Do you have a passion for writing?Join Ayra as a Writertoday and start earning.

ಮರಳಿದ ಹೆಜ್ಜೆ

ProfileImg
28 May '24
3 min read


image
 

ಮರಳಿದ ಹೆಜ್ಜೆ

ಆರಾಮಕುರ್ಚಿಯಲ್ಲಿ ಕುಳಿತಿದ್ದ ರಾಜೇಶನಿಗೆ ನಡುರಾತ್ರಿ ಸಮೀಪಿಸುತ್ತಿದ್ದರೂ ,ಇತ್ತ ಕುಳಿತುಕೊಳ್ಳಲೂ ಆಗದೆ, ಅತ್ತ ಮಲಗಲೂ ಆಗದೆ ಚಡಪಡಿಸುತ್ತಿದ್ದನು. ಅದಾಗಲೇ ಎಷ್ಟೋ ಸಿಗರೇಟ್ಗಳು ಸುಟ್ಟು ಬೂದಿಯಾಗಿದ್ದವು. ಮತ್ತೆ ಪ್ಯಾಕ್ನಿಂದ ಸಿಗರೇಟ್ ಒಂದನ್ನು ತೆಗೆದು ,ತುಟಿಗಳ ಮಧ್ಯೆ ಸಿಕ್ಕಿಸಿಕೊಂಡು ಲೈಟರ್ನಿಂದ ಹೊತ್ತಿಸಿಕೊಂಡು ಒಂದು ದಮ್ ಎಳೆದನು. ಬಿಟ್ಟ ಹೊಗೆ ಸುರುಳಿಯಾಕಾರದಲ್ಲಿ ತೇಲುತ್ತಾ ಗಾಳಿಯಲ್ಲಿ ಲೀನವಾಗುತ್ತಿತ್ತು. ಹಸಿದ ಹೊಟ್ಟೆ ಆಹಾರಕ್ಕಾಗಿ ಕರೆನೀಡುತ್ತಿದ್ದರೂ ಅದರ ಪರಿವೆಯೇ ಇಲ್ಲದವನಾಗಿದ್ದ. ಅವನ ತಲೆಯಲ್ಲಿ ಹತ್ತಾರು ಯೋಚನೆಗಳಿಂದ ಗುಂಗಿಹುಳುಗಳು ಕೊರೆದಂತೆ ಭಾಸವಾಗುತ್ತಿತ್ತು.ಮನಸ್ಸು ಉಯ್ಯಾಲೆಯಂತೆ ಅತ್ತಿಂದಿತ್ತ,ಇತ್ತಿಂದತ್ತ ಹೊಯ್ದಾಡುತಿತ್ತು.

ಟೇಬಲ್ ಮೇಲಿದ್ದ ಪತ್ರವನ್ನು ಬಿಡಿಸಿ ಪುನಃ ಓದಿದ. ಎಷ್ಟು ಬಾರಿ ಓದಿದರೂ ಅದೇ ಬರಹ,ಅದೇ ಸಾಲುಗಳು.

ಸಾರಾಸಾರ ವಿಚಾರಮಾಡದೇ ದುಡುಕಿದ್ದು ತನ್ನದೇ ತಪ್ಪು;  ನನಗೇನಾಗಿತ್ತು? ಏಕೆ ಹೀಗಾಯಿತು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ತಡಬಡಿಸುತ್ತಿದ್ದನು.
ಎಲ್ಲೆ ಮೀರಿದ ಸಿಗರೇಟಿನ ಬಿಸಿ ತುಟಿಗೆ ಮುತ್ತಿಟ್ಟಾಗಲೇ ಅರಿವಾಗಿದ್ದು.

ಮಲಗಲು ಕಣ್ಮುಚ್ಚಿದರೂ ಹಳೆಯ ನೆನಪುಗಳು ಅವನ ಅಂತಃಪಟಲದ ಮೇಲೆ , ಅಲೆ ಅಲೆಯಾಗಿ ತೇಲಿಬರುತ್ತಿದ್ದವು.

*********

ತಂದೆ-ತಾಯಿಗೆ ಒಬ್ಬನೇ ಮಗನಾದ ರಾಜೇಶ, ಪದವಿಯ ಎರಡನೇ ವರ್ಷದಲ್ಲಿ ಓದುತ್ತಿರುವಾಗಲೇ ಆಘಾತ ಕಾದಿತ್ತು. ತಂದೆಯ ಅಕಾಲ ಮರಣದಿಂದ ಧೃತಿಗೆಟ್ಟಿದ್ದ. ಅವರದ್ದು ಬಡ ಮಧ್ಯಮವರ್ಗದ ಕುಟುಂಬ. ತಂದೆಗೆ ಕಾಯಂ ಕೆಲ್ಸವಿಲ್ಲದ್ದರಿಂದ,ಸಣ್ಣ ಪುಟ್ಟ ಕೆಲ್ಸಮಾಡಿಕೊಂಡೇ ಸಂಸಾರ ನಡೆಸುತ್ತಿದ್ದರು. ಪದವಿ ಮುಗಿಸಿ, ಒಂದು ಒಳ್ಳೆಯ ಕೆಲಸ ಹುಡುಕಿಕೊಂಡು ಸಂಸಾರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕೆಂಬ ರಾಜೇಶನ ಬಯಕೆ ಸಹಜವಾಗಿಯೇ ಇತ್ತು. ತಂದೆಯ ನಿಧನದ ನಂತರ ಸಂಸಾರದ ಭಾರ ಹೊರಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಅವನ ಓದಿನ ಕನಸು ಕಮರಿ ಹೋಗಿತ್ತು.

ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲ್ಸಗಿಟ್ಟಿಸಿಕೊಂಡು,ತನ್ನ ತಾಯಿಯೊಂದಿಗೆ ಜೀವನ ಸಾಗಿಸಿಕೊಂಡಿದ್ದ. ತಂದೆಯನ್ನು ಕಳೆದುಕೊಂಡು ಆರೇಳು ವರ್ಷಗಳ ನಂತರ ,ಸ್ಥಿರ ನೆಲೆಯೂರಿ ನಿಂತ ಮಗನನ್ನು ಕಂಡು ಅವನ ತಾಯಿ ಅವನಿಗೊಂದು ಮದುವೆ ಮಾಡಿಬಿಟ್ಟರೆ ತಾನು ನಿಶ್ಚಿಂತೆಯಿಂದ ಇರಬಹುದೆಂದು ಎಣಿಸಿದ್ದಳು. ತಾನೊಂದು ಬಗೆದರೆ,ದೈವವೊಂದು ಬಗೆಯಿತು ಎಂಬಂತೆ,ಕಾಲುಜಾರಿ ಬಿದ್ದದ್ದೇ ಒಂದು ನೆಪವಾಗಿ ನಾಲ್ಕಾರು ತಿಂಗಳು ಹಾಸಿಗೆ ಹಿಡಿದ ಅವಳು ಇಹಲೋಕ ತ್ಯೆಜೆಸಿದ್ದಳು.

ಗಂಟಿರುವಲ್ಲಿ ನೆಂಟರು' ಎಂಬಂತೆ, ರಾಜೇಶನ ಸಂಸಾರ ಕಷ್ಟದಲ್ಲಿರುವಾಗ,ಅವನ ನೆಂಟರಿಷ್ಟರ ಸಂಬಂಧ ಅಷ್ಟಕ್ಕಷ್ಟೇ ಆಗಿತ್ತು. ಉತ್ತಮ ಸ್ಥಿತಿಯಲ್ಲಿರುವ ರಾಜೇಶನಿಗೆ ಈಗ ಅದು ಬೇಡವೋ ಆಗಿತ್ತು.

**********

ಬರು ಬರುತ್ತಾ ರಾಜೇಶನಿಗೆ ಒಂಟಿತನ ಕಾಡತೊಡಗಿತು.ಯಾಂತ್ರಿಕವಾದ ಜೀವನ ಬೇಸರ ತರಿಸಿತ್ತು. ತಾಯಿಯ ಕೊನೆ ಆಸೆಯಂತೆ,ಮದುವೆಯಾಗಿ ಬಾಳಸಂಗಾತಿಯನ್ನ ಕರೆ ತರಲು ನಿಶ್ಚಯಿಸಿದ್ದ.

ಆ ಒಂದು ದಿನ ಕೆಲ್ಸಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ, ತನ್ನ ಕಣ್ಣೆದುರಿನಲ್ಲಿ ಹಾದು ಹೋದ ತರುಣಿಯನ್ನು ಗಮನಿದ. ಆಕರ್ಷಕ ನಿಲುವು,ಗಂಭೀರ ವದನ, ಮೈ ಕಾಣದಂತಹ ಒಪ್ಪು ಸೀರೆಯಲ್ಲಿನ ಸರಳ ಸುಂದರಿಯವಳು.
ರಾಜೇಶ ಮೊದಲಬಾರಿ ಅವಳನ್ನು ನೋಡಿದ್ದ. ನೋಡಿಯೂ ನೋಡದವನಂತೆ, ಯಾರೋ,ಏನೋ? ಎಂದುಕೊಂಡು ತಂತಾನು ನಡೆದ.

ಒಂದೆರೆಡು ತಿಂಗಳುಗಳು ಇದೇ ಸನ್ನಿವೇಶ. ಒಬ್ಬರನ್ನೊಬ್ಬರು ನೋಡುವುದು,ಕಣ್ಣಂಚಿನ ಮಾತುಗಳು. ರಾಜೇಶನ ಮನದಾಳದ ಪ್ರಶ್ನೆಗಳಿಗೆ,ಆ ತರುಣಿಯ ಮುಗುಳ್ನಗೆಯ ಉತ್ತರ. ಏನೋ ಅವ್ವ್ಯಕ್ತ ಭಾವನೆ,ಅವಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ.ತನ್ನನ್ನು ಅವಳಿಗೆ ಪರಿಚಯಿಸಿಕೊಳ್ಳಬೇಕೆಂಬ ತವಕ.

ಅವಳ ಹೆಸರು ವಾಸಂತಿ,ಪರವೂರಿನವಳು. ಸಣ್ಣ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ,ಮಹಿಳಾ ಹಾಸ್ಟೆಲ್ನಲ್ಲಿದ್ದಾಳೆ ಎಂಬ ಮಾಹಿತಿ ಸಂಗ್ರಹವಾಗಿತ್ತು.

ರಾಜೇಶನಲ್ಲಿಯ ಸುಪ್ತ ಪ್ರೇಮ ಚಿಗುರೊಡೆಯ ತೊಡಗಿತು. ಅವಳ ಬಗ್ಗೆ,ಅವಳ ಮನೆಯವರ ಬಗ್ಗೆ ನೇರವಾಗಿ ಅವಳನ್ನೇ ವಿಚಾರಿಸಬೇಕೆಂಬ ತುಡಿತ. ಆದರೆ ಹೇಗೆ ಮಾತನಾಡಿಸಬೇಕು? ಏನೂಂತ ಕೇಳಬೇಕು? ಎಂಬ ಸಂಧಿಗ್ಧ ಪರಿಸ್ಥಿತಿಯಲ್ಲಿರುವಾಗ ,ಅವನಿಗೊಂದು ಸಂಧರ್ಭ ಒದಗಿಬಂದಿತ್ತು. ವಾಸಂತಿ ಮುಂದೆ,ರಾಜೇಶ ಹಿಂದೆ ಸಾಗುತ್ತಿದ್ದರು. ಇದ್ದಕ್ಕಿದ್ದಂತೆ ಬೀದಿ ನಾಯಿಯೊಂದು ಯಾವುದೋ ಲಹರಿಯಲ್ಲಿದ್ದ ವಾಸಂತಿಯ ಮೇಲೆರಗಿತ್ತು. ವಿಹ್ವಲಗೊಂಡ ಅವಳು ಕಿರುಚಿದಾಗ ,ರಾಜೇಶ ಅವಳ ಸಹಾಯಕ್ಕೆ ಧಾವಿಸಿದ್ದ.ಪ್ರತಿಯಾಗಿ ಅವಳು ಥ್ಯಾಂಕ್ಸ್; ಹೇಳಿದ್ದಳು. ಮೊದಲಬಾರಿಗೆ ಅವಳಿಂದ ಹೊರಟ ಮಾತಿಗೆ ಪುಲಕಿತನಾಗಿದ್ದ.

ನಿತ್ಯವೂ ಅವಳನ್ನು ಮಾತಿಗೆಳೆಯಬೇಕೆಂಬ ಹಂಬಲ. ಆದರೆ ಅವಳಿಂದ ಮಿತ ಸ್ಪಂದನ. ವಿವರವಾಗಿ ಮಾತನಾಡಿ,ತನ್ನ ಮನದಿಂಗಿತವನ್ನು ತಿಳಿಸಿ,ಅವಳ ಅಭಿಪ್ರಾಯವನ್ನೂ ಪಡೆಯಬೇಕೆಂದು,ತನ್ನ ವಿಳಾಸವನ್ನು ಕೊಟ್ಟು ಅವಳನ್ನು ತನ್ನ ಮನೆಗೆ ಆಹ್ವಾನಿಸಿದ್ದ.

***********

ಕೆಲಸಕ್ಕೆ ರಾಜೆಹಾಕಿ ಸಂಜೆ ವಾಸಂತಿಯ ನಿರೀಕ್ಷೆಯಲ್ಲಿದ್ದ ರಾಜೇಶನಿಗೆ, ಅಂಚೆಯವನು ತಂದು ಕೊಟ್ಟ ಆ ಪತ್ರದಿಂದ ಖಿನ್ನನಾಗಿ ಹೋದ.
ಮನಸು ತನ್ನ ಸ್ಥಿಮಿತ ಕಳೆದುಕೊಂಡಿತು. ಆ ಪತ್ರದ ಒಕ್ಕಣಿ ಹೀಗಿತ್ತು.

ರಾಜೇಶ್,
ನನಗೆ ಗೊತ್ತು, ನನ್ನ ಬರುವಿಕೆಗಾಗಿ ನೀವು ಕಾಯುತ್ತಿರುತ್ತೀರಿ ಎಂದು. ನಿಮ್ಮ ಮನಸ್ಥಿತಿಯನ್ನು ಗ್ರಹಿಸಿದ್ದೇನೆ. ನನ್ನ ಮೇಲೆ ನಿಮಗೆ ಮೂಡಿರುವ ಪ್ರೀತಿ,ಪ್ರೇಮ ತಪ್ಪು.
ಸತ್ಯವನ್ನು ಮರೆಮಾಚುವುದರಲ್ಲಿ ಅರ್ಥವಿಲ್ಲ ಅಲ್ಲವೇ? ಅದಕ್ಕೆ ಈ ಪತ್ರ.

ನಾನೀಗಾಗಲೇ  ಬೇರೆಯವರ ಸ್ವತ್ತು. ಮದುವೆಯಾಗಿ ಎರೆಡು ವರ್ಷಗಳಾಗಿವೆ. ನನ್ನ ಪತಿ,ಅತ್ತೆ-ಮಾವರೊಂದಿಗೆ ಸುಖವಾಗಿಯೇ ಇದ್ದೆ.
ಆದರೆ ಜೀವನದಲ್ಲಿನ ಆ ಒಂದು ಕೆಟ್ಟ ಘಟನೆ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿತ್ತು. ಎಲ್ಲಾ ಹೆಣ್ಣುಗಳಿಗೆ ಇರುವಂತೆ ನನಗೂ ತಾಯ್ತನದ ಬಯಕೆ. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆದರೆ ಅದು ಅಷ್ಟೇ ಬೇಗ ಕಮರಿ ಹೋಗಿತ್ತು.
ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಆಸ್ಪತ್ರೆಗೆ ನನ್ನ ಪತಿಯೊಂದಿಗೆ ಹೋಗಿದ್ದೆ. ಆದೇ ತಾನೇ ಆ ಆಸ್ಪತ್ರೆಯಲ್ಲಿ ವಿಚಿತ್ರ ಮಗುವೊಂದರ ಜನನವಾಗಿತ್ತು. ಎಲ್ಲರಲ್ಲೂ ಅದೇ ಮಾತು. ಬೇಡವೆಂದರೂ ಬಿಡದೆ ನನ್ನ ಪತಿಯೂ ನೋಡಿಕೊಂಡು ಬಂದಿದ್ದೇ ದೊಡ್ಡ ಪ್ರಮಾದವಾಗಿತ್ತು. ಅವನ ನಾಜೂಕು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿತ್ತು.ತುಂಬಾ ಖಿನ್ನನಾಗಿದ್ದ, ಬಳಲಿದ್ದ. ನನಗೂ ಅಂತಹ ಮಗು ಹುಟ್ಟಿದರೆ? ಎಂಬ ಅನುಮಾನ ಮೂಡತೊಡಗಿತು. ಯಾರು ಎಷ್ಟೇ ಹೇಳಿದರೂ
ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ನಾನು ಪರಿಪರಿಯಾಗಿ ಬೇಡಿಕೂಂಡರೂ ಬಿಡಲಿಲ್ಲ.ಗಂಡಿನ ದಬ್ಬಾಳಿಕೆಯನ್ನು ತೋರಿಸಿಯೇ ಬಿಟ್ಟಿದ್ದ. ಆಗ ಅವನೊಬ್ಬ ಕ್ರೂರಿಯಾಗಿದ್ದ. ನನ್ನ ಹೊಟ್ಟೆಯಲ್ಲಿನ ಮೂರು ತಿಂಗಳ ಕುಡಿಯನ್ನ ಚಿವುಟಿ ಹಾಕಿದ್ದ. ಇದೇ ಕಾರಣಕ್ಕೆ ನಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಮನೆಯಲ್ಲಿ ಎಲ್ಲರೊಂದಿಗಿನ ವಿರಸದಿಂದ, ಸುಖ ,ಶಾಂತಿ, ನೆಮ್ಮದಿ ಹಾರಿಹೋಗಿತ್ತು.ತವರಿಗೆ ಹೋಗಿ ಕಷ್ಟ ಕೊಡಲು ಇಷ್ಟವಿರಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ,  ಅನಿವಾರ್ಯವಾಗಿ ಎಲ್ಲರನ್ನೂ ತೊರೆದು ಇಲ್ಲಿಗೆ ಬರಬೇಕಿತ್ತು.

ಇಂದು ನಾನು ಹಾಸ್ಟೆಲ್ಗೆ ಬರುವಷ್ಟರಲ್ಲಿ ನನ್ನ ಪತಿ, ಅದು ಹೇಗೋ ಪತ್ತೆಹಚ್ಚಿಕೊಂಡು ಬಂದಿದ್ದಾರೆ. ತಮ್ಮ ತಪ್ಪಿನ ಅರಿವಾಗಿದೆ.ಪಶ್ಚತ್ತಾಪ್ಪವಾಗಿದೆ. ಕ್ಷಮೆಯಾಚಿಸಿದ್ದಾರೆ. ಅವರ ಮನಸ್ಸು ಪರಿವರ್ತನೆಯಾಗಿದೆ.ಮುಂದೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಹೆಣ್ಣು' ಕ್ಷಮಯಾ ಧರಿತ್ರಿ' ಯಲ್ಲವೇ?
ಹಳೆಯದನ್ನೆಲ್ಲ ಮರೆತು,ನನ್ನ ಪತಿಯೊಂದಿಗೆ ಮನೆಗೆ ಮರಳಿ ಹೆಜ್ಜೆ ಹಾಕುತ್ತಿದ್ದೇನೆ. ನಾನು ಹಾಗೇ
ಹೋಗಿದ್ದರೆ, ಹೆಣ್ಣಿನ ಬಗ್ಗೆ ತಪ್ಪು ತಿಳಿಯುತ್ತಿದ್ದಿರಿ ಅಲ್ಲವೇ? ಅದಕ್ಕೆ ಈ ಧೀರ್ಘ ಪತ್ರ......

                                                      ಇಂತಿ
                                                      ವಾಸಂತಿ

*******

                     ಧನ್ಯವಾದಗಳು.....
 

ಓದಿ ಪ್ರೊಸ್ತಾಹಿಸಿ 🙏🙏
 


 

Category:Personal Experience


ProfileImg

Written by Sahana gadagkar