ಮಾತೇಶ ಮತ್ತು ಸಕ್ಕೂಬಾಯಿಯ ಒಡನಾಟ ಇಡೀ ಎಸ್ಟೇಟ್ ನವರ ಬಾಯಿಗೆ ಆಹಾರವಾಯಿತು. ಮಾತೇಶ ಬೇಕೆಂದೇ ಅವಳಿಂದ ಅಂತರವನ್ನು ಕಾಯ್ದುಕೊಂಡಷ್ಟೂ ಆಕೆ ಆತನೆಡೆಗೆ ತೀವ್ರವಾಗಿ ಸೆಳೆಯಲ್ಪಡುತ್ತಿದ್ದಳು. ಅಪ್ಪ ಅಮ್ಮನ ಗದರುವಿಕೆ ಬಡಿಯುವಿಕೆ ಮನೆಯೊಳಗೆ ಕೂಡಿ ಹಾಕುವಿಕೆ ಮನ ಒಲಿಸುವಿಕೆ ಯಾವುದೂ ಫಲ ಕೊಡಲಿಲ್ಲ. ಸಕ್ಕೂಬಾಯಿಗೆ ಅವನ ಹೊರತು ಬೇರೆ ಯೋಚಿಸುವುದೂ ಕೂಡ ಸಾಧ್ಯವಿರಲಿಲ್ಲ.....
ಕೊನೆಕೊನೆಗೆ ಅವರು ಕೆಲಸ ಮಾಡುವಲ್ಲಿಂದ ತಪ್ಪಿಸಿಕೊಂಡು ಅಲ್ಲಿ ಇಲ್ಲಿ ಕಳ್ಳಾಟವಾಡ ತೊಡಗಿದರು..
ಒಂದು ದಿನ ಇದ್ದಕ್ಕಿದ್ದ ಹಾಗೆ ಸಕ್ಕೂಬಾಯಿ ಮತ್ತು ಮಾತೇಶ ಕಾಣೆಯಾಗಿ ಬಿಟ್ಟರು.....
***
ಇಬ್ಬರೂ ಎಸ್ಟೇಟ್ ನಿಂದ ತಪ್ಪಿಸಿಕೊಂಡು ಓಡಿ ಹೋದ ಮೇಲೆ ಸಕ್ಕೂ ಬಾಯಿಯನ್ನು ಮಾತೇಶ ಅಲ್ಲಿ ಇಲ್ಲಿ ಸುತ್ತಾಡಿಸಿದ. ಜೇನಿನಲ್ಲಿ ಅದ್ದಿ ತೆಗೆದಂತಹ ಅವನ ಭರವಸೆಯ ಮಾತುಗಳು ,ಅವನ ನಗು, ಅವನ ಕಾಳಜಿ , ಯಾವುದೇ ದುರಭ್ಯಾಸಗಳು, ಕೆಟ್ಟ ಚಟಗಳು ಇಲ್ಲದ ಅವನ ಸ್ವಭಾವ ಅವಳನ್ನು ಮಂತ್ರ ಮುಗ್ಧಳನ್ನಾಗಿಸಿತ್ತು. ತನ್ನ ಪೂರ್ವ ಜನ್ಮದ ಪುಣ್ಯದ ಫಲವೇ ತನ್ನೀ ಸುಖಕ್ಕೆ ಕಾರಣ ಎಂದವಳು ವಿಶ್ಲೇಷಿಸಿದ್ದಳು...
ಕೊನೆಗೆ ಯಾವುದೋ ಒಂದು ಸಣ್ಣ ದೇವಸ್ಥಾನದಲ್ಲಿ ಮಾತೇಶ ಅವಳ ಕೊರಳಿಗೆ ' ತಾಳಿ' ಬಿಗಿದ. ಆ ಕ್ಷಣ ಸಕ್ಕೂಬಾಯಿ ರೋಮಾಂಚಿತಳಾದರೂ ತಾನು ಅಪ್ಪ ಅಮ್ಮ ಇದ್ದೂ ಹೀಗೆ ಅನಾಥಳಂತೆ ತಾಳಿಕಟ್ಟಿಸಿಕೊಳ್ಳ ಬೇಕಾಯಿತಲ್ಲ ಎನಿಸಿ ಬಹಳವೇ ದುಃಖವೂ ಆಯಿತು. ಅವಳ ದುಃಖವನ್ನರಿತ ಮಾತೇಶ ಅವಳನ್ನು ಬಹುವಾಗಿಯೇ ಸಂತೈಸಿದ.
ಅಲ್ಲೀ ಇಲ್ಲಿ ಸುತ್ತಾಡಿ ಹಾರಾಡಿ ಇಬ್ಬರ ಕೈಯಲ್ಲೂ ಹಣ ಖಾಲಿ.....!!!!
" ಇನ್ನೇನು ಮಾಡೋದು....??"
ಮೊತ್ತ ಮೊದಲಬಾರಿಗೆ ಸಕ್ಕೂ ಬಾಯಿ ವಾಸ್ತವಕ್ಕಿಳಿದಿದ್ದಳು....
" ಮೊದಲಿದ್ದಲ್ಲಿಗೇ ಕೆಲಸಕ್ಕೆ ಹೋಗೋದು....."
ಮಾತೇಶ ತೀರಾ ಸಹಜವಾಗಿ ಹೇಳಿದಾಗ ಸಕ್ಕೂ ಬಾಯಿ ನಿರಾಸೆ ಹಾಗೂ ದುಃಖಿತಳಾದಳು. ಪುನಃ ಅದೇ ಜಾಗಕ್ಕೆ ಕೆಲಸಕ್ಕೆ ಹೋಗಬೇಕಾ...?
" ಮತ್ತೆ ಹೀಗೇ ಉಪವಾಸ ಸಾಯೋಣವಾ....?"
ಮೊದಲಬಾರಿಗೆ ಮಾತೇಶನ ಮಾತು ಮಾಧುರ್ಯ ಕಳೆದುಕೊಂಡಿತ್ತು. ಆ ಮಾತು ಆಗಸದಲ್ಲಿ ಹಾರಾಡಿಕೊಂಡಿದ್ದ ಸಕ್ಕೂಬಾಯಿಯನ್ನು ರಪ್ಪೆಂದು ಭೂಮಿಗೆ ಅಪ್ಪಳಿಸುವಂತೆ ಮಾಡಿತ್ತು.
"ಬೇರೆ ಎಲ್ಲಾದರೂ ಕೆಲಸಕ್ಕೆ ಹೋದರಾಗೋದಿಲ್ಲವೇ...?"
" ಎಲ್ಲೀಂತ ಕೆಲಸ ಹುಡುಕೋದು..?"
" ಕೆಲಸ ಮಾಡುವವರಿಗೆ ಕೆಲಸದ ಕೊರತೆ ಇದೆಯಾ,....?"
" ಇನ್ನು ಎಲ್ಲೆಲ್ಲೋ ಹೋಗಿ ಕೆಲಸ ಕೇಳೋಕೆ ನನ್ನಿಂದ ಸಾಧ್ಯ ಇಲ್ಲ..."
" ಮತ್ತೆ...??"
" ಮೊದಲಿದ್ದಲ್ಲಿಯೇ ಕೆಲಸ ಮಾಡೋಣ..."
ಸಕ್ಕೂಬಾಯಿ ಮೊದಲಬಾರಿಗೆ ತಲ್ಲಣಿಸಿದಳು. ಮತ್ತೆ ಅದೇ ಜಾಗಕ್ಕೇ ಹೋಗುದಾ...!!!
"ಮರ್ಯಾದೆ ಹೋದ ಜಾಗದಲ್ಲಿಯೇ ಪಡೆದುಕೊಳ್ಳೋಣ"
ಎಂದವನ ಮಾತಿಗೆ ಪ್ರತಿಕ್ರಿಯೆಯಾಡಲಿಲ್ಲ ಸಕ್ಕೂ. ಅನುಸರಿಸಲೇ ಬೇಕಿತ್ತು.
ಅಂತೂ ಮರುದಿವಸದಿಂದ ಅದೇ ಎಸ್ಟೇಟ್ ಕೆಲಸಕ್ಕೆ ಹೋಗತೊಡಗಿದರು. ಬಹಳಷ್ಟು ಮಂದಿ ಅವರನ್ನು ವಿಚಿತ್ರವಾಗಿ ನೋಡಿದರು. ಅವರೆಲ್ಲರೂ ಅವಳ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ನೋಡಿ ಪೆಚ್ಚಾಗಿ ತಮ್ಮ ತಮ್ಮೊಳಗೇ ಕುಹಕದ ಮಾತುಗಳನ್ನಾಡುತ್ತಾ ಸುಮ್ಮನಾದರು. ಸಕ್ಕು ವಿಗೆ ಯಾಕೋ ಕೆಲಸಮಾಡಲು ಕೈ ಕಾಲುಗಳೇ ಆಡುತ್ತಿರಲಿಲ್ಲ.
ಎಸ್ಟೇಟ್ ಮ್ಯಾನೇಜರ್ ಬಂದು ಇಬ್ಬರನ್ನೂ ದಬಾಯಿಸಿ ಕಾಣೆಯಾದಷ್ಟೂ ದಿನದ ಸಂಬಳ ಮುರಿದುಕೊಳ್ಳುವುದಾಗಿ ಹೇಳಿ ಕಾಗದವೊಂದರಲ್ಲಿ ಸಹಿ ಪಡೆದುಕೊಂಡು ಮತ್ತಷ್ಟು ಅವರಿಗೆ ಹೀನಾಯವಾಗಿ ಬೈದು ಉಗಿದು ಕಳುಹಿಸಿದ.
ಸಕ್ಕೂ ಬಾಯಿ ಕುಗ್ಗಿ ಹೋದಳು. ಆದರೂ ಕೆಲಸ ಮಾಡಲೇಬೇಕಿತ್ತು.
ಸಾಧ್ಯವಾದಷ್ಟೂ ಅವಳು ಅಪ್ಪ ಅಮ್ಮ ಕೆಲಸಮಾಡುವ ಕಡೆ ಹೋಗಲೇ ಇಲ್ಲ...
ಸಂಜೆಯಾದಂತೆ ಹೊರಡುವ ವೇಳೆ. ಅವಳೀಗ ಮಾತೇಶನನ್ನು ಅನುಸರಿಸಬೇಕಿತ್ತು. ಅವನು ಯಾವುದೋ ಒಂದು ಸಣ್ಣ ಮನೆಗೆ ಕರೆದೊಯ್ದ.. ಅಲ್ಲಿ ಹೇಳುವಂತಹ ಯಾವ ಸೌಕರ್ಯವೂ ಇರಲಿಲ್ಲ. ರಾತ್ರೆಗೆ ಅಡುಗೆ ಬೇರೆ ಆಗಬೇಕಿತ್ತು.
ಆದರೆ ಮಾತೇಶ ಅವಳಿಗೆಲ್ಲವನ್ನೂ ಬಹಳ ಅನುನಯದಿಂದ ಹೇಳಿಕೊಟ್ಟ. ಅವನ ಸನಿಹದಲ್ಲಿ ಅವಳಿಗೆ ಅಲ್ಲಿರುವ ಯಾವುದರಲ್ಲೂ ಕೊರತೆ ಕಾಣಿಸಲೇ ಇಲ್ಲ. ಮಾತೇಶನೊಬ್ಬ ತನ್ನ ಬಳಿ ಇದ್ದರೆ ಸಾಕು. ತನಗೀ ಮನೆಯೇ ಅರಮನೆ. ಅವನ ಜೊತೆ ಉಣ್ಣುವ ಯೋಗವೇ ಮೃಷ್ಟಾನ್ನ ಭೋಜನ... ಅವನ ತೋಳೊಳಗೆ ವಿರಮಿಸುವ ಗಳಿಗೆಯೇ ಸ್ವರ್ಗ ಸದೃಶ....
ಹೀಗೆ ಇದ್ದುದರಲ್ಲಿಯೇ ಹೊಂದಿಕೊಂಡು ದಿನಗಳು ಉರುಳುತ್ತಿದ್ದವು. ಸಕ್ಕೂಬಾಯಿ ತನ್ನಿಯನ ಸನಿಹದಲ್ಲಿ ಪರಮ ಸುಖಿಯಾಗಿದ್ದಳು. ತನ್ನಷ್ಟು ಸುಖಿ ಈ ಪ್ರಪಂಚದಲ್ಲಿಯೇ ಯಾರೂ ಇರಲಾರರು ಎಂದುಕೊಳ್ಳುತ್ತಿದ್ದಳು.
ಅಪ್ಪ ಅಮ್ಮನನ್ನು ತಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ ಕೊನೆಗೂ ಒಂದು ದಿನ ಅವರ ಕಣ್ಣೆದುರು ಬರುವಂತೆಯೇ ಆಗಿತ್ತು.
ಅಪ್ಪ ಅವಳನ್ನು ಏನೂ ಮಾತೇ ಆಡಿಸಲಿಲ್ಲ. ಅಪ್ಪನನ್ನು ಕಂಡಾಕ್ಷಣವೇ ಅವಳ ಕೈ ಕಾಲುಗಳು ನಡುಗತೊಡಗಿದ್ದವು. ಅಮ್ಮ ಒಂದಷ್ಟು ಕೋಪ ತೋರಿಸಿದರೂ ಹೆತ್ತ ಕರುಳು ತಾನೇ....? ಮಾತಾಡಿಸಿದಳು. ಆದರೂ ಹೆಚ್ಚು ಮಾತಾಡಲಾಗಲಿಲ್ಲ.....
ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶಗಳು ಸಾಮಾನ್ಯವಾದವು. ಅಪ್ಪ ಕಂಡರೂ ಅಪರಿಚಿತರನ್ನು ನೋಡಿ ಹೋಗುವಂತೆ ಹೋಗುತ್ತಿದ್ದರು . ಅಮ್ಮ ಮಾತ್ರ ಕಾಳಜಿಯಿಂದಲೇ ಮಾತಾಡಿಸುತ್ತಿದ್ದರು.
***
ಸಕ್ಕೂಬಾಯಿಗೀಗ ಮೂರು ತಿಂಗಳು..... !!!!
ಮೊದಲಬಾರಿಗೆ ಸಕ್ಕೂಬಾಯಿಯ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಹೇಳಲಾಗದ ಅನುಭವಿಸಲಾಗದ ಸಂಕಟ. ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆ ಕ್ಷಣದಲ್ಲಿ ಅಮ್ಮ ಬಹಳವೇ ನೆನಪಾಗತೊಡಗಿದಳು. ಆದರೆ ಅಮ್ಮನ ಸನಿಹ ಹೋಗುವಂತಿರಲಿಲ್ಲ. ಅಪ್ಪ ಅಮ್ಮನನ್ನು ಎದುರು ಹಾಕಿಕೊಂಡು ಮದುವೆಯಾದರೆ ಇದೇ ಗತಿ ಎನಿಸಿತು.
ಏನೇ ಸಂಕಟಗಳಿದ್ದರೂ ಕೆಲಸಕ್ಕೆ ಹೋಗಲೇ ಬೇಕಿತ್ತು. ಯಾವುದೇ ವಿನಾಯತಿಯನ್ನು ಮಾತೇಶ ತೋರಿಸಲಿಲ್ಲ.
ಅವಳ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದು ಮಾತೇಶನ ಗಮನಕ್ಕೆ ಬಂದಿದ್ದರೂ ಅವನೇನೂ ಹೆಚ್ಚಿನ ಕಾಳಜಿ ತೋರಿಸಲಿಲ್ಲ. ಅವಳೆಡೆಗಿನ ಅವನ ದೇಹದ ಕಾವು ಆರತೊಡಗಿತ್ತು.
ಎಲ್ಲಾ ಗಂಡಸರಂತೆಯೇ ಅವನೂ ಇದ್ದ. ಈ ಹಿಂದೆ ಬಸುರಿಯಾಗಿದ್ದವರೆಲ್ಲರೂ ಹೀಗೇ ಅನುಭವಿಸಿದವರೇ....ಇವಳದೇನೂ ಹೊಸತಲ್ಲ ಎಂಬ ಧೋರಣೆ ಅವನದು. ..
ಮಾತೇಶ ಎಲ್ಲ ಗಂಡಸರಂತಲ್ಲ. ಅವನಿಗೆ ಹೆಂಗರುಳು ಇದೆ ಎಂದು ಸಕ್ಕು ಭಾವಿಸಿದ್ದೆಲ್ಲ ಅವಳ ಭ್ರಮೆಯಾಗಿತ್ತು. ಈ ಗಂಡಸರು ತಮ್ಮ ವಾಂಛೆಗೆ ಅವಕಾಶ ಇದ್ದರೆ ಮಾತ್ರ ಅನುನಯ ತೋರಿಸುವರು. ಉಳಿದಂತೆ ಎಲ್ಲಾ ಗಂಡಸರದೂ ಒಂದೇ ಹಣೆಬರಹ.......
ಹೇಗೋ ದಿನಗಳುರುಳತೊಡಗಿದವು.
ಅವನ ಸನಿಹದಲ್ಲಿಯೇ ಸಕ್ಕೂಬಾಯಿ ತೃಪ್ತಿಕಾಣುತ್ತಿದ್ದಳು. ಹಾಗೂ ಹೀಗೂ ಆರೋಗ್ಯ ಸುಧಾರಿಸತೊಡಗಿತು.
ಆದರೆ ಆ ಒಂದು ದಿನ ಮಾತ್ರ ಮಾತೇಶ ಇದ್ದಕ್ಕಿದ್ದಂತೆ ಕಾಣೆಯಾಗಿ ಹೋದ.!!!
ಸಂಜೆಯ ಹೊತ್ತು ಮನೆಗೆ ತೆರಳುವ ಸಂದರ್ಭದಲ್ಲಿ ಸಕ್ಕೂ ಅವನಿಗಾಗಿ ಕಾದೇ ಕಾದಳು. ಎಷ್ಟು ಕಾದರೂ ಅವನ ಸುಳಿವೇ ಇಲ್ಲ. ಅಳುತ್ತ ಅಳುತ್ತಲೇ ಮನೆಗೆ ತೆರಳಿದಳು ಸಕ್ಕು. ರಾತ್ರೆಯ ಅಡಿಗೆ ಎಲ್ಲ ಮಾಡಿದಳು. ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತಿತ್ತು. ಇಷ್ಟರವರೆಗೆ ಅವಳಿಗೆ ಒಬ್ಬಳೇ ಇದ್ದು ಅಭ್ಯಾಸವೇ ಇರಲಿಲ್ಲ. ಈಗ ಈ ರಾತ್ರಿಯಲ್ಲಿ ಅವಳು ಭಯಭೀತಳಾಗಿದ್ದಳು. ಕ್ಷಣ ಕ್ಷಣವೂ ಅವಳು ಗಾಬರಿ ಬೀಳುತ್ತಿದ್ದಳು. ನಿಂತಲ್ಲಿಂದ ಅಲುಗಾಡಲೂ ಭಯ. ಬಾಗಿಲು ಹಾಕಿ ಚಿಲಕವನ್ನೇನೋ ಭದ್ರ ಪಡಿಸಿದ್ದಳು. ಸಣ್ಣ ಸಣ್ಣ ಶಬ್ದಕ್ಕೂ ಬೆಚ್ಚಿ ಬೀಳುತ್ತಿದ್ದಳು. ಆಗಾಗ ಮಾತೇಶ ಬಂದು ಕರೆಯುತ್ತಾನೋ ಎಂದು ಮೈಯೆಲ್ಲ ಕಿವಿಯಾಗುತ್ತಿದ್ದಳು.
ತಾನು ಯಾಕಾದರೂ ಇಂತಹ ಒಂದು ಸಾಹಸಕ್ಕೆ ಕೈ ಹಾಕಿದೆನೋ ಎನಿಸತೊಡಗಿತು. ದೇಹದ ಬಯಕೆಗಳಿಗೆ ಮನಸಿನ ಕಡಿವಾಣ ಹಾಕಿರುತ್ತಿದ್ದರೆ ತನಗೀ ಸ್ಥಿತಿ ಬರುತ್ತಿತ್ತೇ....? ತನಗೆ ಸ್ವಂತ ಬುದ್ಧಿಯಂತೂ ಇರಲಿಲ್ಲ... ಆದರೆ ಹಿರಿಯರು ಹೇಳಿದ ಮಾತನ್ನಾದರೂ ಕೇಳಬಹುದಿತ್ತು..
ಅಮ್ಮ ಕೆಲವೊಮ್ಮೆ ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂತು.
' ಯಾರಿಗೇ ಆಗಲಿ ಸ್ವಂತ ಬುದ್ಧಿ ಇರಬೇಕು; ಇಲ್ಲವಾದಲ್ಲಿ ಇನ್ನೊಬ್ಬರು ಹೇಳುವುದನ್ನಾದರೂ ಕೇಳಿಕೊಳ್ಳಬೇಕು. ' ಹಿರಿಯರ ನುಡಿಗಳು ಯಾವಾಗಲೂ ಅನುಭವಜನ್ಯವಾಗಿರುತ್ತದೆ. ತನಗೆ ಎರಡೂ ಇಲ್ಲವಾಗಿ ಹೋಯಿತು. ಹರೆಯದ ದೇಹದ ಕಾವಿಗೆ ಬುದ್ಧಿ ಕೆಲಸ ಮಾಡಲೇ ಇಲ್ಲ...
ಇಷ್ಟೊಂದು ಭಯ ಅವಳನ್ನೆಂದೂ ಕಾಡಿರಲಿಲ್ಲ. ಅಡುಗೆಯನ್ನು ಹೇಗೋ ಮಾಡಿದ್ದಳು. ಯಾರೋ ಬಂದು ಕುತ್ತಿಗೆ ಹಿಡಿದಂತೆ ಯಾರೋ ತನ್ನ ಸಾಯಿಸಲು ಬರುವಂತಾಗುತ್ತಿತ್ತು. ಮೊದಲಿನಿಂದಲೂ ಸಕ್ಕುವಿಗೆ ದೆವ್ವಗಳೆಂದರೆ ವಿಪರೀತ ಭಯ. ಇಂದು ದೆವ್ವಗಳೇನಾದರೂ ತನಗೆ ಕಾಟ ಕೊಟ್ಟರೇ...!!!
ಸಕ್ಕೂಬಾಯಿಗೆ ಕಣ್ಣೀರು ಉಕ್ಕಿ ಉಕ್ಕಿ ಬರತೊಡಗಿತು. ಎಷ್ಟು ಅತ್ತರೂ ಏನೂ ಪ್ರಯೋಜನವಿರಲಿಲ್ಲ.... ಯಾರೂ ಅವಳ ಸಹಾಯಕ್ಕೆ ಬರಲಿಲ್ಲ. ಆಗಾಗ ಗಡಿಯಾರ ನೋಡುತ್ತಿದ್ದಳು. ಇಂದಿನವರೆಗೆ ಬಹಳವೇ ವೇಗವಾಗಿ ಸುತ್ತುತ್ತಿದ್ದ ಗಡಿಯಾರದ ಮುಳ್ಳುಗಳು ಇಂದು ಸ್ತಬ್ಧವಾಗಿವೆ ಎನಿಸಿತು. ಲೈಟ್ ಉರಿಸಲೂ ಭಯ ಆರಿಸಲೂ ಭಯ. ಲೈಟ್ ಉರಿಸಿದರೆ ಯಾರಾದರೂ ನೋಡುವರೇನೋ... ಲೈಟ್ ಆರಿಸಿದರೆ ಯಾರಾದರೂ ಆಕ್ರಮಣ ಮಾಡುವರೇನೋ ಎಂಬ ಆತಂಕ. ಒಟ್ಟಿನಲ್ಲಿ ಸಕ್ಕೂಬಾಯಿ ಒಂದೇ ಇರುಳಿಗೆ ಬೆದರಿ ಕಂಗಾಲಾಗಿ ಹೋದಳು.
ಎಲ್ಲಿಗೆ ಹೋಗಿರಬಹುದು ಮಾತೇಶ? ಅವನನ್ನು ಸಂಪರ್ಕಿಸುವ ಯಾವ ವಿಧಾನವೂ ಅವಳಿಗೆ ಹೊಳೆಯಲಿಲ್ಲ. ಅಷ್ಟೂ ಪ್ರೀತಿಸುತ್ತಿದ್ದ ಗಂಡ ಇಂದು ಏಕಾಏಕಿ ಒಂದೂ ಮಾತು ಹೇಳದೆ ಕಾಣೆಯಾಗಿ ಹೋದನೆಂದರೆ....?
ಅವನ ಬಣ್ಣದ ಮಾತುಗಳಿಗೆ ತಾನು ಮರುಳಾಗಿ ಹೋದೆ... ಎಷ್ಟೊಂದು ಅನುನಯವಾಗಿ ಮಾತಾಡುತ್ತಿದ್ದ. ಅವನ ಮಾತು ಅವನ ನಗುವಿಗೆ ತಾನು ಕರಗಿಯೇ ಹೋಗುತ್ತಿದ್ದೆನಲ್ಲ.. ಇಂದು ಆತ ತನ್ನನ್ನು ಹೀಗೇ ಒಂಟಿಯಾಗಿಯೇ ಬಿಟ್ಟು ಹೋದನೆಂದರೆ...? ಅವನೊಬ್ಬ ಗೋಮುಖವ್ಯಾಘ್ರನೇ...? ಎಲ್ಲವನ್ನೂ ; ಎಲ್ಲರನ್ನೂ ಬಿಟ್ಟು ಅವನ ಪೂರ್ವಾಪರ ಒಂದೂ ತಿಳಿಯದೆ ತಾನು ಎಲ್ಲರನ್ನೂ ಧಿಕ್ಕರಿಸಿ ಓಡಿ ಬಂದು ಬಿಟ್ಟೆನಲ್ಲ.!!! ಅಮ್ಮ ಅದೆಷ್ಟು ಬಾರಿ ತಿಳಿ ಹೇಳಿದರು... ಅಪ್ಪ ಅದೆಷ್ಟು ನಿಷ್ಠುರವಾಗಿ ವಾಸ್ತವವನ್ನು ಹೇಳಿದರು. ಆ ಕ್ಷಣದಲ್ಲಿ ತನಗವರು ಅಜನ್ಮ ವೈರಿಗಳಂತೆಯೇ ತೋರಿದರು. ಈ ಪ್ರಪಂಚದಲ್ಲಿ ಮಾತೇಶ ಒಬ್ಬನೇ ಮಹಾನ್ ಒಳ್ಳೆಯ ಮನುಷ್ಯ; ಅವನಷ್ಟು ಸುಂದರ, ಬುದ್ಧಿವಂತ, ರಸಿಕ, ಕರುಣಾಮಯಿ ಯಾರೂ ಇಲ್ಲವೇ ಇಲ್ಲವೆಂದು ಅಂದು ನಿರ್ಧರಿಸಿದ್ದಳು.
ಅವನೆಂದೂ ಸುಳ್ಳು ಹೇಳಿದ ನೆನಪೇ ಇಲ್ಲ ಸಕ್ಕುವಿಗೆ. ಅಥವಾ ಅವನು ಹೇಳುತ್ತಿದ್ದುದರಲ್ಲಿ ತನಗೆ ಸುಳ್ಳು ಕಾಣಲೇ ಇಲ್ಲವೇನೋ..ಅವನ ಮಾತುಗಳನ್ನೆಲ್ಲಾ ನಂಬಿದೆ. ಸುಳ್ಳಿರಬಹುದಾ ಎಂದು ತರ್ಕಿಸಲು ಬುದ್ಧಿಯೇ ಮಂದವಾಗಿತ್ತಲ್ಲ....
ಯೋಚಿಸುತ್ತಲೇ ಕ್ಷಣ ಕಳೆಯತೊಡಗಿದಳು. ನಿಧಾನವಾಗಿಯೇ ನಡೆಯುತ್ತಿದ್ದ ಗಡಿಯಾರದ ಮುಳ್ಳುಗಳು ನಿರ್ದಾಕ್ಷೀಣ್ಯವಾಗಿ ಅವಳ ಆತಂಕಕ್ಕೆ ತುಪ್ಪ ಸುರಿಯುತ್ತಿದ್ದವು; ಮತ್ತವಳು ಇನ್ನಷ್ಟು ಉದ್ವೇಗಕ್ಕೆ ಒಳಗಾಗುತ್ತಿದ್ದಳು......
ಮುಂದುವರಿಯುತ್ತದೆ.