ಪಸ್ಚಾತಾಪ

ProfileImg
29 Jun '24
4 min read


image

ಅಂದು ಸೋಮವಾರವಾದುದರಿಂದ ಬ್ಯಾಂಕ್ನಲ್ಲಿ ಗ್ರಾಹಕರ ಸಂಖ್ಯೆ ಅಧಿಕವಾಗಿಯೇ ಇತ್ತು. ಟೋಕನ್ ಪ್ರಕಾರ ಗ್ರಾಹಕರ ನಂ. ಗಳನ್ನು ಡಿಸ್ಪ್ಲೆನಲ್ಲಿ ಪ್ರಕಟಿಸಲಾಗುತ್ತಿತ್ತು. ಸುಮಾರು ಎಪ್ಪತ್ತು ವರ್ಷದ ವೃದ್ಧರೊಬ್ಬರು ತನ್ನ ಸರದಿಗಾಗಿ ಕಾದು ಕುಳಿತ್ತಿದ್ದರು. ಅವರ ಮಗನು ೨೦೦೦ರೂ ಗಳ ಒಂದು ಚೆಕ್ಕನ್ನು ಕೊಟ್ಟು ಹಣ ತರುವಂತೆ ಹೇಳಿದ್ದನು. 

ಪದೆ ಪದೆ ತನ್ನ ಟೋಕನ್ ಮತ್ತು ಡಿಸ್ಪ್ಲೆಕಡೆ ನೋಡುತ್ತಾ ಕುಳಿತಿದ್ದ ಅವರು ತನ್ನ ನಂ. ಬಂದೊಡನೆ ಕೌಂಟರ್ಗೆ ಹೋಗಿ ಹಣವನ್ನು ಪಡೆದು ಬ್ಯಾಂಕ್ನಿಂದ ಹೊರ ಬಂದರು. ಒಂದು ಕಾಫಿ ಕುಡಿಯುವ ಸಲುವಾಗಿ ದಾರಿಯಲ್ಲೇ ಇದ್ದ ಒಂದು ಸಣ್ಣ ಹೋಟೆಲ್ ಗೆ ಬಂದರು. ಅದೇ ವೇಳೆಗೆ ಅವರ ಸೊಸೆ ಕರೆ ಮಾಡಿ, ಬರುವಾಗ ಎನೋ ದಿನಸಿಯನ್ನು ತರುವಂತೆ ಹೇಳಿದಳು.

ಆತುರದಲ್ಲಿ ತನ್ನ ಮೊಬೈಲ್ ತೆಗೆಯುವಾಗ ಅದರ ಜೊತೆ ಇದ್ದ ಅವರು ಆಗತಾನೆ ಡ್ರಾ ಮಾಡಿದ ಹಣವು ಕೆಳಗೆ ಬಿದ್ದಿತು. ಅದು ಅವರಿಗೆ ತಿಳಿಯಲಿಲ್ಲ, ಹೋಟೆಲ್ ನಲ್ಲಿ ಕಾಫಿ ಕುಡಿದು ಮಾಲಿಕನಿಗೆ ಬಿಲ್ ಕೊಡುವ ವೇಳೆ ಅವರಿಗೆ ತನ್ನಲ್ಲಿದ್ದ ಹಣವು ಕಾಣೆಯಾಗಿರುವುದು ತಿಳಿಯಿತು. ತನ್ನ ಪರ್ಸ್ ನಿಂದ ಅವನಿಗೆ ಬಿಲ್ ಕೊಟ್ಟು ಹೊರಗೆ ಬಂದು ಅಲ್ಲೇ ದಾರಿಯಲ್ಲಿ ಹಣ ಸಿಗಬಹುದೆಂಬ ಅಲ್ಪ ಆಸೆಯಲ್ಲಿ ದಾರಿಯುದ್ದಕ್ಕೂ ನೋಡಿಕೊಂಡೇ ಬಂದರು.

೨೦೦೦ ರೂಪಾಯಿ, ಸಿಕ್ಕರೆ ಯಾರು ತಾನೆ ಬಿಡುತ್ತಾರೆ? ಆಗ ಅದೇ ದಾರಿಯಲ್ಲಿ ಬರುತ್ತಿದ್ದ ಸುಮಾರು ೧೭ ವಯಸುಳ್ಳ ಒಬ್ಬ ಯುವಕನು ಕೆಳಗೆ ಬಿದ್ದಿದ್ದ ಹಣವನ್ನು ನೋಡಿದನು. ಅಲ್ಲೇ ಸ್ವಲ್ಪ ಮುಂದೆ ಹೋಗುತ್ತಿದ್ದ ಓರ್ವ ವೃದ್ಧರನ್ನು ನೋಡಿದನು. ಆ ಹಣ ಅವರದೇ ಇರಬೇಕೆಂದು ಊಹಿಸಲು ಅವನಿಗೆ ತಡವಾಗಲಿಲ್ಲ ಏಕೆಂದರೆ ಅಲ್ಲಿ ಪಕ್ಕದಲ್ಲಿ ಯಾರೂ ಇರಲ್ಲಿಲ್ಲ. ಮೊದಲು ಅವನಿಗೆ ಆ ದುಡ್ಡನ್ನು ಅವರ ಬಳಿ ಕೆಳಿ, ಖಚಿತವಾದರೆ ಅವರಿಗೇ ಹಿಂತಿರುಗಿಸೋಣ ಎಂದುಕೊಂಡನು. ಆದರೂ ಅವನ ಮನದಲ್ಲಿ ಆಗಾಗ ಸುಳಿಯುತ್ತಿದ್ದ ಹಲವು ನಿರಾಶೆಗಳ ಅಲೆಗಳು ಅವನಿಗೆ ಆ ಕ್ಷಣದಲ್ಲಿ ಆ ದುಡ್ಡನ್ನು ತಾನೆ ತೆಗೆದುಕೋಳ್ಳುವಂತೆ ಪ್ರೇರೇಪಿಸಿತು. ಕ್ಷಣದಲ್ಲೇ ಅತ್ತಿತ್ತ ಒಮ್ಮೆ ಕಣ್ಣಾರಿಸಿ ಆ ದುಡ್ಡನ್ನು ತೆಗೆದು ಜೇಬಿನಲ್ಲಿ ತುರುಕಿದನು ಪ್ರತೀಕ್. ಇತ್ತ ಹಣವನ್ನು ಕಳೆದುಕೊಂಡ ರಾಮಯ್ಯನವರಿಗೆ ಬಹಳ ದು:ಖವಾಯಿತು, ಮಗ ಸೊಸೆಗೆ ಏನು ಉತ್ತರ ಕೊಡುವುದು ಎಂದು ಮನದಲ್ಲೇ ನೊಂದರು. ಅವರಿಗೆ ತನ್ನ ಮಗನಾದರೂ ಅಷ್ಟಾಗಿ ಎನೂ ಹೇಳುವುದಿಲ್ಲ, ಆದರೆ ಸೊಸೆಯ ಮಾತುಗಳನ್ನು ಕೇಳುವುದೇ ಚಿಂತೆಯಾಯಿತು. ಅದಕ್ಕೆ ಅವರು ಸಿದ್ದವಾಗಿಯೂ ಇರಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ದಾರಿಯಲ್ಲೇ ಇದ್ದ ತನ್ನೊಂದಿಗೆ ಕೆಲಸ ಮಾಡಿದ ಗೆಳೆಯನ ಮನೆಗೆ ಹೋಗಿ ನಡೆದ ವಿಷಯವನ್ನು ಹೇಳಿ ೨೦೦೦ರೂ ಸಾಲವಾಗಿ ಕೊಡುವಂತೆ ಕೇಳಿ, ತಾನು ಅದನ್ನು ತನ್ನ ಪಿಂಚಣಿ ಹಣದಿಂದ (ಪೆಂಷನ್) ಎರಡೇ ತಿಂಗಳಲ್ಲಿ ಹಿಂತಿರುಗಿಸುವುದಾಗಿ ಹೇಳಿದರು. ಅವರನ್ನು ಚೆನ್ನಾಗಿ ತಿಳಿದಿದ್ದ ಅವರ ಸ್ನೇಹಿತ ತಕ್ಷಣ ಅವರಿಗೆ ಹಣವನ್ನು ಕೊಟ್ಟು ಸಹಾಯ ಮಾಡಿದರು. ತನ್ನ ಮಿತ್ರನ ಎರಡೂ ಕೈಗಳನ್ನು ಹಿಡಿದು ತನ್ನ ಕೃತಜ್ಞತೆಯನ್ನು ಸಲ್ಲಿಸಿ ಸ್ವಲ್ಪ ಹಗುರ ಮನಸ್ಸಿನಿಂದ ಮನೆಗೆ ಬಂದರು.

ಇದಾಗಿ ಸುಮಾರು ೬ ತಿಂಗಳು ಕಳೆದಿರಬಹುದು. ಒಂದು ದಿನ ಎಂದಿನಂತೆ ಪ್ರತೀಕ್ ಕಾಲೇಜಿನಿಂದ ಮನೆಗೆ ಬಂದಾಗ ಅವನ ತಾಯಿ ಯಾರಮೇಲೊ ಸಿಟ್ಟಾಗಿರುವುದನ್ನು ಗಮನಿಸಿದ, ಮನೆಯಲ್ಲಿ ಎನೋ ಅಗಿದೆಯೆಂದು ಊಹಿಸಿದ. ಅವನು ಎನೂ ಮಾತನಾಡದೆ ತನ್ನ ಬಟ್ಟೆಗಳನ್ನು ಬದಲಿಸಿ ತನ್ನ ತಾತನ ಕೊಠಡಿಗೆ ಹೋದನು. ಏಕಾಂತದಲ್ಲಿ ಕುಳಿತು ಅಳುತ್ತಿದ್ದ ತಾತನನ್ನು ನೋಡಿದನು. ಅವನನ್ನು ನೋಡಿದ ಕ್ಷಣದಲ್ಲೆ ತನ್ನ ಕಣ್ಣೀರನ್ನು ಒರಸಿಕೊಂಡು “ಬಾರೋ ಪ್ರತೀಕಾ ಕಾಲೇಜು ಮುಗಿತಾ?” ಎಂದು ಎನನ್ನೂ ತೋರಿಸಿಕೊಳ್ಳದೆ ಮೊಮ್ಮಗನನ್ನು ಪಕ್ಕದಲ್ಲೆ ಕೂರಿಸಿಕೊಂಡರು. ಅವನೂ ಕೂಡ ತನ್ನ ಸಂದೇಹವನ್ನು ತೋರ್ಪಡಿಸದೆ ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿ ತನ್ನ ತಂದೆಯ ಬಳಿಗೆ ಹೋದನು. “ಅಪ್ಪ ತಾತ ಏಕೆ ಅಳುತ್ತಿದ್ದಾರೆ? ನೀವೋ ಅಥವ ಅಮ್ಮನೋ ಏನಾದರು ಬೈದರಾ? ದಯವಿಟ್ಟು ಹೇಳಿ ಏನಾಯಿತು?” ವಯಸಿನಲ್ಲಿ ಚಿಕ್ಕವನಾದರು ಅವನ ಮಾತಿನಲ್ಲಿದ್ದ ಕೋಪದಿಂದ ಕೂಡಿದ ಆತಂಕ ಅವರಿಗೆ ತಿಳಿಯಿತು. “ಏನೂ ಇಲ್ಲಪ್ಪ, ವಿಧ್ಯುತ್ ಬಿಲ್ ಕಟ್ಟಲು ತೆಗೆದುಕೊಂಡು ಹೋದ ೧೦೦೦ರೂ ಗಳನ್ನು ಕಳೆದುಕೊಂಡು ಬಂದಿದ್ದಾರೆ. ನಾನು ಮತ್ತು ನಿನ್ನ ಅಮ್ಮ ಹಣವನ್ನು ಜೋಪನವಾಗಿ ಇಟ್ಟು ಕೊಳ್ಳಲು ಬರುವುದಿಲ್ಲವೇ? ಎಂದು ಕೆಳಿದೆವು ಅಷ್ಟೆ”. ಪ್ರತೀಕ್ ಮರುಮಾತಾಡದೆ ಅಡುಗೆ ಮನೆಗೆ ಬಂದ. ಏನೂ ತಿಳಿಯದವನಂತೆ “ಅಮ್ಮ ಏನಾಯಿತು? ಏಕೆ ಎಲ್ಲರೂ ನಿಶಬ್ಧವಾಗಿದ್ದಾರೆ?” ಎಂದು ಕೆಳಿದನು. “ಆಗೋದೇನು? ವಿಧ್ಯುತ್ ಬಿಲ್ ಕಟ್ಟಿ ಬನ್ನಿ ಅಂದರೆ ನಿನ್ನ ತಾತ ದುಡ್ಡನ್ನು ಕಳೆದುಕೊಂಡು ಬಂದಿದ್ದಾರೆ. ಒಂದಿಷ್ಟೂ ಜವಾಬ್ದಾರಿ ಇಲ್ಲ. ಹಣದ ಮಹಿಮೆ ತಿಳಿದರೆ ತಾನೆ. ಮಗನ ಸಂಪಾದನೆಯಲ್ಲಿ ಕಾಲ ಕಳೆಯುತ್ತಿದ್ದಾರೆ, ಇದರಲ್ಲಿ ಇಂತಹ ನಷ್ಟಬೆರೆ.” ಎಂದು ಜೋಡಿಸುತ್ತಲೇ ಹೋದರು. ಪ್ರತೀಕನಿಗೆ ತಾಯಿಯ ಮೇಲೆ ಸಿಟ್ಟಾದರು ಅದನ್ನು ತೋರ್ಪಡಿಸದೆ ಮುಂದಿನ ಮಾತುಗಳನ್ನೂ ಕೇಳಿಸಿಕೊಳ್ಳಲು ಮನಸ್ಸಿಲ್ಲದೆ ಅಲ್ಲಿಂದ ಹೊರ ಬಂದನು.

ಅಂದು ರಾತ್ರಿ ಅವನಿಗೆ ಬಹಳ ಹೊತ್ತು ನಿದ್ರೆ ಬರಲ್ಲಿಲ್ಲ. ತಾತನ ಆ ದುಃಖದ ಮುಖವೇ ಅವನ ಕಣ್ಣಮುಂದೆ ಬರುತ್ತಿತ್ತು. ಅಮ್ಮ ಇದೇರೀತಿ ಅಜ್ಜಿಯನ್ನೂ ವಿನಾಕರಣ ನಿಂದಿಸುತ್ತಲೇ ಇದ್ದರು, ಈಗ ಅವರಿಲ್ಲ, ತಾತ ಒಂಟಿಯಾಗಿದ್ದರೆ. ಅಜ್ಜಿಯ ಸಾವಿನ ನಂತರ ತಾತ ಈಗ ತುಂಬಾ ಬಲಹೀನರಾಗಿದ್ದಾರೆ, ಆದರೂ ಅವರು ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಂದ ಮನೆಯಲ್ಲಿ ಯಾರಿಗೂ ಯಾವ ತೊಂದರೆಯೂ ಇಲ್ಲ ಆದರೂ ಅಮ್ಮ ಅವರನ್ನು ಎನಾದರು ಹೇಳುತ್ತಲೇ ಇದ್ದಾರೆ.

ಈಗ ಅವರು ವಾಸಿಸುತ್ತಿದ್ದ ಮನೆ ಅವನ ತಾತನದೆ, ಮನೆಯನ್ನು ವಿಸ್ತರಿಸುವ ನೆಪದಲ್ಲಿ ಪ್ರತೀಕನ ತಂದೆ ವಾಸು, ತನ್ನ ಹೆಂಡತಿಯ ಸಲಹೆಯಂತೆ ಆ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದರು. ಇದೆಲ್ಲವನ್ನು ಯೊಚಿಸುತ್ತಿದ್ದ ಪ್ರತೀಕನಿಗೆ ಕೆಲವು ತಿಂಗಳ ಹಿಂದೆ ತನಗೆ ಸಿಕ್ಕ ೨೦೦೦ ರೂಪಾಯಿಯ ನೆನಪಾಯಿತು. ಗಾಡ ನಿದ್ರೆಯಲ್ಲಿ ಬೆಚ್ಚಿಬಿದ್ದವನಂತೆ ಇದ್ದಕ್ಕಿದ್ದಂತೆ ಎದ್ದು ಕುಳಿತನು. ಅಂದು ತನಗೆ ಸಿಕ್ಕ ಆ ದುಡ್ಡನ್ನು ಕಳೆದುಕೊಂಡ ಅಜ್ಜನಿಗೂ ಮನೆಯಲ್ಲಿ ಇಂತಹ ಸನ್ನಿವೇಶ ನಡೆದಿರಬಹುದಲ್ಲವೇ? ಅವರೂ ನನ್ನ ತಾತನಂತೆ ಕಣ್ಣೀರು ಸುರಿಸಿರಬಹುದಲ್ಲವೆ? ಅವರ ಆ ಪರಿಸ್ತಿತಿಗೆ ತಾನೇ ಹೊಣೆಯಲ್ಲವೆ? ನನ್ನ ದುರಾಸೆಯಿಂದ ಅವರಿಗೆ ಎಂತಹ ಅನಾಹುತವಾಗಿರಬಹುದು? ಈ ಯೋಚನೆಗಳಿಂದ ಅವನಿಗೆ ಮಲಗಲಾಗಲಿಲ್ಲ. ಬಹಳ ಹೊತ್ತಿನ ನಂತರ ಮನದಲ್ಲೇ ಒಂದು ನಿರ್ದಾರಕ್ಕೆ ಬಂದು ಮನಸ್ಸನ್ನು ಸ್ವಲ್ಪ ಹಗುರವಾಗಿಸಿಕೊಂಡು ಅವನ ಅರಿವಿಲ್ಲದೆ ನಿದ್ರೆಹೊದನು. ಮರುದಿನ ತನ್ನ ತಂದೆಯ ಬಳಿ ಕಾಲೇಜಿನಲ್ಲಿ ಸ್ಪೆಷಲ್ ಟ್ಯುಷನ್ ಫೀಸಾಗಿ ೨೦೦೦ರೂ ಕಟ್ಟಬೇಕೆಂದು ಹೇಳಿ ತೆಗೆದುಕೊಂಡನು.

ಎರಡು ಮೂರು ದಿನಗಳು ಕಾದು ಒಂದು ದಿನ ರಾಮಯ್ಯನವರನ್ನು ಬೇಟಿ ಮಾಡಿದ. “ತಾತ, ನನ್ನನ್ನು ಕ್ಷಮಿಸಿಬಿಡಿ, ಅಂದು ನೀವು ಕಳೆದುಕೊಂಡ ದುಡ್ಡನ್ನು ನೆಲದಿಂದ ತೆಗೆದುಕೊಂಡದ್ದು ನಾನೆ. ನೀವು ಮೊಬೈಲ್ ತೆಗೆಯುವಾಗ ಆ ದುಡ್ಡು ಕೆಳಗೆ ಬಿದ್ದಿರಬೇಕು, ಕ್ಷಣದಲ್ಲೆ ಬುದ್ದಿಗೆಟ್ಟು ಅದು ನಿಮ್ಮದಿರಬಹುದೆಂದು ತಿಳಿದೂ ಆ ದುಡ್ಡನ್ನು ನಾನು ತೆಗೆದುಕೊಂಡೆ. ನನ್ನ ತಪ್ಪು ಅರಿವಾಗಿ ಎರಡು ದಿನಗಳಿಂದ ಈ ರಸ್ತೆಯಲ್ಲಿ ನಿಮಗಾಗಿ ಕಾಯುತ್ತಿದ್ದೆ. ನನ್ನ ಈ ದುರಾಸೆಯ ಬಗ್ಗೆ ನನಗೆ ನಾಚಿಕೆಯಾಗುತ್ತದೆ. ನಿವೂ ನನ್ನ ತಾತನಂತೆ. ನನ್ನನ್ನು ಕ್ಷಮಿಸಿ.” ಎಂದನು. ಈ ಮಾತುಗಳನ್ನು ಹೆಳುವಾಗ ಅವನ ಕಣ್ಣಲ್ಲಿ ನೀರು ತುಂಬಿತ್ತು, ದುಃಖದಲ್ಲಿ ಏನನ್ನೂ ಮಾತನಾಡಲಾಗದೆ, ಅವರ ಮರುಮಾತಿಗೂ ಕಾಯದೆ ದುಡ್ಡನ್ನು ಅವರಿಗೆ ಕೊಟ್ಟು ಅಲ್ಲಿಂದ ಹೊರಟನು.

-ಗುರುದಾಸ (ಚಂದ್ರಶೇಖರ ಅರ್)

Category:Stories



ProfileImg

Written by Chandrashekara R

0 Followers

0 Following