"ಚಂದ್ರವ್ವ ಓ ಚಂದ್ರವ್ವ ಕೇಳಿದಿರಾ ನಿಮ್ಮ ನಾಗಮ್ಮ ಹೋಗಿಬಿಟ್ಟಳಂತೆ !! " ಎಂದು ಕಮಲಮ್ಮ ಬಂದು ಹೇಳಿದಾಗ 70 ರ ದಶಕದ ಚಂದ್ರವ್ವನಿಗೆ ಸರಿಯಾಗಿ ಕೇಳಲೂ ಇಲ್ಲ, ಅರ್ಥವಂತೂ ಆಗಲೇ ಇಲ್ಲ. "ಅದೇನ ಭಾಗು, ಸರಿಯಾಗಿ ಹೇಳೆ" ಎಂದು ತನ್ನ ಸೊಸೆಯನ್ನು ಮತ್ತೆ ಕೇಳಿದರು. ಈ ವಯಸ್ಸಿನಲ್ಲಿ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಹೇಳಿದ್ದು ಮೆದುಳಿಗೆ ತಲುಪಿ ಅರ್ಥ ಹೊಳೆಯುವುದೂ ಇವರಿಗೆ ಯಥಾ ಸಾವಧಾನ ಎಂದು ತಿಳಿದಿದ್ದ ಭಾಗ್ಯಲಕ್ಷ್ಮಿ " ಸರಿಯಾಗಿ ಕೇಳಿಸಿಕೊಳ್ಳಿ ನಿಮ್ಮ ಸ್ನೇಹಿತೆ ನಾಗಮ್ಮ ಇರಲಿಲ್ಲವೇ? ಅದೇ ನಿಮ್ಮ ಹಳೇ ಪರಿಚಯ ಹುಣಸೂರಿನ ವರು..." " ಅವರೇ.. ಹೋಗಿ ಬಿಟ್ರಂತೆ. ಅವರ ಮಗ ಕರೆ ಮಾಡಿದ್ದರು" ಎಲ್ಲವನ್ನು ಬಿಡಿಸಿ ಬಿಡಿಸಿ ಹೇಳಿದರು. ಆ ಮಾತು ಕಿವಿಗೆ ಮುಟ್ಟಿದ್ದು ಮೆದುಳಿಗೂ ನಿಧಾನವಾದರೂ ಮುಟ್ಟಿತು. ಆದರೆ ಮನಸ್ಸು ಅದನ್ನು ಒಪ್ಪಲೇ ಇಲ್ಲ.
ನಾಗು ನಾಗಮ್ಮ ಎಂದರೆ ಮೊದಲು ಮನಸ್ಸಿನ ಪರದೆಯ ಮೇಲೆ ಬರುತ್ತಿದ್ದುದು ಚಿಕ್ಕ ಲಂಗ ತೊಟ್ಟು ತನ್ನ ಜೊತೆ ಕುಂಟಬಿಲ್ಲೆ ಆಟದಲ್ಲಿ ಜಗಳ ಕಾದು ಕಣ್ಣು ಮೂಗು ಒರೆಸುತ್ತಿದ್ದ ಮುಖ. ಅಬ್ಬ!! ನಾವಿಬ್ಬರೂ ಇಷ್ಟು ಒಟ್ಟಿಗೆ ಇದ್ದರೂ, ಇನ್ನೊಬ್ಬರು ಗೆದ್ದರೆ ಸಹಿಸುತ್ತಿರಲಿಲ್ಲ. ಎಲ್ಲದರಲ್ಲೂ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳು. ನೋಡಿದಿಯಾ ಜೀವನದಲ್ಲಿ ನನ್ನನ್ನು ಸೋಲಿಸಿ ತಾನು ಗೆದ್ದು ಮುಂದೆ ನಡೆದಳು. ಮಹಾಗರ್ವಿ ಎಂದು ದುಃಖದಲ್ಲೂ ಬೈದುಕೊಂಡರು. ಮತ್ತೆ ಭಾಗೂ ಏನು ಹೇಳಿದಳು? ಈ ನಾಗು ಗೆದ್ದಿದ್ದಾದರೂ ಯಾವುದರಲ್ಲಿ? ಎಂದು ಯೋಚನೆ ಬಂತು. ಯಾವುದೂ ಸರಿಯಾಗಿ ಬಿಡಿಸಲಾಗದೆ ಗೊಜಲಾಯಿತು. ಭಾಗೂ... ಎಂದು ಕರೆದವರು ಬೇಡ ಬಂದರೆ ಗೊಣಗುತ್ತಾಳೆ. ನಾಗುವಿನ ನೆನಪಿನ ಸಿಹಿ ಕವಳ ಸಿಕ್ಕಿದೆ ಸಾಕು ಮೆಲ್ಲಲು ಆಮೇಲೆ ಕೇಳಿದರಾಯ್ತು ಎಂದುಕೊಂಡರು.
ನಾಗು ತಂದೆ ಅದೇನೋ ಕೆಲಸಕ್ಕೆ ಅನಿಸುತ್ತದೆ ಬೇರೆ ಊರಿಗೆ ಹೊರಟುಹೋದರು. ಯಾವಾಗ ಪ್ರೈಮರಿಯಲ್ಲಿ ಅಲ್ಲ ಲೋವರ್ ಸೆಕೆಂಡರಿ ಇರಬೇಕು. ಅಯ್ಯೋ ಅಷ್ಟು ತನಕ ನಾನೆಲ್ಲಿ ಓದಿದೆ?!! ಮತ್ತೆ ಯಾವಾಗ? ಅಯ್ಯೋ ಹಾಳು ಮರೆವು, ಯಾವಾಗ್ ಆದರೇನು ಮತ್ತೆ ಸಿಕ್ಕಿದ್ದು...ನನ್ನ ಮದುವೆ ಗೊತ್ತಾದ ಸಮಯದಲ್ಲಿ. ನಾನು ಇವರನ್ನು ನೋಡಿ ಒಪ್ಪಿ, ಅಲ್ಲಲ್ಲ ಅವರು ನನ್ನನ್ನು ನೋಡಿ ಒಪ್ಪಿ ಮದುವೆ ಗೊತ್ತಾದಾಗ ಎಲ್ಲರಿಗೂ ಕರೆ ಕಳಿಸಿದ್ದರು. ಮದುವೆಗೆಂದು ಬಂದವಳು "ನನ್ನನ್ನೂ ಒಬ್ಬರು ನೋಡಿ ಹೋಗಿದ್ದಾರೆ . ಇನ್ನೇನು ಒಪ್ಪಿಗೆ ಹೇಳಿಕಳಿಸುತ್ತಾರೆ . ಅಷ್ಟರಲ್ಲಿ ನನಗೇ ಮೊದಲು ಮದುವೆ ಎಂದು ಜಂಬ ಪಡಬೇಡ " ಎಂದು ಜಗಳ ತೆಗೆದಿದ್ದಳು. ಅಬ್ಬ ನಾನೇನು ಕೇಳಿದೆನಾ " ನನ್ನ ಮದುವೆ ಮೊದಲು ನೋಡು!! ನಿನ್ನ ಮದುವೆ ಯಾವಾಗ ಅಂತ ??!! " ಆದರೂ ಇಬ್ಬರಿಗೂ ಒಬ್ಬರನ್ನೊಬ್ಬರು ನೋಡಿ ಹೇಳಲಾಗದ ವಿವರಿಸಲಾಗದ ಆನಂದ ಎದೆ ತುಂಬಿ ಬಂದಿತ್ತು. ಮದುವೆ ಮನೆ ಎಂಬುದನ್ನು ಮರೆತು ಕೈ ಕೈ ಹಿಡಿದು ಓಡಿದೆವು. ಆಗ ಅಮ್ಮ ಅಲ್ಲಲ್ಲ ದೊಡ್ಡಮ್ಮ ಅಲ್ವೇ ಬೈದು ಕೊಠಡಿಗೆ ಕಳಿಸಿದ್ದು!!. ಭಾಗೂ ಏನು ಹೇಳಿದಳು??!! ನಾಗು ಹೋಗಿಬಿಟ್ಟಳೇ... ನನ್ನ ನಾಗು.... ಇಲ್ಲ!! ನಾನು ಅವಳನ್ನು ನೋಡಲು ಮಾತನಾಡಲು ಆಗಲ್ಲ!!! ಅಯ್ಯೋ ಎಂದು ಮನತುಂಬಿ ಜೋರಾಗಿ ಅತ್ತುಬಿಟ್ಟರು. ಸರಿ ಅವಳನ್ನು ನೋಡಿ ಮಾತಾಡಿ ಎಷ್ಟು ವರ್ಷಗಳಾದವು?? ಈಗ ಮಾತನಾಡಲು ಆಗಲ್ಲ ಅಂತ ಅಳುತ್ತಿದ್ದೇನೆ, ನನ್ನ ಬುದ್ಧಿಗಿಷ್ಟು!! ಎಂದು ಹಳಿದುಕೊಂಡರು. ಆದರೆ ಅವಳು ಇದ್ದಾಳೆ, ಈ ಭೂಮಿಯ ಮೇಲೆ ಇದ್ದಾಳೆ, ಇದೇ ಊರಿನಲ್ಲಿ ಇದ್ದಾಳೆ ಎನ್ನುವ ಸಮಾಧಾನವಾದರೂ ಇತ್ತಲ್ವಾ !! ಅನಿಸಿತು.
ನನ್ನದು ಅವಳದು ಎಷ್ಟು ವರ್ಷಗಳ ಒಡನಾಟ?? 40...50.. ಮಧ್ಯೆ ಭೇಟಿಯಾಗದ ಸಮಯವನ್ನು ಸೇರಿಸಿದರೆ ಇನ್ನೂ ಜಾಸ್ತಿ!! ಅಬ್ಬಾ ಒಬ್ಬ ಮನುಷ್ಯ ಇನ್ನೊಬ್ಬರನ್ನು ಇಷ್ಟು ವರುಷ ಒಡನಾಡಿ ಯಾಗಿರಲು ಅವರನ್ನು ತಿಳಿದಿರಲು ಸಾದ್ಯವೆ??!! ಆಯ್ತಲ್ಲ ಎಲ್ಲಾ ಮುಗಿಯಿತು ಇನ್ನೆಲ್ಲಿ ಒಡನಾಟ ಇನ್ನೆಲ್ಲಿ ಮಾತುಕತೆ.
ಕೊನೆಯದಾಗಿ ನಾನು ಯಾವಾಗ ಅವಳ ಜೊತೆ ಮಾತನಾಡಿದ್ದು... 4 ವರ್ಷದ ಹಿಂದೆ ಊರಿನ ಜಾತ್ರೆಯಲ್ಲಿ ಅಥವಾ ಇವರು ಹೋದಾಗ ನೋಡಲು ಬಂದ್ದಳಲ್ಲಾ ಆಗ...? ಅಯ್ಯೋ ಯಾವುದು ಮೊದಲು ಯಾವುದು ಆಮೇಲೆ ಒಂದೂ ತಿಳಿಯುತ್ತಿಲ್ಲವಲ್ಲ!!! ಎಂದು ಕೊರಗಿ ನಿದ್ದೆಗೆ ಜಾರುತ್ತಾರೆ.
ಮತ್ತೆ ಭಾಗೂ ಬಂದು ಸ್ವಲ್ಪ ಅನ್ನ ತಿನ್ನಿಸಿ ನೀರು ಕುಡಿಸುತ್ತಾಳೆ. " ಭಾಗೂ... ನಾನು ನಾಗೂ ನೋಡಲು ಹೋಗ್ಲಾ???" ಎಂದು ಮಕ್ಕಳಂತೆ ಕೇಳುತ್ತಾರೆ. "ಅಯ್ಯೋ ನೀವು ಅಲ್ಲಿಯವರೆಗೆ ಹೋಗುವುದಾದರೂ ಹೇಗೆ? ನಿಮಗೆ ಏಳಲೇ ಆಗುತ್ತಿಲ್ಲವಲ್ಲ"?? ಎಂದರೆ " ನಿನಗೇನು ಗೊತ್ತು ನಾಗೂನ ನೋಡಬೇಕೆಂದರೆ ನನಗೆ ನೂರ್ ಆನೆ ಬಲ ಬರುತ್ತೆ ಗೊತ್ತಾ!!" ಎಂದು ನಗುತ್ತಾರೆ. ಭಾಗೂ ಸಹ ಅವಳ ನಗುವನ್ನು ಅದರೊಂದಿಗೆ ಸೇರಿಸುತ್ತಾಳೆ.
ಅವಳು ಅತ್ತ ಹೋದರೆ ಇತ್ತ ಇವರ ಮನಸ್ಸು ದೇಹವನ್ನು ಮಂಚದ ಮೇಲೆಯೇ ಬಿಟ್ಟು ಹಿಂದಕ್ಕೆ ಹೋಗುತ್ತದೆ. ಅಂದು ನಾಗು ಮದುವೆ. ನನ್ನ ಮದುವೆ ಆಗಿ ವರ್ಷಕ್ಕೇ ಬಂದಿತ್ತು. ಪಾಪ ಗಂಡುಗಳು ಅವಳನ್ನು ಕಪ್ಪು ಎಂದು ಒಪ್ಪುತ್ತಿರಲಿಲ್ಲ. ಬುದ್ಧಿ ಇಲ್ಲದವು, ಬಣ್ಣ ಕಟ್ಕೊಂಡು ಏನ್ ಮಾಡತ್ವೊ??!! ಕಪ್ಪಾದರೂ ಎಷ್ಟು ಲಕ್ಷಣವಾಗಿದ್ದಾಳೆ ನನ್ನ ನಾಗು. ಇದ್ದಾಳೆ!!?? ಇದ್ದಳು!! ಇಲ್ಲಿಲ್ಲ ಅವಳನ್ನು ಹಾಗೆನಲ್ಲು ನನಗೆ ಆಗಲ್ಲ!!. ಅಯ್ಯೋ ನೋಡಬೇಕಲ್ಲ ನಾನು ಅವಳನ್ನು. ಮತ್ತೆ ನಿದ್ದೆಯ ಮಂಪರು. ಕನಸಿನಲ್ಲಿ ನಾಗುವಿನ ಮಗ ಹುಟ್ಟಿದ್ದು , ಅವಳು ನನಗೆ ತೋರಿಸಲು ಬಂದದ್ದು ." ನಾನೂ ವೈದ್ಯರ ಬಳಿ ತೋರಿಸಿಕೊಂಡಿದ್ದೇನೆ!! ಇನ್ನೇನು ನನಗೂ ಮಕ್ಕಳಾಗತ್ತೆ " ಅಂದಿದ್ದೆಲ್ಲಾ ಕಾಣಿಸಿತು. ಮತ್ತೆ ಎಚ್ಚರವಾದಾಗ ನನ್ನ ಮಗಳು ನಂತರ ಮಗ ಹುಟ್ಟಿದಾಗ ನಾವೆಲ್ಲಾ ಸೇರಿ ನಾಗುವಿನ ಮನೆಗೆ ಹೋಗಿದ್ದೆವು ಎಷ್ಟು ಸಂತೋಷದಲ್ಲಿದ್ದೆವು ಎಂದುಕೊಂಡರು. ಆಮೇಲೆ ಎಂಥದೋ ರೋಗಗಳು ಊರಿನವರಿಗೆಲ್ಲ ಬಂದದ್ದು ನಮ್ಮ ಮನೆ ಬಾಗಿಲನ್ನು ತಟ್ಟಿತ್ತು. ನಾವಿಬ್ಬರೂ ಒಬ್ಬರಿಗೊಬ್ಬರು ಆಧಾರವಾಗಿ ಆಸರೆಯಾಗಿ ನಿಂತು ಎಲ್ಲಾ ಕಷ್ಟಗಳನ್ನು ಎದುರಿಸಿದೆವು... ಎಷ್ಟು ಸಾವು-ನೋವುಗಳನ್ನು ಕಂಡಿಲ್ಲ. ನಮ್ಮ ಸ್ನೇಹ ಇದರಿಂದ ಮತ್ತಷ್ಟು ಮಗದಷ್ಟು ಗಟ್ಟಿಯಾಯಿತು. ಆದರೆ ಈಗ ನೀನು ಇಲ್ಲ ಅಂತ ಹೇಗೆ ನಂಬಲಿ??!! ನನ್ನ ಸ್ನೇಹಿತೆ, ಪ್ರತಿಸ್ಪರ್ಧಿ ಆಧಾರಸ್ತಂಭ ನೀನು ಹೊರಟಿರುವಾಗ ನಾನು ನಿನ್ನನ್ನು ನೋಡದೆ ಕಳಿಸುವುದೆ? ಈ ಯೋಚನೆ ಬಂದದ್ದೇ, ಹಲವಾರು ತಿಂಗಳಿನಿಂದ ಏಳಲೇ ಶಕ್ತಿಯಿಲ್ಲದೆ ಮಲಗಿದ್ದಲ್ಲೇ ಮಲಗಿದ್ದ ಚಂದ್ರಮ್ಮ ಮೈಯಲ್ಲಿ ಸ್ನೇಹದಿಂದ ಬಲ ತುಂಬಿ ಬಂದಂತೆ ಆಗಿ ಆ ಶಕ್ತಿಯಿಂದಲೇ ಎದ್ದು ಕುಳಿತರು. ಅವರನ್ನು ನೋಡಿ ಹೋಗಲು ಕೊಠಡಿಗೆ ಬಂದ ಮಗ-ಸೊಸೆ ಅದನ್ನು ನೋಡಿ ದಂಗಾಗಿ ನಿಂತರು!!
0 Followers
0 Following