ಬದುಕು ನಾವು ಊಹಿಸಿದಷ್ಟು ಸುಂದರವಲ್ಲ ಹಾಗೆ ಸುಲಭವೂ ಅಲ್ಲ. ಏಕಾಂತ ಎನ್ನುವುದು ಒಂದಷ್ಟು ಕ್ಷಣದ ಖುಷಿ ಅಷ್ಟೇ ಆದರೆ ಏಕಾಂಗಿಯಾಗಿ ಇರುವಾಗ ಕಾಡುವ ಅದೆಷ್ಟೋ ನೆನಪುಗಳು ಕೆಲವೊಮ್ಮೆ ನಗಿಸಿದರೆ, ಕೆಲವೊಮ್ಮೆ ಅಳಿಸುತ್ತವೆ, ಇನ್ನೂ ಕೆಲವೊಮ್ಮೆ ಉಸಿರಾಟ ಕೂಡ ಬೇಸರ ಆಗುವಷ್ಟರ ಮಟ್ಟಿಗೆ ಜಗತ್ತಿನ ಭಯಾನಕ ಖಾಯಿಲೆಯಾದ "ಖಿನ್ನತೆಗೆ" ನೂಕಿ ಬಿಡುತ್ತವೆ. ಅದು ನೆನಪುಗಳಿಗೆ ಇರುವ ತಾಕತ್ತು.
ಹೌದು..! ಮುಂದಿನ ಪಯಣದ ಬಗ್ಗೆ ಅನಿರೀಕ್ಷಿತ ನಿರ್ಧಾರಗಳು ಒಂದೊಂದು ವಿಭಿನ್ನ ಅನುಭವ ನೀಡುತ್ತವೆ. ಆತ್ಮೀಯ ಗೆಳೆಯನಿಗೆ ಆರೋಗ್ಯ ಸರಿ ಇಲ್ಲದೆ ಇರುವ ಕಾರಣದಿಂದ ತನ್ನ ರೂಮಿನಲ್ಲಿ ಒಬ್ಬನೇ ಕೂರಲಾಗದೆ ನನಗೆ ಕರೆ ಮಾಡಿ " ರೂಮಿನ ಹತ್ತಿರ ಬನ್ನಿ , ಇಲ್ಲೇ ಎಲ್ಲಾದರೂ ಹೋಗಿ ಕಾಫಿ ಕುಡಿದುಕೊಂಡು ಬರೋಣ , ಸ್ವಲ್ಪ ಸಮಾಧಾನ ಆದರೂ ಆಗಬಹುದು" ಎಂದನು.
ಸಮಯ ರಾತ್ರಿ 8:30 ಆಗಿತ್ತು ಜೊತೆಗೆ ಬೇರೆ ಕೆಲಸಗಳೂ ಇದ್ದವಾದರೂ ಗೆಳೆಯ ಕರೆದ ತಕ್ಷಣ ನನ್ನ ಕಾರನ್ನು ಏರಿ ಅವನ ರೂಮಿನತ್ತ ಹೊರಟೆ. ಅಲ್ಲಿಂದ ಇಬ್ಬರೂ ಸೇರಿ ನಾವಿರುವ ನಗರದಿಂದ 14 ಕಿ ಮೀ ನಷ್ಟು ದೂರ ಕಾಫಿ ಕುಡಿಯಲು ಹೊರಟೆವು. ಅಲ್ಲಿ ಚಿಕ್ಕ ಹೋಟೆಲೊಂದರಲ್ಲಿ ಇಬ್ಬರೂ ಸೇರಿ 4 ಲೋಟ ಕಾಫಿ ಕುಡಿದು ಮುಂದಿನ ಪ್ರಯಾಣ ಎಲ್ಲಿಗೆಂದು ಯೋಚಿಸಿದಾಗ ಅನಿಸಿತು ಹೇಗಿದ್ದರೂ ಊಟದ ಸಮಯ ಆಗಿದೆ , ಊಟ ಮಾಡಿಕೊಂಡೆ ಹೋಗೋಣ ಎನ್ನುವ ನಿರ್ಧಾರವಾಯಿತು. ಅಲ್ಲಿಂದ ಮುಂದೆ 30 ಕಿ. ಮೀ ದೂರದ ಊರಿಗೆ ಹೋದೆವು. ಆ ಊರಿನಲ್ಲಿ ಚೆನ್ನಾಗಿರುವ ಊಟದ ಹೋಟೆಲ್ ಗಳು ಸಿಗದ ಕಾರಣ ಅಲ್ಲಿಂದ 25 ಕಿ.ಮೀ ದೂರವಿರುವ ಊರಿನಲ್ಲಿ ಒಳ್ಳೆಯ ಊಟ ಸಿಗುತ್ತದೆ ಎಂದು ಸ್ನೇಹಿತನ ಮಾತಿನಂತೆ ನಮ್ಮ ಕಾರು ಆ ಊರಿನೆಡೆಗೆ ಸಾಗಿತು.
ಅಂತೂ ಇಂತೂ ಕೊನೆಗೆ ಆ ಊರಿನಲ್ಲಿಯಾದರೂ ಒಳ್ಳೆಯ ಊಟ ಸಿಗಬಹುದು ಎಂಬ ನಿರೀಕ್ಷೆಯಿಂದ ಹೊರಟ ನಮಗೆ ಒಂದು ಆಶ್ಚರ್ಯವೊಂದು ಕಾದಿತ್ತು.
"ಭೂಮಿಕಾ ಹೋಟೆಲ್" ಈ ಫಲಕವನ್ನು ನೋಡುತ್ತಿದ್ದಂತೆ ಆ ಹೆಸರಿನ ವ್ಯಕ್ತಿ ಜೊತೆಗೆ ಕಳೆದ ಒಂದಷ್ಟು ನೆನಪುಗಳು ಒಂದರೆಕ್ಷಣ ನೆನಪಿಗೆ ಬಂದವು. ಆ ಹೆಸರಿನ ಮೇಲಿರುವ ಗೌರವದಿಂದ ಅದೇ ಹೋಟೆಲ್ ಗೆ ಊಟಕ್ಕೆಂದು ಹೋಗಿ ಕುಳಿತೆವು , ಯಥಾ ಪ್ರಕಾರ ಆದೇಶ ಮಾಡಿದೆವು. ಊಟವೂ ಬಂತು ಮೊದಲ ತುತ್ತು ಬಾಯಿಗೆ ಇಟ್ಟಿದ್ದಷ್ಟೇ ಎರಡನೆಯ ತುತ್ತು ತಿನ್ನಬೇಕು ಅನಿಸಲೇ ಇಲ್ಲಾ , ಕಾರಣ ಊಟ ಹಳಸಿದಂತೆ ಭಾಸವಾಗುತ್ತಿತ್ತು. "ಅನ್ನ ದೇವರ ಮುಂದೆ ಇನ್ನೂ ದೇವರುಂಟೆ " ಎಂಬ ಪಾಲನೆಯ ಸಾಲಿನೊಂದಿಗೆ ಹಾಗೋ ಹೀಗೋ ಊಟ ಮಾಡಿ ಮುಗಿಸಿದೆವು. ಇಬ್ಬರೂ ಬರೀ ನೂರು ರೂಪಾಯಿಯ ಊಟ ಮಾಡಲು ಸರಿ ಸುಮಾರು 70 ಕಿ.ಮೀ ದೂರ ಹೋಗಿದ್ದು ಒಂದೆಡೆ ನಮಗೆ ನಾವೇ ದುಬಾರಿ ಎನಿಸಿತು.ಅಲ್ಲಿಂದ ಮರಳಿ ಕಾರಿನಲ್ಲಿ ಹೊರಟ ನನಗೆ ಕೊನೆಗೆ ಮನಸ್ಸಿನಲ್ಲಿ ಮೂಡಿದ ಸಾಲು " ಪ್ರೀತಿ ಮೊದಲೇ ಹಳಸಿತ್ತು, ಈಗ ಇಲ್ಲಿ ಊಟವೂ ಹಳಸಿತ್ತು".
Writer, Poet
0 Followers
0 Following