ಥಿಂಕ್ ಪಾಸಿಟಿವ್

ನಮ್ಮ ಅಲೋಚನೆ ಹೇಗಿರಬೇಕು?

ProfileImg
26 Dec '23
5 min read


image

ದೇವರು ಮನುಷ್ಯನಿಗೆ ಮಾತ್ರ  ನೀಡಿರುವ ವರ ಅಂದ್ರೆ ಅದು ಯೋಚಿಸುವ ಸಾಮರ್ಥ್ಯ. ಈ ನಮ್ಮ ಆಲೋಚನೆ ಪಾಸಿಟಿವ್ ಆಗಿದ್ರೆ  ಜೀವನದಲ್ಲಿ ಎಂತ ದೊಡ್ಡ ಕಷ್ಟ ಬಂದರೂ ನಿವಾರಿಸಿಕೊಳ್ಳಬಹುದು.. ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಜಾಸ್ತಿ ಮಾಡ್ಕೊಬಹುದು.., ಜೀವನದಲ್ಲಿ ಯಶಸ್ಸಿನ ಬೆಟ್ಟವನ್ನು ಏರಬಹುದು... ಅಷ್ಟೇ ಅಲ್ಲ ಪಾಸಿಟಿವ್ ಚಿಂತನೆಯಲ್ಲಿ ಎಷ್ಟು ಶಕ್ತಿ ಇದೆ ಅಂದ್ರೆ ಸಾವಿನ ಮನೆ ಬಾಗಿಲು ಬಡಿಯುತ್ತಿರುವ ವ್ಯಕ್ತಿ ಕೂಡ ಪಾಸಿಟಿವ್ ಚಿಂತನೆಯ ಶಕ್ತಿಯಿಂದ ಬದುಕುಳಿಯಬಹುದು. ಇದು  ಪಾಸಿಟಿವ್ ಶಕ್ತಿಯ ನಿಜವಾದ ಪವರ್.‌

ಬದುಕಿನಲ್ಲಿ ನನಗೆ ಇನ್ನು ಏನು ಉಳಿದಿಲ್ಲ ಎಂದು ಆತ್ಮಹತ್ಯೆಯ ಕಡೆ ಮುಖ ಮಾಡಿದ ವ್ಯಕ್ತಿಯೂ ಕೂಡ ಪಾಸಿಟಿವ್ ಚಿಂತನೆಯಿಂದ ಬದುಕಿನ ಕಡೆ ಮುಖ ಮಾಡುವ  ಅರಿವಿನ ಶಕ್ತಿಯ ಪಡೆಯುವುದರಲ್ಲಿ ಯಾವುದೇ ಅನುಮಾನ  ಇಲ್ಲ

ಪಾಸಿಟಿವ್ ಆಲೋಚನೆ ಮತ್ತು ನಂಬಿಕೆ ಎಂಬ ಶಕ್ತಿ ನಮ್ಮ ಮನಸ್ಸಿನಲ್ಲಿ ಅಡಗಿರುವ ಭಯವನ್ನು ನಾಶಮಾಡಿ ಆತ್ಮವಿಶ್ವಾಸವನ್ನು ಜಾಸ್ತಿ ಮಾಡುದರ ಜೊತೆಗೆ ನಮ್ಮನ್ನು ಒತ್ತಡ ಮತ್ತು ಆತಂಕದಿಂದ ದೂರವಿರಿಸುತ್ತೆ. ಆರೋಗ್ಯಕರ ಜೀವನಶೈಲಿ ನಮ್ಮದಾಗುತ್ತೆ. ನನ್ನಿಂದ ಆಗಲ್ಲ ಎನ್ನುವ ಅಪನಂಬಿಕೆಯನ್ನು ಸೋಲಿಸಿ ನಾನು ಸಕ್ಸೆಸ್ ಆಗಿಯೇ ಆಗುತ್ತೇನೆ ಅನ್ನೊ ನಂಬಿಕೆ ಹುಟ್ಟಿಸುತ್ತೆ. ನಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ನಾವು ನಂಬಿಕೆ ಇಟ್ಟಾಗ ನಮ್ಮನ್ನು ಯಾರು ತಡೆಯದ ಮಟ್ಟಕ್ಕೆ ನಾವು ಬೆಳೆಯಲು ಸಾಧ್ಯವಾಗುವಂತೆ ಮಾಡುತ್ತೆ.

ಒಮ್ಮೆ ಒಂದು ಊರಲ್ಲಿ ಬರಗಾಲ ಬಂತಂತೆ. ಆಗ ಸ್ವಾಮೀಜಿ ಒಬ್ರು ಎಲ್ಲರೂ ಸೇರಿ ಮಳೆಗಾಗಿ ಪ್ರಾರ್ಥನೆ ಮಾಡಿ ಅಂದರಂತೆ. ಸರಿ ಅಂತ ಇಡೀ ಊರಿಗೆ ಊರು ಒಂದೆಡೆ ಸೇರಿ ಪ್ರಾರ್ಥನೆ ಮಾಡಲಿಕ್ಕೆ ಶುರು ಮಾಡಿದರಂತೆ. ಅಲ್ಲಿಗೆ ಒಬ್ಬ ಸಣ್ಣ ಹುಡುಗ ಮಾತ್ರ ಛತ್ರಿ ತಗೊಂಡು ಪ್ರಾರ್ಥನೆ ಮಾಡಲಿಕ್ಕೆ ಬಂದಿದ್ದ ಅಂತೆ‌. ಅಂದ್ರೆ ಆ ಹುಡುಗ  ಖಂಡಿತವಾಗಿಯೂ ನಮ್ಮ ಪ್ರಾರ್ಥನೆಯಿಂದ ಇವತ್ತು ಮಳೆ ಬರುತ್ತೆ ಎನ್ನುವ ಧೃಡ ನಂಬಿಕೆ ಇಟ್ಟುಕೊಂಡಿದ್ದ.   ಇವತ್ತು ನಾನು ಹೇಳಲಿಕ್ಕೆ ಹೊರಟಿರುವುದು ಕೂಡ ನಂಬಿಕೆ ಬಗ್ಗೆ... ಯಶಸ್ಸಿನ ಸಾಧನೆಗೆ ನಂಬಿಕೆ ಅತ್ಯಗತ್ಯ.

ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಕಾಣಬೇಕು ಅಂತ ಬಯಸುತ್ತೇವೆ.
ಹಾಗಿದ್ರೆ ಯಶಸ್ಸು ಅಂದ್ರೆ ಏನು.. ಜೀವನದಲ್ಲಿ ದುಡ್ಡು ಮಾಡುವುದನ್ನು ಯಶಸ್ಸು ಎನ್ನಬಹುದಾ? ಅಥವಾ ನಮ್ಮ ಕನಸಿನ ಉದ್ಯೋಗ ಪಡೆಯುವುದು ಯಶಸ್ಸು ಎನ್ನಬಹುದಾ ಅಥವಾ ಅಂದುಕೊಂಡ ಗುರಿ ತಲುಪುವುದನ್ನು ಯಶಸ್ಸು ಎನ್ನಬಹುದಾ? ಹೀಗೆ ಇನ್ನೂ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಆದರೆ ನಿಜವಾದ ಯಶಸ್ಸು ಎಂಬ ಪದದಲ್ಲಿ ಅನೇಕ ಅದ್ಭುತ ವಿಚಾರಗಳು ಅಡಗಿವೆ. ಯಶಸ್ಸು ಅಂದರೆ ಸಮೃದ್ಧಿ...ಸ್ವಂತ ಮನೆ, ರಜಾದಿನಗಳು ಕುಟುಂಬದ   ಆರ್ಥಿಕ ಸ್ಥಿರತೆಯು ಕೂಡ  ಯಶಸ್ಸಿನ ಪ್ರಕಾರಗಳಲ್ಲಿ ಒಂದಾಗಿರುತ್ತೆ.
ಯಶಸ್ಸು ಎಂದ್ರೆ  ನಾಯಕತ್ವ: ವ್ಯಾಪಾರ ವಹಿವಾಟಿನಲ್ಲಿ ಕೈಗೊಳ್ಳುವ ಜಾಣ್ಮೆಯ  ನಡೆಯು ಕೂಡ  ಗೆಲುವಿನ‌ ಆರಂಭಕ್ಕೆ ಮುನ್ನುಡಿ ಬರೆಯುವುದರ ಜೊತೆಗೆ ಒಬ್ಬ ಯಶಸ್ವಿ ವ್ಯಾಪಾರಸ್ಥನಾಗಲು ಕಾರಣವು ಆಗುತ್ತೆ ಮತ್ತು ಸಾಮಾಜಿಕ ಜೀವನದಲ್ಲಿ ನಾವು ಮಾಡುವ ಜನಪರ -ಸಮಾಜಮುಖಿ ಕಾರ್ಯಗಳಿಗೆ  ಜನರಿಂದ ಮೆಚ್ಚುಗೆ ಗಳಿಸುವುದು ಕೂಡ ಯಶಸ್ಸಿನ ಒಂದು ಭಾಗವೇ ಆಗಿರುತ್ತೆ.
ಯಶಸ್ಸು ಎಂದ್ರೆ ಸ್ವಾತಂತ್ರ್ಯ: ಚಿಂತೆಗಳು, ಭಯಗಳು, ಹತಾಶೆಗಳು ಮತ್ತು ವೈಫಲ್ಯಗಳಿಂದ ಸ್ವಾತಂತ್ರ್ಯ ಗಳಿಸುವುದು. ಯಶಸ್ಸು ಎಂದರೆ ಸ್ವಾಭಿಮಾನ. ಜೀವನದಲ್ಲಿ  ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಳ್ಳುವುದು. ನಮ್ಮನ್ನು ಅವಲಂಬಿಸಿರುವವರ ಬೇಕು ಬೇಡಗಳನ್ನು  ಸಾಧ್ಯವಾಗುವಷ್ಟರ ಮಟ್ಟಿಗೆ  ಈಡೇರಿಸುವುದು... ಯಶಸ್ಸು ಎಂದರೆ ಗೆಲುವು...

ಪ್ರತಿದಿನ, ಸಾವಿರಾರು ಯುವಜನರು ಹೊಸ ಹೊಸ ಉದ್ಯೋಗವನ್ನು ಶುರುಮಾಡ್ತಾರೆ. ಮತ್ತು ಪ್ರತಿಯೊಬ್ಬರೂ ಒಂದು ದಿನ ನಾನು ಯಶಸ್ವಿ ಉದ್ಯಮಿಯಾಗಬೇಕು  ಅಂತ ಕನಸು ಕಾಣುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರಿಗೆ ನಂಬಿಕೆಯ ಕೊರತೆಯಿರುತ್ತೆ. 
ಅವರು ನಾನು ಎತ್ತರಕ್ಕೆ ಏರುವುದು ಅಸಾಧ್ಯವೆಂದು ನಂಬಿರುತ್ತಾರೆ ಮತ್ತು ಯಶಸ್ಸಿಗೆ ಕಾರಣವಾಗುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಅವರಿಗೆ ಯಶಸ್ಸನ್ನು 
ಕಾಣುವುದು ಅಸಾಧ್ಯವಾಗುತ್ತೆ. ಇದಕ್ಕೆ ಸಂಬಂಧಿಸಿದಂತೆ ಬದುಕಿಗೆ ತಿರುವು ಕೊಡುವ ಒಂದು  ಉದಾಹರಣೆಯನ್ನು ನಿಮ್ಮ ಮುಂದೆ ಇಡ್ತೆನೆ ಓದಿ.. 

ಯುವತಿಯೊಬ್ಬಳು ಎರಡು ವರ್ಷಗಳ ಹಿಂದೆ ಮೊಬೈಲ್ ಹೋಮ್  ಮಾರಾಟ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸುತ್ತಾಳೆ

ಆಗ ಅವಳ  ಪರಿಚಯಸ್ಥರು ಮತ್ತು ಸ್ನೇಹಿತರು ಅವಳನ್ನು ತಡೆದು ನಿನ್ನಿಂದ ಅದೆಲ್ಲಾ ಸಾಧ್ಯವಾಗಲ್ಲ. ಅದನ್ನೆಲ್ಲಾ ಸುಮ್ಮನೆ  ಪ್ರಯತ್ನಿಸಬೇಡ ಅಂತ ಬುದ್ದಿ ಹೇಳಿದ್ರು. ಅವಳ ಬ್ಯಾಂಕ್ ಖಾತೆಯಲ್ಲೂ ಕಡಿಮೆ ಉಳಿತಾಯ ಇತ್ತು ಮತ್ತು ಅವಳಲ್ಲಿ  ಆ ಬಿಸಿನೆಸ್ ಶುರುಮಾಡಲಿಕ್ಕೆ ಬೇಕಾಗುವಷ್ಟು ಆರಂಭಿಕ ಬಂಡವಾಳ ಕೂಡ ಇರಲಿಲ್ಲ.
ನಿನ್ನ ಬಿಸಿನೆಸ್ ಗೆ ಎಷ್ಟೊಂದು ಸ್ಪರ್ಧಿಗಳಿದ್ದಾರೆ. ಅಲ್ಲದೆ ನಿನಗೆ  ಸಾಮಾನ್ಯ ವ್ಯಾಪಾರದ ಅನುಭವವೇ  ಇಲ್ಲ ಇನ್ನು ಮೊಬೈಲ್ ಹೋಮ್ ವ್ಯಾಪಾರ ಹೇಗೆ ಮಾಡುತ್ತಿ. ಅದೇನು ಅಷ್ಟು ಸುಲಭ ಅಂದುಕೊಂಡಿದ್ದೀಯಾ ಅಂತ  ಅವಳ ಬಂಧುಗಳು ಸ್ನೇಹಿತರು ಸಲಹೆ ನೀಡಿದ್ರು. ಆದರೆ ಆ ಯುವತಿಗೆ ತನ್ನ ಸ್ವಂತ ಸಾಮರ್ಥ್ಯದಿಂದ ನಾನು ಯಶಸ್ಸು ಸಾಧಿಸುತ್ತೇನೆ ಅನ್ನೊ ಧೃಡವಾದ ನಂಬಿಕೆ ಇತ್ತು. ಅವಳ ಸಾಮರ್ಥ್ಯದ ಬಗ್ಗೆ ಅನುಮಾನವಿದ್ದವರಿಗೆ ಅವಳು, ಮೊಬೈಲ್ ಹೋಮ್ ಬಿಸಿನೆಸ್ ಫಾಸ್ಟ್ ಆಗಿ ಡೆವಲಪ್ ಆಗುತ್ತೆ ಎನ್ನುವುದು ನಂಗೆ ಗೊತ್ತಿದೆ. ಈ ಬಗ್ಗೆ ನಾನು ಸ್ಟಡಿ ಮಾಡಿದ್ದೇನೆ, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂಗ್ರಹಿಸಿದ್ದೇನೆ. ಜೊತೆಗೆ ನಾನು  ನನ್ನ ಕಾಂಪಿಟೇಟರ್ ಬಗ್ಗೆಯೂ ಅಧ್ಯಯನ ಮಾಡಿದ್ದೇನೆ. ಈ ನಗರದಲ್ಲಿರುವ ಇತರರಿಗಿಂತ ಚೆನ್ನಾಗಿ ನಾನು ಮಾರಾಟ ಮಾಡಬಲ್ಲೆ.ಈ ಬಿಸಿನೆಸ್ ತುಂಬಾ ಸ್ಪರ್ಧಾತ್ಮಕವಾಗಿದೆ ಮತ್ತು ನನ್ನಲ್ಲಿ ಅನುಭವದ ಕೊರತೆಯಿದೆ  ಎನ್ನುವುದು ಸತ್ಯ, ಆದರೆ ಆದಷ್ಟು ಬೇಗ ನಾನು ಯಶಸ್ಸು ಸಾಧಿಸುತ್ತೇನೆ  ಅಂತ ಉತ್ತರಿಸಿದಳು.

ತನ್ನ ಉದ್ಯಮದಲ್ಲಿ ಹೇಗೆ ಯಶಸ್ಸು ಸಾಧಿಸುತ್ತೇನೆ ಅಂತ ಇಬ್ಬರು ಹೂಡಿಕೆದಾರರಿಗೆ ಮನವರಿಕೆ ಮಾಡಿದಳು. ಸಂಪೂರ್ಣ ನಂಬಿಕೆಯೊಂದಿಗೆ ಸಿದ್ಧತೆ ನಡೆಸಿದ ಅವಳು ಅಸಾಧ್ಯವಾದುದನ್ನು ಮಾಡಿ ತೋರಿಸಿದಳು. ಕಳೆದ ವರ್ಷ ಅವಳು 10 ಲಕ್ಷ ಡಾಲರ್ ಮೌಲ್ಯದ ಮೊಬೈಲ್ ಹೋಮ್ ಮಾರಾಟ ಮಾಡಿದಳು. ಮುಂದಿನ ವರ್ಷ  ಸುಮಾರು 20 ಲಕ್ಷ ಡಾಲರ್ ಕ್ಕಿಂತ ಹೆಚ್ಚಿನ ಲಾಭದ  ನಿರೀಕ್ಷೆ ಇಟ್ಟುಕೊಂಡಿದ್ದಾಳೆ.

ನಂಬಿಕೆ ಎನ್ನುವುದು ಅತ್ಯಂತ ಬಲವಾಗಿದ್ದಾಗ  ಗುರಿಯನ್ನು ಸಾಧಿಸಲು ವಿವಿಧ ಮಾರ್ಗಗಳು ಮತ್ತು ವಿಧಾನಗಳನ್ನು ಹುಡುಕಲು ನಮ್ಮ ಮನಸ್ಸನ್ನು ಒತ್ತಾಯಿಸುತ್ತೆ. ಇದಲ್ಲದೆ, ನೀವು ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ಇತರರು ನಿಮ್ಮ ಮೇಲೆ ವಿಶ್ವಾಸ ಇಡುವಂತೆ ಮಾಡುತ್ತೆ.
ಸಾಧನೆ ಮಾಡಬೇಕು ಎನ್ನುವವರಿಗೆ ಈ ಯುವತಿಯ ಯಶೋಗಾಥೆ ನಿಜವಾಗಿಯೂ ಪ್ರೇರಣೆ ನೀಡುವಂತಿದೆ

ಬಿತ್ತಿದಂತೆ ಬೆಳೆ ಅನ್ನೊ ಮಾತೊಂದಿದೆ. ಇದರರ್ಥ ನಾವು ಯಾವ ರೀತಿ ಬೀಜವನ್ನು ಬಿತ್ತುತ್ತೇವೆ ಅದೇ ರೀತಿಯ ಫಲವನ್ನು ಪಡೆಯುತ್ತೇವೆ. ಬಿತ್ತುವ ಬೀಜಗಳು ಜೊಳ್ಳಾಗಿದ್ದರೆ, ಫಲ ಕೂಡ ಜೊಳ್ಳಾಗೇ ಇರುತ್ತೆ.ಅದೇ ಬಿತ್ತುವ ಬೀಜಗಳು ಫಲವತ್ತಾಗಿದ್ದರೆ, ಫಲವೂ ಫಲವತ್ತಾಗೇ ಇರುತ್ತದೆ. ಹಾಗೆಯೇ ನಾವು ಯಶಸ್ಸು ಕಾಣುತ್ತೇವೆ ಎಂಬ ಧೃಡ ನಂಬಿಕೆಯಲ್ಲಿದ್ದರೆ  ಅದು ಖಂಡಿತವಾಗಿ ಕಾರ್ಯರೂಪಕ್ಕೆ ಬರುತ್ತೆ. ಅಸಾಧ್ಯ ಎನ್ನುವುದೇ ಇಲ್ಲ ಅಂತ ನಂಬಿರುವ ಜನರ ನಂಬಿಕೆಗಳು ಎಷ್ಟು ಬಲವಾಗಿರುತ್ತೆ ಅನ್ನೊದಕ್ಕೆ ಈ ಕೆಳಗಿನ ಘಟನೆ ಒಂದು ಒಳ್ಳೆಯ ಉದಾಹರಣೆ..

ಹೆದ್ದಾರಿ ನಿರ್ಮಾಣ ಕಾರ್ಯಕ್ರಮದ ಸಲುವಾಗಿ ಸೇತುವೆಗಳನ್ನು ವಿನ್ಯಾಸಗೊಳಿಸಲು ರಾಜ್ಯ ಹೆದ್ದಾರಿ ಇಲಾಖೆ ಕೆಲವು ಕಂಪನಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಈ ಬಗ್ಗೆ ಹಲವು ಇಂಜಿನಿಯರಿಂಗ್ ಕಂಪನಿಗಳಿಗೆ  ಮಾಹಿತಿ ನೀಡಿತ್ತು. ಈ ಯೋಜನೆಯು 50,00,000 ಡಾಲರ್‌ಗಳ ಒಟ್ಟು ವೆಚ್ಚದೊಂದಿಗೆ ಎಂಟು ಸೇತುವೆಗಳ ನಿರ್ಮಾಣವನ್ನು ಒಳಗೊಂಡಿತ್ತು.  ಆಯ್ಕೆಯಾದ ಇಂಜಿನಿಯರಿಂಗ್ ಕಂಪನಿ ಅದರ ವಿನ್ಯಾಸಗಳ ಅಭಿವೃದ್ಧಿಗಾಗಿ ಒಟ್ಟು ವೆಚ್ಚದ 4 % ಕಮಿಷನ್ ಅಥವಾ 2,00,000ಡಾಲರ್ ‌ ಪಡೆಯುತ್ತಿತ್ತು..

ಯೋಜನೆಯ ಬಗ್ಗೆ ಮಾಹಿತಿಯನ್ನು 21 ಇಂಜಿನಿಯರಿಂಗ್ ಕಂಪನಿಗಳು  ಸ್ವೀಕರಿಸಿದವು. ಅವುಗಳಲ್ಲಿ ನಾಲ್ಕು, ದೊಡ್ಡ ಕಂಪನಿಗಳು ತಕ್ಷಣವೇ  ಭಾಗವಹಿಸಲು ಒಪ್ಪಿಕೊಂಡವು. ಉಳಿದ 17 ರಲ್ಲಿ 3 ರಿಂದ 7 ಎಂಜಿನಿಯರ್‌ಗಳನ್ನು ಒಳಗೊಂಡಿರುವ 16 ಕಂಪನಿಗಳು  ಇದು ನಮಗೆ ತುಂಬಾ ದೊಡ್ಡ ಕೆಲಸವಾಗಿದೆ. ನಮ್ಮಿಂದ ಸಾಧ್ಯವಿಲ್ಲ ಅಂತ ನಿರಾಕರಿಸಿದರು.
ಯೋಜನೆಯನ್ನು ಅಧ್ಯಯನ ಮಾಡಿದ ನಂತರ ಕೇವಲ ಮೂರು ಎಂಜಿನಿಯರ್‌ಗಳನ್ನು ಒಳಗೊಂಡಿರುವ ಒಂದು ಕಂಪನಿ ಮಾತ್ರ ನಾವು ಈ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಪ್ರಸ್ತಾವನೆಯನ್ನು ಸಲ್ಲಿಸಿದ್ರು. ಅವರು ಆ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ರು. ಅಸಾಧ್ಯ ಎಂಬುವುದೇ ಇಲ್ಲ ಅಂತ ನಂಬಿರುವವರಿಗೆ ಆಗುವುದಿಲ್ಲ ಎನ್ನುವುದೇ ಇರುವುದಿಲ್ಲ.ನಮ್ಮಿಂದ ಸಾಧ್ಯವಿಲ್ಲ ಎಂದೇ ನಂಬಿರುವವರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಂಬಿಕೆಯು ಅಸಾಧ್ಯವಾದುದ್ದನ್ನು ಮಾಡುವ ಶಕ್ತಿಯನ್ನು ಪ್ರಚೋದಿಸುತ್ತೆ.

ಅದರಲ್ಲೂ ಇಂದಿನ ಆಧುನಿಕ ಕಾಲದಲ್ಲಿ ನಂಬಿಕೆಯು ಅಸಾಧ್ಯವಾದುದ್ದನ್ನೇ ಮಾಡಿ ತೋರಿಸುತ್ತಿದೆ. ಮನುಷ್ಯನು ಬಾಹ್ಯಾಕಾಶದಲ್ಲಿ ಪ್ರಯಣಿಸಬಲ್ಲ ಎಂಬ ದೃಢವಾದ, ಅಚಲವಾದ ನಂಬಿಕೆಯಿಲ್ಲದಿರುತ್ತಿದ್ರೆ, ನಮ್ಮ ವಿಜ್ಞಾನಿಗಳಿಗೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಮುಂದುವರಿಯಲು ಧೈರ್ಯ, ಆಸಕ್ತಿ ಮತ್ತು ಉತ್ಸಾಹ ಇರುತ್ತಿರಲಿಲ್ಲ. ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂಬ ನಂಬಿಕೆಯೆ ಇರದಿರುತ್ತಿದ್ರೆ  ಕ್ಯಾನ್ಸರ್ ಚಿಕಿತ್ಸೆಗೆ  ಹೊಸ ಔಷಧಗಳು ಮತ್ತು ಚಿಕಿತ್ಸೆಗಳು ಅಭಿವೃದ್ಧಿ ಆಗುತ್ತಿರಲಿಲ್ಲ.

ಪ್ರತಿಯೊಂದು ಶ್ರೇಷ್ಠ ಪುಸ್ತಕ, ಕಲಾಕೃತಿ, ವೈಜ್ಞಾನಿಕ ಆವಿಷ್ಕಾರ, ಮಹಾನ್ ಸಾಧನೆಗಳು, ಶ್ರೇಷ್ಠ ಸಾಧನೆಗಳ ಹಿಂದೆ ನಂಬಿಕೆ ಇರುತ್ತದೆ. ಯಾವುದೇ ಯಶಸ್ವಿ ಸಂಸ್ಥೆಯಾಗಿರಲಿ, ವ್ಯಾಪಾರವಾಗಿರಲಿ, ಸಾಮಾಜಿಕವಾಗಿರಲಿ ಅಥವಾ ರಾಜಕೀಯವಾಗಿರಲಿ ಅದರ ಹಿಂದಿರುವ ಯಶಸ್ಸಿನ ಗುಟ್ಟು ನಂಬಿಕೆ. ಎಲ್ಲಾ ಯಶಸ್ವಿ ಜನರು ಒಂದೇ ಒಂದು ವಿಷಯದಿಂದ ಒಂದಾಗುತ್ತಾರೆ. ಅದುವೇ ಅವರು ಯಶಸ್ಸಿನಲ್ಲಿ ಇಟ್ಟಿರುವ ನಂಬಿಕೆ. ಇದು ಯಶಸ್ಸಿಗೆ ಸಂಪೂರ್ಣವಾಗಿ ಅಗತ್ಯವಾದ ಅಂಶವಾಗಿದೆ.
ನೀವು ಮಾಡುವ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ ಅಂತ ನೀವು ಧೃಡವಾಗಿ ನಂಬಿದಾಗ ಯಶಸ್ಸನ್ನು ಕಾಣುತ್ತೀರಿ. 
ವ್ಯಾಪಾರ ಉದ್ಯಮಗಳಲ್ಲಿ ಮತ್ತು ವಿವಿಧ ವೃತ್ತಿಗಳಲ್ಲಿ ವಿಫಲರಾದ ಜನರ ಜೊತೆ ಸಂಭಾಷಣೆ ನಡೆಸುವಾಗ ಅವರು ಸೋಲಿಗೆ ಸಾಕಷ್ಟು ಕಾರಣ ನೀಡುವುದು, ನಮ್ಮಿಂದ ತಪ್ಪಾಯಿತು ಎನ್ನುವುದನ್ನು ಗಮನಿಸಬಹುದು. 
ಆ ಕೆಲಸ ಆಗುತ್ತೆ ಅಂತ ನಾ ಭಾವಿಸಿರಲಿಲ್ಲ ಅಥವಾ ಅದನ್ನು ಶುರು ಮಾಡುವ ಮೊದಲೇ ನಂಗೆ ಅದರ ಬಗ್ಗೆ ಅನುಮಾನ ಇತ್ತು.  ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಅಂದಾಗ  ನನಗೆ ಅಂತಹ ಆಶ್ಚರ್ಯ ಆಗಲಿಲ್ಲ ಎಂದೆಲ್ಲಾ ಅವರ ಮಾತುಗಳಿರುತ್ತೆ.  
ಆಯಿತು ನಾನು ಇದನ್ನು ಪ್ರಯತ್ನಿಸುತ್ತೇನೆ ಆದರೆ ಇದು ಕೆಲಸ ಮಾಡುತ್ತದೆ ಅಂತ ನನಗನಿಸಲ್ಲ ಎಂಬ ಮನೋಭಾವವು ಸೋಲುಗಳನ್ನು ಅಥವಾ ವೈಫಲ್ಯಗಳನ್ನು ಉಂಟುಮಾಡುತ್ತೆ.

ಅಪನಂಬಿಕೆ ಎನ್ನುವುದು ಸಹ ಒಂದು ಶಕ್ತಿಯೇ.. ಆದರೆ ಅದು ಪ್ರತಿಕೂಲ ಅಥವಾ ನೆಗೆಟಿವ್ ಶಕ್ತಿ. ಮನಸ್ಸು ನಂಬದಿದ್ದಾಗ ಅಥವಾ ಅನುಮಾನಿಸಿದಾಗ, ಅದು ಅಪನಂಬಿಕೆಯನ್ನು ಬೆಂಬಲಿಸಲು ಎಲ್ಲಾ ರೀತಿಯ ವಾದ ಮತ್ತು ಕಾರಣಗಳನ್ನು ಆಕರ್ಷಿಸುತ್ತೆ. ಅನುಮಾನ, ಅಪನಂಬಿಕೆ, ವಿಫಲಗೊಳ್ಳುವ ಭಯ, ಯಶಸ್ವಿಯಾಗಲು ಬಯಸದಿರುವುದು ಬಹುಪಾಲು ಸೋಲುಗಳಿಗೆ ಕಾರಣವಾಗುತ್ತೆ.

ಸೋತವರಂತೆ ಯೋಚಿಸಿದಾಗ  ನಾವು ಸೋಲುತ್ತಾ ಹೋಗುತ್ತೇವೆ. ಗೆದ್ದವರಂತೆ ಯೋಚಿಸಿದಾಗ ನಾವು ಗೆಲುತ್ತಾ ‌ ಹೋಗುತ್ತೇವೆ..
ಅನುಮಾನ, ಅಪನಂಬಿಕೆ, ಸೋಲುವ ಭಯ ನಮ್ಮ ಬಹುಪಾಲು ವೈಫಲ್ಯಗಳಿಗೆ ಕಾರಣ.

 

 

Category:Personal Development



ProfileImg

Written by Shwetha Hegde