ವಿದ್ಯೆ ವ್ಯಕ್ತಿತ್ವವನ್ನು ರೂಪಿಸುವ ಸಾಧನ



image

ವಿದ್ಯಾದಧಾತಿ ವಿನಯಂ
ವಿನಯಾದ್ ಮಾತಿ ಪತ್ರತಾಂ
ಪಾತ್ರದ್ವಾದ್ ಧನಮಾಪ್ತೋತಿ
ಧನಾದ್ ಧರ್ಮಂ,ತತಃ ಸುಖಮ್||

ವಿದ್ಯೆ ಮನುಷ್ಯನಿಗೆ ವಿನಯ ತಂದುಕೊಡುತ್ತದೆ. ವಿನಯದಿಂದ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ವ್ಯಕ್ತಿತ್ವದಿಂದ ಹಣ ಸಂಪಾದನೆಯಾಗುತ್ತದೆ. ಸಂಪಾದಿಸಿದ ಹಣ ಧರ್ಮಕಾರ್ಯಗಳಲ್ಲಿ ಸದ್ವಿನಿಯೋಗವಾಗಿ ಸುಖ ದೊರೆಯುತ್ತದೆ.

ನಮ್ಮ ದೇಶದ ಮಕ್ಕಳಿಗೆ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಕೆಲವೊಂದು ಆದರ್ಶದ ಕನಸುಗಳಿರುತ್ತವೆ.ಅವರ ಮನೋಧರ್ಮ ಹಣಮಾಡುವದರ ಕಡೆ ಇರುವದಿಲ್ಲ. ಬದಲಾಗಿ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಇರುತ್ತದೆ. ಮಕ್ಕಳನ್ನು ನೀವು ಏನಾಗುತ್ತೀರಿ ಎಂದು ವಿಚಾರಿಸಿದಾಗ ಡಾಕ್ಟರ, ಇಂಜನಿಯರ, ಶಿಕ್ಷಕ, ರಾಜಕಾರಣಿ, ಎಂದು ಹೇಳುತ್ತಾರೆ. ಅದಲ್ಲದೇ ಮಕ್ಕಳು ಬಡವರ ಸೇವೆ ಮಾಡುತ್ತೇವೆ ಎಂದೂ ಹೇಳುವದುಂಟು. ಅದೇ ರೀತಿ ವಿದೇಶದ ಮಕ್ಕಳನ್ನು ವಿಚಾರಿಸಿದಾಗ ನಮಗೆ ಗೊತ್ತಿಲ್ಲ, ಇನ್ನೂ ಅದರ ಬಗ್ಗೆ ಯೋಚನೆ ಮಾಡಿಲ್ಲ ಎಂಬ ಉತ್ತರ ಥಟ್ ಎಂದು ಬರುತ್ತದೆ. 

ಮಕ್ಕಳಿಗೆ ತಿಳುವಳಿಕೆ ವಯಸ್ಸು ಬಂದಾಗ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಕೆಲವೊಂದು ಆದರ್ಶದ ಕನಸನ್ನು ಕಂಡಿರುತ್ತಾರೆ. ಆದರೆ ಪೋಷಕರು ನಮ್ಮ ಮಗುವು ಚೆನ್ನಾಗಿ ಓದಿ ಹಣಗಳಿಸಲಿ ಎಂಬ ಆಸೆ ಹೊಂದಿರುತ್ತಾರೆ. ಬಟ್ಟೆ ಎಷ್ಟೇ ಶುಭ್ರವಾಗಿದ್ದರೂ ಅದರ ಮೇಲೆ ಕೆಸರು ಸಿಡಿದರೆಹೇಗೆ ಕೊಳೆಯಾಗುವದೋ ಹಾಗೆ ಬಾಲ್ಯಾವಸ್ಥೆಯಲ್ಲಿ ನಿರ್ಮಲವಾಗಿದ್ದ ಮಕ್ಕಳ ಮನಸ್ಸು ಕ್ರಮೇಣ ಪ್ರೌಡಾವಸ್ಥೆ ತಲುಪಿದಾಗ ಕೊಳಕು ಸಾಮಾಜಿಕ ಪರಿಸರದಲ್ಲಿ ಮಲಿನವಾಗಿ ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತದೆ. ಮಕ್ಕಳಿಗೆ ಪೋಷಕರು ಹೆಚ್ಚು ಹಣ ಸಂಪಾದಿಸುವ ವೃತ್ತಿ ಶಿಕ್ಷಣ ಕೊಡಿಸಲು ಇಚ್ಛೆ ಪಡುತ್ತಾರೆ. ಅಗತ್ಯವಾದ ಗುಣಸಂಪಾದನೆ ಮಾಡಲು ಬೇಕಾದ ನೈತಿಕ ಶಿಕ್ಷಣ ಕೊಡಿಸಲು ಪ್ರಯತ್ನಿಸುವದು ಮುಖ್ಯವಾಗಿದೆ. ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನ ಅಕ್ಷರ ಜ್ಞಾನ ಮಾತ್ರವಲ್ಲ. ಮನಸ್ಸಿಗೆ ಸಂಸ್ಕಾರ ಕೊಡುವದೂ ಕೂಡ ಶಿಕ್ಷಣದ ಒಂದು ಭಾಗ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯವಹಾರಿಕ, ಅದ್ಯಾತ್ಮಿಕ ಈ ಮೂರು ಶಿಕ್ಷಣಗಳನ್ನು ಕೊಡಬೇಕು. ಬುದ್ಧಿಯ ವಿಕಾಸದೊಂದಿಗೆ ಹೃದಯವಂತಿಕೆ ಬೆಳೆಸುವದೂ ಶಿಕ್ಷಣದ ಗುರಿಯಾಗಿದೆ.

ಶಾಲೆಗಳಲ್ಲಿ ಮಗುವು ತನ್ನ ಜನ್ಮದಿನದಂದು ಶಾಲೆಯಲ್ಲಿ ,ಮನೆಯ ಅಕ್ಕಪಕ್ಕ ಚಾಕೊಲೇಟ, ಕೊಡುವ ಪ್ರಕ್ರಿಯೆಗೆ ಪ್ರೋತ್ಸಾಹಿಸಲಾಗುತ್ತದೆ. ಮಗು ಚಾಕಲೇಟ್ ಕೊಟ್ಟಾಗ ಸಹಪಾಠಿಗಳೂ ಸಹ ಶುಭಾಶಯ ಕೋರಿ ಸಂತಸವನ್ನು ಹೆಚ್ಚಿಸುತ್ತಾರೆ. ಹಾಗೆಯೇ ವ್ಯಕ್ತಿಯು ತನ್ನ ದುಡಿಮೆಯ ಸ್ವಲ್ಪ ಭಾಗ ನಾನಾ ರೀತಿಯಲ್ಲಿ ಉಪಕಾರ ಪಡೆದ ಸಮಾಜಕ್ಕೆ ಸಮರ್ಪಿಸಿ ಸಾಮಾಜಿಕ ಋಣವನ್ನು ಸ್ವಲ್ಪವಾದರೂ ತೀರಿಸಿ ಸಾರ್ಥಕತೆ ಪಡೆಯುವದರ ಬೀಜರೂಪವೇ ಈ ಪ್ರಕ್ರಿಯೆ ಎನ್ನಬಹುದು. ವಿದ್ಯೆ ಹಣಗಳಿಕೆಯ ಸಾಧನವಾಗದೇ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾದಾಗ ಮಾತ್ರ ಬದುಕಿನಲ್ಲಿ ಸುಖ,ಶಾಂತಿ,ನೆಮ್ಮದಿ ಸಿಗಲು ಸಾಧ್ಯ.

Category:Education



ProfileImg

Written by ಗಿರಿಜಾ ಎಸ್ ದೇಶಪಾಂಡೆ

Verified