ಅದು ೨೦೧೯ದಶಂಬರ ೨೯. ನಾನು ಅಮೇರಿಕದಿಂದ ಬಂದಿದ್ದ ಮಗಳು ಅಳಿಯ ಮೊಮ್ಮಗಳೊಂದಿಗೆ ನೆಂಟರ ಮನೆಗೆ ಸುತ್ತುತ್ತಿದ್ದೆ. ಅವರು ಇರುವ ಕೆಲವೇ ರಜಾ ದಿನಗಳಲ್ಲಿ ಸಂಬಂಧಿಕರ ಸ್ನೇಹಿತರ ಮನೆಗೆ ಭೇಟಿಕೊಡಲು ನಿರ್ಧರಿಸಿದ್ದರು.
ಹಾಗೆಯೇ ಮಂಗಳೂರಿನಲ್ಲಿದ್ದ ತಮ್ಮನ ಮಗಳ ಮನೆಗೆ ೨೯ರ ರಾತ್ರಿ ಹೋಗಿದ್ದೆವು. ನನ್ನ ಮೊಮ್ಮಗಳೂ ತಮ್ಮನ ಇಬ್ಬರು ಮೊಮ್ಮಕ್ಕಳೂ ಆಡಿದ್ದೇ ಆಡಿದ್ದು. ಎಲ್ಲಾ ಎರಡೂವರೆ,ಮೂರೂವರೆ ಮತ್ತು ಐದೂವರೆ ವರ್ಷದ ಮಕ್ಕಳು.
ತಮ್ಮನ ಮಗಳಿಗೆ ಇಪ್ಪತ್ಮೂರು ವರ್ಷಕ್ಕೆ ಮದುವೆಯಾಗಿತ್ತು. ಆಗ ಅವಳು ಪಿ ಎಚ್ ಡಿ. ಸುರು ಮಾಡಿದ್ದಳು.ಆತನೂ ಇಂಜಿನಿಯರ್ ಆಗಿ ಉತ್ತಮ ಕೆಲಸದಲ್ಲಿದ್ದ.
ಮದುವೆಯಾದ ನಂತರ ಹತ್ತು ವರ್ಷದಲ್ಲಿ ಅವನ ಜೀವನದಲ್ಲಿ ಆದ ಅಭಿವೃದ್ಧಿ ಅಸೂಯೆ ಹುಟ್ಟುವಂತದ್ದು. ದೊಡ್ಡ ಮನೆ ಮಾಡಿದ.ಮನೆ ಪಕ್ಕದಲ್ಲಿ ಇನ್ನೊಂದು ಸೈಟ್ ತೆಗೆದುಕೊಂಡ. ತರಕಾರಿ ಹೂವು ಹಣ್ಣು ಬೆಳೆಯಲು ಅನುಕೂಲವಾಯಿತು.ತನ್ನ ಮನೆಯ ನೆರೆಹೊರೆಯಲ್ಲೂ ಜನಾನುರಾಗಿಯಾಗಿದ್ದ.ಈ ನಡುವೆ ಸಣ್ಣ ಅಪಘಾತವಾಗಿ ಅವಳ ತೋಳಿಗೆ ಸ್ಟೀಲ್ ರಾಡ್ ಹಾಕಿದರು. ಅವಳಿಗೆ ಇಬ್ಬರು ಮಗಳಂದಿರೂ ಆದರು.ಎರಡೂ ಸಿಸೇರಿಯನ್.ಅಷ್ಪರಲ್ಲಿ ಅವಳ ಮಾವನಿಗೆ ಏಂಜಿಯೋಪ್ಲಾಸ್ಟಿ ಮಾಡಬೇಕಾಯಿತು.
ಮತ್ತೆ ಅವಳಿಗೆ ಗಾಲ್ ಬ್ಲಾಡರ್ ತೊಂದರೆ ಕೊಟ್ಟಿತು.
ಅದನ್ನು ತೆಗೆದುಹಾಕಲು ಆಪರೇಷನ್ ಮಾಡಲಾಯಿತು. ಇವೆಲ್ಲದರ ಜೊತೆಗೆ ಅವಳ ರಿಸರ್ಚ್ ನಡೆಯುತ್ತಿತ್ತು.ಆಮೇಲೆ ಅವಳಿಗೆ ಡಾಕ್ಟರೇಟ್ ಸಿಕ್ಕಿ ತಾತ್ಕಾಲಿಕವಾಗಿ ವಿಶ್ವ ವಿದ್ಯಾಲಯದಲ್ಲಿ ಕೆಲಸವೂ ಸಿಕ್ಕಿತು.ವಿವಾಹದ ಐದನೇ ವಾರ್ಷಿಕೋತ್ಸವ ವನ್ನು ಮನೆ ಮುಂದಿನ ಬಯಲಿನಲ್ಲಿ ಯಕ್ಷಗಾನ ಮಾಡಿಸಿ ಆಚರಿಸಿದ್ದರು. ಅವನೂ ವೇಷ ಹಾಕುತ್ತಿದ್ದ. ವಿವಾಹದ ಹತ್ತನೇ ವಾರ್ಷಿಕೋತ್ಸವದ ತಯಾರಿ ನಡೆಸುತ್ತಿದ್ದ. ನಾವು ದಶಂಬರ ಮೂವತ್ತಕ್ಕೆ ವಾಪಾಸು ಬೆಂಗಳೂರಿಗೆ ಹೊರಟೆವು.ಹೊರಡುವಾಗ ಆತ ಮೇ ತಿಂಗಳಲ್ಲಿ ನಿಮ್ಮಲ್ಲಿ ಬರುತ್ತೇವೆ ಎಂದಿದ್ದ. ಮಗುವಿಗೆ ದಾರಿಯಲ್ಲಿ ತಿನ್ನಲು ಇಡ್ಲಿ, ಸಿಹಿತಿಂಡಿ ಎಲ್ಲಾ ಕೊಟ್ಟಿದ್ದರು.
ಮದುವೆಯಾಗಿ ಹತ್ತು ವರ್ಷವೂ ಆಗಿಲ್ಲ. ಅವನಿಗೆ ಮೂವತ್ತೈದು ವರ್ಷ. ಅರುವತ್ತು ವರ್ಷಗಳ ಸಾಧನೆ ಮಾಡಿದ್ದಾನೆ ಅಂತ ಎಲ್ಲರೂ ಹೇಳುತ್ತಿದ್ದರು. ಹೌದು ತಂದೆ ,ತಾಯಿ ಮಡದಿ ಮಕ್ಕಳು, ಕಾರುಗಳು , ಒಳ್ಳೆಯ ಕೆಲಸ , ದೊಡ್ಡ ಬಂಗಲೆ ಎಲ್ಲವೂ ಇತ್ತು.
ಆದರೆ ಸಮಯ ಒಂದೇ ತರ ಇರುವುದಿಲ್ಲ!
ಆ ದಿನ ಜನವರಿ ಮೂರು ೨೦೨೧. ನಾನು ಹಾಗೂ ನನ್ನ ಪತಿ ವಾಕಿಂಗ್ ಹೋಗುತ್ತಿದ್ದೆವು.ತಮ್ಮನ ಫೋನ್ ಬಂತು. "ಅಳಿಯ ಇನ್ನಿಲ್ಲ. ಅಪಘಾತದಲ್ಲಿ
ತೀರಿಕೊಂಡ" ಅಂತ. ನಂಬಲು ಸಾಧ್ಯವಿಲ್ಲ ಸುದ್ದಿ. ಕುಸಿದು ಹೋದೆ. ಅಷ್ಟು ಜೀವನೋತ್ಸಾಹ ಇದ್ದವನ ಜೀವನ ಹೀಗೆ ಕೊನೆಯಾದದ್ದು ನನಗೆ ಅರಗಿಸಿಕೊಳ್ಳಲಾಗಲಿಲ್ಲ. ರಾತ್ರಿಯೇ ಪ್ರಯಾಣಿಸಿ ಅವರ ಮನೆಗೆಹೋದೆವು. ಕೇವಲ ಮೂರು ದಿನದ ಹಿಂದೆ ಭೇಟಿಯಾಗಿದ್ದವ ಶವವಾಗಿ ಮಲಗಿದ್ದ.
ಯಾಕೆ ಹೀಗಾಯಿತು ನನ್ನದೇ ದೃಷ್ಟಿ ತಾಗಿತಾ ಅಂತಲು ಅನ್ನಿಸಿತು.ಸಂಕಟವಾಯಿತು. ನನಗೇ ಹೀಗಾದರೆ ಅವಳ ಅವಸ್ಥೆ.ಅವಳ ಮೇಲೆ ದೊಡ್ಡ ಜವಾಬ್ದಾರಿ. ಪುಟ್ಟ ಮಕ್ಕಳು, ಅತ್ತೆ ಮಾವ, ಅವನಿಲ್ಲದ ನೋವು.
ಮಕ್ಕಳ ಮುಖ ಅವಳಿಗೆ ಬದುಕಲು ಸ್ಪೂರ್ತಿ ಕೊಟ್ಟಿತ್ತು.ಬದುಕುವ ಛಲ ಮೂಡಿತು."ಅಪ್ಪ ಮೊಬೈಲ್ ಪರ್ಸ್ ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರು ಹೇಗೆ ವಿಡಿಯೋ ಕಾಲ್ ಮಾಡುವುದಪ್ಪಾ" ಅಂತ ಪುಟಾಣಿ ಮಗಳು ಕೇಳುವಾಗ ಕರುಳು ಕಿವಿಚಿದ ಅನುಭವ.ಕೋವಿಡ್ ಕಾರಣದಿಂದ ಮಕ್ಕಳಿಗೂ ಶಾಲೆಯಿಲ್ಲ.ಸಂಭಾಳಿಸುವುದು ಕಷ್ಟ. ಆದರೆ ಅವಳು ದಿಟ್ಟತನವ ತೋರಿಸಿದಳು. ಮಕ್ಕಳದ್ದೆ ಯೂ ಟ್ಯೂಬ್ ಚಾನೆಲ್ ಮಾಡಿ ಅವರ ಚಟುವಟಿಕೆಗಳು ,ಹಾಡುಗಳು ,ತಿಂಡಿಗಳನ್ನೆಲ್ಲಾ ಮಾಡಿ ಅಪ್ಲೋಡ್ ಮಾಡಿದಳು. ಮಕ್ಕಳೂ ಬುದ್ಧಿವಂತರೇ.
ಇಷ್ಟಕ್ಕೆ ಮುಗಿಯಲಿಲ್ಲ. ತನ್ನ ನೋವುಗಳನ್ನು ಪುಸ್ತಕ ರೂಪದಲ್ಲಿ ತರಲು ಬರೆಯುತ್ತಾ ಹೋದಳು. ಆತ ಮರಣ ಹೊಂದಿದ ದಿನವೇ ಅಂದರೆ ಜನವರಿ ಮೂರಕ್ಕೆ ಅವಳು ಬರೆದ ಪುಸ್ತಕ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ ಮಾಡಿದಳು.
ಜನವರಿ ಮೂರು ೨೦೨೧ ಆತ ಹೋಗಿ ಸರಿಯಾಗಿ ಒಂದು ವರ್ಷ. ಅವಳ ಪುಸ್ತಕ ಬಿಡುಗಡೆ ಆಯಿತು. ಅವಳ ಬಗ್ಗೆ ಮತ್ತು ಅವಳ ಪುಸ್ತಕದ ಬಗ್ಗೆ ಹೆಸರಾಂತ ಲೇಖಕರು ಬಹಳ ಒಳ್ಳೆಯ ವಿಮರ್ಶೆ ಮಾಡಿದರು.
ಅವಳು ಬರೆದ ಪುಸ್ತಕ" Blooming beyond pain " ಅಮೆಜಾನ್ ಸೇರಿತು.ಆ ಪುಸ್ತಕ ಅವಳಂತೆ ನೊಂದವರಿಗೆ ಸ್ಫೂರ್ತಿ ತರುವುದು ಖಂಡಿತ.
ಆತ ತೀರಿಕೊಂಡಾಗ ಇನ್ನು ನಮಗೆ ಜೀವನದಲ್ಲಿ ಖುಶಿಯೇ ಸಿಗಲಾರದು ಅಂದುಕೊಂಡಿದ್ದೆ. ಈಗಲೂ ಆ ಸಂದರ್ಭ ನೆನೆಸಿಕೊಂಡರೆ ನಾವು ಖುಶಿ ಪಡುವುದೂ ತಪ್ಪು ಅಂತ ಅನಿಸುತ್ತದೆ.ಅಷ್ಟು ಒಳ್ಳೆಯ ಹುಡುಗ ಆಗಿದ್ದ ಅವನು.
ಈ ಒಂದೂವರೆ ವರ್ಷದಲ್ಲಿ ಏನೇನೋ ಆಗಿದೆ. ಸಾವಿನ ನೋವು ದುಃಖ ಅನುಭವಿಸಲೂ ಪುರುಸೊತ್ತು ಇಲ್ಲದಂತಾಗಿದೆ ಕೆಲವರಿಗೆ.
ಯಾರಿಗೆ ಯಾವಾಗ ಏನು ಆಗುವುದೆಂದು ಹೇಳಲಾಗದು.ಸಮಯ ಒಂದೇ ರೀತಿ ಇರದು.
✍️ ಪರಮೇಶ್ವರಿ ಭಟ್
0 Followers
0 Following