ʻರೋಮಾನಿʼ- ಇದು ನೀವು ಕಾಣದ ಜಗತ್ತು..

ʻಜಿಪ್ಸಿʼ ಎಂಬ ಬೈಗುಳವಾಚಕ ಹೊತ್ತುಕೊಂಡ, ನಮ್ಮಂತೆ ಮನುಷ್ಯರಾಗಿಯೂ ನಾಗರಿಕತೆಯ ಜಗತ್ತಿನಲ್ಲಿ ಪ್ರವೇಶ ಪಡೆಯದ ಈ ಜನರ ಕರುಣಾಜನಕ ಕಥನ

ProfileImg
11 Sep '23
1 min read


image

 

ಒಂದು ಮಾತಿದೆ, “ಜಗತ್ತಿನ ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯನಾಗಿರುತ್ತಾನೆ” ಇದು ಎಷ್ಟರ ಮಟ್ಟಿಗೆ ನಿಜ ಎಂದು ಹಲವರು ಪ್ರಶ್ನಿಸಿ, ಸಂಶೋಧನೆ ನಡೆಸಿ, ಕಡೆಗೆ ನಿಜವೇ ಎಂಬ ತೀರ್ಪಿಗೆ ಬಂದಾಗಿದೆ. ಆದ ನಾನೀಗ ಹೇಳಲು ಹೊರಟಿರುವುದು ಅದಲ್ಲ. ಮೊಹಮ್ಮದ್‌ ಘಜನಿಯ ದಾಳಿಗಂಜಿ ವಾಯುವ್ಯ ಭಾರತದಿಂದ, ಅದರಲ್ಲೂ ಮುಖ್ಯವಾಗಿ ಪಂಜಾಬ್‌, ರಾಜಸ್ಥಾನ ಪ್ರದೇಶಗಳಿಂದ ೧೦೫೦ ರ ಸುಮಾರಿನಲ್ಲಿ ವಲಸೆ ಹೋಗಿ, ಪ್ರಪಂಚದ ತುಂಬ ಹರಡಿಕೊಂಡ, ಈಗಲೂ ಭಾರತ ಸಂಸ್ಕೃತಿಯ ಕೊಂಡಿಯನ್ನು ಕಡೆದುಕೊಳ್ಳದೇ ಭಾರತೀಯತೆಯ ಕೆಲ ಅಂಶಗಳನ್ನು ಉಳಿಸಿಕೊಂಡ ʼರೋಮಾನಿʼ ಜನರ ಬಗೆಗೆ. ಬಹುಶಃ ʻರೋಮಾನಿʼ ಎಂದರೆ ಬಹು ಜನರಿಗೆ ಗೊತ್ತಾಗಲಿಕ್ಕಿಲ್ಲ, ಆದರೆ ಖಂಡಿತವಾಗಿಯೂ ನೀವು ಜಿಪ್ಸಿ ಎನ್ನುವ ಹೆಸರನ್ನು ಕೇಳಿಯೇ ಇರುವಿರಿ ಎಂದು ನಾನು ನಂಬಿದ್ದೇನೆ. ನಾನು ಅವರ ಬಗ್ಗೆ ಮಾತನಾಡುವ ಮೊದಲು ರೋಮಾನಿಯೇ ಆದ,ಯೂರೋಪಿನ ಡಿಯಾನೋ ಪಾವ್ಲೊವಿಚ್‌ ಅವರ ಮಾತುಗಳನ್ನೊಮ್ಮೆ ಕೇಳೋಣ ಬನ್ನಿ. 

ನನ್ನ ಹೆಸರು ಡಿಯಾನೋ ಮತ್ತು ನಾನು ಒಬ್ಬ ʼರೋಮಾನಿʼ. ಇಲ್ಲಿ ಕೆಲವೊಬ್ಬರು ʼಜಿಪ್ಸಿʼ, ʼಗಿಟಾನಸ್‌ʼ ಅಥವಾ ʼಪಿಂಗ್ರಿʼ ಎನ್ನುವ ಪದಗಳನ್ನು ಕೇಳಿರುತ್ತಿರಿ. ಆದರೆ ವ್ಯತ್ಯಾಸವಿಷ್ಟೇ, ಅದು ನಾವು ನಮ್ಮನ್ನು ಹಾಗೆ ಕರೆದುಕೊಂಡಿದ್ದಲ್ಲ, ಬದಲಿಗೆ ಉಳಿದ ಜನರು ನಮ್ಮನ್ನು ಕರೆದದ್ದು. ನಮ್ಮ ಭಾಷೆಯಲ್ಲಿ ನಮ್ಮನ್ನು ನಾವು ʻರೋಮಾʼ ಎಂದು ಕರೆಯುತ್ತೇವೆ. ʻರೋಮಾʼ ಎಂದರೆ ಮನುಷ್ಯ ಎಂದರ್ಥ. 

ನಾನು ಸೆರ್ಬಿಯಾ ದೇಶದ ಒಂದು ಸುಂದರ ʻರೋಮಾʼ ಕುಟುಂಬದಲ್ಲಿ ಹುಟ್ಟಿದೆ. ಚಿಕ್ಕಂದಿನಿಂದಲೂ ನಮಗೆ ನಮ್ಮ ಸಂಸ್ಕೃತಿಯ ಬಗೆಗೆ  ಪ್ರೀತಿ. ನಮ್ಮ ಸಂಪ್ರದಾಯ, ಪರಂಪರೆಗಳ ಕುರಿತು ಗೌರವ ಹಾಗೂ ಹೆಮ್ಮೆ.ಅದಕ್ಕೆ ಸಾಕ್ಷಿ ಎನ್ನುವಂತಹ ಹಲವಾರು ಕೌಟುಂಬಿಕ ಕಾರ್ಯಕ್ರಮಗಳು ಎಲ್ಲರ ಮನೆಗಳಲ್ಲಿ ನಡೆಯುತ್ತಿದ್ದವು.ನಮ್ಮತಂದೆತಾಯಿ ಇತರ ರೋಮಾಗಳ ಮನೆಗೆ ನಮ್ಮನ್ನು ಕರೆದುಕೊಂಡಾಗ ಅದೇ ಆದರ, ಸತ್ಕಾರ, ಪ್ರೀತಿ-ಕಕ್ಕುಲಾತಿಗಳು ನಮಗೆ ಸಿಗುತಿತ್ತು. ಒಟ್ಟಿನಲ್ಲಿ ಶಾಲೆಗೆ ಸೇರಲು ಹೋದ ಮೊದಲ ದಿನವರೆಗೂ  ಎಲ್ಲ ಘಳಿಗೆಗಳು   ಸುಮಧುರವಾಗಿಯೇ ಇತ್ತು.

ಶಾಲೆಯ ಮೊದಲ ದಿನವೇ ಎಲ್ಲರ ಕಣ್ಣಲ್ಲಿ ನನ್ನ ಬಗೆಗೊಂದು ತಿರಸ್ಕಾರವಿತ್ತು.ಯಾವ ಬೆಂಚೂಗಳಲ್ಲಿಯೂ      ನನಗೆ ಜಾಗ ಸಿಗಲಿಲ್ಲ,ದುಖಃ ಉಮ್ಮಳಿಸಿ ಬಂದರೂ 
ತೋರಗೋಡದೆ ನಾನು ನಗುತ್ತ ಕೊನೆಯ ಬೆಂಚಿನಲ್ಲಿ 
ಹೋಗಿ ಕುಳಿತುಕೊಂಡೆ. ಆಗ ಸಹಪಾಠಿ ಒಬ್ಬಳು ಅಸಡ್ಡೆಯ ನಗೆ ಬೀರುತ್ತ ನನಗೆಂದಳು,“ನೀನು ಎಷ್ಟು ಬೇಕಾದರೂ ಒಳ್ಳೆಯವಳಂತೆ ನಟಿಸಬಹುದು, ಆದರೆ ನೀನು ʻಜಿಪ್ಸಿʼ ಮತ್ತು ಇಡೀ ಜೀವಮಾನವೆಲ್ಲ ನೀನು ಜಿಪ್ಸಿಯಾಗಿಯೇ ಉಳಿಯುತ್ತಿ”. ಆ ಕ್ಷಣದವರೆಗೂ ರೋಮಾಜಿಪ್ಸಿ ಎನ್ನುವುದು ಇಂತಹ ನಕಾರತ್ಮಕತೆ ಹೊಂದಿದ  ಪದ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಮನೆಗೆ ಹೋದ ತಕ್ಷಣದಿಂಲೇ ನಾನು ಅಳತೊಡಗಿದೆ, ಅಮ್ಮನಿಗೆಂದೆ,“ನಾನು ಜಿಪ್ಸಿಯಾಗಲಾರೆ. ಯಾಕಮ್ಮ ನಾವು ಜಿಪ್ಸಿಯಾಗಬೇಕು? ಬೇರೆ ಏನಾದರೂ ಆಗಲೂ ಸಾಧ್ಯವಿಲ್ಲವೇ? ಜೀಪ್ಸಿಯೇ ಆಗಬೇಕೆ”?

ನನ್ನಮ್ಮ ನನ್ನೆಡೆಗೆ ಅಪ್ಯಾಯತೆಯಿಂದ ನೋಡುತ್ತ,” ಮೊದಲು ಅಳುವುದನ್ನು ನಿಲ್ಲಿಸು, ಇಲ್ಲಿ ಕುಳಿತುಕೊ. ಇದು ಆರಂಭವಷ್ಟೇ, ಬರುವ ಇನ್ನೂ ಹಲವಾರು ವರ್ಷಗಳ ಕಾಲ ಇಲ್ಲಿನ ಜನರು ನಮ್ಮನ್ನು ಜಿಪ್ಸಿ ಎಂದೇ ಕರೆಯುತ್ತಾರೆ, ಜಿಪ್ಸಿಯಾಗಿಯೇ ನೋಡುತ್ತಾರೆ. ನಿನ್ನನ್ನು ಇತರರೊಂದಿಗೆ ಹೋಲಿಸಿ ಅವಮಾನಿಸುತ್ತಾರೆ. ಆದರೆ ಅದಕ್ಕೆಲ್ಲ ಗಮನ ಕೊಡದೆ ನೀನು ಗಟ್ಟಿಯಾಗಬೇಕು,, ಅವರನ್ನು ಧೈರ್ಯದಿಂದ ಎದುರಿಸಬೇಕು. ಅವರೆಲ್ಲರಿಗಿಂತ ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಇದ್ದು ತೋರಿಸಬೇಕು. ಆಗ ಅವರು ನಿನ್ನನ್ನು ಪ್ರೀತಿಸದೇ ಇರಬಹುದು, ಆದರೆ ಖಂಡಿತ ನಿನ್ನನ್ನು ಗೌರವಿಸುತ್ತಾರೆ. 

ನಾನು ತಕ್ಷಣ ಅಳುವುದನ್ನು ನಿಲ್ಲಿಸಿದೆ. ನನ್ನ ನಡುವಳಿಕೆಯನ್ನು ಬದಲಾಯಿಸಿಕೊಳ್ಳಲಾರಂಭಿಸಿದೆ. ಶಾಲೆಯಲ್ಲಿ ಓದು, ಕ್ರೀಡೆ, ನೃತ್ಯ,  ಅಭಿನಯ ಹೀಗೆ ಎಲ್ಲದರಲ್ಲೂ ನಾನೇ ಮುಂದು. ಸತತ ಹಲವು ವರ್ಷಗಳ ಕಠಿಣ ಪರಿಶ್ರಮದ ಮೂಲಕ ಪ್ರತಿಯೊಂದರಲ್ಲೂ ಅತ್ಯುತ್ತಮ  ವಿದ್ಯಾರ್ಥಿನಿ ಎನ್ನುವ ಹೆಗ್ಗಳಿಕೆ ಸಂಪಾದಿಸಿಕೊಂಡೆ. 

ಆದರೆ ಬೆಳೆದಂತೆ ನನಗೆ ಗೊತ್ತಾಯಿತು, ನಾನು ಎಲ್ಲರಿಗಿಂತ ಮುಂದೆ ಇದ್ದರೂ, ಅವರು ನನ್ನನ್ನು ಪ್ರೀತಿಸುವುದು, ಗೌರವಿಸುವುದು ಇರಲಿ, ಬದಲಿಗೆ ನನ್ನ ನೋಡಿ,“ಹೇ, ಆ ಜಿಪ್ಸಿಯನ್ನು ನೋಡಿ, ಇಂತಹವರಿಗೆ ಹೇಗೆ ಇಷ್ಟೊಂದು ಯೋಗ್ಯತೆ ಇರಲು ಸಾಧ್ಯ? ಇಷ್ಟೊಂದು ಬುದ್ಧಿಮತ್ತೆ ಎಲ್ಲಿಂದ ಬರಲು ಸಾಧ್ಯ?” ಎನ್ನುವ ಮಾತುಗಳನ್ನಾಡುತ್ತಿದ್ದರು. ಅವುನನ್ನನ್ನು ಇನ್ನೂ ಘಾಸಿಗೊಳಿಸುತ್ತಿದ್ದವು. ನಿಧಾನವಾಗಿ ನನಗೆ ನನ್ನ  ಸುತ್ತಲಿನ ಲೋಕದ ಕುರಿತು ಒಂದು ರೀತಿಯ ಅಸಡ್ಡೆ, ಅಸಹನೆ ಬೆಳೆಯಲಾರಂಭಿಸಿತು. ವಿದ್ಯಾಭ್ಯಾಸ ಮುಗಿದ ನಂತರ ನಾನು ಅಲ್ಲಿಂದ  ತುಂಬಾ ದೂರ ಬಂದುಬಿಟ್ಟೆ.

೧೯೯೯, ನಾನು ಬದುಕು ಕಟ್ಟಿಕೊಳ್ಳಲು ಸೆರ್ಬಿಯಾದಿಂದ ಇಟಲಿಯ ಮಿಲಾನ್‌ಗೆ ಹೋದೆ. ಆ ಸಂದರ್ಭದಲ್ಲಿ ಸೆರ್ಬಿಯಾದಲ್ಲಿ ಯುದ್ಧ ಘೋಷಿತವಾದ ಸಮಯ. ಅದೇ ಇಟಲಿಯ ಮಿಲಾನ್‌ ರಂಗು-ರಂಗಿನ ಬೆಳಕಿನಿಂದ ಕೂಡಿದ, ಜಗಮಗಿಸುವ ಸಾಲು-ಸಾಲು ಅಂಗಡಿಗಳ, ಮುಗಿಯದ ಕನಸುಗಳ ನಗರವಾಗಿತ್ತು.

ಕೆಲಸದ ಅನ್ವೇಷಣೆ ಆರಂಭವಾಯಿತು. ಅದೊಂದು ದಿನ ನನ್ನ ಬದುಕಲ್ಲಿ ಶಾಲೆಯ ಮುಖ್ಯಸ್ಥಳಾದ ಮಹಿಳೆಯೊಬ್ಬಳು ದೇವತೆಯಂತೆ ಬಂದು, ನಿನಗೊಂದು ಕೆಲಸ ಕೊಡಬಲ್ಲೆ, ಮಾಡುವೆಯಾ? ಎಂದಾಗ ನನಗೆ ಆಕಾಶ ಮೂರೇ ಗೇಣು !! ಪೂರ್ವಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ರೋಮಾ ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸ, ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ತಕ್ಷಣವೇ ಸಮ್ಮತಿ ಸೂಚಿಸಿದೆ. ನಾನು ಹೇಳಿದೆ,”ಅತ್ಯಂತ ಅಪ್ಯಾಯಮಾನ ಕೆಲಸ ಇದು. ಖಂಡಿತವಾಗಿಯೂ ಶ್ರದ್ಧೆಯಿಂದ ಮಾಡುತ್ತೇನೆ ನನಗೆ ಗೊತ್ತಿರುವುದೆಲ್ಲವನ್ನು ಕಲಿಸುತ್ತೇನೆ. ನಮ್ಮ ಸಂಸ್ಕೃತಿ, ಇತಿಹಾಸ, ಸಾಹಿತ್ಯ- ಎಲ್ಲ, ಎಲ್ಲವನ್ನೂ ಹಂಚಿಕೊಳ್ಳುತ್ತೇನೆ, ನನ್ನಲಿರುವ ಜ್ಞಾನವನ್ನೆಲ್ಲಧಾರೆಯೆರೆಯುತ್ತೇನೆ”. ಆ ರಾತ್ರಿಯೆಲ್ಲ ನಾನು ಖುಷಿಯಿಂದ ನಿದ್ದೆ ಕೂಡ ಮಾಡಲಿಲ್ಲ. 

ಮರುದಿನ ಬೆಳಗ್ಗೆ ನಾನು ಶಾಲೆಯ ಮುಂಭಾಗದ ಗೇಟ್‌ ಬಳಿ ನನ್ನ ಆ ಪುಟ್ಟ ಅಪ್ಸರೆಯರು, ದೇವದೂತರಾದ ಆ ಮಕ್ಕಳಿಗಾಗಿ ಎದುರು ನೋಡುತ್ತ ನಿಂತಿದ್ದೆ. ಸಾಲು-ಸಾಲಾಗಿ ಶಾಲಾ ವಾಹನಗಳು ಬರುತ್ತಲೇ ಇದ್ದವು ಮತ್ತು ಮಕ್ಕಳು ಕೆಳಗಿಳಿದು ತಮ್ಮ-ತಮ್ಮ ತರಗತಿಗಳೆಡೆಗೆ ಹೋಗುತ್ತಿದ್ದರು. ಪ್ರತಿ ಬಸ್‌ ಬಂದಾಗಲೂ ನನ್ನೊಳಗೊಂದು ಕೂತೂಹಲ, ಇವರಲ್ಲಿ ಯಾರು ರೋಮಾ ಮಕ್ಕಳಿರಬಹುದು ಎಂದು.

ಅಷ್ಟರಲ್ಲೇ ಕೊನೆಗೆ ಒಂದು ಬಸ್‌ ನನ್ನ ಮುಂದೆ ಹಾಯ್ದು ಹೋಯಿತು. ಆ ಬಸ್‌ ಮೇಲೆ ದೊಡ್ಡದಾಗಿ ʻರೋಮಾʼ ಎಂದು ಬರೆದಿತ್ತು. ತಕ್ಷಣವೇ ನನ್ನ ಮನಸ್ಸು ಮತ್ತೆ ನನ್ನ ಬಾಲ್ಯದ ನೆನಪುಗಳತ್ತ ಜಾರಿತು. ಅಯ್ಯೋ ದೇವರೇ! ನಮ್ಮ ಸ್ಥಿತಿ ಇನ್ನೂ ಬದಲಾಗಿಲ್ಲ ಮತ್ತು ಎಲ್ಲಿಯೂ ಬದಲಾಗಿಲ್ಲ. ನನ್ನ ಕಣ್ಣೀರು, ನನ್ನಮ್ಮ ನೀಡಿದ ಸಾಂತ್ವನ, ನನ್ನ ಪರಿಶ್ರಮ, ಅಪಮಾನ, ಬಿಗುಮಾನ, ಅವಮಾನಗಳ ದೊಡ್ಡ ನೆನಪುಗಳ ಮೂಟೆಯೇಒಂದು ಕ್ಷಣ ಕಣ್ಮುಂದೆ ಬಂತು.

ಆದರೆ ವಿಧಿಯಿರಲಿಲ್ಲ, ನಾನು ಅಳು ನುಂಗಿಕೊಂಡು ಈಗ ಕೆಲಸದತ್ತ ಗಮನ ಹರಿಸಿದೆ. ನನ್ನ ತರಗತಿಯಲ್ಲಿನ ಪ್ರತಿ ರೋಮಾ ಮಗುವಿಗೂ ನನ್ನ ಶಕ್ತಿ ಮೀರಿ ಕಲಿಸಲು, ಸಹಾಯ ಮಾಡಲು ಯತ್ನಿಸಿದೆ. ನನಗೆ ಗೊತ್ತು, ಪ್ರತಿ ಮಗುವನ್ನು ಅದೇ ಶೃದ್ಧೆಯಿಂದ ನೋಡಿಕೊಳ್ಳುವುದು ಕಷ್ಟ. ಅವರ ಸಹಾಯಕ್ಕೆ ಬರುವುದು ಮತ್ತೂ ಕಷ್ಟ. ಹಾಗಾಗಿಯೇ ಅಂದಿನಿಂದ ನಿಧಾನವಾಗಿ, ನಿರಂತವಾಗಿ ರೋಮಾ ಸಮಾಜದ ಮೂಲ, ಅವರ ಸಾಮಾಜಿಕ ಪರಿಸ್ಥಿತಿ, ರಾಜಕೀಯ ಹಿನ್ನೆಲೆ ಎಲ್ಲವನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ. ೧೫ ನೇ ಶತಮಾನದಿಂದಲೂ ಯೂರೋಪಿನಲ್ಲಿ ನಮ್ಮನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸಲಾಗಿತ್ತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸರಿ ಸುಮಾರು ೫೦೦೦೦ ರೋಮಾ ಜನರನ್ನು ಯಾತನಾ ಶಿಬಿರಗಳಲ್ಲಿ ಕೊಂದುಹಾಕಿದರು. ಅಷ್ಟೇ ಅಲ್ಲ, ಜರ್ಮನಿಯ ನಾಜಿ ಸೈನ್ಯ ನಡೆಸಿದ ಯಹೂದಿಗಳ ನರಮೇಧದ ಮೊದಲ ಬಲಿ, ಯಹೂದಿಯರಗಿಂತಲೂ ಮೊದಲು ರೋಮಾ ಜನರಾಗಿದ್ದರೆಂಬುವ ಸತ್ಯ ಎಷ್ಟೋ ಜನರಿಗೆ ತಿಳಿದಿಲ್ಲ. ಆ ನರಮೇಧದಲ್ಲಿ ಸರಿ ಸುಮಾರು ೨ ಲಕ್ಷ ರೋಮಾ ಜನರು ಕೊಲ್ಲಲ್ಪಟ್ಟರು .

೧೯೭೬ ನೇ ಇಸವಿಯಲ್ಲಿ ಯೋರೋಪಿನಲ್ಲಿದ್ದ ರೋಮಾ ಮಹಿಳೆಯರಿಗೆ ರೋಮಾ ಸಂತತಿ ಬೆಳೆಯದಿರಲೆಂದು ಬಲವಂತವಾಗಿ ಸಂತಾನಹರಣ ಚಿಕಿತ್ಸೆ ಮಾಡಲಾಯಿತು. ಪ್ರಸ್ತುತ ನಾವು, ಅಂದರೆ ರೋಮಾ ಜನರು ಯೂರೋಪಿನ ಅತ್ಯಂತ ಕಡೆಗಣಿಸಲ್ಪಟ್ಟ, ಅವಮಾನಿಸಲ್ಪಟ್ಟ, ತುಳಿಯಲ್ಪಟ್ಟ ಪಟ್ಟಿಯಲ್ಲಿ ಮೊದಲಿಗರು. ನಮ್ಮನ್ನು ಬೇರೆ-ಬೇರೆಯಾಗಿ ಬೇರ್ಪಡಿಸಿ, ಸಾಂಸ್ಥಿಕ ಕ್ಯಾಂಪ್‌ಗಳಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿದೆ. ನಮ್ಮ ಮಕ್ಕಳು ನಿರಂತರ ಅಪಮಾನ, ಹಿಂಸೆಗಳಿಂದ ಕಂಗಾಲಾಗಿ ಶಾಲೆಗಳಿಗೆ ಹೋಗಲು ಹೆದರುತ್ತಿದ್ದಾರೆ. 

ಶೇ ೮೦ ಇಟಾಲಿಯನ್ನರು ನಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಹೇಗೆ ಉಳಿದವರನ್ನು ನಂಬುವುದು? ಹೇಗೆ ಅವರೊಂದಿಗೆ ಭಾಂದವ್ಯ, ಸಂಪರ್ಕ ಸಾಧಿಸುವುದು? ಮತ್ತೆ ನಮ್ಮ ಮೇಲೆ ಹಿಂದೆ ಆದ ಅತ್ಯಾಚಾರ, ಕೊಲೆ, ಉಚ್ಛಾಟನೆಗಳು ಮತ್ತೆ ಮರುಕಳಿಸುವುದಿಲ್ಲ ಎಂದು ಹೇಗೆ ನಂಬುವುದು? ರೋಮಾ ಅಲ್ಲದ ಜನರ ಜೊತೆ ಹೊಸ ಸಂಬಂಧ, ಬಾಂಧವ್ಯವನ್ನು ಹೇಗೆ ಬೆಳೆಸಿಕೊಳ್ಳುವುದು? ಮುಂಬರುವ ದಿನಗಳಲ್ಲಿ ನಮ್ಮ ಮೇಲೆ ಇದೇ ರೀತಿಯ ಹಿಂಸೆ, ಅನಾಚರಗಳು ನಡೆಯುವುದಿಲ್ಲವೆಂದು ಹೇಗೆ ನಂಬುವುದು? ನಮ್ಮ ಮಕ್ಕಳಿಗೆ ಹೊಸತೊಂದು ಸುಂದರ ನಾಳೆಗಳು ಸಿಗುವುದೆಂದು ಹೇಗೆ ವಿಶ್ವಾಸವಿಡುವುದು? ನಮ್ಮ ಭರವಸೆಯ ಬೆಳಕನ್ನು ಎಲ್ಲಿ ಹುಡುಕುವುದು? ನಮ್ಮನ್ನು ನಾವು ಕಾಯಬಲ್ಲ ಆ ಶಕ್ತಿಯನ್ನು ಎಲ್ಲಿಂದ ಸಂಪಾದಿಸಿಕೊಳ್ಳುವುದು?

ನಮಗೊಂದು ಹೊಸ ನಾಳೆಯಿದೆ ಎಂದು ನಂಬಿಕೊಂಡ ೨೦% ರೋಮಾ ಜನರಲ್ಲಿ ನಾನೂ ಒಬ್ಬಳು. ಯೂರೋಪಿನಾದ್ಯಂತ ಇರುವ ೧೨ ಮಿಲಿಯನ್‌ ರೋಮಾಗಳು ಈಗಲೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ವಿಶ್ವಾಸವಿರಿಸಿಕೊಂಡಿದ್ದಾರೆ. ಯೂರೋಪಿನಾದ್ಯಂತ ಅಲ್ಲಿನ ಜನರು ಮಾತನಾಡುವ ಎಲ್ಲ ಭಾಷೆಗಳನ್ನು ರೋಮಾಗಳು ಮಾತನಾಡುತ್ತಾರೆ. ಅವರು ಆಚರಿಸುವ ಎಲ್ಲ ಧರ್ಮಗಳನ್ನು ರೋಮಾಗಳು ಆಚರಿಸುತ್ತಿದ್ದಾರೆ. ಇದುವರೆಗೂ ರೋಮಾಗಳು ಯಾರೊಂದಿಗೂ ಯುದ್ಧಕ್ಕಿಳಿದ ಅಥವಾ ತಮಗೊಂದು ಪ್ರತ್ಯೇಕ ಬೌಗೋಳಿಕ ಸ್ಥಾನ-ಮಾನ ಬೇಕು ಎಂದು ಕೇಳಿಕೊಂಡ ಉದಾಹರಣೆ ಹುಡುಕಿದರೂ ಸಿಗಲಿಕ್ಕಿಲ್ಲ. ಆ ರೀತಿಯಲ್ಲಿ ನಾವು ಯೂರೋಪ್‌ ನಂಬಿಕೊಂಡ ಮೌಲ್ಯಗಳಿಗೆ ಅನಗುಣವಾಗಿಯೇ ಬದುಕುತ್ತಿದ್ದೇವೆ.

ಸಹಬಾಳ್ವೆಯಿಂದ ಬದುಕುತ್ತಿರುವ ನಮ್ಮ ಕೋರಿಕೆ ಇಷ್ಟೇ, ನಮ್ಮನ್ನು ನಿಮ್ಮಲ್ಲಿ ಒಬ್ಬರನ್ನಾಗಿ ನೋಡಿ, ನಮ್ಮನ್ನು ಉಳಿದವರಂತೆ ಗೌರವಿಸಿ, ಕನಿಷ್ಠ ಮಾನವೀಯತೆಯ ದೃಷ್ಟಿ ನಮ್ಮ ಮೇಲಿರಲಿ. ಆಗ ಭರವಸೆ ಇರಿಸಿಕೊಂಡ ಆ ೨೦% ಜನರು ೧೦೦% ಆಗಿ, ಅವರ ಮಕ್ಕಳು, ಮೊಮ್ಮಕ್ಕಳು ಯೋರೋಪಿನ ಗಲ್ಲಿಗಳಲ್ಲಿ ತಲೆಯೆತ್ತಿ, ಹೆಮ್ಮೆಯಿಂದ ನಡೆಯುತ್ತಾರೆ. ಆಗ ಮಾತ್ರ ಯೋರೋಪ್‌ ನಂಬಿಕೊಂಡ ಪ್ರಜಾಪ್ರಭುತ್ವದ  ಮೌಲ್ಯಗಳಿಗೆ ನಿಜವಾದ ಬೆಲೆ ಬರುತ್ತದೆ. 

Category:History



ProfileImg

Written by Rajeshwari N

0 Followers

0 Following