ಅವಳ ಅಂತರಂಗದೊಳಗಿನ ಬಯಕೆ ಬದುಕಲ್ಲಿ ನುಡಿಸಿದ ಕೊಳಲು, ಕೊಳಲ ನಾದ, ನಾದದಿಂದ ನಲಿದ ನೃತ್ಯ, ಹೊಮ್ಮಿಸಿದ ಭಾವವೆ ಕೃಷ್ಣ . ಅವಳ ಹೃದಯ ಹಂಚಿದ್ದು ಪ್ರೀತಿಯನ್ನ. ಎಲ್ಲಕ್ಕೂ ಮಿಗಿಲಾಗಿ ನಂಬಿಕೆಯ ರೀತಿಯ ಗೆಲುವು. ಗೆಲುವಿನೊಲವಲ್ಲೇ ಕೃಷ್ಣನನ್ನ ಆರಾಧಿಸಿದವಳಾಕೆ. ಪ್ರೀತಿ ಎಂದರೇನು? ಅದರ ಅದರ್ಶವೇನು ಎಂಬುದನ್ನು ನಿರೂಪಿಸಿದವಳು ರಾಧೆ.ಏಕೆಂದರೆ, ಶೂನ್ಯವನ್ನು ಪೂರ್ಣವಾಗಿಸಬಲ್ಲ ಒಲವನ್ನು, ಎಂದು ಬಾಡದ ಸುಮವಾಗಿ ಉಳಿಸಿ, ಕೃಷ್ಣನಿಗಾಗಿ ತನ್ನೊಳಗೆ ಜತನದಿಂದ ಕಾಪಿಟ್ಟುಕೊಂಡವಳು ಆಕೆ.."ರಾಧಾ ಮಾಧವ ವಿನೋದ ಹಾಸ| ಯಾರು ಮರೆಯದ ಪ್ರೇಮವಿಲಾಸ||" ಎನ್ನುವ ಕವಿಯ ಸಾಲಿನಂತೆ,ಎಚ್ಎಸ್ವಿಯವರ-ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು,
ರಾಧೆಯ ಪ್ರೀತಿಯ ರೀತಿ..!ಎಂಬ ಸಾಲುಗಳು ಬಹುಸುಲಭಕ್ಕೆ ಜನಿಸಿದಲ್ಲ ಹಾಗೇ ಅಂಥ ಪ್ರೀತಿ ಸುಲಭಕ್ಕೆ ದಕ್ಕುವಂಥದ್ದು ಅಲ್ಲಾ. ಜೊತೆಯಾಗಿ ಸಪ್ತಪದಿ ತುಳಿದು ಮಡದಿಯಾಗಿ ಜೊತೆಯಾದರು ರುಕ್ಮಿಣೀ, ಕೃಷ್ಣನ ಹೆಸರಿನೊಂದಿಗೆ ಉಳಿದುಕೊಂಡಿದ್ದು ಇವಳ ಹೆಸರೇ. 'ರಾಧಾ-ಕೃಷ್ಣ' ನೆಂಬುವುದು ಅಕ್ಕರೆಯ ಹೆಸರು; ಅಂದಿಗೂ-ಇಂದಿಗೂ.ಪ್ರೇಮ ಅಜರಾಮರ ಎಂದುಕೊಳ್ಳುವಾಗಲೆಲ್ಲಾ ನೆನಪಿಗೇ ಬರಬೇಕಾದ ಜೋಡಿ ಇವರುಗಳದ್ದೇ, ಹೊರತು ನಮ್ಮ ಆಧುನಿಕ ಸಾಹಿತ್ಯದ ನಾಯಕ ನಾಯಕಿಯರದ್ದಲ್ಲ. ಪ್ರೀತಿಯ ಉತ್ತುಂಗದ, ಆ ಎತ್ತರಕ್ಕೂ ಬೆಳೆಯಲು ಈಗಿನವರಿಗೆ ಸಾಧ್ಯವಿಲ್ಲ. ಸಾವಿನಲ್ಲಿ ಮುಗಿದು ಹೋಗುವ ಅದೆಷ್ಟೋ ಪ್ರೇಮಕಥೆಗಳನ್ನು ಪ್ರೇಮಿಗಳು ಅದರ್ಶವಾಗಿ ತೆಗೆದುಕೊಳ್ಳುವುದಿದೆ. ಬಂಡೆಯ ಮೇಲೆ ಹೆಸರು ಕೆತ್ತಿಟ್ಟು, ಬೆಟ್ಟದಿಂದ ಕೆಳಗೆ ಹಾರಿ ತಮ್ಮ ಪ್ರೀತಿ ಉಳಿಯಿತು ಎಂಬ ಭ್ರಮೆಯಲ್ಲಿ ಸಾಯುವವರು ಇದ್ದಾರೆ. ಅವರಿಗೆಲ್ಲ ನೆನಪಿರಬೇಕಾದ ಪ್ರೀತಿಯ ದ್ಯೋತಕವೆಂದರೆ ರಾಧಾಕೃಷ್ಣ, ಶಿವ-ಪಾರ್ವತಿಯು ಮಾತ್ರ.!ಆ ರುದ್ರ ಶಿವನದು ಎಂತಹ ಪ್ರೀತಿ. ಇವತ್ತಿಗೂ, ಹಾಗೆ ಪ್ರೀತಿಯನ್ನು ಮಿಸ್ ಮಾಡಿಕೊಂಡು ಸಂಭಾಳಿಸಿದ, ಅದನ್ನು ತನ್ನ ಆತ್ಮವನ್ನಾಗಿ ಮಾಡಿಕೊಂಡ ಪ್ರೇಮಿ ಶಿವ. ಅದೆಂತಹ ಪ್ರೀತಿ ಅವನದು… “ತನಗಾಗಿ ಯಜ್ಞ ಕುಂಡಕ್ಕೆ ಹಾರಿದ ಪಾರ್ವತಿಯ ಶರೀರವನ್ನು ಹೆಗಲಿನ ಮೇಲೆ ಹೊತ್ತು, ವಿದಾಯದ ಉರಿ ತಾಳದೆ ಧಿಮಿಧಿಮಿ ಕುಣಿಯುತ್ತಾ, ತಾನು ತನ್ನವಳ ದೇಹದಂತೆ ಉರಿಯುತ್ತಾ, ಅವಳ ಶರೀರವನ್ನೂ, ತನ್ನವಳ ಪ್ರೇಮದ ಶವವನ್ನೂ ಅನುಕ್ಷಣ ಹೊತ್ತು ತಿರುಗಿದ ಶಿವನ ಆ ರುದ್ರ ಪ್ರೀತಿಯಿದೆಯಲ್ಲ”, ಅದು ಮಿಸ್ ಮಾಡಿಕೊಳ್ಳುವುದು ಅಂದರೆ. ಅದು ಜಗತ್ತಿನ ಸಾರ್ವಾಕಾಲಿಕ ನಿಜವಾದ ಪ್ರೀತಿ.ಪ್ರೀತಿ ಎಂದರೆ ಹೃದಯದ ಪಿಸುಮಾತು, ಮನಸುಗಳ ಮೌನ ರಾಗ ಅಂತಾರೆ. ಅದನ್ನೇಕೆ ಐ ಲವ್ಯೂ ಅನ್ನೋ ಪದಗಳಲ್ಲಿ ಕಟ್ಟಿ ಹಾಕಿ ಗಟ್ಟಿಯಾಗಿ ಕೂಗಿ ಹೇಳಬೇಕು? ಕೂಗಿ ಹೇಳೊದರಿಂದ ಪ್ರೀತಿ ಬೆಳಗುತ್ತಾ? ಉಳಿಯುತ್ತಾ?. ಇಲ್ಲಾ ಶಾಶ್ವತವಾಗಿ ಜೊತೆಯಾಗಿ ಬಿಡುತ್ತಾ?. ಪ್ರೀತಿಯೊಂದು ಅಂತರಗಂಗೆ.. ಒಳಗೊಳಗೆ ಆವಿರ್ಭವಿಸಿ ಝಿಲ್ಲನೆ ಚಿಮ್ಮಿ, ಮೈ ಮನಗಳನ್ನು ಪುಳಕಗೊಳಿಸುವ ಮಧುರಾನುಭವ. ಪ್ರೀತಿಯ ಭಾವವೊಂದು ನಮ್ಮೊಳಗೆ ಹುಟ್ಟಿಸುವ ಜೀವನೋತ್ಸಾಹ, ಹಾಡಿಸುವ ಹೊಸ ಹಾಡು, ಉಕ್ಕಿಸುವ ಮಂದಹಾಸ, ನೀಡುವ ನವಚೈತನ್ಯಗಳೇ ಅದ್ಭುತ. “ಐ ಅಮ್ ಇನ್ ಲವ್” ಅನ್ನೊದೇ ಒಂದು ದಿವ್ಯ ತೇಜಸ್ಸು. 'ನಿಜವೆಂದರೆ ಪ್ರೀತಿ ಅದುವು ಡೈನಾಮಿಕ್. ಅದು ಚಲನಶೀಲ. ಆರಂಭದಿಂದ ಕೊನೆವರೆಗೆ ವಿಭಿನ್ನ ನೆಲೆಗಳಲ್ಲಿ ಹರಿಯುತ್ತಾ, ಸಾಗುತ್ತಲೇ ಇರುತ್ತದೆ. ಹಾಗಿದ್ದರೆ ಅದಕ್ಕೆ ಕೊನೆ? ಬಹುಶಃ ಯಾವತ್ತು “ಐ ಲವ್ ಯೂ” ಅಂತಲೋ, ಅಥವಾ ಮದುವೆ ಅನ್ನುವ ಬಂಧನದೊಳಗೊ ಪ್ರೀತಿಯನ್ನ ಕಟ್ಟಿಹಾಕಿ ನೀವೆದಿಸಿಕೊಳ್ಳುತ್ತೆವೋ. ಪ್ರೀತಿ ಅಲ್ಲಿಗೆ ಮುಗಿಯುತ್ತೆ.. ಮುಂದೆಂದೂ ಅದೇ ಪ್ರೀತಿ..? ಬದುಕಿನ ಚಲನಶೀಲತೆಯು ಅದನ್ನ ನುಂಗಿ ಹಾಕಿರುತ್ತದೆ. ಅದಕ್ಕೆ ಅದೇಷ್ಟೊ ಸಾವಿರ ಜನ ಎಂಜಲೂ ಮಾಡಿದ ಮೇಲು ತನ್ನ ಪಾವಿತ್ರ್ಯತೆ ಉಳಿಸಿಕೊಂಡ ಸಾಲು 'ಲವ್ಯೂ' ನ ಶುದ್ಧತೆಯ ರೂಪವೇ ಪ್ರೀತಿ.ಅದಕ್ಕೆ ಇರಬೇಕು ಇದನ್ನೆಲ್ಲ ಮೀರಿ ನಿಲ್ಲುವ ಸಂಬಂಧವಾಗಿ ರಾಧೆ ಕೃಷ್ಣೆಯರು ಕಾಣಿಸೋದು. ಕೃಷ್ಣ ಭಗವಂತನಾದರು, ಆತನಿಗೆ ಇಡಿ ಬ್ರಹ್ಮಾಂಡವನ್ನೇ ಕಿರುಬೆರಳಿನಲ್ಲೆತ್ತಿ ನಿಲ್ಲಿಸುವ ತಾಕತ್ತಿದ್ದರು, ರಾಧೇಯನ್ನ ದಕ್ಕಿಸಿಕೊಳ್ಳುವ ಇರಾದೇಗೆ ಬೀಳಲಿಲ್ಲ. ಆತ ಭಗವಂತನೇನಿಸಿಕೊಂಡ ಮೇಲು ತನ್ನೊಳಗೆ ಪ್ರೀತಿಯ ಬುಗ್ಗೆಯನ್ನ ಚಿಮ್ಮಿಸಿಕೊಂಡವ. ರಾಧೇಯೊಳಗೂ ಒಡಮೂಡಿಸಿದವ. ಆ ಶುದ್ಧ ಪ್ರೀತಿಯದು ಯಾವತ್ತಿಗೂ ನಿರಂತರವಾಗಿ ಇಬ್ಬರೊಳಗೂ ಹರಿಯುತ್ತಲೇ ಇತ್ತು. ಯಾಕೆಂದರೆ ಅವರು, ಮದುವೆ ಎನ್ನುವ ಬಂಧನದಲ್ಲಿ ಒಂದಾಗುವ ಮೂಲಕ ಅದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟೆ ಇಲ್ಲವಲ್ಲ.!ನಿಜ, ಪ್ರೀತಿ ಅದು ಹಾಗೇ. ಬದುಕಿನ ಸಂತಸವೆಂಬುವುದು ಒಂದಾಗುವದರಲ್ಲೊ, ಅಥವಾ ಒಬ್ಬರಿಗೆ ಇನ್ನೊಬ್ಬರು ಪ್ರಾಣತ್ಯಾಗ ಮಾಡುವುದರಲ್ಲಿಯೂ ಅಲ್ಲ. ಬದಲಿಗೆ ಒಬ್ಬರಿನ್ನೊಬ್ಬರ ಅನುಪಸ್ಥಿತಿಯಲ್ಲೂ ಬದುಕಿನ ಔನ್ನತ್ಯವನ್ನು ಸಾಧಿಸುವುದರಲ್ಲೂ ಸಿಗುವಂತದು. ಅದನ್ನ ಸಾಧಿಸಿಕೊಂಡಿದ್ದು 'ಕೃಷ್ಣ'. ಸಾಧಿಸುವುದರ ಜೊತೆಗೂ ಆತನನ್ನು ದಕ್ಕಿಸಿಕೊಂಡವಳು 'ರಾಧೆ'.