ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್

ProfileImg
22 Jul '24
11 min read


image

ರಿಯಲ್ ಸ್ಟಂಟ್ ಮಾಸ್ಟರ್ ನಟ ಜಾಕಿಚಾನ್
  ವಿಶ್ವದಲ್ಲಿಯೇ ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ನಟ ಜಾಕಿಚಾನ್. ಆದರೆ ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದಲೇ ಪ್ರಸಿದ್ಧಿ ಪಡೆದಿರುವ ಇವರು ತಮ್ಮ ಖಾಸಗಿ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ   ನಡುವೆ ಸಮಾಜದ ಅಭಿವೃದ್ಧಿಗಾಗಿ ಮಾಡುತ್ತಿರುವ ಅನೇಕ ಕೆಲಸಗಳ ಬಗ್ಗೆ ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಅಧ್ಯಯನ ಮಾಡಿ ಈ ಲೇಖನವನ್ನು ರಚಿಸಿದ್ದೇನೆ.
     ಹಾಂಕಾಂಗ್ ನ ಕ್ರೌಸ್ ಕಾಲೊನಿಯಲ್ಲಿನ ವಿಕ್ಟೋರಿಯಾ ಪೀಕ್ ನಲ್ಲಿ ಚಾರ್ಲ್ಸ್ ಮತ್ತು ಲೀಲೀಚಾನ್ ದಂಪತಿಗಳ ಮಗನಾಗಿ
ಎಪ್ರಿಲ್ ೭,೧೯೫೪ ರಂದು ಚಾನ್ ಜನಿಸಿದರು.  ಜನಿಸಿದ ಸಮಯದಲ್ಲಿ ಇವರ ತಂದೆ ಮತ್ತು ತಾಯಿ ಇವರಿಗೆ ಚಾನ್ ಕಾಂಗ್ ಸ್ಯಾಂಡ್ ಎಂದು ನಾಮಕರಣ ಮಾಡಿದ್ದರು. ಅಲ್ಲದೇ ಇವರಿಗೆ  ಪಾವೋ ಪಾವೋ ಎಂಬ ಅಡ್ಡ ಹೆಸರು ಕೂಡ ಇತ್ತು ‌( ಪಾವೋ,ಪಾವೋ ಎಂದರೆ ಚೈನೀಸ್ ಭಾಷೆಯಲ್ಲಿ ಫಿರಂಗಿ ಗುಂಡು ಎನ್ನುವರು. ಆದರೆ ವಿಚಿತ್ರವಾದ ಸಂಗತಿಯೇನೆಂದರೆ ಇವರು ಜನಿಸಿದ ಸಮಯದಲ್ಲಿ ಇವರ ತೂಕವನ್ನು ನೋಡಿ ವೈದ್ಯರಿಗೆ ಆಶ್ಚರ್ಯವಾಗಿತ್ತು. ಕಾರಣವೇನೆಂದರೆ ಜನಿಸಿದ ಸಮಯದಲ್ಲಿ ಸಾಮಾನ್ಯವಾಗಿ ಮಗುವಿನ ತೂಕ ಎರಡುವರೆ ಕೆಜಿ ತೂಕವಿರುತ್ತದೆ. ಆದರೆ ಇವರು ಜನಿಸಿದಾಗ ಐದು ಕೆಜಿ ನಾಲ್ಕುನೂರು ಗ್ರಾಂ ಇತ್ತು. ಇವರಿಗೆ ಒಬ್ಬ ಸಹೋದರನಿದ್ದು ಅವನ ಹೆಸರು ಸೂ- ಸಾಂಗ್- ಚಾಂಗ್ ಮತ್ತು ಸಹೋದರಿಯ ಹೆಸರು ತಾಯ್ ಚಾನ್. ಇವರ ತಂದೆ ಮತ್ತು ತಾಯಿ ಫ್ರೆಂಚ್ ನಿಯೋಗಿಗಳಾಗಿ ಕೆಲಸ ಮಾಡುತ್ತಿದ್ದರಿಂದ ಚಾನ್ ತನ್ನ ಬಾಲ್ಯದ ದಿನಗಳನ್ನು ವಿಕ್ಟೋರಿಯಾ ಪೀಕ್ ಎಂಬ ಜಿಲ್ಲೆಯಲ್ಲಿನ ನಿಯೋಗಿಗಳ ವಾಸಸ್ಥಾನದಲ್ಲಿ ಕಳೆಯಬೇಕಾಯಿತು. 
  ಹಾಂಕಾಂಗ್ ದ್ವೀಪದಲ್ಲಿರುವ ನಾಹ್- ಹ್ವಾ ಪ್ರಾಥಮಿಕ ಶಾಲೆಗೆ ಸೇರಿಕೊಂಡ ಚಾನ್ ಗೆ ದುರಾದೃಷ್ಟವೋ ತಿಳಿಯದು ಆರಂಭದಿಂದಲೂ ಶಿಕ್ಷಣ ಸರಿಯಾಗಿ ಒಲಿದು ಬರಲಿಲ್ಲ. ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಮಯದಲ್ಲಿ ಹಲವು ಬಾರಿ ಕಠಿಣ ಶಿಕ್ಷೆಗೆ ಕೂಡ ಒಳಗಾಗಿದ್ದರು. ಆದರೂ ಪ್ರಯತ್ನ  ಫಲಿಸದೇ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. 
   ೧೯೬೦ ರಲ್ಲಿ ಅಮೇರಿಕಾದ ರಾಯಭಾರಿ ಕಚೇರಿಯಲ್ಲಿ ಮುಖ್ಯ ಅಡುಗೆ  ಭಟ್ಟನಾಗಿ ಕೆಲಸ ನಿರ್ವಹಿಸಲು ಇವರ ತಂದೆ ಆಸ್ಟ್ರೇಲಿಯಾದ ಕ್ಯಾನ್ ಬೇರೆಗೆ ವಲಸೆ ಹೋದರು. ಇತ್ತ ಕಡೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಚಾನ್ ಮಾಸ್ಟರ್ ಯು- ಜಿವ್- ಯುಯೇನ್ ನಡೆಸುತ್ತಿದ್ದ ಚೈನಾ ಡ್ರಾಮಾ ಅಕಾಡೆಮಿ ಸೇರಿದರು. ನಂತರ ಕೆಲವು ವರ್ಷಗಳಲ್ಲಿ ಕದನ ಕಲೆಗಳು, ದೊಂಬರಾಟ ಮತ್ತು ಸಾಹಸ ಕಲೆಗಳ ಅತಿ ಕಠಿಣ ತರಬೇತಿಯನ್ನು ಪಡೆಯುವುದರ ಮೂಲಕ ಅವರಲ್ಲಿದ್ದ ಅಗಾಧ ಪ್ರತಿಭೆ ಸಮಾಜಕ್ಕೆ ಪರಿಚಯವಾಯಿತು. ಹೀಗೆ ಕಷ್ಟಪಟ್ಟು ಕಲಿತ ವಿದ್ಯೆಯಿಂದ ಅವರ ತರಬೇತಿ ಕೇಂದ್ರದ ಲಿಟಲ್ ಫಾರ್ಚ್ಯೂನ್ ತಂಡದ ಮುಖ್ಯ ಸದಸ್ಯರಾಗಿ ಗುರುತಿಸಲ್ಪಟ್ಟರು. ಈ ತರಬೇತಿ ಕೇಂದ್ರದ ಕೆಲವು ಉತ್ತಮ ವಿದ್ಯಾರ್ಥಿಗಳಿಂದ ರೂಪುಗೊಂಡ ಈ ಪ್ರದರ್ಶನ ತಂಡದ ಹೆಸರು
ಯುಯೇನ್ ಲೋ. ಈ ತಂಡವನ್ನು ಚಾನ್ ತನ್ನ ಗುರುವಿಗೆ ಗುರು ಕಾಣಿಕೆಯಾಗಿ ನೀಡಿದ್ದರು. ತನ್ನ ತಂಡದ ಸದಸ್ಯರಾದ ಸ್ಯಾಮ್ಮೋಹಂಗ್ ಮತ್ತು ಯುಯೇನ್ ದಿಯಾವೋ ಜೊತೆ ನಿಕಟ ಸ್ನೇಹ ಬೆಳೆಸಿದರು. ನಂತರ ಈ ಮೂರು ವ್ಯಕ್ತಿಗಳೇ ತ್ರೀ ಡ್ರ್ಯಾಗನ್ಸ ಎಂದು ಪ್ರಸಿದ್ಧಿಯಾದರು. ೮ ವರ್ಷದ ಬಾಲಕನಾಗಿರುವ ಸಮಯದಲ್ಲಿ ಚಿತ್ರ ರಂಗದಲ್ಲಿ ತಮ್ಮ ಜೀವನವನ್ನು ಆರಂಭಿಸಿದ ಚಾನ್ ತನ್ನ ಲಿಟಲ್ ಫಾರ್ಚ್ಯೂನ್ ತಂಡದ ಕೆಲವು ಸದಸ್ಯರೊಂದಿಗೆ ಸೇರಿಕೊಂಡು ೧೯೬೨ ರಲ್ಲಿ ಬಿಗ್ ಆಂಡ್ ಲಿಟಲ್ ವಾಂಗ್ ಟಿನ್ ಬಾರ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಕಲಾವಿದನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಲೀ ಲೀ ಹಾವಾ ಎಂಬ ನಟಿ ಇವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು. ನಾಲ್ಕು ವರ್ಷಗಳ ನಂತರ ನಟಿ ಲೀ ಲೀ ಹಾವಾ ಜೊತೆಗೆ ಕಿಂಗ್ ಹೂ  ನಿರ್ದೇಶನದಲ್ಲಿ ಮೂಡಿ ಬಂದ ಡ್ರಿಂಕ್ ವಿಥ್ ಮಿ ಎಂಬ ಚಿತ್ರದಲ್ಲಿ  ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರು. ಪುನಃ  ೫ ವರ್ಷಗಳ ನಂತರ ೧೯೭೧ ರಲ್ಲಿ ಕಾಂಗ್ ಫೂನ್  ನಿರ್ಮಾಣದ ಟಚ್ ಆಫ್ ಝೆನ್ ನಲ್ಲಿ ಓರ್ವ ಸಹಕಲಾವಿದನಾಗಿ ಕಾಣಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಚಿತ್ರ ರಂಗ ಪ್ರವೇಶಿಸಿದರು. ೧೯೭೧ ನೇ ಇಸ್ವಿ ಬ್ರೂಸ್ಲಿ ಯುಗ ಇವರ ಚಿತ್ರಗಳ ಮುಂದೆ ಯಾವ ಚಿತ್ರಗಳು ನಿಲ್ಲುತ್ತಿರಲಿಲ್ಲ. ಈ ಸಮಯದಲ್ಲಿ ಚಿತ್ರ ರಂಗಕ್ಕೆ ಪ್ರವೇಶಿಸಿದಾಗ ಚಾನ್ ಗೆ ಕೇವಲ ೧೭ ವರ್ಷ. ಚು.ಮು ಎಂಬುವರ ಗ್ರೇಟ್ ಅರ್ಥ್ ಫಿಲಂ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ಪ್ರೌಢ ವೃತ್ತಿಯನ್ನು ಆರಂಭಿಸಿದರು. ಚೆನ್ - ಯುಯಾನ್- ಲೋಂಗ್ ಎಂಬ ರಂಗನಾಮ ಅಡಿಯಲ್ಲಿ ಬ್ರೂಸ್ಲಿ ಅಭಿನಯದ ಫಿಸ್ಟ ಆಫ್ ಫ್ಯೂರಿ ಮತ್ತು ಎಂಟರ್ ದಿನ ಡ್ರ್ಯಾಗನ್ ಚಿತ್ರಗಳಿಗೆ ಸಾಹಸ ಪ್ರದರ್ಶಕನಾಗಿ ಕೆಲಸ ಮಾಡಿದರು. ಅದೇ ವರ್ಷದಲ್ಲಿ ಲಿಟಲ್ ಟೈಗರ್ ಆಫ್ ಕ್ಯಾಂಟೀನ್ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಚಿತ್ರ ಒಂದು ವರ್ಷದ ನಂತರ ೧೯೭೩ ರಲ್ಲಿ ಹಾಂಕಾಂಗ್ ನಲ್ಲಿ ಸೀಮಿತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ದುರಾದೃಷ್ಟಕರ ವಿಷಯವೇನೆಂದರೆ ಚಿತ್ರಗಳಲ್ಲಿನ ಇವರ ಆರಂಭಿಕ ಸಾಹಸಗಳು ಹಣಕಾಸಿನ ದೃಷ್ಟಿಯಿಂದ ನಿರೀಕ್ಷಿಸಿದಷ್ಟು ಹಣವನ್ನು ಗಳಿಸಲಿಲ್ಲ.  ಎರಡು ವರ್ಷಗಳ ಬಿಡುವಿನ ನಂತರ ೧೯೭೫ ರಲ್ಲಿ ಆಲ್ ಇನ್ ದಿ ಫ್ಯಾಮಿಲಿ  ಎಂಬ ಹಾಸ್ಯ ವಯಸ್ಕರ ಚಿತ್ರದಲ್ಲಿ ಚಾನ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಆಶ್ಚರ್ಯದ ವಿಷಯವೇನೆಂದರೆ ಒಂದು ಹೊಡೆದಾಟದ ದೃಶ್ಯವಾಗಲಿ,ಸಾಹಸ ಪ್ರದರ್ಶನದ ಸನ್ನಿವೇಶವಾಗಲಿ ಒಂದು ಇಲ್ಲ. ೧೯೭೬ ರಲ್ಲಿ ಕ್ಯಾನ್ ಬೆರಿಯಲ್ಲಿದ್ದ ತನ್ನ ಪೋಷಕರ ಬಳಿ ಸೇರಿದ ಚಾನ್ ಅಲ್ಲಿಯೇ ಡಿಕ್ಸನ್ ಕಾಲೇಜಿನಲ್ಲಿ ನಿರ್ಮಾಣ ಕಾಮಗಾರಿ ಕೆಲಸ ನಿರ್ವಹಿಸಿದರು. ಅಲ್ಲಿಯೇ ಇದ್ದ ಜಾಕ್ ಎಂಬ ಸಹವರ್ತಿ ಚಾನ್ ನನ್ನು ತನ್ನ ಬಳಿ ಸೇರಿಸಿಕೊಂಡು ಲಿಟ್ಲ್ ಜ್ಯಾಕ್ ಎಂಬ ಅಡ್ಡ ಹೆಸರು ನೀಡಿದರು. ಈ ಹೆಸರು ಮುಂದೆ ಜಾಕಿ ಎಂದು ಕರೆಯಲ್ಪಟ್ಟಿತು. ಅಲ್ಲಿಂದ ಚಾನ್ ಹೆಸರು ಅವರೊಂದಿಗೆ ಅಂಟಿಕೊಂಡು ಬಂದು ಮುಂದೆ ಜಾಕಿ ಚಾನ್ ಎಂಬ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು. ಆದರೆ ವಿಧಿಯ ಆಟ ಬಲ್ಲವರಾರು? ಅಲ್ಲವೇ. 
     ೧೯೭೬ ರಲ್ಲಿ ಹಾಂಕಾಂಗ್ ನಲ್ಲಿದ್ದ ಸಮಯದಲ್ಲಿ ಚಿತ್ರೋದ್ಯಮದ ವಿಲ್ಲಿ ಚಾನ್ ಎಂಬ ನಿರ್ಮಾಪಕರಿಂದ ಜಾಕಿಚಾನ್ ಗೆ ಒಂದು ಟೆಲಿಗ್ರಾಂ ಬಂದಿತು. ಇವರಿಗೆ ಅವಕಾಶ ಕೊಡಲು ಪ್ರಮುಖ ಕಾರಣ ಜಾಕಿಚಾನ್ ಹಿಂದೆ ನೀಡಿದ್ದ ಸಾಹಸ ಪ್ರದರ್ಶನದ ವೈಖರಿಯನ್ನು ಮೆಚ್ಚಿದ್ದರು. ವಿಲ್ಲಿ ಚಾನ್ ನಿರ್ಮಾಣದ ಲೋವಿ ನಿರ್ದೇಶನದಲ್ಲಿ ಮೂಡಿ ಬಂದ ನ್ಯೂ ಫಿಸ್ಟ ಆಫ್ ಫ್ಯೂರಿ ಚಿತ್ರದಲ್ಲಿ ಜಾಕಿಚಾನ್ ನಟಿಸಿದ್ದರು. ಆದರೆ ಈ ಚಿತ್ರ ಯಶಸ್ಸನ್ನು ಪಡೆಯಲಿಲ್ಲ. ಆದರೂ ನಿರ್ಮಾಪಕ ವಿಲ್ಲಿ ಚಾನ್ ಜಾಕಿಚಾನ್ ಗೆ ಇದೇ ಮಾದರಿಯ ಚಿತ್ರಗಳಲ್ಲಿ ನಟಿಸಲು ಅವಕಾಶ ಕಲ್ಪಿಸಿದರು. ಲೀಸಿಯು ಲಿಂಗ್ ( ಚೀನಿ ಭಾಷೆಯಲ್ಲಿ ಪುಟ್ಟ ಡ್ರಾಗನ್ ಎನ್ನುವರು) ಎಂಬ ರಂಗನಾಮ ಹೊಂದಿರುವ ಬ್ರೂಸ್ಲಿ ನಂತರದ ಜಾಕಿಚಾನ್ ನನ್ನು ಮತ್ತೋರ್ವ ಕಲಾವಿದನನ್ನಾಗಿ ರೂಪಿಸಬೇಕೆಂದು ನಿರ್ಮಾಪಕ ವಿಲ್ಲಿ ಚಾನ್ ಉದ್ದೇಶವಾಗಿತ್ತು. ಆದರೆ  ಬ್ರೂಸ್ಲಿಯ ಕದನ ಕಲೆಗಳ ಶೈಲಿ ಜಾಕಿಚಾನ್ ಗೆ ಬೇಗ ಅರ್ಥವಾಗಲಿಲ್ಲ. ಹಲವು ಚಿತ್ರಗಳು ಸೋಲು ಕಂಡರೂ  ಸತತ ಪ್ರಯತ್ನದಿಂದ ಗಲ್ಲಾಪೆಟ್ಟಿಗೆಯಲ್ಲಿ ಅಲ್ಪ ಪ್ರಮಾಣದ ಯಶಸ್ಸು ಕಂಡರು. ಆದರೆ ಎರಡು ವರ್ಷಗಳ ನಂತರ ೧೯೭೮ ರಲ್ಲಿ ಜಾಕಿಚಾನ್ ನಟಿಸಿದ ಸ್ಮಾಲ್ ಇಂದ ಈಗಲ್ ಶ್ಯಾಡೋ ಚಿತ್ರ ಅನಿರೀಕ್ಷಿತ ರೀತಿಯಲ್ಲಿ ಜಯಗಳಿಸಿತು. ಈ ಸಮಯದಲ್ಲಿ ಬ್ರೂಸ್ಲಿ ಯೊಂದಿಗೆ ಇರುವ ರಂಗ ನಾಮದಂತೆ ಜಾಕಿಚಾನ್ ಗೂ ಪ್ರಾಶಸ್ತ್ಯ ನೀಡುವ ಸಲುವಾಗಿ ರಂಗನಾಮ (ಲಸಿಂಗ್ ಲಿಂಗ್ ( ಚೀನಿ ಭಾಷೆಯಲ್ಲಿ ಡ್ರ್ಯಾಗನ್ ಎನ್ನುವರು) ಎಂಬುದಾಗಿ ಬದಲಾಯಿಸಿತು. ಈ ಚಿತ್ರ ಸೀಜನಲ್ ಫಿಲಂ ಕಾರ್ಪೋರೇಷನ್ ಅಡಿಯಲ್ಲಿ ಎರಡು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಈ ಚಿತ್ರ ನಿರ್ಮಾಣವಾಗಿತ್ತು. ಈ ಚಿತ್ರ ಯಾವ ಪ್ರಮಾಣದಲ್ಲಿ ಜನಪ್ರಿಯ ಗೊಂಡಿತ್ತು? ಎಂಬುದು ನಿಮಗೆ ಗೊತ್ತೇ? ಯುಯೇಸ್ ಫೂ ಸಿಂಗ್ ಎಂಬ ನಿರ್ದೇಶಕನಿಂದ ಬಂದ ಈ ಚಿತ್ರದಲ್ಲಿ ಜಾಕಿಚಾನ್ ಗೆ ಸಾಹಸ ಸಂಯೋಜನೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಈ ಸಿಕ್ಕ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ಜಾಕಿಚಾನ್ ಕುಂಗು ಫೂ ಪ್ರಕಾರದ  ವಿನೂತನ ಹಾಸ್ಯಭರಿತ ಸಾಹಸ ಸಂಯೋಜನೆ ಪ್ರಯೋಗ ಮಾಡಿದರು. ಈ ಚಿತ್ರ ಬಿಡುಗಡೆಯಾದ ನಂತರ ನೋಡಿದ ಹಾಂಕಾಂಗ್ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿತು. ನಂತರ ಬಂದ ಡ್ರಂಕನ್ ಮಾಸ್ಟರ್ ಚಿತ್ರ ಇವರನ್ನು ಮುಖ್ಯ ವಾಹಿನಿಯ ಯಶಸ್ಸಿನ ಕಡೆ ಕರೆ ತಂದಿತು. ಇಲ್ಲಿಂದ ಜಾಕಿಚಾನ್ ಹಿಂತಿರುಗಿ ನೋಡಲಿಲ್ಲ.ಲೋವಿಯೋ ಸ್ಟುಡಿಯೋ ಗೆ ಹಿಂದಿರುಗಿದ ಚಾನ್ ಡ್ರಂಕನ್ ಮಾಸ್ಟರ್ ಚಿತ್ರ ಮಾದರಿಯಲ್ಲಿ ಲೂಫ್ ಆಫ್ ಕುಂಗ್ ಫೂ ಮತ್ತು ಸ್ಪಿರಿಚ್ಯುಯಲ್ ಕುಂಗ್ ಫೂ ಚಿತ್ರಗಳನ್ನು ನಿರ್ಮಿಸಿದ್ದರು. ನಿರ್ಮಾಪಕ ವಿಲ್ಲಿ ಚಾನ್ ಕಂಪನಿಯನ್ನು ಬಿಟ್ಟಾಗ ಲೋವಿಯೊಂದಿಗೆ ಇರಬೇಕೊ ಬೇಡವೋ ಎಂಬ ಗೊಂದಲ ಎದುರಾಯಿತು. ಸ್ವತ ನಿರ್ಧರಿಸಿದ ಚಾನ್ ಫಿಯರಲೆಸ್ ಹೈಯನಾ ಭಾಗ ೨ ರ ಚಿತ್ರೀಕರಣ ಸಮಯದಲ್ಲಿ ತನ್ನ ಒಪ್ಪಂದವನ್ನು ರದ್ದು ಮಾಡಿ ಗೋಲ್ಡನ್ ಹಾರ್ವೆಸ್ಟ್  ಸಂಸ್ಥೆ ಸೇರಿದರು. ಅಲ್ಲಿ ಕಿನ್ನಿತ್ ತ್ಸಾಂಗ್ ಎಂಬ ನಿರ್ದೇಶಕನ ಜೊತೆ ಸೇರಿ ದಿ ಫಿಯರ್ ಲೆಸ್ ಹೈಯಾನಾ ಚಿತ್ರದ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದರು. ಇತ್ತ ಕಡೆ ಕೆರಳಿದ ಗ್ರೇಟ್ ಅರ್ಥ್ ಫಿಲಂ ಕಂಪನಿಯ ಮಾಲೀಕ ಚುಮು ತನ್ನ ತಾರೆ ಬಿಟ್ಟು ಹೋಗಲು ಕಾರಣವಾದ ವಿಲ್ಲಿ ಚಾನ್ ನನ್ನು ದ್ವೇಷಿಸತೊಡಗಿದರು. ಅಲ್ಲದೇ ಜಾಕಿಚಾನ್ ಗೆ ಗೂಂಡಾಗಳ ಮುಖಾಂತರ ಬೆದರಿಕೆಯನ್ನು ಹಾಕಿಸಿದ್ದರು. ಈ ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಾಗಲೇ ನಟ ಮತ್ತು ನಿರ್ದೇಶಕ ಜಿಮ್ಮಿ ವ್ಯಾಂಗ್ ಯು ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಪರಿಹರಿಸಿದರು. ನಂತರ ಜಾಕಿ ಚಾನ್ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆಯೊಂದಿಗೆ ಮುಂದುವರೆಯಲು ಅನುಕೂಲವಾಯಿತು. ನಿರ್ಮಾಪಕ ವಿಲ್ಲಿ ಚಾನ್  ಜಾಕಿಚಾನ್ ಆಪ್ತ ಸ್ನೇಹಿತ ಮತ್ತು ವೈಯಕ್ತಿಕ ವ್ಯವಸ್ಥಾಪಕರು ಆಗಿದ್ದಾರೆ. ಅಲ್ಲದೇ ಜಾಕಿ ಚಾನ್ ಅಂತಾರಾಷ್ಟ್ರೀಯ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಆರಂಭದ ನಾಲ್ಕು ವರ್ಷಗಳಲ್ಲಿ ಜನಪ್ರಿಯ ನಟರಾದ ಜಾಕಿ ಚಾನ್ ೧೯೮೦ ರಲ್ಲಿ ಅಮೇರಿಕ ಚಿತ್ರೋದ್ಯಮದಲ್ಲಿ  ಮೊದಲ ಬಾರಿಗೆ ನುಗ್ಗುವಿಕೆ ತಂತ್ರವನ್ನು ಬ್ಯಾಟಲ್ ಕ್ರೀಕ್ ಬಾಲ್ ಎಂಬ ತಮ್ಮ ಪ್ರಥಮ ಹಾಲಿವುಡ್ ಚಿತ್ರದಲ್ಲಿ ಪ್ರಯೋಗಿಸಿ ಯಶಸ್ವಿಯಾದರು. ನಂತರ ೧೯೮೧ ರಲ್ಲಿ ಬಂದ ದಿ.ಕೆನಸ್ ಬಾಲ್ ರನ್ ಎಂಬ ಚಿತ್ರದಲ್ಲಿ ಕಿರು ಪಾತ್ರ ನಿರ್ವಹಿಸಿದ ಚಾನ್ ನ ಈ ಚಿತ್ರವು ವಿಶ್ವಾದ್ಯಂತ ೧೦೦ ದಶಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿತು. 
ಚಿತ್ರ ರಂಗದಲ್ಲಿ ಪ್ರವೇಶಿಸಿ ಎಂಟು ವರ್ಷಗಳ ನಂತರ ೧೯೮೨ ರಲ್ಲಿ ಲಿನ್ - ಫಿಂಗ್- ಜಿಯೋವೋ ಎಂಬ ತೈವಾನ್ ಚಿತ್ರ ನಟಿಯನ್ನು ವಿವಾಹವಾದರು. ಅದೇ ವರ್ಷದಲ್ಲಿ ಇವರಿಗೆ ಒಬ್ಬ ಮಗನು ಕೂಡ ಜನಿಸಿದನು. ಅವನ ಹೆಸರು ಚೇಸಿ ಚಾನ್ ನಟ ಮತ್ತು ಗಾಯಕ ಕೂಡ. ಜಾಕಿ ಚಾನ್ ನಟ ಮಾತ್ರ ವಲ್ಲ ಗಾಯಕ ಕೂಡ ಆಗಿದ್ದಾರೆ. ೧೯೮೦ ರ ದಶಕದ ವೃತ್ತಿಯ ಸ‌ಮಯದಲ್ಲಿ ಹಾಂಕಾಂಗ್ ಮತ್ತು ಏಷ್ಯಾ ಖಂಡದಲ್ಲಿ ಜನಪ್ರಿಯ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದು ಇದುವರೆಗೂ ೨೦ ಸಂಗೀತದ ಆಲ್ಬಂ ಗಳನ್ನು ಬಿಡುಗಡೆ ಮಾಡಿದ್ದಾರೆ. ೧೯೮೫ ರಲ್ಲಿ ಬಿಡುಗಡೆಯಾದ ದಿ.ಪ್ರೊಟೆಕ್ಟರ್ ಚಿತ್ರ ಹಣಗಳಿಕೆ ಯಲ್ಲಿ ಯಶಸ್ಸನ್ನು ಪಡೆಯಲಿಲ್ಲ. ಅನಂತರ ಯು.ಎಸ್. ಚಿತ್ರ ರಂಗ ಪ್ರವೇಶಿಸುವ ಆಲೋಚನೆ ಬಿಟ್ಟು ಹಾಂಕಾಂಗ್ ಚಿತ್ರೋದ್ಯಮದ ಕಡೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಹಾಂಕಾಂಗ್ ಚಿತ್ರೋದ್ಯಮಕ್ಕೆ ಮರಳಿದ ನಂತರ ಇವರು ನಟಿಸಿದ ಚಿತ್ರಗಳು ಪೂರ್ವ ಏಷ್ಯಾದಲ್ಲಿ ಭರ್ಜರಿ ಯಶಸ್ಸು ಗಳಿಸಿದವು. ೧೯೮೦ ಮತ್ತು ೮೨ ರಲ್ಲಿ ನಟಿಸಿದ ದಿ ಯಂಗ್ ಮಾಸ್ಟರ್ ಮತ್ತು ಡ್ರ್ಯಾಗನ್ ಲಾರ್ಡ್ ಜಪಾನ್ ಚಿತ್ರರಂಗದಲ್ಲಿ ಜಪಾನ್ ಭಾಷೆಯಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದವು. ಇಲ್ಲಿಯವರೆಗೂ ಚೀನಾ ಚಿತ್ರ ರಂಗದಲ್ಲಿ ನಟ ಬ್ರೂಸ್ಲಿ ಅಭಿನಯದ ಚಿತ್ರಗಳ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ ೧೯೮೨ ರಲ್ಲಿ ಬಿಡುಗಡೆಯಾದ ಜಾಕಿ ಚಾನ್ ನಟನೆಯ ಹೊಸ ಚಿತ್ರ ದಿ ಯಂಗ್ ಮಾಸ್ಟರ್ ಪ್ರಥಮ ಬಾರಿಗೆ ನಟ ಬ್ರೂಸ್ಲಿ ಅಭಿನಯದ ಚಿತ್ರಗಳ ದಾಖಲೆಯನ್ನು ಮುರಿಯುತ್ತ ಬಂದಿತು. ನಂತರ ಜಾಕಿ ಚಾನ್ ಹಾಂಕಾಂಗ್ ನಲ್ಲಿ ಉನ್ನತ ತಾರೆಯಾಗಿ ಪ್ರಕಾಶಿಸಿದರು. ಅಪೇರಾ ಶಾಲೆಯ ತನ್ನ ಸ್ನೇಹಿತರಾದ ಸ್ಯಾಮೋಹಂಗ್ ಮತ್ತು ಮಯೇನ್ ಬಂಗ್ ಜೊತೆ ಸೇರಿ ಅನೇಕ ಹಾಸ್ಯ ಭರಿತ ಸಾಹಸ ಪ್ರಧಾನ ಚಿತ್ರಗಳನ್ನು ನಿರ್ಮಿಸಿದ್ದರು. ೧೯೮೩ ರಲ್ಲಿ ಬಂದ ಪ್ರೊಜೆಕ್ಟ್ ಎ ಚಿತ್ರದಲ್ಲಿ ಈ ಮೂರು ಸ್ನೇಹಿತರು ಒಟ್ಟಾಗಿ ನಟಿಸಿದ್ದರು.ಮೂರನೇ ವಾರ್ಷಿಕ ಹಾಂಕಾಂಗ್ ಚಿತ್ರೋತ್ಸವದಲ್ಲಿ ಈ ಚಿತ್ರ ಉತ್ತಮ ಸಾಹಸ ಪ್ರಧಾನ ಚಿತ್ರ ಪ್ರಶಸ್ತಿ ಪಡೆಯಿತು. ಟ್ವಟಳಞ ನ ಉಳಿದ ಚಿತ್ರಗಳಿಗಿಂತಲೂ ಝಝ ೩೫ ದಶ ಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿತು. ಇವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ  ತಮ್ಮ ಜನರಿಗಾಗಿ ೧೯೮೮ ರಲ್ಲಿ ಜಾಕಿ ಚಾನ್ ಚಾರಿಟೇಬಲ್ ಫೌಂಡೇಶನ್ ಸ್ಥಾಪಿಸಿದರು. ಇದರ ಪ್ರಮುಖ ಉದ್ದೇಶ ಹಾಂಕಾಂಗ್ ನ ಯುವ ಪೀಳಿಗೆಗೆ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ರೀತಿಯ ಎಲ್ಲ ನೆರವನ್ನೂ ನೀಡುತ್ತ ಬಂದಿದೆ. ಇವರ ಹಲವಾರು ಯೋಜನೆಗಳಿಗೆ ಹಾಂಕಾಂಗ್ ನ ಬಹಳಷ್ಟು ಜನ ಇಂದಿಗೂ ಫಲಾನುಭವಿಗಳಾಗಿದ್ದಾರೆ. ತಮ್ಮ ಚಿತ್ರಗಳಿಗೆ ಸ್ವತಃ ಸಾಹಸ ಸಂಯೋಜಿಸುವ ಇವರು ತಮ್ಮ ಹಲವು ಚಿತ್ರಗಳಲ್ಲಿ ಹೆಚ್ಚು ಅಪಾಯಕಾರಿ ಸಾಹಸ ಸಂಯೋಜನೆಯನ್ನು ಮಾಡಿದ್ದಾರೆ. ಇದಕ್ಕಾಗಿ ೧೯೮೩ ರಲ್ಲಿ ಒಂದು ತಂಡವನ್ನು ಕೂಡ ಕಟ್ಟಿದ್ದಾರೆ. ತಮ್ಮ ತಂಡದ ಪ್ರತಿಯೊಬ್ಬ ಸದಸ್ಯನ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಜಾಕಿ ಚಾನ್ ತನ್ನ ಚಿತ್ರಗಳಲ್ಲಿ ಇತರೆ ಪಾತ್ರಗಳಿಂದ ಮಾಡಿಸುವ ಅನೇಕ ಸಾಹಸ ಪ್ರದರ್ಶನಗಳನ್ನು ಇವರ ತಂಡವೇ ನಿರ್ವಹಿಸುತ್ತದೆ. ಆದರೆ ಇವರ ಮುಖವನ್ನು ಅಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಚಿತ್ರೀಕರಿಸುತ್ತಾರೆ. ಇವರು ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದ ಇವರಿಗೆ ವಿಮೆ ಯೋಜನೆ ಸಿಗುವುದು ಕಷ್ಟವಾಗಿತ್ತು. ಅದರಲ್ಲೂ ಇವರು ಸಂಯೋಜಿಸುವ ಅಪಾಯಕಾರಿ ಸಾಹಸಗಳಿಂದಲೇ ಇವರ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ. ಸ್ವತಃ ತಮ್ಮ ಚಿತ್ರಗಳಿಗೆ ಇವರೇ ಸಾಹಸ ಸಂಯೋಜನೆ ಮಾಡುತ್ತಿದ್ದರಿಂದ ಇವರ ನಿರ್ಮಾಣದ ಚಿತ್ರಗಳಿಗೆ ಯಾವ ವಿಮೆ ಕಂಪನಿಗಳು ಇವರಿಗೆ ವಿಮೆ ಮಾಡಿ ಕೊಡುವ ಧೈರ್ಯ ಮಾಡಿಲ್ಲವೆಂದರೆ ಇವರ ಸಾಹಸ ಸಂಯೋಜನೆ ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿಯುತ್ತದೆ. ೧೯೯೦ ರ ದಶಕದ ಆರಂಭದಲ್ಲಿ ಪೋಲಿಸ್ ಸ್ಟೋರಿಯ ಮುಂದುವರಿದ ಭಾಗವಾಗಿ ಪೋಲಿಸ್ ಸ್ಟೋರಿ ೨ ಚಿತ್ರ ಕೂಡ ಬಿಡುಗಡೆ ನಂತರ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರದ ನಂತರ ಆರ್ಮರ್ ಆಫ್ ಗಾಡ್ ೨, ಆಪರೇಷನ್ ಕೊಂಡರ್ ಮತ್ತು ಪೋಲಿಸ್ ಸ್ಟೋರಿ ೩ ಚಿತ್ರ ಕೂಡ ಬಿಡುಗಡೆ ನಂತರ ಭರ್ಜರಿ ಯಶಸ್ಸು ಗಳಿಸಿದವು. ಈ ಚಿತ್ರದಲ್ಲಿನ ನಟನೆಗಾಗಿ ೧೯೯೩ ರ ಗೋಲ್ಡನ್ ಹಾರ್ಸ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ೧೯೯೪ ರಲ್ಲಿ ಡ್ರಂಕನ್ ಮಾಸ್ಟರ್ ೨ ಚಿತ್ರದಲ್ಲಿ ವೋಂಗ್ ಫೀ ಹಂಗ್ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಟೈಂ ಮ್ಯಾಗ್ ಜೀನ್ ನ ಸಾರ್ವಕಾಲಿಕ ೧೦೦ ಚಿತ್ರಗಳಲ್ಲಿ  ಸ್ಥಾನವನ್ನು ಪಡೆದಿದೆ. ಮತ್ತು ಉತ್ತರ ಭಾಗದ ಕೃತಿಯಾದ ಪೋಲಿಸ್ ಸ್ಟೋರಿ ೪ ಚಿತ್ರ ಬಿಡುಗಡೆ ನಂತರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತ್ತು. ಆದರೆ  ಇವರು ಕೆಲವು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಸಮಯದಲ್ಲಿ ಹಲವಾರು ಬಾರಿ ಗಾಯಗೊಂಡಿದ್ದಾರೆ. ಇದೇ ರೀತಿ ಒಂದು ಸಲ ಆರ್ಮರ್ ಆಫ್ ಗಾಡ್ ಚಿತ್ರೀಕರಣ ಸಮಯದಲ್ಲಿ ಮರದಿಂದ ಕೆಳಗೆ ಬಿದ್ದ ಪರಿಣಾಮವಾಗಿ ತಲೆಗೆ ತೀವ್ರ ಗಾಯಗಳಾಗಿದ್ದವು. ಈ ಹಂತದಲ್ಲಿ ಬದುಕುವುದು ಅನುಮಾನವಾಗಿತ್ತು. ಆದರೆ ಅದೃಷ್ಟವಶಾತ್ ಬದುಕುಳಿದರು. ಆದರೂ ವರ್ಷಗಳು ಉರುಳಿದಂತೆ ಹಲವು ಚಿತ್ರಗಳ ಚಿತ್ರೀಕರಣ ಸಮಯದಲ್ಲಿ ತಮ್ಮ ದೇಹದ ಭಾಗದ ಮೂಳೆಗಳನ್ನು ಲೆಕ್ಕ ವಿಲ್ಲದಷ್ಟು ಬಾರಿ ಮುರಿದುಕೊಂಡಿದ್ದಾರೆ. ಈಗಲೂ ಇವರ ದೇಹದಲ್ಲಿ ಮೂಳೆಗಳಿಗಿಂತ ರಾಡ್ ಗಳೇ ಹೆಚ್ಚು ಇವೆ. ೧೯೯೫ ರಲ್ಲಿ ಇವರದೇ ಅಭಿನಯದ ರಂಬಲ್ ಇಂದ ಬ್ರ್ಯಾಂಕ್ಸ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗುವುದು ರೊಂದಿಗೆ ಉತ್ತರ ಅಮೇರಿಕ ಮಾರುಕಟ್ಟೆಯಲ್ಲಿ ತಮ್ಮದೇ ಆದ ಒಂದು ಇಮೇಜ್ ಗಳಿಸಿದ್ದರು. ಹಾಂಕಾಂಗ್ ಚಿತ್ರ ತಾರೆಯರಿಗೆ ಅಪರೂಪವಾಗಿದ್ದ ಆರಾಧಿಸುವ ಅಭಿಮಾನಿಗಳ ಒಂದು ಸಂಚಲನೆಯನ್ನು ಅಮೇರಿಕ ಚಿತ್ರ ರಂಗದಲ್ಲಿ ಸೃಷ್ಟಿಸುವಲ್ಲಿ ಈ ಚಿತ್ರ ಯಶಸ್ವಿಯಾಯಿತು. ರಂಬಲ್ ಇಂದ ಬ್ರ್ಯಾಂಕ್ಸ ಚಿತ್ರದ ಯಶಸ್ಸಿನ ನಂತರ ಸೂಪರ್ ಕಾಫ್ ಶೀರ್ಷಿಕೆಯಲ್ಲಿ ಪೋಲಿಸ್ ಸ್ಟೋರಿ ೩ ಚಿತ್ರವು ೧೯೯೬ ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಿಡುಗಡೆಗೊಂಡು ೨೭೦,೬೦೦ ಯು.ಎಸ್ ಡಾಲರ್ ಹಣವನ್ನು ಸಂಗ್ರಹಿಸಿತು.  ೧೯೯೮ ರಲ್ಲಿ ನಟ ಜಾಕಿ ಚಾನ್ ಹಾಲಿವುಡ್ ನಟ ರೇಸ್ ಬರ್ಕರ್ ಜೊತೆ ನಟಿಸಿದ ಹಾಸ್ಯ ಭರಿತ ಸಾಹಸ ಪ್ರಧಾನ ಚಿತ್ರ ರಶ್ ಹವರ್ ಚಿತ್ರದಿಂದ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಕಂಡರು. ಇದೇ ಚಿತ್ರವು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ೧೩೦ ದಶ ಲಕ್ಷ ಡಾಲರ್ ಹಣವನ್ನು ಗಳಿಸಿತು. ಮತ್ತು ಹಾಲಿವುಡ್ ನಲ್ಲಿ ಪ್ರಮುಖ ತಾರೆಯಾಗಿ ಪ್ರಕಾಶಿಸಿದರು. ಇದೇ ವರ್ಷ ೧೯೯೮ ರಲ್ಲಿ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆಯಲ್ಲಿ ಹೂ ಆಮ್ ಆಯ್? ಎಂಬ ಕೊನೆಯ ಚಿತ್ರವನ್ನು ಬಿಡುಗಡೆ ಮಾಡಿದ್ದರು. ೧೯೯೯ ರಲ್ಲಿ ಗೋಲ್ಡನ್ ಹಾರ್ವೆಸ್ಟ್ ಸಂಸ್ಥೆ ತೊರೆದ ನಂತರ ಗಾರ್ಜಿಯಸ್ ಎಂಬ ಹಾಸ್ಯ ಭರಿತ ಚಿತ್ರ ನಿರ್ಮಾಣ ಮಾಡಿದರು. ಆದರೆ ಈ ಚಿತ್ರದಲ್ಲಿ ಪಾತ್ರಗಳು ವೈಯಕ್ತಿಕ ಸಂಬಂಧಗಳ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದ್ದವು. ಚಿತ್ರ ರಂಗದಲ್ಲಿ ಎಷ್ಟು ಬಿಡುವಿಲ್ಲದ ಕೆಲಸಗಳ ನಡುವೆಯೂ ಸದಾ ಹೊಸತನದ ಆಲೋಚನೆ ಮಾಡುತ್ತಲೇ ಇರುವ ಇವರು ೨೦೦೦ ನೇ ಇಸ್ವಿಯಲ್ಲಿ ತನ್ನ ಕುರಿತಾದ ಕಲ್ಪಿತ ಕಥೆ ಜಾಕಿ ಚಾನ್ ಅಡ್ವೆಂಚರ್ ಎಂಬ ಚಿತ್ರ ಸರಣಿಯನ್ನು ದೂರ ದರ್ಶನ ಕೇಂದ್ರದಲ್ಲಿ ಆರಂಭಿಸಿದರು. ೨೦೦೫ ನೇ ಇಸ್ವಿಯವರೆಗೂ ಈ ಸರಣಿಯು ಪ್ರಸಾರವಾಯಿತು. ಶಾಂಘೈ ನೂನ್( ೨೦೦೦), ರಶ್ ಹವರ್ ೨ (೨೦೦೧) ಮತ್ತು ಶಾಂಘೈ ನೈಟ್ಸ್ ಚಿತ್ರಗಳ ಯಶಸ್ಸಿನ ಪರಂಪರೆ ಮುಂದುವರೆದಿದ್ದರೂ ಚಿತ್ರೋದ್ಯಮದಿಂದ ಹಿಂದೆ ಸರಿಯುವ ಬದಲು ಪ್ರತಿ ಸ್ಪಂದನೆ ಯಾಗಿ ಎಂಪರರ್ ಮಲ್ಟಿಮೀಡಿಯಾ ಗ್ರುಪ್ ಸಹಯೋಗದೊಂದಿಗೆ ಜಾಕಿ ಚಾನ್ ಎಂಪರರ್ ಮೂವೀಸ್ ಲಿಮಿಟೆಡ್ ಎಂಬ ನಿರ್ಮಾಣದ ಕಂಪನಿಯನ್ನು ಆರಂಭಿಸಿದರು. ಇವರ ನಿರ್ಮಾಣ ಸಂಸ್ಥೆಯಲ್ಲಿ ನ್ಯೂ ಪೋಲೀಸ್ ಸ್ಟೋರಿ (೨೦೦೪), ದಿ.ಮಿಥ್(೨೦೦೫) ಮತ್ತು ರಾಬಿನ್ ಹುಡ್ (೨೦೦೬) ಚಿತ್ರಗಳು ನಿರ್ಮಾಣವಾಗಿವೆ. ಅಗಸ್ಟ್ ೨೦೦೭ ನೇ ಇಸ್ವಿಯಲ್ಲಿ ಬಿಡುಗಡೆಯಾದ ರಶ್ ಹವರ್ ೩ ಚಿತ್ರವು ೨೫೫ ದಶ ಲಕ್ಷ ಡಾಲರ್ ಹಣವನ್ನು ಗಳಿಸಿತು. ಆದರೆ ಇದೇ ಚಿತ್ರವು ಹಾಂಕಾಂಗ್ ನಲ್ಲಿ ಆರಂಭಿಕ ಹಂತದಲ್ಲಿ ಕೇವಲ ೩.೫ ದಶಲಕ್ಷ ಡಾಲರ್ ಹಣವನ್ನು ಗಳಿಸುವ ಮೂಲಕ ಕಳಪೆ ನಿರ್ವಹಣೆ ತೋರಿತು. ಇದೇ ಸಂದರ್ಭದಲ್ಲಿ ೨೦೦೮ ರ ಜುಲೈ ನಲ್ಲಿ ದಿ.ಡಿಸೈಬಲ್( ಚೀನಿ ಭಾಷೆಯಲ್ಲಿ ಡ್ರ್ಯಾಗನ್ ಅನುಯಾಯಿ ಎನ್ನುವರು) ಎಂಬ ಶೀರ್ಷಿಕೆ ಅಡಿಯಲ್ಲಿ ರಿಯಾಲಿಟಿ ಶೋ ಆರಂಭಿಸಿದರು. ಈ ರಿಯಾಲಿಟಿ ಮುಖ್ಯ ಉದ್ದೇಶ ಅಭಿನಯದಲ್ಲಿ, ಕದನ ಕಲೆಗಳಲ್ಲಿ ಪರಿಣಿತಿಯನ್ನು ಪಡೆದ ಹೊಸ ತಾರೆಯನ್ನು ಹುಡುಕುವ ಉದ್ದೇಶವನ್ನು ಹೊಂದಿತ್ತು. ಈ ರಿಯಾಲಿಟಿ ಶೋ ನಲ್ಲಿ ಎಲ್ಲ ಸ್ಪರ್ಧೆಗಳಲ್ಲಿ ಜಯಿಸಿ ಜಾಕ ಟು ಎಂಬ ಯುವಕ ಈ ಸರಣಿಯಲ್ಲಿ ಜಯವನ್ನು ಗಳಿಸಿದನು. ಈಗ ಜಾಕ್ ಟು ಮೂರು ಆಧುನಿಕ ಚೀನಾ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸಲು ಸಿದ್ಧತೆ ನಡೆಸಿದ್ದು ಒಂದರ ಚಿತ್ರ ಕಥೆಯನ್ನು ಜಾಕಿ ಚಾನ್ ರಚಿಸಿದ್ದಾರೆ. ಈ ಮೂರು ಚಿತ್ರಗಳ ನಿರ್ಮಾಣದ ಹೊಣೆಯನ್ನು ಜಾಕಿ ಚಾನ್ ಎಂಪರರ್ ಮೂವೀಸ್ ಗೆ ವಹಿಸಿದ್ದು ಚಿತ್ರಗಳಿಗೆ ಸ್ಪೀಡ್ ಪೋಸ್ಟ್ ೨೦೬, ವೋಂಟ್ ಟೆಲ್ ಯು ಮತ್ತು ಟ್ರಾಫಿಕಲ್ ಟೊರ್ನಾಡೋ ಎಂದು ಹೆಸರುಗಳನ್ನು ಇಡಲು ನಿರ್ಧರಿಸಲಾಗಿದೆ. ತಮ್ಮ ವಿಶಿಷ್ಟ ಅಭಿನಯದಿಂದ ವಿಶ್ವಾದ್ಯಂತ ಜನಪ್ರಿಯತೆಯನ್ನು ಪಡೆದಿದ್ದು ಅಮೇರಿಕದ ಕೋರಿಯೋಗ್ರಾಫಿ ಅವಾರ್ಡ್ ವತಿಯಿಂದ ಜೀವಮಾನ ಸಾಧನೆಯ ಪ್ರಶಸ್ತಿ ಅಲ್ಲದೇ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದುರಾದೃಷ್ಟ ವಿಷಯವೇನೆಂದರೆ ಅನೇಕ ಸಾಧನೆಗಳನ್ನು ಮಾಡಿದ್ದರೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಲೇ ಪ್ರಪಂಚದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳ ಸಹಾಯಕ್ಕೆಂದು ಅಪಾರ ಪ್ರಮಾಣದ ಧನ ಸಹಾಯ ಮಾಡಿದ್ದಾರೆ. ಆಸ್ಟ್ರೇಲಿಯಾ ನ್ಯಾಷನಲ್ ಯುನಿವರ್ಸಿಟಿ ಯಲ್ಲಿ ಸೈನ್ಸ್ ಸೆಂಟರ್ ನಿರ್ಮಿಸಲು ಮತ್ತು ಚೀನಾ ದೇಶದ ದುರ್ಬಲ ಸ್ಥಳಗಳಲ್ಲಿ ಶಾಲೆಗಳನ್ನು ನಿರ್ಮಿಸಲು ಹೇರಳ ಧನ ಸಹಾಯ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರು ನಿರ್ವಹಿಸುವ ಪ್ರತಿಯೊಂದು ವ್ಯವಹಾರದ ಲಾಭಾಂಶದ ಒಂದು ಭಾಗ ಜಾಕಿ ಚಾನ್ ಚಾರಿಟೇಬಲ್ ಫೌಂಡೇಶನ್ ಸೇರಿದಂತೆ ವಿವಿಧ ದತ್ತಿ ಸಂಸ್ಥೆಗಳಿಗೆ ಹೋಗುತ್ತದೆ. ಇವರು ಓರ್ವ ಲೋಕೋಪಕಾರಿ  ಕೂಡ ಆಗಿದ್ದು ಯು.ನಿ.ಸೆ.ಎಫ್ ನ ರಾಯಭಾರಿಯು ಆಗಿದ್ದಾರೆ. ಚೀನಾದ ಪ್ರಧಾನ ಭೂ ಭಾಗದಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಮತ್ತು ೨೦೦೪ ರಲ್ಲಿ ಹಿಂದು ಮಹಾಸಾಗರದ ಸುನಾಮಿಗೆ ಸಂಬಂಧಿಸಿದ ವಿಕೋಪ ಪರಿಹಾರ ನೀಡಿದ್ದಾರೆ. ಚೀನಾದ ದೂರದ ಪ್ರದೇಶಗಳಲ್ಲಿರುವ ಮಕ್ಕಳು ಮತ್ತು ವೃದ್ಧ ಜೀವಿಗಳ ಕೊನೆಯ ಹಂತದ ಅಗತ್ಯಗಳನ್ನು ಪೂರೈಸಲು ೨೦೦೫ ರಲ್ಲಿ ದಿ ಡ್ರ್ಯಾಗನ್ ಹಾರ್ಟ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೨೦೦೫ ನೇ ಇಸ್ವಿಯಲ್ಲಿ ತನ್ನ ಕೆಲಸವನ್ನು ಆರಂಭಿಸಿದ ಈ ಸಂಸ್ಥೆ ಇದುವರೆಗೂ ಒಂದು ಡಜನ್ ಗೂ ಹೆಚ್ಚು ಶಾಲೆಗಳನ್ನು ನಿರ್ಮಿಸಿದೆ. ಬಡತನದಲ್ಲಿರುವ ವರಿಗೆ ಅಗತ್ಯ ವಿರುವ ಶಿಕ್ಷಣ, ಪುಸ್ತಕ, ಸಮವಸ್ತ್ರ ಮತ್ತು ಫೀಸ್ ಇತ್ಯಾದಿ ಅಗತ್ಯೆಗಳನ್ನು ಪೂರೈಸಲು ದಶಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿ ಜನತೆಗೆ ಸೇವೆಯನ್ನು ನೀಡುತ್ತಿದೆ. ಇವರು ತಮ್ಮ ಮರಣದ ನಂತರ ತಮ್ಮ ಆಸ್ತಿಯ ಅರ್ಧ ಭಾಗ ದೇಣಿಗೆ ರೂಪದಲ್ಲಿ ಹೋಗುತ್ತದೆ ಎಂದು ಘೋಷಿಸಿದ್ದು  ೨೦೦೦ ವರ್ಷಗಳ ಹಿಂದಿನ ಅನೇಕ ಐತಿಹಾಸಿಕ ಕರಕುಶಲ ವಸ್ತುಗಳ ಸಂಗ್ರಹವೇ ಇವರ ಬಳಿ ಇಂದಿಗೂ ಇದೆ. ಆದರೆ ಈ ಲೇಖನವನ್ನು ಬರೆಯುತ್ತ ಒಂದು ಸಂಗತಿ ಹೇಳುವುದನ್ನು ಮರೆತಿದ್ದೇನೆ. ಈ ನಟನನ್ನು ಹತ್ತಿರದಿಂದ ನೋಡಿದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಸುಮಾರು ೧೬ ವರ್ಷಗಳ ಹಿಂದೆ ನಮ್ಮ ಗಂಗಾವತಿಯಿಂದ ೧೫ ಕಿಲೋ ಮೀಟರ್ ದೂರದಲ್ಲಿರುವ ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಇವರ ದಿ ಮಿಥ್ ಚಿತ್ರದ ಚಿತ್ರೀಕರಣ ನಡೆದಿತ್ತು. ಅಂದು ನಾನು ಸುಮಾರು ೫ ರಿಂದ ೬ ಗಂಟೆಗಳ ಕಾಲ ಇವರು ಚಿತ್ರೀಕರಣ ಮಾಡುವ ಶೈಲಿಯನ್ನು ನೋಡಿದ್ದೇನೆ. ೨೦೦೮ ರಲ್ಲಿ ಸಿಚುವಾನ್ ಭೂಕಂಪ ಸಂಭವಿಸಿದ ನಂತರ ಸಂತ್ರಸ್ತರ ಸಹಾಯಕ್ಕಾಗಿ ೧೦ ದಶಲಕ್ಷ ಡಾಲರ್ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. 
    ೨೦೦೮ ರಲ್ಲಿ ನಟ ಕಮಲಹಾಸನ್ ನಿರ್ಮಿಸಿ ನಟಿಸಿದ ದಶಾವತಾರಂ ತಮಿಳು ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಜಾಕಿ ಚಾನ್ ನನ್ನು  ಆಹ್ವಾನಿಸಿದ್ದರು. ಈ ಸಮಯದಲ್ಲಿ ಮಮ್ಮುಟ್ಟಿ, ಕಮಲಹಾಸನ್ ರಂತಹ ದಿಗ್ಗಜ ನಟರೊಂದಿಗೆ  ವೇದಿಕೆ ಹಂಚಿಕೊಂಡ ಜಾಕಿಚಾನ್ ಗೆ ತಮಿಳು ಭಾಷೆಯ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ. ಆದರೂ ತಮಗೆ ಮತ್ತು ತಮ್ಮ ಚಿತ್ರಗಳಿಗೆ ಭಾರತೀಯರು ತೋರಿಸುವ ಅಭಿಮಾನ ಮತ್ತು ಪ್ರೀತಿಯಲ್ಲಿ ಮುಳುಗಿರುವ ಇವರಿಗೆ ನಮ್ಮ ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಪ್ರಸ್ತುತ ೭೦ ವರ್ಷದ  ನಟ ಜಾಕಿ ಚಾನ್ ಗೆ  ಆರೋಗ್ಯದ ದೃಷ್ಟಿಯಿಂದ ಮೊದಲಿನಂತೆ ಸಾಹಸ ಪ್ರಧಾನ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬರುತ್ತಿರುವ ಚಿತ್ರಗಳಲ್ಲಿ ಭಾವನಾತ್ಮಕ  ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾದ ನ್ಯೂ ಪೋಲೀಸ್ ಸ್ಟೋರಿ ಚಿತ್ರದಲ್ಲಿ ಕುಡಿತದ ಚಟದಿಂದ ಬಳಲುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರು ತಮ್ಮ ೫೨ ವರ್ಷಗಳ ಚಿತ್ರ ರಂಗದ ಜೀವನದಲ್ಲಿ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರು ಯಾವುದೇ ಕಾರ್ಯಾರಂಭವಾಗಲಿ, ಶಾಲೆಗಳ ಪ್ರಾರಂಭೋತ್ಸವಕ್ಕೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಲು ಆಗಾಗ ದೂರದ ದೇಶಗಳಿಗೆ ಪ್ರವಾಸವನ್ನು ಮಾಡುತ್ತಲೇ ಇದ್ದಾರೆ.
 


 

Category:Books



ProfileImg

Written by Sandeep Joshi

I am always king in my World.Writer, short movie producer and director.

0 Followers

0 Following