ಕರ್ನಾಟಕದ ಪ್ರಾದೇಶಿಕ ಕಲೆಗಳು

ಕರ್ನಾಟಕದ ಪ್ರಾದೇಶಿಕ ಕಲೆಗಳ ಕಿರುಪರಿಚಯ

ProfileImg
15 Jan '24
5 min read


image

  ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಪ್ರಾದೇಶಿಕ ಜನಪದ ಕಲೆಗಳದು ಒಂದು ಪ್ರಮುಖ ಭಾಗ. ಈ ಪ್ರಾದೇಶಿಕ ಜನಪದ ಕಲೆಗಳಿಗೆ ಸಾಂಸ್ಕೃತಿಕ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಥಾನವಿದೆ. ಜನಪದ ಕಲೆಗಳೆಂದರೆ, ನಮ್ಮ ಗ್ರಾಮೀಣ ಪ್ರಾಂತದ ಜನಪದ ಕಲಾವಿದರ ಜೀವನಾನುಭವದ ಸುಂದರ ಅಭಿವ್ಯಕ್ತಿಗಳು. ನಮ್ಮ ಗ್ರಾಮೀಣ ಜನಪದ ಕಲಾವಿದರು ತಮ್ಮ ಜೀವನಾನುಭವದ ಅಭಿವ್ಯಕ್ತಿಗಾಗಿ ಬಳಸಿಕೊಂಡ ಒಂದು ಕಲೆಯೇ 'ಜನಪದ ಕಲೆ '. ಕರ್ನಾಟಕದಲ್ಲಿ ಸುಮಾರು 200ಕ್ಕೂ ಹೆಚ್ಚು ಜನಪದ ಕಲೆಗಳು ಪ್ರಚಲಿತದಲ್ಲಿದ್ದು, ಇವುಗಳಲ್ಲಿ 'ಕರ್ನಾಟಕದ ಸಾರ್ವತ್ರಿಕ ಜನಪದ ಕಲೆಗಳು ' ಹಾಗೂ 'ಕರ್ನಾಟಕದ ಪ್ರಾದೇಶಿಕ ಜನಪದ ಕಲೆಗಳು ' ಎಂದು ಎರಡು ಪ್ರಕಾರಗಳನ್ನು ಮಾಡಬಹುದಾಗಿದೆ. ಏಕೆಂದರೆ, ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಈ ಸುಮಾರು 200ಕ್ಕೂ ಹೆಚ್ಚು ಜನಪದ ಕಲೆಗಳಲ್ಲಿ ಕೆಲವು ಕರ್ನಾಟಕದಲ್ಲಿ ಜನಪ್ರಿಯತೆಯನ್ನು ಪಡೆದರೆ, ಇನ್ನು ಕೆಲವು ಕರ್ನಾಟಕದ ಆಯಾಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಜನಪ್ರಿಯತೆಯನ್ನು ಪಡೆದಿವೆ. ಹೀಗೆ,ಕರ್ನಾಟಕದಲ್ಲಿ ಆಯಾಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಜನಪ್ರಿಯತೆಯನ್ನು ಪಡೆದ ಜನಪದ ಕಲೆಗಳೇ ' ಕರ್ನಾಟಕದ ಪ್ರಾದೇಶಿಕ ಜನಪದ ಕಲೆಗಳು '. ಈ ಕಲೆಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳನ್ನು ಮಾಡಬಹುದು. ಅವುಗಳೆಂದರೆ-

 1. ಉತ್ತರ ಕರ್ನಾಟಕದ ಜನಪದ ಕಲೆಗಳು.

 2. ದಕ್ಷಿಣ ಕರ್ನಾಟಕದ ಜನಪದ ಕಲೆಗಳು.

 

1. ಉತ್ತರ ಕರ್ನಾಟಕದ ಜನಪದ ಕಲೆಗಳು :

      ಉತ್ತರ ಕರ್ನಾಟಕದಲ್ಲಿ ಮಾತ್ರ ವಿಶೇಷ ಪ್ರಚಲಿತವಾಗಿದ್ದು, ಅಲ್ಲಿನ ಜನರ ಜೀವನ ವಿಧಾನಕ್ಕೆ ಹೊಂದಿಕೊಂಡು ರಚಿತವಾದ ಜನಪದ ಕಲೆಗಳೇ 'ಉತ್ತರ ಕರ್ನಾಟಕದ ಜನಪದ ಕಲೆಗಳು'.ಕರ್ನಾಟಕದ ಪ್ರಾದೇಶಿಕ ಜನಪದ ಕಲೆಗಳಲ್ಲಿ ಉತ್ತರ ಕರ್ನಾಟಕದ ಜನಪದ ಕಲೆಗಳು ಪ್ರಮುಖವಾದವುಗಳು. ಕರಡೆ ಮಜಲು, ಡೊಳ್ಳು ಕುಣಿತ,ಜೋಗುತಿ ಕುಣಿತ, ಅಲಾವಿ ಕುಣಿತ, ಕೊಡದ ಕುಣಿತ, ದಟ್ಟೀ ಕುಣಿತ,ಪುರವಂತರ ಕುಣಿತ,

ಬಹುರೂಪಗಳು,ವಾಯತ್ ಕುಣಿತ- ಈ ಮುಂತಾದವು ಉತ್ತರ ಕರ್ನಾಟಕದ ಜನಪದ ಕಲೆಗಳು. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಕುರಿತು ಇಲ್ಲಿ ವಿವೇಚಿಸಬಹುದು. '        'ಕರಡೆ ಮಜಲು'  ಉತ್ತರ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಒಂದು. ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ,ರಾಯಚೂರು, ಬೀದರ್, ಬಳ್ಳಾರಿ, ಬಸವಕಲ್ಯಾಣ -ಮೊದಲಾದ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಕರಡೆ ಮುಜಲು ಮದುವೆ, ಮುಂಚಿ,ನಾಮಕರಣ, ದೇವತಾ ಕಾರ್ಯ, ಜಾತ್ರೆ,ಮಂಗಳ ಕಾರ್ಯ- ಮೊದಲಾದ ಶುಭ ಸಂದರ್ಭದಲ್ಲಿ ಬಳಕೆಗೊಳ್ಳುವ ಒಂದು ಜನಪದ ಕಲೆಯಾಗಿದೆ.

      'ಜಗ್ಗಲಿಗೆ ಮಜಲು'  ಉತ್ತರ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು. ಉತ್ತರ ಕರ್ನಾಟಕದ ಧಾರವಾಡ ಹಾಗೂ ಗದಗ  ಜಿಲ್ಲೆಗಳಲ್ಲಿ ವಿಶೇಷವಾಗಿ ಬಳಕೆ ಕೊಳ್ಳುವ ಈ ಕಲೆ, ಆಲಾವಿ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಮದುವೆ,ಮುಂಜಿ, ನಾಮಕರಣ, ಜಾತ್ರೆ, ದೇವತಾ ಕಾರ್ಯ, ಇತರ ಮಂಗಳಕಾರ್ಯಗಳಲ್ಲಿ ಬಳಕೆಗೊಳ್ಳುವ ಉತ್ತರ ಕರ್ನಾಟಕದ ಒಂದು ಪ್ರಮುಖ ಜನಪದ ಕಲೆ ಇದು.

      'ಡೊಳ್ಳಿನ ಮಜಲು' ಉತ್ತರ ಕರ್ನಾಟಕದ ಇನ್ನೊಂದು ಪ್ರಮುಖ ಜನಪದ ಕಲೆ. ಕರ್ನಾಟಕದಾದ್ಯಂತ ಪ್ರಚಲಿತದಲ್ಲಿರುವ ಸಾರ್ವತ್ರಿಕ ಜನಪದ ಕಲೆಗಳಲ್ಲಿ ಇದು ಒಂದಾದರೂ,ಉತ್ತರ ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುತ್ತದೆ. ಮೂಲತಃ ಕುರುಬ ಜನಾಂಗದ ಈ ಕಲೆಯ ಕಲಾವಿದರು ಬೀರದೇವರ ಭಕ್ತರು ಅಥವಾ ಮೈಲಾರಲಿಂಗನ ಭಕ್ತರು. ಬೀರದೇವರ ಪದಗಳನ್ನು ಹಾಡುತ್ತ, ಹಿಮ್ಮೇಳದ ತಾಳಕ್ಕೆ ತಕ್ಕಂತೆ ಡೊಳ್ಳು ಬಾರಿಸುತ್ತಾ ಕುಣಿಯುವುದು ಈ ಕಲೆಯ ಒಂದು ವಿಶೇಷತೆ.

      'ಅಲಾವಿ ಕುಣಿತ' ಉತ್ತರ ಕರ್ನಾಟಕದ ಇನ್ನೊಂದು ಪ್ರಮುಖ ಜನಪದ ಕಲೆ. ದಕ್ಷಿಣ ಕರ್ನಾಟಕದ ಕರಾವಳಿ ಪ್ರಾಂತದಲ್ಲೂ ಈ ಅಲಾವಿ ಕುಣಿತ ವಿಶೇಷವಾಗಿ ಪ್ರಚಲಿತದಲ್ಲಿದೆ. ಇದು ಮೂಲತಃ ಮುಸ್ಲಿಂ ಜನಾಂಗದವರ ಆಚರಣೆಯಾದರೂ, ಇದರಲ್ಲಿ ಸರ್ವಧರ್ಮೀಯರು ಸಮಾವೇಶಗೊಳ್ಳುವುದುಂಟು. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಈ ಅಲಾವಿ ಕುಣಿತ.ಕರ್ಬಲ್ ಮೈದಾನದಲ್ಲಿ ನಡೆದ ಧರ್ಮಯುದ್ಧದಲ್ಲಿ ಹುತಾತ್ಮರಾದ ಇಮಾಂ ಹುಸೇನರ ನೆನಪುಗಾಗಿ ನಡೆಯುವ ಒಂದು ದುಃಖಾಂತ ಆಚರಣೆ ಇದು.

 

      'ಪುರವಂತರ ಕುಣಿತ'  ಉತ್ತರ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು. ಮೂಲತಃ ಶೈವ ಸಂಪ್ರದಾಯಕ್ಕೆ ಸೇರಿದ ಈ ಕುಣಿತ ವೀರಭದ್ರ ದೇವರಿಗೆ ಮಾತ್ರ  ಮೀಸಲಾಗಿರುವ ಒಂದು ವಿಶಿಷ್ಟ ಗಂಡುಕಲೆ. ಶಿವನಿಗೆ ಅಪಮಾನ ಮಾಡಿದ ದಕ್ಷಬ್ರಹ್ಮನ ಮೇಲೆ ವಿಜಯವನ್ನು ಸಾಧಿಸಿರುವುದರ ವಿಜಯದ ಸಂಕೇತವಾಗಿ ಆಚರಿಸಲಾಗುವ ಒಂದು ಜನಪದ ಧಾರ್ಮಿಕ ಆಚರಣೆ ಇದು.

       'ಬಹುರೂಪಿಗಳ ವೇಷ' ಉತ್ತರ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು.ಬಹುರೂಪಿಗಳೆಂದರೆ ವೇಷಧಾರಿಗಳು. ಈ ಬಹುರೂಪಿ ವೇಷಧಾರಿಗಳು  ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವುದುಂಟು.ಹೀಗಾಗಿ,  ಈ ಬಹುರೂಪಿಗಳ ವೇಷವನ್ನು  ನಾವು ಸಾರ್ವತ್ರಿಕ ಜನಪದ ಕಲೆ ಎಂದು ಪರಿಗಣಿಸಬಹುದು. ಬುಡ್ಲು ಜಂಗಾಲು ಜನಾಂಗದವರು  ಈ  ಬಹುರೂಪಿ ವೇಷದ ಕಲಾವಿದರು. ಈ ಬುಡ್ಲು ಜಂಗಾಲು ಜನರು ಬಹುರೂಪಿ ವೇಷವನ್ನು ಧರಿಸಿಕೊಂಡು  ಊರೂರು ಭಿಕ್ಷೆಗೆ ತಿರುಗುವುದು  ಒಂದು ಸಂಪ್ರದಾಯ.  ಬಹುರೂಪಿಗಳ ಈ ಜನಪದ ಕಲೆ  ಜನರಲ್ಲಿ ಧಾರ್ಮಿಕತೆಯನ್ನು ಪ್ರಚೋರಿಸುವ ಮಹತ್ವ ಕೆಲಸವನ್ನು ನಿಭಾಯಿಸುವುದು ಗಮನಿಸಬೇಕಾದ ಸಂಗತಿ.

 2. ದಕ್ಷಿಣ ಕರ್ನಾಟಕದ ಜನಪದ ಕಲೆಗಳು:

      ದಕ್ಷಿಣ ಕರ್ನಾಟಕದ ಜನಜೀವನಕ್ಕೆ ಮಾತ್ರ ಸೀಮಿತವಾಗಿದ್ದು, ಅಲ್ಲಿ ವಿಶೇಷ ಜನಪ್ರಿಯತೆಯನ್ನು ಪಡೆದಿರುವ ಜನಪದ ಕಲೆಗಳೇ 'ದಕ್ಷಿಣ ಕರ್ನಾಟಕದ ಜನಪದ ಕಲೆಗಳು'. ಕರಗ, ಕೀಳು ಕುದುರೆ ಕುಣಿತ, ಕೋಲಾಟ, ಗಾರುಡಿಗೊಂಬೆ ಕುಣಿತ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಪಂಜಿನ ಕುಣಿತ, ತಮಟೆ ಕುಣಿತ- ಈ ಮುಂತಾದವು ದಕ್ಷಿಣ ಕರ್ನಾಟಕದ ಜನಪದ ಕಲೆಗಳು. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಇಲ್ಲಿ ವಿವೇಚಿಸಬಹುದು.

      ' ಕರಗ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಒಂದು. ಕರಗ ಸಹಿತ ಒಂದು ಪ್ರಮುಖ ಧಾರ್ಮಿಕ ಆಚರಣೆಯ ಕುಣಿತ ; ಜನಪದ ಕಲೆ. ಬೆಂಗಳೂರು ಕರಗ ಸೂಪ್ರಸಿದ್ಧವಾಗಿದೆ. ಇಲ್ಲಿನ ದೇವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ತಿಗಳ ಜನಾಂಗ ಈ ಆಚರಣೆಯನ್ನು ಭಕ್ತಿ - ವಿಜೃಂಭಣೆಗಳಿಂದ ಆಚರಿಸುವುದುಂಟು. ಕರಗದ ಅಧಿದೇವತೆ ಮಹಾಭಾರತದ ದ್ರೌಪದಿ. ಇದಕ್ಕೆ ಒಂದು ಪೌರಾಣಿಕ ಕಥೆ ಉಂಟು. ತಿಗಳ ಜನರು ದ್ರೌಪದಿಯನ್ನು ಆದಿಶಕ್ತಿಯ ರೂಪದಲ್ಲಿ ಒಂಬತ್ತು ದಿನ ಕಾಲ ಆಚರಿಸುವ ಒಂದು ಆಚರಣೆ ಇದು. ಈ ಆಚರಣೆಯ ಪ್ರಮುಖ ಆಕರ್ಷಣೆ ಎಂದರೆ ಕರಗ. ಪೂಜಾರಿ ಪಿರಮಿಡ್ ಆಕಾರದ ಕರಗವನ್ನು ತಲೆಯ ಮೇಲೆ ಹೊತ್ತುಕೊಂಡು ತಾಳಕ್ಕೆ ತಕ್ಕಂತೆ ಕುಣಿಯುವುದು ಈ ಕರಗದ ವಿಶೇಷತೆ.

      'ಕೀಳು ಕುದುರೆ ಕುಣಿತ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು.ಉತ್ತರ ಕರ್ನಾಟಕದಲ್ಲೂ ಈ ಕುಣಿತ ಪ್ರಚಲಿತದಲ್ಲಿದ್ದರೂ, ದಕ್ಷಿಣ ಕನ್ನಡದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುತ್ತದೆ. ಕುದುರೆಯ ಆಕಾರದ ಚಟ್ಟನ್ನು ಧರಿಸಿ, ಮರಗಾಲು ಕಟ್ಟಿಕೊಂಡು ಕುಣಿಯುವ ಒಂದು ವಿಶಿಷ್ಟ ಮನರಂಜನೆಯ ಜನಪದ ಕಲೆಯಿದು. ಮರಗಾಲು ಕಟ್ಟಿಕೊಂಡು ಕುಣಿಯಬೇಕಾದದ್ದರಿಂದ, ಈ ಕೀಲು ಕುದುರೆ ಕುಣಿತದ ಕಲಾವಿದ ತುಂಬಾ ಪರಿಣಿತನಾಗಿರಬೇಕು ರಾಜ- ರಾಣಿ ಜೋಡಿ ಈ ಕುಣಿತದ ವಿಶೇಷತೆ.

      'ಕೋಲಾಟ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು. ಕರ್ನಾಟಕದಾದ್ಯಂತ ಸಾರ್ವತ್ರಿಕವಾಗಿ ಕಂಡುಬರುವ ಈ ಕಲೆ, ದಕ್ಷಿಣ ಕರ್ನಾಟಕದಲ್ಲಿ ವಿಶೇಷ ಪ್ರಚುರತೆಯನ್ನು ಪಡೆದಿದೆ, ಕರ್ನಾಟಕದಲ್ಲಿ ಕೋಲಾಟವಿಲ್ಲದ ಊರಿಲ್ಲವೆನ್ನುವದಾದರೂ, ಈ ಕಲೆ ದಕ್ಷಿಣ ಕರ್ನಾಟಕದಲ್ಲಿ ವಿಶೇಷ ಜನಪ್ರಿಯತೆ ಪಡೆದಿದೆ. ಕಾಲಿಗೆ ಕಿರುಗೆಜ್ಜೆಗಳನ್ನು ಕಟ್ಟಿ, ಎರಡು ಕೈಗಳಲ್ಲಿ ಕೋಲನ್ನು ಹಿಡಿದು, ತಾಳಕ್ಕೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ಬಾಗುತ್ತ,ಮಣಿಯುತ್ತ, ಕೋಲುಗಳನ್ನು ಕುಟ್ಟುತ್ತಾ ಕುಣಿಯುವುದೇ ಈ ಕೋಲಾಟದ ಒಂದು ವಿಶೇಷತೆ . ಮನರಂಜನೆಯನ್ನು ಉಂಟುಮಾಡುವ ಈ ಕಲೆ ಶಾರೀರಿಕ ವ್ಯಾಯಾಮದ ಒಂದು ಅಂಶವಾಗಿರುವುದು ಗಮನಿಸಬೇಕಾದ ಅಂಶ.

      ' ಗಾರುಡಿಗೊಂಬೆ ಕುಣಿತ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು. ಶಿವಮೊಗ್ಗ,ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಪ್ರದೇಶ, ತುಮಕೂರು, ಮಂಡ್ಯ ,-ಮೊದಲಾದ ಜಿಲ್ಲೆಗಳಲ್ಲಿ ಈ ಜನಪದ ಕಲೆ ವಿಶೇಷವಾಗಿ ಕಂಡುಬರುತ್ತದೆ. ಹಬ್ಬ ಹರಿದಿನ ಜಾತ್ರೆ ಉತ್ಸವ ಸಾರ್ವಜನಿಕ ಸಮಾರಂಭಗಳಲ್ಲಿ ಎಲ್ಲ ನಡೆಯುವ ಈ ಕುಣಿತ ಒಂದು ಪ್ರಮುಖ ಮನರಂಜನೆಯ ಕಲಿಯಾಗಿದೆ ಕುಣಿತದ ವಿಶೇಷತೆ ಎಂದರೆ, ಗಂಡು ಹೆಣ್ಣು ಜೋಡಿಗಳ ಕುಣಿತ. ಇದೇ ಈ ಗಾರುಡಿಗೊಂಬೆ ಕುಣಿತದ ಮನರಂಜನೆಯ ಪ್ರಮುಖ ಆಕರ್ಷಣೆ.

      'ನಂದಿಕೋಲು ಕುಣಿತ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಇನ್ನೊಂದು. ಶೈವಸಂಪ್ರದಾಯಕ್ಕೆ ಸೇರಿದ ಒಂದು ಗಂಡುಕಲೆಯಿದು . ನಂದಿಕೋಲು ಕುಣಿತದ ಹುಟ್ಟಿನ ಹಿಂದೆ ದಕ್ಷಬ್ರಹ್ಮನಿಗೆ ಸಂಬಂಧಿಸಿದ ಒಂದು ಪುರಾಣ ಕಥೆ ಇದೆ. ವೀರಭದ್ರ ದಕ್ಷಬ್ರಹ್ಮನನ್ನು ಸೋಲಿಸಿದುದರ ಸಂಕೇತವಾಗಿ ಈ ಕಲೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಂದಿ ಕೊಲು ಕುಣಿತ ಒಂದು ಧಾರ್ಮಿಕ ಆಚರಣೆಯಾಗಿರುವಂತೆಯೇ, ಶಾರೀರಿಕ ಪ್ರಯೋಜನದ ಕುಣಿತವೂ ಆಗಿದೆ. ಈ ಕುಣಿತಕ್ಕೆ ಬೌದ್ಧಿಕ ಜಾಣತನವೂ ಅತ್ಯಗತ್ಯ.

      'ಪಂಜಿನ ಕುಣಿತ' ದಕ್ಷಿಣ ಕರ್ನಾಟಕದ ಪ್ರಮುಖ ಜನಪದ ಕಲೆಗಳಲ್ಲಿ ಒಂದು. ಮಂಡ್ಯ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವ ಈ ಕುಣಿತ ದೇವತೆಗಳ ಒಂದು ಹಬ್ಬವಾಗಿದೆ. ಜೊತೆಗೆ ಸುಗ್ಗಿಯ ಸಂಭ್ರಮದ ಆಚರಣೆಯೂ ಆಗಿದೆ. ಒಂದು ತ್ರಿಶುಲದಾಕಾರದ ಕಬ್ಬಿಣದ ಸರಳಿಗೆ ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಮೂರು ದಳಗಳಿಗೂ ಬಟ್ಟೆಯಾಗಿ ಸುತ್ತಿ ಬೆಂಕಿ ಹಚ್ಚಲಾಗುತ್ತದೆ. ತ್ರಿಶೂಲದ ಮೂರು ದಳಗಳು ಧಗಧಗ ಉರಿಯುತ್ತಿದ್ದಂತೆ,ದೇವರ ಮುಂದೆ ಸಾಲಾಗಿ ಸುತ್ತು ನಿಂತು ಕುಣಿಯುವುದೇ 'ಪಂಜಿನ ಕುಣಿತ'. ಇದೊಂದು ದೇವರಿಗೆ ಬೆಳಕಿನ ರೂಪದ ಸೇವೆ.

 

Category:Education



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.