ಕುಂಬಳೆ ಕೋಟೆ ಮತ್ತು ಅರಮನೆಯ ಪ್ರಾಚ್ಯಾವಶೇಷಗಳು

ಕ್ಷೇತ್ರ ಕಾರ್ಯದ ನಡುವಿನ ಓಯಸಿಸ್ ಗಳು

ProfileImg
25 May '24
3 min read


image

ಕುಂಬಳೆ ಕೋಟೆಯ ಬುರುಜಿನ ಮೇಲೆ ಏರಿ ನಿಂತಾಗಿನ ಸಂತಸವೇ ಬೇರೆ.ಅದನ್ನು ಶಬ್ದಗಳಲ್ಲಿ ವರ್ಣಿಸಲು ಆಗರು 

ಆರು ವರ್ಷಗಳ ಹಿಂದೆ ಹಿಂದಿನ ದಿನ ಬೆಳಗ್ಗಿನ ಜಾವ  ಮೂರು ಗಂಟೆಗೆ ನಾನು ಮತ್ತು ಪಿಎಚ್ ಡಿ ವಿದ್ಯಾರ್ಥಿನಿ ಶೋಭಾ   ಮನೆ  ಬಿಟ್ಟಿದ್ದೆವು  ಬಿಟ್ಟಿದ್ದೆವು..

ಆರಿಕ್ಕಾಡಿಯಲ್ಲಿ ಹಿಂದಿನ ದಿನ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ  ನಡೆವ ಕೋಲವನ್ನು ರೆಕಾರ್ಡ್ ಮಾಡಿ‌ ಕಾಸರಗೋಡು ಮುಳಿಯಾಲ ಪಂಜಿಕಲ್ಲು‌ ಇನ್ನೂ ಎಲ್ಲಲ್ಲೋ ಕ್ಷೇತ್ರ ಕಾರ್ಯ ಮಾಡಿ ರಾತ್ರಿಯಿಂದ ಬೆಳಗ್ಗಿನ ತನಕ ನೆಲ್ಲಿ ಕುಂಜದಲ್ಲಿ ಕೋಲ ರೆಕಾರ್ಡ್ ಮಾಡಿ ಮತ್ತೆ ಹಗಲಿಡೀ ಅಲೆದಾಡಿದೆವು.

ಹೋಗುವಾಗಲೇ ಹಿಂದೆ ಬರುವಾಗ ಕುಂಬಳೆ ಕೋಟೆಗೆ ಹೋಗುವುದೆಂದು ನಿರ್ಧರಿಸಿದ್ದೆವು.

ಹಿಂದೆ ಬರುವಾಗ ಸಂಜೆ ಮೂರು ಗಂಟೆ..ಸರಿಯಾಗಿ ಊಟ ತಿಂಡಿಯಿಲ್ಲ..ಒಂದೈದು ನಿಮಿಷದ ನಿದ್ರೆಗೂ ಸಮಯವಿರಲಿಲ್ಲ

ನೆತ್ತಿ ಸುಡುವ ಬಿಸಿಲು..ಕಾರಿನ ಏಸಿಗೂ ತಣ್ಣಗಾಗದ ತಲೆ...

ಕುಂಬಳೆ ಬರುವಷ್ಟರಲ್ಲಿ ಕಾರಿಂದ ಇಳಿಯಲೂ ಶಕ್ತಿ ಇರಲಿಲ್ಲ

ಹೀಗೆಯೇ ಅನೇಕ ಬಾರಿ ಕುಂಬಳೆ ಕೋಟೆ ಏರ ಬೇಕೆಂದು ಕೊಂಡದ್ದು ಸಾಧ್ಯವಾಗದೆ ಬಾಕಿ ಇತ್ತು.

ಈ ಬಾರಿ ಏರಿಯೇ ಸಿದ್ದ ಎಂದು ಗಟ್ಟಿ ಮಾಡಿದೆ‌.

ಶೋಭಾ ಬಸವಳಿದು ಹೋಗಿದ್ದರು

.ನೀವು ಮೇಲೆ ಹೋಗಿ‌ ನಾನು ಕೆಳಗೆ ಇರುತ್ತೇನೆ ಎಂದರು.

.ಹತ್ತುವಾಗ ನನಗೆ ಬಹಳ ಕಷ್ಟ ಅನಿಸಿತು..
ಆದರೆ ತುತ್ತ ತುದಿ ತಲುಪಿದಾಗ ಅರಮನೆಯ ಅಡಿಪಾಯ ಸ್ಪಷ್ಟವಾಗಿ ಕಾಣಿಸಿತ್ತು.
ಕೆಳಗಿನಿಂದ ನೋಡುವಾಗ ಏನೋ‌ ಅಗೆದು ಹಾಕಿದ ಹಾಗೆ ಕಾಣುತ್ತಿತ್ತು‌.ಮೇಲಿನಿಂದ ಸ್ಪಷ್ಟ ಚಿತ್ರ ತೆಗೆಯಲು ಸಾಧ್ಯವಾಯಿತು.

ಏರಿದ್ದೇನೋ..ಏರಿದೆ..ಇಳಿಯಬೇಕಲ್ಲ..ಮೊದಲೇ ಎರಡು ದಿನದಿಂದ ಸರಿಯಾದ ಊಟ ತಿಂಡಿ ನಿದ್ರೆ ಇಲ್ಲದೆ ತೀರಾ ಸುಸ್ತಾಗಿತ್ತು.
ಇಳಿಯುವಾಗ ಕಾಲು ನಡುಗುತ್ತಾ ಇತ್ತು..ಎಲ್ಲಿ ಜಾರಿ ಬೀಳುವೆನೋ ಎಂಬಭಯ ಆಗುತ್ತಿತ್ತು.ಒಂದೊಮ್ಮೆ ಜಾರಿದರೆ ನನ್ನ ಮೂಳೆ ಕೂಡ ಸಿಗಲಾರದೆನಿಸಿತ್ತು.
ಅದಕ್ಕೆ ಸರಿಯಾದ ಚಪ್ಪಲಿ ಇರಲಿಲ್ಲ.ನಾನು ಧರಿಸಿದ ತುಸು ಹೈ ಹೀಲ್ಡ್ ನ ಚಪ್ಪಲಿ ಹಾಕಿಕೊಂಡು ಇಳಿಯುದು ಅಪಾಯಕಾರಿ ಎನಿಸಿತು.
ಹಾಗೆ ಚಪ್ಪಲಿಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡೆ‌
ಕಲ್ಲಿನ ದಾರಿ ಕಾವಲಿಗೆಯಂತೆ ಸುಡುತ್ತಿತ್ತು.
ಜೊತೆಗೆ ಪೇಟೆಗೆ ಬಂದಲ್ಲಿಂದ ಹತ್ತು ಹದಿನೈದು ವರ್ಷಗಳಿಂದ ಚಪ್ಪಲಿ ಹಾಕಿಯೇ ಓಡಾಡಿ ಕಾಲಿನ ಅಡಿಭಾಗ ಬಹಳ ಸೂಕ್ಷ್ಮವಾಗಿತ್ತು.ಸಣ್ಣ ಕಲ್ಲು ತುಂಡೂ ಚುಚ್ಚಿ  ವಿಪರೀತ ನೋವಾಗುತ್ತಾ  ಇತ್ತು.
ಅಂತೂ ಹೇಗೋ ಇಳಿದೆ.
ಆ ದಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಏನೋ ಉತ್ಸವ ಇತ್ತು.
ಊಟ ಆಗದವರೆಲ್ಲ ಬನ್ನಿ ,ಇದು ಕಡೆಯ ಹಂತಿ ಎಂದು ಎಂದು ಧ್ವನಿವರ್ಧಕದಲ್ಲಿ ಕರೆದು ಹೇಳ್ತಾ ಇದ್ದರು.

ಹಸಿವೆಯಲ್ಲಿ ಲೋಕ ಇರಲಿಲ್ಲ.ಒಂದು ಕ್ಷಣವೂ ತಡ ಮಾಡದೆ ಓಡಿ ಹೋಗಿ ಊಟದ ಸಾಲಿನಲ್ಲಿ ಕುಳಿತು ಹೊಟ್ಟೆ ತುಂಬಾ ಉಂಡೆವು...
ಹೋದ ಶಕ್ತಿ ಎಲ್ಲ ಮತ್ತೆ ಮರಳಿತು
ಅಲ್ಲಿಂದ ಪಟ್ಟದ ಮೊಗರಿಗೆ ಬಂದು ರೆಕಾರ್ಡ್ ಮಾಡಿ ರಾತ್ರಿ ಎಂಟು ಒಂಬತ್ತು ಗಂಟೆ ಹೊತ್ತಿಗೆ ಮನೆ ಸೇರಿದ್ದೆವು..

ನಾವು ಹೋದ ಸಮಯದಲ್ಲಿ ಉತ್ಖನನ ನಡೆದ ಕಾರಣ ನಮಗೆ ಅರಮನೆಯ ತಳಪಾಯ ಮತ್ತಿತರ ಪ್ರಾಚ್ಯಾವಶೇಷಗಳು ಸ್ಪಷ್ಟವಾಗಿ ಕಾಣಲು ಸಿಕ್ಕಿತು.ಇಂತಹವು ಕ್ಷೇತ್ರ ಕಾರ್ಯದ ನಡುವೆ ನಮಗೆ ಅಲ್ಲಲ್ಲಿ ಸಿಗುವ ಓಯಸಿಸ್ ಗಳಾಗಿವೆ ‌

ಎಷ್ಟೇ ಸುಸ್ತಾಗಿದ್ದರೂ ನಮ್ಮಲ್ಲಿ ಮತ್ತೆ ನವ ಚೈತನ್ಯವನ್ನು ತುಂಬುತ್ತವೆ 


ಮತ್ತೆ ಬೇಗನೆ ಸ್ನಾನ  ಮಾಡಿ ಟಿಪ್ಪಣಿ ಬರೆದು ನಿದ್ರೆ ಮಾಡಿದೆ ಯಾಕೆಂದರೆ  ಮತ್ತೆ ಮರುದಿನ ಬೆಳಗಿನ ಜಾವ ಉಡುಪಿ ಕುಂದಾಪುರದ ಕಡೆ ನಾಲ್ಕು ದಿನಗಳ  ಕ್ಷೇತ್ರ ಕಾರ್ಯಕ್ಕೆ ಪ್ಲಾನ್ ಹಾಕಿಕೊಂಡಿದ್ದೆ.

( ಕೋಟೆಯ ಬಗ್ಗೆ ಮಾಹಿತಿ 
‌‌‌‌ಕುಂಬಳೆ: ಇತಿಹಾಸ ಪ್ರಸಿದ್ಧ ಕುಂಬಳೆ ಕೋಟೆ ಎಂದೇ ಪ್ರಸಿದ್ಧಿ ಪಡೆದ ಆರಿಕ್ಕಾಡಿ ಕೋಟೆಯಲ್ಲಿ ಪುರಾತನ ಅರಮನೆಯದ್ದು ಎನ್ನಲಾದ ಅವಶೇಷಗಳು ಹಾಗೂ ಕೆಲವೊಂದು ಕುರುಹುಗಳು ಪತ್ತೆ ಯಾಗಿದೆ. ತಾಮ್ರದ ನಾಣ್ಯಗಳು, ಗುಂಡುಗಳನ್ನು ತಯಾರಿಸುವ ಅಚ್ಚುಗಳೂ ಕಂಡು ಬಂದಿವೆ.

ಕೇರಳ ವಿಶ್ವವಿದ್ಯಾಲಯ ಪ್ರಾಚ್ಯ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸತತ 20 ದಿನಗಳ ಕಾಲ ನಡೆಸಿದ ಉತ್ಖನನದ ಫಲವಾಗಿ ಈ ಕುರುಹುಗಳು ಪತ್ತೆಯಾಗಿವೆ. ಇವರು ಕೋಟೆ ಪರಿಸರದಲ್ಲಿದ್ದ ಗುಡ್ಡೆಯ ಮೇಲ್ಭಾಗದ ಮಣ್ಣನ್ನು ಸರಿಸಿದಾಗ ಕೆಲವೊಂದು ಅವಶೇಷಗಳು ಪತ್ತೆ ಯಾಗಿದ್ದು , ಕುತೂಹಲದಿಂದ ವಿದ್ಯಾರ್ಥಿ ಗಳು ಮಣ್ಣನ್ನು ಮತ್ತೂ ಆಳಕ್ಕೆ ಸರಿಸಿ ನೋಡಿದಾಗ ಅರಮನೆಯ ಅವಶೇಷಗಳು ಪತ್ತೆಯಾಗಿದೆ.

30 ಮೀ. ಉದ್ದ ಹಾಗೂ 15 ಮೀ. ಅಗಲ ವಿಸ್ತೀರ್ಣ ಹೊಂದಿರುವ ಅರಮನೆಯ ಅಡಿಪಾಯ ಪತ್ತೆಯಾಗಿದ್ದು, ಒಂದು ರಾಜ ಸಭಾಂಗಣ, ಚರ್ಚಾ ಕೊಠಡಿ, ಚರ್ಚಾ ಕೊಠಡಿಯಲ್ಲಿ ರಾಜರ ಆಸನ, ಮುಖ್ಯಮಂತ್ರಿ ಆಸನವನ್ನು ಪ್ರತ್ಯೇಕವಾಗಿ ಸಜ್ಜೀಕರಿಸಿದ ರೀತಿಯಲ್ಲಿ ಮೂರು ವಿಭಾಗಗಳು ಅರಮನೆಯ ಕಟ್ಟಡದಲ್ಲಿ ನಿರ್ಮಿತವಾಗಿರುವುದು ಕಂಡು ಬಂದಿದೆ. ಸಭಾಂಗಣದ ಒಳಗಿನ ನೆಲಭಾಗವನ್ನು ಕಲ್ಲಿನಿಂದ ಹಾಸಲಾಗಿದೆ ಎಂದು ಕೇರಳ ವಿಶ್ವವಿದ್ಯಾಪೀಠದ ಸಹ ಪ್ರಾಧ್ಯಾಪಕ ಡಾ.ಅಜಿತ್ ಕುಮಾರ್ ಹೇಳಿದ್ದಾರೆ.

ಪ್ರಸ್ತುತ ವಿಶ್ವವಿದ್ಯಾನಿಲಯದ ಪ್ರಾಚ್ಯ ವಸ್ತು ಇತಿಹಾಸ ವಿಭಾಗದ 27 ಮಂದಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಈ ಕೋಟೆಯ ನಿಗೂಢತೆಯನ್ನು ಸಂಶೋಧನೆ ಮೂಲಕ ಬೇಧಿಸಲು ಆಗಮಿಸಿದ್ದ ಹಿನ್ನೆಲೆಯಲ್ಲಿ ಅರಮನೆಯ ಅವಶೇಷಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಅಲ್ಲದೆ ರಾಜರ ಕಾಲದಲ್ಲಿ ಬಳಕೆಯಾಗುತ್ತಿದ್ದ ತಾಮ್ರದ ನಾಣ್ಯಗಳು, ಗುಂಡು ತಯಾರಿಸುವ ಅಚ್ಚು ಪತ್ತೆಯಾಗಿದೆ.

16ನೇ ಶತಮಾನದಲ್ಲಿ ಇಕ್ಕೇರಿ ನಾಯಕರು ಈ ಕೋಟೆಯನ್ನು ನಿರ್ಮಿಸಿದ್ದರೆಂದೂ, ತಳಿಕ್ಕೋಡ್ ಯುದ್ಧದ ನಂತರ ಇಕ್ಕೇರಿ ನಾಯಕರು ತಮ್ಮ ಆಡಳಿತ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಲು ಹಾಗೂ ರಕ್ಷಣಾ ಕವಚವಾಗಿ ಆರಿಕ್ಕಾಡಿಯ ಹೊರತಾಗಿ ಬೇಕಲ ಮತ್ತು ಚಂದ್ರಗಿರಿ ಕೋಟೆಗಳನ್ನು ನಿರ್ಮಿಸಿದ್ದರೆಂದು ಇತಿಹಾಸ ತಿಳಿಸುತ್ತದೆ. ವಿಶ್ವವಿದ್ಯಾಲಯದ ಪ್ರಾಚ್ಯ ವಸ್ತು ಸಂಶೋಧನಾ ವಸ್ತು ಸಂಶೋಧನಾ ವಿಭಾಗದ ಡಾ.ಎ.ಪಿ.ರಾಜೇಶ್ ಮತ್ತು ಡಾ.ಜಿ.ಎಸ್.ಅಭಯನ್ ಸಂಶೋಧನೆಗೆ ನೇತೃತ್ವ ನೀಡಿದ್ದರು.(ವಿಜಯ ಕರ್ನಾಟಕ ವರದಿ)

Category:StoriesProfileImg

Written by Dr Lakshmi G Prasad

Verified