ಹೊಂದಿಸಿ ಬರೆಯಿರಿ
ಬಿಟ್ಟ ಸ್ಥಳ ತುಂಬಿಸಿರಿ
ಪ್ರಶ್ನೆಗಳಿಗೆ ಉತ್ತರಿಸಿರಿ
ಉಫ್ ಆಗೆಲ್ಲಾ
ಇವೆಷ್ಟು ಕಷ್ಟ ಅವಳಿಗೆ
ಯಾವುದಕ್ಕೆ ಯಾವುದನ್ನು
ಹೊಂದಿಸಬೇಕೆಂದು ತಿಳಿಯದೆ ಕಂಗಾಲಾಗುತ್ತಿದ್ದಳವಳು
ಬಿಟ್ಟ ಸ್ಥಳದಲ್ಲಿ ಅದರ ಉತ್ತರವ
ಇದಕೆ ತುಂಬಿಸಿ ಇದರ ಉತ್ತರವ
ಇನ್ನಾವುದಕೋ ತುಂಬಿಸುತ್ತಿದ್ದಳು
ಪ್ರಶ್ನೆಗಳಿಗೆ ಉತ್ತರವೇ ತೋಚದೆ
ಹಾಗೇ ಖಾಲಿ ಜಾಗ ಬಿಡುತ್ತಿದ್ದಳವಳು
ಇನ್ನು ಗಣಿತದಲ್ಲೋ
ಕೂಡಿಸೆಂದರೆ ಕಳೆಯುತ್ತಿದ್ದಳು
ಕಳೆ ಎಂದರೆ ಗುಣಿಸುತ್ತಿದ್ದಳು
ಗುಣಿಸೆಂದರೆ ಭಾಗಿಸುತ್ತಿದ್ದಳು
ಭಾಗಿಸೆಂದರೆ ಕೂಡಿಸುತ್ತಿದ್ದಳು
ಇತಿಹಾಸವೆಂದರೆ ಇಸವಿಗಳ ಮರೆಯುತ್ತಿದ್ದಳು
ಭೂಗೋಳವೆಂದರೆ ಭಯಗೊಳ್ಳುತ್ತಿದ್ದಳು
ಪೌರನೀತಿ ಎಂದರೆ ಹೊರನಡೆಯುತ್ತಿದ್ದಳು
ಆದರೆ ಈಗ ಮನೆಯ ಸಾಮಾನುಗಳು
ಎಲ್ಲೆಲ್ಲಿ ಏನೇನಿವೆ ಎಂದು ಕಣ್ಣುಮುಚ್ಚಿ ಹೇಳಬಲ್ಲಳು
ಯಾರು ಏನೇ ಪ್ರಶ್ನಿಸಿದರೂ ತಾಳ್ಮೆಯಿಂದ ಉತ್ತರಿಸಬಲ್ಲಳು ಮಗನ ಗಣಿತ
ತಪ್ಪಾದರೆ ಸರಿಪಡಿಸಬಲ್ಲಳು
ಮನೆಯವರೆಲ್ಲರ ಜನುಮ ದಿನಾಂಕವ ತಾನೇ ನೆನಪಿಸಿ
ಸಿಹಿಯ ಹಂಚುವಳು
ಮನೆಯ ತುಂಬಾ ಗೆಜ್ಜೆನಾದ ತುಂಬಿ
ಎಲ್ಲರ ಮನವ ಮುದಗೊಳಿಸುವಳು
ರಚನೆ:- ತಿಲಕಾ ನಾಗರಾಜ್ ಹಿರಿಯಡಕ
ಹಲವು ಹಂಬಲಗಳುಳ್ಳವಳು....
0 Followers
0 Following