ಮರುಳರೋ ನಾವು ಮರುಳರು

-ಡಾ.ಉಮೇಶ ವೀರಕ್ಯಾತಯ್ಯ

ProfileImg
20 May '24
1 min read


ಮರುಳರು‌ ನಾವು‌ ಮರುಳರು,
ಮನ ಮರವಾಗಿಸಿ ಮರುಮರು ಮರುಗೋ ಮರುಳರು..!

ಹಸುಳೆಗೆ ಹಳೆ ಅರಿವೆಯ ತೊಡಿಸಿ
ಅರಿಯದ ಹೆಣಕ್ಕೆ ಹೊಸ ಅರಿವೆಯ ಹೊದಿಸೋ ಮರುಳರು,
ಜಾತಕ-ಸೂತಕ ಮರುಳಲಿ‌ ಮರುಗಿ
ಪಾಪ-ಪುಣ್ಯದ  ಫಲವನು ಬಯಸೋ ಮರುಳರು..!

ಪರಜನ ಪಾಡನು ಪರಿ ಪರಿ ಪೀಡಿಸಿ
ಸ್ವಜನ ಸ್ವಹಿತ ಸ್ವರಕ್ಷೆ ಬಯಸೋ ಮರುಳರು,
ಧನಿಕರ ಅಡಿಯಲಿ ಧಣಿತನ ಬಯಸಿ
ದಣಿವರಿಯದೇ ದೇಹವ ದಯಿಸೋ ಮರುಳರು..!

ತನ್ನೊಳಗಿನ ತನ್ನನು‌ ತಾ ಅರಿಯದೇ ಹೋದರು
ಅರಿವಿನ ಅಹಂನೋಳು  ಅರಗಿನ ಮನೆಯೊಕ್ಕ ಮರುಳರು,
ಕಾಡಬೆಳದಿಂಗಳ ಕನವರಿಕೆಯಲಿ
ಕಾಲಕರ್ಮದ ಹೊಡೆತಕ್ಕೆ ಕಾಲವಾಗೋ ಮರುಳರು..!

Category:Poem



ProfileImg

Written by Dr.Umesha Veerakyathaiah

0 Followers

0 Following