ಮೊಸರು ಮಾರುವ ಹುಡುಗಿ
ಹೂ ಮಾರುವವನಿಗೆ
ಅದೆಂತಹ ? ಕೋಪವೋ ,
ಶಹರ ಸುತ್ತಿ
ಬಯಲು ಸೀಮೆಯ ಬಿಸಿಲಿನಲಿ
ಮೊಸರು ಮಾರುವ ಆ ಹುಡುಗಿಯ ಮೇಲೆ !
ಧಾವಂತವೇತಕೆ ? ಎಂದು ಗದರಿಸಿ
ಖಡ್ಗದಂತಹ ತನ್ನ ಕಡಕ್ ಮಾತುಗಳಿಂದ
ಚುಚ್ಚುತ್ತಿರುವನು , ಅವಳೆದೆಗೆ !!
ಸಂಜೆಯಾಗದೊರಳಗೆ ಹಳ್ಳಿ-ಮನೆ ಸೇರಲು ಹಂಬಲಿಸುವ
ಆ ಕೋಮಲೆಗೆ !
* * *
ಬಯಲು ಸೀಮೆಯ ಬವಣೆ ನೀಗಿಸಲು
ಶಹರಗೆ ಬಂದವರಿಗೆ ಮರಳಿ ಕರೆದೊಯ್ಯಲೆಂದೇ
ಡಾಂಬರ್ ಕಾಣದ ರೋಡಿಗಿಳಿದ ಕಿಕ್ಕಿರಿದು ಜನ ತುಂಬಿದ ಟಾಟಾ-ಏಸ್ !
ಶಹರಿ ನಿಂದ ಮತ್ತೆ ಹಳ್ಳಿಕಡೆಗೆ ಅದರ ಪಯಣ,
ರಸ್ತೆಯ ಧೂಳಿಗೆ ಮಂಜಾದ ಗಾಡಿಯ ಗಾಜುಗಳನು ಒರಸುತ
ಹೊರಡಲಿರುವೆ ಎಂದು ಕೈ ಸನ್ನೆಯನ್ನು ಮಾಡಿ
ಒಂದೇ ಊರಿನ ಹೆಸರನು
ನಾಲ್ಕೈದು ಸಲ ಒದರುತ್ತಿರುವನು ಅದರ ಚಾಲಕ
ಇನ್ನಾರಾದರೂ ಬರುವರೆಂಬ ನಿರೀಕ್ಷೆಯಲಿ...
ಎಲ್ಲಿ ಗಾಡಿ ತಪ್ಪುತ್ತೋ ? ಎಂಬ ಆತಂಕದಲಿ ,
ಅಪ್ಪನ ಅಸಹಾಯಕತೆಗೆ ನೊಗಭಾರ ಹೊತ್ತೂ
ಬಿಸಿಲಿನ ತಾಪಕೆ ಬಳಲದ ಕೋಮಲೆಯ ಬರಿಗಾಲುಗಳು ,
ಕುಣಿಯುತ್ತಿರುವವು ಗರಿಗೆದರಿದ ನವಿಲಿನ ಹಾಗೆ
ಥಕ-ಥೈ , ಥಕ-ಥೈ !!
ಉಸಿರು ಬಿಡದೆ ಒದರುವ ಆ ಚಾಲಕನ ರಾಗಕೆ !
* * *
ಹೂ ಕೊಳ್ಳಲೆಂದು ಈಗ ತಾನೇ ಬಂದಿಳಿದ
ಸೂಟು-ಬೂಟಿನ ಗಿರಾಕಿಯ ಉದ್ದ ಕಾರಿನಲಿ ,
ಜೊಲ್ಲು ಸುರಿಸುವ ಹೈಬ್ರಿಡ್ ನಾಯಿ
ಮುಂದಿನ ಸೀಟಿನಲಿ ;
ತೊಡೆ ಸಡಿಲಾಗಲೆಂದು
ಒಂದು ರೂಪಾಯಿ ಬ್ಲೇಡಿನಿಂದ ಮೊಣಕಾಲಿನವರೆಗೆ
ಹರಿದು ಚಿಂದಿ ಮಾಡಿದ ಬ್ರಾಂಡೆಡ್ ಜೀನ್ಸ ತೊಟ್ಟ ಬೆಡಗಿವಿರುವಳು ಹಿಂಬದಿಯ ಸೀಟಿನಲಿ !!
ಸಾಕಿದ ನಾಯಿ ಕಚ್ಚಿದ ನಂಜಿಗೆ ತೀರಿದ ಧನಿಕ ಗೆಳೆಯನ
ಶವಪೆಟ್ಟಿಗೆಯ ಅಲಂಕಾರಕೆ ,
ಹೂ ಕಟ್ಟಲು ಆರ್ಡರ್ ಮಾಡಿದ
ಧರಿಸಿದ ಕಪ್ಪು ಕನ್ನಡಕವನು ತನ್ನ ನೇರ-ಮೂಗಿನ ಹಿಂದೆ ಸರಿಸಿ ,
ಉರಿಯುವ ಸಿಗಾರ್ ಹೊಗೆಯಾಡುತ್ತಿತ್ತು
ಅವನ ಎಡಗೈಯ ಬೆರಳ ತುದಿಗಳಲಿ !!
* * *
ಕಂಕುಳ ಬೆವರಿನ , ಕಲರ್- ಕಲರ್ ಗುಂಡಿಗಳ ;
ತೇಪೆ ಹಚ್ಚಿದ , ಹರಿದ ತೋಳುಗಳ ಕುಪ್ಪಸ ಧರಿಸಿದ
ಚಿಲ್ಲರೆ ಹಿಡಿದ ,
ಆ ಬಡಪಾಯಿ ಶ್ರಮಜೀವಿಯ ಕೈಗಳನು ನೋಡಿ
ಹೂ ಮಾರುವವನಿಗೆ ....
ಥೇssssಟು, ಭಿಕ್ಷುಕಿಯಂತೆಯೇ ಕಂಡಿರ ಬೇಕು
ಖರಿದಿಸಲೆಂದು ಕೆಂಗುಲಾಬಿಯನು ಕೈಯಲಿ ಹಿಡಿದವಳು !!
ಕೆಂಗುಲಾಬಿ ಹಿಡಿದವಳ
ಕೋಮಲ ಕೈಗಳನೂ ಲೆಕ್ಕಿಸದೆ,
ಅವಳಿಂದ ಆ ಹೂವುಗಳನು ಕಸಿದುಕೊಂಡ ಹೂಗಾರ ,
ಸಾಹೇಬರ ಶವಪೆಟ್ಟಿಗೆಯ ಆರ್ಡರ್ ಗೆ ಕಡಿಮೆ ಬೀಳುವವು
ಕೆಂಗುಲಾಬಿಯೆಂದು
ಶ್ವೇತ ಗುಲಾಬಿಯನು ಇವಳ ಕೈಗಿಟ್ಟು !!
ಒರಟು ನಾಲಿಗೆ ಹೃದಯಕೆ ,
ವಕ್ರ ಮುಳ್ಳುಗಳು ಕೋಮಲ ಕೈಗಳಿಗೆ ನಾಟಿ
ಹರಿದ ನೆತ್ತರದಲಿ ಮುಳುಗಿ ಕೈಗಿಟ್ಟ ಶ್ವೇತ ಗುಲಾಬಿ ಕೆಂಪಾಗಿತ್ತು
ಆ ದರಿದ್ರದವಳು
ಸದಾ ಬಯಸುವ ಕೆಂಗುಲಾಬಿಯಂತೆ !!
* * * * *
ಶಕಿಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ