ಆರ್ಕಿಡ್

ಪುಷ್ಪಲೋಕದ ಸೌಂದರ್ಯ ರಾಣಿಯರು

ProfileImg
20 Mar '24
5 min read


image

     ಸಸ್ಯ ಸಾಮ್ರಾಜ್ಯದಲ್ಲಿ ಹೂಬಿಡುವ ಸಸ್ಯಗಳದ್ದೇ ಬಹುದೊಡ್ಡ ಗುಂಪು. ಇಂದು ಸುಮಾರು ಮೂರು ಲಕ್ಷ ಹೂಬಿಡುವ ಸಸ್ಯಪ್ರಭೇದಗಳನ್ನು ಭೂಮಿಯ ಮೇಲೆ ಗುರುತಿಸಲಾಗಿದೆ. ಇವುಗಳಲ್ಲಿ ಹತ್ತಿರ ಹತ್ತಿರ ೩೩,೦೦೦ ಪ್ರಭೇದಗಳನ್ನು ಹೊಂದಿರುವ ಸೂರ್ಯಕಾಂತಿಗಳ ಸಂಬಂಧಿಯಾದ ಅಸ್ಟೆರೇಸಿಯೇ ಎಂಬುದು ಅತಿದೊಡ್ಡ ಕುಟುಂಬ. ಅದನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವುದು ಸುಮಾರು ೨೮,೦೦೦ ಪ್ರಭೇದಗಳಿರುವ ಆರ್ಕಿಡ್‌ಗಳ ಕುಟುಂಬವಾದ ಆರ್ಕಿಡೇಸಿಯೇ. ಈ ಎರಡು ಕುಟುಂಬಗಳಲ್ಲಿ ಇದೇ ದೊಡ್ಡದು ಎಂದು ಹೇಳುವುದು ಕಷ್ಟ. ಏಕೆಂದರೆ ಆರ್ಕಿಡ್‌ಗಳ ಕುಟುಂಬದಲ್ಲಿ ಪ್ರತಿದಿನವೂ ಹೊಸಹೊಸ ಪ್ರಭೇದಗಳು ಪತ್ತೆಯಾಗುತ್ತಲೇ ಇವೆ. ಆದ್ದರಿಂದ ಸದ್ಯಕ್ಕೆ ಅಸ್ಟೆರೇಸಿಯೇ ಅತಿದೊಡ್ಡ ಕುಟುಂಬ ಎಂಬುದು ಇವತ್ತಿಗಷ್ಟೇ ಸತ್ಯ. ನಾಳೆ ಆರ್ಕಿಡ್‌ಗಳ ಕುಟುಂಬ ಅದನ್ನು ಮೀರಿಸಿದರೂ ಆಶ್ಚರ್ಯವಿಲ್ಲ!
    ಹೂವುಗಳಲ್ಲೆಲ್ಲ ಆರ್ಕಿಡ್‌ಗಳಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣಗಳು ಹಲವಾರು. ಮೊದಲನೆಯದಾಗಿ ಅವುಗಳ ಸೌಂದರ್ಯ ಬಹುಶಃ ಹೂಬಿಡುವ ಬೇರಾವುದೇ ಕುಟುಂಬಕ್ಕಿಂತಲೂ ಮಿಗಿಲಾದದ್ದು. ಜೊತೆಗೆ ಅವುಗಲದ್ದು ವೈವಿಧ್ಯಮಯ ರೂಪ. ಬೇರಾವುದೇ ಹೂಗಳ ಕುಟುಂಬಕ್ಕಿಂತಲೂ ಮಿಗಿಲಾದ ವೈವಿಧ್ಯಮಯ ಆಕಾರ ಅವುಗಳದ್ದು. ಜೊತೆಗೆ ಮನಸೂರೆಗೊಳ್ಳುವಂಥ ಸುವಾಸನೆ ಅವುಗಳದ್ದು. ವಾಣಿಜ್ಯ ಬೆಳೆಯಾಗಿ ಕೂಡ ಕೆಲವು ಬಗೆಯ ಆರ್ಕಿಡ್‌ಗಳು ಪ್ರಸಿದ್ಧವಾಗಿವೆ. ಹೀಗಾಗಿ ಒಟ್ಟಿನಲ್ಲಿ ಆರ್ಕಿಡ್ ಎಂದರೆ ಎಂಥವರ ಮನಸ್ಸು ಕೂಡ ಒಮ್ಮೆ ಅರಳುತ್ತದೆ. ಕನ್ನಡದಲ್ಲಿ ಸೀತೆದಂಡೆ ಎಂಬ ಸುಂದರವಾದ ಹೆಸರನ್ನು ಹೊಂದಿದ ಈ ಹೂಗಳು ಜಗತ್ತಿನಾದ್ಯಂತ ವಿಸ್ತಾರವಾಗಿ ಹರಡಿದ್ದು, ಸುಮಾರು ಏಳುನೂರಾಅರವತ್ತಕ್ಕೂ ಹೆಚ್ಚು ಜೀನಸ್‌ಗಳಲ್ಲಿ ಹಂಚಿಹೋಗಿವೆ. 
    ಆರ್ಕಿಡ್‌ಗಳಲ್ಲಿ ಕೆಲವು ಬೇರೆ ಮರಗಳ ಮೇಲೆ ಬೆಳೆಯುತ್ತವೆ. ಇನ್ನು ಕೆಲವು ನೇರವಾಗಿ ನೆಲದ ಮೇಲೆಯೇ ಬೆಳೆಯುತ್ತವೆ. ಅಂಥವು ನೆಲದೊಳಕ್ಕೆ ಗೆಡ್ಡೆಗಳನ್ನು ಹೊಂದಿರುತ್ತವೆ. ಎಲ್ಲ ಆರ್ಕಿಡ್‌ಗಳೂ ಬಹುವಾರ್ಷಿಕ ಸಸ್ಯಗಳು. ಹಾಗಾಗಿ ಅವುಗಳನ್ನು ಹವ್ಯಾಸಕ್ಕಾಗಿ ಬೆಳೆಸುವುದು ಕೂಡ ಜನಪ್ರಿಯವಾಗಿದೆ. ಆರ್ಕಿಡ್‌ಗಳ ಸಸ್ಯೋದ್ಯಾನಗಳಿಗೆ ಆರ್ಕಿಡೇರಿಯಂ ಎಂಬ ಹೆಸರೇ ಇದೆ.
    ನಮ್ಮೆಲ್ಲರಿಗೂ ಚಿರಪರಿಚಿತವಾದ ಒಂದು ಆರ್ಕಿಡ್ ಎಂದರೆ ವೆನಿಲ್ಲಾ. ಇದರ ಕೋಡುಗಳು ಸುವಾಸನಾಭರಿತವಾಗಿದ್ದು ಐಸ್‌ಕ್ರೀಮ್ ಮತ್ತಿತರ ಸಿಹಿತಿಂಡಿಗಳಿಗೆ ಇದನ್ನು ಬಳಸಲಾಗುತ್ತದೆ. ಅದಕ್ಕಾಗಿ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಈ ವೆನಿಲ್ಲಾ ಜೀನಸ್‌ನಲ್ಲಿ ಸುಮಾರು ನೂರಾಹತ್ತು ಬೇರೆಬೇರೆ ಪ್ರಭೇದಗಳಿವೆ! ದೃಢವಾದ ಕಾಂಡವನ್ನು ಹೊಂದಿಲ್ಲದ ಕಾರಣ ಇವು ಬೇರೆ ಮರಗಳಿಗೆ ಬಳ್ಳಿಯಂತೆ ಹಬ್ಬುತ್ತವೆ. ಇದರ ಹೂವುಗಳು ಒಂದು ಜಾತಿಯ ಕಡಿಯದ ಜೇನ್ನೊಣ ಹಾಗೂ ಝೇಂಕಾರದ ಹಕ್ಕಿಗಳಿಂದ ಪರಾಗಸ್ಪರ್ಶಗೊಳ್ಳುತ್ತವೆ. ಆದರೆ ಭಾರತದಲ್ಲಿ ಇವು ಇಲ್ಲದ ಕಾರಣ ವೆನಿಲ್ಲಾ ಹೂವುಗಳಿಗೆ ಕೃತಕವಾಗಿ ಪರಾಗಸ್ಪರ್ಶ ಮಾಡಬೇಕಾಗುತ್ತಿತ್ತು. ಈಗಲೂ ಸಹ ವೆನಿಲ್ಲಾ ಬೆಳೆಗಾರರಿಗೆ ಇದೊಂದು ಹೆಚ್ಚುವರಿ ಕೆಲಸವೇ ಸರಿ.
    ಮೊದಲೇ ಹೇಳಿದಂತೆ ಆರ್ಕಿಡ್‌ಗಳ ಇನ್ನೊಂದು ಅನುಪಮ ವಿಶೇಷತೆಯೆಂದರೆ ಬೇರೆಬೇರೆ ಪ್ರಾಣಿಗಳ ಹೋಲಿಕೆ. ಕೆಲವು ಹೂಗಳು ಈ ಹೋಲಿಕೆಯಿಂದ ಪರಾಗಸ್ಪರ್ಶದಂಥ ಲಾಭಗಳನ್ನು ಪಡೆಯುತ್ತವೆಯಾದರೂ ಇನ್ನು ಕೆಲವು ಹೂವುಗಳಿಗೆ ಹೋಲಿಕೆಯಿಂದ ಏನು ಲಾಭ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ ಡವ್ ಆರ್ಕಿಡ್. ಒಳಗೆ ಮುದ್ದಾದ ಪಾರಿವಾಳವನ್ನು ಹೋಲುವ ಆಕಾರವಿರುವುದರಿಂದಲೇ ಇದಕ್ಕೆ ಡವ್ ಆರ್ಕಿಡ್ ಎಂಬ ಹೆಸರು ಬಂದಿದೆ. ಇದಕ್ಕೆ ಹೋಲಿ ಘೋಸ್ಟ್ ಆರ್ಕಿಡ್ (ಪವಿತ್ರವಾದ ದೆವ್ವದ ಆರ್ಕಿಡ್) ಎಂಬ ಹೆಸರೂ ಇದೆ ಎನ್ನುವುದು ವಿಚಿತ್ರ. ಅಚ್ಚಬಿಳಿಯ ಈ ಹೂವು ನೋಡುತ್ತಿದ್ದಂತೆಯೇ ಮನಸ್ಸಿಗೆ ಒಂದು ರೀತಿಯ ತಂಪನ್ನೆರೆಯುತ್ತದೆ. ದಕ್ಷಿಣ ಅಮೆರಿಕಾದ ಪನಾಮಾ, ಕೋಸ್ಟಾರಿಕಾ ಮತ್ತು ಟ್ರಿನಿಡಾಡ್‌ಗಳಲ್ಲಿ ಕಂಡುಬರುವ ಈ ಹೂವಿಗೆ ಪಾರಿವಾಳದ ಆಕೃತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಮಾತ್ರ ವಿಪರ್ಯಾಸ. ಇದನ್ನು ಸಂಗ್ರಹಿಸುವ ಹುಚ್ಚಿರುವವರು ಬೇಕಾಬಿಟ್ಟಿ ಕೀಳುತ್ತಿರುವುದರಿಂದ ಇದು ವಿನಾಶದ ಅಂಚಿಗೆ ತಲುಪಿದೆ. 
    ಫೈಯಿಂಗ್ ಡಕ್ ಆರ್ಕಿಡ್ ಎಂಬ ಇನ್ನೊಂದು ಬಗೆಯ ಆರ್ಕಿಡ್ ನೋಡಲು ಹಾರುತ್ತಿರುವ ಬಾತುಕೋಳಿಯನ್ನು ಹೋಲುತ್ತದೆ. ಆಸ್ಟ್ರೇಲಿಯಾದ ಈ ಆರ್ಕಿಡ್ ಸಸ್ಯವು ಒಂದೂವರೆ ಅಡಿ ಎತ್ತರದ ಚಿಕ್ಕ ಸಸ್ಯವಾಗಿದ್ದು ಅದರ ಹೂವಿನ ಬುಡದಲ್ಲಿ ಒಂದೇ ಒಂದು ಎಲೆ ಇರುತ್ತದೆ. ಒಂದು ಕಾಂಡದಿಂದ ಎರಡರಿಂದ ನಾಲ್ಕು ಹೂವುಗಳು ಅರಳುತ್ತವೆ. ಕ್ವೀನ್ಸ್‌ಲ್ಯಾಂಡ್, ತಾಸ್ಮೇನಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಅಕೇಶಿಯಾ ತೋಪುಗಳಲ್ಲಿ ಕಂಡುಬರುವ ಈ ಗಿಡಗಳು ಸೆಪ್ಟೆಂಬರ್‌ನಿಂದ ಜನವರಿಯವರೆಗೆ ಹೂವು ಬಿಡುತ್ತವೆ. ತುಂಬ ಚಿಕ್ಕ ಸಸ್ಯವಾದ್ದರಿಂದ ನಿಬಿಡವಾದ ಕಾನನಗಳಲ್ಲಿ ಇದನ್ನು ಗುರುತಿಸುವುದೂ ತುಸು ಕಷ್ಟವೇ. 
    ಸ್ವಾಡಲ್ಡ್ ಬೇಬಿ ಆರ್ಕಿಡ್ ಎಂಬ ಇನ್ನೊಂದು ಬಗೆಯ ಆರ್ಕಿಡ್ ತೊಟ್ಟಿಲಿನಲ್ಲಿ ಕುಳಿತ ಮಗುವನ್ನು ಹೋಲುತ್ತದೆ. ದಕ್ಷಿಣ ಅಮೆರಿಕದ ಪೆರು, ಕೊಲಂಬಿಯಾ ಮತ್ತು ಈಕ್ವೆಡಾರ್ ದೇಶಗಳಲ್ಲಿ ಈ ಸಸ್ಯ ಕಂಡುಬರುತ್ತದೆ. ಮಳೆಕಾಡುಗಳ ಖಾಯಂ ನಿವಾಸಿಯಾದ ಇದು ತನ್ನ ವಿಶಿಷ್ಟ ರೂಪದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. 
    ಮರದ ಮೇಲೆ ಓಡಾಡುವ ಮಂಗಗಳು ಚಿಕ್ಕ ಗಿಡದ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತದೆ? ಮಂಗನ ಭಾರಕ್ಕೆ ಗಿಡವೇ ಮುರಿದುಬೀಳಬಹುದು. ಆದರೆ ಇದೊಂದು ಹಗುರವಾದ ಮಂಗ. ಮಂಕಿ ಆರ್ಕಿಡ್ ಎಂಬ ಹೆಸರಿನ ಈ ಹೂವನ್ನು ನೋಡಿದರೆ ಮಂಗನ ಮುಖವನ್ನೇ ನೋಡಿದಂತಾಗುತ್ತದೆ. ಇದಕ್ಕೆ ಕಿತ್ತಳೆಹಣ್ಣಿನ ಸುವಾಸನೆ ಇರುತ್ತದೆ. ಮಂಗಗಳಿಗೂ ಈ ಹೂವಿಗೂ ಏನಾದರೂ ಸಂಬಂಧವಿದೆಯೇ ಅಥವಾ ಕಿತ್ತಳೆಯ ಸುವಾಸನೆಯಿಂದ ಇದಕ್ಕೇನಾದರೂ ಉಪಯೋಗವಿದೆಯೇ ಎಂಬುದು ಇದುವರೆಗೂ ದೃಢಪಟ್ಟಿಲ್ಲ. ಇದು ಮಂಗನ ಮುಖವನ್ನು ಹೋಲುವುದು ಕೇವಲ ಕಾಕತಾಳೀಯವೂ ಇರಬಹುದು. 
    ಮೆಡಿಟರೇನಿಯನ್ ಪ್ರದೇಶಗಳಲ್ಲಿ ನೇಕೆಡ್ ಮ್ಯಾನ್ ಆರ್ಕಿಡ್ ಎಂಬ ಹೆಸರಿನ ಆರ್ಕಿಡ್ ಗಿಡವೊಂದಿದ್ದು ಇದರ ಹೂವು ನೋಡಲು ನಗ್ನ ಮನುಷ್ಯನನ್ನೇ ಹೋಲುತ್ತದೆ. ಸುಮಾರು ಐವತ್ತು ಸೆಂಟಿಮೀಟರ್ ಎತ್ತರದ ಗಿಡದಲ್ಲಿ ಇದರ ಹೂವುಗಳು ಅರಳುತ್ತವೆ. ಗುಂಪುಗುಂಪಾಗಿರುವ ಇದರ ಹೂವುಗಳು ಗಾಢ ಗುಲಾಬಿ ಬಣ್ಣದಲ್ಲಿರುತ್ತವೆ. ಅರೆನೆರಳಿನ ಪ್ರದೇಶಗಳಲ್ಲಿ ಧಾರಾಳವಾಗಿ ಕಾಣಸಿಗುವ ಇವು ಯೂರೋಪ್ ಮತ್ತು ಉತ್ತರ ಆಫ್ರಿಕಾಗಳಲ್ಲಿ ಬೆಳೆಯುತ್ತವೆ.
    ಆಸ್ಟ್ರೇಲಿಯಾದ ಇನ್ನೊಂದು ಸುಂದರವಾದ ಆರ್ಕಿಡ್ ಇದೆ. ಬ್ಯಾಲೆರಿನಾ ಆರ್ಕಿಡ್ ಎಂದು ಕರೆಯಲ್ಪಡುವ ಈ ಹೂವು ನೋಡಲು ರಷ್ಯಾದ ಬ್ಯಾಲೆ ನೃತ್ಯಗಾರ್ತಿಯಂತೆ ಕಾಣುತ್ತದೆ. ಈ ಬಹುವಾರ್ಷಿಕ ಸಸ್ಯ ನೆಲದಾಳದಲ್ಲಿ ಇರುವ ಗೆಡ್ಡೆಯಿಂದ ಮೇಲಕ್ಕೆ ಬರುತ್ತದೆ. ತೀವ್ರ ಅಪಾಯಕ್ಕೆ ಸಿಲುಕಿದ ಸಸ್ಯವರ್ಗಗಳಲ್ಲಿ ಇದೂ ಒಂದು. ಇಂದಿಗೆ ಕೇವಲ ಕೆಲವು ನೂರರ ಸಂಖ್ಯೆಯಲ್ಲಿ ಮಾತ್ರ ಇದರ ಸಸ್ಯಗಳು ಉಳಿದಿವೆ ಎಂದು ಅಂದಾಜಿಸಲಾಗಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಇವು ನಾಮಾವಶೇಷವಾಗುವ ಅಪಾಯವನ್ನು ಮನಗಂಡ ಆಸ್ಟ್ರೇಲಿಯಾ ೧೯೯೯ರ ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂರಕ್ಷಣೆ ಕಾಯ್ದೆಯಡಿ ಇವುಗಳನ್ನು ತೀವ್ರ ಅಪಾಯಕ್ಕೆ ಸಿಲುಕಿದ ಪ್ರಭೇದ ಎಂದು ವಿಂಗಡಿಸಿ ಕಾನೂನು ರೂಪಿಸಿದೆ.
    ಹಾರುತ್ತಿರುವ ಕೊಕ್ಕರೆಯನ್ನು ಹೋಲುವ ಇನ್ನೊಂದು ಆರ್ಕಿಡ್‌ಗೆ ವೈಟ್ ಈಗ್ರೆಟ್ ಆರ್ಕಿಡ್ ಎಂದು ಹೆಸರಿಸಲಾಗಿದೆ. ಜಪಾನ್ ದೇಶದ ಈ ಹೂವು ಹದವಾದ ತೇವವನ್ನು ಹೊಂದಿದ ಮಣ್ಣಿನಲ್ಲಿ ಬೆಳೆಯುತ್ತದೆ. ಸಣ್ಣ ಬಟಾಣಿ ಗಾತ್ರದ ಗೆಡ್ಡೆಗಳಿಂದ ಮೇಲೇಳುವ ಈ ಸಸ್ಯ ವಸಂತಕಾಲದಿಂದ ಬೇಸಿಗೆಯ ಕೊನೆಯವರೆಗೂ ಹೂವುಗಳನ್ನು ಅರಳಿಸುತ್ತದೆ.
    ಮೇಲ್ಕಂಡ ಎಲ್ಲಾ ಹೂವುಗಳ ಆಕಾರಕ್ಕೆ ಯಾವುದೇ ವಿವರಣೆ ಸಿಕ್ಕಿಲ್ಲ. ಅಂದರೆ ಬೇರೆಬೇರೆ ಪ್ರಾಣಿಗಳನ್ನು ಹೋಲುವ ಅವುಗಳ ಆಕೃತಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ನಿಜಕ್ಕೂ ಒಂದು ಉದ್ದೇಶವಿಟ್ಟುಕೊಂಡು ವಿವಿಧ ಆಕೃತಿಯ ಹೂವುಗಳನ್ನು ಅರಳಿಸುವ ಹಲವಾರು ಆರ್ಕಿಡ್‌ಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಲಾಫಿಂಗ್ ಬೀ ಆರ್ಕಿಡ್. ಹೆಸರೇ ಹೇಳುವಂತೆ ಇದು ಜೇನುಹುಳುವನ್ನು ಹೋಲುವ ಹೂವು. ಇದರ ಉದ್ದೇಶವೂ ಸುಸ್ಪಷ್ಟ. ಹೆಣ್ಣುಜೇನನ್ನು ಹೋಲುವ ಇದು ಗಂಡುಗಳನ್ನು ಆಕರ್ಷಿಸುತ್ತದೆ. ಇಲ್ಲೊಂದು ಹೆಣ್ಣುಜೇನುಹುಳ ಇದೆ ಎಂದು ತಿಳಿಯುವ ಗಂಡುಗಳು ಇವುಗಳೊಡನೆ ಕೂಡುವ ಪ್ರಯತ್ನ ನಡೆಸುತ್ತವೆ. ಇದು ಹೆಣ್ಣಲ್ಲ, ಹೆಣ್ಣನ್ನು ಹೋಲುವ ಹೂವು ಎಂದು ಅದಕ್ಕೆ ತಿಳಿಯುವ ವೇಳೆಗೆ ಅದರ ಮೈಯೆಲ್ಲ ಹೂವಿನ ಪರಾಗಗಳು ಮೆತ್ತಿಕೊಳ್ಳುತ್ತವೆ. ಅದೇ ಹುಳು ಬೇರೊಂದು ಹೂವಿನ ಮೇಲೆ ಕುಳಿತಾಗ ಈ ಪರಾಗಗಳು ಆ ಹೂವನ್ನು ಫಲವತ್ತಾಗಿಸುತ್ತವೆ. ಮೆಡಿಟರೇನಿಯನ್ ಪ್ರದೇಶದ ಕ್ಯಾನರಿ ದ್ವೀಪಗಳಲ್ಲಿ ಇವುಗಳನ್ನು ಧಾರಾಳವಾಗಿ ಕಾಣಬಹುದಾಗಿದೆ.
    ಆಕಾರದಲ್ಲಿ ಕೀಟಗಳನ್ನು ಹೋಲುವುದಷ್ಟೇ ಅಲ್ಲ, ಸುವಾಸನೆಯಲ್ಲೂ ಕೀಟಗಳನ್ನು ಅನುಕರಿಸುವುದನ್ನು ಹೂವುಗಳು ಕಲಿತಿವೆ. ಕೀಟಗಳಿಗೆ ಏನು ಸುವಾಸನೆ ಇರುತ್ತದೆ ಎಂದು ಕೇಳಬೇಡಿ. ಕೀಟಗಳು, ಅದರಲ್ಲೂ ಪತಂಗಗಳು ಫೆರಮೋನ್ ಎಂಬ ಒಂದು ಬಗೆಯ ರಾಸಾಯನಿಕವನ್ನು ಹೊರಹೊಮ್ಮಿಸುತ್ತವೆ. ಇದನ್ನು ಹೊರಹೊಮ್ಮಿಸುವುದು ಹೆಣ್ಣು ಪತಂಗಗಳು. ಗಂಡುಗಳು ಹಲವು ಕಿಲೋಮೀಟರ್ ದೂರದಿಂದಲೂ ಈ ಫೆರಮೋನನ್ನು ಪತ್ತೆಹಚ್ಚಿ ಹೆಣ್ಣಿನ ಬಳಿಗೆ ಧಾವಿಸಬಲ್ಲವು. ಕೆಲವು ಆರ್ಕಿಡ್‌ಗಳುಈ ಫೆರಮೋನನ್ನು ಅನುಕರಿಸುವ ಮೂಲಕ ಗಂಡುಕೀಟಗಳನ್ನು ಆಕರ್ಷಿಸಿ ತಮ್ಮ ಪರಾಗಸ್ಪರ್ಶದ ಗುರಿಯನ್ನು ಸಾಧಿಸುತ್ತವೆ.
    ಗಿಡದಲ್ಲಿ ಹೂವರಳಿಸುವ ಆರ್ಕಿಡ್‌ಗಳನ್ನು ನೋಡಿದ್ದಾಯಿತು. ಇನ್ನು ನೆಲದೊಳಗೇ ಬೆಳೆಯುವ ಆರ್ಕಿಡ್‌ಗಳ ಬಗ್ಗೆ ಗೊತ್ತೇ? ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂಸೌತ್‌ವೇಲ್ಸ್‌ಗಳಲ್ಲಿ ಬೆಳೆಯುವ ಈ ಆರ್ಕಿಡ್ ಕೂಡ ತೀವ್ರ ಅಪಾಯದಲ್ಲಿರುವ ಒಂದು ಪ್ರಭೇದವಾಗಿದೆ. ನೆಲದೊಳಗೇ ಬೆಳೆಯುವ ಗಿಡವಾದ್ದರಿಂದ ಇದನ್ನು ಕಂಡುಹಿಡಿಯುವುದು ಕಷ್ಟ. ಚಿಕ್ಕದಾದ ಕೊಳವೆಯಾಕಾರದ ನೇರಳೆ ಬಣ್ಣದ ಹೂವುಗಳು ಮಾತ್ರ ಪರಾಗಸ್ಪರ್ಶಕ್ಕೆ ಅನುಕೂಲವಾಗುವಂತೆ ನೆಲದ ಮೇಲೆ ಕಾಣಿಸಿಕೊಳ್ಳುತ್ತವೆ. ಇವು ತಮ್ಮ ಪರಾಗಸ್ಪರ್ಶಕ್ಕಾಗಿ ನೊಣಗಳು ಮತ್ತು ಇರುವೆಗಳನ್ನೇ ಅವಲಂಬಿಸಿವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಇದು ಹೂಬಿಡುತ್ತದೆ.
    ಹೂವು ಅರಳಿಸಿದರೂ ಕೆಲವು ಬಗೆಯ ಆರ್ಕಿಡ್‌ಗಳು ನಿರ್ಲಿಂಗ ರೀತಿಯಲ್ಲೂ ಪುನರುತ್ಪಾದಿಸಬಲ್ಲವು. ನಾವು ಗುಲಾಬಿ ಗಿಡಗಳನ್ನು ಅವುಗಳ ಟೊಂಗೆಗಳನ್ನು ಬೇರೆ ಕಡೆ ನೆಟ್ಟು ಬೆಳೆಸುವಂತೆ ಕೆಲವು ಬಗೆಯ ಆರ್ಕಿಡ್ ಗಿಡಗಳನ್ನೂ ಬೆಳೆಸಬಹುದು. ಆದರೆ ಎಲ್ಲ ಪ್ರಭೇದಗಳನ್ನೂ ಈ ರೀತಿಯಾಗಿ ಬೆಳೆಸಲು ಸಾಧ್ಯವಿಲ್ಲ. ಇನ್ನೂ ಕೆಲವು ಆರ್ಕಿಡ್ ಪ್ರಭೇದಗಳು ಸ್ವಯಂ ಪರಾಗಸ್ಪರ್ಶಕ್ರಿಯೆಯಿಂದಲೂ ಫಲವಂತಿಕೆ ಪಡೆಯುತ್ತವೆ. 
    ಆರ್ಕಿಡ್ ಗಿಡಗಳಿಂದ ನಮಗೇನು ಪ್ರಯೋಜನ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸಬಹುದು. ಯಾವುದೇ ಸಸ್ಯವಾದರೂ ಅದರಿಂದ ನಮಗೆ ನೇರ ಪ್ರಯೋಜನ ಇಲ್ಲದೇಹೋದರೂ ಪ್ರಕೃತಿ ಸಮತೋಲನದ ದೃಷ್ಟಿಯಲ್ಲಿ ಅದರ ಪ್ರಾಮುಖ್ಯತೆಯೇನೂ ಕಡಿಮೆಯಿರುವುದಿಲ್ಲ. ಆದರೂ ನಮ್ಮ ಮೂಗಿನ ನೇರಕ್ಕೇ ನೋಡುವುದಾದರೂ ಅವುಗಳಿಂದ ನಮಗೆ ಹಲವಾರು ಪ್ರಯೋಜನಗಳೂ ಇವೆ. ಮೊದಲೇ ಹೇಳಿದಂತೆ ವೆನಿಲ್ಲಾವನ್ನು ಸುಗಂಧ ದ್ರವ್ಯವಾಗಿ ಐಸ್‌ಕ್ರೀಂ ಮತ್ತು ಸಿಹಿತಿಂಡಿಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಜೊತೆಗೆ ಆರ್ಕಿಡ್‌ಗಳನ್ನು ಅಲಂಕಾರಿಕ ಸಸ್ಯಗಳನ್ನಾಗಿಯೂ ಬೆಳೆಸಲಾಗುತ್ತದೆ. ಇವುಗಳನ್ನು ಬೆಳೆಸಲು ಕಾರ್ಬೋಹೈಡ್ರೇಟ್ ಮಾಧ್ಯಮದ ಅವಶ್ಯಕತೆ ಇದೆ. ಅದಕ್ಕಾಗಿ ಅಗಾರ್ ಅಗಾರ್ ಮಾಧ್ಯಮವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅದಲ್ಲದೆ ಟೊಮ್ಯಾಟೋ, ಬಾಳೆಹಣ್ಣು, ಎಳನೀರು, ಅನಾನಾಸ್ ಇತ್ಯಾದಿಗಳ ಮಾಧ್ಯಮದಲ್ಲೂ ಇವುಗಳನ್ನು ಬೆಳೆಸುತ್ತಾರೆ.
    ಆರ್ಕಿಡ್‌ಗಳದ್ದು ಗಾತ್ರದಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಎರಡು ಮಿಲಿಮೀಟರ್ ಮೀರದ ಕುಬ್ಜ ಪ್ರಭೇದಗಳಿಂದ ಹಿಡಿದು ಇಪ್ಪತ್ತೈದು ಅಡಿ ಎತ್ತರಕ್ಕೆ ಬೆಳೆಯುವ ದೈತ್ಯಪ್ರಭೇದಗಳೂ ಅಸ್ತಿತ್ವದಲ್ಲಿವೆ. ಜೊತೆಗೆ ಅಂಟಾರ್ಕ್ಟಿಕಾ ಮತ್ತು ಗ್ರೀನ್‌ಲ್ಯಾಂಡ್‌ಗಳ ಶೀತವಲಯಗಳನ್ನು ಹೊರತುಪಡಿಸಿ ಇನ್ನೆಲ್ಲ ಕಡೆಗಳಲ್ಲೂ ಆರ್ಕಿಡ್ ಸಸ್ಯಗಳು ಕಂಡುಬರುತ್ತವೆ. ಆದರೆ ಬಹುತೇಕ ಪ್ರಭೇದಗಳು ಈಗ ನಾನಾ ಕಾರಣಗಳಿಂದಾಗಿ ಅಪಾಯದ ಅಂಚಿನಲ್ಲಿವೆ. ಅವು ಪರಿಸರ ವ್ಯವಸ್ಥೆಯಲ್ಲಿ ವಹಿಸುವ ಪಾತ್ರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನೂ ನಮ್ಮಿಂದ ಸಾಧ್ಯವಾಗಿಲ್ಲ. ಹಾಗಾಗಿ ಅವುಗಳ ವಿನಾಶದಿಂದ ಪರಿಸರ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗುವ ಮೊದಲೇ ನಾವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.
 

Category:Nature



ProfileImg

Written by Srinivasa Murthy

Verified