ಸ್ವಾಭಿಮಾನ

ProfileImg
15 Jun '24
2 min read


image

 

ಮನುಷ್ಯ ಸ್ವಾಭಾವಿಕವಾಗಿ ಸ್ವತಂತ್ರ ಜೀವಿ.
ಹಾಗೆಂದು ಆತ ಸಮಾಜದಲ್ಲಿ ಒಬ್ಬನೇ ಬದುಕಲಾಗುವುದಿಲ್ಲ. ಸಾಮಾಜಿಕ ಕಟ್ಟು ಕಟ್ಟಳೆಗಳ ಪರಿಧಿಯೊಳಗೆ ಆತ ವರ್ತಿಸಬೇಕಾಗುತ್ತದೆ.ಆ ಪರಿಧಿಯನ್ನು ದಾಟಿದರೆ ಆತ ಸಮಾಜ ಘಾತುಕನಾಗುತ್ತಾನೆ. ಇದಕ್ಕೆ ಕಾರಣಗಳು ಹಲವಾರು. ಪರಿಸರವೂ ಕಾರಣವಿರಬಹುದು.ಅನುವಂಶವೂ  ಕಾರಣವಿರಬಹುದು.
ಪ್ರತಿಯೊಬ್ಬನಲ್ಲೂ ಆತ್ಮಾಭಿಮಾನ ಎಂಬುದೊಂದು ಇರುತ್ತದೆ.ಆತ ತನ್ನ ಸ್ವಾಭಿಮಾನವನ್ನು ಬಿಟ್ಟು ಕೊಡುವುದಿಲ್ಲ.ಆದರೆ ಅನಿವಾರ್ಯ ಸಂದರ್ಭಗಳಲ್ಲಿ ತನ್ನ ಸ್ವಾಭಿಮಾನವನ್ನು ಬಿಟ್ಟು ಬಿಡಬೇಕಾಗುತ್ತದೆ.ಇಲ್ಲಿ
ಸ್ವಾಭಿಮಾನ ಎಂದರೆ "ಅಹಂ"ಅಲ್ಲ.ಬಡವರಲ್ಲಿಯೂ ಸ್ವಾಭಿಮಾನವಿರುತ್ತದೆ. 
ಸ್ವಾಭಿಮಾನವಿಲ್ಲದಿದ್ದಾಗ ಬೇರೆಯವರು ತುಳಿಯುತ್ತಾರೆ. ಕೆಲವು ಸಲ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಜೀವನ್ಮರಣಗಳ ನಡುವೆ ಹೊಯ್ದಾಡುತ್ತಿರುವಾಗ ಹೆತ್ತವರು ಮಗನನ್ನು ಉಳಿಸಲು ಸ್ವಾಭಿಮಾನ ಬಿಟ್ಟು  ಸಾಲ ಕೇಳಬಹುದು. ಆಗ ಸಾಲ ಕೊಡುವವರು ಹೀಯಾಳಿಸಿದರೂ  ಸಹಿಸಿಕೊಳ್ಳಬೇಕು.
ಕೆಲವರಲ್ಲಿ ಸ್ವಾಭಿಮಾನ ಎಂಬುದು ಸಾಮಾನ್ಯವಾಗಿ ಚಿಕ್ಕಂದಿನಲ್ಲೆ ಪ್ರಕಟಗೊಳ್ಳುತ್ತದೆ. ಒಂದು ಮಗುವನ್ನು ಚಾಕೋಲೇಟ್ ಕೊಡುತ್ತೇನೆ ಎಂದು ಕಾಡಿಸಿ ನೋಡಿ.ಆಮೇಲೆ ಚಾಕೋಲೇಟ್ ಕೊಟ್ಟರೆ ಮುಖ ದುಮ್ಮಿಸಿ  ಚಾಕೋಲೇಟನ್ನು ನಿರಾಕರಿಸಬಹುದು. 
ಸ್ವಾಭಿಮಾನವಿದ್ದವರು  ತಮಗಾದ ಅವಮಾನವನ್ನು ಮರೆಯುವುದಿಲ್ಲ. 
ಅವಮಾನವೇ  ಅವರ ಸಾಧನೆಗಳಿಗೆ ಸವಾಲು. "ಒಬೆರಾಯ್"ಹೋಟೆಲ್ಗಳು ಸ್ದಾಪನೆಯಾದದ್ದೇ 
ಅವಮಾನವನ್ನು ಆಹ್ವಾನವಾಗಿ ಸ್ವೀಕರಿಸಿದ್ದುದರಿಂದ ಅಲ್ಲವೇ.
ಈ ಸ್ವಾಭಿಮಾನ ಎಂಬುದು ಮನುಷ್ಯರಲ್ಲಿ ಮಾತ್ರ ಅಂದುಕೊಂಡಿರಾ..ಉಹುಂಪ್ರಾಣಿಗಳಲ್ಲೂ ಇದೆ . ಅದರಲ್ಲೂ ಮನೆಯಲ್ಲಿ ಪ್ರೀತಿಯಿಂದ ಸಾಕಿದ ನಾಯಿಗಳಲ್ಲಿ ಇದನ್ನು ಕಾಣಬಹುದು.
ಸ್ವಾಭಿಮಾನಕ್ಕೆ ಧಕ್ಕೆ ಆದಾಗ  ಪ್ರತಿಕ್ರಿಯೆ ವ್ಯಕ್ತ ಪಡಿಸುವುದರಲ್ಲಿ ನಮ್ಮ ವ್ಯಕ್ತಿತ್ವ ಅಡಗಿದೆ.
ಕೆಲವರು ವಿರೋಧ ವ್ಯಕ್ತಪಡಿಸಿದರೆ ,ಇನ್ನು ಕೆಲವರು ಮೌನವಾಗಿ ಸಹಿಸಬಹುದು.ಇನ್ನು ಕೆಲವರು ಮನದಲ್ಲೆ ಕೊರಗಿ ಮನೋದೈಹಿಕ ರೋಗಗಳಿಗೂ ತುತ್ತಾಗಬಹುದು.ಇಲ್ಲವೇ ಆತನೂ ಎಲ್ಲರನ್ನೂ ಟೀಕಿಸಲು ಪ್ರಾರಂಭಿಸಬಹುದು.
ದುರ್ಬಲ ಮನಸ್ಸಿನವರು ಆತ್ಮಹತ್ಯೆಗೂ ಶರಣಾಗಬಹುದು.
ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಒಂದು ದಿನ ಟೇಚರ್ ಬೈದದ್ದಕ್ಕೆ ನೇಣುಹಾಕಿಕೊಂಡ ಉದಾಹರಣೆಯಿದೆ.
ಇಂಗ್ಲಿಷ್ ನಲ್ಲಿ ಒಂದು ಗಾದೆಯಿದೆ. "Nobody can insult you without your permission"ಅಂತ. ಪ್ರಖರವಾದ ಸ್ವಾಭಿಮಾನವುಳ್ಳವರು ಅವಮಾನವನ್ನೆಂದೂ ಸಹಿಸಲಾರರು.
ಸಾಮಾನ್ಯವಾಗಿ ಕೂಡುಕುಟಂಬಗಳಲ್ಲಿ ಎಲ್ಲರಿಗೂ ಅಧಿಕಾರ ಇರುವುದಿಲ್ಲ. ಸಂಬಂಧಗಳಲ್ಲಿ ಸಾಮರಸ್ಯ ಇರಬೇಕಾದರೆ ಸ್ವಾಭಿಮಾನವನ್ನು ಬದಿಗೊತ್ತಲೇ ಬೇಕಾಗುತ್ತದೆ. ಇಲ್ಲದಿದ್ದರೆ  ಕುಟುಂಬ ಒಡೆದು ಹೋಗುತ್ತದೆ. ಉದಾಹರಣೆಗೆ  ಹಿಂದಿನ ಕಾಲದಲ್ಲಿ ಸೊಸೆಯಂದಿರನ್ನು ಗೋಳುಹೊಯ್ಕೊಳ್ಳುವುದು ತಮ್ಮ ಹಕ್ಕು ಎಂದು ತಿಳಿದ ಅತ್ತೆಯಂದಿರೂ ಇದ್ದರು.ಪಾಪದ ಸೊಸೆಯಂದಿರು ತಮ್ಮ ಸ್ವಾಭಿಮಾನ ಮರೆತು ಹೊಂದಿಕೊಂಡು ಹೋದರೂ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆಯನ್ನು ಮುಂದೆ ತಮ್ಮ ಸೊಸೆಯಂದಿರ ಮೇಲೆ  ಪ್ರಯೋಗಿಸಲು ಕಾಯುತ್ತಿರುತ್ತಾರೆ.ಇದಕ್ಕೆ ಅಪವಾದಗಳೂ ಹಲವಾರು ಇರಬಹುದು.
ದುಡ್ಡಿದ್ದವರಿಗೆ ಅಭಿಮಾನವೂ ಜಾಸ್ತಿ. ಇರಲಿ. ಆದರೆ ಬಡವರನ್ನು ಅವಮಾನಿಸುವುದು ಸರಿಯಲ್ಲ.
ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಪರಿಸ್ಥಿತಿಗಳು ಯಾವುವು?
 *ಮಕ್ಕಳಿಗೆ ಸಾಮಾನ್ಯವಾಗಿ  ಬೇರೆಯವರು ತಮ್ಮ ದೈಹಿಕ ದುರ್ಬಲತೆಗೋ ,ಪ್ರತಿಭೆಯೂ ಕೊರತೆಗೋ ,ಕಡಿಮೆ ಅಂಕಗಳಿಗೋ  ಹಂಗಿಸಿದಾಗ ಆತನ ಸ್ವಾಭಿಮಾನಕ್ಕೆ  ಧಕ್ಕೆಯಾಗುತ್ತದೆ. ಅದು ಮುಂದಕ್ಕೆ ಅವನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.
ಜೀವನ ಪರ್ಯಂತ ಅವನ ವರ್ತನೆಗಳ ಮೇಲೆ ಅದು ಪ್ರಭಾವ ಬೀರಬಹುದು.
"ನಿನ್ಕೈಲಿ ಇದನ್ನು ಮಾಡಲಾಗುವುದಿಲ್ಲ "ಅಂತ ಯಾರಾದರೂ ಹೇಳಿದರೆ ಸ್ವಾಭಿಮಾನಿಗಳು ಅದನ್ನು ಪಂಥದಂತೆ ಸ್ವೀಕರಿಸುತ್ತಾರೆ. ಕೀಳರಿಮೆಯಿದ್ದವರು ಮುದುಡಿಕೊಳ್ಳುತ್ತಾರೆ.
ಎಲ್ಲೋ ಓದಿದ ನೆನಪು.
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಮೂರನೆ ತರಗತಿಯಲ್ಲಿದ್ದಾಗ ಅವರು ಶಾರೀರಿಕವಾಗಿ ತುಂಬಾ  ದುರ್ಬಲರಾಗಿದ್ದರಂತೆ. ಆಗ ಅವರ ಶಿಕ್ಷಕರು 'ನೀನು ಮೂವತ್ತು ವರ್ಷಗಳಿಂದ ಹೆಚ್ಚು ಬದುಕಲಾರೆ ಎಂದರಂತೆ"
ಅದನ್ನೆ ಸವಾಲಾಗಿ ಸ್ವೀಕರಿಸಿದವರು ವ್ಯಾಯಾಮ ಮಾಡಿ  ಮುಂದೆ ಶತಾಯುಷಿಗಳಾದುದು ನಮಗೆಲ್ಲಾ ತಿಳಿದೇ ಇದೆ.
"ಯಾವುದೇ ಕೆಲಸ ಕೀಳಲ್ಲ.  ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ  ಗುಡಿಸು.  ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ.  ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.
ಅವರೆಂದೂ ಸರಕಾರ ಕೊಟ್ಟ ಸವಲತ್ತುಗಳನ್ನು ತಮಗಾಗಲೀ ತಮ್ಮ ಕುಟುಂಬಕ್ಕಾಗಿ ಲೀ ಉಪಯೋಗಿಸಲೇ ಇಲ್ಲ.
ರಾಜಕಾರಿಣಿಗಳಾಗಲೀ ,ಸರ್ಕಾರಿ ಅಧಿಕಾರಿಗಳಾಗಲೀ ಹೀಗಿದ್ದರೆ ನಮ್ಮದೇಶ ಎಂದೋ ಉದ್ಧಾರವಾಗುತ್ತಿತ್ತು.
ಸ್ವಾಭಿಮಾನಿಗಳಾಗೋಣ.ಆದರೆ ದುರಭಿಮಾನಿಗಳಾಗುವುದು ಬೇಡ ಅಲ್ಲವೇ.
ಒಬ್ಬರನ್ನು ಸೋಲಿಸಿದಾಗ ಗೆಲುವನ್ನು   ಅತಿ ರಂಜಿತವಾಗಿ ಪ್ರದರ್ಶಿಸಿ ಸೋತವರನ್ನು ಹಂಗಿಸುವುದು ದುರಭಿಮಾನ.
ನಮ್ಮನ್ನೆ ನಾವು ವಿಮರ್ಶಿಸಿಕೊಂಡು ಆತ್ಮಗೌರವವನ್ನು ಹೆಚ್ಚಿಸಿ ಸ್ವಾಭಿಮಾನದಿಂದ ಬದುಕೋಣ.
ಧನ್ಯವಾದಗಳು.

✍️ಪರಮೇಶ್ವರಿ ಭಟ್




ProfileImg

Written by Parameshwari Bhat