Do you have a passion for writing?Join Ayra as a Writertoday and start earning.

ನನ್ನ ಬಾಳಪುಟದಲ್ಲಿ ನಿನ್ನ ಹೆಸರು - ಅಧ್ಯಾಯ 1

ನನ್ನ ಬಾಳಪುಟದಲ್ಲಿ ನಿನ್ನ ಹೆಸರು

ProfileImg
25 May '24
5 min read


image
 

ಕತ್ತಲು ಅದಾಗ ತಾನೇ ಕವಿಯತೊಡಗಿತ್ತು. ಧೋ ಎಂದು ಬಿಡದೇ ಸುರಿಯುತ್ತಿರುವ ಮಳೆ... ಜೊತೆಗೆ ಫಳ್  ಫಳ್  ಎಂದು ಫಳಾರನೆ ಮಿಂಚುವ ಮಿಂಚು... ಕಿವಿಗಡಚಿಕ್ಕುವ ಕರ್ಕಶವಾಗಿ  ಕಿವಿಗಪ್ಪಳಿಸಿ ಬೆಚ್ಚಿ ಬೀಳಿಸುವ ಗಡುಗು ಸಿಡಿಲು........

ಹೊರಗಡೆ   ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಲ್ಲಿ ನೆನೆದು ಒದ್ದೆಯಾಗಿ ಗಡ ಗಡ ನಡುಗುತ್ತ ಬಾಗಿಲ  ಪಕ್ಕವೇ ನಿಂತಿದ್ದ  ಯಾರೋ ಒಂದು ಹೆಂಗಸು ಮತ್ತು ಜೊತೆಗಿದ್ದ ಆ ಸಣ್ಣ ಹುಡುಗಿಯನ್ನು ಪಾರ್ವತಿಯವರು ಒಳಗೆ ಕರೆದರು .

" ಯಾರದು ಹೊರಗೆ...? ಬನ್ನಿ
ಒಳಗೆ..."

ಅವರಿಬ್ಬರೂ ತಮ್ಮ ಒದ್ದೆಯಾದ ಬಟ್ಟೆ ಯನ್ನು ಹಿಂಡಿಕೊಳ್ಳುತ್ತ ತಲೆಯಿಂದ ನೀರನ್ನು ಒರೆಸಿಕೊಳ್ಳುತ್ತ ಬೆದರಿದ ಗುಬ್ಬಚ್ಚಿಗಳಂತೆ ಒಳಗೆ ಬಂದು ಮೂಲೆಯಲ್ಲಿ ನಿಂತರು.

" ಬನ್ನಿ ಇಲ್ಲಿ ಕೂತ್ಕೊಳ್ಳಿ...." ಎಂದು ಪಾರ್ವತಿಯವರು ಸೋಫಾವನ್ನು ತೋರಿಸಿದರು. ಅವರ ಧ್ವನಿ ಯಾವಾಗಲೂ ಗಂಭೀರ ಮತ್ತು ಮೃದು.

" ಬೇಡ... ನಿಂತೇ ಇರ್ತೇವೆ...ಎಲ್ಲ ಒದ್ದೆ...." 
ದೇಹದಷ್ಟೇ ದನಿಯೂ ಒದ್ದೆ.....

"ಪರವಾಗಿಲ್ಲಮ್ಮ... ಬನ್ನಿ ಕೂತ್ಕೊಳ್ಳಿ..."
" ಆ ಹೆಂಗಸು ಮತ್ತು ಆ ಹುಡುಗಿ ಸೋಫಾದ ಮೂಲೆಯೊಂದರಲ್ಲಿ ಮುದುರಿ ಕುಳಿತರು. ಮಳೆಗೆ‌ ಬೆಚ್ಚಿ
ಬಿದ್ದ ಗುಬ್ಬಚ್ಚಿ ಮರಿಗಳಂತೆ...

" ಹೇಳಿ....ಯಾರು ನೀವು...??"

" ಅಮ್ಮ ನನ್ ಹೆಸರು ಸಕ್ಕೂ ಬಾಯಿ ಅಂತ... ಇವಳು ನನ್ ಮಗಳು ಧನಲಕ್ಷ್ಮಿ..."

"ಯಾವೂರಿನಿಂದ‌ ಬರ್ತಾ ಇದ್ದೀರಿ..??"

" ಹಾಸನ ಜಿಲ್ಲೆಯ ಒಂದು ಸಣ್ಣ ಹಳ್ಳಿ...ಕಾನಳ್ಳಿ....ಅಂತ..."

" ನಮ್ಮಿಂದ ಏನಾಗಬೇಕಿತ್ತಮ್ಮ...?"

ಸಕ್ಕೂಬಾಯಿ ಮುಸುಮುಸುನೆ ಅಳಲಾರಂಭಿಸಿದರು.. ಕಟ್ಟೆಯೊಡೆದ ಅಣೆಕಟ್ಟಿನಂತೆ ದುಃಖದಿಂದ ಅಳು ನುಗ್ಗಿ ನುಗ್ಗಿ ಬಂತು

ಪಾರ್ವತಿ ಅವರಿಗೆ ಇದೇನೂ ಹೊಸದಲ್ಲ... ಅನಾಥಾಶ್ರಮ ಒಂದರ ಒಡತಿ ಆದ ಮೇಲೆ  ಹೀಗೆ ಎಷ್ಟೋ ವರ್ಷಗಳಿಂದ ಈಚೆಗೆ ಆಶ್ರಮಕ್ಕೆ ಬರುವ ಹೆಂಗಸರ ಈ ರೀತಿಯ ಕರುಳು ಕಿತ್ತು ಬರುವಂತಹ ಅಳು ನೋಡಿ ನೋಡಿ ಅವರಿಗೆ ಅಭ್ಯಾಸವಾಗಿ ಹೋಗಿದೆ...
ಸಕ್ಕೂಬಾಯಿ ಅವರು ಮನಸು ಹಗುರಾಗುವಷ್ಟು ಅತ್ತು ಬಳಿಕ ಮುಂದುವರಿಸಿದರು

" ಆಶ್ರಯ ಬೇಡಿ ಬಂದಿದ್ದೇವಮ್ಮ... ಮನೆಯಲ್ಲಿ ಹೊರಗೆ ಹಾಕಿದಾರೆ..."

"  ಹೌದೆ....!? ಇಲ್ಲಿಗೆ ಬರಲು ಯಾರು ಹೇಳಿದರು..?"

" ಅಲ್ಲೇ ನಾನು ತೋಟದ ಕೆಲಸಕ್ಕೆ ಹೋಗ್ತಿದ್ನ.. ಅಲ್ಲಿ  ಒಬ್ಬಾಕೆ ಹೇಳಿದರು. ಇಲ್ಲಿಗೆ ಬರ್ಲಿಕೆ ಹಣ ಕೂಡ ಅವರೇ ಕೊಟ್ರು.... ಇನ್ನೊಂದು ದಿನ ಹೆಚ್ಚಿಗೆ ಅಲ್ಲಿರುತ್ತಿದ್ರೂ ನಮ್ ಪ್ರಾಣ ಹೋಗ್ತಿತ್ತು... ಹಾಗಾಗಿ ಎದ್ದೂ ಬಿದ್ದೂ ಬಂದ್ವಿ...." 
ಸಕ್ಕೂ ಬಾಯಿ ಅಳುತ್ತ ಅಳುತ್ತ ಹೇಳಿದಾಗ ಪಾರ್ವತಿಯವರು ಅವಳನ್ನು ಸಮಾಧಾನಿಸಿದರು.

" ನೋಡಮ್ಮ ಸಕ್ಕೂಬಾಯಿ.. ಇಲ್ಲಿಗೆ ಬಂದಿದ್ದೀಯ.... ಇನ್ನು ನೀನೇನೂ ಹೆದರ ಬೇಕಾಗಿಲ್ಲ..... ನೀನಿನ್ನು ಇಲ್ಲಿಯವಳೇ......ನೀನೂ ನಿನ್ ಮಗಳೂ ಇಲ್ಲಿ ಆರಾಮದಲ್ಲಿರಬಹುದು......"
ಎನ್ನುತ್ತ ಪಾರ್ವತಿಯವರು ಆ ಆಶ್ರಮದ ಓರ್ವ ಹಿರಿಯ ಸಹಾಯಕಿಯನ್ನು ಕರೆದು
" ನೋಡು ವಿಶಾಲ ಇವರಿಗೆ ಆ ಕೊನೆಯ ಕೋಣೆ ತೋರಿಸು...ಹಾಗೇ ಒಂದೆರಡು ಜೊತೆ ಬಟ್ಟೆಗಳನ್ನೂ ಕೊಡು...." ಎಂದರು. ಸಕ್ಕೂಬಾಯಿ ಮತ್ತು ಧನ ಲಕ್ಷ್ಮಿ ಇಬ್ಬರೂ ವಿಶಾಲಳ ಜೊತೆ ಹೋದರು. 
ಮೂಲೆಯಲ್ಲಿದ್ದ ಕೋಣೆಯೊಂದನ್ನು ವಿಶಾಲ ತೋರಿಸಿ ಅದರ ಬಾಗಿಲು ತೆಗೆದು ಒಳಗೆ ಹೋಗಲು ಹೇಳಿದರು. ಸಕ್ಕೂಬಾಯಿ ಮತ್ತು ಧನಲಕ್ಷ್ಮಿ ಆ ಕೋಣೆಯೊಳಗೆ ಹೊಕ್ಕು ಒಂದು ಮೂಲೆಯಲ್ಲಿ ಕುಳಿತರು. 
ದೇಹದ ಶಾಖಕ್ಕೆ ಬಟ್ಟೆಗಳು ಸಾಕಷ್ಟು ಒಣಗಿದ್ದವು.
ಅಷ್ಟರಲ್ಲಿ ವಿಶಾಲ ಅವರು ಒಂದೆರಡು ಜೊತೆ ಬಟ್ಟೆಗಳನ್ನು ಇಬ್ಬರಿಗೂ ಕೊಟ್ಟಳು.   ಇಬ್ಬರೂ ಅಲ್ಲೆಲ್ಲೋ ಇದ್ದ ಸ್ನಾನದ ಕೋಣೆಗೆ ತೆರಳಿ ಸ್ನಾನ ಮಾಡಿ ಬಂದು ವಿಶಾಲ ಕೊಟ್ಟ  ಬಟ್ಟೆ ಧರಿಸಿದರು. 
ಆ ಕ್ಷಣ ಇಬ್ಬರಿಗೂ ಬಹಳ‌ ನಿರಾಳವೆನಿಸಿತು. ಯಾವುದೋ ಒಂದು ಕತ್ತಲೆಯ ಕೂಪದಿಂದ   ಹೇಗೋ ಓಡಿ ಬಂದಾಗಿತ್ತು. ಮುಂದಿನ ಬದುಕು ಇಲ್ಲೇ ಪೂರ್ತಿ ಕಳೆಯಬೇಕಷ್ಟೆ....

ಅಷ್ಟರಲ್ಲಿ ಯಾರೋ ಇಬ್ಬರು ಮಕ್ಕಳು ಬಂದು  ಇವರನ್ನು ಊಟಕ್ಕೆ ಕರೆದರು. 
ಊಟದ ಹಾಲ್ ಗೆ ಪ್ರವೇಶಿಸಿದ ತಕ್ಷಣ ಆಗಲೇ  ಅಲ್ಲಿ ಎಲ್ಲರೂ ಊಟಕ್ಕೆ ಸೇರಿದ್ದರು. ಬಹಳಷ್ಟು ಮಂದಿ ವೃದ್ಧರು, ಅಸಹಾಯಕರು, ವಿಕಲಚೇತನರು, ಎಲ್ಲರನ್ನೂ ಕಾಣುತ್ತಿದ್ದಂತೆ ಸಕ್ಕೂ ಬಾಯಿಗೆ ಎದೆ ಧಸಕ್ಕೆನಿಸಿತು. ಈ ಪ್ರಪಂಚದಲ್ಲಿ ಎಷ್ಟೆಷ್ಟೋ ಜನರು ಪಡಲಾಗದ  ಕಷ್ಟ ಅನುಭವಿಸುತ್ತ ಬದುಕುವವರಿದ್ದಾರೆ.....!! ಅದೆಷ್ಟು ಮಂದಿ ಯಾರೂ ಇಲ್ಲದ ಅನಾಥರು...!!!!! ಪ್ರತಿಯೊಬ್ಬರ ಹಿಂದೆಯೂ ಅದೆಷ್ಟು ನೋವಿನ ಕಥೆಗಳಿವೆಯೋ.... ಎಷ್ಟೆಷ್ಟು ಕಷ್ಠಗಳನ್ನು ಅನುಭವಿಸಿರಬಹುದೋ..

ಅಪ್ಪ ಅಮ್ಮನನ್ನು ಚಿಕ್ಕಂದಿನಲ್ಲೇ ಕಳಕೊಂಡ ನತದೃಷ್ಟ ಮಕ್ಕಳು... ಇಲ್ಲಿದ್ದಾರೆ....! ಸಕ್ಕೂ ಬಾಯಿಗೆ ತನ್ನ ಕಷ್ಟಗಳು ಮರೆತೇ ಹೋದವು.

ಅವಳ ಆಗಮನ ಹೆಚ್ಚಿನವರಿಗೆ ಗೊತ್ತೇ ಆಗಲಿಲ್ಲ. ಇನ್ನು ಕೆಲವರು ಇವರನ್ನು ಯಾವುದೋ ಒಂದು ವಿಚಿತ್ರ ಪ್ರಾಣಿಯನ್ನು ನೋಡಿದವರಂತೆ‌ ನೋಡಿ ಮತ್ತೆ ತಮ್ಮ ಪಾಡಿಗೆ ತಾವು ಊಟ ಮಾಡ ತೊಡಗಿದರು. ಸಕ್ಕೂ ಬಾಯಿ ಅಳುಕುತ್ತ ಅಳುಕುತ್ತಲೇ ಊಟ ಮಾಡಿದರು. ಎಲ್ಲರೂ ಅವರವರ ಲೋಕದಲ್ಲಿ...ಮುಳುಗಿಹೋಗಿದ್ದರು. 
ಬಿಸಿ ಬಿಸಿ ಗಂಜಿ ಚಟ್ನಿ  ಬಹಳ ರುಚಿ ಎನಿಸಿತು. 
ಊಟ ಮಾಡಿ ಬಂದು ಮಲಗಿದ ಸಕ್ಕೂ ಬಾಯಿಗೆ ನಿದ್ದೆ ಹತ್ತುತ್ತಲೇ ಇಲ್ಲ.....ಮನದ ತುಂಬಾ ಹಳೆಯ ಕನವರಿಕೆಗಳು........

                   ***

ಹಾಸನ ದ ಒಂದು ಹಳ್ಳಿಯಲ್ಲಿ ಸಕ್ಕೂಬಾಯಿಯ ವಾಸ... ಐದೋ ಆರನೆಯೋ ತರಗತಿಗಷ್ಟೇ ಹೋದದ್ದಿರಬೇಕು.... ಆ ಮೇಲೆ ಓದಿಗೆ ಶರಣು ಹೊಡೆದು ಮನೆಯಲ್ಲೇ ಇರತೊಡಗಿದ್ದಳು ಸಕ್ಕೂ ಬಾಯಿ...

ಅಪ್ಪ ಅಮ್ಮ ಸ್ವಲ್ಪವೇ ದೂರ ಇದ್ದ ಎಸ್ಟೇಟ್ ಒಂದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು....
ಒಂದೆರಡು ವರ್ಷ ಮನೆಯಲ್ಲೇ ಕಳೆದ ಸಕ್ಕೂ ಬಾಯಿಗೆ ದಿನಗಳೆದಂತೆ ತುತ್ತು ತುತ್ತಿಗೂ ಅಸಹನೆಯ ಮಾತುಗಳು ಕೇಳಿ ಬರತೊಡಗಿದಾಗ ತಾನೂ ಇನ್ನು ದುಡಿಯಲು ಹೋಗುವುದೇ ಒಳಿತು ಎನಿಸತೊಡಗಿತು. ಹೋಗುವುದಾದರೂ ಎಲ್ಲಿಗೆ...? ತನ್ನ ಈ ವಿದ್ಯಾಭ್ಯಾಸಕ್ಕೆ ಸಿಗುವ ಕೆಲಸವಾದರೂ ಏನು....!?
ಕೆಲವು ದಿನಗಳ ತೊಳಲಾಟದ ಬಳಿಕ ಉತ್ತರ ಸಿಕ್ಕಿತು. ತಂದೆ ತಾಯಿಯರ ಜೊತೆಗೆ ತಾನೂ ತೋಟದ ಕೆಲಸಕ್ಕೇ ಎಸ್ಟೇಟ್ ಗೆ  ಹೋಗುವುದು...

ಹಾಗೆ  ತೋಟದ ಕೆಲಸ  ಮಾಡಲಾರಂಭಿಸಿದ ಮೇಲೆ ತೋಟದ ಕೆಲಸ ಮಾಡುವ ಜ್ಞಾನ ದೊರಕತೊಡಗಿತು.  ಸ್ವಲ್ಪ ಮಟ್ಟಿನ ಹಣ ಸಂಪಾದನೆಯೂ ಆಗತೊಡಗಿತು. ಮನೆಯಲ್ಲಿಯೂ ಬೈಗುಳಗಳ ಸುರಿಮಳೆ ಕಡಿಮೆಯಾಗಿ ಅವಳ ಮಾತುಗಳಿಗೂ ' ಬೆಲೆ' ಸಿಗತೊಡಗಿತು. 
ಎಸ್ಟೇಟ್ ಕೆಲಸ ಎಂದ ಮೇ ಲೆ ಅಲ್ಲಿ ಒಂದೆರಡು ಕೆಲಸಗಾರರೇ..? ನೂರಾರು ಕೆಲಸಗಾರರು ಇರ್ತಾರೆ. ಅಷ್ಟೇ ಮನೋಭಾವದ ಕೆಲಸಗಾರರೂ ಇರುತ್ತಾರೆ. ಹೆಂಗಸರು ಗಂಡಸರು ಯುವಕರು ಯುವತಿಯರು  ಈಗಷ್ಟೇ ಕೆಲಸಕ್ಕೆ ಸೇರಿದವರು, 'ಮಹಾನ್' ಅನುಭವಿಗಳು......ಹೀಗೆ ವಿಧ ವಿಧವಾದ ಕೆಲಸಗಾರರು...‌ 
ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವಾಗ ಬೇರೆ ಬೇರೆ ಜನರ ಸಂಪರ್ಕವಾಗತೊಡಗಿತು. ದಿನಗಳೆದಂತೆ ಆ ಮನುಷ್ಯರ ವಿವಿಧ ವರ್ತನೆಗಳೂ ಪರಿಚಯವಾಗತೊಡಗಿದವು.  ಬಹುತೇಕ ಜನರು ಕೆಲಸ ಹೇಳಿಕೊಡುವಾಗ  ಅತಿಯಾದ ದರ್ಪ ತೋರುತ್ತಿದ್ದರು. ಸ್ವಲ್ಪ ಕೂಡ ಸಹನೆ ತಾಳ್ಮೆ ಪ್ರೀತಿಯಿಂದ ಹೇಳಿಕೊಡುವ ಜಾಯಮಾನವೇ ಅಲ್ಲಿರಲಿಲ್ಲ... ಸ್ವಲ್ಪ ತಪ್ಪಿದರೂ ಕರ್ಕಶವಾದ ಹೀನಾಯಮಾನವಾದ ಬೈಗಳು.  ಅವರ ವರ್ತನೆ ನೋಡುತ್ತಿದ್ದರೆ ಇವರು ಹುಟ್ಟುವಾಗಲೇ ಕೆಲಸವನ್ನು ಕಲಿತುಕೊಂಡೇ‌  ಬರುತ್ತಿದ್ದರೇನೋ ಎಂದನಿಸುತ್ತಿತ್ತು..
ಮನೆಗೆ ಬಂದು ಅಮ್ಮನಲ್ಲಿ ಹೀಗೆ ಹೇಳಿಕೊಂಡರೆ  ಕೆಲಸ ಕಲಿಯುವಾಗ ಎಲ್ಲರೂ ಅಷ್ಟೆ... ಎಲ್ಲರೂ ದಬಾಯಿಸುವವರೇ... ನಮಗೆ ಕೆಲಸದ ಕೌಶಲ್ಯ ಕಲಿಯುವುದು ಮುಖ್ಯ.... ಕೌಶಲ್ಯ ಸಿದ್ಧಿಸುವ ತನಕ ಹೀಗೆ ಅವಮಾನ ಎದುರಿಸಲೇ ಬೇಕು. ನಿಧಾನವಾಗಿ ಕೆಲಸದ ಪಟ್ಟುಗಳು ಗೊತ್ತಾದ ಮೇಲೆ ನಮಗೂ ಆತ್ಮವಿಶ್ವಾಸ ಬರುತ್ತದೆ. ಆಗ ನಮಗೆ ಇಂತಹ ಬೈಗಳುಗಳು ಕಡಿಮೆಯಾಗುತ್ತವೆ ಎಂದರು. 
ಸಕ್ಕೂ ಬಾಯಿ ಗೆ ಅಲ್ಲಿ ಸಿಗುತ್ತಿದ್ದ ಸಂತೋಷವೆಂದರೆ ವಾರದ ಕೊನೆಗೆ ಸಿಗುವ ಸಂಬಳ ಮಾತ್ರ. ಉಳಿದಂತೆ  ಪ್ರತೀ ಕ್ಷಣ ವ್ಯಂಗ್ಯ.. ಬೈಗಳು ಅಷ್ಟೆ...
ಸಂಪಾದನೆ ಶುರುವಾದ ಕಾರಣ ಮನೆಯಲ್ಲಿ  ಅಪ್ಪ ಅಮ್ಮ ಆದರಿಸುತ್ತಿದ್ದರು....
ಸಂಪಾದನೆ ಇಲ್ಲದ ಮನುಷ್ಯನನ್ನು ಯಾರೂ ಗೌರವಿಸುವುದಿಲ್ಲ ಎಂದು ಸಕ್ಕೂಬಾಯಿಗೆ ಮನವರಿಕೆಯಾಗಿತ್ತು.
ಅವಮಾನ  ಮಾಡ್ತಾರೆ ಅಂತ ಕೆಲಸಕ್ಕೆ ಹೋಗದಿರಲು ಸಾಧ್ಯವೇ ಇರಲಿಲ್ಲ....

ಒಂದೆರಡು ವರ್ಷಗಳು ಕಳೆದಿರಬಹುದು. ಸಕ್ಕೂ ಬಾಯಿಯೂ ಈಗ ಅನುಭವಿ ಕೆಲಸಗಾರಳೇ.... ಸಕ್ಕೂಬಾಯಿ ಈಗ  ಪ್ರೌಢ ಯುವತಿಯಾಗಿದ್ದಳು.... ಸರಳ ಸಹಜ ಸುಂದರಿ..... ಹೆಚ್ಚಿನವರು ಅವಳನ್ನು ಎವೆಯಿಕ್ಕದೆ ನೋಡುವುದು ಅವಳ ಗಮನಕ್ಕೂ ಬಂದಿತ್ತು. ಆ ನೋಟಗಳು ಅವಳೆದೆಯಲ್ಲಿ ಏನೋ ಹಿತವಾದ ಕಂಪನಗಳನ್ನು ಉಂಟುಮಾಡುತ್ತಿದ್ದುದು ಸುಳ್ಳಲ್ಲ..

ಒಂದು ಸಲ ಹೀಗೇ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಯಾರೋ ಒಬ್ಬ ಯುವಕನ ಪರಿಚಯವಾಯಿತು.  ಮೊದಲೇ ಏರತೊಡಗಿದ್ದ ಹರೆಯದ ಕಾವು...

ಯಾಕೋ ಅವನ ಬಳಿ ಮಾತನಾಡಬೇಕೆಂಬ ಸೆಳೆತ ಸಕ್ಕುವಿಗೆ ಉಂಟಾಗತೊಡಗಿತು. ಅವನ ತೆಳುವಾದ ಸದೃಢ  ಪ್ರಮಾಣಬದ್ಧವಾದ  ಬಲಶಾಲಿ ಮೈ ಕಟ್ಟು, ಆತನ ನಡಿಗೆಯ ಗತ್ತು... ಚೂಪಾದ ದೃಷ್ಟಿ, ಮುದ್ದುಮುದ್ದಾಗಿ ಮೋಹ  ಉಕ್ಕಿಸುವ ನಗು... ಎಲ್ಲವೂ ಸಕ್ಕುವನ್ನು ನಿತ್ಯವೂ ಎಡೆಬಿಡದೆ ಕಾಡತೊಡಗಿತು. ಅವನ ಜೊತೆಯಾಗಿ ಮಾಡುವ ಕೆಲಸಗಳ ಕಡೆಗೇ ಆಕೆ  ಸೂಜಿಗಲ್ಲಿನಂತೆ ಸೆಳೆಯಲ್ಪಡುತ್ತಿದ್ದಳು.  ಕೆಲವೊಮ್ಮೆ ಆತನನ್ನು ನೋಡುತ್ತ ನೋಡುತ್ತಲೇ ಆಕೆ ಮೈ ಮರೆತೇ ಹೋಗುತ್ತಿದ್ದಳು. ಆತನ ಒಂದು ನಗುವಿಗೆ ಆಕೆ ಬಹುವಾಗಿ ಹಂಬಲಿಸುತ್ತಿದ್ದಳು.

ಕೊನೆಗೂ  ಒಂದು ದಿನ ಆತ ಅವಳ ಬಳಿ ಮಾತಾಡಿಯೇ ಬಿಟ್ಟ..
ಹೆದರಿಕೆಯೋ ಸಂತೋಷವೋ ರೋಮಾಂಚನವೋ  ಉದ್ವೇಗವೋ ಒಟ್ಟಲ್ಲಿ ಸಕ್ಕು ಗಡಗಡ ನಡುಗಿದ್ದಳು.ಆಕೆಯ ಎದೆಬಡಿತ ಅವಳಿಗೇ ಕೇಳುವಷ್ಟು ಜೋರಾಯಿತು.  ಅವನ ಪ್ರಶ್ನೆಗೆ ಆಕೆ ಏನು ಉತ್ತರಿಸಿದಳೆಂದೇ ಆಕೆಗೆ ನೆನಪಿಲ್ಲ..

ಆ ದಿನ ಮನೆಗೆ ಹಿಂತಿರುಗುವಾಗ ಆಕೆಯ ಕಾಲುಗಳು ನೆಲದ ಮೇಲಿರಲಿಲ್ಲ.... ಯಾವುದೋ ಒಂದು ನಶೆಯಲ್ಲಿ ತೇಲಾಡುತ್ತಿರುವಂತೆ ಅವಳಿಗೆ ಅನಿಸುತ್ತಿತ್ತು. ಮನೆಗೆ‌ ಬಂದವಳೇ
ಯಾರೊಂದಿಗೂ‌ ಬೆರೆಯದೆ ತನ್ನಷ್ಟಕ್ಕೆ ಇರತೊಡಗಿದಳು. ಕಾರಣ ವಿಲ್ಲದೆ  ಸುಮ್ಮ ಸುಮ್ಮನೇ ಅವಳ ತುಟಿಗಳಲ್ಲಿ ನಗುವರಳತೊಡಗಿತು..

ಬೆಳಗ್ಗೆ ಎದ್ದ ಬಳಿಕ  ಆಕೆ ದಿನಾ
' ಇವತ್ತು ಅವನ ಜೊತೆ ಕೆಲಸ ಮಾಡುವ ಹಾಗಾಗಲಿ' ಎಂದು ದೇವರ ಬಳಿ ಬೇಡತೊಡಗಿದ್ದಳು.
ಅವಳ ಕರೆಗೆ ದೇವರು ಓಗೊಟ್ಟನೋ ಎನ್ನುವಂತೆ ಒಂದಲ್ಲ ಒಂದು ಕಾರಣದಿಂದ ಅವನ ಜೊತೆಯಲ್ಲಿ ಕೆಲಸ ಮಾಡುವ ' ಭಾಗ್ಯ' ದೊರಕಿತು ಸಕ್ಕೂ ಬಾಯಿಗೆ....

ಅವನ ಒಂದು ಮಾತು... ಒಂದು ನಗು......ಇಷ್ಟಕ್ಕೇ ಸಕ್ಕೂ ಬಾಯಿ ಸೋತು ಸುಣ್ಣವಾಗುತ್ತಿದ್ದಳು. ಆಕೆ ತನ್ನೆಡೆಗೆ ಬೀರುವ  ದೈನ್ಯಪೂರಿತ ಪ್ರೇಮಭರಿತ ನೋಟ ಅವನನ್ನೂ ಕದಲಿಸಿತು.  ಅವನಿಗೂ ಅವಳ  'ಕಷ್ಟ' ಅರ್ಥವಾಗತೊಡಗಿತ್ತು....

ಮಾತುಗಳು‌ ನಿಧಾನವಾಗಿ ಜಾಸ್ತಿಯಾಗತೊಡಗಿದವು.  ಮಾತುಗಳು ಜಾಸ್ತಿಯಾದಂತೆ ದನಿಯೂ ತಗ್ಗತೊಡಗಿತ್ತು.

ಅವರಿಬ್ಬರ ನಡುವಿನ ' ಬಾಂಧವ್ಯ' ಹೆಚ್ಚಿನವರ ಬಾಯಿಗೆ ಆಹಾರವಾಗ ತೊಡಗಿತು. ಕೊನೆ ಕೊನೆಗೆ ಎಲ್ಲರ ಬಾಯಿಯಲ್ಲೂ ಅವರದೇ ಮಾತು.
ಆದರೆ ಸಕ್ಕೂ ಬಾಯಿಗೆ ಇದಾವುದರ ಪರಿವೆಯೇ ಇಲ್ಲ...!

ಒಂದು ದಿನ ಸಕ್ಕೂ ಬಾಯಿಯ ಅಮ್ಮ ಅವಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಏನೇ ನೀನು..?. ಆ ಮಾತೇಶ ನ ಬಳಿ ಬಹಳ ವ್ಯವಹಾರ ಇಟ್ಕೊಂಡಿದೀಯ... ಎಲ್ಲರ ಬಾಯಲ್ಲೂ ನಿಮ್ಮದೇ ಮಾತು. ನನಗೆ ಕೇಳಿ ಕೇಳಿ ಸಾಕಾಗಿದೆ  . ನಾಚಿಕೆಯಾಗೋದಿಲ್ವ ನಿಂಗೆ..?"

ಈಗ ಸಕ್ಕೂಬಾಯಿ ಯಾರಿಗೂ ಹೆದರುವ ಪೈಕಿ ಆಗಿರಲಿಲ್ಲ. ಅವಳನ್ನು ಅಗತ್ಯಕ್ಕಿಂತ ಹೆಚ್ಚು ಹೆದರಿಸುವ ಧೈರ್ಯವೂ ಯಾರಿಗೂ ಇರಲಿಲ್ಲ... ಯಾಕೆಂದರೆ ಅವಳೂ ಈಗ ಸಂಪಾದನೆ ಉಳ್ಳವಳು. ಆ ಮನೆಯ ಆರ್ಥಿಕತೆಗೆ ಅವಳ ದುಡ್ಡೂ ಅಗತ್ಯವೇ.....

" ನನಗೆ ಎಲ್ಲವೂ ಗೊತ್ತಿದೆ ಅಮ್ಮ... ನನಗೆ ಯಾರೂ ತಿಳಿ ಹೇಳುವ ಅಗತ್ಯ ಇಲ್ಲ..." ಎಂದು‌ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಳು. ಅವಳ ಬಾಯಿಯ ಜೋರಿಗೆ ಅಮ್ಮನ ಬಾಯಿ ಬಂದ್ ಆಗಿತ್ತು. ಮತ್ತೆ ಯಾವ ಮಾತೂ ಯಾರೂ ಆಡಲಿಲ್ಲ..

ಮಾತೇಶ ಮತ್ತು ಸಕ್ಕೂಬಾಯಿಯ ಪ್ರೇಮ ವ್ಯವಹಾರ ಬಹಳ ಗಾಢವಾಗತೊಡಗಿತು. ಒಬ್ಬರಿಗೊಬ್ಬರು ಅದೆಷ್ಟು ಹಚ್ಚಿಕೊಂಡರು ಎಂದರೆ ಒಂದರೆಕ್ಷಣವೂ ಬಿಟ್ಟಿರಲಾರದಷ್ಟು.......

ಮುಗೀಲಿಲ್ಲ...
ಇನ್ನೂ ಇದೆ...
ಮುಂದಿನ ಅಧ್ಯಾಯ ಓದ್ತೀರಿ ತಾನೇ..??
🙏🙏♥
 


 ProfileImg

Written by Sooryanarayana Bhat. T.