ಗ್ರಹಗಳ ಉಂಗುರ

ಶಾಶ್ವತ ಅಲಂಕಾರವೇ ಅಥವಾ ಕ್ಷಣಭಂಗುರ ಚೆಲುವೇ?

ProfileImg
27 Mar '24
4 min read


image

      ನೀವು ಎಂದಾದರೂ ಶನಿಗ್ರಹವನ್ನು ದೂರದರ್ಶಕದಿಂದ ನೋಡಿದ್ದೀರಾ? ಕೆಲವರು ನೋಡಿರಬಹುದು ಅಥವಾ ನೋಡಿಲ್ಲದಿದ್ದರೂ ಚಿತ್ರಗಳಲ್ಲಂತೂ ಖಂಡಿತ ನೋಡಿರುತ್ತೀರಿ. ಶನಿಯ ಚಿತ್ರಗಳನ್ನು ನೋಡಿದವರು ಯಾರೂ ಅದರ ಸುಂದರವಾದ ಉಂಗುರಗಳ ವ್ಯೂಹವನ್ನು ಮರೆಯಲಾರರು. ನಮ್ಮ ಇಡೀ ಸೌರವ್ಯೂಹದಲ್ಲಿ ಶನಿ ಅತ್ಯಂತ ಸುಂದರವಾದ ಗ್ರಹವೆಂದು ಹೆಸರಾಗಿರುವುದು ಅದರ ಮನಮೋಹಕ ಉಂಗುರಗಳ ವ್ಯವಸ್ಥೆಯಿಂದ.

       ಶನಿಗ್ರಹದ ಉಂಗುರಗಳ ಇತಿಹಾಸ ತುಂಬಾ ಪ್ರಾಚೀನವಾದದ್ದು. ಶನಿ ನಮಗೆ ಬರಿಗಣ್ಣಿಗೇ ಗೋಚರವಾಗುವ ಗ್ರಹ. ಬೇರೆ ಗ್ರಹಗಳಿಗೆ ಹೋಲಿಸಿದರೆ ಶನಿಯ ಪ್ರಕಾಶ ಕಡಿಮೆ ಎಂಬುದು ನಿಜವೇ ಆದರೂ ಅದನ್ನು ನೋಡಲು ಹೆಚ್ಚೇನೂ ಕಷ್ಟಪಡಬೇಕಿಲ್ಲ. ಆದರೆ ಬರಿಗಣ್ಣಿಗೆ ಇದಕ್ಕೂ ಬೇರೆ ಗ್ರಹಗಳಿಗೂ ಪ್ರಕಾಶವೊಂದನ್ನು ಬಿಟ್ಟರೆ ಬೇರೆ ವ್ಯತ್ಯಾಸವೇನೂ ಕಾಣುವುದಿಲ್ಲ. ಮೊದಲಬಾರಿಗೆ ಇದನ್ನು ದೂರದರ್ಶಕದ ಮೂಲಕ ನೋಡಿದ್ದು ಗೆಲಿಲಿಯೋ. ಆತ ೧೬೧೦ರಷ್ಟು ಹಿಂದೆಯೇ ತಾನೇ ತಯಾರಿಸಿದ್ದ ಚಿಕ್ಕ ದೂರದರ್ಶಕದಿಂದ ಆಗಸದತ್ತ ದೃಷ್ಟಿ ಹಾಯಿಸಿದ. ಗುರುಗ್ರಹವನ್ನು ನೋಡಿ ಅದರ ಉಪಗ್ರಹಗಳನ್ನು ಮೊದಲಬಾರಿಗೆ ಪತ್ತೆಹಚ್ಚಿದ್ದ. ಶನಿಯನ್ನು ನೋಡಿದಾಗ ಅವನು ವಿಚಿತ್ರವೊಂದನ್ನು ಕಂಡ. ಶನಿಯ ಎರಡೂ ಬದಿಗಳಲ್ಲಿ ಉಬ್ಬುಗಳಿರುವುದು ಅವನ ಗಮನಕ್ಕೆ ಬಂದಿತು. ಅದೇನೆಂದು ಅವನ ಸಣ್ಣ ದೂರದರ್ಶಕದಿಂದ ಸರಿಯಾಗಿ ಗೊತ್ತಾಗಲಿಲ್ಲ. ಅವನು ಅದನ್ನು ಶನಿಯ ಉಪಗ್ರಹಗಳಿರಬೇಕೆಂದು ಭಾವಿಸಿದ. ಮುಂದೆ ೧೬೫೫ರಲ್ಲಿ ಡಚ್ ವಿಜ್ಞಾನಿ ಕ್ರಿಶ್ಚಿಯನ್ ಹೈಗೆನ್ಸ್ ತನ್ನ ದೊಡ್ಡ ದೂರದರ್ಶಕದಿಂದ ಶನಿಯನ್ನು ಇನ್ನಷ್ಟು ವಿವರವಾಗಿ ನೋಡಿದಮೇಲಷ್ಟೇ ಆ ಉಬ್ಬುಗಳು ಶನಿಗ್ರಹವನ್ನು ಎಲ್ಲೂ ಸ್ಪರ್ಶಿಸದೆ ಸುತ್ತುವರೆದು ನಿಂತಿರುವ ಉಂಗುರಗಳು ಎಂಬ ಅಂಶ ಗಮನಕ್ಕೆ ಬಂದಿದ್ದು.

       ಇದಾದ ಕೆಲವು ವರ್ಷಗಳ ಬಳಿಕ ಇನ್ನೊಬ್ಬ ವಿಜ್ಞಾನಿ ಜೀನ್ ಡಾಮಿನಿಕ್ ಕ್ಯಾಸಿನಿ ಶನಿಯನ್ನು ಇನ್ನಷ್ಟು ವಿವರವಾಗಿ ಅಧ್ಯಯನ ಮಾಡಿದ. ಅವನ ಬಳಿ ಇನ್ನೂ ದೊಡ್ಡದಾದ ದೂರದರ್ಶಕವಿತ್ತು. ಅದರ ನೆರವಿನಿಂದ ಶನಿಯನ್ನು ನೋಡಿದಾಗ ಅವನಿಗೆ ಅದರ ಉಂಗುರಗಳ ನಡುವೆ ಇದ್ದ ಖಾಲಿಜಾಗ ಕಂಡುಬಂದಿತು. ಇಂದು ಆ ಖಾಲಿಜಾಗವನ್ನು ಅವನ ನೆನಪಿಗಾಗಿ ಕ್ಯಾಸಿನಿ ವಿಭಾಜಕ ಎಂದೇ ಹೆಸರಿಸಲಾಗಿದೆ. ಆದರೆ ಅಂದು ಈ ಉಂಗುರಗಳ ಬಗೆಗೆ ತಿಳಿದಿದ್ದು ಅಷ್ಟೇ. ಅವುಗಳ ರಚನೆ ಹೇಗಾಯಿತು, ಶನಿಗೆ ಮಾತ್ರ ಯಾಕಿಂಥ ಅಲಂಕಾರ ಇದೆ, ಅದು ಯಾವ ವಸ್ತುಗಳಿಂದ ತಯಾರಾಗಿದೆ ಎಂಬ ಯಾವ ಮಾಹಿತಿಗಳೂ ಲಭ್ಯವಿರಲಿಲ್ಲ. ಎರಡು ಅಖಂಡ ಬಳೆಗಳು ಶನಿಯನ್ನು ಸುತ್ತುವರೆದಿವೆ ಎಂದು ಎಲ್ಲರೂ ಭಾವಿಸಿದ್ದರು. 

       ಮುಂದೆ ಹತ್ತೊಂಬತ್ತನೇ ಶತಮಾನದಲ್ಲಿ ಅನೇಕ ವೈಜ್ಞಾನಿಕ ಕ್ರಾಂತಿಗಳು ಸಂಭವಿಸಿದವು. ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ತನ್ನ ಗಣಿತ ಲೆಕ್ಕಾಚಾರಗಳಿಂದ ಈ ಉಂಗುರಗಳು ಅಖಂಡವಾದ ರಚನೆಗಳಾಗಿರಲು ಸಾಧ್ಯವಿಲ್ಲ್ಲ ಎಂದು ತೋರಿಸಿಕೊಟ್ಟ. ಏಕೆಂದರೆ ಗ್ರಹದ ಸುತ್ತ ಯಾವುದೇ ವಸ್ತು ನೆಲೆಗೊಳ್ಳಬೇಕೆಂದರೆ ಅದು ಗ್ರಹವನ್ನು ಸುತ್ತುತ್ತಿರಬೇಕೇ ಹೊರತು ಹಾಗೆ ನಿಶ್ಚಲವಾಗಿ ನಿಂತಿರಲು ಸಾಧ್ಯವಿಲ್ಲ. ಸುತ್ತಬೇಕೆಂದರೆ ಅದು ಅಖಂಡವಾದ ಉಂಗುರವಾಗಿರುವುದಂತೂ ಸಾಧ್ಯವಿಲ್ಲ. ಇದನ್ನೇ ಗಣಿತೀಯ ಸೂತ್ರಗಳ ಮೂಲಕ ಮ್ಯಾಕ್ಸ್ವೆಲ್ ತೋರಿಸಿಕೊಟ್ಟ.

       ಆದರೆ ಇದನ್ನು ನಾವು ತಿಳಿದುಕೊಳ್ಳುವ ಯಾವ ಸಾಧನವೂ ಅಂದು ಅಸ್ತಿತ್ವದಲ್ಲಿರಲಿಲ್ಲ. ದೂರದರ್ಶಕಗಳಿಂದ ಇದನ್ನೆಲ್ಲ ತಿಳಿಯುವುದು ಸಾಧ್ಯವೇ ಇಲ್ಲ. ಬಾಹ್ಯಾಕಾಶ ಯುಗ ಆರಂಭವಾದ ಬಳಿಕವಷ್ಟೇ ಶನಿಯ ಉಂಗುರಗಳ ಸ್ಪಷ್ಟ ಚಿತ್ರಣ ನಮಗೆ ಸಿಕ್ಕಿದ್ದು. ವಾಯೇಜರ್ ವ್ಯೋಮನೌಕೆ ನಮ್ಮ ಸೌರವ್ಯೂಹದ ನಾಲ್ಕು ದೈತ್ಯಗ್ರಹಗಳನ್ನು ಸಂದರ್ಶಿಸುವ ಉದ್ದೇಶದಿಂದ ೧೯೭೭ರಲ್ಲಿ ಹಾರಿಬಿಡಲಾದ ನೌಕೆ. ಇದು ಶನಿಯ ಉಂಗುರಗಳ ಬಳಿ ಹಾದುಹೋದಾಗ ಅವುಗಳ ವಿಶ್ವರೂಪದರ್ಶನ ನಮಗಾಯಿತು. ನಿಜಕ್ಕೂ ಅದನ್ನು ಕಂಡು ವಿಜ್ಞಾನಜಗತ್ತು ಬೆರಗಾಗಿತ್ತು. ಏಕೆಂದರೆ ಶನಿಯ ಉಂಗುರಗಳು ಸಾವಿರಾರು ಚಿಕ್ಕಚಿಕ್ಕ ಉಂಗುರಗಳಿಂದಾದ ಬೃಹತ್ ಸಂಕೀರ್ಣ ರಚನೆಗಳು ಎಂಬ ಅರಿವು ಅಂದು ನಮಗಾಯಿತು. ಜೊತೆಗೆ ಪ್ರತಿಯೊಂದು ಉಂಗುರವೂ ಅಸಂಖ್ಯಾತ ನೀರ್ಗಲ್ಲ ತುಣುಕುಗಳಿಂದಾಗಿದೆ ಎಂಬ ವಿಷಯವೂ ತಿಳಿಯಿತು. ಈ ತುಣುಕುಗಳು ಧೂಳಿನ ಕಣಗಳ ಗಾತ್ರದಿಂದ ಹಿಡಿದು ದೊಡ್ಡ ಮನೆಗಳ ಗಾತ್ರದವರೆಗೆ ಇವೆ. ಈ ಪ್ರತಿಯೊಂದು ತುಣುಕೂ ಸ್ವತಂತ್ರವಾಗಿ ಶನಿಯನ್ನು ಉಪಗ್ರಹದಂತೆ ಸುತ್ತುತ್ತದೆ. ಇವೆಲ್ಲ ಒಟ್ಟು ಸೇರಿ ಉಂಗುರದ ಆಕಾರವನ್ನು ಸೃಜಿಸುತ್ತವೆ. ನಮ್ಮ ಕಣ್ಣಿಗೆ ಖಾಲಿ ಜಾಗದಂತೆ ತೋರುವ ಕ್ಯಾಸಿನಿ ವಿಭಾಜಕದಲ್ಲೂ ಸಾಕಷ್ಟು ಇಂಥ ಬಂಡೆಗಳಿವೆ. ಆದರೆ ಅವುಗಳ ದಟ್ಟಣೆ ಕಡಿಮೆ. ಹಾಗಾಗಿ ದೂರದಿಂದ ಅದು ಖಾಲಿ ಜಾಗದಂತೆ ತೋರುತ್ತದೆ. ಈ ಖಾಲಿಜಾಗ ಸುಮಾರು ೪೮೦೦ ಕಿಲೋಮೀಟರ್ ಅಗಲವಾಗಿದೆ. ಅಂದರೆ ನಮ್ಮ ಚಂದ್ರ ಈ ಜಾಗದಲ್ಲಿ ಆರಾಮವಾಗಿ ತೂರಿಹೋಗಬಹುದಾದಷ್ಟು ಜಾಗವಿದೆ. ಇದಷ್ಟೇ ಅಲ್ಲ, ಇನ್ನೂ ಅನೇಕ ಖಾಲಿಜಾಗಗಳು ಈ ಉಂಗುರಗಳ ನಡುವೆ ಇವೆ. ಆದರೆ ಅಲ್ಲೂ ವಿರಳವಾಗಿ ಬಂಡೆಗಳು ಅಲ್ಲೊಂದು ಇಲ್ಲೊಂದು ಹರಡಿರುತ್ತವೆ. ಆದರೆ ಅವುಗಳ ದಟ್ಟಣೆ ಕಡಿಮೆ ಇರುತ್ತದೆ ಅಷ್ಟೆ.

       ಶನಿಯ ಉಂಗುರಗಳು ಇಡೀ ಸೌರವ್ಯೂಹದ ಅತ್ಯಂತ ಸಂಕೀರ್ಣವಾದ ಉಂಗುರವ್ಯವಸ್ಥೆಯಾಗಿದೆ. ಭೂಮಿಯಿಂದ ಸಾಮಾನ್ಯ ದುರ್ಬೀನಿಗೂ ಸ್ಪಷ್ಟವಾಗಿ ಗೋಚರಿಸುವ ಉಂಗುರಗಳು ಶನಿಯದ್ದು ಮಾತ್ರ. ಇದರ ಉಂಗುರಗಳು ಮಧ್ಯೆಮಧ್ಯೆ ಒಂದಕ್ಕೊಂದು ಹೆಣೆದುಕೊಳ್ಳುತ್ತ, ಬಿಡಿಸಿಕೊಳ್ಳುತ್ತ ವಿಚಿತ್ರ ವಿದ್ಯಮಾನಗಳನ್ನು ಸೃಷ್ಟಿಸುತ್ತವೆ. ಜೊತೆಗೆ ಸಮೀಪದ ಚಂದ್ರರ ಸೆಳೆತದಿಂದ ಅದರ ಉಂಗುರಗಳ ಅಂಚಿನಲ್ಲಿ ಅಲೆಗಳು ಚಲಿಸುವುದನ್ನು ಸಹ ನೋಡಬಹುದು. 

       ಶನಿಯ ಉಂಗುರಗಳು ಅದರ ಜನ್ಮಜಾತ ಲಕ್ಷಣಗಳಲ್ಲ. ಏಕೆಂದರೆ ಶನಿ ನಮ್ಮ ಸೌರವ್ಯೂಹದೊಟ್ಟಿಗೇ, ಅಂದರೆ ಸುಮಾರು ನಾಲ್ಕುನೂರಾಅರವತ್ತು ಕೋಟಿ ವರ್ಷಗಳ ಹಿಂದೆ, ಆದರೆ ಶನಿಯ ಉಂಗರಗಳ ರಚನೆ ಆಗಿದ್ದು ಕೇವಲ ಹತ್ತು ಕೋಟಿ ವರ್ಷಗಳ ಹಿಂದಷ್ಟೇ. ಈ ಉಂಗುರಗಳ ರಚನೆ ಆಗಲು ಕಾರಣ ಗ್ರಹದ ಅಗಾಧ ಗುರುತ್ವಶಕ್ತಿ. ಹೇಗೆಂದರೆ ಈ ಗುರುತ್ವಕ್ಕೆ ಸಿಲುಕಿ ಗ್ರಹವನ್ನು ಸುತ್ತುವ ಅಗಾಧ ಸಂಖ್ಯೆಯ ಚಂದ್ರರಲ್ಲಿ ಕೆಲವು ಗ್ರಹಕ್ಕೆ ವಿಪರೀತ ಸಮೀಪಕ್ಕೆ ಬರುತ್ತವೆ. ಅಷ್ಟು ಸಮೀಪಕ್ಕೆ ಬಂದಾಗ ಅವು ಗ್ರಹದ ಅಗಾಧವಾದ ಟೈಡಲ್ ಫೋರ್ಸ್ನ ಸೆಳೆತಕ್ಕೆ ಸಿಲುಕುತ್ತವೆ. ರೋಷ್ ಮಿತಿಯೊಳಗೆ ಬಂದಿದ್ದೇ ಆದರೆ ಗ್ರಹದ ಸೆಳೆತಕ್ಕೆ ಸಿಲುಕಿ ನುಚ್ಚುನೂರಾಗುತ್ತವೆ. ಆ ಸಹಸ್ರಾರು ತುಣುಕುಗಳೆಲ್ಲ ಗ್ರಹವನ್ನು ಸುತ್ತುವರೆದು ಉಂಗುರಗಳಂತಾಗುತ್ತವೆ ಹಾಗೂ ಒಂದೊಂದು ತುಣುಕೂ ಗ್ರಹವನ್ನು ಸುತ್ತಲಾರಂಭಿಸುತ್ತದೆ. ಇದೇ ಗ್ರಹದ ಉಂಗುರದ ಅಲಂಕಾರ. ಕೇವಲ ದೈತ್ಯ ಗ್ರಹಗಳಿಗಷ್ಟೇ ಏಕೆ ಉಂಗುರಗಳಿವೆ ಎಂಬ ಪ್ರಶ್ನೆಗೆ ಇಲ್ಲೇ ಉತ್ತರ ಸಿಗುತ್ತದೆ. ಏಕೆಂದರೆ ಭೂಮಿಯಂಥ ಚಿಕ್ಕ ಗ್ರಹಗಳಿಗೆ ಅಷ್ಟೊಂದು ಅಗಾಧ ಸಂಖ್ಯೆಯ ಚಂದ್ರರಿಲ್ಲದಿರುವುದರಿಂದ ಉಂಗುರಗಳು ಉಂಟಾಗುವ ಸಾಧ್ಯತೆ ಬಹಳ ಕಡಿಮೆ. 

       ತೀರಾ ಇತ್ತೀಚಿನವರೆಗೂ ನಮಗೆ ಗೊತ್ತಿದ್ದಂತೆ ಉಂಗುರಗಳಿದ್ದ ಏಕೈಕ ಗ್ರಹ ಶನಿ ಆಗಿತ್ತು. ಆದರೆ ೧೯೭೭ರ ಮಾರ್ಚ್ ೧೦ರಂದು ಎಡ್ವರ್ಡ್ ಡನ್‌ಹ್ಯಾಂ, ಜೇಮ್ಸ್ ಎಲಿಯಟ್ ಮತ್ತು ಜೆಸ್ಸಿಕಾ ಮಿಂಕ್ ಎಂಬುವವರು ಕಂಡುಹಿಡಿದರು. ಅತ್ಯಂತ ಪ್ರಬಲವಾದ ದೂರದರ್ಶಕಗಳಿಗಷ್ಟೇ ಕ್ಷೀಣವಾಗಿ ಕಾಣುವ ಈ ಉಂಗುರಗಳು ಸಾಮಾನ್ಯ ದೂರದರ್ಶಕಗಳಿಂದ ಕಾಣುವುದೇ ಇಲ್ಲ. ಯುರೇನಸ್ ಶನಿಯಷ್ಟು ಸಂಕೀರ್ಣವಲ್ಲದ. ಆದರೆ ಗುರು ಮತ್ತು ನೆಪ್ಚೂನ್‌ಗಳಷ್ಟು ಸರಳವೂ ಅಲ್ಲದ ಉಂಗುರಗಳನ್ನು ಪಡೆದಿದೆ. ಇದರ ಹದಿಮೂರು ಉಂಗುರಗಳ ಪೈಕಿ ಅತ್ಯಂತ ಪ್ರಕಾಶಮಾನವಾದ ಉಂಗುರಗಳ ದಟ್ಟಣೆ ಕೂಡ ಶನಿಯ ಕ್ಯಾಸಿನಿ ವಿಭಾಜಕದ ದಟ್ಟಣೆಗೆ ಹೋಲಿಸಬಹುದಷ್ಟೆ.

       ಇನ್ನು ಗುರು ಮತ್ತು ನೆಪ್ಚೂನ್ ಗ್ರಹಗಳು ಕೂಡ ಕ್ಷೀಣವಾದ ಉಂಗುರಗಳನ್ನು ಹೊಂದಿದ್ದು, ಇದನ್ನು ಕಂಡುಹಿಡಿದಿದ್ದು ಕೂಡ ವಾಯೇಜರ್ ನೌಕೆಯೇ. ಈ ಉಂಗುರಗಳನ್ನಂತೂ ದೂರದರ್ಶಕದ ಮೂಲಕ ನೋಡಲು ಸಾಧ್ಯವೇ ಇಲ್ಲ. ಇವೂ ನಮಗೆ ಮೊದಲಬಾರಿಗೆ ದರ್ಶನವಾಗಿದ್ದು ವಾಯೇಜರ್ ನೌಕೆಯ ಕೃಪೆಯಿಂದ. ಗ್ರಹಗಳ ಚಿತ್ರವನ್ನು ಮರೆಮಾಡಿ ಹಿನ್ನೆಲೆಯಲ್ಲಿ ಸೂರ್ಯನ ಬೆಳಕು ಬರುವಂತೆ ಮಾಡಿ ತೆಗೆದ ಚಿತ್ರಗಳಲ್ಲಿ ಈ ಕ್ಷೀಣ ಉಂಗುರಗಳು ಪತ್ತೆಯಾದವು. ಇವು ಎಷ್ಟು ಕ್ಷೀಣವೆಂದರೆ ಗ್ರಹದ ಪ್ರಕಾಶದ ಮುಂದೆ ಇವು ಕಾಣುವುದೇ ಇಲ್ಲ. ಹಬಲ್ ಬಾಹ್ಯಾಕಾಶ ದೂರದರ್ಶಕ ತೆಗೆದ ಚಿತ್ರಗಳಲ್ಲೂ ಸಹ ಉಂಗುರಗಳ ಬಗ್ಗೆ ಯಾವ ಸುಳಿವೂ ಸಿಗುವುದಿಲ್ಲ. 

       ಇತ್ತೀಚೆಗೆ ಶನಿಯತ್ತ ತೆರಳಿದ ಕ್ಯಾಸಿನಿ ವ್ಯೋಮನೌಕೆ ಒದಗಿಸಿದ ಹೇರಳ ಸಾಕ್ಷ್ಯಗಳು ನಮ್ಮನ್ನು ದಂಗುಬಡಿಸುವಂತಿದ್ದವು. ಶನಿಯ ಉಂಗುರಗಳ ಮಂಜುಗೆಡ್ಡೆ ಮತ್ತಿತರ ವಸ್ತುಗಳು ಗ್ರಹದ ಮೇಲೆ ಮಳೆಯಂತೆ ಬೀಳುತ್ತಿರುವುದನ್ನು ಕ್ಯಾಸಿನಿ ನೌಕೆ ಪತ್ತೆಹಚ್ಚಿತು. ಪ್ರತಿ ಸೆಕೆಂಡಿಗೆ ಒಂದುಸಾವಿರ ಕಿಲೋಗ್ರಾಂನಷ್ಟು ಅಗಾಧ ಪ್ರಮಾಣದಲ್ಲಿ ಈ ಮಳೆ ಬೀಳುತ್ತಿದೆ ಎಂದು ಕ್ಯಾಸಿನಿ ಲೆಕ್ಕಹಾಕಿತ್ತು. ಆದರೆ ಈ ಅಗಾಧ ಪ್ರಮಾಣದಲ್ಲಿ ಉಂಗುರಗಳನ್ನು ಕಳೆದುಕೊಳ್ಳುತ್ತಿದ್ದರೂ ಮುಂದಿನ ಕೆಲವಾರು ಕೋಟಿ ವರ್ಷಗಳವರೆಗೆ ಈ ಅಲಂಕಾರ ಹೀಗೆಯೇ ಇರಲಿದೆ. ಮುಂದೊಂದು ದಿನ ಶನಿಯೂ ಗುರು, ಯುರೇನಸ್ ಹಾಗೂ ನೆಪ್ಚೂನ್‌ಗಳಂಥ ಕ್ಷೀಣವಾದ ಉಂಗುರಗಳನ್ನಷ್ಟೇ ಉಳಿಸಿಕೊಳ್ಳಲಿದೆ ಎಂಬುದು ಅಂದಾಜು.

       ಹಾಗಾದರೆ ಹಿಂದೊಮ್ಮೆ ಆ ಗ್ರಹಗಳೂ ಶನಿಯಂಥ ವೈಭವಯುತವಾದ ಉಂಗುರಗಳನ್ನು ಹೊಂದಿದ್ದು, ಇದೇ ರೀತಿ ವಸ್ತುಗಳನ್ನು ಕಳೆದುಕೊಂಡು ಅವು ಈಗಿನ ಸ್ಥಿತಿಗೆ ತಲುಪಿರಬಹುದೇ? ನಾವು ಈ ಭೂಮಿಯ ಮೇಲೆ ಶನಿಗ್ರಹದ ಉಂಗುರಗಳು ಅವುಗಳ ವೈಭವದ ಉತ್ತುಂಗದಲ್ಲಿರುವಾಗಲೇ ಜನ್ಮತಾಳಿರುವ ಅತ್ಯಂತ ಅದೃಷ್ಟಶಾಲಿಗಳು ಎಂದುಕೊಳ್ಳಬಹುದೇ? ಈ ಪ್ರಶ್ನೆಗೆ ಇದಮಿತ್ಥಂ ಎಂಬ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ಬದಲಾವಣೆಗಳೆಲ್ಲ ಕೋಟ್ಯಂತರ ವರ್ಷಗಳ ಅವಧಿಯಲ್ಲಿ ಆಗುವಂಥದ್ದು. ಶನಿಯ ಉಂಗುರಗಳಾದರೂ ನಾವು ಅವುಗಳನ್ನು ಮೊದಲಬಾರಿಗೆ ನೋಡಿದ ನಂತರದ ಈ ನಾಲ್ಕು ಶತಮಾನಗಳ ಅವಧಿಯಲ್ಲಿ ಖಂಡಿತವಾಗಿಯೂ ಅಗಾಧ ಪ್ರಮಾಣದ ದ್ರವ್ಯರಾಶಿಯನ್ನು ಕಳೆದುಕೊಂಡಿರುತ್ತದೆ. ಆದರೆ ಈ ಅಗಾಧ ಪ್ರಮಾಣವೂ ನಮ್ಮ ಗಮನಕ್ಕೆ ಬಾರದಷ್ಟು ಅತ್ಯಲ್ಪ. ಹಾಗಾಗಿ ಅಂದಿನ ಉಂಗುರಗಳಿಗೂ ಇಂದಿನ ಉಂಗುರಗಳಿಗೂ ಯಾವುದೇ ಮಹತ್ವದ ವ್ಯತ್ಯಾಸಗಳನ್ನೂ ಕಾಣಲು ಸಾಧ್ಯವಿಲ್ಲ!

Category:Science and Innovation



ProfileImg

Written by Srinivasa Murthy

Verified