ಬಿಸಿಲಿಂದ ಧಗ ಧಗ ಎನ್ನುವ ಭೂಮಿಗೆ ಅದು ಯಾವಾಗ ಮಳೆ ರಾಯನ ಕೃಪೆ ಆಗುತ್ತದೆಯೋ ಎಂದು ಕಾತುರದಿಂದ ಕಾಯುತ್ತಿದ್ದ ಮಣ್ಣಿನ ಕಣಗಳು, ಒಣಗಿ ಸೊಡರಿದ ನೆಲ, ಬಿರುಕು ಬಿಟ್ಟು ತಹ ತಹಸುತ್ತಿದೆ. “ನನ್ನ ದಾಹ ನೀಗಿಸಿ..” ಎಂದು ಕೈಯೆತ್ತಿ ನಿಂತ ಜಾಲಿ ಮರದ ಮುಳ್ಳುಗಳು ಮೊನೆ ಕಿರುಚ್ಚುತ್ತಿವೆ. ಹೊಲ ಗದ್ದೆಯ ಪೈರು ಅಷ್ಟೊ ಇಷ್ಟೊ ನೀರು ಕಂಡು ಅತೃಪ್ತಿಯಿಂದ ಕತ್ತು ಬಾಗಿಸಿ, ಜೋಲು ಮುಖ ತೋರುತ್ತಿವೆ. ನದಿಗಳು ಸೊರಗಿ ಸುಸ್ತಾಗಿ, ತನ್ನ ಪಾತ್ರ ತಗ್ಗಿಸಿ, ತನ್ನ ಆಳದ ರಹಸ್ಯ ಬಿಚ್ಚುತ್ತಿವೆ.
ಜಾನುವಾರುಗಳು ಹೊಳೆಗೆ ಬಂದು ನೀರಲ್ಲಿ ಮೀಯಲು ಬಯಸಿದರೂ ಬಿಸಿ ನೀರಿಗೆ ಹೆಜ್ಜೆ ಇಡಲು ಕೊಸರಿಕೋಳ್ಳುತ್ತಿವೆ. ಕುರಿ ಮೇಕೆಗೆ ಕುಡಿಯುವ ನೀರಿಗೆ ತತ್ವಾರ. ಹಕ್ಕಿ ಪಕ್ಕಿಗಳು ಊರು ಬಿಟ್ಟೆ ಹೋದವೋ ಏನೋ ಪಾಪ , ಬಯಲ ಬೇಸಿಗೆಯ ಕ್ರೂರತೆಗೆ ಅಂಜಿ ಎಲ್ಲಿ ಮುದುಡಿದವೂ ಏನೋ .ಗೂಡಿನಲ್ಲ ಅಮ್ಮ ಬರುವಳು, ಗುಟುಕ ನೀಡುವಳು ಎಂದು ಮರಿ ಹಕ್ಕಿಯ ಕೂಗು. ಬಿಸಿಲು ನೆತ್ತಿಗೆ ಬರುವಷ್ಟರಲ್ಲಿ, ಆಗ ತಾನೇ ಬಿರಿದ ಅಂಗಳದ ಕೆಂಪು ದಾಸವಾಳ ಬಾಡಿ ಬಸವಳಿಯಿತು, ದೇವರ ಮುಡಿಗೇರಲು ನಿರಾಕರಿಸಿತು. ನೀರೆ, ನೀರು ತರಲು ಹೊರಗಡಿ ಇಡಲು ಕೆಂಡದ ಸ್ಪರ್ಶ ಅವಳ ಪಾದಕೆ. ಬಿರು ಬಿಸಿಲು ಭಾದೆ ಅವಳ ಮೈಗೆ, ಬೆವರಿನ ಕೊಡಿ ಹರಿಸುತ, ಬಿಡಲಾರದ ಕರ್ಮಕ್ಕೆ ಹಳಹಳಿಸುತ ಬಿಸಿ ಒಲೆಯಲ್ಲಿ ಹೊಟ್ಟೆಗೆ ಹಿಟ್ಟು ಬೇಯಿಸಿದಳು.
ಗಾರೆ ಎತ್ತುವ ಕಾರ್ಮಿಕನಿಗೆ, ಮರಳು ಹೊತ್ತು ಬುಟ್ಟಿಯ ಭಾರವೇ ಹಿತವೀಗ, ಅದೇ ಅವನಿಗೆ ಕೊಡೆಯ ಕೊಡುಗೆ ಈಗ.
ಕೆಂಡ ಉಗುಳುವ ಬಂಡೆಯ ನಡುವೆ ನಿಂತ ಬೆಟ್ಟದ ದೇಗುಲವೀಗ ಖಾಲಿ ಖಾಲಿ, ಬಂದ ಭಕ್ತನಿಗೆ ತೀರ್ಥವೇ ಅಮೃತವಿಗ, ದೊನ್ನೆಯ ಪ್ರಸಾದವೇ ಮೃಷ್ಟಾನ್ನ ಭೋಜನ. ಅರ್ಚಕನಿಗೆ ಭಕ್ತಿಯಿಂದ ಕೈಮುಗಿವ ಕೈಗಳಿಗೆ ಬಿಸಿಲಿನ ಝಳಕ್ಕೆ ರಾಮ್ ರಾಮಾ…! ಎನ್ನುತ್ತಾ ಸಮಯ ತಳ್ಳುವರು.
ಪ್ರತಿ ಬೇಸಿಗೆಯಲ್ಲಿ ಕೃಷ್ಣಾ ನದಿಯ ಭೀಕರ ಮೊಸಳೆ ಒಂದು ದಂಡೆಗೆ ಬರುತ್ತದೆಯಂತೆ. ಇರುವೆಗಳು ಸರಿಸ್ರುಪಗಳು ತಮ್ಮ ಬಿಲದಿಂದ ತಾಪ ತಾಳದೆ ಹೊರಬಂದು ಆಹಾರ ಅರಸುತ್ತವೆ.
ಮಳೆಯ ಲಕ್ಷಣಗಳನ್ನು, ರೈತ ಮುಗಿಲು ನೋಡಿ ಅಳೆದರೆ, ವಿಜ್ಞಾನಿಗಳು ತಮ್ಮ ದೆ ಲೆಕ್ಕಾಚಾರದ ಮುನ್ಸೂಚನೆ ಕೊಡುತ್ತಾರೆ, ಪಕ್ಕದ ಮನೆ ಅಜ್ಜಿ ದೀಪದ ಹುಳು ಹಾರುತ್ತಿವೆ, ಮಳೆ ಬರುತ್ತೆ ಅಂತ ಭವಿಷ್ಯ ನುಡಿಯುತ್ತಾಳೆ. ಪಂಚಾಂಗ ಮಳೆಯ ನಕ್ಷತ್ರದ ಮುಹೂರ್ತ ಕೊಡುತ್ತದೆ.
ಕೊನೆಗೆ ಎಲ್ಲರ ಮಾತು ಸತ್ಯ ಎಂದು ಸಾಬೀತು ಪಡಿಸಲು, ಗಾಳಿ ಬಿರುಸಾಗುತ್ತದೆ, ಸೂರ್ಯ ಮೆದುವಾಗುತ್ತಾನೆ, ಮೋಡಗಳ ಚಲನೆ ಚುರುಕಾಗುತ್ತದೆ, ನವಿಲು ಗರಿ ಬಿಚ್ಚಿ ನಾಟ್ಯವಾಡುತ್ತದೆ, ಟಪ ಟಪನೇ ನಭದ ಮೈ ಬಿರಿದು ಮುತ್ತಿನ ಹನಿಗಳು ಇಳೆಗೆ ಇಳಿಯುತ್ತವೆ ಕಾಯುತ್ತಿರುವ ಭೂದೇವಿಗೆ ರೋಮಾಂಚನವಾಗುತ್ತದೆ, ಸಮ್ಮೋಹಗೊಳಿಸುವ ಮೃದ್ದಗಂಧ್ಹ ಘಮ್ಮ ಎನ್ನುತ್ತದೆ . ಮೋಡಗಳು ಬಣ್ಣ ಬದಲಾಗುತ್ತದೆ, ಸೂರ್ಯನ ಪ್ರತಾಪ ಸೋಲುತ್ತದೆ, ಈಗ ಮೋಡಗಳದ್ದೆ ಕಾರುಬಾರು , ಅವರದೇ ಗುದ್ದಾಟ, ಅವುಗಳ ಘರ್ಷಣೆ, ನಾ ಮುಂದೆ, ತಾ ಮುಂದೆ ಎನ್ನುವ ತಿಕ್ಕಾಟ. ಕೊನೆಗೆ ಬಲಶಾಲಿ ಓರ್ವನ ವಿಜಯ, ಬಸಿರು ಬಸೆದು ಬರುವ ಮಳೆಗೆ ಭೂಮಿಯ ನರ್ತನ, ಅದುವೇ ಪರಮ ಸುಖದ ಕ್ಷಣ. ಸಮೃದ್ಧಿಯ ಲಕ್ಷಣ, ಹಸಿರಿನ ಜನನ, ಪ್ರಕೃತಿಯ ಪರ್ಜನ್ಯ, ಕುಣಿದು ಕುಪ್ಪಳಿಸಿ, ಒದ್ದೆ ಮುದ್ದೆಯಾಗಿ, ಸಂತಸ ಪಡುವ ಬೇಸಿಗೆ ಮೊದಲ ಮಳೆಯ ಸಿಂಚನ. ಮಳೆಯೇ ಅಪರೂಪವಿರುವ ಪ್ರದೇಶಗಳಲ್ಲಿ, ಬೇಸಿಗೆಯ ಹಾಹಾಕಾರ ಹೇಳತೀರದು. ಇಂಥ ಅಧಿಕ ಉಷ್ಣಾಂಶವಿರುವ ಪ್ರದೇಶಗಳಲ್ಲಿ, ಬಿಟ್ಟು ಬಿಡದೆ ತಮ್ಮ ಕರ್ತವ್ಯಕ್ಕೆ ಹಾಜರಿ ಹಾಕುವ ಜನರ ಕಷ್ಟಗಳನ್ನು ಒಮ್ಮೆ ನಿಮ್ಮ ಕಲ್ಪನೆಯಲ್ಲಿ ಇಳಿಸಿ ನೋಡಿ, ಫ್ಯಾನ್ ಎ. ಸಿ, ಕೂಲರಗಳನ್ನು ಏಕಕಾಲಕ್ಕೆ ಆನ್ ಮಾಡಿ, ಬಿಸಿಲಿಗೆ ಶಪಿಸುತ್ತ ಕುಳಿತವರೆ… ಒಮ್ಮೆ ತಂಪಾದ ಆರವಟ್ಟಿಗೆ ಇಟ್ಟು ನೋಡಿ, ದನಕರುಗಳಿಗೆ ನೀರು ತುಂಬಿದ ಬಕೆಟ್ ಇಟ್ಟು ನೋಡಿ, ಹಕ್ಕಿಪಕ್ಕಿಗೆ ಅಟ್ಟದ ಮೇಲೆ ಕುಡಿಯಲು ಸುಗಮವಾಗುವಂತೆ ಕಾಳು ನೀರು ಹಾಕಿ, ಅರ್ಚಕರಿಗೆ ಮಜ್ಜಿಗೆ, ಪಾನಕ ಹಂಚಿ ವಸಂತೋತ್ಸವ ಆಚರಿಸಿ.
ಅಲೆದಾಡುವರಿಗೆ ನೆರಳು ಕೊಡಲು ರಸ್ತೆ ಬದಿಯಲ್ಲಿ ಮರ ನೆಡಿ. ಕಾಂಕ್ರೀಟ್ ಕಾಡಿಗೆ ಪ್ರೋತ್ಸಾಹ ಕಡಿಮೆ ಮಾಡಿ ನೋಡಿ, ಆಗ ನಿಮಗೂ ಸಕೆ ಕಡಿಮೆ ಅನಿಸಬಹಿದು, ತಾಪ ತಗ್ಗಬಹುದು, ಸಾಮಾಜಿಕ ಕಳಕಳಿಯಿಂದ ನಿಮ್ಮಗೆ ಹಿತವಾಗುವುದು, ಬೇಸಿಗೆ ಕೂಡ ತಂಪಾದ ತೃಪ್ತಿ ಕೊಡುವುದು. ಪ್ರಕೃತಿ ಪ್ರೀತಿಗೆ ನೀವೇ ಮಾದರಿ ಆಗಬಹುದು.
ಮೃಣಾಲಿನಿ ❤️❤️
ಬೆಂಗಳೂರು
English,Kannada Blogger
0 Followers
0 Following