Do you have a passion for writing?Join Ayra as a Writertoday and start earning.

ಫಹದ್‌ ಫಾಸಿಲ್: ಸಿನಿಮಾ ಲೋಕದ ಫೀನಿಕ್ಸ್

ProfileImg
01 Sep '23
5 min read


image

ಶಾನು ಎಂಬ ಕೆಟ್ಟ ನಟ

1980 ರಲ್ಲಿ 'Manjil Virinja Pookkal'(ಮಂಜಿನಲ್ಲಿ ಅರಳಿದ ಹೂಗಳು) ಎಂಬ ಮಲಯಾಳಂ ಚಲನಚಿತ್ರ ಬಿಡುಗಡೆಯಾಯಿತು. ಆ ಚಿತ್ರದ ಮೂಲಕ ಮಲಯಾಳಂ ಸಿನಿಮಾಕ್ಕೆ ಮಹಾನಟನೊಬ್ಬನ ಆಗಮನವಾಯಿತು. ಆತನ ಹೆಸರು 'ಮೋಹನ್‌ಲಾಲ್'. ಮೋಹನ್‌ಲಾಲ್ ಅನ್ನೋ ಆ ವರ್ಸಟೈಲ್ ನಟನನ್ನು ಪರಿಚಯಿಸಿದ ನಿರ್ದೇಶಕನಿಗು ಅದು ಮೊದಲ ಸಿನಿಮಾವಾಗಿತ್ತು. ಮುಂದೆ ಆ ನಿರ್ದೇಶಕ ಮಲಯಾಳಂ ಸಿನಿಮಾ ಮರೆಯಲಾಗದ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ. ನಮ್ಮ ಕನ್ನಡದ 'ಆಪ್ತಮಿತ್ರ' ಸಿನಿಮಾ ಕೂಡ ಆತ ನಿರ್ದೇಶಿಸಿದ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ಮಲಯಾಳಂ ಸಿನಿಮಾಗೆ ಹಲವಾರು ಅತ್ಯುತ್ತಮ ನಟರನ್ನು ಪರಿಚಯಿಸಿದ ಈ ನಿರ್ದೇಶಕ‌, 2002 ರಲ್ಲಿ ತನ್ನ ಮಗನನ್ನು ತನ್ನ ನಿರ್ದೇಶನದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕರೆತಂದ. ಬಿಡುಗಡೆಗೆ ಮುಂಚೆಯೇ ಹೊಸ ನಟನೊಬ್ಬನ ಆಗಮನದ ಜೊತೆಗೆ, ಇನ್ನೊಂದು ಸೂಪರ್‌ಹಿಟ್ ಸಿನಿಮಾ ಬರುತ್ತದೆಂಬ ನಿರೀಕ್ಷೆಯಲ್ಲಿದ್ದರು ಚಿತ್ರ ಪ್ರೇಮಿಗಳು. ಆದರೆ, ನಿರೀಕ್ಷೆಗಳೆಲ್ಲಾ  ಉಲ್ಟಾ ಹೊಡೆದವು. ಆ ಚಿತ್ರ ಹೇಳ ಹೆಸರಿಲ್ಲದಂತೆ  ನೆಲಕಚ್ಚಿತು. ಚಿತ್ರ ಮತ್ತು ಹೊಸ ನಟನ ಅಭಿನಯವನ್ನು ವಿಮರ್ಶಕರು ಸೇರಿದಂತೆ ಎಲ್ಲರೂ ತೆಗಳಿದರು. ಯಶಸ್ವೀ ನಿರ್ದೇಶಕ, ತನ್ನ ಮಗನನ್ನು ನಾಯಕ ನಟನನ್ನಾಗಿ ಮಾಡುವ ಅತಿಯಾಸೆಯಿಂದ ಮಾಡಿದ ಕೆಟ್ಟ ಚಿತ್ರವೆಂದು ಷರಾ ಬರೆಯಲಾಯಿತು. ಮಗನ ಕೆಟ್ಟ ಅಭಿನಯದಿಂದ ತಂದೆಗೂ ಕೆಟ್ಟ ಹೆಸರು ಬಂತೆಂದು ಜನ ಮಾತನಾಡಿಕೊಂಡರು.

ಆ ಚಿತ್ರದ ಹೆಸರು 'ಕೈಯೆತ್ತುಂ ದೂರತ್ತ್' (ಕೈಗೆ ಎಟುಕುವಷ್ಟು ದೂರದಲ್ಲಿ). ಚಿತ್ರದ ನಿರ್ದೇಶಕನ ಹೆಸರು ಫಾಸಿಲ್. ಅದರಲ್ಲಿ ನಾಯಕನಾಗಿ ಅಭಿನಯಿಸಿದ ನಟನ ಹೆಸರು 'ಶಾನು' ಎಂದಾಗಿತ್ತು. ಅಂದು  ಆ ಹುಡುಗನ ವಯಸ್ಸು ಕೇವಲ ಹತ್ತೊಂಬತ್ತು ವರ್ಷ. ಅಭಿನಯ ಗೊತ್ತಿಲ್ಲವೆಂದು ಉಗಿಸಿಕೊಂಡ ಆ ನಟ ಏಳು ವರ್ಷಗಳಷ್ಟು ಕಾಲ ಚಿತ್ರರಂಗದಿಂದ ದೂರ ಉಳಿದ. ಅಮೇರಿಕಾಗೆ ಹೋಗಿ ಫಿಲಾಸಪಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದ. 2009 ರಲ್ಲಿ ಸಿನಿಮಾ ನಟನೆಗೆ ಮರಳಿದ.  'ಕೇರಳ ಕೆಫೆ' ಎಂಬ Anthology ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ. ಆತ ಅಮೂಲಾಗ್ರವಾಗಿ ಬದಲಾಗಿದ್ದ. ಇಂದೀಗ ಭಾರತದಲ್ಲಿ ಇರುವ‌ ಯುವ ನಟರಲ್ಲೇ ಅತ್ಯಂತ ಪ್ರತಿಭಾವಂತ ನಟನೆಂದು ಭಾರತದಾದ್ಯಂತ ಸಿನಿಮಾ ಪ್ರೇಮಿಗಳು ಆತನ ನಟನೆಯನ್ನು ಬೆರಗುಗಣ್ಣಿನಿಂದ ನೋಡುತ್ತಾರೆ. ಮೋಹನ್‌ಲಾಲ್, ಕಮಲಹಾಸನ್‌ರಂತಹ ದೊಡ್ಡ ನಟರಿಗೆ ಆತನ ನಟನೆಯನ್ನು ಹೋಲಿಸಲಾಗುತ್ತಿದೆ.

ಪ್ಯಾನ್ ಇಂಡಿಯನ್ ಆ್ಯಕ್ಟರ್

ಮೊದಲ ಚಿತ್ರದಲ್ಲಿ, ಮನೆಯಲ್ಲಿ ಮುದ್ದಿನಿಂದ ಕರೆಯುವ ಶಾನು ಎಂಬ ಹೆಸರಿನಿಂದಲೇ ಎಂಟ್ರಿ ಕೊಟ್ಟಿದ್ದ ಆತನ ನಿಜವಾದ ಹೆಸರು 'ಫಹದ್ ಫಾಸಿಲ್'. ನಿರ್ದೇಶಕ ಫಾಸಿಲ್'ನ ಮಗ ಶಾನು ಎಂದು ಗುರುತಿಸಿಕೊಂಡಿದ್ದ ಕಾಲ ಬದಲಾಗಿದೆ. ಇವತ್ತು ಫಹದ್‌ನ ತಂದೆ ಫಾಸಿಲ್ ಎಂದರಷ್ಟೇ ಜನರಿಗೆ ಗೊತ್ತಾಗುತ್ತದೆ. ಇತ್ತೀಚೆಗಂತು ಫಹದ್ ಫಾಸಿಲ್ ಎಂಬ ಹೆಸರಿನಿಂದಾಗಿಯಷ್ಟೇ ಮಲಯಾಳಂ ಸಿನಿಮಾ ನೋಡಲು ಆರಂಭಿಸಿದ ಬಹಳಷ್ಟು ಮಂದಿಯಿದ್ದಾರೆ. ಅಭಿಮಾನಿ ಸಂಘಟನೆಗಳ ಹಂಗಿಲ್ಲದ, ಸ್ಟಾರ್ ಎಂದು ಕರೆಸಿಕೊಳ್ಳಲು ಇಚ್ಛಿಸದ, ಚಿತ್ರದಿಂದ ಚಿತ್ರಕ್ಕೆ ತನ್ನೊಳಗಿನ ನಟನನನ್ನು ಒರೆಗೆ ಹಚ್ಚಿ ಮಿನುಗಿಸುತ್ತಲೇ ಇದ್ದಾನೆ‌ ಫಹದ್. ಅಭಿಮಾನಿಗಳಿಂದ 'ಫಾಫಾ' ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಫಹದ್ ಇವತ್ತು ತನ್ನ ಅಭಿನಯದಿಂದ ಮೋಡಿ ಮಾಡುವ 'ಪ್ಯಾನ್ ಇಂಡಿಯನ್ ಆ್ಯಕ್ಟರ್'. OTT ಫ್ಲಾಟ್ ಫಾರ್ಮ್ ಗಳು ಆತನ ಚಿತ್ರವನ್ನು ಖರೀದಿಸಲು ತುದಿಗಾಲಲ್ಲಿ ನಿಲ್ಲುತ್ತವೆ.

ಒಂದೊಂದು ಸಿನಿಮಾದಲ್ಲೂ ಫಹದ್ ತನ್ನ ಹಾವಭಾವಗಳನ್ನು ಪಾತ್ರಗಳಿಗನುಸಾರವಾಗಿ ಅಳವಡಿಸಿಕೊಳ್ಳುತ್ತಾ ತೆರೆಯ ಮೇಲೆ ಮಾಯಾಲೋಕವನ್ನೇ ಸೃಷ್ಟಿಸುತ್ತಾನೆ. ನೋಟವೊಂದರಿಂದಲೇ ಆಳವಾದ ಭಾವಗಳನ್ನು ಪ್ರೇಕ್ಷಕರಿಗೆ ದಾಟಿಸುವ ಫಹದ್‌ನ ಕಣ್ಣುಗಳ ಅಭಿನಯಕ್ಕೆ ಪ್ರತ್ಯೇಕವಾದ ಅಭಿಮಾನಿ ಬಳಗವೇ ಇದೆ. ಪೇಜುಗಟ್ಟಲೇ ಡೈಲಾಗನ್ನು ಕಣ್ಣ ನೋಟವೊಂದರಿಂದಲೇ ಅಭಿವ್ಯಕ್ತಿಪಡಿಸುವ ಕಲೆಯನ್ನು ಅಕ್ಷರಶಃ ಕರಗತ ಮಾಡಿಕೊಂಡಿರುವ ನಟ ಫಹದ್. ಕ್ಯಾಮಾರದ ಕ್ಲೋಸ್ ಅಪ್ ಶಾಟುಗಳಿಗೆ ಅರ್ಥವನ್ನು ಕೊಟ್ಟ ನಟನೀತ. ಕಣ್ಣ ರೆಪ್ಪೆಗಳ ಅಲುಗಾಟದಲ್ಲಿ, ಕಣ್ಣ ಗುಡ್ಡೆಗಳ ಹೊರಳಾಟದಲ್ಲಿ, ಕಣ್ಣು ಮುಚ್ಚಿ-ತೆರೆಯುವುದರಲ್ಲಿ ಹೇಳಲಾಗದ ಭಾವವೊಂದನ್ನು ಆತ ನೋಡುಗರೆದೆಗೆ ದಾಟಿಸಿ ಬಿಟ್ಟಿರುತ್ತಾನೆ; 'ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು' ಎಂಬ ಕವಿಯ ಸಾಲುಗಳು ತನಗಾಗಿಯೇ ಬರೆದದ್ದಿರಬೇಕು ಅನ್ನುವ ಹಾಗೆ. ‌

ದಿ ರಿಸ್ಕ್‌ ಟೇಕರ್

ಸೋಲಿನ ಪಾತಾಳಕ್ಕಿಳಿದು ಜನರ ಮನಸ್ಸಿನಿಂದ ಮಾಸಿ ಹೋದ ನಟ ಮತ್ತೆ ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದಾಗ ಆತನ ರೂಪದಲ್ಲು ಬದಲಾವಣೆಯಾಗಿರುತ್ತದೆ. ತಲೆ ತುಂಬ ಕೂದಲಿದ್ದ ಆತನ ಮುಂದಲೆಯ ಕೂದಲು ಹೋಗಿರುತ್ತದೆ. ಮುಖದಲ್ಲಾಗಲಿ, ದೇಹದಲ್ಲಾಗಲಿ ಮಲಯಾಳಂ ಸಿನಿಮಾದ ನಾಯಕ ನಟರಿಗಿರುವ ಯಾವ ಅಂಶಗಳು ಇರುವುದಿಲ್ಲ. ಅದರೆ, ಫಹದ್ ಸಿನಿಮಾಗಳ ಆಯ್ಕೆ ಮತ್ತು ಪಾತ್ರದೊಳಗಿನ ಪರಾಕಾಯ ಪ್ರವೇಶ ಅದೆಲ್ಲವನ್ನು ಮೀರಿ ಗೆಲ್ಲುತ್ತದೆ. ಈ ನಡುವೆ ಫಹದ್ ನಟಿಸಿದ ಕೆಲವು ಚಿತ್ರಗಳು ಆಯ್ಕೆಯ ತಪ್ಪಿನಿಂದಾಗಿ ತೋಪೆದ್ದು ಹೋದದ್ದು ಇದೆ. ನಮ್ಮ ಕನ್ನಡದ ಸೃಜನಾತ್ಮಕ ನಿರ್ದೇಶಕ 'ಪವನ್ ಕುಮಾರ್' ನಿರ್ದೇಶಿಸಿದ ಫಹದ್ ಚಿತ್ರ 'ದೂಮಮ್' ಸೋತು ಹೋದದ್ದು ಇದಕ್ಕೊಂದು ಉದಾಹರಣೆ. ಸೋಲಿನಿಂದ ಕಂಗೆಡದ, ಗೆಲುವಿನಿಂದ ಉಬ್ಬದ ಇವನ ಅಭಿನಯ ಸಾಮರ್ಥ್ಯ ಮಾತ್ರ ಚಿತ್ರದಿಂದ ಚಿತ್ರಕ್ಕೆ ಹೆಚ್ಚಾಗುತ್ತಲೇ ಇದೆ. ಫಹದ್ ಆಯ್ದುಕೊಳ್ಳುವ ಪ್ರತಿ ಸಿನಿಮಾವು ಪ್ರಯೋಗಾತ್ಮಕವಾದದ್ದೇ ಆಗಿರುತ್ತದೆ. ಪ್ರತಿಯೊಂದು ಚಿತ್ರದಲ್ಲು ರಿಸ್ಕ್ ಇದ್ದೇ ಇರುತ್ತದೆ. "ಈ ತರದ ಸಿನಿಮಾಗಳನ್ನು ಆಯ್ದುಕೊಳ್ಳುವಾಗ ಸೋಲುವ ಭಯವಿರುವುದಿಲ್ಲವೇ ?  ಎಂಬ ಸಂದರ್ಶಕನೊಬ್ಬನ ಪ್ರಶ್ನೆಗೆ, ನನ್ನ ಸಿನಿಮಾ ಪಯಣ ಶುರುವಾಗಿದ್ದೇ ಸೋಲಿನಿಂದಲ್ಲವೇ" ಎಂದು ನಗುವ ಆತನ ಪ್ರಶ್ನೆಯೇ ಉತ್ತರವೂ ಹೌದು.

ಮಲಯಾಳಂ ಸಿನಿಮಾರಂಗ 70ರ ದಶಕದಿಂದಲೇ ಪ್ರಯೋಗಗಳ ಮೂಲಕ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟಿದೆ. 1990 ರಿಂದೀಚೆಗೆ ಬಿ ಗ್ರೇಡ್ ಚಿತ್ರಗಳು, ಅದದೇ ಕೌಟಂಬಿಕ ಮತ್ತು ಪುರುಷ ಪೌರುಷವನ್ನು ಮೆರೆಸುವ ಕಥೆಗಳಲ್ಲೇ ಕಳೆದುಹೋಗಿತ್ತು. ಆದರೆ, ಫಹದ್ ರೀ ಎಂಟ್ರಿ ಕೊಟ್ಟ 2009-10ರ ಆ ದಿನಗಳು, ಮಲಯಾಳಂ ಚಿತ್ರರಂಗ ಕಳೆದ ಎರಡು ದಶಕಗಳ ಸಾಂಪ್ರದಾಯಿಕ ಸಿನಿಮಾ ರೀತಿಯನ್ನು ಒಡೆದು ಕಟ್ಟುವ ಹೊಸ ಪರ್ವವೊಂದು ಶುರುವಾದ ಕಾಲಘಟ್ಟವೂ ಆಗಿತ್ತು. ಸಿನಿಮಾ ಎಂಬ ಕಲೆಯ ಎಲ್ಲಾ ಚೌಕಟ್ಟುಗಳನ್ನು ಒಡೆಯುವ ಆ ಹೊಸ ರೀತಿಯ ಸಿನಿಮಾಗಳ ನಿರ್ದೇಶಕರು, ಚಿತ್ರಕಥೆಗಾರರು, ತಂತ್ರಜ್ಞರ ಜೊತೆಗೆ ಬದಲಾವಣೆಗೆ ಚುಕ್ಕಾಣಿ ಹಿಡಿಯುವ ಕೆಲಸಕ್ಕೆ ಫಹದ್ ಕೂಡ ಸಾಥ್‌ ನೀಡಿದ್ದ. 2011 ರಲ್ಲಿ ನಾಯಕ ನಟರಲ್ಲಿ ಒಬ್ಬನಾಗಿ ಅಭಿನಯಿಸಿದ 'ಚಾಪಾ ಕುರಿಶ್' ಚಿತ್ರಕ್ಕೆ ಕೇರಳ ಸರಕಾರದ ಅತ್ಯುತ್ತಮ ಸಹ ನಟನಿಗಿರೋ ಅವಾರ್ಡ್ ಸಿಕ್ಕಿತು. ಅದೇ ಚಿತ್ರದಲ್ಲಿನ ಫಹದ್‌ ಮತ್ತು ʼರಮ್ಯ ನಂಬೀಶನ್ʼ ನಡುವಿನ ಚುಂಬನ ದೃಶ್ಯ ಆ ಕಾಲಕ್ಕೆ ವಿವಾದವನ್ನು ಹುಟ್ಟು ಹಾಕಿದ್ದವು. ಆ ವಿವಾದವು ಕಾಲದ ಓಘದಲ್ಲಿ ತರಗೆಲೆಯಂತೆ ಹಾರಿಯೂ ಹೋಯ್ತು. ಅದರ ನಂತರ ಬಿಡುಗಡೆಯಾದ '22 ಫೀಮೇಲ್ ಕೋಟಯಂ' ಚಿತ್ರದಲ್ಲಿ ನಿರ್ವಹಿಸಿದ, ಹೆಣ್ಣುಬಾಕ ವಂಚಕನ ಪಾತ್ರದ ನಟನೆ ವಿಮರ್ಶಕರಿಂದ ಅಪಾರ ಪ್ರಶಂಸೆಗೊಳಗಾಯಿತು. ಆದರೆ, ಆವಾಗಲೂ ಫಹದ್‌ ಹೊಸ ತಲೆಮಾರಿನ 'ಕಾರ್ಪೋರೇಟ್ ಹುಡುಗರ' ಪಾತ್ರಗಳಿಗಷ್ಟೇ ಸೀಮಿತ ಎಂಬಂತೆ ನೋಡಲಾಗಿತ್ತು. ಆದರೆ ಮುಂದೆ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳನ್ನು ಮಾಡುತ್ತಾ ಫಹದ್ ತನ್ನ ನಟನೆಯ ವಿಶ್ವರೂಪವನ್ನು ಪ್ರದರ್ಶಿಸತೊಡಗಿದ. ವಿಲನ್ ಪಾತ್ರಕ್ಕೆ ಹೊಸ ಆಯಾಮವನ್ನು ನೀಡಿದ. 'ವಿಕ್ರಮ್' ಚಿತ್ರದಲ್ಲಿ ಕಮಲ್ ಹಾಸನ್‌ನಂತಹ ಮೇರು ನಟನಿಗೆ ಸರಿಸಾಟಿಯಾಗಿ ಅಭಿನಯಿಸಿದ. ಮಲಯಾಳಂ ಚಿತ್ರ ʼಕುಂಬಳಂಗಿ ನೈಟ್ಸ್ʼ (kumbalangi nights) ನಲ್ಲಿ ಫಹದ್‌ ಸೂಕ್ಷ್ಮವಾಗಿ‌ ತೆರೆಯ ಮೇಲೆ ತಂದ‌ -ಪುರುಷಹಂಕಾರವನ್ನು ಗುಪ್ತವಾಗಿ ಪ್ರದರ್ಶಿಸುವ, ಸ್ವಪಚತನವಿರುವ, ವಿಚಿತ್ರ ನಗುವಿನ ಖಳನಟನ ಪಾತ್ರ ಈವರೆಗೆ ಬಂದ ವಿಲನ್‌ ಪಾತ್ರಗಳಿಗೆ ಹೊಸ ಭಾಷ್ಯ ಬರೆದಂತಿತ್ತು. ಹಾಗೆಯೇ, ತೆಲುಗಿನಲ್ಲಿ ಅಭಿನಯಿಸಿದ 'ಪುಷ್ಪ' ಚಿತ್ರದ ಖಳನಾಯಕನ ಪಾತ್ರದ ಮ್ಯಾನರಿಸಂಗಳನ್ನು ಮರೆಯುವ ಮುನ್ನವೇ, ತಮಿಳಿನ 'ಮಹಾಮನ್ನನ್' ಚಿತ್ರದ ಖಳನ ಪಾತ್ರ ತಮಿಳುನಾಡಿನಾದ್ಯಂತ ಟ್ರೆಂಡಿಗ್ ಆಗಿದೆ. ಫಹದ್ ಒಂದು ಚಿತ್ರದಲ್ಲಿ ಅಭಿನಯಿಸಿದರೆ, ಆ ಚಿತ್ರದಲ್ಲಿನ ಉಳಿದವರ ಅಭಿನಯ ಮಂಕಾಗಿ ಕಾಣಿಸುತ್ತದೆ; ಬೆಂಕಿಯ ಜ್ವಾಲೆಯೆದರು ಕಳೆದು ಹೋಗುವ ಬೆಂಕಿ ಕಡ್ಡಿಯಂತೆ. ಒಂದು ಕಾಲದಲ್ಲಿ ನಟನೆ ಗೊತ್ತಿಲ್ಲವೆಂದು ಜರಿದ ವಿಮರ್ಶಕರು, ಈಗ ಈ ನಟನ ಸಿನಿಮಾ ಆಯ್ಕೆಯ ಚಾಣಾಕ್ಷತೆಗೆ, ಬೇರೆ ಯಾರಿಗೂ ಸಾಧ್ಯವಾಗದಂತ ನಟನೆಯಲ್ಲಿನ ವೈವಿಧ್ಯತೆಗೆ ಮರುಳಾಗಿದ್ದಾರೆ; ಅವನ ಕಣ್ಣ ಕಡಲಿನ ಆಳದಲ್ಲಿ ಅತ್ತಣಿಂದಿತ್ತ ಈಜುತ್ತಿದ್ದಾರೆ.. ‌

ಬಾಳ ಸಂಗಾತಿ, ನಟನೆಗೆ ಸ್ಫೂರ್ತಿಯಾದ ನಟ ಇತ್ಯಾದಿ..

ಫಹದ್‌ನ ಸರಳ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಮಾರುಹೋದ ನಟಿ ʼನಜ್ರಿಯಾʼಳ ಜೊತೆ ʼಬೆಂಗಳೂರ್‌ ಡೇಸ್‌ʼ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಫಹದ್‌ ಪ್ರೇಮದಲ್ಲಿ ಬೀಳುತ್ತಾನೆ. ಅವರಿಬ್ಬರೂ ಇಷ್ಟಪಟ್ಟು ಮದುವೆಯಾಗುತ್ತಾರೆ. ಆಗಲೂ ಅವರಿಬ್ಬರ ನಡುವೆ ಇರುವ ಹತ್ತು ವರ್ಷ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗುತ್ತಾನೆ. ಗಂಡು-ಹೆಣ್ಣು, ವಯಸ್ಸು-ಅಂತಸ್ತು, ಜಾತಿ-ಧರ್ಮಗಳಲ್ಲಿ ಮುಳುಗಿ ಕಲ್ಲೆಸೆಯುವವರ ನಡುವೆ ಪ್ರೇಮಕ್ಕೆಲ್ಲಿಯ ಅಂತರ ಅಲ್ಲವೇ? ಅವರಿಬ್ಬರು ಮದುವೆಯಾಗಿ ಬಿಂದಾಸ್‌ ಆಗಿ ಬದುಕುತ್ತಿದ್ದಾರೆ.‌

ಫಹದ್ ಅಮೇರಿಕಾದಲ್ಲಿ ಓದುತ್ತಿರುವಾಗ ವಾರಾಂತ್ಯದ ರಜಾದಿನಗಳಲ್ಲಿ ತನ್ನ ಗೆಳೆಯರೊಂದಿಗೆ  DVD ಗಳನ್ನು ಕೊಂಡು ಸಿನಿಮಾ ನೋಡುತ್ತಿದ್ದರು. ಹಾಗೇ ಒಂದು ದಿನ ಆಕಸ್ಮಿಕವಾಗಿ,  ಭಾರತದ ಶ್ರೇಷ್ಟ ನಟರಲ್ಲಿ ಒಬ್ಬರಾದ 'ಇರ್ಫಾನ್ ‌ಖಾನ್‌ʼ' ಅಭಿನಯದ 'Yuh Hota to Kya Hota' ಸಿನಿಮಾ ನೋಡಿದರು. ಆ ಸಿನಿಮಾದಲ್ಲಿ ಇರ್ಫಾನ್ ಖಾನ್ ಅಭಿನಯ ನೋಡಿ ಮೂಕವಿಸ್ಮಿತನಾಗಿದ್ದನಂತೆ ಫಹದ್. ಫಹದ್ ಸಿನಿಮಾ ರಂಗಕ್ಕೆ ಮತ್ತೆ ಬರಲು ಇರ್ಫಾನ್ ನಟನೆ ಕೂಡ ಕಾರಣವಂತೆ. ಆದ್ದರಿಂದಲೇ, ಇರ್ಫಾನ್ ಖಾನ್ ತೀರಿಕೊಂಡಾಗ ಅದನ್ನೆಲ್ಲಾ ನೆನೆದುಕೊಂಡ ಫಹದ್ ಹೃದಯಸ್ಪರ್ಶಿಯಾದ ಪತ್ರವೊಂದರ ಮೂಲಕ ತನ್ನ ಸಂತಾಪವನ್ನು ವ್ಯಕ್ತಪಡಿಸಿದ್ದನು.

ʼಆಮೇನ್‌ʼ, ʼಅನ್ನಯುಮ್ ರಸೂಲಮ್‌ʼ, ʼನಾರ್ತ್‌ 24 ಕಾದಮ್‌ʼ,‌ ‌ʼಆರ್ಟಿಸ್ಟ್ʼ, ʼಮಹೇಶಿಂದೆ ಪ್ರತೀಗಾರಮ್‌ʼ, ʼಅಯೂಬಿಂದೆ ಪುಸ್ತಕಮ್ʼ, ʼಕಾರ್ಬನ್‌ʼ, ʼಒರು ಇಂಡಿಯನ್‌ ಪ್ರಣಯಕಥʼ ʼಸಿ ಯು ಸೂನ್‌ʼ, 'ಟ್ರಾನ್ಸ್' ಮುಂತಾದುವು ಫಹದ್ ಅಭಿನಯದ ನೀವು ನೋಡಲೇಬೇಕಾದ ಕೆಲವು ಮಲಯಾಳಂ ಚಿತ್ರಗಳು.  ಮಾಸ್-ಕ್ಲಾಸ್ ಎಂಬ ವ್ಯತ್ಯಾಸವಿಲ್ಲದೆ, ಚಿತ್ರ ಮತ್ತು ಪಾತ್ರದ ಲಯವನ್ನು ಮೈಗೂಡಿಸಿಕೊಳ್ಳುವ ಫಹದ್, ಆಧುನಿಕ ಸಿನಿಮಾ ಜಗತ್ತಿಗೆ ಸಿಕ್ಕಿದ ಅಪರೂಪದ ಪ್ರತಿಭೆ. ಅಭಿನಯದಲ್ಲಿ ವೈವಿಧ್ಯತೆಯ ಉತ್ತುಂಗಕ್ಕೇರಿ, ತನಗೇನು ಗೊತ್ತಿಲ್ಲ ಎಂಬಂತೆ ಮಗುವೊಂದರ ಕುತೂಹಲದಂತೆ ಸಂದರ್ಶಕರ ಪ್ರಶ್ನೆಗಳನ್ನು ಆಲಿಸುವ ಫಹದ್,‌ ಸದಾ ಕಲಿಯುವ ಹಸಿವಿರುವ ನಟ. ಕಲೆಯೆಂಬುದು ಹಾಗೆಯೇ ತಾನೇ! ನಿಂತ ನೀರಾಗುವ ನಮ್ಮನ್ನು ಚಲನೆಗೆ ಒಡ್ಡುವ ವಿಜ್ಞಾನ ತಾನೇ?

Category : Movies and TV Shows


ProfileImg

Written by Guru

Writer, Poet & Automotive Enthusiast