ಸಾವಿರ ಪದಗಳ ಕಥೆ
ಶೀರ್ಷಿಕೆ ---- #ಸಂಬಂಧಗಳು
ಬೆಂಗಳೂರಿನಲ್ಲಿ ಒಂದು ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದ ರಾಕೇಶ. 21 ದಿನ ಲಾಕ್ ಡೌನ್ ಎಂದಾಗ ಇಲ್ಲಿದ್ದು ಏನು ಮಾಡೋದು ಊರಿಗೆ ಹೋಗೋಣ ಅಂತ ಯೋಚಿಸಿದ.ಮನೆಗೆ ಬಂದು ಹೆಂಡತಿಗೆ ಹೇಳಿದ' ಬಟ್ಟೆಯೆಲ್ಲಾ ಪ್ಯಾಕ್ ಮಾಡು ಇನ್ನು ಹೋಟೆಲ್ ತೆಗಿಯೋ ಹಾಗಿಲ್ಲವಲ್ಲ. ಇಲ್ಲಿದ್ದು ಏನು ಮಾಡುವುದು ಅಷ್ಟು ದಿನ ಊರಲ್ಲಿ ಇರೋಣ, ಎಂದು ಹೇಳಿದ.
ವೈಷ್ಣವಿ ನಾನು ಹಾಗೆ ಹೇಳೋಣ ಅಂತಿದ್ದೆ ಈ ಸಲ ಬೇಸಿಗೆ ಶಿಬಿರ, ಯಾವ ಕ್ಲಾಸ್ ಗಳು ಏನೂ ಇರುವುದಿಲ್ಲ. ಮಗುವಿಗೆ ಬೇಸರ ಊರಿನಲ್ಲೇ ಇದ್ದು ಬರೋಣ, ಎಂದಳು.
ಮರುದಿನ ಬೆಳಗಿನ ಜಾವವೇ ಅವರದೇ ಕಾರಿನಲ್ಲಿ ಊರಿಗೆ ಹೊರಟರು.
ರಾಕೇಶನದು ಮಲೆನಾಡಿನ ಒಂದು ಹಳ್ಳಿ, ಅಲ್ಲಿ ಅಡಿಕೆ ತೋಟ ಗದ್ದೆ ಎಲ್ಲಾ ಸಾಕಷ್ಟು ಇತ್ತು.ಊರಿನಲ್ಲಿ ಅಪ್ಪ ಅಮ್ಮನ ಜೊತೆ ಅಣ್ಣ-ಅತ್ತಿಗೆ ಅವರ ಮಕ್ಕಳು ಎಲ್ಲಾ ಊರಿನಲ್ಲೇ ಇದ್ದರು.
ಹತ್ತು ಕಿಲೋಮೀಟರ್ ಅಂತರದಲ್ಲಿ ವೈಷ್ಣವಿಯ ತವರುಮನೆನೂ, ಎರಡು ಕಡೆ ಇದ್ದು ಬರೋಣ ಅಂತ ಹೊರಟರು.
ಯಾವಾಗಲೂ ಎಪ್ರಿಲ್ ಮೇ ತಿಂಗಳಲ್ಲಿ ಊರಿಗೆ ಹೋಗಿ ನಾಲ್ಕು ದಿನ ಇದ್ದು ಬರುವುದು ರಾಕೇಶನ ರೂಢಿಯಾಗಿತ್ತು. ಹೆಂಡತಿ ಮಗು ಮಾತ್ರ ಒಂದು ತಿಂಗಳು ಇದ್ದು ಬರುತ್ತಿದ್ದರು. ಈ ವರ್ಷ ಮಾರ್ಚ್ ನಲ್ಲೇ ಹೋಗುವ ಹಾಗಾಯಿತು.
ಮೊದಲು ಎರಡು ಕಡೆ ಓಡಾಡಿದರು, ಅವರದೇ ಕಾರು ಇದ್ದ ಕಾರಣ ಕಷ್ಟವಾಗಲಿಲ್ಲ.ಆ ಹಳ್ಳಿಯಲ್ಲಿ ರಾತ್ರಿ ಎಂಟು ಗಂಟೆ ನಂತರ ಹೋದರೆ ಪೋಲಿಸರು ಹಿಡಿಯುತ್ತಿರಲಿಲ್ಲ. ತೋಟ ಗದ್ದೆ ಓಡಾಡಲು ಭಯವಿರಲಿಲ್ಲ. ಬೆಂಗಳೂರಿನ ತರಹ ಮನೆಯೊಳಗೆ ಇರಬೇಕಾಗಿರಲಿಲ್ಲ. ದೂರ ದೂರ ಮನೆಗಳು.
ಮತ್ತೆ ಲಾಕ್ ಡೌನ್ ಮುಂದಕ್ಕೆ ಹೋಯಿತು. ಸದ್ಯಕ್ಕೆ ಹೋಟೆಲ್ ತೆಗೆಯುವ ಹಾಗಿಲ್ಲ ಎಂದಾಗ ಭಯವಾಯಿತು ರಾಜೇಶನಿಗೆ, ಹಿಂದಿನದು ನೆನಪಾಯಿತು.
ರಾಕೇಶ ಹತ್ತನೇ ತರಗತಿಯಲ್ಲಿ ಫೇಲಾದ ತಕ್ಷಣ ಮುಂದೆ ಓದಲು ಇಷ್ಟಪಡಲಿಲ್ಲ.ಅವರ ಊರಿನವರೊಬ್ಬರು ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದರು. ಅವರು ರಾಜೇಶನಿಗೆ ಊರಿನಲ್ಲಿ ಏನೂ ಮಾಡುತ್ತಿಯಾ ? ಜಮೀನು ನೋಡಿಕೊಳ್ಳಲು ಅಣ್ಣ ಇದ್ದಾರೆ. ನೀನು ನನ್ನ ಜೊತೆ ಬಾ ಎಂದು ಕರೆದರು. ಅವರಿಗೆ ಸಹಾಯಕನಾಗಿ ಅವರ ಜೊತೆ ಬಂದು ನೆಲೆಸಿದ.
ಐದಾರು ವರ್ಷ ಅಲ್ಲಿ ಕೆಲಸ ಮಾಡಿದ ರಾಕೇಶ ಅಡಿಗೆ ತಿಂಡಿ ಎಲ್ಲವನ್ನು ಚೆನ್ನಾಗಿ ಮಾಡುವುದು ರೂಡಿಸಿಕೊಂಡ.ಅವನು ಮಾಡಿದ ಬಜ್ಜಿ ಬೊಂಡಾ, ಮಸಾಲೆ ವಡೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅವನ ಹೋಟೆಲ್ ಓನರ್ ನೀನೇ
ಇನ್ನೊಂದು ಏರಿಯಾದಲ್ಲಿ ಸಪರೇಟ್ ಆಗಿ ಒಂದು ಕ್ಯಾಂಟೀನ್ ಮಾಡು. ಬೆಳಿಗ್ಗೆ ತಿಂಡಿ ಸಂಜೆ ಬಜ್ಜಿ, ವಡಾ ಹಾಕು, ಸಹಾಯಕ್ಕೆ ಯಾರನ್ನಾದರೂ ಇಟ್ಟುಕೊ ಎಂದು ಸಲಹೆ ಕೊಟ್ಟರು. ಅವನು ಹಾಗೆ ಮಾಡಿದ.
ಅವನ ಕ್ಯಾಂಟೀನ್ ಚೆನ್ನಾಗಿ ನಡೆಯುತ್ತಿತ್ತು. ತಂಗಿಯರ ಮದುವೆಗೆ ಊರಿಗೆ ಹಣವನ್ನು ಕೊಟ್ಟ. ಹಾಗೆ ಊರಿನಕಡೆಯ ಹುಡುಗಿಯ ಜೊತೆಗೆ ಮದುವೆಯಾಗಿ ಒಂದು ಮಗುವು ಆಯಿತು. ಎಲ್ಲಾ ಚೆನ್ನಾಗಿ ನಡೆಯುತ್ತಿತ್ತು. ದಿನಾ ಬೆಳಿಗ್ಗೆ ತಿಂಡಿ ಸಂಜೆ ಬಜ್ಜಿ ಬೋಂಡ ಹಾಕುವುದು ಮಾಡುತ್ತಿದ್ದ.
ಬಂದ ಆದಾಯದಲ್ಲಿ ಮನೆ ಲೀಜ್ಗೆ ಹಾಕಿಕೊಂಡಿದ್ದ. ಒಂದು ಸೆಕೆಂಡ್ ಹ್ಯಾಂಡ್ ಕಾರು ತೆಗೆದುಕೊಂಡಿದ್ದ. ಉಳಿತಾಯ ಜಾಸ್ತಿ ಇರಲಿಲ್ಲ. ಐವತ್ತು ಸಾವಿರದ ಒಳಗೆ ಇತ್ತು. ಊರಿನಲ್ಲಿ ಕಷ್ಟ ಎಂದಾಗಲೆಲ್ಲಾ ಸಹಾಯ ಮಾಡುತ್ತಿದ್ದ.
ಈಗ ಕೊರೋನಾದಿಂದ ಹೋಟೆಲ್ ಮುಚ್ಚುವಂತೆ ಆಯಿತು. ಅವನಿಗೆ ಸಂಕಷ್ಟ ಬಂದಿತ್ತು. ಲಾಕ್ ಡೌನ್ ಮತ್ತಷ್ಟು ಮುಂದೆ ಹೋಯಿತು. ಲಾಕ್ ಡೌನ್ ಸಡಿಲವಾದರೂ ಸದ್ಯಕ್ಕೆ ಹೋಟೆಲ್ ತೆಗೆಯಲು ಕೊಡುವುದಿಲ್ಲ. ಮುಂದೆ ಹೇಗೆ ಬೆಂಗಳೂರಿಗೆ ಹೋಗಲು ಭಯ, ಹೋದರು ಕುಳಿತು ತಿಂದರೆ ಇರುವ ಹಣ ಎಷ್ಟು ದಿನ ಬರುತ್ತದೆ. ಕೆಲಸದಲ್ಲಿ ಇದ್ದರೆ ಸಂಬಳವಾದರೂ ಬರುತ್ತಿತ್ತು.ತನ್ನದು ಸ್ವಂತ ಉದ್ಯೋಗ ಕೆಲಸ ಮಾಡಿದರೆ ಹಣ, ಇಲ್ಲ ಅಂದರೆ ಹಣವಿಲ್ಲ, ಯೋಚಿಸಿ ತಲೆ ಕೆಡಿಸಿಕೊಂಡ.
ಅಪ್ಪ ಅಮ್ಮ ವಾಪಸ್ ಹೋಗಬೇಡ ಹೇಗಿದ್ದರೂ ಜಮೀನು ಮನೆಯಿದೆ ಇಲ್ಲೆ ಇರಿ ಅಂತ ಬಲವಂತ ಮಾಡಿದರು.
ಮರುದಿನದಿಂದ ಅಣ್ಣ ಅತ್ತಿಗೆಯರದು ಸಣ್ಣ ಕಿರಿ ಕಿರಿ ಶುರುವಾಯಿತು.
ಜಮೀನು ನಂಬಿ ಜೀವನ ನಡೆಸುವುದು ತುಂಬಾ ಕಷ್ಟ, ಬೆಳೆ ಜಾಸ್ತಿ ಬಂದ ವರ್ಷ ರೇಟು ಇರುವುದಿಲ್ಲ. ರೇಟು ಇದ್ದ ವರ್ಷ ಬೆಳೆ ಕಡಿಮೆ.ಎರಡು ಫ್ಯಾಮಿಲಿಗೆ ತುಂಬಾ ಕಷ್ಟವಾಗುತ್ತದೆ.
ಕೈತುಂಬಾ ಕೆಲಸ ಮಾಡಿದರೂ ಸುಖವಿಲ್ಲ. ಅಂತ ಏನೇನೋ ಸಬೂಬು ಹೇಳುವರು.
ತೋಟದಲ್ಲಿ ಬಿಟ್ಟ ಹಲಸಿನ ಹಣ್ಣು, ಮಾವಿನ ಹಣ್ಣು ಸೀಬೆ ಹಣ್ಣು ತಿಂದರೆ ಇವರಿಗೆ ಕೇಳಿಸುವ ಹಾಗೆ ಅತ್ತಿಗೆ ಮಕ್ಕಳು ಎಲ್ಲಾ ಖಾಲಿ ಮಾಡಿನೇ ಹೋಗುವುದು, ದಿನಾ ಒಂದೊಂದು ಖಾಲಿ ಮಾಡುವರು ಅಂತ ಮಾತನಾಡುವರು.
ಅದನ್ನು ನೋಡಿ ರಾಕೇಶನ ಅಮ್ಮ ಎಲ್ಲರಿಗೂ ಕೇಳುವ ಹಾಗೆ "ರಾಕೇಶ ಇದು ಪಿತ್ರಾರ್ಜಿತ ಆಸ್ತಿ ನಿನ್ನ ಅಣ್ಣನಿಗೆ ಇರುವಷ್ಟೇ ಹಕ್ಕು ನಿನಗೂ ಇದೆ ನೀನು ಇಲ್ಲೇ ಇರು ಯಾರು ಬೇಡ ಅನ್ನುವ ಹಾಗಿಲ್ಲ, ಅಲ್ಲದೆ ಈ ಮನೆಗೆ ಕಷ್ಟ ಅಂದಾಗಲೆಲ್ಲಾ ನೀನು ನಿನ್ನ ದುಡಿಮೆಯ ಹಣವನ್ನು ಹಾಕಿರುವೆ ಎಂದರು.
ಅಕ್ಕಪಕ್ಕದ ಮನೆಯವರು ಹೇಳಿದರು, "ಯಾಕೆ ಯೋಚಿಸುವೆ ರಾಕೇಶ ಆಸ್ತಿಯಲ್ಲಿ ನಿನ್ನ ಪಾಲು ಇದೆ". ಜೊತೆಯಲ್ಲಿ ಇರಿ ಸರಿ ಬರದಿದ್ದರೆ ನಿನ್ನ ಪಾಲು ತೆಗೆದುಕೊಂಡು ನೀನು ಬೇರೆ ಇರು ಎಂದರು.
ನಿಮ್ಮ ತೋಟದಲ್ಲಿ ಬೆಳೆ ಚೆನ್ನಾಗಿ ಆಗುತ್ತದೆ.
ನಿನ್ನ ಅಣ್ಣ ಅತ್ತಿಗೆಯರಂತೂ ತೋಟದ ಕೆಲಸ ಏನೂ ಮಾಡುವುದಿಲ್ಲ. ಎಲ್ಲವನ್ನೂ ಕೆಲಸದವರಿಂದಲೇ ಮಾಡಿಸುವುದು. ನಿನ್ನ ಅಣ್ಣ ಸುಳ್ಳು ಹೇಳುವುದು ಕಷ್ಟ ಅಂತ. ಬೇಕಿದ್ದರೆ ನಿಮ್ಮ ಅಪ್ಪ ಅಮ್ಮನನ್ನೆ ಕೇಳು. ನಿಮ್ಮ ಫ್ಯಾಮಿಲಿ ಇಲ್ಲಿದ್ದರೆ ಏನೂ ತೊಂದರೆಯಾಗುವುದಿಲ್ಲ ಎಂದು ಚುಚ್ಚಿ ಕೊಟ್ಟರು.
ಅವರಿಗೆ ಮೊದಲೇ ರಾಕೇಶನ ಮನೆಯವರ ಕಂಡರೆ ಹೊಟ್ಟೆ ಕಿಚ್ಚು, ತಮಗಿಂತ ಚೆನ್ನಾಗಿದ್ದಾರೆ ಅಂತ. ಎಲ್ಲರ ಮನೆಯಲ್ಲೂ ಎರಡು ಮೂರು ಗಂಡು ಮಕ್ಕಳು. ಎಲ್ಲರಿಗೂ ಹೆಂಡತಿ ಮಕ್ಕಳು, ಅವರವರ ಹೆಂಡತಿಯರ ದಿನಾ ಜಗಳ.ಒಂದಿಬ್ಬರು ಪಾಲು ಮಾಡಿಕೊಂಡು ಅಲ್ಲೇ ಬೇರೆ ಇದ್ದರೂ ಸಣ್ಣ ಪುಟ್ಟದಕ್ಕೆ ಜಗಳ. ಇವರ ಮನೆಯಲ್ಲಿ ರಾಕೇಶ ಹೊರಗಡೆ ಇರುವ ಕಾರಣ ಬಂದಾಗ ನಾಲ್ಕು ದಿನ ಎಲ್ಲಾ ಕೂಡಿ ಸಂತೋಷದಿಂದ ಇರುವುದು ಅವರಿಗೆಲ್ಲಾ ಕಣ್ಣುರಿಯಾಗಿತ್ತು.
ಅಲ್ಲೇ ಹತ್ತಿರವಿದ್ದ ತಂಗಿಯರ ಮನೆಗೂ ಹೋಗಿ ಬಂದ. ಅವರು ಹೇಳಿದರು. ನೀನು ಚಿಕ್ಕ ವಯಸ್ಸಿನಲ್ಲಿಯೇ ಬೆಂಗಳೂರಿಗೆ ಹೋಗಿ ನೆಲೆಸಿದೆ. ಕಷ್ಟ ಪಡುವುದೇ ಆಯಿತು ನಿನಗೆ, ಇನ್ನೂ ಮತ್ತೆ ಹೋಗಬೇಡಿ,ಇಲ್ಲೇ ಇರಿ ಅಲ್ಲಿ ಮಾಡುವ ಕೆಲಸದ ಅರ್ಧ ಸಮಯ ದುಡಿದರು ಸಾಕು ಇಲ್ಲಿ ನಮ್ಮದೇ ಜಮೀನು ಮನೆ ಇರುವಾಗ ನೀವು ಮತ್ತೆ ಯಾಕೆ ಹೋಗುವುದು. ಕೆಲಸವಾದರೂ ಸಂಬಳ ಬರುತ್ತದೆ ಎನ್ನಬಹುದು. ಹೋಟೆಲ್ ತೆಗೆದರು ಎಷ್ಟು ಜನ ಬರುತ್ತಾರೆ. ಬಂದರು ಭಯವೇ ಅಲ್ಲವಾ? . ಜೀವ ಉಳಿದರೆ ಗಂಜಿ ಕುಡಿದಾದರು ಇರಬಹುದು ಅಂತ ಹೇಳಿದರು.
ಅಪ್ಪ ಅಮ್ಮನು ಹಾಗೆ ಮಾತನಾಡಿಕೊಂಡರು ಆಸ್ತಿಯಲ್ಲಿ ಪಾಲು ಮಾಡಿ ಇಬ್ಬರಿಗೂ ಬೇರೆ ಬೇರೆ ಮಾಡುವುದೇ ಒಳ್ಳೆಯದು. ರಾಕೇಶ ಮತ್ತೆ ಬೆಂಗಳೂರಿಗೆ ಹೋಗುವುದು ಬೇಡ ಇಲ್ಲೇ ಇರಲಿ ಅಂತ ಯೋಚಿಸಿದರು. ಅದನ್ನು ರಾಕೇಶ ಹಾಗೂ ಅವನ ಅಣ್ಣನ ಬಳಿ ಹೇಳಿ ರಾಕೇಶ ಹಾಗೂ ವೈಷ್ಣವಿಗೆ ಯೋಚಿಸಿರಿ ಅಂತ ಹೇಳಿದರು. ವೈಷ್ಣವಿಯ ತವರಿನವರದು ಇದೇ ಮಾತಾಗಿತ್ತು.
ಹಳ್ಳಿಯಲ್ಲಿ ಮನೆಗಳು ದೂರ ದೂರ ತಿಂಗಳುಗಟ್ಟಲೆ ಹೊರಗೆ ಹೋಗದೆ ಮನೆಯಲ್ಲೇ ಇದ್ದರು ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ಹಾಗಿಲ್ಲ, ಕೊತ್ತಂಬರಿ ಸೊಪ್ಪು, ಹಸಿಮೆಣಸಿಗೂ ಆಚೆ ಹೋಗ್ಬೇಕು. ವ್ಯಾಕ್ಸೀನ್ ಬರಲು ಇನ್ನೂ ಎಷ್ಟು ತಿಂಗಳೋ, ವರ್ಷವೋ ಗೊತ್ತಿಲ್ಲ. ಖಂಡಿತಾ ಈಗ ಬೆಂಗಳೂರಿಗೆ ಹೋಗಬೇಡಿ , ಮನೆಯಲ್ಲಿ ಸರಿ ಬರದಿದ್ದರೆ ನಮ್ಮ ಮನೆಯಲ್ಲಿ ಇರಿ ಎಂದರು ವೈಷ್ಣವಿಯ ಅಪ್ಪ ಅಮ್ಮ.
ರಾಕೇಶ ಹಾಗೂ ವೈಷ್ಣವಿ ಯೋಚಿಸಿದರು. ಏನೂ ಮಾಡುವುದು, ಇನ್ನೂ ಆರೇಳು ತಿಂಗಳು ಕ್ಯಾಂಟೀನ್ ತೆಗೆಯಲು ಭಯ, ಆಮೇಲೂ ಎಷ್ಟು ದಿನವೋ ಹೇಳಲು ಸಾಧ್ಯವಿಲ್ಲ. ಊರಲ್ಲಾದರೆ ಕೊರೋನಾ ಭಯ ಬೆಂಗಳೂರಿನಷ್ಟು ಇಲ್ಲಾ. ಹೇಗಿದ್ದರೂ ಪಿತ್ರಾರ್ಜಿತ ಆಸ್ತಿ. ಅಪ್ಪ ಅಮ್ಮನು ಇಲ್ಲೆ ಇರಿ. ನಿಮ್ಮ ಆರೋಗ್ಯ ಮುಖ್ಯ ಅಂತ ಹಠ ಮಾಡುತ್ತಿದ್ದಾರೆ. ಇಲ್ಲೆ ಇರುವುದಾ ? ಅಂತ….
ಆಗಲೇ ಹತ್ತಿರ ಹತ್ತಿರ ಎರಡು ತಿಂಗಳಾಯಿತು, ಹೀಗೆ ಎಷ್ಟು ದಿನ ಇದಕ್ಕೊಂದು ಪರಿಹಾರ ಬೇಕೆಬೇಕು ಅಂತ ರಾಕೇಶನಿಗೆ ಅನಿಸಿತು,ಇಲ್ಲೆ ಇದ್ದರೆ ಅಣ್ಣ ಅತ್ತಿಗೆಯರ ಹತ್ತಿರ ಭಿನ್ನಾಭಿಪ್ರಾಯ ಬಂದೇ ಬರುವುದು. ಹಾಗೆಯೇ ಅಪ್ಪ ಅಮ್ಮ ಇರುವಾಗಲೇ ಮಕ್ಕಳು ಆಸ್ತಿ ಪಾಲು ಮಾಡಿದರೆ ಅವರಿಗೆ ಎಷ್ಟು ಸಂಕಟವಾಗುತ್ತದೆ.
ಈ ಪುಟ್ಟ ಹಳ್ಳಿಯಲ್ಲಿ ಬಿಜಿನೆಸ್ ಮಾಡಲು ಸಾಧ್ಯವಿಲ್ಲ.
ಮಕ್ಕಳಿಬ್ಬರೂ ಜಗಳವಾಡುತ್ತಿದ್ದರೆ ಯಾವ ತಂದೆ-ತಾಯಿ ಗಾದರೂ ಸಂಕಟವಾಗುತ್ತದೆ. ನಾನು ವಾಪಸ್ ಹೋಗುವುದೇ ಸರಿ, ಆಗ ಬಂದು ಹೋದಾಗ ಮುಂಚಿನಂತೆ ಅಣ್ಣ ಅತ್ತಿಗೆಯರು ಪ್ರೀತಿ ಉಪಚಾರ ಮಾಡುವರು. ಅಪ್ಪ-ಅಮ್ಮ ನಾವು ಇಬ್ಬರೂ ಚೆನ್ನಾಗಿರುವುದು ಕಂಡು ಖುಷಿಯಾಗಿರುವರು ಅಂತ ಯೋಚಿಸಿದ ರಾಕೇಶ,
ದಿನಾಲೂ ತಿಂಡಿ ಕಳುಹಿಸುತ್ತಿದ್ದ ಆರೇಳು ಮನೆಗಳವರನ್ನು ಕಾಂಟ್ಯಾಕ್ಟ್ ಮಾಡಿದ. ನಾನು ಕ್ಯಾಂಟೀನ್ ಮುಚ್ಚಿರುವ ಕಾರಣ ಮನೆಯಿಂದಲೇ ನಿಮಗೆ ತಿಂಡಿ ತಂದುಕೊಡುವೆ ಆಗಬಹುದಾ?, ಎಂದು ಕೇಳಿದ.
ಅವರಿಗೂ ಎರಡು ತಿಂಗಳಿನಿಂದ ಮನೆಯಲ್ಲಿಯೇ ಮಾಡಿ ಬೇಸರವಾಗಿತ್ತು. ಆಯಿತು ಹಾಗೆ ಮಾಡಿ ಹಾಗೇ ರಾತ್ರಿ ಚಪಾತಿ ಪಲ್ಯ ಸಹ ತಂದುಕೊಡಲು ಹೇಳಿದರು.
ಇದನ್ನು ವೈಷ್ಣವಿಯ ಬಳಿ ಚರ್ಚಿಸಿದಾಗ ಅವಳು ಇದಕ್ಕೆ ಒಪ್ಪಿಕೊಂಡಳು. ಹೌದು ನಾವು ವಾಪಸ್ಸು ಬೆಂಗಳೂರಿಗೆ ಹೋಗೋಣ ವಿಶ್ವಾಸ ಹೀಗೆ ಇರಲಿ, ಹಣ ಎಷ್ಟಾದರೂ ಸಂಪಾದನೆ ಮಾಡಬಹುದು ಆದರೆ ಒಮ್ಮೆ ಹೋದ ಪ್ರೀತಿ-ವಿಶ್ವಾಸ ಮತ್ತೆ ಸಿಗುವುದಿಲ್ಲ. ಎಷ್ಟು ದಿನ ನಡೆಯುತ್ತದೆ ನೋಡೋಣ ನಾನು ನಿಮಗೆ ಸಹಾಯ ಮಾಡುವೆ ಎಂದಳು.
ಮನೆಯಲ್ಲಿ ಇದನ್ನು ಹೇಳಿದಾಗ ಎಲ್ಲರಿಗೂ ಖುಷಿಯಾಯಿತು. ಎರಡು ತಿಂಗಳಿಗಾಗುವಷ್ಟು ದಿನಸಿ ತರಕಾರಿ ಎಲ್ಲವನ್ನು ತೆಗೆದುಕೊಂಡು ಹೋಗಿ, ಹೊರಗಡೆ ಎಲ್ಲೂ ಹೋಗಬೇಡಿ ಅಂತ ಹೇಳಿದರು. ಹೊರಡುವ ದಿನ ಖುದ್ದು ರಾಕೇಶನ ಅಣ್ಣನೇ ಎಲ್ಲವನ್ನೂ ತಂದು ಕಾರಿನಲ್ಲಿ ತುಂಬಿದರು.
ಬೆಂಗಳೂರಿಗೆ ಬಂದು ಮೊದಲು ಕ್ಯಾಂಟೀನ್ ಅನ್ನು ಖಾಲಿಮಾಡಿ ಎಲ್ಲಾ ಸಾಮಾನುಗಳನ್ನೂ ಮನೆಗೆ ಹಾಕಿಸಿಕೊಂಡರು . ಅಲ್ಲಿ ಕಟ್ಟುವ ಬಾಡಿಗೆ ಉಳಿಯಿತು. ಮನೆ ಬಾಡಿಗೆ ಹೇಗೂ ಇರಲಿಲ್ಲ..
ತಿಂಡಿಯ ಜೊತೆ ಜೊತೆಗೆ ಮನೆಯಲ್ಲಿಯೇ ಚಕ್ಕುಲಿ ಕೋಡುಬಳೆ ಚಿಪ್ಸ್ ಎಲ್ಲಾ ಪ್ಯಾಕ್ ಮಾಡಿ ಕೊಡಲು ಶುರುಮಾಡಿದರು. ಹತ್ತಿರವಿರುವ ಮನೆಗಳಿಗೆ ಇವರೇ ಸಪ್ಲೈ ಮಾಡುವ ಕಾರಣ ಎಲ್ಲರೂ ತೆಗೆದುಕೊಂಡರು.
ಬೇಕರಿಗಳು ತೆಗೆಯದ ಕಾರಣ ಕರಿದ ತಿಂಡಿಗಳಿಗೆ ಬೇಡಿಕೆ ತುಂಬಾ ಇತ್ತು. ಮೊದಲೇ ಬೆಂಗಳೂರು ಜನರಿಗೆ ಊಟ ತಿಂಡಿ ಇರದಿದ್ದರೂ, ಸ್ನಾಕ್ಸ್ ಬೇಕೇ ಬೇಕು, ಅದು ಇವರಿಗೆ ಅನುಕೂಲವಾಯಿತು.
ತಮ್ಮಿಬ್ಬರಿಗೆ ಕೆಲಸ ಜಾಸ್ತಿಯಾದಾಗ ತಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುವ ಇಬ್ಬರನ್ನೂ ಕರೆಸಿಕೊಂಡರು. ಸ್ಯಾನಿಟೈಜರ್,ಕೈಗಳಿಗೆ ಗ್ಲೌಜ್ ಹಾಕಿ ಶುಚಿ ರುಚಿಯಾಗಿ ಕೊಡುವ ಇವನ ತಿಂಡಿಗಳು ಎಲ್ಲರಿಗೂ ಇಷ್ಟವಾಯಿತು.
ಬೆಳಗಿನ ತಿಂಡಿ ಹಾಗೂ ರಾತ್ರಿ ಚಪಾತಿ ಪಲ್ಯ ತೆಗೆದುಕೊಳ್ಳಲು ಜಾಸ್ತಿ ಮನೆಗಳು ಸಿಕ್ಕವು.
ಊರ ಕಡೆ ಹಲಸಿನಕಾಯಿ ಹಾಗೂ ಬಾಳೆಕಾಯಿ ಚಿಪ್ಸ್ ಮನೆಯಲ್ಲಿಯೇ ತುಂಬಾ ಮಾಡುವರು. ಅಣ್ಣನಿಗೆ ಹೇಳಿ ಅಲ್ಲಿಂದ ಸಹ ಅವುಗಳನ್ನು ತರಿಸಿಕೊಂಡು ಮಾರಿದ. ಅದರಿಂದ ಅಲ್ಲಿನವರಿಗೂ ಅಲ್ಪ ಸ್ವಲ್ಪ ದುಡ್ಡು ಸಿಕ್ಕಿತು.
ರಾಕೇಶನಿಗೆ ಆಕಡೆ ಸಂಬಂಧವೂ ಉಳಿಯಿತು, ಈ ಕಡೆ ವ್ಯಾಪಾರವು ಸ್ವಲ್ಪಮಟ್ಟಿಗೆ ಶುರುವಾದ ಕಾರಣ ಜೀವನಕ್ಕೆ ತೊಂದರೆಯಾಗಲಿಲ್ಲ.
ಸವಿತಾ ರಮೇಶ