ಆತ್ಮತೃಪ್ತಿ ಎಂಬುದು ಎಲ್ಲಿ ಇದೆ? ಯಾವುದರಿಂದ ದೊರಕುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ವಿಮರ್ಶೆ ಮಾಡಿಕೊಂಡು ಹೋದಾಗಲೋ ಅಥವಾ ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಂದಲೋ ಸಿಗಬಹುದು. ಆತ್ಮತೃಪ್ತಿಗಾಗಿ ಕೆಲಸ ಮಾಡುವವರ ಸಂಖ್ಯೆ ವಿರಳ. ಒಬ್ಬರಿಗೆ ನಾವು ಮಾಡುವ ಒಂದು ಪುಟ್ಟ ಉಪಕಾರವು ನಮಗೆ ಬೆಟ್ಟದಷ್ಟು ಆನಂದವನ್ನು ಕೊಡಬಲ್ಲದು. ನಾವು ಮಾಡುವ ಕೆಲಸವು ನಮ್ಮ ಮನಸಾಕ್ಷಿಗೆ ಒಪ್ಪಿದರೆ ಅದೇ ಆತ್ಮ ತೃಪ್ತಿ. ಆದರೆ ಅನಾಚಾರ, ಕೆಟ್ಟ ಕೆಲಸಗಳನ್ನು ಮಾಡುತ್ತಾ ಇರುವ ವ್ಯಕ್ತಿಗಳಿಗೆ ಮನಸಾಕ್ಷಿ, ಆತ್ಮತೃಪ್ತಿ ಈ ಪದಗಳ ಅರ್ಥ ಗೊತ್ತಿರುವುದಿಲ್ಲ.
ಯಾಕೆಂದರೆ ಇಂತಹ ವ್ಯಕ್ತಿಗಳು ತಮ್ಮ ಆಡಂಬರದ ಜೀವನಕ್ಕಾಗಿ ಏನನ್ನಾದರೂ ಮಾಡುತ್ತಾ ಇರುತ್ತಾರೆ. ಆತ್ಮತೃಪ್ತಿಗೂ ಪರೋಪಕಾರಕ್ಕೂ ಒಂದು ಅವಿರಾನುಭಾವ ಸಂಬಂಧವಿದೆ. ಉಪಕಾರ ಮಾಡಿದ ವ್ಯಕ್ತಿಯು ಏನನ್ನೂ ಬಯಸದೇ ಇದ್ದಾಗ ಅದರಿಂದ ಆ ವ್ಯಕ್ತಿಗೆ ಆತ್ಮತೃಪ್ತಿ ಸಿಕ್ಕಿದೆ ಎಂದರ್ಥ.
ವಿಶ್ರಾಂತಿಯ ಸಮಯ ಅಂದರೆ ರಾತ್ರಿ ನಿದ್ರಾ ದೇವಿಯು ಆವರಿಸಿಕೊಳ್ಳುವ ಸಮಯ ಹತ್ತಿರವಾಗುತ್ತಾ ಬಂದಾಗ ಆ ದಿನ ನಾವು ಮಾಡಿದ ಕೆಲಸ ಕಾರ್ಯಗಳು ನಮ್ಮ ಸ್ಮೃತಿ ಪಟಲದಲ್ಲಿ ಮೂಡಿಬರುತ್ತದೆ. ಅದರಲ್ಲಿ ಕೆಲವೊಂದು ನಮಗೆ ತೃಪ್ತಿಯನ್ನು ನೀಡಬಲ್ಲದು, ಇನ್ನೂ ಕೆಲವೊಂದು ಅತೃಪ್ತಿಯನ್ನು ನೀಡಬಲ್ಲದು.
ಒಳ್ಳೆಯ ಕೆಲಸ, ಒಳ್ಳೆಯ ಮನಸ್ಸನ್ನು ಬಿಂಬಿಸುತ್ತದೆ. ಆ ಒಳ್ಳೆಯ ಮನಸ್ಸಿನಲ್ಲಿ ತೃಪ್ತಿ, ಶಾಂತಿ, ಸಮಾಧಾನ ನೆಲೆಸಿದರೆ ಬದುಕು ನೆಮ್ಮದಿಯ ಪಥದಲ್ಲಿ ಸಿಗುತ್ತದೆ.ಬದಲಾಗಿ ಅಶಾಂತಿ, ಅತೃಪ್ತಿ ಮನಸ್ಸನ್ನು ಆವರಿಸಿದ್ದರೆ ಆತ್ಮತೃಪ್ತಿ ಬಿಡಿ, ಸರಿಯಾಗಿ ನಿದ್ರೆಯೂ ಬಾರದು.
ಮನಸ್ಸು ಪ್ರಫುಲ್ಲಿತವಾಗಿದ್ದರೆ ಅದು ಉತ್ತಮ ಚಿಂತನೆಯತ್ತ ಎಳೆದೊಯ್ಯುತ್ತದೆ. ಆತ್ಮತೃಪ್ತಿ ಎಂಬುದು ನಮ್ಮೊಳಗೆ ಇದೆ. ಅದನ್ನು ಅರಿತು ಮುಂದೆ ಸಾಗಿದರೆ ಬಾಳು ಬಂಗಾರ, ಇಲ್ಲವಾದಲ್ಲಿ ಕಾಗೆ ಬಂಗಾರ.
0 Followers
0 Following