ಕವನ

ಹೋರಾಟದ ಬದುಕು

ProfileImg
11 May '24
1 min read


image

ಹೋರಾಟದ ಬದುಕು

 

ಒಮ್ಮೆ ಹುಟ್ಟಿದ ತಪ್ಪಿಗೆ
ನಾ ದಿನಾಲೂ ಸಾಯುತ್ತೇನೆ
ಹೋರಾಟದ ಬದುಕಿನ ಬೆನ್ನತ್ತಿ !!

ಕ್ರೂರ ಬೇಟೆಗಾರನಂತೆ ಪರಾಕ್ರಮ ಮೆರೆದು
ಅಸಹಾಯಕ ಬೇಟೆಯ
ಕೊನೆ ಕ್ಷಣದ ಆ ಹೋರಾಟದಲಿ,
ಒಮ್ಮೊಮ್ಮೆ ದೀರ್ಘ ಉಸಿರಿನಲಿ,
ಉದುರುವ ಅದರ ಕಣ್ಣೀರ ಹನಿಗಳಲಿ
ನನ್ನ ಸಾವಿನ ಪ್ರತಿಬಿಂಬವ ನೋಡಿ
ಬೆವರುತ್ತೇನೆ, ಹೇಡಿಯ ಹಾಗೆ !
ಅದರ ನೆತ್ತರದಲ್ಲೂ
ತೇಲಿ ಬರುವ ಕೆಂಪು ಕ್ರಾಂತಿಯನು ಕಂಡು !!
 

ಶೂನ್ಯದಲಿ ಕಟ್ಟಿದ ಹಮ್ಮಿನ ಸಾಮ್ರಾಜ್ಯದ
ಚಕ್ರವರ್ತಿಯಾಗಿರ ಬೇಕೆಂಬ ಜಿದ್ದಿಗೆ ,
ಸುತ್ತು ಕೋಟೆಗಳನು ಭದ್ರಪಡಿಸುತ್ತೇನೆ
ಮತ್ತೆ , ವೈರಿಗಳ ದಾಳಿಗೆ ಹೆದರಿ
ಕಲ್ಲು ಗೋಡೆಗಳ ಮಧ್ಯೆ ಬದುಕುತ್ತೇನೆ
ಗುಲಾಮನ ಹಾಗೆ ಬಂದಿಯಾಗಿ !

ಗಿರಿ ಶಿಖರಕೆ ಮುಗಿಲ ಚುಂಬನ
ಧರೆಗಿಳಿದರೆ ಸಾಕು
ಕುಸಿಯುತ್ತೇನೆ ಪಾತಾಳಕ್ಕೆ ಅಂತರ್ಜಲವಾಗಿ
ಎಂದೂ ಭೇದಿಸಲಾಗದ ನಿಗೂಡ ತಾಣ
ಸದಾ ಹಚ್ಚಸಿರ ಕಾನನ
ಅದರೊಳಗಿನಿಂದಲೇ ಹಬ್ಬಿದ ಕಾಳ್ಗಿಚ್ಚಿಗೆ
ಬಟಾಬಯಲಾದ ಈ ಬದುಕು
ಬಟ್ಟೆ ಹಾಕಿಕೊಂಡಿರುವ ಸುಸಂಸ್ಕೃತ ಸಮಾಜದಲಿ
ನಾನೊಬ್ಬ ಮಾತ್ರ ,
ದಿಗಂಬರ ಮುನಿಯಂತೆ ಅಲೆಯುವ ಅನುಭವ ನನಗೆ !
      * * *
ಶಕೀಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ. 

Category:PoetryProfileImg

Written by Shakeel Ustad