ಬಾನಿಂದ ಬುವಿಗೆ ಮಳೆಯು ಬೀಳಲು ತಕ್ಷಣಕೆ ಮನವು ತಂಪಾಗುವುದು ನಿಜ. ಆದರೆ, ಬಿಡದೆ ಸುರಿದರೆ.... ಚಳಿಯ ಅನುಭವ. ಆದರೆ ಪಕ್ಷಿಗಳು... ಪಾಪ..! ಹೊಟ್ಟೆಪಾಡಿಗಾಗಿ ಚಳಿ, ಬಿಸಿಲುಗಳ ಲೆಕ್ಕಿಸದೆ ರೆಕ್ಕಿಬಿಚ್ಚಿ ಬಾನೆತ್ತರಕ್ಕೆ ಹಾರುತ್ತಿರುತ್ತವೆ.
ಮನೆಯಿಂದ ಹೊರಗೆ ಹೋಗುವುದೇ ಬೇಡ, ಮನೆಯಲ್ಲೇ ಇರೋಣ ಅಂತ ಅನಿಸುತ್ತದೆ. ಆಗ ನೆನಪಾಗುವುದು ಬಿಸಿ ಬಿಸಿಯಾದ ಕಾಫಿ/ಚಹಾ. ಚಳಿಯನ್ನು ಓಡಿಸಲು ಬಿಸಿಯನ್ನು ಕುಡಿಯಲೇಬೇಕು. ಅದರೊಂದಿಗೆ ಖಾರದ ತಿಂಡಿಗಳು. ಅಡಿಗೆ ಮನೆಯತ್ತ ನಮ್ಮ ನಡಿಗೆ ಸಾಗುತ್ತದೆ. ಡಬ್ಬದಲ್ಲೇನಾದರೂ ಇದೆಯೇ ಎಂದು ಹುಡುಕಲು ಪ್ರಾರಂಭ. ಏನಿಲ್ಲವೆಂದರೆ ಅಂಗಡಿಗೇ ಮೊರೆ ಹೋಗುತ್ತೇವೆ. ಆದರೆ ಇದರಿಂದ ನಮ್ಮ ದುಡ್ಡು, ಆರೋಗ್ಯ ಎರಡೂ ಹಾಳು. ಇದು ನಮಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಮಾಡಲು ಸಮಯವಿಲ್ಲ, ತಾಳ್ಮೆಯಿಲ್ಲ. "ದುಡ್ಡು ಕೊಟ್ಟರಾಯಿತು. ಬೇಕಾದ್ದು ಸಿಗುವುದಲ್ಲ..." ಎನ್ನುವ ಮನೋಭಾವ ನಮ್ಮದು. ಕೆಲಸವೂ ಬೇಗ ಆಗುತ್ತದೆ. ಇನ್ನೇನು ಬೇಕು?!
ಇಂದು ಹಳ್ಳಿಯ ಮನೆಗಳಲ್ಲಿ ಬೇಸಿಗೆಯಲ್ಲಿ ಹಲಸಿನ ಹಪ್ಪಳವನ್ನು ಮಾಡಿಟ್ಟು ಮಳೆ ಬಂದಾಗ ಅದನ್ನು ಹುರಿದು ಬಿಸಿಬಿಸಿ ತಿನ್ನಲು ಎಂಥಾ ಖುಷಿ...!! ತುರಿದ ಕಾಯಿಯನ್ನು ಸೇರಿಸಿದರೆ ಮತ್ತೆ ಕೇಳಬೇಕೇ..!?
ಅತ್ತ ಮಳೆಗಾಲದಲ್ಲಿ ತರಕಾರಿ ಮಾಡಲಾಗುವುದಿಲ್ಲ. ಬಿತ್ತಿದ ಬೀಜ ಮೊಳಕೆ ಒಡೆಯುವುದೇ ಇಲ್ಲ. ಹಾಗಾಗಿ ಹಲಸಿನ ತೊಳೆಯನ್ನು ಉಪ್ಪಿನಲ್ಲಿ ಹಾಕಿಟ್ಟುಕೊಂಡರೆ ಅದರದ್ದೇ ಪಲ್ಯ, ಸಾಂಬಾರು, ಬೀಜದ ಪಲ್ಯ; ಮಾವಿನಕಾಯಿಯ ಗೊಜ್ಜು .... ಹೀಗೆ ಊಟಕ್ಕೆ ವಿವಿಧ ಬಗೆಯ ಪದಾರ್ಥಗಳನ್ನೂ ಮಾಡಲು ಸುಲಭವಾಗುತ್ತದೆ.
ಹಲಸಿನ ಮೇಳ ಬಂತೆಂದರೆ ಮಾತೆಯರ ಸಂತಸ ಕೇಳಬೇಕೇ? ಆದಕ್ಕೆ ಪಾರವೇ ಇಲ್ಲ. ಎಲ್ಲರೂ ಅವರವರ ಕಾರ್ಯದಲ್ಲಿ ಬಿಸಿಯಾಗುತ್ತಾರೆ. ಪಕ್ಕದ ಮನೆಯವರೆಲ್ಲ ಒಂದು ಜಾಗವನ್ನು ನಿಗದಿಪಡಿಸಿ ಒಟ್ಟಾಗಿ ಒಂದೇ ಮನೆಯ ಅಕ್ಕ-ತಂಗಿಯರಂತೆ ಸೇರಿ ಹಪ್ಪಳ, ಸೆಂಡಿಗೆ, ಚಿಪ್ಸು... ಹೀಗೆ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ಪೂರೈಸುತ್ತಾರೆ. ಅಷ್ಟೇ ಏಕೆ, ಮಳೆಗಾಲದಲ್ಲಿ ಎಣ್ಣೆ ತಿಂಡಿಗಳಿಗೆ ಬೇಡಿಕೆಯೂ ಜಾಸ್ತಿ. ಹಣ್ಣಿನ ದೋಸೆ, ಅಪ್ಪ, ಪಾಯಸ. ಗೆಣಸಲೆ, ಕಡುಬು ಹೀಗೆ ಅನೇಕ ತಿಂಡಿಗಳು... ಹೀಗೆ ಸಾವಯವ ತಿಂಡಿಗಳನ್ನು ಮಾಡಿ ತಿಂದರೆ ರೋಗವು ಹತ್ತಿರ ಸುಳಿಯದು.
✍ ಮುರಳಿಕೃಷ್ಣ ಕಜೆಹಿತ್ತಿಲು
DTP Worker, Vittal, Mangalore
0 Followers
0 Following