ಕತ್ತಲ ಜಗತ್ತಿನಲ್ಲಿ ಬೆಳಕಿಗಾಗಿ ಹುಡುಕಾಟ 

ProfileImg
14 Jul '24
2 min read


image

      ಬಾನೆಂಬ ಬದುಕಿನಲ್ಲಿ ಅಮಾವಾಸ್ಯೆಯ ಕತ್ತಲು ಆವರಿಸಿದೆ. ಅದು ಪೂರ್ಣಚಂದಿರನಾಗಿ ಜಗವ ಬೆಳಗಲು ನಮ್ಮೆಲ್ಲರ ಬಾಳು ಬಲು ಸುಂದರ. ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ.  ಅಂತರಾಳಕ್ಕೆ ಇಳಿದರೆ ನಮ್ಮ ಅಂತರಂಗದಲ್ಲೇ ರಂಗನ ಕಾಣಲು ಸಾಧ್ಯ. (ಆತ್ಮದಲ್ಲಿ ಪರಮಾತ್ಮ ಇದ್ದಾನೆ ) ಒಳಗಿನ ಅಜ್ಞಾನದ ಕೊಳೆಯನ್ನು ತೊಳೆದು ಬೆಳಕಿನ ಸುಜ್ಞಾನದ ಜ್ಯೋತಿಯು ಬೆಳಗಬೇಕಿದೆ. 

ಮಾಧವನ ನಂಬಿ ಕೆಟ್ಟವರಿಲ್ಲ…..

ಮಾನವನ ನಂಬಿ ಕೆಟ್ಟವರೇ ಎಲ್ಲ...... 

       ಇಂದು ಸತ್ಯದ ಪಥದಲಿ ರಥವನು ಏರಿದವರಿಗಿಲ್ಲ ಸೋಲು. ಅವರನ್ನು ಸ್ವಾಗತಿಸುತ್ತಾ ಸ್ನೇಹದಲ್ಲಿ ಸನಿಹಕ್ಕೆ ಬರಮಾಡಿಕೊಳ್ಳುತ್ತಾನೆ ಭಗವಂತ. ಇದಕ್ಕಾಗಿ ಇಂದು ಅನೇಕರು ತಿಂಗಳಿಗೆ ಎರಡು ಬಾರಿ ಬರುವ ಷಷ್ಠಿ, ಏಕಾದಶಿಯ ಉಪವಾಸವನ್ನು ಭಕ್ತಿಯಲ್ಲಿ ಆಚರಿಸುತ್ತಾರೆ. ಉಪವಾಸವೆಂದರೆ ಆಹಾರವನ್ನು ಸೇವಿಸದೆ ಇರುವುದಲ್ಲ. "ಉಪ" ಎಂದರೆ ಹತ್ತಿರ ಎಂದರ್ಥ. ಆ ದಿನ ಶ್ರೀನಿವಾಸನ ಹತ್ತಿರ ವಾಸವಿದ್ದು ಶ್ರದ್ಧೆಯಲಿ ಭಜಿಸುತ, ಜೀವ - ದೇವಗಳ ನಡುವಿನ ಅಂತರವನ್ನು ಕಡಿಮೆಗೊಳಿಸಿ ನಮ್ಮ ಬಳಿಗೆ ಕರೆಸಿಕೊಳ್ಳುವುದು.  ಭಜನೆಯಲ್ಲಿ ತಲ್ಲೀನನಾಗಿ ಸಿರಿವಂತನಾಗಿ ಎತ್ತರಕೆ ಏರುವುದು. 

       ನಾವು ನಡೆಯುವ ಹಾದಿಯಲಿ ನಗೆಹೂ ಬಾಡದಿರಲಿ.... ಹಾದಿಗಳ ಉದ್ದಕ್ಕೂ ಹೂಗಳ ಸುಗಂಧವು ಪಸರಿಸಿರಲು ಬದುಕೇ ಸುಗಮವು. ನಮ್ಮ ಬಾಳೆಂದರೆ ಹಾಗೆ.. ಸಮುದ್ರದ ಅಲೆಯಂತೆ ಕೈಗೊಳ್ಳುವ ಕಾರ್ಯದಲಿ ನೆಲೆಯ ಕಾಣದೆ ಬರುವ ಅಡೆತಡೆಗಳು, ಏಳುಬೀಳುಗಳು ಅದೆಷ್ಟೋ... ಅದನ್ನು ಅಂಬಿಗನಂತೆ ಮೆಟ್ಟಿ ನಿಲ್ಲಬೇಕಿದೆ.  ದಡವನ್ನು ದಾಟಿಸುವ ಅಂಬಿಗನದ್ದು ನಿತ್ಯದ ಹೋರಾಟ. ಅವನಲ್ಲಿ  ನಮಗೆ ಪೂರ್ತಿಯಾದ ನಂಬಿಕೆ ಇದೆ.  ಎಷ್ಟೇ ತೆರೆಗಳು ಬಂದರೂ ಅವನಿಗೆ ಅದನ್ನು ಎದುರಿಸುವ ಶಕ್ತಿಯನ್ನು ಅಂಬಿಕೆಯು ಕೊಟ್ಟಿದ್ದಾಳೆ. ಇದೇ ರೀತಿಯಲ್ಲಿ ನಾವೂ ದೇವರಲ್ಲಿ ಶರಣಾಗಬೇಕು. 

     ಗುರುಗಳು, ಹೆತ್ತವರು ಮತ್ತು ಗೋಮಾತೆ ಇಂದು ನಮ್ಮ ಕಣ್ಣಿಗೆ ಕಾಣುವ ದೇವರು.  ನಾವು ಮಾಡುವ ಕಾರ್ಯವು ಗುರಿಯನ್ನು ತಲಪಿ ಸಫಲವಾಗಿ ಈಡೇರಲು ಗುರುಗಳ ಅನುಗ್ರಹ ಅತ್ಯವಶ್ಯ. ಅಂಥವರು ಉತ್ಕೃಷ್ಟ ಮಟ್ಟಕ್ಕೆ ಏರಲು ಸಾಧ್ಯ. 

      ಹೆತ್ತವರ ಆಶೀರ್ವಾದ ಮಕ್ಕಳ ಮೇಲೆ ಸದಾ ಇರುವುದು. ಅಮ್ಮ ಎಂದರೆ ಕರುಣಾಮಯಿ. ತನ್ನದೆಲ್ಲವನು ತ್ಯಾಗ ಮಾಡುವ ತ್ಯಾಗಮಯಿ ಅವಳು.  ತನ್ನ ಗರ್ಭದಲ್ಲಿರುವಾಗಲೇ ಹೊಟ್ಟೆಗೆ ಮಗು ಭಾರವೇ ಎಂಬಂತೆ ಎಲ್ಲವನ್ನೂ ಸಹಿಸಿ ಒಂದೇ ಬಾಯಿಯಲ್ಲಿ ಮಗವನ್ನೂ ಉಣ್ಣಿಸುವ ಕರುಣಾಮಯಿ ಅವಳು. ಬೆಳೆಯುವ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು. ವಿದ್ಯೆಯನ್ನೂ ಕಲಿಸಿ ಗಟ್ಟಿಯಾದ ಅಡಿಪಾಯ ಹಾಕುವವಳು ಅವಳು. ಅಮ್ಮನ ಮಡಿಲು ತಂಪಿನ ಕಡಲು ಎನ್ನುವಂತೆ ಸಂಸಾರ ಸಾಗರದ ಆಗರ ಅವಳು. ಮನೆ, ಮನ ಎರಡನ್ನೂ ಬೆಳಗುವ ಮನೆಯ ನಂದಾದೀಪ ಅವಳು. 

       ಗೋಮಾತೆ ಎಂದರೆ ಎಲ್ಲವನ್ನೂ ಕೊಡುವ ಕಾಮಧೇನು. ವಿಷವನ್ನು ತಾನೇ ತಿಂದು ಅಮೃತದ ಹಾಲನ್ನು ನೀಡುವವಳು. ಅವಳನ್ನು  ಲಕ್ಷ್ಮೀ ಎಂದು ಕರೆಯುತ್ತಾರೆ. 

     ಇಂದು ನಂಬಿಕೆಯ ಮೇಲೆಯೇ ನಿಂತಿದೆ ನಮ್ಮ ಬದುಕು.  ಅದನ್ನೇ ಬಂಡವಾಳವಾಗಿಸಿಕೊಂಡು ಟೋಪಿ ಹಾಕುವ ಕಾರ್ಯವೂ ನಡೆಯುತ್ತಿದೆ. ಇಂದು ಟಿ.ವಿ, ಪತ್ರಿಕೆ ಎಲ್ಲದರಲ್ಲೂ ಅದೇ ವಿಷಯ. ದುಡ್ಡಿನ ಮೋಸದ ಬಲೆಗೆ  ಸಿಲುಕಿ ದ್ರೋಹ ಬಗೆವವರ ಮೋಹಕ್ಕೊಳಗಾಗಿ ದಡ್ಡರಾಗಿ ಮೋಸದ ದಾಸರ ಕೈಯೊಳಗೆ ಸಿಕ್ಕಿ ತುಕ್ಕು ಹಿಡಿದ ಕತ್ತಿಯಂತಾಗಿದೆ ನಮ್ಮ ತಲೆ. ಎರಡೂ ದೋಣಿಯಲ್ಲಿ ಕಾಲಿಟ್ಟಂತೆ ಅತ್ತ ಈಜಲಾಗದೆ,  ಇತ್ತ ಹೊರಗೂ ಬರಲಾಗದೆ ಮುಳುಗುವ ಪರಿಸ್ಥಿತಿ.. 

     ದುಡ್ಡಿದ್ದವನೇ ದೊಡ್ಡಪ್ಪ ಎನ್ನುವಂತೆ, ಇಡೀದಿನ ದುಡಿದು ಹಣ ಸಂಪಾದಿಸುವತ್ತ ಮಾತ್ರ ಗಮನ ಹರಿಸುತ್ತಿದ್ದೇವೆ. ಒಂದಷ್ಟು ಸಮಯವನ್ನು ದೇವರ ಕಾರ್ಯಕ್ಕಾಗಿ ಇಡಲು ನಮಗೆ ಪುರುಸೊತ್ತಿಲ್ಲ. ಬೆಳಗ್ಗಿನ ತಿಂಡಿ ಮುಗಿಸಿ ಮನೆಬಿಟ್ಟು ಕಛೇರಿಗೆ ಹೋದರೆ ಮರಳಿ ಬರುವುದು ರಾತ್ರಿ ಮಲಗುವ ಹೊತ್ತಿಗೆ. ನಾವು ಅಷ್ಟೂ ಬಿಸಿಯಾಗಿದ್ದೇವೆ. ಇಂದಿನ ಈ ಪರಿಸ್ಥಿತಿಯಲ್ಲಿ ನೆಮ್ಮದಿಗಾಗಿ ಎಲ್ಲೆಲ್ಲೋ ಹುಡುಕಾಡುತ್ತಿದ್ದೇವೆ. ಅದು ಬೇಕು, ಇದು ಬೇಕು, ಎಲ್ಲವೂ ಬೇಕೆನುತ ಆ ಬೇಕೆಂಬ ಸೀಕಿಗೆ ಬ್ರೇಕು ಬಿದ್ದು "ಇದ್ದುದು ಸಾಕು" ಎನ್ನುವಂತಾಗಬೇಕಿದೆ. 

ರಂಗನ ನೋಡದ ಕಣ್ಣೇತಕೆ....  

ರಂಗನ ನೋಡದ ಕಣ್ಣು ಇದ್ದೂ ಕುರುಡಾದಂತೆ. ಮೋಹನನು ಮುರಳಿಯನು ಊದಲು ಮೋಹಕ್ಕೊಳಗಾಗಿ ರಾಧೆಯು ಅವನ ಹೃದಯವನ್ನು ಗೆದ್ದಳು. ಹಾಗೆಯೇ ನಾವು ಅವನ ಕೊಳಲ ಗಾನಕೆ ಮನಸೋತು ನಮ್ಮ ಅಳಲನ್ನು ಅಳಿಸಿ ಮಧುರಸವ ಹೀರಿ ಭಕ್ತಿಯ ಸಾಗರದಲ್ಲಿ ಮಿಂದೇಳೋಣ... 

✍ ಮುರಳಿಕೃಷ್ಣ ಕಜೆಹಿತ್ತಿಲು

 

Category:World



ProfileImg

Written by Murali Krishna

DTP Worker, Vittal, Mangalore

0 Followers

0 Following