ಆಕೆ ಭಾರತಾಂಬೆ

ಗ್ರೀಕರಿಂದ ಬ್ರಿಟಿಷರವರೆಗೆ....

ProfileImg
22 Jul '24
4 min read


image

ಆಕೆ ಭಾರತಾಂಬೆ...

ಸಾವಿರಾರು ಭೂ ಭಾಗಗಳ ವಿಶ್ವದ ನಕ್ಷೆಯಲ್ಲಿ ಅಲ್ಲೊಂದು ದೇಶವಿತ್ತು . ಆ ಸಂಪದ್ಭರಿತ ನೆಲದ  ಭೂಪಟದ ಮೇಲೆ ಸಾಕಷ್ಟು ಜನರ ದೃಷ್ಟಿಯೂ ನೆಟ್ಟಿತ್ತು . ಆ ನೆಲದ ಮಕ್ಕಳ ಪಾಲಿಗೆ ಅದು ಕೇವಲ ನೆಲವಾಗಿರದೇ ಪುಣ್ಯ ಭೂಮಿಯಾಗಿತ್ತು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ಜನ್ಮ ಭೂಮಿಯನ್ನು  ಆರಾಧಿಸುವ ಪೂಜಿಸುವವರ ತಾಯಿಯಾಗಿತ್ತು  ಆ ದೇಶ . ತಾಯಿ ತಾಯ್ನಾಡುಗಳೆಂಬ  ರಾಷ್ಟ್ರೀಯತೆ ,ರಾಷ್ಟ್ರಪ್ರೇಮಗಳನ್ನು  ಕಣ ಕಣಗಳಲ್ಲೂ ತುಂಬಿಕೊಂಡ  ಸಂತತಿಯನ್ನು ಪಡೆದ ಪುಣ್ಯವತಿಯಾಗಿದ್ದಳು ಆಕೆ. ಆಕೆ ಭಾರತಾಂಬೆ .

ಗ್ರೀಕರಿಂದ ಹಿಡಿದು ಬ್ರಿಟಿಷರವರೆಗೆ

ಬಂಗಾರ,ಮುತ್ತು ರತ್ನಗಳನ್ನು ಸೇರುಗಳಲ್ಲಿ ಅಳೆಯುತ್ತಾ ,ಬೀದಿಯಲ್ಲಿ ಮಾರುವ ಶ್ರೀಮಂತ ನೆಲದ ವೈಭವ ಹಲವು ವಿದೇಶಿ ದಾಳಿಕೋರರನ್ನು  ಸುಮ್ಮನೆ ಕೂರಲು ಬಿಡಲಿಲ್ಲ.  ತನ್ನ ಪಾಡಿಗೆ ತಾನಿದ್ದ ನೆಲದ ಮೇಲೆ ವಿದೇಶಿ ದಾಳಿಗಳು ಪ್ರಾರಂಭವಾದವು . ಗ್ರೀಕರು , ಶಕರು, ಪಾರ್ಥೇನಿಯನ್ನರು ,ಕುಶಾನರು  ಅರಬರು , ತುರ್ಕರು ,ಪರ್ಷಿಯನ್ನರು , ಪೋರ್ಚುಗೀಸ್, ಫ್ರೆಂಚರು, ಡಚ್ಚರು  ,ಮೊಗಲರು  ಕಡೆಗೆ ಇಂಗ್ಲಿಷರು ಹೀಗೆ ದಾಳಿಕೋರರ ದಂಡು ದುರಾಸೆಹೊತ್ತು ಆ ನೆಲದ ಮೇಲೆ ಕಾಲಿಟ್ಟವರೆ. ಹಾಗೆ ಬಂದವರು ನಿರಂತರವಾಗಿ ಆ ನೆಲವನ್ನು ದೋಚಿದರು , ಮುಗಿಯದಷ್ಟು ಬಾಚಿಕೊಂಡು ಹೋದರು. ಮತ್ತೆ ಮತ್ತೆ ಬಂದರು ಆ  ನೆಲವನ್ನು ಅಗೆದು ಬಗೆದು ಧ್ವಂಸಗೊಳಿಸಿ ಆಕೆಯನ್ನು ದೋಚಿದರು .  ಅವರೆಷ್ಟೇ ದೋಚಿದರು ಮುಗಿಯದ ಸಂಪತ್ತಿನ ಭಂಡಾರವಾಗಿದ್ದಳು ಆಕೆ. 
ಹಾಗೆಬಂದ ಅದೆಷ್ಟೋ ದಾಳಿಕೋರರಲ್ಲಿ ಕೆಲವರು ಅಲ್ಲಿಯೇ ತಳವೂರಿದರು . ಹಾಗೆ ನೆಲೆನಿಂತ ವಿದೇಶಿಯರನ್ನೂ ಆಕೆ ಪೊರೆದಳು ಬಾಚಿ ತಬ್ಬಿದಳು ಏಕೆಂದರೆ ಆಕೆ ಸದಾ ವತ್ಸಲೇ ತಾಯಿ ಭಾರತಾಂಬೆ . ಹಾಗೆ ನಿಂತ ಮೊಗಲ ರಂತಹ ಅನೇಕ ವಿದೇಶಿಯರು ಬಂದವರು ಹೋಗದೆ ಆ ನೆಲವನ್ನು  ಆಳುವ ಕನಸು ಕಂಡರು, ಆಳಿದರು ಆ ನೆಲದ ಇತಿಹಾಸದಲ್ಲೇ ಸ್ಥಾನ ಗಿಟ್ಟಿಸಿಕೊಂಡರು .

 

ಹೀಗೆ ಯಾರ್ಯಾರೋ ಬಂದರು ದೋಚಿದರು ಕೆಲವರು ಇಲ್ಲಿ ಬೇರೂರಿದರು ಈ ನೆಲದಲ್ಲಿಯೇ ಹುಟ್ಟಿದವರ ರಕ್ತ ಹೀರಿ ಪಕ್ಕಕೆ ಸರಿಸಿ ಈ ನೆಲವನ್ನು ಆಳಿದರು. ಆದರೆ ಆ ವರ್ಷ1608 ವ್ಯಾಪಾರದ ಸೋಗುಹೊತ್ತು ಅವರು ಬಂದಿದ್ದರು . ದೂರದ ಇಂಗ್ಲೆಂಡಿನ  ಈಸ್ಟ್ ಇಂಡಿಯಾ ಕಂಪನಿಯ ನೌಕೆ ಆ ನೆಲದ ಪಶ್ಚಿಮದ ಸೂರತ್ತಿನಲ್ಲಿ ಲಂಗರು ಹಾಕಿ ಹೆಜ್ಜೆ ಇಟ್ಟಿತ್ತು.  ಅವರ ಉದ್ದೇಶ ಕೇವಲ ವ್ಯಾಪಾರವಾಗಿರಲಿಲ್ಲ ವೆಂಬುದು ಗೊತ್ತಾಗುವುದರಲ್ಲೆ ಕಾಲ ಮಿಂಚಿಹೋಗಿತ್ತು .
ಅವರು ಏನನ್ನೇ ಮಾಡಿದರೂ ಸಿದ್ಧಾಂತಗಳ ಸೋಗು ಹೊತ್ತೆ  ಮಾಡುವವರು . ಅದು ದೇಶಪ್ರೇಮ ವಿರಲಿ   ವ್ಯಾಪಾರದ ಹೆಸರಿನಲ್ಲಿ ವಂಚನೆ ಇರಲಿ ,   ವಸಾಹತುಶಾಹಿಯ ಸಿದ್ಧಾಂತದ ಸೋಗಿನಲ್ಲಿ ಆಕ್ರಮಣ ವಿರಲಿ ಕಡೆಗೆ  ಸ್ವಾತಂತ್ರ್ಯದ ಸಿದ್ಧಾಂತದಲ್ಲಿ ತನ್ನದೇ ರಾಜನ ಶಿರಶ್ಚೇದನ ವಿರಲಿ ಎಲ್ಲವೂ ಸರಿಯೇ ಎಲ್ಲವೂ ನೀತಿಬದ್ಧವೇ ಎಂದು ವಾದಿಸುವ  ಇಂಗ್ಲಿಷರು ಅವರು. ಎಕೆಂದರೆ  ಯಾವೊಬ್ಬ ಬ್ರಿಟಿಷ್‌ ಯಾವತ್ತಿಗೂ ತಪ್ಪಾಗಿರಲು ಸಾಧ್ಯವಿಲ್ಲ ಎಂಬ ಜಾರ್ಜ್ ಬರ್ನಾಡ್ ಷಾ ನ ಮಾತು ಅವರ ಮನೋಭಾವಕ್ಕೆ  ಹಿಡಿದ ಕೈಗನ್ನಡಿ .

ಹಾಗೆ ಬಂದವರು ಇಲ್ಲಿನ  ರಾಜ ಮಹಾರಾಜರ ವೀಕ್ನೆಸ್ ಪಾಯಿಂಟ್ ನ್ನು ಸರಿಯಾಗಿಯೇ ಕಂಡು ಹಿಡಿದಿದ್ದರು . ಯಾವ  ಮೀನುಗಳನ್ನು ಹಿಡಿಯಲು ಯಾವ ಗಾಳಗಳನ್ನು ಬಳಸಬೇಕು ಎಂಬುದನ್ನು ಬಲ್ಲ ಚಾಣಾಕ್ಷರು ಅವರು. ಅಷ್ಟಿಲ್ಲದಯೇ ಇಂತಹ ದೊಡ್ಡ ಜನಸಂಖ್ಯೆಯ ದೊಡ್ಡ ದೇಶವನ್ನು  ಸರಿಸುಮಾರು 2೦೦ ವರ್ಷಗಳ ಕಾಲ ಆಳಲು ಸಾಧ್ಯವಿತ್ತೆ . ಬಂಗಾಳವೆಂಬ  ಖಜಾನೆ ಅವರ ಕಣ್ಣು ಕುಕ್ಕುತ್ತಿತ್ತು .  ಮೊಗಲ್ ದೊರೆ ಜಹಂಗೀರನ ಮನವೊಲಿಸಿ ನಿಧಾನವಾಗಿ ಒಂದೊಂದೇ ಸವಲತ್ತುಗಳನ್ನು ಪಡೆದುಕೊಳ್ಳುತ್ತ ಹೋದರು.  ಇರಲಷ್ಟು ನೆಲೆ ಕೊಟ್ಟರೆ  ಅಲ್ಲಿದ್ದವರನ್ನೇ ಕಿತ್ತೆಸೆಯುವ ಆಕ್ರಮಣಕಾರಿ ಮನೋಭಾವದ ಇಂಗ್ಲಿಷರು ಇಲ್ಲಿಯ  ರಾಜ ಮಹಾರಾಜರ ಒಳ ಹುಳುಕುಗಳನ್ನು  ಎಂಜಲು ಕಾಸು, ಪದವಿ ಅಧಿಕಾರಕ್ಕಾಗಿ  ಬಾಯ್ಬಿಡುವ  ಕೆಲವೊಂದಿಷ್ಟು ವಂಚಕ ಜಾಯಮಾನದವರನ್ನು  ಹುಡುಕಿ ತೆಗೆಯುವದು ಅವರಿಗೆ ದೊಡ್ಡ ಮಾತೇ ಆಗಿರಲಿಲ್ಲ . 1757 ರ ಪ್ಲಾಸಿ ಕದನದ ರಣಭೂಮಿ  ಇವರ ಅಧಿಕಾರಶಾಹಿ ಕನಸಿಗೆ  ಗುದ್ದಲಿ ಪೂಜೆ ಮಾಡಿದರೆ; ಮುಂದಿನ ಬಕ್ಸಾರ್ ಕದನ ಭಾರತವನ್ನು ಸಂಪೂರ್ಣವಾಗಿ ಬ್ರಿಟಿಷರ  ಕೈಗೊಪ್ಪಿಸುವ ಎಲ್ಲ ಕೆಲಸವನ್ನು ಮಾಡಿ ಮುಗಿಸಿತು .

ಅಲ್ಲಿಗೆ ಅವರೇನೆಂಬುದು ನಮ್ಮ ಜನಕ್ಕೆ  ಅರ್ಥವಾಗತೊಡಗಿತ್ತು . ಆದರೇನು ಮಾಡುವುದು ಅವರಾಗಲೇ ಈ ನೆಲದಲ್ಲಿ ಬೇರುರಿದ್ದರು. ಮುಂದೆ ಸಹಾಯಕ ಸೈನ್ಯ ಪದ್ಧತಿ ,ದತ್ತಕ ಉತ್ತರಾಧಿಕಾರ ರದ್ದತಿಗಳಂತಹ ಕಾನೂನುಗಳನ್ನು ತಂದು ಒಂದೊಂದೆ ಪ್ರಾಂತ್ಯಗಳನ್ನು ಕಬಳಿಸತೊಡಗಿದಾಗ  ದೇಶಿಯ ರಾಜರುಗಳಪಾಲಿಗೆ ಇಂಗ್ಲಿಷರು ಬಿಸಿ ತುಪ್ಪದಂತಾಗಿದ್ದರು. ಆದರೆ ಆಕೆ ಭಾರತಾಂಬೆ ಅವಳು ಬಂಜೆ ಯಾಗಿರಲಿಲ್ಲ ದೇಶಕ್ಕಾಗಿ ಪ್ರಾಣವನ್ನು ನಗುನಗುತ್ತಾ ತ್ಯಾಗ ಮಾಡುವ ವೀರ ಮಕ್ಕಳು ಲೆಕ್ಕವಿಲ್ಲದಷ್ಟಿದ್ದರು. ಆದರೂ ಬೇಕಾಗಿದ್ದದ್ದು ಬೆಂಕಿ ಹತ್ತಿಕೊಳ್ಳಲು 1ಕಿಡಿ ಅಷ್ಟೆ . 1857 ರಲ್ಲಿ ಮೊದಲ ಬಾರಿಗೆ ಆ ಕಿಡಿ ಹತ್ತಿಕೊಂಡಿತು. ಬ್ಯಾರಕ್ ಪುರದ ಸೇನಾ ಶಿಬಿರದಿಂದ ಪ್ರಾರಂಭವಾದ ಕಿಡಿ ಕಿಚ್ಚಾಗಿತ್ತು.

 

ಮಂಗಲ್ ಪಾಂಡೆ ಎಂಬ ಮೊದಲ ಸಮಿತ್ತು ಈ ಯಜ್ಞ ಕುಂಡಕ್ಕೆ ಬಿಳುವದರೊಂದಿಗೆ ರಾಣಿ ಲಕ್ಷ್ಮೀಬಾಯಿ ,ತಾತ್ಯಾಟೋಪೆ, ನಾನಾಸಾಹೇಬರಂತಹ ವೀರ ಶಿರೋಮಣಿಗಳು ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು ಮಾತೃಭೂಮಿಯ ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆಯಲು ಆಹುತಿಯಾಗಿದ್ದರು.

ಆದರೆ ಆ ಕಿಚ್ಚು ಹೆಚ್ಚು ದಿನ ಉಳಿಯಲಿಲ್ಲ . ಕಂಪನಿಯ ಆಡಳಿತವನ್ನು ಕಸಿದು ಇಂಗ್ಲೆಂಡಿನ ರಾಣಿ ನೇರವಾಗಿ ಭಾರತವನ್ನು  ಆಳತೊಡಗಿದಳು. Her majesty  ಹರ್ ಮೆಜೆಸ್ಟಿ ಯ ಅಧಿಕಾರ ಮುದ್ರೆ ಭಾರತಾಂಬೆಯ ಸಂಕೋಲೆಯನ್ನು ಮತ್ತೂ ಬಿಗಿಗೊಳಿಸಿತ್ತು . ಮುಂದಿನದೆಲ್ಲ ಅನಾಹುತಗಳೆ.  ಒಡೆದು ಆಳುವ ನೀತಿ ,ಬಂಗಾಳದ ವಿಭಜನೆ ,ಹಿಂಸಾಚಾರ , ಕೋಮು ಗಲಭೆ , ಜಿಲಿಯನ ವಾಲ ಬಾಗ್ ನಂತಹ  ಹಲವು ಹಿಂಸೆಗಳನ್ನು ಆಕೆ ಸಹಿಸಿಕೊಳ್ಳಬೇಕಾಯಿತು . ನಿಧಾನವಾಗಿ ಸ್ವಾತಂತ್ರ್ಯದ  ಕಿಡಿಮತ್ತೆ  ಕಿಚ್ಚಾಗಿತ್ತು.  ಯಾವ ಹೆಸರು, ಯಾರಬಗ್ಗೆ, ಯಾವ ಪ್ರಾಂತ್ಯದ ಬಗ್ಗೆ ಹೇಳುವುದು ??  ದೇಶದ ಉದ್ದಗಲಕ್ಕೂ ಭಾರತ ಮಾತೆಯನ್ನು  ಸಂಕೋಲೆಗಳಿಂದ ಬಿಡಿಸುವ ವೀರಪುತ್ರರು ತಲೆ ಎತ್ತಿದರು .  ಕ್ರಾಂತಿವೀರರು ,  ಶಾಂತಿ ಮಂತ್ರ ಪಠಿಸುವವರು ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಹೋರಾಡಿದರು  ಮಡಿದರು . ಲಕ್ಷಾಂತರ ಜನರ ಸತ್ಯಾಗ್ರಹಗಳು , ತ್ಯಾಗ ಬಲಿದಾನಗಳು , ಹೋರಾಟಗಳು ಎಲ್ಲದರ ಫಲವಾಗಿ  ಆ ಶುಭದಿನ ಬಂದಿತ್ತು . 

ಆದರೆ ಶುಭದಿನದ ಜೊತೆ ಜೊತೆ ಆ ನೆಲ ಒಡೆದು ಎರಡಾಗುವ  ಶಾಪವನ್ನು ಭರಿಸಲೇಬೇಕಿತ್ತು . ಒಡೆದು ಆಳುವ ನೀತಿಬಿತ್ತಿದ ಬೀಜ ಮರವಾಗಿ ಬೇರೂರಿಯಾಗಿತ್ತು.  ಲಾರ್ಡ್ ಮೌಂಟ್ ಬ್ಯಾಟನ್  ಭಾರತದ ವಿಭಜನೆ ಹಾಗು ಭಾರತದ ಸ್ವಾತಂತ್ರ್ಯಕ್ಕೆ  ಹರ್ ಮ್ಯಾಜಿಸ್ಟಿ ಯ ಮುದ್ರೆ ಒತ್ತಿ ಶರ ಬರೆದಾಗಿತ್ತು .  ಇಲ್ಲಿದ್ದವರು ಅಲ್ಲಿಗೆ ಹೋಗುವ  ಅಲ್ಲಿಯವರು ಇಲ್ಲಿ ಬರುವ ನೆಲದ ಆಯ್ಕೆಯ  ಭರಾಟೆಗಳು ಹಿಂಸಾಚಾರದ ನಡುವೆ 1947ಆಗಸ್ಟ್ 14 ರ ರಾತ್ರಿ 12  ಗಂಟೆಗೆ ಸರಿಯಾಗಿ ರಾಷ್ಟ್ರಪತಿ ಭವನದ ಮೇಲಿದ್ದ ಇಂಗ್ಲೆಂಡಿನ  ಧ್ವಜ ಕೆಳಗಿಳಿದಿತ್ತು.  ಭಾರತದ ತ್ರಿವರ್ಣ ಧ್ವಜ ಮೇಲಿರಿತ್ತು.   15  ರ ಬೆಳಗು  ಸ್ವಾತಂತ್ರ್ಯದ ಸೂರ್ಯೋದಯವನ್ನು  ಹೊತ್ತು ಬಂದಿತ್ತು. ಭಾರತ್ ಮಾತಾ ಕಿ  ಜೈ ಎಂಬ  ಘೋಷಣೆಗಳು  ಆಕೆಯನ್ನು  ಪುಳಕಿತಗೊಳಿಸಿದ್ದವು.  ಆ ಸಂಭ್ರಮಕ್ಕೀಗ 77ವರ್ಷಗಳು ತುಂಬಿಯಾಗಿದೆ. 

ಸ್ವಾತಂತ್ರ್ಯಾನಂತರದ ದಾರಿ ಸುಗಮವಾಗೇನು ಇರಲಿಲ್ಲ .  ಒಂದು ಕಾಲದಲ್ಲಿ ಸಂಪತ್ತಿನ ಭಂಡಾರವಾಗಿದ್ದ ನೆಲ ಬಡ ರಾಷ್ಟ್ರ ಎನಿಸಿಕೊಳ್ಳ ಬೇಕಾಗಿತ್ತು ಹೊಸ ಸವಾಲುಗಳು ಹೊಸ  ಸಮಸ್ಯೆಗಳು.
ಆದರೇನಂತೆ ಆಕೆ  ಮತ್ತೆ  ಗಟ್ಟಿಯಾದಳು ಹೊಸ ರೂಪಗಳೊಂದಿಗೆ ಹೊಸ ಶಕ್ತಿಯೊಂದಿಗೆ ಮತ್ತೆ ಬೂದಿ ಇಂದ ಎದ್ದು ಬಂದಳು. ಸಮಸ್ಯೆಗಳು ಈಗಲೂ ಇವೆ ಹತ್ತು ಹಲವು ಆದರೇನಂತೆ ಅವೆಲ್ಲವುಗಳನ್ನು ಮೆಟ್ಟುತ್ತ ಆಕೆ  ಇನ್ನಷ್ಟು ಮತ್ತಷ್ಟು ಪ್ರಭಲಳಾಗುತ್ತಿರುವಳು .  ಸಭಲೆಯಾಗುತ್ತಿರುವಳು.  ಆಕೆಯನ್ನು ಅದಮ್ಯವಾಗಿ ಪ್ರೀತಿಸುವ ಆಕೆಯ ಮಕ್ಕಳೆ ಆಕೆಯ ಶಕ್ತಿಯಾದರೆ  ಸ್ವತಃ  ಆಕೆಯೇ ನಮ್ಮೆಲ್ಲರ ಹೆಮ್ಮೆ ,ಸ್ಫೂರ್ತಿ  ಅಭಿಮಾನ ಶಕ್ತಿ ನಮ್ಮ ಹೆಗ್ಗುರುತಾಗಿರುವಳು.  ಆಕೆ ನಮ್ಮೆಲ್ಲರ   ಪ್ರೀತಿಯ ಭಾರತಾಂಬೆ .  ಅವಳಿಗೆ ಸದಾ ಸರ್ವದಾ ನಮಸ್ಕಾರ ಮತ್ತೆ ಮತ್ತೆ ಜೈಕಾರ.

# Ayra writing contest
#IndiaindipendanceDay2024

ಭಾರತ್ ಮಾತಾ ಕಿ ಜೈ
@ಅಶ್ವಿನಿ ಕುಲಕರ್ಣಿ








 

Category:India



ProfileImg

Written by Ashwini Kulkarni