ಶಂಕರ ಜಯಂತಿ.

ಸಮಕಾಲೀನ ಭಾರತಕ್ಕೆ ಅವರ ಪ್ರಸ್ತುತತೆ.

ProfileImg
11 May '24
2 min read


image

ಶಂಕರ ಜಯಂತಿ.

ಆದಿ ಶಂಕರ. ಭಾರತ ದೇಶದ ಹೆಮ್ಮೆ, ತತ್ವಜ್ಞಾನಿಗಳಲ್ಲೇ ಸೂರ್ಯನಂತೆ ಪ್ರಜ್ವಲಿಸಿದವರು. ಸಮಕಾಲೀನ ಭಾರತದ ಮೇಲೆ ಅವರ ಜೀವನ, ಅವರ ಸಾಧನೆ ಮತ್ತು ಅವರ ಪ್ರಭಾವ ಶಾಶ್ವತ ವಾದದ್ದು. ಅವರ ಜಯಂತಿಯ ಹತ್ತಿರದಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಭಾಗ್ಯವೇ ಸರಿ.

ಆದಿ ಶಂಕರಾಚಾರ್ಯರ ಪ್ರತಿಪಾದನೆ ಅದ್ವೈತ ಸಿದ್ಧಾಂತ. ಅದ್ವೈತ ವೇದಾಂತದ ಮಾರ್ಗವನ್ನು ಬೆಳಗಿಸಿ ಪರಮಾತ್ಮನೋಂದಿಗೆ ವ್ಯಯಕ್ತಿಕ ಆತ್ಮದ ಏಕತೆಯನ್ನು ಸಾಧಿಸುವ ಮೂಲಕ ಪ್ರಪಂಚಕ್ಕೆ ಏಕತೆಯನ್ನು ಭೋಧಿಸಿದ ಮಹಾತ್ಮರು. ಅವರ ಜನ್ಮ ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ. ತಂದೆ ಶಿವಗುರು ಶರ್ಮ ಹಾಗೂ ತಾಯಿ ಆರ್ಯಾಂಬ.

ಜೀವನ ಮತ್ತು ಭೋಧನೆ.

ಚಿಕ್ಕ ವಯಸ್ಸಿನಲ್ಲೇ ವೇದಗಳು ಹಾಗೂ ಉಪನಿಷತ್ತುಗಳ ಪಾರಮ್ಯವನ್ನು ಎತ್ತಿ ತೋರಿಸಿದವರು. ಅತಿ ಕಠಿಣ ಬ್ರಹ್ಮಸೂತ್ರ ಗಳಿಗೆ ಭಾಷ್ಯವನ್ನು ಬರೆದವರು. ಭಗವದ್ಗೀತೆಗೆ ಭಾಷ್ಯವನ್ನು ರಚಿಸಿ ಅದರ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮೊದಲಿಗರು. ಅನೇಕ ದೇವತಾ ಸ್ತೋತ್ರಗಳನ್ನು ರಚಿಸಿ ಗಹನವಾದ ವಿಚಾರಗಳನ್ನು ಸಾಮಾನ್ಯ ಜನರಿಗೂ ತಿಳಿಯುವಂತೆ ಮಾಡಿದವರು. ಭಿನ್ನತೆಗೆ ಜಾಗವಿಲ್ಲದಂತೆ ಏಕತ್ವವನ್ನು ಪ್ರತಿಪಾದಿಸಿ ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಆಮ್ನಾಯ ಮಠಗಳನ್ನು ಸ್ಥಾಪಿಸಿ ದೇಶವನ್ನು ಒಂದೇ ಸೂತ್ರದಲ್ಲಿ ಬಂಧಿಸಿ ಅಮರರಾದವರು. ದಶನಾಮಿ ಸಂಪ್ರದಾಯವನ್ನು ಸ್ಥಾಪಿಸಿ ಧರ್ಮದ, ದೇಶದ ರಕ್ಷಣೆಗಾಗಿ ಪ್ರಚಂಡ ಸನ್ಯಾಸಿ ಪಡೆಯನ್ನು ಸ್ಥಾಪಿಸಿ ಇಂದಿಗೂ ಪ್ರಸ್ತುತ ವಾಗುವಂತೆ ಮಾಡಿದವರು. ಮೂರ್ತಿ ಪೂಜೆಯಲ್ಲಿ ಇರುವ ಭಿನ್ನತೆಯನ್ನು ಮನಗಂಡು ಪಂಚಾಯತನ ಪೂಜಾ ವ್ಯವಸ್ಥೆಯನ್ನು ಜಾರಿಗೆ ತಂದು ಬಿನ್ನತೆಯಲ್ಲಿ ಏಕತ್ವವನ್ನು ಪ್ರತಿಪಾದಿಸಿದವರು. ಮುಖ್ಯವಾದ ಆರು ಮತಗಳಲ್ಲಿರುವ ಅನೇಕ ಅವೈದಿಕ ಅಂಶಗಳನ್ನು ನಿರಾಕರಿಸಿ ಅವುಗಳನ್ನು ಒಂದೇ ಸೂತ್ರದಲ್ಲಿ ಬಂಧಿಸಿ ಷಣ್ಮತ ಸ್ಥಾಪನಾಚಾರ್ಯ ಎಂದು ಬಿರುದು ಪಡೆದವರು.

ಅವರ ಜೀವಿತ ಅವಧಿಯೇ 32 ವರುಷ. ಅವರು ರಚಿಸಿದ ಅಪಾರ ಸಾಹಿತ್ಯ ಅವರ ದೂರ ದೃಷ್ಠಿ, ಇಡೀ ಭಾರತವನ್ನು 8 ನೆ ಶತಮಾನದಲ್ಲಿ ನಾಲ್ಕು ಭಾರಿ ಕಾಲ್ನಡಿಗೆಯಲ್ಲಿ ಸುತ್ತಿ ಧರ್ಮ ಸ್ಥಾಪನೆ ಮಾಡಿರುವುದನ್ನು ಒಮ್ಮೆ ಅವಲೋಕಿಸಿದರೆ ಅವರ ಮಹತ್ವ ಅರಿವಾಗುವುದು. 

ಇವರು ಸಾಧಿಸಿದ ಕಾರ್ಯಗಳು ಅಸಮಾನ್ಯಾರಿಗೂ ಅಸಾಧ್ಯವಾದದ್ದು. ಆದುದರಿಂದಲೇ ಅವರು ಶಿವಾಂಶ ಸಂಭೂತರು.

 ಸಮಕಾಲೀನ ಭಾರತಕ್ಕೆ ಅವರ ಪ್ರಸ್ತುತತೆ.

ವಿಭಿನ್ನ ಸಂಸ್ಕೃತಿಯ ಅನೇಕ ಭಿನ್ನತೆಗಳಿಂದ ಕೂಡಿದ, ಭೇಧ ಭಾವದಿಂದ ಕಚ್ಚಾಡುತ್ತಿರುವ ಪ್ರಸ್ತುತ ಭಾರತಕ್ಕೆ ಅವರ ಏಕತ್ವ ವಾದ ಒಂದು ಸಂಜೀವಿನಿ ಇದ್ದಂತೆ. ಜಾತಿ ಮತವಿಲ್ಲದ ಧರ್ಮ ಬೇಧವಿಲ್ಲದ ನಮ್ಮ ದೇವರೇ ದೊಡ್ಡದು ಎಂಬ ಅಹಂಕಾರವಿಲ್ಲದ ಕೇವಲ ಸುಜ್ಞಾನಕ್ಕೆ ಪ್ರಾಶಸ್ಯ ನೀಡಿ ನಿರ್ಗುಣ ಬ್ರಹ್ಮವೇ ಸತ್ಯ, ನಮಗೆ ತೋರುತ್ತಿರುವ ಭೇಧ ಒಂದು ಕ್ಷಣಿಕ ಮಾಯೆ ಎಂಬ ಅವರ ಭೋಧನೆ ಎಲ್ಲಾ ನಾಗರಿಕರಿಗೂ ಪ್ರಸ್ತುತ. 

ಮುಕ್ತಾಯ.

ಇವರ ಅಪಾರ ಮೇಧಾಶಕ್ತಿಯನ್ನು ಕಂಡ ಅನೇಕ ತತ್ವಜ್ಞಾನಿಗಳು, ವಿಚಾರವಂತರು ಹಾಗೂ ಪ್ರಸ್ತುತ ರಾಜಕಾರಣಿಗಳು ಅವರ ಹುಟ್ಟು ಹಬ್ಬವನ್ನು ತತ್ವಜ್ಞಾನಿಗಳ ದಿನಾಚಾರಣೆಯಾಗಿ ಆಚರಿಸಬೇಕೆಂದು ತೀರ್ಮಾನಿಸಿದ್ದಾರೆ.

ಆದಿ ಶಂಕರರ ವಿರೋಧಿಗಳೂ ಸಹ ಅವರ ಪ್ರಸ್ತುತತೆಯನ್ನು ನಿರಾಕರಿಸಲು ಆಗದಂತೆ ಬಹಳ ಎತ್ತರದಲ್ಲಿ ನಿಂತಿದ್ದಾರೆ. 

ಕೊನೆಗೆ ಒಂದು ನಗುವಿನ ಪ್ರಸಂಗದ ಮೂಲಕ ಈ ಅಂಕಣವನ್ನು ಕೊನೆಗೊಳಿಸುತ್ತೇನೆ. 

ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಪ್ರಶ್ನೆಯನ್ನು ಕೇಳಿದರು ಶಂಕರರ ಅವತಾರವಾಗದೆ ಹೋಗಿದ್ದರೆ ನಮ್ಮ ಪ್ರಸ್ತುತ ಪರಿಸ್ಥಿತಿ ಏನು. ಅದಕ್ಕೆ ವಿದ್ಯಾರ್ಥಿ ನೀಡಿದ ಉತ್ತರ ಅವರು ಜನಿಸದೆ ಇದ್ದಿದ್ದರೆ ನೀವು ಈ ಪ್ರಶ್ನೆಯನ್ನು ಉರ್ದು ಭಾಷೆಯಲ್ಲಿ ಕೇಳುತ್ತಿದ್ದೀರಿ ನಾನು ಸಹ ಉತ್ತರವನ್ನು ಉರ್ದು ಭಾಷೆಯಲ್ಲೇ ಕೊಡಬೇಕಾಗಿತ್ತು ಎಂದು.

ಅವರ ಸಾಧನೆಯನ್ನು ತಿಳಿಸುವ ಪ್ರಖ್ಯಾತ ನುಡಿ.

ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ |

ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

ಅದ್ವೈತ ಸಿದ್ಧಾಂತದ ಪ್ರವರ್ತಕರು, ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠ ಸ್ಥಾಪಿಸಿ ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯಂದು ಅವರಿಗೆ ಕೋಟಿ ಪ್ರಣಾಮಗಳು.

ಶಂಕರರು ಅದ್ವಿತೀತರು, ಎಲ್ಲರಿಗೂ ಮೊದಲಿಗರು, ಎಲ್ಲಕ್ಕೂ ಮೊದಲಿಗರು ಅದಕ್ಕೆ ಅವರ ನಾಮಧೇಯ ಶ್ರೀ ಆದಿ ಶಂಕರ.

 

 

Category:Philosophy



ProfileImg

Written by Kumaraswamy S