ಸಂಕ್ರಾಂತಿ ಬಾಲ್ಯದ ನೆನಪು
ಬಾಲ್ಯದ ನೆನಪುಗಳೆಂದರೆ ಹಾಗೇ……. ತುಂತುರು ಮಳೆಗೆ ಮುಖವೊಡ್ಡಿದ ಹಾಗಿನ ಅಪ್ಯಾಯತೆ .ಮಗು ಚಾಕಲೇಟನ್ನು ಕಾದಿಟ್ಟುಕೊಂಡು ತುಣುಕು ತುಣುಕಾಗಿ ಸವಿಯುವಂತೆ . ಈ ಚಿಕ್ಕಂದಿನ ನೆನಪುಗಳು ನೆನೆಸಿಕೊಳ್ಳಲು ಬರೆಯಲು ವಿಶೇಷ ಸಂದರ್ಭಗಳ ನೆವ ಅಷ್ಟೇ ……..
೭೦_೮೦ರ ದಶಕ. ಮಧ್ಯಮವರ್ಗದ ಕುಟುಂಬ . ಒಬ್ಬರ ಸಂಪಾದನೆಯ ಇತಿಮಿತಿಯಲ್ಲಿ ಸಂಪ್ರದಾಯಗಳನ್ನು ಬಿಡದೆಯೇ ಹಬ್ಬದ ಆಚರಣೆ ಮಾಡುವ ಕಾಲ . ಜನವರಿ ಬರುತ್ತಿದ್ದಂತೆ ಹಬ್ಬದ ಉಲ್ಲೇಖ ಶುರು .ತಿಂಗಳ ಸಾಮಾನು ಬರೆಯುವ ಪಟ್ಟಿಯಿಂದ ಆರಂಭ. ಹಬ್ಬಕ್ಕೆಂದೇ ಪ್ರತ್ಯೇಕ ಎಳ್ಳಿನ ಸಾಮಾನು ಸಕ್ಕರೆಗಳ ಪಟ್ಟಿ ಹಬ್ಬದ ಆಗಮನದ ಸೂಚನೆ ಕೊಡ್ತಿತ್ತು. ಸಾಮಾನ್ಯ ಅಮ್ಮ ಹೇಳುವುದು ನಾನು ಬರೆಯುವುದು. ಹಾಗಾಗಿ ಎಲ್ಲ ಸಾಮಾನುಗಳ ಪರಿಚಯ ನನಗೆ ಆಗಿರುತ್ತಿತ್ತು. ಯಾವುದನ್ನೂ ರೆಡಿ ಮೇಡ್ ತರದೆ ಉತ್ತರದ ಎಲ್ಲವನ್ನು ಮನೆಯಲ್ಲಿ ತಯಾರಿಸುತ್ತಿದ್ದ ಆ ಕಾಲ ನಿಜಕ್ಕೂ ಹಬ್ಬವನ್ನು ಸಂಭ್ರಮಿಸುವುದೇ ಆಗಿತ್ತು. ಮನೆಯವರೆಲ್ಲರ ಭಾಗವಹಿಸುವಿಕೆ ಸಂತಸದ ಸಹಭಾಗಿತ್ವದ ಕುರುಹಾಗಿತ್ತು .ಅಕ್ಕಪಕ್ಕದವರು ಅಂಗಳದಲ್ಲಿ ಕುಳಿತು ಕೊಬ್ಬರ ಬೆಲ್ಲ ಹೆಚ್ಚುವ ದೃಶ್ಯ ಇಂದು ನೋಡಲಿರಲಿ ಕಲ್ಪಿಸಿಕೊಳ್ಳುವುದೂ ಕಷ್ಟ .ತಮ್ಮ ಕೆಲಸ ಮುಗಿಸಿ ಅಥವಾ ಅದಕ್ಕೆ ಮುಂಚೆಯೇ ಗೆಳತಿಯರ ಸಮಯಕ್ಕೂ ಸಹಾಯಕ್ಕೂ ಒದಗುತ್ತಿದ್ದ ಪರಿಯಂತೂ ಅದ್ಭುತ. ಇನ್ನು ಸಕ್ಕರೆ ಅಚ್ಚಿನ ಕೆಲಸ ಅಂತೂ ಕೂಡಿ ಮಾಡುವ ಕೆಲಸವೇ ಸೈ .ಮೂರು ನಾಲ್ಕು ಜನ ಒಬ್ಬರ ಮನೆಯಲ್ಲಿ ಸೇರಿ ವಿವಿಧ ಅಚ್ಚಿನ ಮನೆಗಳಲ್ಲಿ ಸಕ್ಕರೆ ಪಾಕ ಹೊಯ್ದು ಎರಕ ತೆಗೆಯುತ್ತಿದ್ದುದಂತೂ ಆಗ ಚಿಕ್ಕ ಮಕ್ಕಳಾಗಿದ್ದ ನಮಗಂತೂ ಸೋಜಿಗದ ದೃಶ್ಯವೇ . ಎಲ್ಲದಕ್ಕೂ ಮಧ್ಯೆ ಹೋಗಿ ಬೈಸಿಕೊಳ್ಳುತ್ತಿದ್ದುದು ಸಾಮಾನ್ಯ .
ಹಬ್ಬದ ದಿನ ಎಳ್ಳೆಣ್ಣೆ ತಲೆ ಸ್ನಾನ ಹೊಸ ಬಟ್ಟೆ ಧರಿಸಿ ಬೆಳಿಗ್ಗೆಯೇ ಯಾರಾದರೂ ಹಿರಿಯ ಮುತ್ತೈದೆಗೆ ಎಳ್ಳು ಮತ್ತು ಬಾಗಿನ ಕೊಟ್ಟು ಬಂದು ಸೀ ಪೊಂಗಲ್ ಖಾರಾ ಪೊಂಗಲ್ ತಿಂದರೆ ಬೆಳಗಿನ ಉಪಹಾರ ಸಂಪೂರ್ಣ .ಮಧ್ಯಾಹ್ನ ಒಬ್ನಟ್ಟಿನೂಟ. ಒಬ್ಬಟ್ಟು ಮಾಡಿದ ಮೇಲೆ ಪಾಂಗೀತವಾಗಿ ಅನ್ನತೊವ್ವೆ ಮಜ್ಜಿಗೆಹುಳಿ ಹುಳಿಯನ್ನ ಆಂಬೊಡೆ ಪಾಯಸ ಎರಡು ತರಹದ ಪಲ್ಯ ಕೋಸಂಬರಿ ಗಳೊಂದಿಗೆ ಊಟ ಸಂಪನ್ನ. ನಿಜವಾಗಿ ಅಷ್ಟೆಲ್ಲಾ ನಾವೇನಾ ತಿನ್ನುತ್ತಿದ್ದುದು ಅಂತ ಈಗ ಆಶ್ಚರ್ಯವಾಗುತ್ತದೆ . ಬೆಳಿಗ್ಗೆ ಸೀ ಪೊಂಗಲ್ ತಿಂದು ಮತ್ತೆ ಊಟಕ್ಕೆ ಸಿಹಿ ನಾ ಅದು ಒಬ್ಬಟ್ಟು ಎೊದು ಮೂಗೆಳೆಯುವ ಈ ಕಾಲದಲ್ಲಿ ಮಾಡುವ ಆಸೆ ಇದ್ದರೂ ತಿನ್ನುವರಿಲ್ಲದೆ ಆ ಬಯಕೆ ಅಲ್ಲೇ ಮುರುಟುತ್ತದೆ . ಕಾಲಾಯ ತಸ್ಮೈನ್ನಮಃ .
ಇನ್ನು ನಾಲ್ಕು ಗಂಟೆಗೆಲ್ಲ ಎಳ್ಳು ಬೀರಲು ಸಿದ್ಧವಾಗಿ ಹೊರಡುವುದು. ಪ್ಲಾಸ್ಟಿಕ್ ಕವರ್ಗಳ ಬಳಕೆ ಇಲ್ಲದಾಗ ಅಂತೂ ಒಂದು ದೊಡ್ಡ ಡಬ್ಬಿಯಲ್ಲಿ ಎಳ್ಲು ಅದಕ್ಕೆ ಅಳತೆಗೆ ಪುಟ್ಥ ಬಟ್ಟಲು ಇನ್ನೊಂದು ಡಬ್ಬಿಯಲ್ಲಿ ಸಕ್ಕರೆಯಚ್ಚು ಕಬ್ಬು ಬಾಳೆಹಣ್ಣು ಒಂದು ಬುಟ್ಟಿಗೆ ಜೋಡಿಸಿ ಸ್ವಲ್ಪ ದೂರವಿರುವ ಬಂಧುಮಿತ್ರರ ಮನೆಗೆ ಹೊರಡುತ್ತಿದ್ದದು. ನೆರೆಹೊರೆಯ ಮನೆಗಳಿಗೆ ತಟ್ಟೆಯಲ್ಲಿ ಜೋಡಿಸಿ ಮೇಲೆ ಚಿತ್ತಾರದ ಕಲಾತ್ಮಕ ಬಟ್ಟೆ ಹೊದಿಸಿ ಎಳ್ಳ್ಳು ಬೀರಲು ಹೋಗುವ ಸಂಭ್ರಮ. ಈಗ ಎಳ್ಳು ಬೀರಲು ಹೊರಡಲು ಮಕ್ಕಳಿಗೆ ಬಿಗುಮಾನ .
ದೂರದೂರದ ನೆಂಟರ ಸ್ನೇಹಿತರ ಮನೆಗೆ ಹೋಗಿ ಎಳ್ಳು ಬಿೊರುವ ಕಾರ್ಯಕ್ರಮ ರಥಸಪ್ತಮಿವರೆಗೂ ನಡೆಯುತ್ತಲೇ ಇರುತ್ತಿತ್ತು . ಇನ್ನು ಮನೆಯಲ್ಲಿ ಎಳ್ಳು ಮುಗಿಯುವವರೆಗೂ ಬಾಯಾಡಿಸುತ್ತಲೇ ಇರುತ್ತಿದ್ದೆವು .
ಕಬ್ಬುಗಳನ್ನು ಸಿಪ್ಪೆ ಹಲ್ಲಿನಲ್ಲಿ ಕಚ್ಚಿ ತೆಗೆದು ತಿನ್ನುತ್ತಿದ್ದುದನ್ನು ನೆನೆಸಿಕೊಂಡು ಇದನ್ನು ಬರೆಯುವಾಗಲೂ ಪ್ರಯತ್ನವಾಗಿ ಕೈ ಈಗ ಬಾಯಿಯ ಬಳಿಗೆ ಹೋಯಿತು. (ಪ್ಲೀಸ್ ನಗಬೇಡಿ ). ಈಗ ಕಬ್ಬು ಸಿಪ್ಪೆ ತೆಗೆದು ಹೋಳು ಮಾಡಿ ಕೊಟ್ಟರೂ ತಿನ್ನಲು ಉದಾಸೀನ .ಎಳ್ಳು ಕೊಟ್ಟರೆ ಯಾರಪ್ಪ ತಿಂತಾರೆ ಅನ್ನುವ ಯುವಜನಾಂಗ .
ಜೀವನದ ಸಂತೋಷಗಳ ಪರಿಭಾಷೆ ಬದಲಾಗಿದೆಯೇ ? ಅಥವಾ ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿ ಕಾಣುವುದನ್ನು ನಾವು ಈ ಧಾವಂತದ ಜೀವನದಲ್ಲಿ ಕಳೆದುಕೊಂಡು ಬಿಟ್ಟಿದ್ದೇವೆಯೇ? ಅಂದಿಗಿಂತ ಹಣದ ವಿಷಯದಲ್ಲಿ ಹೆಚ್ಚು ಅನುಕೂಲವಂತರಾಗಿರುವುದು ವಸ್ತುಗಳ ವಿಷಯಗಳ ಬಗೆಗಿನ ಆಸ್ಥೆ ಕಡಿಮೆಯಾಗುವಂತೆ ಮಾಡಿದೆಯೇ? ಏನೇ ಆದರೂ ಮನೆಯವರೆಲ್ಲರೂ ಸೇರಿ ಒಟ್ಟಾಗಿ ಊಟ ಮಾಡಿ ಜತೆಯಲ್ಲಿ ಕಾಲ ಕಳೆಯುವ ಇಂತಹ ಕ್ಷಣಗಳನ್ನು ಹಬ್ಬದ ಮೂಲಕ ಬರಮಾಡಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ . ವಿದ್ಯುನ್ಮಾನ ಉಪಕರಣಗಳ ಸಾಂಗತ್ಯದಿಂದ ಸ್ವಲ್ಪ ಕಾಲವಾದರೂ ವಿಮುಖವಾಗಿ ಸಾಮಾಜಿಕವಾಗಿ ಬೆರೆಯುವ ಸಂದರ್ಭಗಳನ್ನು ಸೃಷ್ಟಿಸುವ ಈ ಹಬ್ಬಗಳನ್ನು ಬದಲಾದ ರೀತಿಯಲ್ಲಾದರೂ ಸ್ವಾಗತಿಸಿ ಆಚರಿಸಿದರೆ ಇವುಗಳ ಆಚರಣೆ ಮುಂದಿನ ಪೀಳಿಗೆಗೂ ಸಾಗಬಹುದು ಅದನ್ನು ಅಗಗೊಳಿಸುವ ಹೊಣೆ ನಮ್ಮೆಲ್ಲರದ್ದು ಅಲ್ಲವೇ ?
#ಪದಪದ್ಯೋತ್ಸವ
ಹಳ್ಳಿಯ ಸಂಕ್ರಾಂತಿ ಸಂಭ್ರಮ
ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು
ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು
ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು
ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು .
ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ
ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ
ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು
ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು .
ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ
ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ
ತಲೆದೂಗಿ ಆಡ್ತ್ಯಾವೆ ತೆಂಗು ಕಂಗು ಬಾಳೆ
ತನ್ನಿ ಕಲಸ ಕಟ್ಟೋಕೆ ಬಿರ್ನೆ ಒಂದು ಹೊಂಬಾಳೆ.
ಕೇರಿ ಕೇರೀನಾಗೆ ಅರಳಿ ನಿಂತ್ಯಾವೆ ರಂಗೋಲಿ
ಹೆಂಗೇಳೇರು ಹಾಕವ್ರೆ ಒಬ್ರಿಗೊಬ್ರು ಪೈಪೋಟೀಲಿ
ಚುಕ್ಕಿ ಎಳೆ ಹೂಗೋಳು ಸೇರಿ ಆಗವೆ ಚಿತ್ತಾರ
ಒಡ್ಲಾಗೆ ರಂಗು ತುಂಬಿಸ್ಕೊಂಡೂ ಮಾಡ್ತಿವೆ ವಯ್ಯಾರ.
ಹಾದಿಬೀದೀ ಪೂರಾ ಹೂರ್ಣದ ಹೋಳ್ಗೆ ಘಮಲೂ
ಮೈಮನ ಆವರಿಸೈತೆ ಹಿಗ್ಗಿನಾ ಅಮಲೂ
ಬೀಗರು ಬಿಜ್ಜರು ಭಾವ್ನೆಂಟ್ರು ಮನೇಕ್ ಬಂದಿರಲು
ನಗೆಸಾರಕ್ಕೇನ್ ಕಮ್ಮಿ ಇಲ್ಲˌ ಮಾಡ್ತೌವ್ರೆ ಕುಸಾಲು.
ಒಸ್ಬಟ್ಟೆ ಅಲಂಕಾರ ಹುಡ್ಗೀರ್ ಓಡಾಟ ಸರಭರ
ಗಂಡೈಕ್ಳ ಎದೇಲಿ ಏನೋ ಮಿಂಚು ಸಂಚಾರ
ಎಳ್ಳು ಬೀರೋಕ್ ಹೋಗೋರ್ನ ನೋಡೋದೇ ಹಬ್ಬ
ದಿನಾ ದಿನಾ ಸಿಕ್ತಾದಾ ಕಣ್ಗೋಳ್ಗಿಂತಾ ಹಬ್ಬಾ.
ಎತ್ತು ಗಿತ್ತು ರಾಸ್ಗೋಳಿಗೆ ಮಾಡಿಸ್ಬಿಟ್ಟು ಮಜ್ಜನ
ಟೇಪು ರಿಬ್ಬನ್ ಸುತ್ತಿ ಮಾಡ್ತಾರಲಂಕಾರಾವಾ
ಕೊಂಡ ಹಾಕಿ ಕಿಚ್ಚು ಹಾಯ್ಸಿ ಓಡ್ಸೋದ ನೋಡಿ
ಬಿಟ್ಟೋಗ್ತೈತೆ ಕೆಟ್ ದೃಸ್ಟಿ ಇನ್ನೂ ಏನೇನೋ ಹಾವ್ಳಿ.
ವರ್ಸಪೂರಾ ಜಂಜಡದಿಂದ ಖುಸಿ ಕೋಡೋದಿದು
ರೈತಾಪಿ ಜನಗೋಳ ಅಚ್ಮೆಚ್ಚಿನ್ ಅಬ್ಬಾ ಇದು
ಬನ್ನಿ ಎಲ್ಲಾ ಮಾಡೋಣ್ಕಂತೆ ಸಡ್ಗರದಾ ಸಂಕ್ರಾಂತಿ
ಕೊಚ್ಚಿ ಓಗ್ಲಿ ರೋಸ ದ್ವೇಸ ಸಾಸ್ವತ್ವಾಗ್ಲಿ ಪ್ರೀತಿ.
ಸುಜಾತ ರವೀಶ್ಸಮಸ್ತ ಮಿತ್ರ ಬಾಂಧವರಿಗೂ ಸಂಕ್ರಾಂತಿಯ ಶುಭಾಶಯಗಳು.ಈ ಸುಗ್ಗಿ ಹಬ್ಬ ಹಿಗ್ಗು ತರಲಿ.
ಸಂಕ್ರಾಂತಿ
ಬಂದಿದೆ ಸಂಭ್ರಮದ ಹಬ್ಬ
ಮಾಗಿ ಚಳಿಯ ಮರೆಸೋ ಹಬ್ಬ
ಸುಗ್ಗಿ ಹಿಗ್ಗು ಮೆರೆಸೋ ಹಬ್ಬ
ಸಂತೋಷದ ಸಂಕ್ರಾಂತಿ ಹಬ್ಬ .
ರೈತ ಸುರಿದ ಬೆವರ ಹನಿ ಮುತ್ತಾಗಿದೆ
ಪರಿಶ್ರಮದ ಫಲವಾಗಿ ಫಸಲು ಬಂದಿದೆ
ಭೂದೇವಿಯು ಮಕ್ಕಳನ್ನು ಹರಿಸಿದ ಸಮಯ
ಬಂದ ಧಾನ್ಯ ದೇವಿಯನ್ನು ಸ್ವಾಗತಿಸುವ ಸಮಯ .
ಮುಂಜಾನೆ ಎಳ್ಳೆಣ್ಣೆ ಅಭ್ಯಂಜನ
ದೇಗುಲಕ್ಕೆ ತೆರಳಿ ಭಗವದ್ಧರ್ಶನ
ಎಳ್ಳು ಸವಿಯ ಎಲ್ಲರಿಗೂ ಹಂಚಿ ಬರೋಣ
ಒಳ್ಳೆ ಮಾತನಾಡಿ ಹರುಷದಿ ಸಂಭ್ರಮಿಸೋಣ .
ಪಶು ಬಂಧುಗಳಿಗೂ ಇಂದು ಮಜ್ಜನ
ರಂಗು ರಂಗು ರಿಬ್ಬನುಗಳಲಿ ಅಲಂಕರಣ
ಬೀದಿ ಬೀದಿಗಳಲಿ ಕೊಂಡಗಳ ನಿರ್ಮಾಣ
ಹಿಗ್ಗಿನಲಿ ರಾಸುಗಳ ಕಿಚ್ಚು ಹಾಯಿಸೋಣ.
ಭೂಮಿ ಸೂರ್ಯ ಚಂದ್ರರ ಪರಿಭ್ರಮಣ
ಸಂಭವಿಸಲು ಕಾರಣ ಋತುಗಳ ಆವರ್ತನ
ಪ್ರಕೃತಿಯೀ ಚಿರಂತನ ನಿತ್ಯನೂತನ ಗುಣ
ಬನ್ನಿ ನಮ್ಮಲ್ಲಿಯೂ ಅಳವಡಿಸಿಕೊಳ್ಳೋಣ .
ಸುಜಾತಾ ರವೀಶ್ .
0 Followers
0 Following