ವಿಜ್ಞಾನವು ಯಾವುದು ಸತ್ಯ ಮತ್ತು ಯಾವುದು ಮಿಥ್ಯ ಎಂಬುವುದನ್ನು ಸಾಕ್ಷಿ ಸಮೇತವಾಗಿ ತಿಳಿಸುವ ಒಂದುಶಕ್ತಿ. ವಿಜ್ಞಾನ ಕಲ್ಪನೆಗೆ ನಿಜರೂಪವನ್ನು ನೀಡುತ್ತದೆ. ಅಸಾಧ್ಯವೆಂದುಕೊಂಡಿದ್ದನ್ನು ಸಾಧ್ಯವಾಗಿಸುತ್ತದೆ.ನಮ್ಮ ಕಲ್ಪನೆಗೂ ನಿಲುಕದ ವಿಷಯಗಳನ್ನು ಸಂಶೋಧಿಸುತ್ತದೆ.ವಿನಾಷವಾದದನ್ನು ಪುನರ್ ಸೃಷ್ಟಿಸಬಲ್ಲದು.ವಿಜ್ಞಾನದ ಸಿದ್ಧಾಂತಗಳು ಕಟ್ಟುಕತೆಗಳಲ್ಲ ಅವುಗಳಿಗೆ ಪ್ರಾಯೋಗಿಕ ಸಾಕ್ಷ್ಯವನ್ನು ಒದಗಿಸಬೇಕು. ವಿಜ್ಞಾನ ಹಂತಹಂತವಾಗಿ ಸತ್ಯದ ಅನ್ವೇಷಣೆಯನ್ನು ಮಾಡುತ್ತದೆ ಮತ್ತು ಇದು ಪ್ರಗತಿ ಹೊಂದುತ್ತಲೇ ಇರುವುದು. ವಿಜ್ಞಾನ ఒంದು ಆದ್ಭುತಲೋಕ.ಪ್ರತಿ ಕ್ಷಣವೂ ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ. ವಿಜ್ಞಾನವಿಲ್ಲದೆ ನಾವಿಂದು ಬದುಕಲು ಸಾಧ್ಯವಿಲ್ಲ.
ವಿಜ್ಞಾನದಿಂದ ಮಾಲಿನ್ಯ ಮತ್ತು ಪ್ರಾಣಹಾನಿ ಹೆಚ್ಚಾಗುತ್ತಿದೆ ಎನ್ನುವವರು;ಮಾಲಿನ್ಯ ಮತ್ತು ಪ್ರಾಣಹಾನಿಯನ್ನು ಕಡಿಮೆಮಾಡುವ ಶಕ್ತಿಯೂ ವಿಜ್ಞಾನ ಕ್ಷೇತ್ರಕ್ಕೆ ಮಾತ್ರ ಇರುವುದೆಂಬುದನ್ನು ಮೊದಲು ಅರಿತುಕೊಳ್ಳಬೇಕು.ಮಾಲಿನ್ಯ ಮತ್ತು ಪ್ರಾಣಹಾನಿ ಕೇವಲ ವಿಜ್ಞಾನದಿಂದ ಮಾತ್ರವಲ್ಲ ನೈಸರ್ಗಿಕವಾಗಿಯೂ ಆಗುತ್ತದೆ.ಅದನ್ನು ತಡೆಗಟ್ಟಲು ಸಾಧ್ಯವಿರುವುದು ವಿಜ್ಞಾನಕ್ಕೆ ಮಾತ್ರ. ಅಣುಬಾಂಬಿನ ಆವಿಷ್ಕಾರದಿಂದ ಎರಡನೆಯ ಮಹಾಯುದ್ಧದಲ್ಲಿ ಲಕ್ಷಾಂತರ ಜನರು ಬಲಿಯಾದರು ಎನ್ನುವುದು ಎಷ್ಟು ಸತ್ಯವೋ, ಅದೇ ಅಣುಬಾಂಬಿನ ಹೆದರಿಕೆಯಿಂದ ಜಗತ್ತಿನಲ್ಲಿ ಮೂರನೆಯ ವಿಶ್ವಯುದ್ಧವಾಗದೆ ಕೋಟ್ಯಾಂತರ ಜನರ ಪ್ರಾಣ ಉಳಿದಿದೆ ಅನ್ನುವುದು ಅಷ್ಟೇ ಸತ್ಯ.ಪ್ಲಾಸ್ಟಿಕಿನಿಂದ ಮಾಲಿನ್ಯ ಹೆಚ್ಚಾಗುತ್ತಿದೆ ಎನ್ನುತ್ತಾರೆ. ಆದರೆ ಮಾಲಿನ್ಯವಾಗುತ್ತಿರುವುದು ಪ್ಲಾಸ್ಟಿಕ್ ನ ಆವಿಷ್ಕಾರದಿಂದಲ್ಲ.ನಮ್ಮ ನಿರ್ಲಕ್ಷದಿಂದ .ಇದೇ ಪ್ಲಾಸ್ಟಿಕನ್ನು ಮರದ ವಸ್ತುಗಳ ತಯಾರಿಕೆಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಇದರಿಂದ ಮರಗಳನ್ನು ಕಡಿಯುವುದು ತಪ್ಪಿ ಅದೆಷ್ಟು ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಲಾಗಿದೆ.ವಿಜ್ಞಾನದ ಸಂಶೋಧನೆಗಳಿಂದ ಮಹಾಮಾರಿ ರೋಗಗಳು ಉಲ್ಬಣವಾಗಿದೆ ಎನ್ನುವುದಾದರೆ ನೈಸರ್ಗಿಕವಾಗಿ ಹುಟ್ಟಿದ ಮಹಾಮಾರಿ ರೋಗಗಳನ್ನು ಇಲ್ಲವಾಗಿಸಿದ್ದು ಇದೇ ವಿಜ್ಞಾನ .ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿಲ್ಲದಿದ್ದರೆ ಈಗಿನ ಜನಸಂಖ್ಯೆಗೆ ಬೇಕಾದಷ್ಟು ಆಹಾರ ಮತ್ತು ಸಾಮಾಗ್ರಿಗಳನ್ನು ಪೂರೈಸಲು ಸಾಧ್ಯವೇ ಇರುತ್ತಿರಲಿಲ್ಲ. ಒಬ್ಬ ಬುದ್ದಿಮಾಂದ್ಯನನ್ನು ಸಾಮಾನ್ಯನಂತಾಗಿಸುವ, ಒಬ್ಬ ಕುರುಡ ಇಡೀ ಜಗತ್ತನ್ನು ನೋಡುವ ಹಾಗೆ,ಬಂಜೆಯೊಬ್ಬಳು ಮಗುವಿಗೆ ಜನ್ಮನೀಡುವಂತೆ ಹಾಗೂ ಮಾತನಾಡಲಾಗದ,ಚಲಿಸಲಾರದ ವ್ಯಕ್ತಿಯೊಬ್ಬ ಜಗತ್ತಿನ ಶ್ರೇಷ್ಠ ವಿಜ್ಞಾನಿ(ಸ್ಟೀಫನ್ ಹಾಕಿಂಗ್)ಯಾದದ್ದು. ಇವೆಲ್ಲ ಸಾಧ್ಯವಾಗುವುದು ವಿಜ್ಞಾನದಿಂದ ಮಾತ್ರ ಹಲವಾರು ಅಪರಾಧ ಕೃತ್ಯಗಳಲ್ಲಿ ನಿಜವಾದ ಅಪರಾಧಿಯನ್ನು ಕ್ಲಪ್ತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿರುವುದು ವಿಜ್ಞಾನದ ಸಹಾಯದಿಂದ. ಬಾವಿಯೊಳಗಿನ ಕಪ್ಪೆಯ ಹಾಗೆ ಹೊರಗಿನ ಪ್ರಪಂಚದಲ್ಲಿ ಏನಿದೆ ಎಂಬುದನ್ನು ತಿಳಿಯದವರಿಗೆ ಭೂಮಿಯ ಹೊರಗಿನ ಮತ್ತು ಒಳಗಿನ ಅದ್ಭುತ ಲೋಕವನ್ನು ಪರಿಚಯಿಸಿದ್ದು ವಿಜ್ಞಾನ. ಇತಿಹಾಸ ಪುರಾಣದ ಘಟನೆಗಳಿಗೆ ಆಧಾರ ಒದಗಿಸಿದ್ದು ವಿಜ್ಞಾನದ ಸಹಾಯದಿಂದ.
ಭೂಕಂಪ,ಸುನಾಮಿ,ಉಲ್ಕಾಪಾತ ಇತ್ಯಾದಿಗಳ ಮುನ್ಸೂಚನೆ ನೀಡಿ ಹೆಚ್ಚಿನ ಅಪಾಯವನ್ನು ಕಡಿಮೆ ಮಾಡುತ್ತಿರುವುದು ಇದೇ ವಿಜ್ಞಾನ. ಸಾವಿರಾರು ಪುಟಗಳ ಮಾಹಿತಿಯನ್ನು ಇಂದು ಒಂದು ಸಣ್ಣ ಸಾಧನದಲ್ಲಿ ಶಾಶ್ವತವಾಗಿ ಸಂಗ್ರಹಿಸಿಡಲು ಸಾಧ್ಯವಾಗಿರುವುದು, ತುರ್ತು ಅಗತ್ಯಗಳನ್ನು ಆದಷ್ಟು ಬೇಗ ಗುರಿ ತಲುಪಿಸಲು ಸಾಧ್ಯವಾಗಿರುವುದು ವಿಜ್ಞಾನದ ಆವಿಷ್ಕಾರದಿಂದ. ದೇಶದ ರಕ್ಷಣೆ ಕೂಡ ವಿಜ್ಞಾನದ ಅಭಿವೃದ್ಧಿ ಮೇಲೆ ಅವಲಂಬಿತವಾಗಿದೆ. ವಿಜ್ಞಾನದ ಆವಿಷ್ಕಾರಗಳಿಂದ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಅನ್ನುವುದಾದರೆ, ಅಂತಹ ಹಲವಾರು ವಿಜ್ಞಾನದ ಆವಿಷ್ಕಾರಗಳಿಂದ ಹಲವು ಜನರು ಕೆಲಸ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.ಯಾವ ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದಿರುತ್ತದೋ ಆ ದೇಶ ಬಹುಬೇಗನೆ ಸರ್ವತೋಮುಖ ಅಭಿವೃದ್ಧಿ ಹೊಂದುತ್ತದೆ.ವಿಜ್ಞಾನವಿಲ್ಲದಿದ್ದರೆ ಇತರೆ ಯಾವುದೇ ವಿಭಾಗಗಳು ಅಭಿವೃದ್ಧಿ ಹೊದುತ್ತಿರಲಿಲ್ಲ,ವಿಜ್ಞಾನ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆ ನೀಡಿದೆ.
ವಿಜ್ಞಾನ ಉಳಿದ ವಿಭಾಗಗಳಿಗಿಂತ ಮೇಲಲ್ಲ.ಆದರೆ ವಿಜ್ಞಾನಕ್ಕಿಂತ ಮಿಗಿಲಾದ ವಿಭಾಗಗಳಿಲ್ಲ. ವಿಜ್ಞಾನಕ್ಕೆ ಆದಿಯೂ ಇಲ್ಲ;ಅಂತ್ಯವೂ ಇಲ್ಲ.ವಿಜ್ಞಾನ ಕೂಡ ತನಗಿಂತ ಮಿಗಿಲಾದ ಶಕ್ತಿ ಇದೆ ಎಂದು ಒಪ್ಪಿಕೊಳ್ಳುತ್ತದೆ.ಎಲ್ಲಿಯವರೆಗೆ ವಿಜ್ಞಾನ ಆ ಶಕ್ತಿ ಯಾವುದೆಂದು ಕಂಡುಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಆ ಶಕ್ತಿಯನ್ನು ದೇವರೆಂದು ಪೂಜಿಸಲಾಗುತ್ತದೆಯಷ್ಟೆ. ವಿಜ್ಞಾನದ ಉದ್ದೇಶ ಸತ್ಯಾನ್ವೇಷಣೆ ಮಾಡುವುದು ಮತ್ತು ಮಾನವನ ಜೀವನವನ್ನು ಸರಳೀಕರಣಗೊಳಿಸುವುದು ಮಾತ್ರವೇ ಆಗಿದೆ.ಆದ್ದರಿಂದ ವಿಜ್ಞಾನವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದರ ಒಳಿತು ಮತ್ತು ಕೆಡುಕು ನಿರ್ಧಾರವಾಗುತ್ತದೆ.
0 Followers
0 Following