ಒಂದು ಬೀಕರ ಸದ್ದಿನೊಂದಿಗೆ ಸ್ಫೋಟಗೊಂಡು ಸೃಷ್ಟಿ ಯಾದ ವಿಶ್ವವು ಮೌನವಾಗಿ ವಿಸ್ತಾರ ಗೊಳ್ಳುತ್ತಲೆe ಇದೆ ಹಾಗೆ ಸಮಯವೂ ನಿರಂತರವಾಗಿ ಸದ್ದಿಲ್ಲದೆ ಹೆಜ್ಜೆ ಇಡುತ್ತಿದೆ . ಸುತ್ತಲೂ ಕಣ್ಣು ಹಾಯಿಸಿದರೆ ಮಾನವನ ಹೊರತುಪಡಿಸಿ ಕ್ರಿಮಿ ಕೀಟಗಳಿಂದ ಹಿಡಿದು ಹುಲಿ ಸಿಂಹ ,ಆನೆ ನರಿ ನಾಯಿ , ಬೆಕ್ಕು ಹಸು ಹೀಗೆ ಹತ್ತು ಹಲವು ಜೀವರಾಶಿಗಳು ಎಲ್ಲವೂ ಸ್ವಂಚಂದ ಬದುಕು ಸಾಗಿಸುತ್ತವೆ. ಅವುಗಳಿಗೂ ಬಂದುಬಳಗವಿದೆ, ಪ್ರೀತಿಯ ಹಂಬಲವಿದೆ,ಅಲ್ಲಿಯೂ ಕನಸುಗಳು ಬಯಕೆಗಳಿರಬಹುದೋ ಏನೋ.. ಇಲ್ಲವಾದರೂ ಹೊಟ್ಟೆಗೂ ದೇಹಕ್ಕೂ ಹಸಿವು ಬಯಾರಿಕೆಯಿದೆ. ಬಂಧುಗಳ ಜೊತೆಗೆ ಒಡನಾಟವಿದೆ. ಆದರೆ ಮುಖ್ಯವಾಗಿ ಅಲ್ಲೊಂದು ಪ್ರಶಾಂತವಾದ ಮೌನವಿದೆ ,ಶಾಂತಿ ನೆಮ್ಮದಿಯಿದೆ.
ಅಷ್ಟೇ ಏಕೆ ಭೂಮಿ ತಾಯಿಯ ಗರ್ಭದೊಳಗೂ ನೋವಿದೆ ಒತ್ತಡವಿದೆ .ಬೆಂಕಿಯ ಉರಿಯಿದೆ ಅಲ್ಲೂ ಮಮತೆಯ ತಾಳ್ಮೆಯ ಮೌನವಿದೆ, ಪ್ರಕೃತಿಮಾತೆಯ ಒಡಲ ಕಡಲ ಮಡಿಲಲ್ಲಿಯೂ ಅಪಾರ ಜೀವ ಸಂಕುಲವಿದೆ , ದೊಡ್ಡವರು ಸಣ್ಣವರ ಮದ್ಯೆ ಸಾವು ಬದುಕಿನ ನಿರಂತರ ಹೊರಟವಿದೆ, ಪ್ರಕೃತಿಯ ಸಮತೋಲನ ಕಾಪಾಡುವ ವಾಸ್ತವತೆಯ ಸ್ಪಷ್ಟ ಕಲ್ಪನೆಯಿದೆ. ಸಾಗರ ಅಲೆಗಳ ನರ್ತನ ದ ಮದ್ಯೆಯೂ ಒಂದು ಮನೋಹರ ಮೌನವಿದೆ.
ಸರತಿಯ ಸಾಲಿನಲ್ಲಿ ಆಹಾರ ಹುಡುಕುವ ಇರುವೆಗಳ ಮೆರವಣಿಗೆಯಲ್ಲೂ ಮೌನದ ಜೈಕಾರವಿದೆ. ಧಾರಾಕಾರವಾಗಿ ಸುರಿಯುವ ಮಳೆಯಲ್ಲೂ, ದುಮ್ಮಿಕ್ಕುವ ಜಲಪಾತದ ಅಬ್ಬರದಲ್ಲಿಯೂ ಇಳೆಯ ರಾಗದಂತೆ ಮೋಹಕ ಇಂಪಿದೆ. ಕಡಲ ಅರಸಿ ಹೊರಟು ಸಾವಿರಾರು ಮೈಲಿ ಸಾಗುವ ನದಿಗಳ ಪ್ರಯಾಣದ ಪ್ರಯಾಸದಲ್ಲೂ ದೃಡವಾದ ಮೌನವಿದೆ. ಕಾಡು ಮೃಗಗಳ ಬೇಟೆಯ ಸೆಣಸಾಟದಲ್ಲಿಯೂ ಗಂಭೀರ ಮೌನವಿದೆ. ತರತರಹದಿ ಗೂಡ ಹೆಣೆದು ಸಂಸಾರ ಸಾಗಿಸುವ ಹಕ್ಕಿಗಳ ಸಂಕುಲದ ನಡುವೆ ಬುದ್ದಿವಂತಿಕೆಯ ಸಹಜ ಮೌನವಿದೆ.
ದಿಗಂತದಾಚೆಗೂ ಬಣ್ಣದ ಚಿತ್ತಾರದ ಮದ್ಯೆ ಹಕ್ಕಿಗಳ ಹಾರಟದೆಡೆಯಲ್ಲಿ ಸೂರ್ಯ ಕಿರಣಗಳು ಸೀಳಿ ಕೊಂಡು ಬರಲು ತಂಪಾದ ಮೌನವಿದೆ. ಹೂವಿನಿಂದ ಹೂವಿಗೆ ಹಾರಿ ಮಧುವ ಬೇಟೆಯ ದುಂಬಿಗಳ ಚಿಟ್ಟೆಗಳ ಪೈಪೋಟಿಯಲ್ಲಿಯೂ ಸಿಹಿಯಾದ ಮೌನವಿದೆ. ಮುಂಜಾನೆಯ ಮಂಜಿನ ಹನಿಗಳು ಎಲೆಗಳ ಮೇಲೆ ತೊಟ್ಟಿಕ್ಕುತ್ತಾ ಹಿಮದ ಮುತ್ತು ಪೋಣಿಸುವಲ್ಲಿ ಸುಂದರ ಮೌನವಿದೆ. ಆಕಾಶದೆತ್ತರ ಮೈ ಚಾಚಿ ನಿಂತು ಒಬ್ಬರಿಂದೊಬ್ಬರು ಎತ್ತರ ಬೆಳೆಯುವ ಮರಗಳ ಸಾಧನೆಯಲ್ಲಿ ಸೊಗಸಾದ ಮೌನವಿದೆ.. ಸೃಷ್ಟಿಯ ಸೊಬಗಿದೆ.
ಆಕಾಶ ದಿಂದ ದೂರ ಹೋದರೂ ಕ್ಷೀರ ಪಥದಲ್ಲಿ ಸಾಗುವ ಸೂರ್ಯ ಚಂದ್ರ ಗ್ರಹಗಳ ನಡುವೆ, ಕತ್ತಲೆಯಲ್ಲಿ ಮಿನುಗುವ ನಕ್ಷತ್ರಗಳ ಸಂಚಾರದ ಗಡಿಬಿಡಿಯಲ್ಲಿಯೂ ಒಂದು ಶಿಸ್ತಿನ ಮೌನವಿದೆ. ಇಡೀ ಲೋಕವೇ ಮೌನವಾಗಿದೆ...ಲೋಕದ ನಿಯಮವೇ ಭಯಪಡಿಸದಂತೆ ಮನಸಿಗೆ ನೆಮ್ಮದಿ ತರುವಂತಿದೆ. ಮೌನದ ಮಾತೇ ಸುಂದರವಲ್ಲವೇ... ಅಷ್ಟೇ ಏಕೆ ಸಕಲ ಚರಾಚರ ವಸ್ತುಗಳ ನಿರ್ಮಿಸಿ ಏನೂ ಅರಿಯದಂತೆ ಎಲ್ಲೋ ಲೋಕದಲ್ಲಿ ದ್ಯಾನ ಮಗ್ನನಾಗಿ ಕುಳಿತಿರುವ ಆ ದೇವಾದಿ ದೇವನೇ ಮೌನವಾಗಿ ಕುಳಿತಿರುವನೇನೋ....
ಆದರೆ... ಯಾಕೆ ಹೀಗೆ...ಬರಿಯ ಮನುಕುಲದ ಜನ ಜಾತ್ರೆಯಲ್ಲಿ ಕೇಳಲಾರದ ಆರ್ಭಟ. ಮನದೊಳಗೆಯಷ್ಟೇ ಅಲ್ಲ ಹೊರಗಡೆ ಯೂ ಎಲ್ಲೆಡೆ ಸದ್ದುಗದ್ದಲ.... ತುಂಬಾ ವಿವೇಕವಿರುವ ಮನುಷ್ಯನಿಗೆ ಮಾತ್ರವೇ ಕಷ್ಟ ನಷ್ಟಗಳು..?! ವಾಸ್ತವದ ಅರಿವೇ ಇಲ್ಲವೇ. ಎಲ್ಲಾ ಸೃಷ್ಟಿಯಂತೆ ನಾವೂ ಕೂಡ ಸಾಮಾನ್ಯರು. ಏನೋ ಕಡಿದು ಗುಡ್ಡ ಹಾಕಲು ನಮಗ್ಯಾರೂ ಅದೇಶಿಸಿಲ್ಲ. ನಮ್ಮದೇ ಸ್ವಾರ್ಥಕ್ಕೆ ನಾವು ಬಲಿಯಾಗಿರೋದು. ಇಂದು ನಾಳೆ ದೇಹ ಬಿಟ್ಟು ಹೋಗುವಾಗ ಈ ವ್ಯಾಮೋಹ , ದುರಾಸೆ, ಹಠ ,ಸ್ವಾರ್ಥ , ಜೀವನ ಜಂಜಾಟ ಅರ್ಥ ಕಳೆದುಕೊಳ್ಳಲಾರದೆ.. ?!ಇದ್ದುದರಲ್ಲಿ ತೃಪ್ತಿ ಪಡಲಾರದೆ ಸದಾ ನಿನ್ನೆ ನಾಳೆಗಳ ಚಿಂತೆ ಯಲ್ಲಿ ಈ ಕ್ಷಣವ ಕಳೆದು ಮನದೊಳಗೆ ಕರ್ಕಶ ನಾದಸ್ವರ ಕೇಳಿ ನೆಮ್ಮದಿಯಿಲ್ಲದೆ ಬದುಕ ಸಾಗಿಸೋದು... ಒಂದೇ ಒಂದು ಬಾರಿ ಜ್ಞಾನದಿಂದ ಯೋಚಿಸಿ ಬಂದುದೆಲ್ಲವ ಸ್ವೀಕರಿಸಿ ನಗು ನಗುತಾ ಬಾಳಿದರೆ ನೆಮ್ಮದಿಯ ಮೌನ ಅಲ್ಲೂ ಇರಬಹುದಲ್ಲವೇ...
0 Followers
0 Following