ಸಂಬಂಧಗಳು..

ProfileImg
30 Jun '24
4 min read


image

ನಮ್ಮ ಬದುಕಿನಲ್ಲಿ ಎಷ್ಟೆಷ್ಟೋ ಸಂಬಂಧಗಳು ಬೆಸೆಯಬಹುದು, ಅಳಿದಬಹುದು, ಏನೂ ಸಂಬಂಧವಿಲ್ಲದ ಸಂಬಂಧಗಳೂ ಇರಬಹುದು.

ಆಕಾಶಕಾಯ ನಕ್ಷತ್ರ ಸೂರ್ಯನಿಗೂ ನಮಗೂ ಇರುವ ಸಂಬಂಧದ ಬಗ್ಗೆ ಮೊದಲು ಹೇಳುತ್ತೇನೆ. ಸೂರ್ಯ ನಮ್ಮ ಹಗಲಿನ ದೈವ ,ಗೆಳೆಯ .ಅವನಿಲ್ಲದ ದಿನವನ್ನು ಊಹಿಸುವುದೂ ಅಸಾಧ್ಯ.


ನಾವು ಇರುವ ಭೂಮಿ ಸೂರ್ಯನನ್ನು ಸುತ್ತಲು 365 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ರಾತ್ರಿಯ ಕತ್ತಲೋಡಿಸುವ ಬೆಳಕಿನ ಗೋಳ ಚಂದ್ರನು ಕೂಡ ಸೂರ್ಯನಿಂದ ಕಿರಣಗಳನ್ನು ಎರವಲು ಪಡೆಯುತ್ತಾನೆಂಬುದು ಸೋಜಿಗದ ಸಂಗತಿ.

ಮಾನವ ಜೀವಿಗಳಿಗೆ ಮಾತ್ರವಲ್ಲ ಗಿಡಮರಗಳಿಗೂ ಸೂರ್ಯನ ಕಿರಣಗಳು ಅವಶ್ಯಕವಾಗಿದೆ.

‌ಮಳೆಗಾಲದಲ್ಲಿ ಮಳೆರಾಯನ ಆರ್ಭಟಕ್ಕೆ ಬೇಸತ್ತ ಜನ ಸೂರ್ಯನನ್ನು ಕಾಣಲು ತವಕಿಸುತ್ತಿರುತ್ತಾರೆ. ಬೇಸಿಗೆಯಲ್ಲಿ ಬಿಸಿಲು ಜಾಸ್ತಿ, ಆದರೂ ಹಪ್ಪಳ ಸಂಡಿಗೆ ಮಾಡಲು ಪ್ರಶಸ್ತ ಸಮಯ .ಹಣ್ಣುಗಳ ರಾಜ ಮಾವಿನ ಹಣ್ಣು ತಿನ್ನಲು ಸಿಗುವ ಕಾಲವೂ ಕೂಡ ಹೌದು. ಮಕ್ಕಳಿಗೆ ಶಾಲೆಗಳಿಗೆ ದೀರ್ಘ ರಜೆ ಸಿಗುವುದು, ಯಾವುದೋ ಹೊರೆಯಿಳಿಸಿಕೊಂಡ ಅನುಭವ ಹೊಂದುತ್ತಾರೆ.

ಮದುವೆಯ ಸರಣಿಯು ಸೂರ್ಯನ ಕಾಲದಲ್ಲಿಯೇ ಹೆಚ್ಚು. ಮನೆ ಕಟ್ಟಲು ಕೂಡ ಯೋಗ್ಯವಾದ ಕಾಲವಾಗಿದೆ. ಸೂರ್ಯನಲ್ಲಿಯೂ ಕಲೆಗಳು ಉಂಟು. ಕೆಲ ಅಮಾವಾಸ್ಯೆಯಂದು ಸೂರ್ಯನಿಗೂ ಗ್ರಹಣ ಹಿಡಿಯುವುದುಂಟು . ಅದೇನೇ ಇರಲಿ, ಸೂರ್ಯ ಕಣ್ಣಿಗೆ ಕಾಣುವ ದೇವರೆಂಬುದು ಸತ್ಯ.

ನಮ್ಮ ಮನುಷ್ಯ ಸಂಬಂಧಗಳ ಬಗ್ಗೆ ನೋಡೋಣ. ಗಂಡ ಹೆಂಡತಿ ,ಪೋಷಕರು ಮಕ್ಕಳು, ಶಿಕ್ಷಕರು ವಿದ್ಯಾರ್ಥಿಗಳು  ಹೀಗೆ ಯಾವುದೇ ಸಂಬಂಧಗಳಾಗಲಿ ನಂಬಿಕೆಯ ತಳಹದಿಯ ಮೇಲೆ ನಿರ್ಮಿತವಾದ ಸಂಬಂಧವಾಗಿರುತ್ತದೆ. ಎಲ್ಲಕ್ಕಿಂತ ಸೂಕ್ಷ್ಮವಾದ ಸಂಬಂಧವೆಂದರೆ ಗಂಡ ಹೆಂಡತಿಯ ನಡುವಿನದ್ದಾಗಿದೆ.

ಯಾವುದೋ ಎರಡು ಕುಟುಂಬಗಳ ನಡುವಿನ ಬಾಂಧವ್ಯವಿದು. ಎಂದೂ ಕಂಡಿರದ, ಕೇಳರಿಯದ ಜನರೊಂದಿಗೆ ಸಂಬಂಧ ಬೆಳೆಸುವುದೆಂದರೆ ಅದಕ್ಕೆ ಮೂಲ ಕಾರಣ ನಂಬಿಕೆಯೇ . ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಿಗಳ ಶರೀರ ಮನಸ್ಸುಗಳು ಮಿಲನವಾಗಬೇಕಾದರೆ ಎಷ್ಟು ಗಟ್ಟಿಯಾದ ನಂಬಿಕೆ ಇರಬೇಕಲ್ಲವೇ ಎಂದು ನನಗೆ ಅಚ್ಚರಿಯಾಗುತ್ತದೆ.

ನೀನು ಚೆನ್ನಾಗಿಲ್ಲ, ಕಡಿಮೆ ಓದಿದ್ದೀಯ,ನಿನಗೇನೂ ಗೊತ್ತಾಗೋಲ್ಲ ಎಂದು ಗಂಡ ಹೀಯಾಳಿಸುವುದಾಗಲೀ, ಪ್ರೈವೆಸಿಯಿಲ್ಲ, ಐಷಾರಾಮಿ ಜೀವನ ಇಲ್ಲ ಎಂದು ಗಂಡನನ್ನಾಗಲೀ ಗಂಡನ ಮನೆಯವರನ್ನಾಗಲೀ ದೂರಬಾರದು. ಮದುವೆಗೆ ಮುಂಚೆಯೇ ಈ ಎಲ್ಲಾ ವಿಷಯಗಳೂ ಇಬ್ಬರಿಗೂ ತಿಳಿದಿರುತ್ತದೆಯಲ್ಲವೇ? ಅವರವರ ಪಾಲಿಗೆ ಬಂದಿದ್ದು  ಪಂಚಾಮೃತವೆಂದು ತಿಳಿದು ಸಂತೋಷವಾಗಿ  ನೆಮ್ಮದಿಯಾಗಿ  ಜೀವನ ನಡೆಸಬೇಕಾದದ್ದು ಗಂಡಾಗಲೀ ಹೆಣ್ಣಾಗಲೀ‌ ಅರಿತುಕೊಂಡರೆ ಸುಂದರ ಬದುಕು‌‌ ಅವರದಾಗುವುದರಲ್ಲಿ ಸಂಶಯವಿಲ್ಲ.

ಇನ್ನು ಮಕ್ಕಳಿಗಾಗಿ ಮಕ್ಕಳಿಂದ  ಮಕ್ಕಳಿಗೋಸ್ಕರ ಜಗಳ ಬರುವುದು ಸಾಮಾನ್ಯ ವಿಷಯವೇ ಆಗಿದೆ. ಆದರೆ ಮಕ್ಕಳೆದುರಿಗೆ ಅವರ ವಿಷಯ ಮಾತಾಡದೇ ಪ್ರತ್ಯೇಕವಾಗಿ ‌ಚರ್ಚಿಸುವುದು ಒಳ್ಳೆಯದೆಂದು‌ನನ್ನ ಅನಿಸಿಕೆ. 
   ‌
ಕೆಲವು ದಂಪತಿಗಳು ಸಾವಿನಲ್ಲೂ‌ ತಮ್ಮ ಅನ್ಯೋನ್ಯತೆಯನ್ನು ಮೆರೆದಿದ್ದಾರೆ, ಉದಾಹರಣೆಗೆ ಕೀರ್ತಿನಾಥ ಕುರ್ತಕೋಟಿ.

 ಹೆಂಡತಿ ಅಥವಾ ಗಂಡ ಯಾರಾದರೂ ಮರಣಿಸಿದಾಗ ಉಳಿದವರು ಕೊನೆಯುಸಿರಿರುವವರೆಗೂ ಅವರ ನೆನಪಿನಲ್ಲೇ  ಜೀವನ ಕಳೆಯುತ್ತಾರೆ. ಸಂಗಾತಿ ತೀರಿಹೋದ ತಿಂಗಳೊಳಗೆ  ಮರುಮದುವೆಯಾದ ಭೂಪರೂ ಇದ್ದಾರೆ ಬಿಡಿ.

ಇನ್ನು ತಾಯಿ ಮಕ್ಕಳ ಸಂಬಂಧವನ್ನು ನೋಡೋಣ. ಇಡೀ ಜಗತ್ತಿನಲ್ಲಿ ತಾಯಿ ಪ್ರೀತಿಯೊಂದೇ ಸತ್ಯವೆಂಬುದು ನನ್ನ ಅಭಿಪ್ರಾಯ. ಬೇರೆಲ್ಲಾ ಸಂಬಂಧಗಳಲ್ಲಿ ಏನೋ ನಿರೀಕ್ಷೆಗಳು ಇದ್ದೇ ಇರುತ್ತದೆ, ಆದರೆ ತಾಯಿ ತನ್ನ ಮಕ್ಕಳ ಮೇಲೆ ನಿಜವಾದ ಕಾಳಜಿ ಸ್ವಾರ್ಥ ರಹಿತ ಪ್ರೀತಿ ಮಮತೆ ಹೊಂದಿರುತ್ತಾಳೆ. ತಂದೆ ಕೂಡ ಮುಪ್ಪಿನಲ್ಲಿ ತಮ್ಮನ್ನು ಮಕ್ಕಳು ಪೊರೆಯಲೆಂದು ಆಶಿಸುತ್ತಾನೆ. ಇದಕ್ಕೆ ಕೆಲವು ಅಪವಾದಗಳೂ ಇರಬಹುದು.ಒಂಭತ್ತು ತಿಂಗಳು ಗರ್ಭದಲ್ಲಿ ಹೊತ್ತು ನಂತರ ನೋವು ತಿಂದು ಮಗುವನ್ನು ಈ ಭೂಮಿಗೆ ತಂದು, ನಂತರವೂ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಆದರೂ ಅದರಲ್ಲಿ ಏನೋ ತೃಪ್ತಿ ಕಾಣುತ್ತಾಳೆ, ತಾಯ್ತನ ಮೆರೆಯುತ್ತಾಳೆ. ತನ್ನ ವಾತ್ಸಲ್ಯವನ್ನೆಲ್ಲ ಧಾರೆ ಎರೆಡು ಸ್ತನ್ಯಪಾನ ಮಾಡಿಸಿ ತೊದಲು ನೋಡಿ ಕೇಳಿ  ಮೈಮರೆಯುತ್ತಾಳೆ. ತಪ್ಪು ಹೆಜ್ಜೆಗಳನ್ನಿಡುವಾಗ ಜೊತೆಯಾಗುತ್ತಾಳೆ, ಬಿದ್ದರೆ ರಮಿಸಿ ಉತ್ತೇಜನ ನೀಡುತ್ತಾಳೆ.  

ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುತ್ತಾಳೆ.ಮಮತೆಯೊಂದಿಗೆ ತುತ್ತು ಉಣಿಸುವ ಅವಳ ಪ್ರೀತಿಯನ್ನು ಮರೆಯಲು ಸಾಧ್ಯವೇ ,? ತಾನು ಉಪವಾಸವಿದ್ದರೂ, ಮಕ್ಕಳು ಹೊಟ್ಟೆ ತುಂಬ ಊಟ ಮಾಡಬೇಕೆಂದು ಬಯಸುತ್ತಾಳೆ. ಶಿಕ್ಷಕಿಯಾಗಿ ಪಾಠ ಹೇಳಿಕೊಟ್ಟು ಜೊತೆಗೆ ಸಂಸ್ಕಾರವನ್ನೂ ಕಲಿಸುತ್ತಾಳೆ.

ಎಷ್ಟೇ ಮಕ್ಕಳಿರಲಿ ತಾರತಮ್ಯ ತೋರದೆ ಏಕರೀತಿ ಪ್ರೀತಿ ತೋರುವ ಆಕೆ ದೈವ ಸಮಾನ. ಇಂತಹ ತಾಯಿಯನ್ನು ಕೆಲವು ಮಕ್ಕಳು ಕಸಕ್ಕಿಂತ ಕೀಳಾಗಿ ಕಾಣುವುದು, ಪ್ರಾಣಿಗಳಿಗಿಂತಲೂ ಅಮಾನುಷವಾಗಿ  ನಡೆಸಿಕೊಳ್ಳುವುದನ್ನು ಕಾಣುತ್ತೇವೆ. ತಾಯಿ ಮಕ್ಕಳ ಸಂಬಂಧದ ಅರಿವಿಲ್ಲದವರು   ವೃದ್ಧಾಶ್ರಮಕ್ಕೆ ಸೇರಿಸಿ ಕೈತೊಳೆದುಕೊಳ್ಳುತ್ತಾರೆ.

ಪ್ರಸವ ಹೆಣ್ಣಿಗೆ ಮರುಜನ್ಮವಂತೆ ,ಅಂತಹ ಸ್ಥಿತಿಯನ್ನು ದಾಟಿ ಬಂದು ಅಪಾರ ಪ್ರೀತಿ ,ಮಮತೆಯನ್ನು  ನೀಡಿದವಳಿಗೆ ಮಕ್ಕಳು ಒಂದು ಹಿಡಿ  ಪ್ರೀತಿ, ಅನ್ನವನ್ನೂ ನೀಡಲಾರದ ಕಟುಕರಾದರೇನು ಎಂದು ಬಹಳವೇ ವಿಷಾದವಾಗುತ್ತದೆ.

ಸೊಸೆ ಬಂದ ಮೇಲೆ ಮಗ ತಾಯಿಯನ್ನು ಕಡೆಗಣಿಸಿದನೆಂದು ಹಲವರು ದೂರುತ್ತಾರೆ.
ಆದರೆ ನನ್ನ ಪ್ರಶ್ನೆ ಅವನಿಗೇನು ಸ್ವಂತ ಬುದ್ಧಿ ಇಲ್ಲವೇ? ಅಥವಾ ಹೆಂಡತಿ ಬಂದ ಮೇಲೆ ತಾಯಿಯನ್ನು ಕಡೆಗಣಿಸಲೇಬೇಕೆಂಬ ನಿಯಮವಿದೆಯೇ ?
ಹೆಂಡತಿ ಪ್ರೀತಿಯೇ‌ ಬೇರೆ, ತಾಯಿ ಪ್ರೀತಿಯೇ ಬೇರೆ. ಇದನ್ನು ಪೈಪೋಟಿಗೆ ಎಳೆ ತರುವುದೇಕೆ? ಇಷ್ಟೆಲ್ಲ ಪ್ರಶ್ನೆಗಳಿಗೆ ನನಗಿನ್ನೂ ಉತ್ತರ ದೊರೆತಿಲ್ಲ. ದೊರೆಯುವುದೆಂಬ ನಂಬಿಕೆಯೂ ಇಲ್ಲ ಬಿಡಿ .

ನಮ್ಮ  ಚರ್ಮ ಸುಲಿದು ಚಪ್ಪಲಿ ಮಾಡಿ ಅವಳಿಗೆ ತೊಡಿಸಿದರೂ ಶೇಕಡಾ ಒಂದರ ಭಾಗವೂ ಋಣ ಸಂದಾಯವಾಗುವುದಿಲ್ಲವಂತೆ. ಎಂತಹ ಸತ್ಯವಾದ ಮಾರ್ಮಿಕವಾದ‌ಹೋಲಿಕೆಯಲ್ಲವೇ?

ಅಪ್ಪ ಮಕ್ಕಳ ಸಂಬಂಧದ ಬಗ್ಗೆ ನೋಡೋಣ. ಹೊತ್ತು ಹೆತ್ತು ಹಾಲೂಡಿಸಿ ಮಗುವಿನ ಪ್ರತಿಯೊಂದು ಜವಾಬ್ದಾರಿಯನ್ನು ತಾಯಿ ತೆಗೆದುಕೊಂಡರೂ ಅಪ್ಪನ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ತಪ್ಪಾಗಿ ಭಾವಿಸದಿರಿ, ನೈತಿಕವಾಗಿ ವಿಶ್ಲೇಷಣೆ ಮಾಡುತ್ತಿಲ್ಲ .ಮಾನಸಿಕವಾಗಿ ಭಾವನಾತ್ಮಕವಾಗಿ ಯೋಚಿಸುವಾಗ ಹೊಳೆಯುವ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದೇನೆ.

ಮಗುವನ್ನು ಶಾಲೆಗೆ ಸೇರಿಸುವಾಗ ಅರ್ಜಿಯಲ್ಲಿ ಮೊದಲು ತಂದೆ ಹೆಸರು ಮಾತ್ರವಿರುತ್ತಿತ್ತು. ಈಗ ಅಪ್ಪ ಅಮ್ಮನ ಹೆಸರುಗಳನ್ನು ನಮೂದಿಸಬೇಕು. ತಾಯಿಯ ಹೆಸರು ಬರೆಯದಿದ್ದಾಗ ಯಾರೂ ಪ್ರಶ್ನಿಸುವುದಿಲ್ಲ. ಆದರೆ ತಂದೆ ಹೆಸರಿನ ಮುಂದೆ ಹೆಸರು ಬರೆಯದಿದ್ದರೆ ನೂ.....ರೆಂಟು ಪ್ರಶ್ನೆಗಳು, ನಂತರದ ವಿವಾದಗಳು ಎಷ್ಟೆಲ್ಲ ತೊಂದರೆ. ಇದರಿಂದ ತಿಳಿಯುವುದು ಒಂದು ಮಗುವಿನ ಬದುಕಿನಲ್ಲಿ ಅಪ್ಪನ ಪಾತ್ರವು ಅದೆಷ್ಟು ಮಹತ್ವದ್ದೆಂದು.

ಸಾಮಾನ್ಯವಾಗಿ ಅಮ್ಮನೊಂದಿಗೆ ಸಲಿಗೆ ಇರುವುದರಿಂದ ಭಯ ಕಡಿಮೆ. ಅಪ್ಪ ಎಂದರೆ ಶಿಸ್ತು ಪ್ರೀತಿ ಎಲ್ಲದರ ಮಿಶ್ರಣವಾಗಿದ್ದರಿಂದ ಸಹಜವಾಗಿ ಅಪ್ಪನಿಗೆ ಸ್ವಲ್ಪ ಹೆದರುತ್ತಾರೆ .ಮಕ್ಕಳಿಗೆ ಸರಿದಾರಿಗೆ ಹೋಗಲು ಅನುಕೂಲವಾಗುತ್ತದೆ. ಒಂದು ಮಾತಿದೆ ಮಗು ಭೂಮಿಗೆ ಬರುವವರೆಗೂ ತಾಯಿಯ ಜವಾಬ್ದಾರಿ ಆದರೆ ನಂತರದ ದಿನಗಳಲ್ಲಿ ತಂದೆಯ ಜವಾಬ್ದಾರಿ ಎಂದು.

ತಾಯಿ ಮಕ್ಕಳ ಸಂಬಂಧವೇ ಕೆಲವೊಮ್ಮೆ ಕೆಟ್ಟದಾಗುತ್ತದೆ ಎನ್ನುವುದಾದರೆ ಅತ್ತೆ ಸೊಸೆ ಸಂಬಂಧ ಹೇಗಿರಬಹುದು ಎಂಬ ಕಲ್ಪನೆ ಸಿಕ್ಕಿರಲೂ ಸಾಕು. ಅತ್ತೆ ಸೊಸೆ ಎಂದರೆ ಒಂದು ಅಂತರವಿರಲೇಬೇಕು, ಶತ್ರುತ್ವ ಇರಲೇ ಬೇಕೆಂದೇನೂ ಇಲ್ಲ. ಅನ್ಯೋನ್ಯವಾಗಿರುವ ಅತ್ತೆ ಸೊಸೆಯರು ಬಹಳಷ್ಟು ಮಂದಿ ಇದ್ದಾರೆ. ಪುರಾತನ ಕಾಲದಿಂದಲೂ ಜಗಳವಾಡುತ್ತಲೇ ಬಂದಿರುವುದರಿಂದ ಅದೇನು ಅತ್ತೆ ಸೊಸೆಥರ ಕಾದಾಡುತ್ತೀರಾ ಎಂದು ಬಯ್ಯುವುದು ಉಂಟು.ಸಾಂದರ್ಭಿಕವಾಗಿ ಯೋಚಿಸಿದಾಗ ಯಾರ ತಪ್ಪೂ ಕಾಣುವುದಿಲ್ಲ ಮತ್ತು ಇಬ್ಬರದೂ ತಪ್ಪು ಎನಿಸುವುದು ಕೂಡ ನಿಜ. ಮಗನ ಪ್ರೀತಿಯಲ್ಲಿ ಪಾಲು ಪಡೆಯಲು ಬಂದಿರುವಳು ಎಂಬ ಪೂರ್ವ ಗ್ರಹ ಪೀಡಿತಳಾದ ಅತ್ತೆಗೆ ಸೊಸೆಯ ಪ್ರತಿಯೊಂದು ನಡೆ- ನುಡಿ ತಪ್ಪಾಗಿ ಕಾಣುವುದು. ಹಾಗೆಯೇ ಪ್ರತಿ ಕೆಲಸದಲ್ಲಿಯೂ ತಪ್ಪು ಹುಡುಕಿದಾಗ ಅತ್ತೆಯ ನಡೆ ನುಡಿ ಇರಿಸು ಮುರುಸಾಗುವುದು ಸಹಜವೇ ಎಂದು ನನಗನಿಸುತ್ತದೆ. ಚಿಕ್ಕವಳೆಂದು ಸ್ವಲ್ಪ ಉದಾರ ಭಾವದಿಂದ ತಾಳ್ಮೆ ವಹಿಸಿ   ಕೆಲಸ ಹೇಳಿಕೊಡಲು ಮುಂದಾದರೆ ಆಕೆಗೆ ಇರಿಸು ಮುರು ಸಾಗುವ, ಅಸಹನೆಯಿಂದ ಚಡಪಡಿಸುವಂತಾಗುವ ಸಂದರ್ಭ ಬರುವುದಿಲ್ಲ. ತನಿಗಿಂತ ದೊಡ್ಡವರು ಅನುಭವಸ್ಥರು ಸರಿಯಾದದ್ದನ್ನೇ ಹೇಳುತ್ತಾರೆ ಎನ್ನುವ ಧನಾತ್ಮಕ ಯೋಚನೆಯನ್ನು ಸೊಸೆಯೂ ಸಹನೆಯಿಂದ ಮಾಡಿದ್ದೆ ಆದರೆ ಅತ್ತೆ ತಾಯಿಯಂತೆ ಕಾಣುವುದರಲ್ಲಿ ಸಂಶಯವಿಲ್ಲ. ಆದರೆ ಹೀಗೆ ಮಾಡಲು ಇಬ್ಬರಿಗೂ ಮನಸಿರುವುದಿಲ್ಲವೋ ಅಥವಾ ಬೇಕಿರುವುದಿಲ್ಲವೋ ನನಗೆ ಅರ್ಥವಾಗಿಲ್ಲ .ಪದೇ ಪದೇ ಏನಾದರೂ ಹೇಳುತ್ತಾ ಇದ್ದರೆ ಸಹನೆ ನಶಿಸುವುದು ಕೋಪ ಬರುವುದು ಸೊಸೆಯ ಸ್ಥಾನದಲ್ಲಿರುವ ಯಾರಿಗೇ ಆಗಲಿ ಸಹಜವೆಂದೇ ನನ್ನ ಭಾವನೆ. ಅತ್ತೆಯು ಕೂಡ ಒಬ್ಬ  ಸೊಸೆಯಾಗಿ ಬಂದವಳೇ ತಾನೇ. ಅವಳ ಸ್ಥಾನದಲ್ಲಿದ್ದು ಚಿಂತಿಸುವುದು ಒಳ್ಳೆಯದು.

ಒಟ್ಡಿನಲ್ಲಿ ಯಾವುದೇ ಸಂಬಂಧವಾಗಲಿ ಪರಸ್ಪರ ಅರಿತರೆ,ಗೌರವಿಸಿದರೆ ಉಳಿಯುತ್ತದೆ ಹಾಗೂ ಚಂದವಾಗಿರುತ್ತದೆ.

Category:RelationshipsProfileImg

Written by Nalina Balu

ಲೇಖಕಿ, ಗೃಹಿಣಿ ಹವ್ಯಾಸ : ಕಥೆ, ಕವನ ಓದುವುದು