ಅವಳು ಎಲ್ಲರಂತಲ್ಲ..!

ಮನದ ಸೂಕ್ಷ್ಮತೆಯ ಅರಿತವಳು ;

ProfileImg
11 May '24
3 min read


image

 

 

ಹಾ ! ಮತ್ತೆ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ಒಂದಿಷ್ಟು ಹೊಸತನದಂತೆ ಕಂಡಳು. ಮೈಗೆ ಬಿಳಿಯ ಮೇಲುದೆ ತೊಟ್ಟು ಶುದ್ಧತೆಯ  ಸಂಕೇತವೆನಿಸಿದ್ದಾಳೆ. ಸೂಕ್ಷ್ಮ ಸಂವೇದನೆಗಳ ಪ್ರತೀಕದಂತೆ ವೃತ್ತಾಕಾರದ ಈಗಿನ ಆಧುನಿಕತೆ ಎಂಬಂತೆ ಕನ್ನಡಕವನ್ನು ಸೇರಿಸಿಕೊಂಡಿದ್ದಾಳೆ.

  - Samyakth Jain_Kadaba

 ಸಂಪೂರ್ಣ ಲೇಖನವನ್ನು ಓದಿ 👇

 

“ ದಕ್ಷಿಣ ಭಾರತದಲ್ಲಿ ಒಂದಿಷ್ಟು ಬಿರುಸಿನ ಬಿಸಿ ಗಾಳಿ”, “ಉಷ್ಣಾಂಶ 42 ಡಿಗ್ರಿ ಹೊರಗಡೆ ಹೋಗಲೇ ಬ್ಯಾಡಿ”,  “ಇನ್ನು ನಾಲ್ಕು ದಿನ ಉರಿತಾಪ”.

    ಉಫ್…ಈ ಬೇಸಿಗೆ ನಿಜಕ್ಕೂ ನಮ್ಮೆಲ್ಲರನ್ನು ಸುಸ್ತಾಗಿಸಿಬಿಟ್ಟಿದೆ. ಮಳೆ ಇದ್ದಾಗ ಒಮ್ಮೆ ಬಿಸಿಲು ಬರಲಿ ಎಂದು ಹವಣಿಸುತ್ತಿದ್ದ ನಾವುಗಳು ಪ್ರಸ್ತುತ ಸೂರ್ಯನ ಪ್ರಕಾಶಮಾನವಾದ ಕಿರಣಗಳಿಗೆ ತತ್ತರಿಸಿ ಹೋಗಿದ್ದೇವೆ. ಬಿಸಿಲಿನಿಂದ ರಕ್ಷಣೆಗೆ ಹಿಡಿದಿರುವ ಛತ್ರಿ ಕಾದ ಹಪ್ಪಳದಂತಾಗುತ್ತಿದೆ. ತಲೆಗೆ ಹಾಕಿದ ಟೋಪಿ ಕರಟಿದ ಬಾವಲಿಯಂತಾಗಿದೆ. ಕುಡಿದ ನೀರು ಅರೆಕ್ಷಣದಲ್ಲಿ ಜೀರ್ಣವಾಗುತ್ತಿದೆ. ಅದೆಷ್ಟು ನೀರು ಸೇವಿಸಿದರು ಕಡಿಮೆಯೇ  ಈ ಉರಿಬಿಸಿಲಿಗೆ. ಅದರ ನಡುವೆ “ಫ್ರಿಜ್ಜಿನ  ತಂಪು ನೀರು ಸೇವಿಸಲೇಬೇಡಿ” ಎಂದು ಬಿತ್ತರವಾಗುತ್ತಿರುವ ಒಂದಷ್ಟು ಸುಳ್ಳು ಸುದ್ದಿಗಳು. ಅಂತೂ ಬೇಸಿಗೆಯಲ್ಲಿ ಜನರನ್ನು ಕುಳಿತಲ್ಲಿ ತಲೆದೂಗಲು ಬಿಡುತ್ತಿಲ್ಲ.

 ಕಾಲೇಜಿನಲ್ಲಿ ತರಗತಿಗೆ ಪ್ರವೇಶವಾದ ತಕ್ಷಣ ನನ್ನದೊಂದು ಹಳೇ ಚಾಳಿ. ಸುತ್ತಲಿನ ಕಿಟಕಿಯನ್ನು ತೆರೆಯುವುದು ಹಾಗೂ ನನಗೆ ಅನುಕೂಲವಾಗಿ ಗಾಳಿ ಬೀಸುವ ಫ್ಯಾನಿಗೆ ಜೀವ ತುಂಬುವುದು  | ಇದನ್ನೆರಡನ್ನು ಮಾಡದೆ ಹೋದರೆ ಖಂಡಿತ ನನಗೆ ತೃಪ್ತಿ ಎನಿಸದು. ಅಷ್ಟಕ್ಕೂ ಇಂದು ಎಲೆಕ್ಟಿವ್ ತರಗತಿ. ನಮ್ಮದಲ್ಲದ ವಿಭಾಗದ ತರಗತಿಯಲ್ಲಿ, ನಮ್ಮದಲ್ಲದ ವಿಭಾಗದ ಪಠ್ಯವನ್ನು ಅವಲೋಕಿಸುವುದು ಇದರ ರೂಢಿ. ತರಗತಿ ಬೇರೆಯಾದರೇನು? ನಿತ್ಯದ ಚಾಳಿಯನ್ನು ಮರೆಯಲುಂಟೇ ! ಮೂರ್ನಾಲ್ಕು ವಿದ್ಯಾರ್ಥಿಗಳು ಮೊದಲೇ ಬಂದು ಕುಳಿತಿದ್ದರು. ಸುಮಾರು ಬೆಳಗ್ಗೆ 9:00 ಆಗಿದ್ದಿರಬಹುದು.  ತರಗತಿ ಆರಂಭವಾಗಲು ಇನ್ನೂ ಹದಿನೈದು ನಿಮಿಷಗಳು ಬಾಕಿ ಉಳಿದಿದೆ . ನಿಧಾನವಾಗಿ ತರಗತಿ ಒಳಗೆ ಹೊಕ್ಕಿದವನು ರೂಮಿನ ಸ್ವಿಚ್ ಆನ್ ಮಾಡಿ, ನೇರವಾಗಿ ಆ ತರಗತಿ ಮೂಲೆಯಲ್ಲಿದ್ದ ಕಿಟಕಿಯ ಕಡೆ ಧಾವಿಸಿದೆ . ಬಹುಶಃ ಬಹುವಾಗಿ ತೆರೆಯುತ್ತಿಲ್ಲದ ಕಿಟಕಿ ಆಗಿದ್ದಿರಬೇಕು.ನನ್ನ ಸಂಪೂರ್ಣ ಶಕ್ತಿ ಉಪಯೋಗಿಸಿ ಆ ಜಾರಿಸುವ ಕಿಟಕಿಯ ಬಾಗಿಲುಗಳನ್ನು ಒಂದಿಷ್ಟು ಪ್ರಯತ್ನದಿಂದ ತೆರೆದೆ  ; ಅಬ್ಬಾ ಮಹಾನ್ ಸಾಧನೆಯೇ. ಕಾರ್ಯಭಾಗದ ಪ್ರತಿಕ ಒಂದಿಷ್ಟು ಬೆವರ ಹನಿಗಳನ್ನು ವ್ಯಯಿಸಬೇಕಾಯಿತು .

    ಆಲಿಪ್ತವಾಗಿ ಬೀಸುವ ತಣ್ಣನೆಯ ಗಾಳಿ . ಕಿವಿಗಳಿಗೆ ತಂಪನೆ ಬಡಿಯುವ ನಯವಾದ ಗಾಳಿಯ ಸದ್ದು. ಅದರ ಜೊತೆಗೆ ಪ್ರಕಾಶಮಾನವಾಗಿ ಕಂಗೊಳಿಸುವ ಸೂರ್ಯ, ಬೇಸಿಗೆಯ ನೆನಪನ್ನು ಮತ್ತೆ ನೆನಪಿದ್ದಾನೆ. ಕಿಟಕಿಯ ಅತ್ತಲಿಗೆ ಗಡಸಾಗಿ ನಿಂತಿರುವ ಪ್ರತ್ಯೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರ  ಹಾಸ್ಟೆಲ್ಗಳು. ವಿದ್ಯಾರ್ಥಿಗಳು ಅವಸರವಾಗಿ ಕಾಲೇಜಿಗೆ ಹೊರಡಲು ತಯಾರಾಗೋದು ಇದ್ದೇ ಇರುತ್ತೆ.

    ಹಾ ! ಮತ್ತೆ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ಒಂದಿಷ್ಟು ಹೊಸತನದಂತೆ ಕಂಡಳು. ಮೈಗೆ ಬಿಳಿಯ ಮೇಲುದೆ ತೊಟ್ಟು ಶುದ್ಧತೆಯ  ಸಂಕೇತವೆನಿಸಿದ್ದಾಳೆ. ಸೂಕ್ಷ್ಮ ಸಂವೇದನೆಗಳ ಪ್ರತೀಕದಂತೆ ವೃತ್ತಾಕಾರದ ಈಗಿನ ಆಧುನಿಕತೆ ಎಂಬಂತೆ ಕನ್ನಡಕವನ್ನು ಸೇರಿಸಿಕೊಂಡಿದ್ದಾಳೆ .ಅವಳ ಮುಖದಲ್ಲಿ ಮೂಡಿರೋದು ನಗೆಯೋ ಅಥವಾ ಸೂರ್ಯನ ಪ್ರಜ್ವಲತೆಯ ಧಗೆಯೋ ಎಂಬುದು ಖಂಡಿತ ನನಗರಿವಾಗುತ್ತಿಲ್ಲ. ಕಾಲೇಜಿನಿಂದ 70 ಮೀಟರ್ ದೂರದಲ್ಲಿರುವ ಹಾಸ್ಟೆಲು ಹಾಗೂ ಎರಡನೇ ಮಹಡಿಯಿಂದ ಹಾಸ್ಟೆಲಿನ ಕೆಳ ಮಹಡಿಯನ್ನು ವೀಕ್ಷಿಸುತ್ತಿರುವ ನಾನು. ಅನುಕೂಲಕ್ಕೂ ದೂರದ ನೋಟವನ್ನು ನಾನು ಹೇಗೆ  ಗ್ರಹಿಸಲಿ . ಎಲ್ಲರಂತೆ ಅವಳೂ ತುರಾತುರಿಯಲ್ಲಿ ಇದ್ದಾಳೆ.  ಕಾಲೇಜಿಗೆ ಸಿದ್ಧಪಡಿಸಬೇಕಾದ ಪುಸ್ತಕ ಸಮದೋಗಿಸಿಲ್ಲವೇನೋ ! ಐಡಿ- ಪೆನ್ನು, ರೆಕಾರ್ಡ್ ಪುಸ್ತಕವನ್ನು ತುಂಬಿಸಿಡಲಿಲ್ಲವೇನೋ ! ಕಣ್ಣಿನ ಕಾಡಿಗೆ, ಕೊರಳಿಗೆ ಕಾಲೇಜು ಗುರುತಿನ ಪಟ್ಟಿ ಇನ್ನೆಷ್ಟು ಹುಡುಕಬೇಕೋ !  ಎಲ್ಲದರ ನಡುವೆ ಉದ್ದನೆಯದಾಗಿ ಕಾಲನ್ನು ಚಾಚುತ್ತಾ ನಡೆಯುವ ರೀತಿ , ಅವಳಿಗೆ ಇನ್ನು  ಉಳಿದಿರುವ ಕೆಲಸವನ್ನು ತೋರಿಸಿ ಕೊಡುವಂತಿದೆ.

 ಹಾಸ್ಟೆಲ್ಲಿನ ‘ದಿವ್ಯಾಹ್ನ ಛತ್ರ’ದಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿ ಹೊಟ್ಟೆಯನ್ನು ತಣ್ಣಗಿರಿಸಿ, ಕೈಗಳನ್ನು  - ತಟ್ಟೆಯನ್ನು ತೊಳೆದು ಎಲ್ಲರಂತೆ ಅವಳಿಗೂ ತನ್ನ ಕೆಲಸದತ್ತ ಮೋರೆ ಹಾಕಬಹುದಿತ್ತು. ಆದರೆ ಅವಳು ಎಲ್ಲರಂತೆ ಖಂಡಿತ ಅಲ್ಲ  ; ತಾನು ಉಂಡ ಆಹಾರದ ತಟ್ಟೆಯನ್ನು ಶುಭ್ರವಾಗಿ ತೊಳೆದು, ಆ ತಟ್ಟೆ ಪೂರ್ತಿ ಶುಭ್ರವಾದ ನೀರು ತುಂಬಿ ಉದ್ಯಾನವನದ  ಮೂಲೆಯತ್ತ ಸಾಗುತ್ತಿದ್ದಾಳೆ. ತನ್ನ ಪ್ರಕಾಶವನ್ನೇ ತಡೆಯಲಾರದ ಸೂರ್ಯ ಅವಳು ಸಾಗುವ ದಾರಿಯಲ್ಲಿ ಹಿಡಿದ ತಟ್ಟೆಯ ನೀರಿನೊಳಗೆ ಸ್ನಾನ ಮಾಡುತ್ತಾ, ಮತ್ತೆ ಪ್ರತಿಬಿಂಬವನ್ನು ನನ್ನತ್ತ ಪ್ರತಿಫಲಿಸಿ ಅದೇನನ್ನೋ ಹೇಳುವಂತಿದೆ.

 ಅವಳು ಮುಂದೆ ನಿಧಾನವಾಗಿ ಸಾಗುತ್ತಿದ್ದಾಳೆ.

  ಆ ನೀರನ್ನು ಅವಳು ಎಲ್ಲಿಗೆ ಹಾಕಬಹುದು ! ವೀಕ್ಷಿಸುತ್ತಲೇ ಇದ್ದೆ. ಅದು ಅವಳು ನೆಟ್ಟ ಗಿಡಗಳಿಗಾಗಿದ್ದಿರಬಹುದು ! ಇಲ್ಲ. ಧೂಳಿಯಿಂದ ಲೇಪನವಾಗಿದ್ದ ಅವಳ ಚಪ್ಪಲಿಯನ್ನು ತೊಳೆಯಲು ಆಗಿದ್ದಿರಬಹುದೇ ? ಅಥವಾ ಯಾವುದೋ ಗೋಡೆಗೆ ತಾಗಿದ ಮಣ್ಣು ಒರೆಸಲು ಆಗಿದ್ದಿರಬಹುದೇ ? ಅಥವಾ ತನ್ನ ಗೆಳತಿಗೆ ನೀರೆರೆಚಲು ಆಗಿದ್ದಿರಬಹುದೇ  !

 

   ನೇರವಾಗಿ ಉದ್ಯಾನವನದ ಮೂಲೆಗೆ ಧಾವಂತದಿಂದ ಧಾವಿಸಿದ ಅವಳು ತೆಂಗಿನ ಗೆರಟೆಯನ್ನು ಕೈಗೆತ್ತಿಕೊಂಡಳು. ಗೆರಟೆಯ ಕಸ ಕಡ್ಡಿ ಹೊರತೆಗೆದು  ನಿಧಾನವಾಗಿ ತಟ್ಟೆಯ ಬಸುರಿನಿಂದ ಆ ಗೆರಟೆಗೆ ನೀರು ಸುರಿಸುತ್ತಿದ್ದಾಳೆ. ತಟ್ಟೆಯಿಂದ ಗೆರಟೆಗೆ ತರ್ಜುಮೆಗೊಳ್ಳುತ್ತಿರುವ ನೀರಿನ ಸದ್ದಿಗೆ, ಇನಿತು ದೂರದಲ್ಲಿದ್ದ ಎರಡು ಬೀದಿ ನಾಯಿಗಳು ಕಿವಿಯನ್ನು ಕಂಪಿಸುತ್ತಿವೆ. ಮೂಗು ಆಘ್ರಣಿಸುತ್ತಿದೆ. ಪಿಳಿ ಪಿಳಿ ಕಣ್ಣು ಅದೇ ಹೆಣ್ಣು ಮಗಳನ್ನು ದಿಟ್ಟಿಸಿ ಪ್ರೀತಿಯಿಂದ ನೋಡುತ್ತಿದೆ . ಮೆತ್ತಗೆ ಅವಳು ಹಿಂದಡಿ ಇಟ್ಟಳು.

 ಒಮ್ಮೆ ಸುತ್ತಲೂ ತಿರುಗಿದಳು. ಬಹುಶಃ ಪಕ್ಷಿಗಳಿವೆಯೇ ಎಂದು ಆ ಜೀವ ಹುಡುಕಾಡಿತ್ತೇನೋ ?  ಮೆತ್ತಗೆ ಹಿoದಡಿ ಇಟ್ಟಳು. ಅವಳ ನಿತ್ಯದ ಕಾಯಕಗಳತ್ತ ಚಿತ್ತ ಹರಿಸುವ ಸಲುವಾಗಿ ಏನೋ . ದೂರದಿಂದಲೇ ಇಣುಕುತ್ತಿದ್ದ ನಾಯಿಗಳೆರಡು ನಾಲಿಗೆಯನ್ನು ಹೊರಚಾಚಿ ಸುಸ್ತಾದ ಮತಿಯಿಂದಲೇ ಗೆರಟೆಯ ಪಕ್ಕ ಬಂದಿದೆ. ಒಂದಾದ ನಂತರ ಮತ್ತೊಂದು ಎಂಬಂತೆ ಎರಡು ನಾಯಿ ಮರಿಗಳೂ ನೀರನ್ನು ಕುಡಿದು, ಲಟ ಲಟನೆ  ಮೈಯನ್ನು ಅಲುಗಿಸಿ ನೀಡಲಾಗಿ ನನ್ನತ್ತ ದೃಷ್ಟಿ ಹಾಯಿಸಿ ನಮಸ್ಕಾರ ಹಾಕಿತು. ಎರಡೇ ಹೆಜ್ಜೆಯಲ್ಲಿ  ಪಕ್ಕದ ಮರದ ಬುಡದಲ್ಲಿ ದೊಪ್ಪನೆ ಮಲಗಿಕೊಂಡಿತು .ಖಂಡಿತ ತೃಷೆ ನೀಗಿಸಿಕೊಂಡ ಆ ಶ್ವಾನಗಳೆರಡೂ ಅವಳನ್ನು ನೆನಪು ಮಾಡಿಕೊಳ್ಳುತ್ತಲೇ ನಿಧಾನವಾಗಿ ನಿದ್ರೆಗೆ ಜಾರಿದೆ. ಖಾಲಿಯಾದ ಗೆರಟೆ ಮತ್ತೆ ಯಾರಾದರೂ ನೀರು ಹಾಕಿಯಾರೇ ಎಂದು ಮರ್ಮರಿಸುತ್ತಿರಬಹುದು. ಹೌದು ಆ ಕಿಟಕಿಯ ಕಡೆ ಹೋದಾಗಲೆಲ್ಲಾ ಮೂಕ ಜೀವಿಗಳ ರೋಧನ ಎರಡನೇ ಮಹಡಿಯಿಂದಲೇ ನಿಂತಿರುವ ನನ್ನನ್ನು ಬಡಿಯುತ್ತಿದೆ.ಆದರೂ ಅವಳು ಎಲ್ಲರಂತಲ್ಲ .

    ಸೂಕ್ಷ್ಮತೆಯಿಂದ ಪರಿಸರದ ಸೂಕ್ಷ್ಮತೆಯನ್ನು ಅರಿತಿರುವ ಅವಳು ಮೂಕ ಜೀವಿಗೆ ಜೀವವಾಗಲು ಮುಂದಾಗಿದ್ದಾಳೆ. ಹೌದು ಅವಳು ನಮಗೆ ಮಾದರಿಯಾಗಿದ್ದಾಳೆ  ; ಇನ್ನೇನಿದ್ದರೂ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಬಿಸಿಲಿನ ಬಗೆಗೆ ತೃಷೆ ನೀಗಿಸಲು ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ ಸಂಕುಲಗಳಿಗೆ ನಾವು ನೆರವಾಗಬೇಕಿದೆ ! ….

 

Category:Personal Experience



ProfileImg

Written by Samyakth Jain kadaba