ಮಾನವ ತನ್ನ ಅನಾಗರಿಕ ಜೀವನದಿಂದ ನಾಗರಿಕ ಜೀವನದ ಕಡೆಗೆ ಸಾಗುವಾಗ ಅವನಲ್ಲಿ ವಿಕಾಸಾತ್ಮಕ ಬದಲಾವಣೆಗಳಾದವು. ತನ್ನ ಒಡನಾಡಿಗಳೊಂದಿಗೆ ಸಂಪರ್ಕ ಸಾಧಿಸುವ ಸಲುವಾಗಿ ಅವನು ಭಾಷೆ ಹಾಗೂ ಲಿಪಿಯನ್ನು ಬಳಕೆಗೆ ತಂದನು. ಈ ಭಾಷಾ ಬೆಳವಣಿಗೆ ಅವನಲ್ಲಿ ಬೌದ್ಧಿಕ ಪ್ರಗತಿಗೂ ಕಾರಣವಾಯಿತು. ಅಲ್ಲದೆ ಹಲವು ಹೊಸ ವಿಷಯಗಳು ಆವಿಷ್ಕಾರಗೊಂಡು ತನ್ನ ಪರಿಸರದಲ್ಲಿನ ಆಗುಹೋಗುಗಳ ಕುರಿತು ಅವನು ವಿವಿಧ ರೂಪದಲ್ಲಿ ದಾಖಲೆಗಳನ್ನು ಬಿಟ್ಟು ಹೋದನು. ಹೀಗೆ ದೊರೆತ ದಾಖಲೆಗಳನ್ನು ಪರಾಮರ್ಶಿಸಿ ಗತಕಾಲದಲ್ಲಿ ಸಂಭವಿಸಿದ ಘಟನೆಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಣೆ ಮಾಡುವ ಅಧ್ಯಯನವೇ ಇತಿಹಾಸ. ವಿದ್ವಾಂಸರಾದ ಹೇಸ್ ಮತ್ತು ಮೂನ್ ರವರು ಅಭಿಪ್ರಾಯದಂತೆ "ಮಾನವನ ಸಾಧನೆಗಳು, ಸೋಲುಗಳು, ಆವಿಷ್ಕಾರಗಳು, ರಚನೆಗಳು,ಕಲೆಗಳು, ಯುದ್ಧಗಳು, ರಾಜಕೀಯ - ಧಾರ್ಮಿಕ ತತ್ವಗಳು , ಅವನ ಆಸೆ ಮತ್ತು ಪ್ರೀತಿಗಳ ಕಥೆ ಇತಿಹಾಸ" ಎಂದಿದ್ದಾರೆ .
ಇತಿಹಾಸ ಅಧ್ಯಾಯದಲ್ಲಿ ನಾವು ಹಲವಾರು ಶಾಖೆಗಳನ್ನು ಕಾಣಬಹುದು. ಈ ಶಾಖೆಗಳ ಮೂಲಕ ಇತಿಹಾಸವು ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಹಾಗೂ ಭೌಗೋಳಿಕ ಮುಂತಾದ ಕ್ಷೇತ್ರಗಳ ಅಧ್ಯಯನಕ್ಕೆ ಸಹಾಯವಾಗಿದೆ. ಇತಿಹಾಸ ಕೇವಲ ಶೈಕ್ಷಣಿಕ ದೃಷ್ಟಿಯಿಂದ ನಡೆಸುವ ಅಧ್ಯಯನವಲ್ಲ, ಬದಲಿಗೆ ಇದು ಮಾನವ ಸಮಾಜದ ಸರ್ವತೋಮುಖ ಪ್ರಗತಿಗಾಗಿ ನಡೆಸಲಾಗುವ ಅಧ್ಯಯನ. ಪ್ರಸ್ತುತ ದಿನಮಾನದಲ್ಲಿ ಇತಿಹಾಸ ಎಂಬುದು ಹಲವರಿಂದ ನಿರ್ಲಕ್ಷಕ್ಕೆ ಒಳಪಟ್ಟಿದ್ದು, ಇತಿಹಾಸ ಎಂದೊಡನೆ “ಇದು ಸತ್ತವರ ಕಥೆ” ಎಂದು ಹೇಳುವವರೇ ಹೆಚ್ಚು, ಆದರೆ ಈ ಇತಿಹಾಸದ ಮಹತ್ವವನ್ನು ತಿಳಿದಾಗ ಮಾತ್ರ ಸತ್ಯಾಸತ್ಯತೆಯ ಅರಿವಾಗುತ್ತದೆ.
ಇತಿಹಾಸವು ಮಾನವನಿಗೆ ಸ್ಪೂರ್ತಿದಾಯಕ ಹಾಗೂ ಅವನ ಜೀವನಕ್ಕೆ ದಾರಿ ದೀಪವಾಗಿದೆ. ಅಲ್ಲದೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸಕ್ಕೆ ಸಿಂಹ ಪಾಲು ದೊರೆಯುತ್ತದೆ. ಇದುವೇ ಇತಿಹಾಸದ ಮಹತ್ವವೇಕ್ಕೆ ಸಾಕ್ಷಿ. ಇತಿಹಾಸ ಮಾನವನ ಹುಟ್ಟಿನಿಂದಲೇ ಉಗಮಗೊಂಡರು ಸಹ ಇದನ್ನು ಗ್ರೀಕರು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ಪ್ರಚುರಪಡಿಸಿದರು. ಭಾರತದಲ್ಲಿಯೂ ಸಹ ಇತಿಹಾಸದ ದಾಖಲೀಕರಣಕ್ಕೆ ಮಹತ್ವದ ಸ್ಥಾನವಿದೆ ಆದರೆ ಅದನ್ನು ಸಾಗರ ಪಡಿಸುವ ವೈಜ್ಞಾನಿಕ ರೀತಿಯ ಕಲೆ ಕರಗತವಾಗಿರಲಿಲ್ಲ ಆದ್ದರಿಂದಲೇ ಭಾರತದಲ್ಲಿ ವೈಜ್ಞಾನಿಕ ಇತಿಹಾಸ ಅಧ್ಯಾಯದ ಉಗಮ ಸಾಧ್ಯವಾಗಲಿಲ್ಲ. ವಿದ್ವಾಂಸರ ಪ್ರಕಾರ ಗ್ರೀಕ್ ದೇಶ ಜನ್ಮ ತಾಳುವ ಮೊದಲೇ ಭಾರತದಲ್ಲಿ ಮಹಾನ್ ಮೇಧಾವಿಗಳು ಹಾಗೂ ವಿದ್ವಾಂಸರು ನೆಲೆಸಿದ್ದರು. ಇಂತಹ ಪ್ರಾಚೀನತೆಯ ಭಾರತದ ಇತಿಹಾಸದ ಪ್ರಮುಖ ಘಟನೆಗಳು ಪ್ರಪಂಚದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ಸೂಚಿಸುತ್ತದೆ. ಪ್ರಪಂಚದ ಇತಿಹಾಸ ಹಾಗೂ ಭಾರತದ ಇತಿಹಾಸದ ಮಹತ್ವಪೂರ್ಣ ಹಾಗೂ ಮಹಾನ್ ವೀರರ ಚರಿತ್ರೆಗಳನ್ನು ಹಲವಾರು ವಿದ್ವಾಂಸರು ಪರಾಮರ್ಶಿಸಿ ದಾಖಲಿಸುತ್ತಾ ಬಂದಿದ್ದಾರೆ. ಹೀಗೆ ದಾಖಲಾದ ಘಟನೆಗಳು ಸೀಮಿತರಿಗೆ ಮಾತ್ರ ದೊರೆಯುತ್ತದೆ, ಇವುಗಳ ಕಡೆಗೆ ಗಮನಹರಿಸುವವರು ಸಹ ಸೀಮಿತ ವರ್ಗವೇ ಇಂತಹ ವಿಶಿಷ್ಟ ಘಟನೆಗಳನ್ನು ಪ್ರತಿಯೊಬ್ಬರ ಮನೆಮನಗಳಲ್ಲಿ ನೆಲೆಸುವಂತೆ ಮಾಡುವ ಸಲುವಾಗಿ ಹಲವರು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದ ಫಲವೇ “ವಿಶ್ವ ಇತಿಹಾಸ ದಿನ"
27 ಸೆಪ್ಟಂಬರ್ 2022 ರಂದು ಇಂಡೋನೇಷ್ಯಾದ ಗ್ರ್ಯಾಂಡ್ ಹ್ಯಾಟ್ ಹೋಟೆಲ್ ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನದಂದು UNWTO (United Nations World Tourism organization) ಕಾರ್ಯದರ್ಶಿಗಳಿಂದ ವಿಶ್ವ ಇತಿಹಾಸ ದಿನದ ರಚನೆಯ ಅಭಿಯಾನದ ಉದ್ಘಾಟನೆ ಯಾಗುತ್ತದೆ. ಇದರ ಅನ್ವಯ ವಿಶ್ವ ಇತಿಹಾಸ ದಿನವನ್ನು ಪ್ರತಿ ವರ್ಷ ಜೂನ್ 24ರಂದು ಆಚರಿಸಲು ಯೋಜಿಸಲಾಗುತ್ತದೆ. ಈ ದಿನದ ಆಚರಣೆ ಪ್ರತಿಪಾದಕರು ಭಾರತೀಯರೇ ,ದಕ್ಷಿಣ ಭಾರತದ ನಟಿ ಹಾಗೂ ITS 6th WOW ಎಂಬ ಸಂಸ್ಥೆಯ ಅಧ್ಯಕ್ಷರಾದ ಶಾಹಿ ಖಾನ್ ರವರು UNWTOಗೆ ವಿಶ್ವ ಇತಿಹಾಸ ದಿನದ ಆಚರಣೆ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದರು.
ಪ್ರಪಂಚದ ಇತಿಹಾಸವನ್ನು ಪ್ರಾಚೀನ ಕಾಲದಿಂದಲೂ ಬರವಣಿಗೆ ಹಾಗೂ ಇನ್ನಿತರ ಸ್ವರೂಪಗಳಲ್ಲಿ ನಮ್ಮ ಪೂರ್ವಜರು ದಾಖಲಿಸಿದ್ದಾರೆ ಇದು ಅವರ ಅದ್ಭುತ ಕಲ್ಪನೆಯೂ ಸಹ ಹೌದು, ಈ ಇತಿಹಾಸವನ್ನು ಎಲ್ಲರಿಗೂ ತಲುಪಿಸಲು ಪ್ರಬಲ ಮಾಧ್ಯಮದ ಅವಶ್ಯಕತೆ ಇದೆ ಎಂದು ಅರಿತು ನಮ್ಮ ಇತಿಹಾಸವನ್ನು ಚಲನಚಿತ್ರದ ರೂಪದಲ್ಲಿ ಮರು-ರೆಕಾರ್ಡ್ ಮಾಡುವ ಮೂಲಕ ಮುಂಬರುವ ಪೀಳಿಗೆಗೆ ವಿಶ್ವ ಇತಿಹಾಸದ ಕುರಿತು ಮಾಹಿತಿಯನ್ನು ಮನೋರಂಜನಾ ಮಾಧ್ಯಮದ ಮೂಲಕ ತಿಳಿಸುವ ಗುರಿಯನ್ನು ಹೊಂದಿದೆ ವಿಶ್ವ ಇತಿಹಾಸ ದಿನದಂದು ಜೂನ್ 24ನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಪ್ರಮುಖ ಕಾರಣ ನಮ್ಮ ಪ್ರಾಚೀನ ಇತಿಹಾಸದಲ್ಲಿ ನಿಖರ ದಿನಗಣನೆಯ ಆಧಾರದಲ್ಲಿ ದಾಖಲೆಗಳು ದೊರೆಯುವುದು ಕಡಿಮೆ. ಆದರೆ ನಂತರದ ಕೆಲ ದಾಖಲೆಗಳು ಮಾತ್ರವೇ ನಿಗದಿತ ಹಾಗೂ ನಿಖರ ಕಾಲಗಣನೆಯ ಆಧಾರದಲ್ಲಿ ದಾಖಲೆಗಳನ್ನು ಒದಗಿಸುತ್ತದೆ. ವಿಶ್ವದ ಇತಿಹಾಸದಲ್ಲಿನ ನಿಖರ ದಿನ ಹಾಗೂ ಸಮಯವನ್ನು ಹೊಂದಿರುವ ಸಾಕ್ಷಿ ಸ್ವರೂಪದಲ್ಲಿನ ದಾಖಲಾತಿಯಾದ ಮೊದಲ ದಿನಾಂಕವೇ ಜೂನ್ 24. ಸಾ.ಶ.ಪೂ 1312 ಜೂನ್ 24ರಲ್ಲಿ ಅನಾಟೋಲಿಯಾದಲ್ಲಿ ಮರ್ಸಿಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಅತ್ಯಂತ ಪುರಾತನ ಹಾಗೂ ನಿಖರ ದಿನಾಂಕವನ್ನು ಹೊಂದಿರುವ ಆರಂಭಿಕ ದಾಖಲಿತ ಘಟನೆಯಾಗಿದೆ. ಆದ್ದರಿಂದಲೇ ಈ ದಿನವನ್ನು ವಿಶ್ವ ಇತಿಹಾಸ ದಿನವೆಂದು ಆಯ್ಕೆ ಮಾಡಿಕೊಳ್ಳಲಾಗಿದೆ.
ವಿಶ್ವ ಇತಿಹಾಸಕ್ಕೆ ಭಾರತದ ಕೊಡುಗೆ ಅಪಾರ ಭಾರತೀಯರೇ ಪ್ರತಿಪಾದಿಸಿದ ಈ ವಿಶೇಷ ದಿನವನ್ನು ಭಾರತೀಯರಾಗಿ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಈ ದಿನವನ್ನು ಇತಿಹಾಸದ ಅಧ್ಯಯನಕಾರರಿಗೆ ಮೀಸಲಿಡುವ ಮೂಲಕ ಭವಿಷ್ಯದ ಮಹಾನ್ ಇತಿಹಾಸಕಾರರನ್ನು ಸೃಷ್ಟಿಸುವ , ಅವರನ್ನು ಇತಿಹಾಸದ ಅಧ್ಯಯನದ ಕಡೆಗೆ ಹಾಗೂ ಇತಿಹಾಸದ ಬಗ್ಗೆ ಆಸಕ್ತಿ ಮೂಡುವಂತೆ ಪ್ರೇರೇಪಣೆ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ಬಳಸಿಕೊಳ್ಳಬಹುದಾಗಿದೆ . ನಮ್ಮ ನೆಲದ ಇತಿಹಾಸವನ್ನು ಕೇವಲ ಬರವಣಿಗೆ ಹಾಗೂ ಪ್ರಾಕ್ತನ ಮೂಲಗಳ ಮೂಲಕ ತಿಳಿಸುವುದರ ಜೊತೆಗೆ ಎಲ್ಲರನ್ನೂ ತಲುಪುವಂತಹ ದೃಶ್ಯ ಮಾಧ್ಯಮದ ಮೂಲಕ ಮುಂದಿನ ಪೀಳಿಗೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬ ಇತಿಹಾಸ ಪ್ರೇಮಿ ಹಾಗೂ ಅಧ್ಯಯನಕಾರರು ಮಾಡಬೇಕಿದೆ ಈ ಮೂಲಕ ನಮ್ಮ ಇತಿಹಾಸವನ್ನು ಸಂರಕ್ಷಿಸುವ ಹೊಣೆಯನ್ನು ಹೊರಬೇಕಿದೆ ಎಂದು ಕೋರುತ್ತಾ, ಸರ್ವರಿಗೂ ವಿಶ್ವ ಇತಿಹಾಸ ದಿನದ ಶುಭಾಶಯವನ್ನು ಕೋರುತ್ತೇನೆ.
ಲೇಖಕರು
ಜ್ಯೋತಿಕುಮಾರ್ ನಾಯ್ಕ ಎಂ
ಇತಿಹಾಸ ಉಪನ್ಯಾಸಕರು
ಶ್ರೀಮತಿ ಮಾಲತಿ ಪದವಿ ಪೂರ್ವ ಕಾಲೇಜು
ಜಗಳೂರು, ದಾವಣಗೆರೆ ಜಿಲ್ಲೆ
Email :- [email protected]
ಇತಿಹಾಸ ಉಪನ್ಯಾಸಕರು ಜಗಳೂರು ಟೌನ್. ದಾವಣಗೆರೆ ಜಿಲ್ಲೆ.
0 Followers
0 Following