ಅವಳು...

ಚಿಟ್ಟೆಯ ಅರಸಿ🦋

ProfileImg
23 May '24
4 min read


image

ಅವಳು ಮುಗ್ಧ ಹುಡುಗಿ ಮುದ್ದಾದ ಹುಡುಗಿ ಸ್ವಲ್ಪ ಕಿತಾಪತಿ ಜಾಸ್ತಿ, ಏನಾದರೂ ಕಿತಾಪತಿ ಮಾಡಿ ನನ್ನ ತಲೆ ತಿನ್ನೋದೆ ಅವಳ ಕೆಲಸ. ಹೂಂ… ಸಿಕ್ಕಾಪಟ್ಟೆ ಗೊಳೊಹೈೂಕೊತಾಳೆ ಅವಳಿಗೆ ಅದರಲ್ಲೂ ಏನೋ ಖುಷಿ ಪಾಪ ಚಿಕ್ ಮಗು ಬುದ್ಧಿ. 

              ಇವತ್ತು ಬೆಳ್ ಬೆಳಿಗ್ಗೆ ಹೊಸ ಕಿತಾಪತಿ ಶುರು ಮಾಡಿದ್ಲು. ಅವಳಿಗೆ ಪಾತರಗಿತ್ತಿ ಬೇಕಂತೆ. ಹೇಳಿದನಲ್ಲಾ ಕಿತಾಪತಿ ನಂ.1 ಅಂತ. ತಗೊಂಡ್ ಹೊಗದೇ ಇದ್ರೆ ಮುಗಿದೆ ಹೊಯ್ತು ನನ್ನ ಕಥೆ. ಯಪ್ಪಾ… ಸಿಕ್ಕಾಪಟ್ಟೆ ಹೊಡ್ದು ನನ್ ಚಿಂದಿ ಚಿತ್ರಾನ್ನ ಮಾಡಿ ಸಿಟ್ ಮಾಡ್ಕೊಂಡು “ನಾ ಮಾತಾಡಲ್ಲಾ ನೀ ಬ್ಯಾಡಾ ಹೋಗು” ಅಂತ ಹೇಳ್ತಾ ಸುಮ್ನೆ ಹೋಗಿ ಕುತ್ಕೊತ್ತಾಳೆ. ಅಳು ಬಂದರುಬಂತು ಆ ಮುಗ್ಧ ಮುಖದಲಿ. 

              ಅವಳಿಗೆ ರೇಗಿಸೊಕೆ ತುಂಬಾ ಖುಷಿ ಆದ್ರೆ ಅವಳು ಸುಮ್ನೆ ಕುತ್ಕೊಂಡಾಗ ಪಾಪ ಅನಿಸುತ್ತೆ, ಆದ್ರು ಆ ಹುಸಿ ಕೋಪದಲ್ಲು ಚಂದ್ ಕಾಣ್ತಾಳೆ. ಆ ಸೌಂದರ್ಯ ನೋಡೊಕೆ ಅಂತ ಪಾತರಗಿತ್ತಿ ತಗೋ ಹೋಗಬಾರದು ಅಂದ್ ಕೊಂಡೆ ಆದ್ರೆ ಏನ್ ಮಾಡೋದು ಮನ್ಸು ಕೇಳಲ್ಲ ಅದಕ್ಕೆ ಇವತ್ತು ಹೋಗಿದ್ದೆ. ಇವತ್ತಿನ ಈ ದಿನವನ್ನು ಮರೆಯೋಕ್ಕಾಗಲ್ಲ ಅಷ್ಟು ಸುಂದರ ಆ ಕ್ಷಣಗಳು….. 

              ಬೆಳಿಗ್ಗೆ ಅವಳು ಹೇಳಿದಾಗಲೇ ಹೊರಟೆ ಪಾತರಗಿತ್ತಿ ಹುಡುಕೊಕೆ ಆದ್ರೆ ಅವಳ ಮತ್ತೂಂದು ಕಂಡಿಷನ್ ಏನ್ ಅಂದ್ರೆ ಪಾತರಗಿತ್ತಿ ಜೀವಂತವಾಗಿಯೇ ಬೇಕಂತೆ ಅದಕ್ಕೆ ಸ್ವಲ್ಪಾನೂ ನೋವಾಗ್ ಬಾರದಂತೆ ಜೋಪಾನವಾಗಿ ತಂದ್ ಕೊಡು ಅಂತ ಎಷ್ಟ್ ಚಂದ ಮಾಡಿ ನೈಸ್ ಮಾಡಿ ಹೇಳಿದ್ಲು. ಮಗು ತರ ಅವಳ ಮುಗ್ಧ ಮಾತ್ ಕೇಳಿ “ತರ್ತೀನಿ ಮಾರಾಯ್ತಿ” ಅಂತ ಹೇಳ್ ಬಿಟ್ಟೆ. ಆದರೆ ಪಾತರಗಿತ್ತಿ ಹುಡುಕೆೋದು ಎಷ್ಟ್ ಕಷ್ಟ ಅಂತ ಇವತ್ತೇ ಗೊತ್ತಾಗಿದ್ದು. ಅಕ್ಕಪಕ್ಕ ಎಷ್ಟ್ ನೋಡಿದ್ರು ಒಂದೂ… ಕಾಣಲಿಲ್ಲಾ. ಇವತ್ತೇನ್ ಪಾತರಗಿತ್ತಿಗಳೆಲ್ಲಾ ಸ್ಟ್ರೈಕ್ ಮಾಡಿವೇಯೇನೋ ಅಂತ ಅನ್ಸಬಿಟ್ಟಿತ್ತು. ಏನೇ ಆಗ್ಲಿ ಇವತ್ ಹುಡುಕಿ ತಗೂಂಡ್ ಹೋಗಲೇಬೇಕು ಅಂತ ಮೆಲ್ಲನೆ ತೋಟದ ಕಡೆ ಹೊರಟೆ. 

              ಅಬ್ಬಬ್ಬಾ!!! ಆಶ್ಚರ್ಯ!!! ಏನ್ ಸುಂದರ ಲೋಕ, ಹೊಸ ಲೋಕಕ್ಕೆ ಬಂದ್ ನೆನೋ ಅನ್ನೂ ಹಾಗೆ ರಂಗುರಂಗಿನ ಪಾತರಗಿತ್ತಿಗಳು ‘ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ’ ಹಾರಾಡುತ್ತ ಹೊಸ ಜಗತ್ತನ್ನೇ ಕಣ್ಣ ಮುಂದೆ ಸ್ರಷ್ಟಿ ಮಾಡಿಬಿಟ್ಟಿದ್ದವು

              ನೋಡ್ತಾ ನೋಡ್ತಾ ಯಾಕೋ ಮನ್ಸು ಖುಷಿಲಿ ತೇಲಾಡಿತು. ಓ…. ಆಗ ಗೊತ್ತಾಯ್ತು “ಅವಳು ಯಾಕೆ ಪಾತರಗಿತ್ತಿ ತಗೊ ಬಾ ಅಂದಿದ್ಲು” ಅಂತ. ಇಷ್ಟೇಲ್ಲಾ ಪಾತರಗಿತ್ತಿ ಉಂಟು ಒಂದ್ ಬುಟ್ಟಿ ತುಂಬ ಹಿಡಿದು ತಗೋ ಹೋಗುವ ಅಂತ ಹಿಡಿಯೋಕೆ ಹೋದೆ. ಇನ್ನೆನು ಹಿಡಿದ್ ಬಿಟ್ಟೆ ಅನ್ನೋವಷ್ಟರಲ್ಲಿ ತಪ್ಪಿಸ್ಕೊತ್ತಿತ್ತು. ಅವೆಲ್ಲಾ ಬೇಕಂತಾನೇ ನನ್ನ ಜೋತೆ ಚೆಲ್ಲಾಪಿಲ್ಲಿ ಆಟ ಆಡ್ತಿವೇ ಅನಿಸ್ತಿತ್ತು. ಅಬ್ಬಾ…. ಅಂತು ಸಿಕ್ಕ್ ಬಿಡ್ತು ಅಂತ ಹಾರಿ…. ಜಾರಿ ಬಿದ್ದು ಪೆಟ್ಟಾದ್ರು… ಅಂತು ಹಿಡಿದ್ ಬಿಟ್ನಲ್ಲಾ ಅಂತ ಕೈ ತೆರೆದು ನೋಡಿದ್ರೆ ಪಾತರಗಿತ್ತಿ ಮಾಯಾ…. ಸಿಟ್ಟು, ನಿರಾಸೆ, ಬೇಸರ ಮುಖದಲ್ಲಿ ಕಾಡುತ್ತಿತ್ತು. ಆ ನಿರಾಸೆಯ ಮುಖದಲ್ಲೇ ಇವತ್ತು ಅವಳನ್ನು ನಿರಾಸೆ ಮಾಡಬೇಕಾಯ್ತಲ್ಲ ಅಂದುಕೊಂಡು ಇನ್ನೆನು… ಅಲ್ಲಿಂದ ವಾಪಸಾಗಬೇಕು ಎನ್ನುವಷ್ಟರಲ್ಲಿ…. ನನ್ನ ‘ಭಾಗ್ಯವೋ’ಏನೋ ಅನ್ನುವಂತೆ ಒಂದು ಸುಂದರ ಹೂವಿನ ಮೇಲೆ ಕುಳಿತಿತ್ತೊಂದು ಪಾತರಗಿತ್ತಿ. ಆಕರ್ಷಕವಾದ ಮೈಸಿರಿಯೊಂದಿಗೆ ಮೌನವಾಗಿ ನನ್ನನೇ ನೋಡುತಿತ್ತು.

              ಅದನ್ನು ನೋಡಿ ಮನಸಲ್ಲಿ ಖುಷಿ ಮೂಡಿದರು… “ಇಲ್ಲಾ!.. ಇಲ್ಲಾ!.. ಹತ್ತಿರ ಬಂದ ತಕ್ಷಣ ಹಾರಿಹೋಗಿ ನಿರಾಸೆ ಮೂಡಿಸುತ್ತೆ ಇದೊಂದು ಮಾಯೆಯೋ ಏನೋ” ಅಂತ ಅನಿಸ್ತಿತ್ತು. ಎದೆ ಡವ ಡವ ಅಂದುಕೆೊಳ್ಳುತ್ತಿದೆ, ಪದೇ ಪದೇ ಅವಳ ಮುಗ್ಧ ಮುಖದ ನೆನಪು… ಏನೋ ಭಯ, ಏನೋ ಆತಂಕ, ಏನೇ ಆಗಲಿ ಸೋತುಹೋಗಿರುವ ನನಗೆ ಕೊನೆಯ ಪ್ರಯತ್ನ ಅಂದುಕೊಂಡು ಪದೇಪದೇ ನೆನಪಾಗುವ ಆ ಮುಗ್ದೆಗಾಗಿ ನಾನು ಮುಗ್ದನಂತೆ ಅಂಗಲಾಚುತ “ಪ್ಲೀಸ್…ಹಾರಿ ಹೋಗಬೇಡ” ಎನ್ನುತಲ್ಲೇ ಹತ್ತಿರ ಹೋದೆ.

              ಊಹೂಂ…. ಹಾರಲಿಲ್ಲ, ಸ್ವಲ್ಪವು ಮಿಣುಕಾಡಲಿಲ್ಲ, ಏನೋ ಖುಷಿ ಆದರೆ…. ಏನೋ ಭಯ ಮೆಲ್ಲನೆ… ಹಿಡಿದು ಬಿಟ್ಟೆ!!!… ಮುಖದಲ್ಲಿ ನಗು, ಕಣ್ಣಲ್ಲಿ ಹೇಳಲಾಗದಷ್ಟು ಖುಷಿ, ಮನಸಲ್ಲಿ ಭ್ರಮೆ ಏನೋ ಅನ್ನುವ ಭಯ, ಆತಂಕ ಮೂಡಿತ್ತು. ಸಂತಸದ ಕಣ್ ಹನಿಗಳು ಸದ್ದಿಲ್ಲದೆ ಜಾರಿದ್ದವು.  

              ಪಾತರಗಿತ್ತಿಯನ್ನ ಜೋಪಾನವಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಹೊರಟೆ ಅವಳಿರುವ ಕಡೆಗೆ….

             ದಾರಿಯುದ್ದಕ್ಕೂ ಹೂ ಮರಗಳ ಸಾಲು, ತಂಗಾಳಿಯು ಸುಮಧುರ ಝೇಂಕಾರದೊಂದಿಗೆ ಮೆಲ್ಲನೆ…. ಬೀಸುತ್ತಿತ್ತು. ಆ ಮನ ತಣಿಸುವ ತಂಗಾಳಿಯೊಂದಿಗೆ ಮರಗಳಿಂದ ಉದುರುವ ಹೂಗಳು…. ದಾರಿಯುದ್ದಕ್ಕೂ ಹೂ ಮಳೆಯನ್ನು ಚೆಲ್ಲಿದ್ದವು. ಏನೋ ಸುಂದರ ಸಂಭ್ರಮದ ಮೆರವಣಿಗೆಯಲಿ ಹೊರಟ ಹಾಗೆ ಇತ್ತು. 

               ಅವಳ ಮನೆ ಸಮೀಪಿಸುತ್ತಿದ್ದಂತೆ ದೂರದಿಂದಲೇ ಅವಳನ್ನು ನೋಡಿದೆ. ಒಬ್ಬಳೇ ಮೆಟ್ಟಿಲ ಮೇಲೆ ಕುಳಿತಿದ್ದಳು. ಮುಖದಲ್ಲಿ ಮೌನ, ಆದರೆ ಕಣ್ಣುಗಳಲ್ಲಿ ಏನೋ ಖುಷಿ, ಏನೋ ಕಾತುರ, ನಂಬಿಕೆ ಮೂಡಿರುವುದನ್ನು ಕಂಡೆ. ಮೆಲ್ಲ… ಮೆಲ್ಲನೆ… ಹೆಜ್ಜೆ ಇಡುತ್ತ ಅವಳಿಗೆ ಕಾಣದ ಹಾಗೆ ಮರೆಯಲ್ಲಿ ನಿಂತು ಅವಳ ಮುಗ್ಧ ಮುಖದ ಸೌಂದರ್ಯವನ್ನ ಕಣ್ಣಲ್ಲಿ ತುಂಬಿಕೊಳ್ಳುತ್ತಾ ನಿಂತಿದ್ದೆ.

             ಅದು ಹೇಗೋ ಏನೋ ನೋಡಿಯೇ ಬಿಟ್ಟಳು. “ಏಯ್….” ಎಂದು ಖುಷಿಯಿಂದ ಕೂಗುತ್ತ, ಮುಖದಲ್ಲಿ ನಗು ಅರಳಿಸುತ್ತ ಓಡಿಬಂದು ಮೆಲ್ಲನೆ ಹೊಡೆದು ಕೇಳಿದಳು “ನಾ ಹೇಳಿದ್ದು ತಂದ್ಯಾ? ” (ನಾ ಸ್ವಲ್ಪ ಅವಳನ್ನು ರೇಗಿಸುವ ಉತ್ಸಾಹದಲ್ಲಿದ್ದೆ.) ‘ಏನು?’ ಎಂದು ಕೇಳಿದೆ. ಅವಳು ‘ನೆನಪಿಲ್ವಾ’ ಎಂದಳು. ನಾನು ಮತ್ತೇ ರೇಗಿಸುವ ಹುರುಪಿನಲ್ಲಿ “ಏನು ನೆನಪು? ” ಎಂದು ಕೇಳಿದೆ. ಅವಳು “ಹೂಂ ನಂಗೆ ಗೊತ್ತಿತ್ತು ನೀ ಹೀಗೆ ಮಾಡ್ತೆ ಅಂತ, ನಿಂಗೆ ನೆನಪೆ ಇರಲ್ಲಾ, ನೀ ಬ್ಯಾಡಾ ಹೋಗು” ಎನ್ನುತ ಹೊಡೆದು ಚಿಕ್ಕ ಮಗುವಿನ ಹಾಗೆ ಬೈಯುತ್ತಾ ಜೊತೆಯಾಗಿಯೇ ಹೊರಟಳು. 

             ನನ್ನ ಮನಸ್ಸಿನಲ್ಲಿ ಏನೋ ಖುಷಿ ಅವಳನ್ನು ಮತ್ತೇ ರೇಗಿಸಬೇಕು ಅನ್ನಿಸುತ್ತಿತ್ತು. ಅವಳು ಬೈಯುವ ಆ ಮುಗ್ಧ ಮಾತುಗಳು, ಮುಗ್ಧ ಕೈಗಳಿಂದ ತಿಂದ ಹೊಡೆತಗಳು…. ಇನ್ನು ಬೇಕು ಎನ್ನಿಸುತ್ತಿತ್ತು. ಆದರೆ ಅವಳ ಮುಗ್ಧ ಮುಖದಲ್ಲಾದ ನಿರಾಸೆಯನ್ನ ನೋಡಿ ನನ್ನ ಸ್ವಾರ್ಥಕ್ಕೆ ನನ್ನ ಮೇಲೆ ನನಗೆ ಬೇಸರ ಮೂಡಿತು. 

              ಮೆಲ್ಲನೆ ಕೇಳಿದೆ, ‘ಬೇಜಾರಾ..?’ “ಊಹೂಂ ಏನೂ ಇಲ್ಲಾ” ಎನ್ನುತ, ಕೊನೆಗೆ ಮಾತನಾಡಿಸಿದರೂ ಮಾತನಾಡದೆ ಜೊತೆಗೆ ಹೆಜ್ಜೆ ಹಾಕುತ್ತಿದ್ದಳು. ಮುಖ ನಿರಾಸೆಯಿಂದ ಕಣ್ಣೀರಿಗೆ ಜಾರುವ ಹಾಗಿತ್ತು.

                ಜೊತೆ ನಡೆಯುತ್ತಿದ್ದ ನಾನು ಸ್ವಲ್ಪ…. ನಿಧಾನವಾಗಿ ಹೆಜ್ಜೆ ಹಾಕಿದೆ. ಅವಳು ಸ್ವಲ್ಪ ಮುಂದೆ ನಡೆದಳು. ನಾನು ಅಲ್ಲೇ ನಿಂತುಕೊಂಡು ಅವಳನ್ನೇ ನೋಡುತ್ತಾ ನಿಂತೆ. ಅವಳು ಸ್ವಲ್ಪ ಮುಂದೆ ಹೋಗಿ ಪಕ್ಕಕ್ಕೆ ನೋಡಿದಳು ನಾ ಇರಲಿಲ್ಲ…. (ಆಶ್ಚರ್ಯದಿಂದ) ಹಿಂದೆ ತಿರುಗಿ ನೋಡಿದಳು. ನನ್ನ ಕೈಯಲ್ಲಿ ಜೋಪಾನವಾಗಿ ತಂದ ಪಾತರಗಿತ್ತಿ ಇತ್ತು. ಅದನ್ನ ನೋಡಿ ಖುಷಿಯಿಂದ ಬೈಯುತ್ತಲೇ ಓಡಿ ಬಂದು ಹೊಡೆದು ನನಗಿಂತಲೂ ಅತಿ ಕಾಳಜಿಯಿಂದ ಜೋಪಾನವಾಗಿ ತೆಗೆದುಕೊಂಡಳು. 

              ಆ ಸುಂದರ ಪಾತರಗಿತ್ತಿಯನ್ನ ಹೊರಗೆ ಬಿಡುತ್ತ ಖುಷಿಯಿಂದ ಕೂಗುತ್ತ ಕುಣಿದಳು. ಪಾತರಗಿತ್ತಿ ನಮ್ಮಿಬ್ಬರ ಸುತ್ತ ತಿರುಗಿ ಅಲ್ಲಿಂದ ಹಾರಿ ಹೋಗಿತ್ತು, ನನ್ನ ತಲೆ ತಿರುಗಿತ್ತು!!!….

               ಅಷ್ಟು ಕಷ್ಟ ಪಟ್ಟು ಎದ್ದು ಬಿದ್ದು ಹಿಡಿದು ತಂದ ಪಾತರಗಿತ್ತಿನ ಕ್ಷಣಮಾತ್ರದಲ್ಲಿ ಆಗಸಕ್ಕೆ ಹಾರಿಬಿಟ್ಟು ಎಳೆ ಮಗುವಿನ ಹಾಗೆ, (ಏನೋ ಪಡೆದುಕೊಂಡವಳ ಹಾಗೆ) ಖುಷಿಯಲ್ಲಿ ನಗುತ್ತಾ, ಕುಣಿಯುತ್ತ, ಕೂಗುತ್ತ ಇದ್ದಳು. ಅವಳ ಆ ಮುಗ್ಧ ಮುಖದಲ್ಲಿನ ಆ ನಗು, ಆ ಖುಷಿ ನೋಡುತ್ತಾ ಪಾತರಗಿತ್ತಿ ಹಿಡಿಯುವಾಗ ಪಟ್ಟ ಕಷ್ಟವೆಲ್ಲಾ ಮರೆತು ಹೋಗಿತ್ತು. ಆ ನಗುಮುಖದಲ್ಲಿ ನನ್ನ ಸಾವಿರ ಕೆೋಟಿ ನೆಮ್ಮದಿ, ಸಂತ್ರಪ್ತಿ ಅಡಗಿತ್ತು. 

                ಆ ಮಗುವಿನ ತರಹದ ಮುಗ್ಧ ಎಳೆ ಮನಸ್ಸಿಗೆ ನಾ ಶರಣಾಗಿದ್ದೆ. 

-ಸ್ಟೀವನ್ ಡಿಸೋಜಾ. ಶಿರಸಿ

Category:StoriesProfileImg

Written by Steven Dsouza