ಪ್ರಾಸ ವಿಶೇಷ

ProfileImg
15 Apr '24
5 min read


image

ಹಾಡು, ಗೀತೆ, ಕವಿತೆ ಇವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ.  ಇವುಗಳೊಡಗಿನ ನಮ್ಮ ನಂಟು ಬಾಲ್ಯದಿಂದಲೇ ಆರಂಭವಾಗುತ್ತದೆ.  ಜೋಗುಳದ ಹಾಡು ಕೇಳುತ್ತಲೇ ನಾವು ಬೆಳೆಯುತ್ತೇವೆ.  ಹಾಗೆಯೇ, ವಿದ್ಯಾಭ್ಯಾಸ, ಪ್ರೌಢಾವಸ್ಥೆ, ನಮ್ಮ ಜೀವನದ ಎಲ್ಲ ಸ್ತರಗಳಲ್ಲಿಯೂ ಹಾಡು, ಗೀತೆಗಳು ವಿಶೇಷ ಪಾತ್ರವಹಿಸುತ್ತವೆ.  ಸಂತಸಗೊಂಡಾಗ ಮನಸ್ಸು ಹಾಡಲೆಳಸಿದರೆ, ದುಃಖಗೊಂಡಾಗ ನಮ್ಮ ನೋವಿಗೆ ಸ್ಪಂದಿಸಲು ಶೋಕಗೀತೆಗಳು ಸಹಾಯಕವಾಗುತ್ತವೆ.  ಹೀಗೆ ಮಾತನಾಡುವ ಸಾಮರ್ಥ್ಯವುಳ್ಳ ಮನುಷ್ಯಮಾತ್ರನಿಗೆ ಹಾಡು ಗೀತೆಗಳು ವಿಶೇಷ ಅಭಿವ್ಯಕ್ತಿ ಸಾಧನವಾಗಿವೆ.

ಹಾಡು ತಾನೇತಾನಾಗಿ ಹುಟ್ಟಿ ಮನಸ್ಸಿನಿಂದ ಹೊರಹೊಮ್ಮಿದ ಸ್ವಚ್ಛಂದ ಗೀತೆಯಾಗಿರಬಹುದು ಅಥವಾ ಛಂದೋಬಧ್ಧವಾಗಿ ರಚಿಸಿದ ರಚನೆಯಾಗಿರಬಹುದು.  ಆ ರೀತಿ ಛಂದೋಬಧ್ಧವಾಗಿ ರಚಿಸಲ್ಪಟ್ಟ ಕೃತ್ರಿಮ ಕೃತಿಯಾಗಿಯೂ ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ಹೊರಹೊಮ್ಮಿದ ಗೀತೆಯಂತೆ ತೋರಿಬರುವುದರಲ್ಲಿ ಆ ಕೃತಿಯ ಶ್ರೇಷ್ಠತೆ ಅಡಗಿರುತ್ತದೆ.

ಈ ಛಂದೋಬದ್ಧ ರಚನೆಗಳು ಯತಿ, ಪ್ರಾಸ, ಅಲಂಕಾರ ಮುಂತಾದ ಅನೇಕ ಲಕ್ಷಣಗಳನ್ನೊಳಗೊಂಡೀರುತ್ತವೆ.  ಇವುಗಳ್ಲಲಿ ಪ್ರಾಸ ಎಂಬುದು ಎಲ್ಲರೂ ಸಹಜವಾಗಿ ಗುರುತಿಸಬಹುದಾದ ಕಾವ್ಯ ಲಕ್ಷಣವಾಗಿದೆ.  Nursery Rhymes ಬಲ್ಲ ಬಾಲಕ ಬಾಲಕಿಯರೂ ಇದನ್ನು ಗುರುತಿಸಬಹುದು.  ಬಾಲ್ಯ ಸಾಹಿತ್ಯದಿಂದಹಿಡಿದು ಸಮಸ್ತ ಪದ್ಯ ಪರಂಪರೆಯಲ್ಲಿ ಪ್ರಾಸದ ಪಾತ್ರ ಬಹು ಮುಖ್ಯವಾಗಿದೆ.  ನಮ್ಮ ಕಾವ್ಯಪರಂಪರೆಯಲ್ಲಿ ಪ್ರಾಸವಿರದ ಪದ್ಯ ರಚನೆ ಬಹು ವಿರಳ.  ಈ ಪ್ರಾಸದ ಉದ್ದೇಶ ಬರಿ ಕಾವ್ಯದ ಕಟ್ಟಳ್ಳೆಯನ್ನು, ಛಂದಸ್ಸಿನ ಕಟ್ಟಳ್ಳೆಯನ್ನು ನಿಭಾಯಿಸುವುದಕ್ಕೆ ಸೀಮಿತವಾಗಿದ್ದರೂ ಅದರ ಬಳಕೆಯ ವೈಶಿಷ್ಟ್ಯ ವೈವಿಧ್ಯತೆಗಳು ಕಾವ್ಯಕ್ಕೇ ಒಂದು ವಿಶೇಷ ಮೆರಗನ್ನು ತಂದುಕೊಡುತ್ತವೆ.  ಅದ್ಭುತ, ರೋಚಕ ಪ್ರಾಸ ಪದಗಳ ಸಂಯೋಜನೆ ಕವಿಯ ಪ್ರತಿಭೆಯನ್ನು ಎತ್ತಿತೋರಿಸುವುದಲ್ಲದೆ ಓದುಗ ಕಾವ್ಯಾಸಕ್ತರಿಗೆ ವಿಶೇಷ ಮುದವನ್ನು ನೀಡುತ್ತದೆ.

ಈ ಪ್ರಾಸ ವಿಷಯವನ್ನೇ ಮುಂದಿಟ್ಟುಕೊಂಡು ನಾವು ಕಾವ್ಯವನ್ನು ವಿಶ್ಲೇಷಿಸಬಹುದೇ?  ಪ್ರಾಸ ಪ್ರಯೋಗವನೇ ಆಧರಿಸಿ ಕಾವ್ಯಾವಲೋಕನ ಮಾಡುವುದೂ ಒಂದು ಅಭ್ಯಾಸ ಆಗಬಹುದಲ್ಲವೇ.  ಒಬ್ಬ ಕಾವ್ಯ ವಿಮರ್ಶಕ ಅಥವಾ ಮೀಮಾಂಸಕರಾಗದೆ, ಸಾಮಾನ್ಯ ಕಾವ್ಯಾಸಕ್ತರಾಗಿ ಪ್ರಾಸಪ್ರಯೋಗದ ವೈವಿಧ್ಯತೆಯೆಡೆಗೆ ಗಮನಹರಿಸುವುದೂ ಒಂದು ವಿಶೇಷ ಅನುಭವ.  ಪ್ರಾಸ ಬಳಕೆಯ ಸಮರ್ಪಕತೆ, ಪ್ರಾಸರೂಪಿ ಪ್ರಸ್ತುತವಾದ ಪದಲಾಲಿತ್ಯ, ಕವಿಯ ಪ್ರತಿಭೆ ಚಾತುರ್ಯಗಳನ್ನು ವಿಶ್ಲೇಷಿಸುವುದು ಒಂದು ಧನ್ಯತೆಯ ಭಾವವನ್ನು ಮೂಡಿಸುತ್ತದೆ.

ಈ ನಿಟ್ಟಿನಲ್ಲಿ ನಾವು ಯಾವುದೇ ಭಾಷೆಯ ಕಾವ್ಯವನ್ನು ಪ್ರಾಸವಿಮರ್ಶೆಗೆ ಒಳಪಡಿಸಬಹುದು.  ವಿವಿಧ ಭಾಷೆಗಳ ಕಾವ್ಯ ಕೃತಿಗಳಲ್ಲಿ, ಕನ್ನಡವಲ್ಲದೆ ನಮಗೆ ಪರಿಚಿತವಿರುವ ಹಿಂದಿ/ಉರ್ದು ಭಾಷೆಯ ಕವಿಗಳ ಪ್ರಾಸಚಾತುರ್ಯದೆಡೆಗೆ ಗಮನಹರಿಸುವ ಒಂದು ಚಿಕ್ಕ ಪ್ರಯತ್ನ, ಈ ಲೇಖನ.

ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆ ಕೇಳಿಸಲುಹಿದ ದೇವನಿದೋ ಬಂಡ
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿತ್ತವ
ಭಂಜನೆಗೆ ಬಲು ದೇವ ಬಂದನು ನೃಪತಿಯರಮನೆಗೆ
(ಬ್ರಹ್ಮನ ಪಿತ, ಹಾವಿನಮೇಲೆ ಮಲಗುವವ, ಆನೆಯ ಮೊರೆ ಕೇಳಿ ಸಲುಹಿದವ, ಹನುಮನ ಒಡೆಯ, ಅಂಜಿದ ನರಕಾಸುರನ ಮಗನಿಗೆ ಅಭಯವಿತ್ತವ ಧೃತರಾಷ್ಟ್ರನ ಅರಮನೆಗೆ ಬಂದ).

ಸಂಧಾನಕ್ಕಾಗಿ ಬರುವ ಕೃಷ್ಣನನ್ನು ಕುಮಾರವ್ಯಾಸ ಪರಿಪರಿಯಾಗಿ ಬಣ್ಣಿಸುತ್ತಾನೆ.  ಕಂಜ, ನಂಜು, ಕುಂಜರ, ಅಂಜನಾಸುತ, ಅಂಜಿದ, ಭಂಜನೆ ಮುಂತಾದ ಪ್ರಾಸ ಪದಗಳು ಎಷ್ಟೊಂದು ಸಮರ್ಪಕವಾಗಿ ಬಳಕೆಯಾಗಿವೆ.  ಪದಗಳ ಸಂಯೋಜನೆ ಕೃತ್ರಿಮವಾಗಿದ್ದರೂ ಎಷ್ಟೊಂದು ಸುಲಲಿತವಾಗಿ, ಸ್ವಾಭಾವಿಕವಾಗಿ ಕೃಷ್ಣಸ್ತುತಿ ಮೂಡಿಬಂದಿದೆ.  

ಕ್ಷೀರವಾರಿಧಿಶಯನ ಬಂದನು
ವಾರಿಜೋದರ ಕೃಷ್ಣ ಬಂದನು
ಧಾರುಣಿಯ ಹೊರೆ ಇಳಿಸಲೋಸುಗ ಮನುಜವೇಷದಲಿ
ಭೂರಿ ದನುಜರನೊರೆಸಿ ಕೌರವ
ವಾರಿಧಿಯ ಮುಕ್ಕಳಿಸಲೋಸುಗ
ಬೋರನೈತರುತಿರ್ದ ಅಂಧನೃಪಾಲನರಮನೆಗೆ

(ಹಾಲಿನ ಕಡಲಲ್ಲಿ ಮಲಗುವವ, ಕಮಲನಾಭ, ಭೂಭಾರವನ್ನಿಳಿಸಲು ಮನುಜವೇಷ ಧರಿಸಿ, ಅಸುರರನ್ನು ಅಳಿಸಿ, ಕೌರವ ಸಮುದ್ರವನ್ನು ಮುಕ್ಕಳಿಸಲು ಕೃಷ್ಣ ಅಂಧನೃಪಾಲನ ಅರಮನೆಗೆ ಬಂದ)

ಕ್ಷೀರ, ವಾರಿಜ, ಧಾರುಣಿ, ಭೂರಿ, ವಾರಿಧಿ, ಬೋರ ಪ್ರಾಸಪದಗಳ ಸಮರ್ಪಕ ಬಳಕೆಯಜೊತೆಗೆ "ಕೌರವ ವಾರಿಧಿಯ ಮುಕ್ಕಳಿಸಲೋಸುಗ" ಎಂಬಲ್ಲಿ ಕವಿ ಉತ್ಪ್ರೇಕ್ಷಾಲಂಕಾರದ ಅದ್ಭುತ ಪ್ರಯೋಗವನ್ನು ಮೆರೆದಿದ್ದಾನೆ.  ಇಂಥ ಅದ್ಬುತ ಕಾವ್ಯ ಪ್ರತಿಭೆ ಕುಮಾರ ವ್ಯಾಸ ಭಾರತದಲ್ಲಿ ಎಲ್ಲೆಂದರಲ್ಲಿ ನಮಗೆ ಕಾಣಸಿಗುತ್ತದೆ.

ಕವಿ ಲಕ್ಷ್ಮೀಶ ಜೈಮಿನಿ ಭಾರತದ ಪೀಠಿಕಾ ಸಂಧಿಯಲ್ಲಿ ಸರಸ್ವತಿಯನ್ನು ತನ್ನ ಕಾವ್ಯ ಸುಶ್ರಾವ್ಯವಾಗುವಂತೆ ತನ್ನ ನಾಲಿಗೆಯ ಮೇಲೆ ನೆಲೆಸಿರಲು ಪ್ರಾರ್ಥಿಸುತ್ತಾನೆ-

ಭೂವ್ಯೋಮ ಪಾತಾಳಲೋಕಂಗಳಲ್ಲಿ ಸಂ
ಭಾವ್ಯರೆಂದೆನಿಸಿಕೊಳ್ವಖಿಲ ದೇವರ್ಕಳಿಂ
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ
ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು
ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ
ನೇ ವ್ಯಾಪಿಸಿರ್ದಮಲ ಸುಮತಿಯಂ ತಾ ಎನಗೆ ತಾಯೆ ನಗೆಗೂಡಿ ನೋಡಿ

ಭೂವ್ಯೋಮ, ಸಂಭಾವ್ಯ, ಸೇವ್ಯ, ಕಾವ್ಯ, ಶ್ರಾವ್ಯ ಮುಂತಾದ ಪ್ರಾಸಪದಗಳ ಬಳಕೆ ಎಷ್ಟೊಂದು ಸುಶ್ರಾವ್ಯವಾಗಿದೆಯೋ, ಅದರ ಜೊತೆಗೆಯೇ "ತಾ ಎನಗೆ ತಾಯೆ ನಗೆಗೂಡಿ ನೋಡಿ" ಎಂಬ ಕವಿಚಾತುರ್ಯ ಕಾವ್ಯಾಸಕ್ತರ ಮನಸ್ಸನ್ನು ಸೂರೆಗೊಳ್ಳುತ್ತದೆ.

ಬಾಲಕ ಚಂದ್ರಹಾಸನನ್ನು ಕೊಲೆಗಡುಕರು ಎಳೆದೊಯ್ಯುವ ಪ್ರಸಂಗವನ್ನು ಲಕ್ಷ್ಮೀಶ ವರ್ಣಿಸುತ್ತಾನೆ-

ಪಾತಕಿಗಳೊಡಳೊಳಿಹ ಪರಮಾತ್ಮನಂತೆ ಯಮ
ದೂತರೆಳೆತಂದ ಅಜಮಿಳನಂತೆ ಕಾಕ ಸಂ
ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ
ಶೀತಲ ಮರೀಚಿ ಲಾಂಛನದಂತೆ ಬಹಳ ಕೋ
ಪಾತಿಶಯದೊಳ್ ಇಹ ವಿವೇಕದಂತೆ ಆ ಪಶು
ಘಾತಕಿಗಳೊಯ್ವ ಬಾಲಕನಿರ್ದ ಅವರೆಡೆಯೊಳು ಅಂಜುತ್ತಾ ಅಳುತೆ

ಪಾತಕಿ, ದೂತ, ಸಂಘಾತ, ಶೀತಲ, ಕೋಪಾತಿಶಯ ಘಾತಕಿ ಪ್ರಾಸಪದಗಳ ಸಾರ್ಥಕ ಬಳಕೆಯ ಜೊತೆಗೆ "ಬಹಳ ಕೋಪಾತಿಶಯದೊಳ್ ಇಹ ವಿವೇಕದಂತೆ ಆ ಬಾಲಕ ಆ ಕೊಲೆಗಡುಕರ ಮಧ್ಯ ತೋರುತ್ತಿದ್ದ" ಎಂಬಲ್ಲಿ ಕವಿಯ ಉಪಮಾಕೌಶಲ್ಯ ಓದುಗರನ್ನು ಚಕಿತಗೊಳಿಸುತ್ತದೆ.
ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರತಾವ ಹುಡುಕಿ

ತೂಕಡಿಕೆ ತುಳುಕಾಡುತ್ತವೆ, ಕಣ್ಣುಗಳು ದುಡುಕಿ ಎವೆ ಅಪ್ಪುತ್ತವೆ - ಊಹಿಸಲೂ ಅಸಾಧ್ಯವಾದ ಕವಿಕಲ್ಪನೆ, ಜೊತೆಗೆ ಮೇಳವಿಸಿದ ತೂಕಡಿಕಿ, ದುಡುಕಿ, ಹುಡುಕಿ ಪ್ರಾಸಪದಗಳ ವಿಶಿಷ್ಟ ಸಂಯೋಜನೆ - ವರಕವಿ ಬೇಂದ್ರೆಯವರ ಇಂಥ ಸಾಲುಗಳುನ್ನು ಓದುವುದು, ವಿಮರ್ಶಿಸುವುದು ಕಾವ್ಯಾಸಕ್ತರಿಗೆ ಹರ್ಷಾಸ್ಪದವಾದ ಸಂಗತಿ.

ತಂಗಾಳಿಯ ಕೈಯೊಳಗಿರಿಸಿ
ಎಸಳಿನ ಚವರಿ; ಹೂವಿನ ಎಸಳಿನ ಚವರಿ
ಹಾರಿಸಿ ಬಿಟ್ಟರು ದುಂಬಿಯ ದಂಡು
ಮೈಯೆಲ್ಲಾ ಸವರಿ; ಗಂಧಾ ಮೈಯೆಲ್ಲಾ ಸವರಿ

ಚವರಿ, ಸವರಿ ಎಂಬ ಪ್ರಾಸಗಳುಳ್ಳ ಈ ಸಾಲುಗಳು ಬೇಂದ್ರೆಯವರ ಚಿತ್ರೋಪಮ (picturousque) ನಿರೂಪಣೆಯ ಕುಶಲತೆಗೆ ಹಿಡಿದ ಕನ್ನಡಿಯಾಗಿವೆ.

ಹಳೆಯ ಹಿಂದಿ ಚಿತ್ರಗೀತೆಗಳು ಶ್ರೇಷ್ಟವಾದ ಸಾಹಿತ್ಯ ಸಂಗೀತಗಳನ್ನೊಳಗೊಂಡು ಸಹೃದಯರ, ರಸಿಕರ ಮನಸ್ಸನ್ನು ಇಂದಿಗೂ ಸೂರೆಗೊಳ್ಳುತ್ತವೆ.  Golden Era ಅಥವಾ ಸುವರ್ಣ ಯುಗವೆಂದೇ ಪ್ರಸಿದ್ಧವಿರುವ ೫೦-೬೦ ರ ದಶಕದ ಗೀತೆಗಳು ಸಾಹಿರ್, ಶೈಲೇಂದ್ರ, ಕೈಫಿ ಮುಂತಾದ ಅನೇಕ ಶ್ರೇಷ್ಠ ಕವಿಗಳ ಕಾವ್ಯಕುಶಲತೆಗೆ ಸಾಕ್ಷಿಯಾಗಿವೆ.  ಪ್ರಾಸದ ದೃಷ್ಟಿ ಹರಿಸಿ ಈ ಗೀತೆಗಳನ್ನು ವಿಶ್ಲೇಷಿಸಿದಾಗ -

ಓ ಬಸಂತಿ ಪವನ ಪಾಗಲ್ ನಾ ಜಾ ರೇ ನಾ ಜಾ
ಚೀನಕರ್ ನೈನೋ ಸೆ ಕಾಜಲ್  ನಾ ಜಾ ರೇ ನಾ ಜಾ
ಸುನ್ ಲೇ ಕ್ಯಾ ಕೆಹತಿ ಹೈ ಪಾಯಲ್ ನಾ ಜಾ ರೇ ನಾ ಜಾ
(ಓ ವಸಂತದ ಹುಚ್ಚು ಗಾಳಿಯೇ ನನ್ನಿಂದ ದೂರವಾಗಬೇಡ.  ನನ್ನ ಕಣ್ಣ ಕಾಡಿಗೆಯನ್ನಳಿಸಿ ದೂರವಾಗಬೇಡ.  ಕೇಳು ನನ್ನ ಗೆಜ್ಜೆ ನಿನಗೀವ ಸಂದೇಶವನ್ನು, ದೂರವಾಗಬೇಡ).

ತನ್ನಿಂದ ದೂರವಾಗುತ್ತಿರುವ ಪ್ರಿಯಕರನಿಗಾಗಿ ರೋದಿಸುವ ಪ್ರೇಯಸಿಯ ಅಳಲನ್ನು ಎಷ್ಟೊಂದು ಹೃದಯಸ್ಪರ್ಶಿಯಾಗಿ ಕವಿ ಶೈಲೇಂದ್ರ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದಾರೆ.  ಪಾಗಲ್, ಕಾಜಲ್ ಮತ್ತು ಪಾಯಲ್ ಪದಗಳ ಪ್ರಾಸ ಸಾರ್ಥಕವಾಗಿ ಬಳಸಲ್ಪಟ್ಟಿದೆ ಮತ್ತು ಭಾವದ ಉತ್ಕಟತೆಯನ್ನು ವೃದ್ಧಿಗೊಳಿಸಿದೆ.

ಕಾವ್ಯವಸ್ತು ಪ್ರೀತಿವಿಷಯವಾಗಿರಲಿ, ಸಾಮಾಜಿಕ ಸಾಮರಸ್ಯವಾಗಿರಲಿ, ನೀತಿಪಾಠವಿರಲಿ ನೇರವಾಗಿ ದಿಟ್ಟವಾಗಿ ಹೃದಯವನ್ನು ತಟ್ಟುವಂತೆ ಕಾವ್ಯರೂಪದಲ್ಲಿ ಪ್ರಸ್ತುತಪಡಿಸುವ ವಿಶಿಷ್ಟ ಕವಿ, ಸಾಹಿರ್ ಲುಧಿಯಾನವಿ.  ಅವರ ಗೀತೆಗಳಲ್ಲಿನ ನೇರ ಅಭಿವ್ಯಕ್ತಿ, ಪ್ರಭಾವಿ ಪ್ರಾಸಪ್ರಯೋಗಕ್ಕೆ ಉದಾಹರಣೆ-

ತೇರೇ ಗಿರನೇ ಮೇ ಭೀ ತೇರಿ ಹಾರ್ ನಹಿ
ಕಿ ತೂ ಆದಮೀ ಹೈ ಅವತಾರ್ ನಹಿ
(ನಿನ್ನ ಅಧ;ಪತನವನ್ನೂ ನಿನ್ನ ಸೋಲೆಂದು ಪರಿಗಣಿಸಬೇಡ.  ಏಕೆಂದರೆ ನೀನು ಮಾತ್ರ ಒಬ್ಬ ಮನುಜ, ಅವತಾರವಲ್ಲ)

ಜಂಹಾ ಸಚ್ ನಾ ಚಲೇ ವಂಹಾ ಝೂಟ ಸಹಿ
ಜಂಹಾ ಹಕ್ ನಾ ಮೀಲೇ ವಂಹಾ ಲೂಟ ಸಹಿ
(ಎಲ್ಲಿ ಸತ್ಯಕ್ಕೆ ಸ್ಥಾನವಿಲ್ಲವೋ ಅಲ್ಲಿ ಮಿಥ್ಯಾಚಾರಿಯಾಗು.  ಎಲ್ಲಿ ನಿನ್ನ ಹಕ್ಕು ದೊರೆಯದೋ, ಅಲ್ಲಿ ಲೂಟಿಮಾಡಲು ಹಿಂಜರಿಯಬೇಡ)
ಎಂಥ ಮಾರ್ಮಿಕವಾದ ಆತ್ಮಸ್ಥೈರ್ಯವನ್ನು ಉತ್ತೇಜಿಸುವ ನುಡಿಗಳು! ಪ್ರಾಸದ ಪ್ರಯೋಗವೂ ಅಷ್ಟೇ ಪ್ರಭಾವಿಯಾಗಿದೆ.

ರಾವಣ, ಲಕ್ಷ್ಮಣ ಎಂಬ ಸಂಸ್ಕೃತ ಪದಗಳನ್ನು ಜಾನೋತನ್, ವತನ್, ದಾಮನ್ ಮುಂತಾದ ಉರ್ದು ಪದಗಳೊಂದಿಗೆ ಬಳಸಿ ಅದ್ಭುತವಾದ ಈ ದೇಶಭಕ್ತಿಗೀತೆಯನ್ನು ರಚಿಸಿದ ಕವಿ ಕೈಫಿ ಅಜ್ಮಿ.  ಊಹಿಸಲೂ ಅಸಾಧ್ಯವಾದ ಅತ್ಯಂತ ಶ್ರೇಷ್ಠ ಪ್ರಾಸಪ್ರಯೋಗ.
 
ಕರ್ ಚಲೇ ಹಮ್ ಫಿದಾ ಜಾನೋತನ್ ಸಾಥಿಯೋ
ಅಬ್ ತುಮ್ಹಾರೇ ಹವಾಲೆ ವತನ್ ಸಾಥಿಯೋ
(ನಮ್ಮ ದೇಹಪ್ರಾಣಗಳನ್ನು ಸಮರ್ಪಿಸಿ ದೇಶವನ್ನು ನಿಮ್ಮ ಸ್ವಾಧೀನಪಡಿಸ ನಾವು ಹೊರಟಿದ್ದೇವೆ ದೇಶಬಂಧುಗಳೇ)
ಖೀಚದೊ ಅಪನೇ ಖೂನ್ ಸೆ ಜಮೀಪೇ ಲಕೀರ್
ಐಸ್ ತರಫ್ ಆನೆ ಪಾಏ ನಾ ರಾವಣ್ ಕೋಇ
ಕಾಟದೋ ಹಾಥ್ ಅಗರ್ ಹಾಥ್ ಬಢನೆಲಗೇ
ಚೂನೆಪಾಏ ನಾ ಸೀತಾಕೆ ದಾಮನ್ ಕೋಇ
ರಾಮ ಭೀ ತುಮ ತುಮ್ಹೀ ಲಕ್ಷ್ಮಣ್ ಸಾಥಿಯೋ
(ನಿಮ್ಮ ರಕ್ತದಿಂದ ಮತ್ತೆ ಯಾವ ರಾವಣನೂ ಬಾರದಂತೆ ಒಂದು ಗೆರೆಯೆಳೆಯಿರಿ.  ಸೀತೆಯನ್ನು ಅತಿಕ್ರಮಿಸಲು ಮುಂದಾಗುವ ಕೈಗಳನ್ನು ಕತ್ತರಿಸಿರಿ.  ನೀವೇ ರಾಮ ನೀವೇ ಲಕ್ಹ್ಮಣ ದೇಶಬಂಧುಗಳೇ).
ದೇಶಭಕ್ತಿ, ತ್ಯಾಗ, ಶೌರ್ಯ ಭಾವಗಳ ಮೇಳದ ಜೊತೆಗೆ ಅದ್ಭುತವಾದ ಈ ಪ್ರ್ರಾಸಪ್ರಯೋಗ ಓದುಗರನ್ನು ಹತಪ್ರಭರನ್ನಾಗಿಸುತ್ತದೆ.  ಇಂಥ ವಿಶಿಷ್ಟ ಪ್ರ್ರಾಸಕುಶಲತೆಯೆಡೆಗೆ ಗಮನಹರಿಸುವುದು ಹರ್ಷಾಸ್ಪದವಾದ ಸಂಗತಿ.

ಇನ್ನೊಂದು ವಿಶೇಷ ಸಂಗತಿ - ಈ ಪ್ರಾಸವನ್ನಾಧರಿಸಿಯೇ ಬೃಹತ್ತು ಮಹತ್ತುಗಳನ್ನೊಳಗೊಂಡ ಒಂದು ವಿಶಿಷ್ಟ ಸಾಹಿತ್ಯಪ್ರಕಾರ "ಗಝಲ್" ಎಂಬುದು ಉರ್ದುವಿನಲ್ಲಿ ತಲೆಯೆತ್ತಿನಿಂತಿದೆ.  ಹೌದು, ಈ ಗಝಲ್ ಸಾಹಿತ್ಯದ ಬುನಾದಿ ಪ್ರಾಸವೆಂದೇ ಹೇಳಬಹುದು.  ಈ ಪ್ರಾಸವನ್ನು 'ರದೀಫ್' ಎಂದು ಕರೆಯುತ್ತಾರೆ.  ಈ ರದೀಫ್ ಜೊತೆಗೆ 'ಕಾಫಿಯಾ' ಎಂಬ ಪದವೂ ಜೊತೆಜೊತೆಯಾಗಿ ಬಳಸಲ್ಪಡುತ್ತವೆ.  ಗಝಲ್ ಎಂಬುದು ದ್ವಿಪದಿಗಳ ಸಂಕಲನ.  ಈ ದ್ವಿಪದಿಗಳನ್ನು ಶೇರ್ ಎಂದು ಕರೆಯುತ್ತಾರೆ.  ಗಝಲ್ಲಿನ ಶೇರ್ ಗಳು ಯಾವುದೇ ನಿದ್ರ್ದಿಷ್ಟ ಭಾವಸಾಮ್ಯಕ್ಕೆ ಒಳಪಟ್ಟಿರುವುದಿಲ್ಲ.  ಅವು ಮುಕ್ತಕಗಳಾಗಿರುತ್ತವೆ.  ಒಂದೇ ಗಝಲ್ಲಿನ ಒಂದು ಶೇರ್ ಪ್ರೀತಿ/ವಿರಹವನ್ನು ಪ್ರಸ್ತಾಪಿಸಿದರೆ, ಅದೇ ಗಝಲ್ಲಿನ ಇನ್ನೊಂದು ಶೇರ್ ನೀತಿವಿಷಯವನ್ನೋ, ಸಮಾಜದ ವಿಷಮತೆಯೆನ್ನೋ ಅಥವಾ ಜೀವನದ ಇನ್ನಾವುದೋ ಸತ್ಯದ ಮುಖವನ್ನು ಪರಿಚಯಿಸಬಹುದು.  ಅವುಗಳಲ್ಲಿರುವ ಸಾಮ್ಯವೆಂದರೆ ಪ್ರಾಸ ಅಥವಾ ರದೀಫ್ ಮತ್ತು ಕಾಫಿಯ ಹಾಗೂ ಛಂದಸ್ಸು ಮಾತ್ರ.  ಈ ರದೀಫ್ ಮತ್ತು ಕಾಫಿಯ ಪದಗಳನ್ನು ಕೊಟ್ಟು ಅವುಗಳಮೇಲೆ ಗಝಲ್ ಬರೆಸಿ ಕವಿಗೋಷ್ಠಿ ನಡೆಸುವ ಪರಂಪರೆಯೂ ಉಂಟು.

ಫಕೀರಾ ನಾ ಆಯೆ ಸದಾ ಕರ್ ಚಲೇ
ಮಿಯಾ ಖುಷ್ ರಹೋ ತುಮ ದುಆ ಕರ್ ಚಲೇ
(ಭಿಕ್ಷುಕ ಕೂಗಿ ಹಾಗೆ ಹೊರಟುಹೋದ.  ಸುಖವಾಗಿರು ಎಂದು ಹರಸಿ ಹೊರಟುಹೋದ)

ಪರಸ್ತಿಷ್ ಕಿ ಯಾಂ ತಕ್ ಕಿ ಏ ಬುತ್ ತುಝೇ
ಸಬೊಂಕಿ ನಝರ್ ಮೇ ಖುದಾ ಕರ್ ಚಲೇ
(ಎಲ್ಲರ ದೃಷ್ಟಿಯಲ್ಲಿ ನೀನು ದೇವರು ಎಂದೆನಿಸುವವರೆಗೆ ನಿನ್ನ ಆರಾಧನೆಗೈದೆ.
ಇಲ್ಲಿ ಸದಾ, ದುಆ, ಖುದಾ ರದೀಫ್ ಹಾಗು ಕರ್ ಚಲೇ ಎಂಬುದು ಕಾಫಿಯಾ.  ಒಂದೇ ಗಝಲ್ಲಿನ ಶೇರ್ ಗಳಾಗಿಯೂ ಪ್ರಸ್ತಾವಿಸಿದ ವಿಷಯ ಬೇರೆಬೇರೆಯೇ ಇದೆ).  ರಚನೆ- ಮೀರ್ ತಕ್ ಮೀರ್.

ಏ ಜೋ ಆದತ್ ಹೈ ದಿಲ್ ಲಗಾನೆ ಕಿ
ಹೈ ಏ ತರ್ಕಿಬ್ ಜೀ ಸೆ ಜಾನೇ ಕಿ
(ಈ ಹೃದಯವಂತಿಕೆ ಜೀವತೊರೆಯಲು ನಡೆಸುವ ಪ್ರಯತ್ನ)

ಬಾಬೆಜಿಂದಾ ತೊ ಯೂನ್ ಖುಲಾ ಹಿ ಥಾ
ಪರ್ ನ ಥಿ ಚಾಹ ಭಾಗ ಜಾನೇ ಕಿ
(ಸೆರೆಮನೆಯ ಬಾಗಿಲು ತೆರೆದೇ ಇದ್ದಿತ್ತು.  ಓಡಿಹೋಗುವ ಮನಸ್ಸೇ ಇರಲಿಲ್ಲ
ರದೀಫ್ ಲಗಾನೆ/ಜಾನೇ ಮತ್ತು ಕಾಫಿಯಾ ಕಿ) -ಮಹೇಶ್ ಹಾನಗಲ್.

ಹೀಗೆ ಪ್ರಾಸ, ಅಲಂಕಾರ ಅಥವಾ ಇಂಥದೇ ಇನ್ನಾವುದೋ ದೃಷ್ಟಿಕೋನವನ್ನಿಟ್ಟುಕೊಂಡು ಸಾಹಿತ್ಯವನ್ನು ವೀಕ್ಷಿಸಿದಾಗ, ಆಸ್ವಾದಿಸಿದಾಗ ವಿಶೇಷ ಅನುಭವವನ್ನು ಸಾಹಿತ್ಯಾಸಕ್ತರು ಕಂಡುಕೊಳ್ಳಬಹುದು.  ಆಸ್ವಾದಿಸುವ ವಿಷಯ ವಸ್ತು ಒಂದೇ ಆದರೂ ಆಸ್ವಾದಿಸುವ ವಿಧಾನ ಬಗೆಬಗೆಯದ್ದಾದರೆ, ಆಸ್ವಾದನೆಯ ಆನಂದ ಬಗೆಬಗೆಯಾಗಿರುತ್ತದೆ ಎಂಬುದು ನನ್ನ ಅನಿಸಿಕೆ.

Category:Literature



ProfileImg

Written by Anant Kotabagi