ಉರುಳುತ್ತಿದೆ ಕಾಲಚಕ್ರ..!!

ಹಳೆಯ ನೆನಪುಗಳು

ProfileImg
23 Jun '24
4 min read


image

ತಿಂಗಳ ಸ್ಪರ್ಧೆಗಾಗಿ  :

ಅಂದು

      ಅಂದು ಮನೆಯಲ್ಲಿ ವಿದ್ಯಾವಂತರು ಇದ್ದುದು ಕಡಿಮೆ. ಆದರೆ ಅದೆಷ್ಟೋ ಜನ ಕವಿಗಳು, ಹಿರಿಯ ವಿದ್ವಾಂಸರೂ ಆಗಿ ಹೋಗಿದ್ದಾರೆ.  ಜೀವನಕ್ಕೆ ಕಡು ಬಡತನ. ೮-೧೦ ಮಕ್ಕಳಿಂದ ಕೂಡಿದ ಕೂಡುಕುಟುಂಬ... ಮಕ್ಕಳಿಗೆ ಕಲಿಸಲು ಒಂದೆಡೆ ದುಡ್ಡಿನ ಸಮಸ್ಯೆ.  ಇನ್ನೊಂದೆಡೆ ಆಹಾರದ ಕೊರತೆ. ಉಂಡರಾಯಿತು, ಇಲ್ಲದಿದ್ದರೂ ಆಯಿತು.  ಜೀವನ ನಡೆಸುವುದೇ ಕಷ್ಟ.  ಆದರೂ ಇದ್ದುದನ್ನೇ ಹಂಚಿ ತಿಂದು ಹೇಗೋ ಬದುಕು ಸಾಗಿಸುತ್ತಿದ್ದರು. ಉದ್ಯೋಗದ ಕೊರತೆ ಕಾಡುತ್ತಿತ್ತು. ಮಕ್ಕಳನ್ನು ಪಕ್ಕದ ಶಾಲೆಗೇ ಕಳುಹಿಸುತ್ತಿದ್ದರು. ಮಳೆಗೆ ಕೊಡೆಯಿಲ್ಲ, ತಲೆಗೆ ಪ್ಲಾಸ್ಟಿಕ್... ಪುಸ್ತಕ ಹಾಕಲು ಗೋಣಿಚೀಲ,  ಬರೆಯಲು ಬಳಪದ ಕಡ್ಡಿ, ಈಗಿನಂತೆ ಪೆನ್ನಿರಲಿಲ್ಲ...  ಪೆನ್ನಿನ ನಿಬ್ಬನ್ನು ಆಗಾಗ ಶಾಯಿಯೊಳಗೆ ಮುಳುಗಿಸಿ ಬರೆಯುತ್ತಿದ್ದರಂತೆ..!! ವಾಹನದ ವ್ಯವಸ್ಥೆಯಂತೂ ತೀರಾ ವಿರಳ. ಕಾಲ್ನಡಿಗೆಯಲ್ಲೇ ಊರೆಲ್ಲ ಸಂಚಾರ..!! ಬಡವರ ವಿದ್ಯಾಭ್ಯಾಸ ಹೇಳತೀರದು. ಸಂಬಂಧಿಕರ ಮನೆಯಿಂದಲೋ, ಅಜ್ಜಿಮನೆಯಿಂದಲೋ ಶಾಲೆಗೆ ಹೋಗಿ ಕಲಿಯಬೇಕಿತ್ತು. 

ಉದ್ಯೋಗ

ಹೊಟ್ಟೆಪಾಡಿಗೆ ಅಡಿಗೆ, ಕೂಲಿ, ಚಿಕ್ಕಪುಟ್ಟ ಕೃಷಿಯೇ ಕಸುಬು. ಮನೆಯ ಹಲಸಿನ ತೊಳೆ,ಮಾವಿನಕಾಯಿಗಳನ್ನು ಉಪ್ಪಿನಲ್ಲಿ ಶೇಖರಿಸಿಟ್ಟು  ಅದರ ಪಲ್ಯ, ಸಾಂಬಾರು, ಗೊಜ್ಜು ... ಹಲಸಿನ ಬೀಜ ಗಡ್ಡೆಗೆಣಸುಗಳನ್ನು  ತಿಂದು ಜೀವನ ಸಾಗಿಸುತ್ತಿದ್ದರು.  ಪೇಟೆಯ ತರಕಾರಿಯನ್ನು ನೋಡಿದವರಲ್ಲ.  ಇವೆಲ್ಲವೂ ಒಂದೆಡೆ ಸಾವಯವ ತರಕಾರಿ; ಇನ್ನೊಂದೆಡೆ ಬೆವರು ಸುರಿಸಿ ನಿತ್ಯದ ದುಡಿತ. ಬಾವಿಯಿಂದ ನೀರು ಸೇದುವುದು, ಅಡಿಗೆಗೆ ಕಲ್ಲಿನಲ್ಲಿ ಕಡೆಯುವುದು, ಗದ್ದೆಯನ್ನು ಊಳುವುದು, ಭತ್ತವನ್ನು ಮೇಯುವುದು... ಹೀಗೆ ಅನೇಕ ಮೈಮುರಿಯುವ ಕೆಲಸಗಳನ್ನು ಮಾಡುತ್ತಿದ್ದರು. ಇದೆಲ್ಲದರ ಪರಿಣಾಮ ಉತ್ತಮ ಆರೋಗ್ಯವೂ ಇತ್ತು. ರೋಗವೇ ಹತ್ತಿರ ಸುಳಿಯುತ್ತಿರಲಿಲ್ಲ. ಮೈಮುಚ್ಚಲೊಂದು ಹರಿದ ಬಟ್ಟೆ. ಅದನ್ನೇ ಹೊಲಿದು ಹಾಕುತ್ತಿದ್ದರು. 

       ಸಂಬಂಧಿಕರ ಸುದ್ದಿ ತಿಳಿಯಲು ಫೋನುಗಳಿಲ್ಲದ ಕಾಲ, ಪತ್ರ ವ್ಯವಹಾರವೇ ಗತಿ. ಅಂಚೆಪಾಲಕ ಸೈಕಲನ್ನು ಏರಿ, ಉದ್ದದ ಕೊಕ್ಕೆ ಕಾಲಿನ ಕೊಡೆಯನ್ನು ಹೆಗಲಿಗೇರಿಸಿ, ಬಾಯಿಯಲ್ಲಿ ಹಾಡು ಹೇಳುತ್ತಾ ಮನೆಮನೆಗಳಿಗೆ ಪತ್ರವನ್ನು ತಲುಪಿಸುತ್ತಿದ್ದರು. ಪತ್ರ ಬಂದಾಗ ಮನೆಯವರ ಮನದಲ್ಲಿ ಮಂದಹಾಸ. ಅದು ಯಾರದ್ದು? ಅದರಲ್ಲಿ ಏನೇನಿದೆ..!! ಎಂದು ಓದುವ ಕುತೂಹಲ. ಪತ್ರಕ್ಕೆ ಉತ್ತರ ಬರೆದು ಅಲ್ಲಿಗೆ ತಲುಪುವಾಗ ಒಂದು ವಾರ ಆಗುತ್ತಿತ್ತು. ಇಂದಿನಂತೆ ವಾಹನ ವ್ಯವಸ್ಧೆ ಇಲ್ಲದ್ದರಿಂದ ನೆಂಟರು ಬರುವುದೇ ವಿರಳವಾಗಿತ್ತು. ಬಂದರೆ ನಾಲ್ಕು ದಿನ ಉಳಿದು ಹೋಗುತ್ತಿದ್ದರು.  

       ನಿಧಾನಕ್ಕೆ ಕಾಲ ಹೊಸ ತಿರುವು ಪಡೆಯಿತು. ದೂರದ ಊರಿನ ಸುದ್ದಿಯನ್ನು ತಿಳಿಯಲು ರೇಡಿಯೋ, ಸ್ತೋತ್ರಕ್ಕಾಗಿ ರೇಟ್ ರೆಕಾರ್ಡರ್ ಹಾಕಿ ಕೇಳುವುದು... ಭಾವಚಿತ್ರವನ್ನು ತೆಗೆಯಲು ಕ್ಯಾಮರಾ, ಮಾತಾಡಲು ದೂರವಾಣಿ ಬಂತು. ವರ್ಷಗಳು ಉರುಳಿದವು. ಸ್ವಲ್ಪ ಬದಲಾವಣೆಯ ಕಂಡಿತು. ಸುದ್ದಿಗೆ ದೂರದರ್ಶನ ಬಂತು, ಶ್ಲೋಕಕ್ಕಾಗಿ ಸಿ.ಡಿ., ಡಿ.ವಿ.ಡಿಗಳ ಬಳಕೆ.…

ದೂರವಾಣಿ : 

      ನಾವು ಯಾರಿಗಾದರೂ ಫೋನ್ ಮಾಡಬೇಕಾದರೆ ಒಂದು ಸಂಖ್ಯೆಯನ್ನು ಒತ್ತಿ, ಅದು ಒಂದು ಸುತ್ತು ಬಂದು ನಿಂತ ಮೇಲೆ ಇನ್ನೊಂದು ಸಂಖ್ಯೆಯನ್ನು ಒತ್ತಬೇಕಿತ್ತು!! ಇದಕ್ಕೆ ತುಂಬ ತಾಳ್ಮೆ ಬೇಕು. ಹೊಸತು ಬಂತು.. ವೇಗ ಪಡೆಯಿತು..ನೇರವಾಗಿ ನಂಬರ್ ಒತ್ತಲಾಗುತ್ತಿತ್ತು. ಇಂದು ಚರವಾಣಿಯು ದೇಶಕ್ಕೆ ಕಾಲಿಡಲು ಈ ಸ್ಥಿರವಾಣಿ  (ದೂರವಾಣಿ) ಸ್ಥಿರತೆಯನ್ನು ಕಳೆದುಕೊಂಡು ಜನತೆಯಿಂದ ದೂರವಾಗಿ ಬಿಟ್ಟಿದೆ.  

ದೂರದರ್ಶನ : 

    ಇದನ್ನು ನೋಡಲು ಏಂಟನಾ. ಗಾಳಿ ಬಂದು ಅದು ತಿರುಗಿದರೆ ಟಿ.ವಿ. ಕಾಣದು. ಸರಿಪಡಿಸುವ ಪರಿ ಕೇಳಬೇಕೇ... ಹರಸಾಹಸವೇ ಪಡಬೇಕಿತ್ತು. ದೊಡ್ಡ ಡಿಶ್ ಬಂತು. ಅದೂ ಹೋಗಿ ಈಗ ಯಾವುದೇ ಸಮಸ್ಯೆಯಿಲ್ಲದಂತೆ  ಸಣ್ಣ ಡಿಶ್ ಗಳು ಕಾರ್ಯಾಚರಿಸುತ್ತಿವೆ. ಆದರೆ ಟಿ.ವಿ.ನೋಡುವವರ ಸಂಖ್ಯೆ ತೀರಾ ವಿರಳವಾಗಿದೆ. 

ರೇಡಿಯೊ :

    ಮಂಗಳೂರು ಆಕಾಶವಾಣಿಯಿಂದ ಸಂಸ್ಕೃತ ವಾರ್ತೆ, ಕನ್ನಡದಲ್ಲಿ ಪ್ರದೇಶ ಸಮಾಚಾರ, ವಾರ್ತೆ, ಇಂಗ್ಲಿಷ್. ಹಿಂದಿ ವಾರ್ತೆ... ಹೀಗೆ ವಾರ್ತೆಗಳ ಸರಮಾಲೆಯೇ ಮಳೆನೀರಿನಂತೆ ಹರಿಯುತ್ತಿತ್ತು.  ಅದರಂತೆ ಚಿತ್ರಗೀತೆಗಳು, ಹಾಡುಗಳು... ಕೇಳಲು ಈ ಕಿವಿಯು ಸದಾ ಸಿದ್ಧವಿರುತ್ತಿತ್ತು. 

ಟೇಪ್ ರೆಕಾರ್ಡರ್ :

      ಕ್ಯಾಸೆಟ್ ಗಳನ್ನು ಹಾಕಿ ಎಲ್ಲವನ್ನೂ ಕೇಳುತಿದ್ದೆವು. ನಾವು ಹಾಡುವುದನ್ನು ರೆಕಾರ್ಡೂ ಮಾಡುತಿದ್ದೆವು. ಅದರ ಖುಷಿಯೇ ಬೇರೆ... ಆದರೆ, ರೀಲು ಸಿಕ್ಕಿ ಹಾಕಿಕೊಂಡರೆ ಸರಿಪಡಿಸಲು ಹರಸಾಹಸವೇ ಪಡಬೇಕಿತ್ತು. ಎಲ್ಲ ಮುಗಿದ ನಂತರ ತನಿಖೆಗೆ ಪುನಃ ಹಾಕುತ್ತಿದ್ದೆವು.  ಈಗ ಇದು ಮುಗಿದ ಅಧ್ಯಾಯ. 

ಕ್ಯಾಮರಾ :

     ನಮ್ಮಲ್ಲಿ ಕ್ಯಾಮರಾ ಇರುತ್ತಿತ್ತು. ನಾವೇ ಭಾವಚಿತ್ರವನ್ನು ತೆಗೆಯುತ್ತಿದ್ದೆವು. ಕಂಡಕಂಡದ್ದನ್ನೆಲ್ಲ ಕ್ಲಿಕ್ಕಿಸುತ್ತಿದ್ದೆವು. ರೀಲು, ಬ್ಯಾಟರಿ ಮುಗಿದಾಗ ಕ್ಯಾಮೆರಾದೊಳಗೆ ತುಂಬಿಸಿ ಭರ್ತಿ ಮಾಡುತ್ತಿದ್ದೆವು. 

ಇಂದು

ಇಂದು ಅಂದಿನಂತಲ್ಲ. ಕಾಲಚಕ್ರ ಉರುಳಿ ಹೊಸ ತಿರುವು ಪಡೆದಿದೆ.  ದುಡ್ಡಿನ ಕೊರತೆಯಿಲ್ಲ.  ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ದುಡ್ಡು ಓಡಾಡುತ್ತಿದೆ. ಮಕ್ಕಳ ವಿದ್ಯಾಭ್ಯಾಸಕೆ ಹಿಂದೆ, ಮುಂದೆ ನೋಡಬೇಕಿಲ್ಲ... ನಾಯಿಕೊಡೆ(ಅಣಬೆ)ಗಳಂತೆ ಅಲ್ಲಲ್ಲಿ ತಂತ್ರಜ್ಞಾನ, ವೈದ್ಯಕೀಯ, ಲೆಕ್ಕ ಪರಿಶೋಧನೆ, ಕಂಪ್ಯೂಟರ್ ಸ್ನಾತಕೋತ್ತರ, ಪದವಿ... ಹೀಗೆ ವಿವಿಧ ತರಬೇತಿಗಳ ಕಾಲೇಜುಗಳು ತಲೆಯೆತ್ತಿ ನಿಂತಿವೆ. ಎಷ್ಟೋ ಅವಕಾಶಗಳು ಕೈಬೀಸಿ ಕರೆಯುತ್ತಿರಲು ಮಕ್ಕಳೂ ಛಲ ಬಿಡದೆ ಕಲಿಯುತ್ತಿದ್ದಾರೆ. 

      ಹೆತ್ತವರು ಮನೆಯ ಸಂಸಾರವನ್ನು ಸರಿಯಾಗಿ ಹೊಂದಿಸಿಕೊಂಡು ಹೋಗುವುದರ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರು ದೇಶದ ಉತ್ತಮ ಪ್ರಜೆಯಾಗಿ ಬಾಳಬೇಕು ಎಂಬ ಕನಸು ಹೊತ್ತಿರುತ್ತಾರೆ. ಅದನ್ನು ಈಡೇರಿಸಲು ಲಕ್ಷಗಟ್ಟಲೆ ದುಡ್ಡನ್ನು ಖರ್ಚು ಮಾಡಿ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೇ ಸೇರಿಸುತ್ತಾರೆ. ಇಂದು ಮಕ್ಕಳು ದೂರದ ಊರಲ್ಲಿ ಕಲಿಯಲು ಏನೂ ತೊಂದರೆಯಿಲ್ಲ. ಬೇಕಾದಷ್ಟು ಸೌಕರ್ಯಗಳಿವೆ.  ಇರುವಲ್ಲಿಂದಲೇ ಫೋಟೊ ಸಹಿತ ವೀಡಿಯೊ ಕರೆಯನ್ನೂ ಮಾಡಬಹುದಾಗಿದೆ. ಗುರು ಹಿರಿಯರು, ದೇವರ ಅನುಗ್ರಹ, ಕೃಪೆ ಇದ್ದರೆ ಬಾಳಿನ ಏಳಿಗೆಗೆ ಇನ್ನೇನು ಬೇಕು..?!!

      ಅಷ್ಟೇ ಏಕೆ... ಅಂದಿನ ಕಾಲದ ರೇಡಿಯೊ,  ಟೇಪ್ ರೆಕಾರ್ಡರ್,  ಫೋನು, ಸಿ.ಡಿ ಎಲ್ಲ ಮೂಲೆಪಾಲಾಗಿದೆ. ಈಗ ನಮಗೆ ಬೇಕಾದ್ದೆಲ್ಲವೂ ಕೇವಲ ಚರವಾಣಿ ಎನ್ನುವ ಮೊಬೈಲ್ ಒಂದರಲ್ಲೇ ಸಿಗುತ್ತಿದೆ. ಇಂದು ಇದೊಂದು ಕೈಯಲ್ಲಿ ಇದ್ದರೆ ಸಾಕು,  ಕೇವಲ ಕೂತಲ್ಲಿಂದಲೇ ವಿದೇಶವನ್ನೂ ಸುತ್ತಿ ಬರಬಹುದು. ಫೋನ್ ಹೋಗಿ ಮೊಬೈಲು ಬಂತು, ಇದ್ದುದೆಲ್ಲವ ಉಳಿಸಿಕೊಳ್ಳಲು ಚಿಕ್ಕದಾದ ಪೆನ್ ಡ್ರೈವ್ ಬೇರೆ…

       ಕಲ್ಲಿನಲ್ಲಿ ಬಟ್ಟೆಯನ್ನು ಒಗೆಯುವುದರ ಬದಲಾಗಿ ಒಗೆಯಲು ತೊಳೆಯುವ ಪೆಟ್ಟಿಗೆಯನ್ನು ಯಾರೋ ಕಂಡುಹಿಡಿದರು. ಹಾಗೆಯೇ ಅಡಿಗೆಯ ಸಾಮಾನುಗಳು ಹಾಳಾಗದಂತೆ ಜಾಗ್ರತೆಯಾಗಿಡಲು ತಂಪಿನ ಪೆಟ್ಟಿಗೆ ಬಂತು. ಇದು ಯಾವುದೂ ಮೊದಲಿರಲಿಲ್ಲ. ಕಾಲಚಕ್ರ ಉರುಳುತ್ತಿದೆ....!!

      ನಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ಹಾಕಬೇಕಾದರೆ  ಜಿ-ಪೇ ಬಂದಿದೆ. ತಕ್ಷಣ ಖಾತೆಗೆ ಹಣ ಬರುತ್ತದೆ. ಹೆಚ್ಚಿನ ಕೆಲಸಗಳೂ ಸುಲಭವಾಗಿವೆ.  ವಿಜ್ಞಾನಿಗಳು ಉಪಗ್ರಹವನ್ನು ಕಂಡುಹಿಡಿದಂತೆ, ಸಂಶೋಧಕರು ಏನೇನೋ ಹೊಸತನ್ನು ಸಂಶೋಧನೆ ಮಾಡುತ್ತಲೇ ಇದ್ದಾರೆ. 

      ಇಂದು ಜನರು ಹಳ್ಳಿಯನ್ನು ಬಿಟ್ಟು ಪೇಟೆಗೆ ವಲಸೆ ಹೋಗುತ್ತಿದ್ದಾರೆ. "ಅಪ್ಪ ನೆಟ್ಟ ಗಿಡದ ಫಲ ಮಕ್ಕಳು ಉಣ್ಣುವರು" ಅಂತ ಹೇಳುತ್ತಾರಾದರೂ, ಅತ್ತ ಮಕ್ಕಳು ಉದ್ಯೋಗ ನಿಮಿತ್ತ ಪೇಟೆಯ ದಾರಿ ಹಿಡಿದಿದ್ದಾರೆ. ಇತ್ತ ಹಿರಿಯರು ಪ್ರಾಯಸ್ಥರಾಗಿ ಶಕ್ತಿ ಕಳೆದುಕೊಂಡಿರುತ್ತಾರೆ. ಅಲ್ಲದೆ, ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದ ಪರಿಸ್ಥಿತಿ.. ಜೀವನ ದುಃಸ್ಥಿತಿಯನ್ನು ತಂದೊಡ್ಡಿದೆ. ಮಗನೊಂದಿಗೆ ಪೇಟೆ ಮನೆಯತ್ತ ಮುಖಮಾಡಿ ಇದ್ದುದರಲ್ಲಿ ತೃಪ್ತಿ ಪಟ್ಟುಕೊಂಡು ನಿವೃತ್ತಿಯ ಸುಖದ ಜೀವನವನ್ನು ನಡೆಸುತ್ತಿದ್ದಾರೆ. 

✍ ಮುರಳಿಕೃಷ್ಣ ಕಜೆಹಿತ್ತಿಲು

 

Category:Parenting and Family



ProfileImg

Written by Murali Krishna

DTP Worker, Vittal, Mangalore

0 Followers

0 Following