ಅಂಗೈಯ್ಯಲ್ಲಿ ಅರೋಗ್ಯ

ಬಾಣಂತಿ ಆರೈಕೆ

ProfileImg
18 Mar '24
9 min read


image

ತಾಯಿಯಾಗುವುದು ಪ್ರತಿಯೊಬ್ಬ ವಿವಾಹಿತ ಹೆಣ್ಣಿನ ಕನಸು. ಅವಳು ಗರ್ಭಧರಿಸಿರುವೆ ಎಂದು ತಿಳಿದ ದಿನ ಅವಳ ಖುಷಿಗೆ ಸರಿ ಸಾಟಿ ಇಲ್ಲ. ಅವಳ ಜೀವನದ ಅತ್ಯಂತ ಸಂಭ್ರಮದ ಹಾಗೂ ಪದಗಳಲ್ಲಿ ಬಣ್ಣಿಸಲಾಗದ ಸಮಯ ಅದು. ಅದರ ಖುಷಿಯ ಜೊತೆಗೆ ಉದರದಲ್ಲಿರುವ ಮಗುವಿನ ಆಟಗಳನ್ನು, ಚಲನೆಗಳನ್ನು, ಮಗುವು ಆಡುತ್ತಿರುವುದನ್ನು ಅನುಭವಿಸಿ ತನ್ನ ಹೆರಿಗೆಯ ದಿನವನ್ನು ತಲುಪುತ್ತಾಳೆ.

ತಾಯಿಯಾಗುವೆ ಎಂಬ ಖುಷಿ ಎಷ್ಟೇ ಇದ್ದರೂ, ಹೆರಿಗೆಯ ಸಮಯದಲ್ಲಿ ಆಗುವ ಆತಂಕವನ್ನು ತಪ್ಪಿಸಲು ಸಾಧ್ಯವಿಲ್ಲ. ನೀವು ಎಷ್ಟೇ ಧೈರ್ಯ ಹೇಳಿದರು, ತನ್ನಲ್ಲಿ ಭಯ ಇದ್ದೆ ಇರುತ್ತದೆ. ಮಗುವಿನ ಮುಖ ನೋಡಿದ ತಕ್ಷಣ ತಾನು ಅನುಭವಿಸಿದ ನರಕಯಾತನೆಗಳನ್ನೆಲ್ಲಾ ಕ್ಷಣದಲ್ಲಿ ಮರೆತು ಹೋಗುತ್ತಾಳೆ. ಮಗುವಿಗೆ ಜನ್ಮ ನೀಡಿದ ನಂತರ ಆ ದಿನ, ಆ ಕ್ಷಣದಿಂದ ಅವಳ ಹೊಸ ಜೀವನ ಪ್ರಾರಂಭವಾಗುತ್ತದೆ. ಮಗುವಿನ ಜೊತೆಗೆ ತಾಯಿಯಾಗಿ ಅವಳೂ ಸಹ ಮರುಜನ್ಮ ಪಡೆದಿರುತ್ತಾಳೆ.


ಮಗುವಿಗೆ ಜನ್ಮ ನೀಡಿದ ಸಂತೋಷದಲ್ಲಿ ಒಬ್ಬ ತಾಯಿಯಾಗಿ ಅವಳು ಎಂದೂ ತನ್ನ ಕರ್ತವ್ಯವನ್ನು ಮರೆಯುವುದಿಲ್ಲ. ಅಂತೆಯೇ ಕಷ್ಟ, ನೋವುಗಳನ್ನು ಅನುಭವಿಸಿ ಮುದ್ದು ಕಂದಮ್ಮನಿಗೆ ಜನ್ಮ ನೀಡಿದ ಬಳಿಕ ಕೆಲವು ಕಾಲದವರೆಗೆ ಅವಳನ್ನು ಹಾಗೂ ಮಗುವನ್ನು ಆರೈಕೆ ಮಾಡುವುದು, ಜೋಪಾನಮಾಡುವುದು, ಅವರ ಅರೋಗ್ಯ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಕೆಲವರಿಗೆ ಬಾಣಂತಿಯನ್ನು ಹೇಗೆ ನೋಡಿಕೊಳ್ಳಬೇಕು? ಅವರ ದಿನಚರಿ ಹೇಗಿರುತ್ತದೆ? ಎಂಬ ಕಲ್ಪನೆಯು ಇರುವುದಿಲ್ಲ. ಅಂತವರಿಗಾಗಿ ಈ ಲೇಖನ.

ಈ ಸಮಯದಲ್ಲಿ ತಾಯಿಯು ಆರೋಗ್ಯ ತಪ್ಪಿದರೆ, ಅದು ಮಗುವಿನ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ. ಆದ್ದರಿಂದ ಬಾಣಂತಿ ತಾಯಿಯನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು.

೧.ಬಾಣಂತಿಯರು ನೀರಿನಿಂದ ಆದಷ್ಟು ದೂರವಿರಬೇಕು, ಕಾರಣ ಅವರಿಗೆ ಶೀತವಾಗಬಹುದು. ಮತ್ತು ಕುಡಿಯಲು ಮಾತ್ರವಲ್ಲದೆ, ತನ್ನ ಎಲ್ಲಾ ಕಾರ್ಯಗಳಿಗೆ ಬಿಸಿ ನೀರನ್ನು ಬಳಸುವುದು.

೨.ಅವರಿಗೆ ಶೀತವಾಗದಂತೆ ನೋಡಿಕೊಳ್ಳಿ.

೩.ಬಾಣಂತಿ ಮತ್ತು ಮಗು ಬೆಳಗಿನ ಸೂರ್ಯನ ಹೊಂಗಿರಣವನ್ನು ಸ್ಪರ್ಶಿಸಿದರೆ ವಿಟಮಿನ್ ಡಿ ಜೊತೆ ಆರೋಗ್ಯಕ್ಕೂ ಒಳ್ಳೆಯದು. ಬೆಳಗ್ಗೆ ೧೦ರ ನಂತರದ ಬಿಸಿಲು ಚರ್ಮ ಕಪ್ಪಾಗುವಂತೆ ಅಥವಾ ಚರ್ಮ ಅಲರ್ಜಿಗೂ ಕಾರಣವಾಗಬಹುದು.

೪.ಆದಷ್ಟು ಮನೆಯ ಒಳಗಡೆ ಇರುವುದು ಒಳ್ಳೆಯದು, ಏಕೆಂದರೆ ವಾತಾವರಣದಲ್ಲಿನ ಕಲ್ಮಶಗಳು ಅವರ ದೇಹ ಪ್ರವೇಶಿಸಿ, ಅನಾರೋಗ್ಯವನ್ನುಂಟುಮಾಡಬಹುದು. ಬಾಣಂತಿ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಯಾಗಿರುತ್ತದೆ. ಆದ್ದರಿಂದ, ಅವರು ಬೇಗನೆ ರೋಗಕ್ಕೆ ಗುರಿಯಾಗುತ್ತಾರೆ.

೫.ಅವರು ಯಾವುದೇ ಕೆಲಸಗಳನ್ನು ಮಾಡಬಾರದು. ಏಕೆಂದರೆ ಅವರಿಗೆ ಈಗ ವಿಶ್ರಾಂತಿ ಬೇಕು. ಮಗುವಿಗೆ ಜನ್ಮ ನೀಡಿದ ನಂತರ ಅವರ ದೇಹದಲ್ಲಿ ಹಲವಾರು ಬದಲಾವಣೆಗಳು ಆಗಿರುತ್ತವೆ. ಮತ್ತು ಅವರ ದೇಹದ ಹಾರ್ಮೋನುಗಳಲ್ಲೂ ಕೂಡ ಏರುಪೇರಾಗಿರುತ್ತದೆ.

೬.ಮಗುವಾದ ೨-೩ವಾರಗಳವರೆಗೆ ಅವರು ಮಗುವಿಗೆ ಮಲಗಿಕೊಂಡೆ ಎದೆಹಾಲುಣಿಸುವುದು ಉತ್ತಮ. ಕಾರಣ ಕೂತುಕೊಂಡು ಎದೆಹಾಲುಣಿಸಿದರೆ ಅವರಿಗೆ ಬೆನ್ನು ನೋವು ಬರಬಹುದು ಅಥವಾ ಅವರಿಗೆ ಹೆರಿಗೆಯ ನೋವು ಇನ್ನೂ ಸಂಪೂರ್ಣವಾಗಿ ಗುಣವಾಗಿರುವುದಿಲ್ಲ. ತೊಡೆ ಮಡಚಿಕೊಂಡು ಕೂತುಕೊಂಡರೆ ಮತ್ತೆ ಆ ನೋವು ಹೆಚ್ಚಾಗಬಹುದೆಂದು ಮಲಗಿಕೊಂಡೆ ಎದೆಹಾಲುಣಿಸಲು ಸಲಹಿಸುತ್ತಾರೆ.

೭.ತಮ್ಮ ಹೊಟ್ಟೆಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುವರು. ಏಕೆಂದರೆ ಉಬ್ಬಿರುವ ಹೊಟ್ಟೆಯನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಕಲ್ಮಶ ರಕ್ತವನ್ನು ಶುಚಿಗೊಳಿಸಲು ಇದು ಸಹಾಯವಾಗುತ್ತದೆ.

೮.ಬೆಂಡೆಕಾಯಿಯನ್ನು ತಿನ್ನಬಾರದು. ಕಾರಣ ಅದು ಅವರಲ್ಲಿ ಶೀತವನ್ನು ಉಂಟುಮಾಡಬಬಹುದು.

೯.ಅವರಿಗೆ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರವನ್ನು ಕೊಡಬೇಕು.

೧೦.ಬೆಚ್ಚಗಿನ ವಾತಾವರಣದಲ್ಲಿ ಅವರನ್ನು ಇರಿಸಿ.

೧೧.ಹೆಚ್ಚು ಹಸಿರು ಸೊಪ್ಪು ತರಕಾರಿಗಳನ್ನು ನೀಡಿ.

೧೨.ಅವರು ಹೆಚ್ಚು ನಡೆದಾಡಬಾರದು. ಕಾರಣ ಹೆರಿಗೆ ಸಮಯದಲ್ಲಿ ಖಾಸಗಿ ಜಾಗದಲ್ಲಿ ಆಗಿರುವ ನೋವು ನಡೆದಾಡುವುದರಿಂದ ಹೆಚ್ಚಾಗಬಹುದು. ಮತ್ತು ಕೆಲವರು ಸಿಸೇರಿಯನ್ ಮಾಡಿಸಿಕೊಂಡಿರುತ್ತಾರೆ, ಅವರು ನಡೆದಾಡುವುದರಿಂದ ಹೊಲಿಗೆ ಬಿಚ್ಚಿಹೋಗುವ ಅಥವಾ ಹೆಚ್ಚು ನೋವಾಗುವ ಸಾಧ್ಯತೆ ಇರುತ್ತದೆ.

ಇನ್ನೂ ಹೆರಿಗೆಯಾದ ನಂತರ, ಬಾಣಂತಿಯರ ಆಹಾರಕ್ರಮ ಹೇಗಿರಬೇಕು?

ಬಾಣಂತಿ ತಾಯಿ ಚೇತರಿಸಿಕೊಳ್ಳಲು, ಸಾಮಾನ್ಯವಾಗಿ 6 ರಿಂದ 8 ವಾರಗಳು ಬೇಕಾಗಬಹದು. ಈ ಸಮಯವೇನಿದೆ ಅದು ಬಹಳ ಮುಖ್ಯವಾಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ತಾಯಿಯ ಶರೀರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಶರೀರದ ಆಕಾರ ಬದಲಾಗುತ್ತದೆ, ಹೊಸ ಜವಾಬ್ದಾರಿಗೆ ತೆರೆದುಕೊಳ್ಳಬೇಕಾಗುತ್ತದೆ, ಹಾಲುಣಿಸಲು ಸಿದ್ಧವಾಗಬೇಕು, ಹೀಗೆ ಅನೇಕ ಆತಂಕಕ್ಕೆ ತಾಯಿ ಜೀವ ಒಳಗಾಗಿರುತ್ತದೆ.

ಈ ಸಮಯದಲ್ಲಿ ಆಕೆಗೆ ಒಳ್ಳೆಯ ಆರೈಕೆಯ ಅಗತ್ಯತೆ ಇರುತ್ತದೆ. ಹಾಗಾಗಿ ಬಾಣಂಂತಿಯ ಆರೈಕೆ ಹೇಗೆ ಮಾಡಬಹುದು? ಆಕೆಯನ್ನು ಸ್ವಸ್ಥವಾಗಿಡಲು ಕೆಲವು ಸಲಹೆಗಳನ್ನು ನೋಡೋಣ. ಮುಖ್ಯವಾಗಿ ಮೂರು ಅಂಶಗಳತ್ತ ಗಮನ ಹರಿಸೋಣ ಬನ್ನಿ.

1. ವಿಶ್ರಾಂತಿ
2. ಪೌಷ್ಟಿಕಾಂಶಯುಕ್ತ ಆಹಾರ
3. ವ್ಯಾಯಾಮ

1)ವಿಶ್ರಾಂತಿ:-


ಬಾಣಂತನದಲ್ಲಿ ತಾಯಿಗೆ ವಿಶ್ರಾಂತಿ ಬಹಳ ಮುಖ್ಯ. ಆದರೆ, ಮಗುವಿದ್ದಾಗ ವಿಶ್ರಾಂತಿ ಕಷ್ಟಸಾಧ್ಯ. ಮಗು ಪದೇ ಪದೇ ಏಳುವುದರಿಂದ ತಾಯಿಗೆ ನಿದ್ದೆ ಸರಿಯಾಗಿರಲಾರದು. ಹಾಗಾಗಿ ಮಗು ಮಲಗಿದ್ದಾಗಲೇ ತಾಯಿಯೂ ಮಲಗಿ ಆ ನಿದ್ದೆಯನ್ನು ಸರಿತೂಗಿಸಿಕೊಳ್ಳಬೇಕಾಗುತ್ತದೆ.

ಮೊದಲ 2-3 ತಿಂಗಳುಗಳಾದರೂ ತಾಯಿ ಇನ್ನಾವುದೇ ಕೆಲಸ ಮಾಡದೆ ಕೇವಲ ಮಗುವಿಗೆ ಹಾಲುಣಿ ಸುವುದು,ತನ್ನ ಆಹಾರದ ಕಡೆ ಗಮನ ಹರಿಸುವುದು ಇಷ್ಟೇ ಮಾಡಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ಭವಿಷ್ಯದಲ್ಲಿ ತೊಂದರೆಯಾಗುವುದನ್ನು ತಡೆಗಟ್ಟಬಹುದು.

ವಿಶ್ರಾಂತಿ ಎಂದರೆ ಕೇವಲ ನಿದ್ದೆಯಲ್ಲ ಮಾನಸಿಕವಾಗಿ ಯಾವುದೇ ಒತ್ತಡದಿಂದ ದೂರವಿರುವುದು ಎಂದರ್ಥ. ಒತ್ತಡಗಳಿಲ್ಲದಿದ್ದರೆ, ತಾಯಿಗೆ ಎದೆ ಹಾಲು ಹೆಚ್ಚಾಗಿ ಉತ್ಪತ್ತಿಯಾಗಿ ಮಗುವಿನ ಆರೈಕೆಯೂ ಚೆನ್ನಾಗಿ ಆಗುತ್ತದೆ. ಮನಸ್ಸು ಪ್ರಶಾಂತವಾಗಿದ್ದರೆ ನಿಮ್ಮ ಹಾಗೂ ಮಗುವಿನ ಆರೋಗ್ಯ ಸ್ವಸ್ಥವಾಗಿರುತ್ತದೆ.


2) ಪೌಷ್ಟಿಕಾಂಶಯುಕ್ತ ಆಹಾರ:-


ಎಲ್ಲಾ ಬಾಣಂತಿಯರ ತಾಯಿ ಅಥವಾ ಆರೈಕೆ ಮಾಡುವವರು ಬಾಣಂತಿಯರ ಆರೈಕೆಯ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ. ಆಕೆಗೆ ಏನು ಆಹಾರ ನೀಡಬೇಕೆಂಬುದನ್ನು ನೋಡೋಣ.

✴️ ಮುಖ್ಯವಾಗಿ ನೀರು ಕುಡಿಯಬೇಕಾಗುತ್ತದೆ. 3 ರಿಂದ 4 ಲೀಟರ್ ನೀರು ಅತ್ಯವಶ್ಯಕ.
✴️ ನೀರು ಕಡಿಮೆ ಕುಡಿದರೆ ಮಲ ವಿಸರ್ಜನೆ ಕಷ್ಟವಾಗುತ್ತದೆ, ನಾರ್ಮಲ್ ಹೆರಿಗೆಯಾದವರಿಗೆ ಹೊಲಿಗೆ ಹಾಕಿರುವುದರಿಂದ ಆ ಹೊಲಿಗೆಗೆ ತೊಂದರೆಯಾಗುತ್ತದೆ.
✴️ಎದೆ ಹಾಲು ಹೆಚ್ಚಾಗಲು ನೀರು ಚೆನ್ನಾಗಿ ಕುಡಿಯಬೇಕಾಗುತ್ತದೆ.
✴️ ಸಿಜ಼ೆರಿಯನ್ ಆದ ಬಾಣಂತಿಯರು ಹೆಚ್ಚಾಗಿ ನೀರು ಕುಡಿಯಬೇಕಾಗುತ್ತದೆ.ಏಕೆಂದರೆ ಆ ಸಮಯದಲ್ಲಿ ಅನಸ್ಥೇಷಿಯದ ಪರಿಣಾಮ 'ಸೆರಿಬ್ರೋ ಸ್ಪೈನಲ್ ಫ್ಲೂಯಿಡ್ 'ಅಂದರೆ ಮೆದುಳಿನ ಸುತ್ತ ಇರುವ ನೀರು ಸ್ವಲ್ಪ ಲೀಕ್ ಆಗಿರುತ್ತದೆ. ಹಾಗಾಗಿ ಅವರಿಗೆ ತಲೆನೋವು ಬರುತ್ತದೆ. ಅದನ್ನು ತಡೆಯಲು ನೀರು ಕುಡಿಯಬೇಕಾಗುತ್ತದೆ ಮತ್ತು ತಲೆದಿಂಬಿಲ್ಲದಂತೆ ಕಾಲು ಮೇಲೆ ಮಾಡಿ ಮಲಗಬೇಕು.
✴️ಹೆರಿಗೆಯ ಸಮಯದಲ್ಲಿ ರಕ್ತ ಸ್ರಾವವಾಗಿ ತಾಯಿಗೆ ಬಹಳಷ್ಟು ರಕ್ತ ಹೀನತೆಯುಂಟಾಗಿರುತ್ತದೆ ಅಲ್ಲದೆ ಮಗುವಿಗೆ ಸತ್ವಯುತ ಆಹಾರ ಹೋಗಬೇಕೆಂದರೆ ಅದು ತಾಯಿಯ ಎದೆ ಹಾಲಿನ ಮುಖಾಂತರವೇ. ಹಾಗಾಗಿ ತಾಯಿಗೆ ಸಮತೋಲನವಾದ ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ಅತ್ಯವಶ್ಯಕವಾಗುತ್ತದೆ.
✴️ಮೊಳಕೆ ಕಾಳುಗಳ ಕಟ್ಟು ಕೊಡಬಹುದು.
✴️ ಹಾಲು ಚೆನ್ನಾಗಿ ಸೇವಿಸಿ. ಹಣ್ಣುಗಳು ಯಾವುದಾದರೂ ಸರಿ, ದಿನಕ್ಕೆ ಒಂದಾದರೂ ತೆಗೆದುಕೊಳ್ಳಿ. ಹಲಸಿನ ಹಣ್ಣು ಮಾತ್ರ ಆದಷ್ಟೂ ಬೇಡ. ಅದರ ಪರಿಮಳ ಮಗುವಿಗೆ ಹಿಡಿಸದೆ ಹಾಲು ಕುಡಿಯದಿರಬಹುದು ಮತ್ತು ಅಜೀರ್ಣವೂ ಆಗಬಹುದು.
✴️ಬಾದಾಮಿ, ಖರ್ಜೂರದಂತಹ ಒಣ ಹಣ್ಣುಗಳನ್ನು ತಿನ್ನಬಹುದು.
✴️ ಹಸಿರು ತರಕಾರಿಗಳನ್ನು ಅದರಲ್ಲೂ ಸೊಪ್ಪುಗಳು ಬಾಣಂತಿಯರಿಗೆ ಬಹಳ ಉತ್ತಮವಾದ ಪಥ್ಯವಾಗಿದೆ. ಮೆಂತ್ಯದ ಸೊಪ್ಪು,ಸಬ್ಬಸ್ಸಿಗೆ ಸೊಪ್ಪುಗಳು ಎದೆ ಹಾಲು ಹೆಚ್ಚಿಸುವುದಕ್ಕೆ ಸಹಾಯಕವಾಗುತ್ತದೆ.
✴️ಇವೆಲ್ಲದರ ಜೊತೆಗೆ ಮೊದಲ 3 ತಿಂಗಳು ಕಬ್ಬಿಣ ಹಾಗೂ ಕ್ಯಾಲ್ಶಿಯಮ್ ಕೊರತೆ ನೀಗಿಸಲು ಮಾತ್ರೆಗಳನ್ನೂ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕಾಗುತ್ತದೆ.


ಬಾಣಂತಿಯರು ತಿನ್ನಬಹುದಾದ 20 ಆಹಾರಗಳ ಪಟ್ಟಿ

ಗರ್ಭ ಧರಿಸಿದ ಸಂದರ್ಭದಲ್ಲಿ ಗರ್ಭಿಣಿಯರ ದೇಹಾರೋಗ್ಯದಲ್ಲಿ ಬದಲಾವಣೆ ಕಂಡು ಬರುತ್ತದೆ. ಹಾಗಾಗಿ ನವಜಾತ ಶಿಶುವಿನ ಪೋಷಣೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪ್ರಸವದ ನಂತರ ಬಾಣಂತಿಯರ ಆರೋಗ್ಯವೂ ಕೂಡ.

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಹಾರಗಳ ಬಗೆಗೆ ಬಹಳಷ್ಟು ಜಾಗರೂಕರಾಗಿರಬೇಕಾಗುತ್ತದೆ. ಹೆಚ್ಚು ಖಾರ ಇರುವ ಹಾಗೂ ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ಎಂದಿಗೂ ಸೇವಿಸಬಾರದು.ಆದರೆ ಈ ವೇಳೆ ಎಷ್ಟೋ ಮಹಿಳೆಯರಿಗೆ ಇಂತಹ ಖಾರ ಅಥವಾ ಸ್ಪೈಸಿ ಮಸಾಲೆ ಇರುವ ಆಹಾರಗಳ ಮೇಲೆ ಕ್ರೇಜ್ ಇರುತ್ತದೆ. ಹಾಗಾಂತ ಹೇಳಿ ಹೆರಿಗೆ ಆದ ಕೂಡಲೇ ಇಂತಹ ಆಹಾರಗಳನ್ನು ಸೇವಿಸುವಂತಿಲ್ಲ.

ಭಾರತೀಯ ಆಹಾರ ಪದ್ದತಿ ಯಲ್ಲಿ ಹೆರಿಗೆಯ ನಂತರದ ಆಹಾರದ ಬಗೆಗೂ ಪಥ್ಯಗಳಿವೆ ಎಂದರೆ ನೀವು ನಂಬಲೇಬೇಕು.ಹಾಗಾಗಿ ಹೆರಿಗೆಯ ನಂತರ ಬಾಣಂತಿಯರು ಯಾವ ಆಹಾರವನ್ನು ತೆಗೆದುಕೊಳ್ಳಬಹುದು ಹಾಗೂ ಯಾವ ಆಹಾರವನ್ನು ತೆಗೆದುಕೊಳ್ಳಬಾರದು ಎಂಬುವುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಪ್ರಸವ ನಂತರದ ಪೋಷಣೆ ಏಕೆ ಮುಖ್ಯ?
​ಎದೆ ಹಾಲು ಉಣಿಸುವ ವೇಳೆ ಆಹಾರದ ಪದ್ದತಿ ಹೀಗಿರಬೇಕು?

ಪೋಷಕಾಂಶವಿರುವ ಆಹಾರ: ಗರ್ಭಿಣಿ ಅಥವಾ ಹೆರಿಗೆ ಆದ ನಂತರ ಸಾಮಾನ್ಯವಾಗಿ ಆಯಾಸ, ಬಳಲಿಕೆ ಇರುತ್ತದೆ. ಅಲ್ಲದೇ ಮಗುವಿನ ಲಾಲನೆ‌, ಪೋಷಣೆ, ಅಸಮರ್ಪಕವಾದ ನಿದ್ದೆಯಿಂದಾಗಿ ಪುನಃ ಆಯಾಸವಾಗುವುದು ಖಂಡಿತ.

ಕೆಲವೊಮ್ಮೆ ಕೆಲವು ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದಾಗಲೂ ಈ ಸಮಸ್ಯೆ ಕಾಡಬಹುದು. ಇದರಿಂದಾಗಿಯೂ ದೇಹ ಸೊರಗಬಹುದು ಅಥವಾ ಆಯಾಸ ಬಳಲಿಕೆಯಿಂದ ತಲೆನೋವು ಕಾಡಬಹುದು. ಹೀಗಾಗಿ ಹೆಚ್ಚು ಕ್ಯಾಲ್ಸಿಯಂ ಇರುವ ಸೊಪ್ಪು, ಮಾಂಸ, ದ್ವಿದಳ ಧಾನ್ಯಗಳು, ಕರ್ಜೂರ, ಅಂಜೂರವನ್ನು ಸೇವಿಸಬೇಕು. ಈ ರೀತಿಯ ಆಹಾರ ಸೇವನೆ ಬಾಣಂತಿಯರಿಗೆ ಬಹಳ ಒಳ್ಳೆಯದು.

ಎದೆಹಾಲನ್ನು ಹೆಚ್ಚಿಸಬಹುದು: ಹೆಚ್ಚು ಹೆಚ್ಚು ಪೋಷಾಕಾಂಶ ಇರುವ ಆಹಾರ ಅಥವಾ ಆರೋಗ್ಯಕರವಾದ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ. ಆದರೆ ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಬಾಣಂತಿಯರು ಕ್ಯಾಲ್ಸಿಯಂ ಇರುವ ಆಹಾರವನ್ನೇ ಸೇವಿಸಬೇಕು.

ಮನಸ್ಥಿತಿ ಚೆನ್ನಾಗಿರಬೇಕು: ಸಾಮಾನ್ಯವಾಗಿ ಪ್ರಸವ ನಂತರದಲ್ಲಿ ಬಾಣಂತಿಯರಿಗೆ ಒಂದು ರೀತಿಯ ಡಿಪ್ರೆಷನ್ ಕಾಡುತ್ತಿರುತ್ತದೆ. ಹಾಗಾಗಿ ಪೋಷಕಾಂಶ ಇರುವ ಅಥವಾ ಆರೋಗ್ಯಯುತವಾದ ಆಹಾರ ಸೇವನೆಯಿಂದ ಈ ರೀತಿಯ ಸಮಸ್ಯೆ ಯಿಂದ ದೂರವಾಗಬಹುದು. ಅಲ್ಲದೆ, ಈ‌ ಸಂದರ್ಭದಲ್ಲಿ ಹೆಚ್ಚು ಸಂತೋಷವಾಗಿರಬಹುದು ಮತ್ತು ಸದೃಡರಾಗಿರಬಹುದು. ಅಲ್ಲದೆ, ಅಶಕ್ತತೆಯೂ ಕೂಡ ಕಾಡದು. ಹಾಗಾಗಿ ಈ ರೀತಿಯ ಆಹಾರ ಪದ್ದತಿಯನ್ನು ಅನುಸರಿಸಿದರೆ ಬಾಣಂತಿಯರು ಡಿಪ್ರೆಶನ್ ನಿಂದ ಪಾರಾಗಬಹುದು.


ಪ್ತಸವ ನಂತರ ಸೇವಿಸಬಹುದಾದ ಇಪ್ಪತ್ತು ಭಾರತೀಯ ಆಹಾರಗಳು:
ಇಲ್ಲಿ ಕೆಲವು ಆಹಾರಗಳ ವಿವರಣೆ ಇದೆ. ಬಾಣಂತಿಯರು ಇವುಗಳನ್ನು ಗಮನಿಸಬಹುದು.

*ನುಗ್ಗೆ ಸೊಪ್ಪು*


ಮುಖ್ಯವಾಗಿ ಬಾಣಂತಿಯರಿಗೆ ಈ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಸೇವಿಸಲು ಕೊಡುತ್ತಾರೆ.ಯಾಕೆಂದರೆ ಇದರಲ್ಲಿ ವಿಟಮಿನ್ ಎ,ಬಿ ಮತ್ತು ಸಿ ಹಾಗೂ ಅಧಿಕ ಖನಿಜಾಂಶ, ಪೋಷಕಾಂಶದ ಪ್ರಮಾಣ ಅಧಿಕವಾಗಿ ಇರುತ್ತದೆ. ಇದರಿಂದ ದೇಹಕ್ಕೆ ಅಧ್ಭುತವಾದ ಕ್ಯಾಲ್ಸಿಯಂ ದೊರೆಯುತ್ತದೆ.

ನಿಮ್ಮ ಆಹಾರ ಪದ್ದತಿಯಲ್ಲಿ ಇದನ್ನು ಹೇಗೆ ಬಳಸಬಹುದು?

ಗರ್ಭಿಣಿಯಾದ ನಂತರ ಸುಮಾರು ನಾಲ್ಕು ತಿಂಗಳು ಶತಾವರಿ ಕಲ್ಪದೊಂದಿಗೆ ಸೇವಿಸಬಹುದು. ಅಲ್ಲದೇ, ಈ ನುಗ್ಗೆ ಸೊಪ್ಪಿನಿಂದ ಸೂಪ್ ತಯಾರಿಸಿ ಸೇವಿಸಬಹುದು ಅಥವಾ ನಿಮಗೆ ಇಷ್ಟವಾಗುವ ರೀತಿಯಲ್ಲಿ ಪಲ್ಯ ಅಥವಾ ಇನ್ನಿತರ ತರಕಾರಿಗಳೊಂದಿಗೆ ಬೆರೆಸಿ ನಿಮಗಿಷ್ಟವಾಗುವ ರೀತಿಯಲ್ಲಿ ಸೇವಿಸಬಹುದು.

*ಮೊಳಕೆ ಭರಿಸಿದ ಧಾನ್ಯಗಳು*


ಸಾಮಾನ್ಯವಾಗಿ ನಾವು ಬಾಲ್ಯದಿಂದಲೇ ಹೆಚ್ಚಾಗಿ ಈ ಮೊಳಕೆ ಭರಿಸಿದ ಧಾನ್ಯಗಳನ್ನು ಆಹಾರದೊಂದಿಗೆ ಬಳಸುತ್ತೇವೆ. ಒಣಗಿದ ಧಾನ್ಯಗಳಲ್ಲಿ ಹೆಚ್ಚಾಗಿ ಪೋಷಾಕಾಂಶಗಳು ಇಲ್ಲದೇ ಇರುವುದರಿಂದ ರಾಗಿ, ಗೋಧಿ, ಜೋಳ ಮುಂತಾದ ಧಾನ್ಯಗಳನ್ನು ಮೊಳಕೆ ಭರಿಸಿ ಸೇವಿಸುವುದು ಬಹಳ ಉತ್ತಮ.

ಆಹಾರದಲ್ಲಿ ಇವುಗಳನ್ನು ಹೇಗೆ ಬಳಸಬಹುದು?
 

ಈ ರಾಗಿ, ಗೋಧಿ, ಅಥವಾ ಜೋಳ ಇನ್ನಿತರ ಧಾನ್ಯಗಳನ್ನು ಮೊಳಕೆ ಭರಿಸಿದ ನಂತರ ಹಿಟ್ಟಾಗಿ ಮಾರ್ಪಾಡು ಮಾಡಿ ರೊಟ್ಟಿ ಅಥವಾ ದೋಸೆ ಮಾಡಿ ತಿನ್ನಬಹುದು ಅಥವಾ ಗಂಜಿ ಮಾಡಿಯೂ ಸೇವಿಸಿದರೆ ಬಹಳ ಒಳ್ಳೆಯದು.

*ಬಾದಾಮಿ*


ಬಾದಾಮಿಯಲ್ಲಿ ಅತ್ಯಧಿಕವಾದ ಕ್ಯಾಲ್ಸಿಯಂ ಇರೋದ್ರಿಂದ ನಿಮ್ಮ ಆಹಾರದಲ್ಲಿ ಇದನ್ನು ಬಳಸಬಹುದು. ಅಲ್ಲದೇ ಆದಷ್ಟು ಪ್ಯೂರ್ ಆಗಿರುವ ಬಾದಾಮಿ ಸಿಕ್ಕರೆ ಬಹಳ ಒಳ್ಳೆಯದು. ಯಾಕೆಂದರೆ ಅದರಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಖನಿಜಾಂಶಗಳು ದೇಹಕ್ಕೆ ಪೂರೈಕೆಯಾಗುವುದರಿಂದ ಗರ್ಭಿಣಿಯರು ಅಥವಾ ಬಾಣಂತಿಯರು ಈ ಬಾದಾಮಿಯನ್ನು ತಪ್ಪದೇ ತಮ್ಮ ಆಹಾರಲ್ಲಿ ಬಳಸಬಹುದು.

ಬಾದಾಮಿಯನ್ನು ಹೇಗೆ ಆಹಾರವಾಗಿ ಬಳಸಬಹುದು?


ಬಾದಾಮಿಯನ್ನು ರಾತ್ರಿ ಒಂದು ಗ್ಲಾಸು ನೀರಿನಲ್ಲಿ ನೆನೆಸಿಡಿ. ಹಾಗೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವಿಸಿ. ಇದರಿಂದಾಗಿ ಇದರಲ್ಲಿರುವ ಒಮೆಗಾ 3 ಎಂಬ ಪೋಷಕಾಂಶ ಮಗುವಿನ ಮೆದುಳಿಗೂ ಬಹಳ ಒಳ್ಳೆಯದು.


*ಸೋರೆಕಾಯಿ*


ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಬಾಣಂತಿಯರು ಈ ಸೋರೆಕಾಯಿಯನ್ನು ಸೇವಿಸಿದರೆ ಬಹಳ ಒಳ್ಳೆಯದು. ಇದು ಅತ್ಯಧಿಕವಾದ ಕ್ಯಾಲ್ಸಿಯಂನ್ನು ಒಳಗೊಂಡಿದ್ದಲ್ಲದೆ, ದೇಹದಲ್ಲಿ ಜಲಸಂಚಯನಕ್ಕೂ ಸಹಕಾರಿಯಾಗುತ್ತದೆ. ಅಲ್ಲದೇ ದೇಹದ ತೂಕವನ್ನು ಕಮ್ಮಿಗೊಳಿಸಲು ಸಹಾಯವಾಗುತ್ತದೆ.

ಜೊತೆಗೆ ಅತ್ಯಧಿಕವಾದ ವಿಟಮಿನ್ ಎ, ಸಿ ಹಾಗೂ ಸೋಡಿಯಂ, ಖನಿಜಾಂಶ, ಕಬ್ಬಿಣಾಂಶ ಹಾಗೂ ಮ್ಯಾಗ್ನೇಶಿಯಂಗಳನ್ನು ಒಳಗೊಂಡಿದೆ. ಅಲ್ಲದೆ, ಶೇಕಡಾ 95% ನಷ್ಟು ನೀರಿನಾಂಶವನ್ನು ಒಳಗೊಂಡಿದೆ.


ಸೋರೆಕಾಯಿಯನ್ನು ಆಹಾರ ಪದ್ದತಿ ಯಲ್ಲಿ ಹೇಗೆ ಬಳಸಬಹುದು?

ಈ ಸೋರೆಕಾಯಿಯನ್ನು ಪದಾರ್ಥ ಅಥವಾ ಪಲ್ಯ ಮಾಡುವ ಮೂಲಕ ಸೇವಿಸಬಹುದು. ಒಂದು ವೇಳೆ ನೀವು‌ ಸಿಹಿಯನ್ನು ಇಷ್ಟ ಪಡುವವರಾದರೆ ಸೋರೆಕಾಯಿ‌ ಹಲ್ವ ಮಾಡಿಯೂ‌ ಸೇವಿಸಬಹುದು. ಜೊತೆಗೆ ಈ ಹಲ್ವಕ್ಕೆ ಬಾದಮಿ ಬೀಜವನ್ನು‌ ಸೇರಿಸಿ ಸೇವಿಸಿ‌. ಇದು ಪೋಷಾಕಾಂಶಕ್ಕೆ ಬಹಳ ಒಳ್ಳೆಯ ರೆಸಿಪಿ.


*ಬೆಳ್ಳುಳ್ಳಿ*


ಬೆಳ್ಳುಳ್ಳಿ ಯಲ್ಲಿ ಆಯುರ್ವೇದ ಅಂಶಗಳು ಬಹಳಷ್ಟು ಹೇರಳವಾಗಿದೆ‌ ಮತ್ತು ಇದು ಎಲ್ಲಾ ರೀತಿಯ ಕಾಯಿಲೆಗಳಿಂದ‌ ಮುಕ್ತಗೊಳಿಸುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಬೆಳ್ಳುಳ್ಳಿಯನ್ನು‌ ಸೇವಿಸುವುದರಿಂದ ನಮ್ಮ ದೇಹದಲ್ಲಿ‌ರುವ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಹಲವಾರು ಪೇಸ್ಟ್ ಗಳಲ್ಲಿಯೂ ಬಳಸುತ್ತಾರೆ.


ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸುವ ಕ್ರಮ:

ತರಕಾರಿಗಳನ್ನು ಪದಾರ್ಥ ಮಾಡುವ ವೇಳೆ ಈ ಬೆಳ್ಳುಳ್ಳಿ ಯನ್ನು ಸೇರಿಸಬಹುದು ಅಥವಾ ಸೂಪ್‌ ಮಾಡಿಯೂ ಕುಡಿಯಬಹುದು.

*ಜೀರಿಗೆ*


ಜೀರಿಗೆಯನ್ನು ಹೆಚ್ಚಾಗಿ‌ ಮಸಾಲೆ ಪದಾರ್ಥ ದೊಂದಿಗೆ ಬಳಸುತ್ತಾರೆ. ಇದರ ಉಪಯೋಗಗಳು ಅಪಾರವಾಗಿದ್ದು ನಮ್ಮ ದೇಹದಲ್ಲಿ ಜೀರ್ಣಶಕ್ತಿ ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಸಂಚಲನವನ್ನು ಸುಗಮಗೊಳಿಸುತ್ತದೆ. ಅಲ್ಲದೇ ಅಧಿಕವಾದ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶವನ್ನೂ ಒಳಗೊಂಡಿದೆ.

ಆಹಾರ ಪದ್ದತಿಯಲ್ಲಿ ಜೀರಿಗೆಯನ್ನು ಬಳಸುವ ಕ್ರಮ:

ಜೀರಿಗೆಯನ್ನು ಪೌಡರ್ ರೀತಿಯಲ್ಲಿ ಪುಡಿ ಮಾಡಿಕೊಂಡು ಬಳಸುವುದು ಉತ್ತಮ. ಇದನ್ನು ಹಾಲು ಅಥವಾ ಬೆಲ್ಲದೊಂದಿಗೆ‌ ಬೆರೆಸಿ ಸೇವಿಸಬಹುದು. ಇದರಿಂದಾಗಿ ಎದೆ ಹಾಲು ಹೆಚ್ಚಾಗುತ್ತದೆ.


*ರಾಗಿ (Finger Millet)*


ಭಾರತದಲ್ಲಿ ರಾಗಿ ಎಂದು ಕರೆಯಲ್ಪಡುವ ಫಿಂಗರ್ ಮಿಲ್ಲೆಟ್, ಸಾಮಾನ್ಯವಾಗಿ ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವನ್ನು ಹೆಚ್ಚಿಸುವುತ್ತದೆ. ವಿಶೇಷವಾಗಿ, ನೀವು ಲ್ಯಾಕ್ಟೋಸ್ ಕೊರತೆ ಇದ್ದರೆ, ರಾಗಿಯು ನಿಮಗೆ ಅಗತ್ಯವಿರುವ ಪೋಷಣೆಯನ್ನು ನೀಡುವುದಲ್ಲದೇ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.


ಆಹಾರದಲ್ಲಿ ರಾಗಿಯನ್ನು ಬಳಸುವ ಕ್ರಮ:

ರಾಗಿ ರೊಟ್ಟಿ, ದೋಸೆ, ಇಡ್ಲಿ ಮತ್ತು ಚಪಾತಿಗಳಂತಹ ಆಹಾರ ಪದಾರ್ಥಗಳಲ್ಲಿ ರಾಗಿಯ ಬಳಕೆ ಮಾಡಬಹುದು. ಅಲ್ಲದೇ ನಿಮ್ಮ ದೈನಂದಿನ ಆಹಾರ ಕ್ರಮದ ಒಂದು ಭಾಗವಾಗಿಯೂ ಬಳಸಬಹುದು.

*ಅಂಟಿನ ಉಂಡೆ (ಗೋಂಡ್)*

ಚಳಿಗಾಲದಲ್ಲಿ ಅಂಟಿನ ಉಂಡೆಯನ್ನು ಸೇವಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಇದು ದೇಹಕ್ಕೆ ಉತ್ತಮ ಶಾಖದ ಮೂಲ. ಅಲ್ಲದೇ, ಚೊಚ್ಚಲ ತಾಯಂದಿರಿಗೆ ಇದನ್ನು ಸೇವಿಸಲು ಒತ್ತಾಯಿಸುತ್ತಾರೆ. ಏಕೆಂದರೆ ಇದು ಹಾಲುಣಿಸುವಿಕೆಗೆ ಸಹಾಯ ಮಾಡುತ್ತದೆ.


ಆಹಾರದಲ್ಲಿ ಅಂಟಿನ ಉಂಡೆಯನ್ನು ಬಳಸುವ ಕ್ರಮ:

ಅಂಟಿನ ಉಂಡೆಯಿಂದ ಲಡ್ಡೂಗಳನ್ನು ತಯಾರಿಸಬಹುದು. ಇದು ಅತ್ಯಂತ ಜನಪ್ರಿಯ ಮತ್ತು ಸುಲಭ ಮಾರ್ಗವಾಗಿದೆ.


​ಹಸಿರು ತರಕಾರಿಗಳು ಮತ್ತು ತಾಜಾ ಹಣ್ಣುಗಳು:

ಸಿಟ್ರಸ್ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ, ಮಹಿಳೆಯರಲ್ಲಿ ಸ್ತನ್ಯಪಾನಕ್ಕಾಗಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇನ್ನು ಹಸಿರು ತರಕಾರಿಗಳು ದೇಹಕ್ಕೆ ಉತ್ತಮ ಪ್ರಮಾಣದ ಕಬ್ಬಿಣ, ವಿಟಮಿನ್ 'ಎ' ಮತ್ತು ಫೋಲೇಟ್ ಗಳನ್ನು ನೀಡಲು ಸಹಕಾರಿಯಾಗಿವೆ.

ಇವುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಬಹುದಾದ ಕ್ರಮ :

ಹೆಚ್ಚಿನ ಹಣ್ಣುಗಳನ್ನು ಹಾಗೆಯೇ (ಕಚ್ಛಾ) ತಿನ್ನಬಹುದು ಅಥವಾ ಹಣ್ಣಿನ ರಸಗಳ ಮೂಲಕ ಸೇವಿಸಬಹುದು. ಇನ್ನು ಹಸಿರು ತರಕಾರಿಗಳನ್ನು ಸಲಾಡ್‌ಗಳಲ್ಲಿ ಅಥವಾ ಊಟದ ಸಮಯದಲ್ಲಿ ಬೇಯಿಸಿ ತಿನ್ನಬಹುದು.


*ತೊಗರಿ ಬೇಳೆ (ದಾಲ್ ) *

ಕೊಬ್ಬಿನ ಸೇರ್ಪಡೆ ಇಲ್ಲದ ತೊಗರಿ ಬೇಳೆಯು ಪ್ರೋಟೀನ್‌ನ ಒಂದು ದೊಡ್ಡ ಮೂಲ ಮತ್ತು ನಿಮ್ಮಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುವ ಅಪರೂಪದ ಭಕ್ಷ್ಯಗಳಲ್ಲಿ ಇದೂ ಒಂದು.

ಆಹಾರದಲ್ಲಿ ತೊಗರಿಬೇಳೆಯನ್ನು ಬಳಸುವ ಕ್ರಮ:

ತೊಗರಿ ಬೇಳೆಯನ್ನು ಬೇಯಿಸಿದ ರೂಪದಲ್ಲಿ, ಸೂಪ್ ಅಥವಾ ಕೆಲವು ತರಕಾರಿಗಳೊಂದಿಗೆ ಬೆರೆಸಿ, ನಿಮಗಿಷ್ಟವಾದ ಖಾದ್ಯವನ್ನು ಮಾಡಿ ಸೇವಿಸಬಹುದು.


*ಓಟ್ಸ್*

ಕಬ್ಬಿಣಾಂಶ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಪೂರೈಕೆದಾರರಾಗಿರುವುದರಿಂದ, ಓಟ್ಸ್ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಅಲ್ಲದೇ, ಉತ್ತಮ ಪ್ರಮಾಣದ ನಾರಿನಾಂಶವನ್ನು ಹೊಂದಿರುವುದರಿಂದ ಓಟ್ಸ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

ಆಹಾರದಲ್ಲಿ ಓಟ್ಸ್ ನ್ನು ಬಳಸುವ ಕ್ರಮ:

ಓಟ್ಸ್ ನ್ನು ಸಾಮಾನ್ಯವಾಗಿ ಹಾಲು ಅಥವಾ ನೀರಿನಿಂದ ಬೇಯಿಸಲಾಗುತ್ತದೆ. ಈ ಮಿಶ್ರಣಗಳನ್ನು ಕತ್ತರಿಸಿದ ಹಣ್ಣುಗಳು ಮತ್ತು ಬೀಜಗಳೊಂದಿಗೆ ಸೇರಿಸಿದರೆ ಇದರ ರುಚಿ ಇನ್ನೂ ಹೆಚ್ಚಾಗಿ, ಪೋಷಣೆಯನ್ನೂ ನೀಡುತ್ತದೆ.

*ಅಜವಾನ (ಓಮ)*

ಭಾರತದಲ್ಲಿ ಅಜ್ವೈನ್ ಎಂದು ಕರೆಯಲ್ಪಡುವ ಈ ಬೀಜಗಳು ಚೊಚ್ಚಲ ತಾಯಂದಿರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಈ ಬೀಜಗಳು ಅನಿಲ ಮತ್ತು ಅಜೀರ್ಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೇಗವಾಗಿ ಕೆಲಸ ಮಾಡುತ್ತದೆ.

ಆಹಾರದಲ್ಲಿ ಅಜ್ವೈನ್ ನ್ನು ಬಳಸುವ ಕ್ರಮ:

ಅಜ್ವೈನ್ ಅನ್ನು ನೀರಿನಲ್ಲಿ ಕುದಿಸಿ, ಆ ದ್ರವವನ್ನು ಸೇವಿಸಬಹುದಾಗಿದೆ.


*ಅರಿಶಿನ*


ಗಾಯವನ್ನು ಗುಣಪಡಿಸುವ ಗುಣಗಳನ್ನು ಹೊಂದಿರುವ ಅರಶಿನದ ಸಾಮಾನ್ಯ ಆರೋಗ್ಯ ಕ್ರಮ ಎಲ್ಲರಿಗೂ ತಿಳಿದಿದೆ. ಇದು ಯಕೃತ್ತಿನ ವಿಷತ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಸುಧಾರಿಸುತ್ತದೆ.

ಆಹಾರದಲ್ಲಿ ಅರಶಿನವನ್ನು ಬಳಸುವ ಕ್ರಮ:

ಅರ್ಧ ಚಮಚ ಅರಿಶಿನವನ್ನು ಹಾಲು ಅಥವಾ ನಿಮ್ಮ ಆಹಾರದೊಂದಿಗೆ ದಿನನಿತ್ಯ ಸೇರಿಸುವುದು ಅನಿವಾರ್ಯವಾಗಿರುತ್ತದೆ.


*ಶುಂಠಿ*


ಒಣ ಶುಂಠಿ ಪುಡಿ ಅನೇಕ ಉರಿಯೂತದ ಗುಣಗಳನ್ನು ಹೊಂದಿದ್ದು, ಅನಿಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಶುಂಠಿಯನ್ನು ಬಳಸುವ ಕ್ರಮ:

ಒಣ ಶುಂಠಿ ಪುಡಿಯನ್ನು ಅನೇಕ ಬಗೆಯ ಖಾದ್ಯಗಳಲ್ಲಿ ಪ್ರಮುಖ ಮಸಾಲೆಗಳಾಗಿ ಬಳಸಬಹುದು.


*ಮೆಂತೆ ಕಾಳು*

ಆಹಾರಗಳಲ್ಲಿ ಮೆಂತೆ ಸೊಪ್ಪು ಹಾಗೂ ಮೆಂತೆ‌ಬೀಜವನ್ನು ಹಲವಾರು ಕಾರಣಗಳಿಗಾಗಿ ಬಳಸುತ್ತಾರೆ ಮತ್ತು‌ ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಪ್ರಮಾಣವೂ ಇದೆ. ಅಲ್ಲದೇ ಹೆರಿಗೆ ಆದ ನಂತರ ಸುಮಾರು ಆರು ತಿಂಗಳು ಇದನ್ನು ಆಹಾರದಲ್ಲಿ ಬಳಸಿದರೆ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದಲ್ಲದೇ ಸುಸ್ತು ನಿಶ್ಯಕ್ತಿಯಿಂದ ಮುಕ್ತಿ ಪಡೆಯಬಹುದು.

ಆಹಾರದಲ್ಲಿ ಮೆಂತೆಯನ್ನು ಬಳಸುವ ಕ್ರಮ:

ಸಾರು ಅಥವಾ ಸಾಂಬಾರು ಮಾಡುವ ಸಂದರ್ಭದಲ್ಲಿ ಈ ಮೆಂತೆ ಸೊಪ್ಪು ಅಥವಾ ಧಾನ್ಯಗಳನ್ನು ಬಳಸಬಹುದು.ಅಲ್ಲದೇ ಇದನ್ನು ಹುರಿದು ಬೆಳ್ಳುಳ್ಳಿ ಹಾಗೂ ಈರುಳ್ಳಿ ಯೊಂದಿಗೆ ಸ್ನಾಕ್ ರೀತಿಯಲ್ಲಿ ಸೇವಿಸಬಹುದು.


*ಎಳ್ಳು*

ಸಾಮಾನ್ಯವಾಗಿ ಭಾರತದಲ್ಲಿ ದೊರೆಯುವ ಎಲ್ಲಾ ರೀತಿಯ ಧಾನ್ಯ ಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಖನಿಜಾಂಶ ಹೇರಳವಾಗಿರುತ್ಯದೆ. ಇದು ಬಾಣಂತಿಯರ ಆರೋಗ್ಯಕ್ಕೆ ಬಹಳ ಉಪಕಾರಿ ಯಾಗುತ್ತದೆ. ಇದು ಕರುಳಿಗೆ ಹಾಗೂ ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗುತ್ತದೆ.


*ಮೊಟ್ಟೆ*

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲ. ಡಿಎಚ್‌ಎ ಬಲವರ್ಧಿತ ಮೊಟ್ಟೆಗಳನ್ನು ಸೇವಿಸುವುದರಿಂದ ಎದೆ ಹಾಲಿನಲ್ಲಿರುವ ಕೊಬ್ಬಿನಾಮ್ಲವನ್ನು ಹೆಚ್ಚಿಸಿ, ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ.

ಮೊಟ್ಟೆಯನ್ನು ಆಹಾರಕ್ರಮದಲ್ಲಿ ಬಳಸಬಹುದಾದ ರೀತಿ :
ಮೊಟ್ಟೆಗಳನ್ನು ಆಮ್ಲೆಟ್ ತಯಾರಿಸಿ, ಅವುಗಳನ್ನು ಕುದಿಸಿ ಅಥವಾ ಬೆಳಗಿನ ಉಪಹಾರಕ್ಕಾಗಿ ಬೇಯಿಸಿ ಸೇವಿಸಬಹುದು.

ಹೆರಿಗೆಯ ನಂತರ ಸರಿಯಾದ ರೀತಿಯ ಆಹಾರ ಸೇವನೆಗೆ ಭಾರತೀಯ ತಾಯಂದಿರಿಗೆ ಹಲವಾರು ಆಯ್ಕೆಗಳಿವೆ. ತಾಯಿಯು ಹೊಂದಿರುವ ಆಹಾರ‌ ಹೆರಿಗೆಯ ನಂತರದ ತಾಯಿ ಮತ್ತು ಮಗುವಿಗೆ ನೀಡುವ ಆಹಾರದಲ್ಲಿ ಎಲ್ಲಾ ಪೌಷ್ಠಿಕಾಂಶಗಳು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಲೇಬೇಕು. ಏಕೆಂದರೆ ಪ್ರಸವ ನಂತರ ತಾಯಿ ಹಾಗೂ ಮಗುವಿನ ಆರೈಕೆ ಅತ್ತಂತ ಸೂಕ್ತವಾದುದು.

 

✍️ಅಶ್ವಿನಿ ಜೈನ್ (ಅರಾದೇ)
ಧನ್ಯವಾದಗಳು 🙏

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Ashu Desai

https://pratilipi.page.link/JcuDAVEjQC3Bh6rU9

0 Followers

0 Following