ್ಮ ಜೀವನದಿಂದ ಆದಷ್ಟು ದೂರವೇ ಇರುವಂತೆ ನೋಡಿಕೊಳ್ಳಿ.

ಸಮತೋಲಿತ ಜೀವನಶೈಲಿಯು ಕೇವಲ ಪರಿಕಲ್ಪನೆಯಲ್ಲ; ಇದು ಸಮಯದೊಂದಿಗೆ ವಿಕಸನಗೊಳ್ಳುವ ವ್ಯಕ್ತಿತ್ವದ ರೀತಿಯಾಗಿದೆ. ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ, ಭಾವನಾತ್ಮಕ ಸಮತೋಲನ ಮತ್ತು ಔದ್ಯೋಗಿಕ-ಜೀವನದ ಸಮತೋಲನಕ್ಕೆ ಆದ್ಯತೆ ನೀಡುವ ಮೂಲಕ, ನೀವು ಸಂತೋಷ ಮತ್ತು ತೃಪ್ತಿಯಿಂದ ತುಂಬಿದ ಜೀವನಕ್ಕೆ ದಾರಿ ಮಾಡಿಕೊಡಬಹುದು. ಸಮತೋಲಿತ ಜೀವನವು ಪರಿಪೂರ್ಣವಾಗಿ ಬದುಕುವುದರ ಬಗ್ಗೆ ಅಲ್ಲ. ಚೆನ್ನಾಗಿ ಬದುಕುವುದರ ಬಗ್ಗೆ. ನಿಮ್ಮ ಮೌಲ್ಯಗಳು ಮತ್ತು ಗುರಿಗಳ ಜೊತೆ ಜೀವನವನ್ನು ನಡೆಸಲು ನಿರಂತರವಾದ ಪ್ರಯತ್ನಗಳನ್ನು ಮಾಡುವುದನ್ನು ಸದಾ ಮುಂದುವರಿಸಿ. ಬದಲಾವಣೆಗಳನ್ನು ಜಾಸ್ತಿ ಯೋಚಿಸದೇ ಒಪ್ಪಿಕೊಳ್ಳಿ. ನಮ್ಮ ಓಟದಲ್ಲಿ, ಇದನ್ನೆಲ್ಲ ಪಾಲಿಸುವುದು ಒಂದು ದೊಡ್ಡ ಯುದ್ಧದಂತೆ ಅನಿಸಬಹುದು. ಆದಾಗ್ಯೂ, ಇದು ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ. ಈ ರೀತಿಯ ಜೀವನವು ನಮ್ಮ ವೃತ್ತಿಜೀವನದಿಂದ ನಮ್ಮ ವೈಯಕ್ತಿಕ ಸಂಬಂಧಗಳವರೆಗೆ ಎಲ್ಲಾ ವಿಭಾಗಗಳಲ್ಲಿಯೂ ಅಭಿವೃದ್ಧಿ ಹೊಂದಲು ನಮಗೆ ಅನುವು ಮಾಡಿಕೊಡುತ್ತದೆ 

ಸಮತೋಲನ ಎನ್ನುವುದು ಒಂದು ನಿರಂತರವಾದ ಪ್ರಕ್ರಿಯೆ ಎಂದು ನೆನಪಿಡಿ. ಹಾಗಾಗಿ ನಿಮ್ಮ ಜೀವನದಲ್ಲಿ ಎಷ್ಟು ಗಟ್ಟಿಯಾಗಿ ಕೆಲವೊಂದು ಅಭ್ಯಾಸಗಳನ್ನು ಬೇರೂರಿಸಿಕೊಳ್ಳುತ್ತೀರೋ ಅಷ್ಟೇ ಗಟ್ಟಿಯಾಗಿ ನಿಮ್ಮ ಜೀವನದಲ್ಲಿ ನೀವು ನೆಲೆಯೂರುತ್ತೀರಿ. ಖುಷಿಯಿಂದ ಬದುಕುವುದನ್ನು ಕಲಿಯುತ್ತೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ

 

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Chaitra Rajeev