ಮಳೆಗಾಲ

ನೆನಪು ಹೀಗೊಂದು

ProfileImg
26 Jun '24
2 min read


image

ಮಳೆಗಾಲ

ಮುತ್ತಿನ ಹನಿಗಳ ತುಂತುರು ಮಳೆಗೆ ತಂಪಾಯಿತು ಇಳೆ, ಮೂಡಿತು ಎಲ್ಲೆಡೆಯೂ ಹಚ್ಚ ಹಸಿರಿನ ಕಳೆ. ಅಬ್ಬಾ ಮಳೆಗಾಲ ಬಂತಂದರೆ ಸಾಕು ಏನು ಒಂಥರಾ ಖುಷಿ, ಅದರಲ್ಲೂ ನೀವೇನಾದರೂ ಹಂಚಿನ ಮನೆಯಲ್ಲಿ ಇದ್ದೀರಾ ಅಂದ್ರೆ ಉಲ್ಲಾಸ ಉತ್ಸಾಹದ ಜೊತೆ ಸಾಹಸವು ಇರುವುದು ಖಂಡಿತ. 
ನಾನು ಹಂಚಿನ ಮನೆಯ ನಿವಾಸಿ ಮಳೆಗಾಲ ಚಳಿಗಾಲ ಸೆಕೆಗಾಲದಲ್ಲಿ ಟರೇಸಿಗಿಂತ ಇದುವೇ ವಾಸಿ. ಆದ್ರೆ ಮಳೆಗಾಲದಲ್ಲಿ ಒಂಚೂರು ಜಾಸ್ತಿ ಇಷ್ಟ.ಯಾಕೆಂದ್ರೆ ಆಗಸದಿಂದ ಮುತ್ತಿಡುವ ಹನಿಗಳ ಹಂಚಿಗೆ ಬಿದ್ದು ಅದನ್ನು ಒಮ್ಮೆ ಸ್ಪರ್ಶಿಸಿದರೆ ಆಹಾ! ಎಂಥಹಾ ತಂಪು.ಹೀಗೆ ಒಂದು ಕಡೆ ಮಳೆಯ ಮೋಜಿಗೆ ಶರಣಾಗಿ ಮೋಜು ಮಸ್ತಿ ಕಡೆ ತಲ್ಲೀನ ನನಾದರೆ ಅಪ್ಪ ಅಮ್ಮನಿಗಂತೂ ಮನೆ ಮಧ್ಯೆ ಸೋರುವ ಹಂಚಿನ ಮೂಲವನ್ನು ಹುಡುಕುವುದೇ ಚಿಂತೆಯಾಗಿ ಬಿಟ್ಟಿತ್ತು. ಹೌದು ಸ್ನೇಹಿತರೆ ಜೋರಾಗಿ ಬರುವ ಮಳೆಗೆ ಸೋರುವ ಹಂಚಿನಿಂದಾಗಿ  ರಾತ್ರಿ ನಿದ್ದೆ ಕೆಟ್ಟ ಪ್ರಸಂಗ ಇದೆ.ಆ ಬಾಲ್ಯದಲ್ಲಿ  ಹಂಚಿನ ಮೂಲವನ್ನು ಕಂಡು ಹಿಡಿಯಲು ಚಿಮ್ಮಣಿ ದೀಪವೇ ಆಧಾರವಾಗಿತ್ತು.  ಅದು ಬೀಸುವ ಗಾಳಿಗೆ ಕ್ಷಣಮಾತ್ರದಲ್ಲಿ ಹಾರಿ ಹೋಗುತ್ತಿತ್ತು. ಮತ್ತೆ ಅದನ್ನು ಬೆಳಗಿಸುವುದೇ ಕೆಲಸವಾಗಿ ಬಿಡುತ್ತಿತ್ತು .
ಈ ಸೋರುವ ಹಂಚು ಒಂದೆರಡು ಕಡೆದಿದ್ದರೆ ಪರವಾಗಿಲ್ಲ ಈ ಸಂಖ್ಯೆ ಅಧಿಕ ಗಡಿ ದಾಟಿದರೆ ಮಾತ್ರ ಸಮಸ್ಯೆ ಕಟ್ಟಿಟ ಬುತ್ತಿ.ನನಗಿನ್ನು ನೆನಪಿದೆ ಆ ದಿನ ಅಟ್ಟ ಜೋರಾಗಿ ಕೂಗಲು ಶುರು ಮಾಡಿತ್ತು .ನಿದ್ದೆ ಮಂಪರಿನಲ್ಲಿದ್ದ ನನ್ನ ಮತ್ತು ಅಪ್ಪನ ಕಣ್ಣುಗಳನ್ನು ಎಬ್ಬಿಸಿತು ಅಮ್ಮನ ಸ್ವರ. ಭಯದ ಆ ಸ್ವರವು ಘಟನೆಗಳನ್ನು ಹೇಳಲು ತವಕಿಸುತ್ತಿತ್ತು. ತೆಂಗಿನ ಮರದ ಸೋಗೆ ಕಾಯಿ ಬಿದ್ದು ಹಂಚು ಚೂರು ಚುರಾಗಿ ಒಡೆದು ಹೋಗಿ ನೀರು ಸರಾಗವಾಗಿ ಒಳ ಬರುತ್ತಿತ್ತು. ಮೇಲಿನ ಅಟ್ಟವು ಭಾಗಶಃ ಒದ್ದೆಯಾಗಿತ್ತು. ಕೂಡಲೇ ವಿದ್ಯುತ್ ಇಲ್ಲದ ಆ ರಾತ್ರಿ ದೀಪದ ಸಹಾಯದಿಂದ ಹಂಚನ್ನು ಸರಿಪಡಿಸಲಾಯಿತು. ಮಿಂಚಿನ ಬೆಳಕಿಗೆ ಅಪ್ಪನ ಮುಖ ಒಮ್ಮೆಗೆ ಕಂಡು ಮರೆಯಾಗುತ್ತಿತ್ತು, ದೀಪವು ಆರುವ ಭೀತಿಯನ್ನು ಎದುರಿಸುತ್ತಿತ್ತು, ಸಿಡಿಲು ಗುಡುಗಿನ ಆರ್ಭಟಕ್ಕೆ ಮೈ ನಡುಕುತಿತ್ತು,ಯಾವಾಗ ಈ ಹಾಳು ಮಳೆ ನಿಲ್ಲುತ್ತದೆಯೋ ಎನ್ನುವಷ್ಟರ ಮಟ್ಟಿಗೆ ಆ ರಾತ್ರಿ ತಲುಪಿತ್ತು .ಸಂತಸಕ್ಕೆ ಕಾರಣವಾಗಿದ್ದ ಮಳೆಯೂ ಆ ದಿನ ದುಃಖದ ಮೂಲವಾಗಿ ಬಿಟ್ಟಿತು. 
ಗ್ರಾಮೀಣ ಜೀವನ ಒಂತರ ಮೋಜು ಯಾಕೆಂದರೆ ಅಲ್ಲಿ ಸುಖ ದುಃಖಗಳನ್ನು ಎರಡು ಅನುಭವವನ್ನು ಪಡೆಯಬಹುದು. ಮುಂಗಾರು ನೆನಪಿದೆ ಸುಮಾರು ದುಃಖ ಒಂಚೂರು ಸಂತಸ ಹಲವಾರು


ಗಿರೀಶ್ ಪಿಎಂ 
ದ್ವಿತೀಯ ಎಂ ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ 
ವಿ ವಿ ಕಾಲೇಜು ಮಂಗಳೂರು

Category:Entertainment



ProfileImg

Written by Gireesh Pm

0 Followers

0 Following