Do you have a passion for writing?Join Ayra as a Writertoday and start earning.

ಒತ್ತಡದ ಬದುಕಿಗೆ ಉತ್ತರ ನೀಡುವ ಸಾಂಝಿ ಕಲೆ!

ProfileImg
16 May '24
3 min read


image

ಒತ್ತಡದ ಬದುಕಿನಿಂದ ಮುಕ್ತಿ ಹೊಂದಲು ಬಯಸಿ ಇಂದು ಯುವಕರು, ಗೃಹಿಣಿಯರು ಸಾಂಝಿ ಕಲೆಯ ಕಡೆಗೆ ಸೆಳೆಯಲ್ಪಡುತ್ತಿದ್ದಾರೆ. ಕತ್ತರಿ ಮೂಲಕ ಕಾಗದದ ಮೇಲೆ ನಾನಾ ಕಲಾಕೃತಿಗಳು ಸೃಷ್ಟಿಯಾಗಲು ಕಾರಣವಾಗುವ `ಸಾಂಝಿ' ಕಲೆ ಇಂದು ಸೂಜಿಗಲ್ಲಿನಂತೆ ಮಕ್ಕಳು, ಯುವಕರೆನ್ನದೆ ಎಲ್ಲರನ್ನೂ ಆಕರ್ಷಿಸುತ್ತಿದೆ!

ಸಾಂಝಿ ಕಲೆ ಮೇಲ್ನೋಟಕ್ಕೆ ಕಾಗದದ ಮೇಲೆ ಮೂಡಿದ ವಿವಿಧ ಚಿತ್ರಗಳ ಚಿತ್ತಾರದಂತೆ ಕಾಣುತ್ತದೆ. ಆದರೆ ಇದು ತನ್ನೊಡಲಿನಲ್ಲಿ ಹಲವಾರು ವಿಶಿಷ್ಟತೆಗಳನ್ನು ಅಡಗಿಸಿಕೊಂಡಿದೆ. ವಿವಿಧ ಭಾವನೆಗಳನ್ನು ತೆರೆದಿಡುವ ಪ್ರಾಚೀನ ಸಾಂಝಿ ಕಲೆಯ ಕಡೆಗೆ ಗಡಿಬಿಡಿಯ ಇಂದಿನ ಆಧುನಿಕ ಕಾಲದಲ್ಲಿ ಸಾಕಷ್ಟು ಜನರು ಸೆಳೆಯಲು ಅದು ಹೊಂದಿರುವ ವಿಶಿಷ್ಟ ಗುಣಗಳೇ ಕಾರಣವಾಗಿದೆ.  

ಕಳೆದ 20 ವರ್ಷಗಳಿಂದ ಸಾಂಝಿ ಕಲೆಯಲ್ಲಿ ನಿರತರಾಗಿರುವ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು, ಸಾಂಝಿ ಕತ್ತರಿ ಕಲೆಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ಇವರು ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿ ಪ್ರದರ್ಶನ, ಕಾರ್ಯಾಗಾರ ಹಮ್ಮಿಕೊಳ್ಳುತ್ತಿದ್ದಾರೆ. ತಮ್ಮ ಕಲೆಯ ಮೂಲಕ ಯುವಕ, ಯುವತಿಯರನ್ನು ಸೂಜಿಗಲ್ಲಿನಂತೆ ಸಾಂಝಿ ಕಲೆ ಸೆಳೆಯುವ ಪರಿಯ ಬಗ್ಗೆ ಹುಸೇನಿ ತಮ್ಮದೇ ಆದ ವಿವರಣೆ ನೀಡುತ್ತಾರೆ. ಈ ಕಲೆಯ ವಿಶೇಷತೆ ಬಗ್ಗೆ ಹುಸೇನಿ  ಅವರು ವಿವರಿಸುವ ಅಂಶಗಳು ಈ ಜನಪದ ಕಲೆಯ ಪುನರುತ್ಥಾನದ ಬಗ್ಗೆ ಒಳನೋಟ ಬೀರುತ್ತದೆ.

ಮಥುರಾದ ನಂಟು: ಸಾಂಝಿ ಕಲೆಗೂ ಕೃಷ್ಣನ ಹುಟ್ಟೂರಾದ ಮಥುರಾಕ್ಕೂ ಬಹಳ ನಂಟಿದೆ. ಇದು ಒಂದು ರೀತಿಯಲ್ಲಿ ಗಳಸ್ಯ-ಕಂಠಸ್ಯ ಎನ್ನುವಷ್ಟು. ೧೪ನೇ ಶತಮಾನದಲ್ಲಿ ಕೃಷ್ಣನ ಆರಾಧನೆ ವೇಳೆ ಭಕ್ತರು ಕಾಗದದಲ್ಲಿ ಕೃಷ್ಣನ ವಿವಿಧ ವಿನ್ಯಾಸಗಳನ್ನು ರಚಿಸುತ್ತಿದ್ದರು. ಈ ಬಗ್ಗೆ ಜನಪದದಲ್ಲಿ ಉದಾಹರಣೆಗಳು ಸಿಗುತ್ತವೆ. ಆಗ ಕೃಷ್ಣನ ಮೇಲೆ ಮಾತ್ರ ವಿನ್ಯಾಸಗಳನ್ನು ಬರೆಯಲಾಗುತ್ತಿತ್ತು. ಆದರೆ ಆಧುನಿಕ ಕಾಲದಲ್ಲಿ ಮನುಷ್ಯ ಬದುಕನ್ನು  ನೋಡುವ ರೀತಿ ಬದಲಾಗಿದೆ. ಹಾಗಾಗಿ ಇಂದು ಮುಖವಾಡದಲ್ಲಿ ಮನುಷ್ಯನ ಭಾವನೆಗಳು ಸೇರಿದಂತೆ ಪಶು, ಪಕ್ಷಿಗಳ ವಿನ್ಯಾಸಗಳೂ ಮೂಡಲಾರಂಭಿಸಿವೆ ಎನ್ನುತ್ತಾರೆ ಹುಸೇನಿ.

ಟೆನ್ಶನ್ ಕ್ಷೇತ್ರದವರಿಗೆ ಈ ಕಲೆ ಇಷ್ಟ: ನಂಬಿದರೆ ನಂಬಿ, ಇಲ್ಲ ಬಿಡಿ. ಸಾಂಝಿ ಕಲೆಯನ್ನು ಈಗ ಹೆಚ್ಚು ಇಷ್ಟ ಪಡುವವರು ಸಾಫ್ಟ್ವೇರ್ ಎಂಜಿನಿಯರ್ ಸೇರಿದಂತೆ ಇತರ ಒತ್ತಡದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು. ಮನೆ ಕೆಲಸದಲ್ಲಿ ೨೪ ಗಂಟೆ ನಿರತರಾಗುವ ಗೃಹಿಣಿಯರೂ ಈ ಕಲೆಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಸದಾ ಟೆನ್ಶನ್‌ಗೆ ಒಳಗಾಗುವವರು ಯಾಕೆ ಸಾಂಝಿ ಕಲೆ ಕಡೆ ಆಕರ್ಷಿತರಾಗುತ್ತಾರೆ ಎಂದು ಪ್ರಶ್ನಿಸಿದರೆ ಹುಸೇನಿ ಅವರ ಉತ್ತರ ಕುತೂಹಲ ಹುಟ್ಟಿಸುತ್ತದೆ.

`ಸಾಫ್ಟ್ವೇರ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬಹಳ ಒತ್ತಡವಿರುತ್ತದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಭಾವನೆಗಳನ್ನು ಹೊರ ಹಾಕಲು ಸಾಂಝಿ ಕಲೆ ಉತ್ತಮ ಮಾರ್ಗವಾಗಿದೆ. ಇಂಥವರು ಕತ್ತರಿ ಮೂಲಕ ಕಾಗದದ ಮೇಲೆ ಒತ್ತಡ ಹೊರಹಾಕುತ್ತಾರೆ. ಬಳಿಕ ಈ ಮೂಲಕ ಹೊರ ಹೊಮ್ಮುವ ಕಲಾಕೃತಿಯನ್ನು ಕಂಡು ಖುಷಿ ಪಡುತ್ತಾರೆ. ಅವರು ಅದೆಷ್ಟು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದರೆ ಇವರನ್ನು ಯಾರಾದರೂ ಮಧ್ಯೆ ಕರೆದರೂ ಅವರು ಓ ಗೊಡುವುದಿಲ್ಲ!' ಎನ್ನುತ್ತಾರೆ ಹುಸೇನಿ.

ಅದಕ್ಕಾಗಿಯೇ ಹುಸೇನಿ ಅವರು ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಸಾಂಝಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ! ಎಂದು ಸಾಂಝಿ ಕಲೆಯ ಬಗ್ಗೆ ವ್ಯಾಖ್ಯಾನಿಸುತ್ತಾರೆ. ಇಂದಿನ ಗಡಿಬಿಡಿಯ, ಆಧುನಿಕತೆಯ ನಾಗಾಲೋಟದಲ್ಲೂ ಪ್ರಾಚೀನ ಕಲೆಯಾದ ಸಾಂಝಿ ಕಲೆ ಒತ್ತಡ ನಿವಾರಣೆ ಮಾಡುವ ಕಾರಣ ಪ್ರಸಿದ್ಧವಾಗುತ್ತಿದೆ ಎನ್ನುತ್ತಾರೆ ಅವರು.

ಗಣಿತಕ್ಕೂ ಬಳಕೆ: ಸೃಜನಶೀಲತೆಯನ್ನು ಒಡಲಲ್ಲಿ ಇಟ್ಟುಕೊಂಡಿರುವ ಈ ಕಲೆಯ ಮೂಲಕ ಗಣಿತವನ್ನೂ ಮಕ್ಕಳಿಗೆ ಕಲಿಸಲು ಸಾಧ್ಯ. `ಜ್ಯಾಮಿತಿಯನ್ನು ಪುಸ್ತಕದ ಮೇಲೆ ಬರೆಯುವ ಬದಲು ಕತ್ತರಿ ಮೂಲಕ ಕಾಗದದ ಮೂಲಕ ಬರೆಯುವುದು ಸುಲಭ. ಈ ಮೂಲಕ ಸುಲಭವಾಗಿ ವೃತ್ತ, ಚೌಕ, ಸರಳರೇಖೆ ಮೊದಲಾದ ಚಿತ್ತಾರಗಳನ್ನು ಕಾಗದದ ಮೇಲೆ ಬಿಡಿಸಬಹುದು. ಇದರಿಂದ ಮಕ್ಕಳು ಸುಲಭವಾಗಿ ಗಣಿತವನ್ನು ಕಲಿಯುತ್ತಾರೆ' ಎನ್ನುವುದು ಹುಸೇನಿ ಅವರು ಹೇಳುವ ಮತ್ತೊಂದು ರಹಸ್ಯ!

ಸಾಂಝಿ ಕಲೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಹುಸೇನಿ ಮೂಲತಃ ಮಂಡ್ಯ ಜಿಲ್ಲೆಯ ಶಿವನಸಮುದ್ರಂನವರು. ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ್ನಲ್ಲಿ ಡಿಪ್ಲೋಮಾ, ಧಾರವಾಡದ ಕರ್ನಾಟಕ ವಿವಿಯಲ್ಲಿ ಚಿತ್ರಕಲೆಯಲ್ಲಿ ಬಿಎಫ್‌ಎ ಪದವಿ ಪಡೆದಿದ್ದಾರೆ.

ಇದುವರೆಗೆ ಹಲವು ಸಾಂಝಿ ಕಲೆ ಏಕವ್ಯಕ್ತಿ ಪ್ರದರ್ಶನ ನಡೆಸಿದ್ದಾರೆ. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಈ ಕಲೆಯ ಪ್ರಚಾರದಲ್ಲಿ ನಿರತರಗಿದ್ದಾರೆ. ಸಾಂಝಿ ಕಲೆ ಕುರಿತು ಬುದ್ಧಿಮಾಂಧ್ಯ ಶಾಲೆಗಳಲ್ಲೂ ಶಿಬಿರ ನಡೆಸಿದ್ದಾರೆ. ಅನೇಕ ಪ್ರಶಸ್ತಿ ಇವರಿಗೆ ಒಲಿದಿದೆ. ಬೆಂಗಳೂರು ಸೇರಿದಂತೆ ಶಾಲೆ, ಸಂಘ-ಸ0ಸ್ಥೆಗಳಲ್ಲಿ ಇವರು ಸಾಂಝಿ ಕಲೆ ಕುರಿತು ತರಬೇತಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ.

ಗಣೇಶನ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿರುವ ಹುಸೇನಿ ಅವರು ಬಣ್ಣದ ಗಣಪತಿಯ ಬಳಕೆಯಂದ ಸೀಸದ ಅಂಶ ವಿಸರ್ಜನೆಯ ವೇಳೆ ನೀರಿಗೆ ಸೇರಿ ಜಲಚರಗಳಿಗೆ ತೊಂದರೆ ಆಗುವ ನಿಟ್ಟಿನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಹಮ್ಮಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ  ಪೇಪರ್ ಗಣೇಶ ತಯಾರಿ ಮೂಲಕ ಗಮನ ಸೆಳೆದಿದ್ದಾರೆ. ಇವರು ಗಣೇಶನ ರೇಖಾಚಿತ್ರಗಳನ್ನೂ ರಚಿಸಿದ್ದಾರೆ.

 ಇವರ ಬಳಿ 7 ಸಾವಿರಕ್ಕೂ ಹೆಚ್ಚು ವಿವಿಧ ಬೆಂಕಿ ಪೊಟ್ಟಣಗಳ ಸಂಗ್ರಹವೂ ಇದೆ. ಸಾಂಝಿ ಕಲೆಯ ಬಗ್ಗೆ ಆಸಕ್ತರು ಹುಸೇನಿ ಅವರನ್ನು ಸಂಪರ್ಕಿಸಬಹುದು.  ಮೊ.6362339264

-ಅರುಣ್ ಕಿಲ್ಲೂರು

Category:Arts and Crafts


ProfileImg

Written by Arun Killuru

Author,Journalist,Photographer