ದೂರದಡವಿಯ ದಾಟಿ
ಮೋಡವದು ಬರುತಿಹುದು
ಮಳೆ ಗೆಳತಿ ಐತರುವ
ಸಂದೇಶ ತಂದಿಹುದು
ಬಾ ಬಾರೆ ಸಖಿ ನವಿಲೇ
ಕರೆದಿಹುದು ಕೋಗಿಲೆ
ಮಾತಾಡು ಮುಗಿಲೇ
ಸ್ವಾಗತಿಸು ಕಡಲೇ
ಮಳೆ ಗೆಳತಿ ಬರುತಿಹಳು
ಗುಡುಗಿನ ವಾದ್ಯದಲಿ
ಮಿಂಚಿನ ಬೆಳಕಲ್ಲಿ
ಮುಂಜಾನೆ ಸೊಬಗಲ್ಲಿ
ಮಂಜಿನ ಬೆನ್ನಲ್ಲಿ
ಮಳೆ ಗೆಳತಿ ಬರುತಿಹಳು
ಭೂಮಿಯನು ತಣಿಸುವಳು
ಹಸಿರನರಳಿಸುವವಳು
ಹುಸಿಯನ್ನು ಅಳಿಸುವಳು
ಕಡಲುಕ್ಕಿ ಹರಿಸುವಳು
ಮಳೆ ಗೆಳತಿ ಬರುತಿಹಳು
ಧೋ ಎಂದು ಬೀಸುತಿದೆ
ಅವಳ ಸೆರಗಿನ ಗಾಳಿ
ಝಲ್ಲೆಂದು ಭುವಿ ಮುಟ್ಟಿ
ಅವಳ ಗೆಜ್ಜೆಯ ದಾಳಿ
ಮಳೆ ಗೆಳತಿ ಬರುತಿಹಳು
ಬಂದಳು ಬಂದಳು
ನನ ಗೆಳತಿ ಬಂದಳು
ನನ್ನೊಡನೆ ಹಾಡಲು
ಆಡಲು ಬಂದಿಹಳು
ಮಳೆ ಗೆಳತಿ ಬಂದಿಹಳು
-ಕಾವ್ಯಕನ್ಯೆ
Kavyakanye
0 Followers
0 Following